ಸಾಮಾಜಿಕ ಕ್ರಾಂತಿಯತ್ತ ಮಲೆನಾಡಿನ ಅಂಟಿಕೆ ಪಿಂಟಿಗೆ!
– ಸರ್ಕಾರಿ ಶಾಲೆ ಉಳಿವಿಗಾಗಿ ಆಂಟಿಗೆ ಪಿಂಟಿಗೆ
– ದೇಗುಲ, ಚಿಕಿತ್ಸೆ, ಬಡವರ ಸೇವೆ ಸೇರಿ ಸಮಾಜ ಸೇವೆಗಾಗಿ ಕಲೆ
NAMMUR EXPRESS NEWS
ದೀಪಾವಳಿಯಲ್ಲಿ ಅಂಟಿಗೆ ಪಿಂಟಿಗೆ ಕಲೆ ರಾತ್ರಿ ಇಡೀ ಆಡಿ ಕೊನೆಗೆ ಆ ಹಣದಿಂದ ಊಟ ಮಾಡಿ ಅಲ್ಲಿಗೆ ವಿರಾಮ ಹಾಡುತ್ತಿದ್ದ ಕಲೆ ಇದೀಗ ಸಾಮಾಜಿಕ ಅಭಿವೃದ್ಧಿಯ ಕ್ರಾಂತಿಯತ್ತ ಸಾಗುತ್ತಿದೆ. ಮಲೆನಾಡಿನ ಸಾಂಪ್ರದಾಯಕ ಕಲೆ ಇದೀಗ ಸರ್ಕಾರಿ ಶಾಲೆಗಳ ಅಭಿವೃದ್ಧಿ, ದೇಗುಲ ಅಭಿವೃದ್ಧಿ, ಚಿಕಿತ್ಸೆ, ಬಡ ಮಕ್ಕಳಿಗೆ ಸಹಾಯಕ್ಕಾಗಿ ಸಂಪರ್ಪಣೆ ಆಗುತ್ತಿದೆ. ನೂರಾರು ಕಲಾವಿದರು ತಮ್ಮ ಕಲೆ, ನಿದ್ರೆ ಬಿಟ್ಟು ಸಮಾಜದ ಏಳ್ಗೆಗಾಗಿ ದೀಪಾವಳಿ ಸಂದರ್ಭದಲ್ಲಿ ಶ್ರಮಿಸಿದ್ದಾರೆ. ಇತ್ತೀಚೆಗೆ ನಡೆದ ಆಂಟಿಗೆ ಪಿಂಟಿಗೆ ಕಾರ್ಯಕ್ರಮಗಳು ಸಮಾಜಮುಖಿ ಕೆಲಸಕ್ಕೆ ಮುನ್ನುಡಿಯಾಗಿವೆ.
ಆಂಟಿಗೆ ಪಿಂಟಿಗೆ ತಂಡವು ಯುವಕ ಸಂಘ , ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ನಡೆದಿದ್ದು, ಇದರಲ್ಲಿ ಸಂಗ್ರಹವಾದ ಹಣವನ್ನು ದೇವಸ್ಥಾನಗಳ ಅಭಿವೃದ್ಧಿ,, ಸಮುದಾಯ ಭವನ ನಿರ್ಮಾಣ, ಶಾಲೆಗಳ ಅಭಿವೃದ್ಧಿ, ಜೊತೆಗೆ ಮಾನವೀಯ ದೃಷ್ಟಿಯಿಂದ ಆರೋಗ್ಯ ಚಿಕಿತ್ಸೆಗಾಗಿ , ಶಿಕ್ಷಣಕ್ಕಾಗಿ ನೀಡಲಾಗಿದೆ. ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ನಡೆಯುವ ಅಂಟಿಗೆ ಪಿಂಟಿಗೆ ಈ ಬಾರಿ ಅತಿ ಹೆಚ್ಚು ಹಳ್ಳಿಗಳಲ್ಲಿ ನಡೆದಿದ್ದು ಶಾಲೆಯ ಅಭಿವೃದ್ಧಿಗಾಗಿಯೂ ಕೂಡ ಹಣವನ್ನು ನೀಡಿದ್ದಾರೆ.
ಅಂಟಿಗೆ ಪಿಂಟಿಗೆಯಿಂದ ಶಾಲೆ ಅಭಿವೃದ್ಧಿ
ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರವಳ್ಳಿ, ಹಿಲಿಕೆರೆ, ಹೊನ್ನೆತಾಳು, ಸಾಲೂರು, ಕೊಪ್ಪದ ಭಂಡಿಗಡಿ, ಹೊಸನಗರ ಸೇರಿದಂತೆ ಅನೇಕ ಕಡೆ ಈ ರೀತಿಯ ಮಾದರಿಯ ಕೆಲಸವನ್ನು ಮಾಡಲಾಗಿದ್ದು, ಇದಕ್ಕೆ ಯುವಕರು ಸೇರಿದಂತೆ ಗ್ರಾಮಸ್ತರು ಕೈ ಜೋಡಿಸಿದ್ದಾರೆ. ಈ ಮೂಲಕ ಅಂಟಿಗೆ ಪಿಂಟಿಗೆ ಕಲೆ ಸಾಮಾಜಿಕ ಕ್ರಾಂತಿಯತ್ತ ಸಾಗುತ್ತಿದೆ.