ಸುಸಜ್ಜಿತ ನೂರು ಬೆಡ್ ಆಸ್ಪತ್ರೆ ಹೋರಾಟ ಮತ್ತೆ ಮುನ್ನೆಲೆಗೆ..
* ಮತ್ತೆ ಬ್ಯಾನರ್ ಅಳವಡಿಸಿದ ಆಸ್ಪತ್ರೆ ಹೋರಾಟ ಸಮಿತಿ
* ರಾತ್ರೋರಾತ್ರಿ ಬ್ಯಾನರ್ ಕದ್ದ ಕಿಡಿಗೇಡಿಗಳು
NAMMUR EXPRESS NEWS
ಶೃಂಗೇರಿ: ಶೃಂಗೇರಿ ತಾಲೂಕಿನ ಬಹುದಿನಗಳ ಬೇಡಿಕೆಯಾಗಿರುವ ಸುಸಜ್ಜಿತ ನೂರು ಬೆಡ್ ಆಸ್ಪತ್ರೆಯ ಹೋರಾಟ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
2007 ರಲ್ಲಿ ತಾಲೂಕಿಗೆ ಘೋಷಣೆಯಾಗಿದ್ದ ಸುಸಜ್ಜಿತ ನೂರು ಬೆಡ್ ಆಸ್ಪತ್ರೆ ಈ ಹಿಂದೆ ಆಸ್ಪತ್ರೆ ಬಜೆಟ್‌ನಲ್ಲಿ ಘೋಷಣೆಯಾಗಿ ಅನುದಾನ ಇಟ್ಟಿದ್ದರು ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಜಾಗ ನಿರ್ಧರಿಸದೇ,ಆಸ್ಪತ್ರೆ ನಿರ್ಮಾಣವು ಆಗದೇ ಈ ಬಾರಿಯ ಬಜೆಟ್‌ನಿಂದ ಆಸ್ಪತ್ರೆಯ ವಿಚಾರ ಕಾಣೆಯಾಗಿರುವುದು ಶೃಂಗೇರಿಗರ ಬಹು ಅವಶ್ಯಕತೆಯ ಬೇಡಿಕೆ ಕೇವಲ ರಾಜಕೀಯ ನಾಯಕರ ಅಶ್ವಾಸನೆಯಾಗೇ ಉಳಿದಿದೆ. ಸುಸಜ್ಜಿತ ಆಸ್ಪತ್ರೆಯಿಲ್ಲದೇ, ವೈದ್ಯರು ಇಲ್ಲದೇ ತಾಲೂಕಿ ಜನತೆ ಹಾಗೂ ತಾಲೂಕಿಗೆ ಬರುವ ಪ್ರವಾಸಿಗರಿಗೆ ಆರೋಗ್ಯ ಸಮಸ್ಯೆಯುಂಟಾದಲ್ಲಿ ಶೃಂಗೇರಿಯಿಂದ 100 -150 ಕಿ.ಮೀ ದೂರದಲ್ಲಿರುವ ಶಿವಮೊಗ್ಗ,ಮಣಿಪಾಲ,ಮಂಗಳೂರಿನಲ್ಲಿರುವ ಆಸ್ಪತ್ರೆಗೆ ಹೋಗಬೇಕಾಗಿದೆ ಇದರಿಂದ ಅನಾರೋಗ್ಯಪೀಡಿತರ ಜೀವಕ್ಕೆ ಗ್ಯಾರಂಟಿಯಿಲ್ಲದಂತಾಗಿದೆ.
ಇದರಿಂದ ಮತ್ತೆ ಹೋರಾಟ ಪ್ರಾರಂಭಿಸುವ ನಿರ್ಧಾರ ಕೈಗೊಂಡ ಆಸ್ಪತ್ರೆ ಹೋರಾಟ ಸಮಿತಿ ನಗರದಲ್ಲಿ ಬ್ಯಾನರ್‌ಗಳನ್ನು ಅಳವಡಿಸಿದೆ.
ಬ್ಯಾನರ್‌ನಲ್ಲಿ ಏನಿದೆ ??
* 2007ನೇ ಇಸವಿಯಲ್ಲಿ ಆದೇಶವಾಗಿ, ನಂತರ 3 ಬಜೆಟ್ ನಲ್ಲಿ ಘೋಷಣೆ ಆಗಿರುವ, 27 ಕೋಟಿ ಅನುದಾನ ಮೀಸಲಿಟ್ಟಿದ್ದ ಶೃಂಗೇರಿಯ ನೂರು ಬೆಡ್ ಆಸ್ಪತ್ರೆ ಶೃಂಗೇರಿಯಿಂದ ಕಾಣೆಯಾಗಿದೆ.
ಹುಡುಕಿಕೊಟ್ಟವರಿಗೆ ಸರ್ಕಾರದ ವತಿಯಿಂದ ಸೂಕ್ತ ಬಹುಮಾನ ನೀಡಲಾಗುವುದು.
– ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ, ಶೃಂಗೇರಿ
* ಶೃಂಗೇರಿಗೆ ಬರುವ ಪ್ರವಾಸಿಗರೇ ನಿಧಾನವಾಗಿ ಎಚ್ಚರಿಕೆಯಿಂದ ವಾಹನ ಚಲಾಯಿಸಿ
* ಶೃಂಗೇರಿಯಲ್ಲಿ ಭರವಸೆ ಶೂರರ ಸುಸಜ್ಜಿತ ಆಸ್ಪತ್ರೆ ಇನ್ನೂ ಆಗಿಲ್ಲ
* ಮೂಳೆ ಮುರಿದರೆ ಡಾಕ್ಟರ್ ಇಲ್ಲ
* ಮಕ್ಕಳ ಡಾಕ್ಟರ್ ಇಲ್ವೇ ಇಲ್ಲ
* ಡೆಲಿವರಿ ಡಾಕ್ಟರ್ ಕಾಡ್ತಾ ಇಲ್ಲ
* ಜನಪ್ರತಿನಿಧಿಗಳು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ
ನಿಮ್ಮ ಬದುಕು ನಿಮ್ಮ ಕೈಯಲ್ಲಿ
– ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ, ಶೃಂಗೇರಿ
* ಬೇಕಾಗಿದ್ದಾರೆ
ಶೃಂಗೇರಿ ತಾಲೂಕು ಆಸ್ಪತ್ರೆಗೆ ಪ್ರಸೂತಿ ತಜ್ಞರು, ಮೂಳೆ ತಜ್ಞರು ಹಾಗೂ ಮಕ್ಕಳ ತಜ್ಞರು ಬೇಕಾಗಿದ್ದು, ಯಾರಾದರೂ ಕರ್ತವ್ಯ ನಿರ್ವಹಿಸಲು ಇಚ್ಚಿಸುವವರು
ಡಿಎಚ್‌ಓ ಅಥವಾ ಸರ್ಕಾರವನ್ನು ಸಂಪರ್ಕಿಸಿ.
ಏಕೆಂದರೆ ಬರಲು ಒಪ್ಪಿಕೊಂಡಲ್ಲಿ ಮಾತ್ರ ನೇಮಿಸುತ್ತಾರಂತೆ !
– ಶೃಂಗೇರಿ ತಾಲೂಕು ಸರ್ಕಾರಿ ಅಸ್ಪತ್ರೆಗೆ ವೈದ್ಯರು ಹಾಗೂ ಪ್ರಸೂತಿ ತಜ್ಞರ ಅವಶ್ಯಕತೆ ಇದೆ. ಈ ಕುರಿತು ನಾವು ಹೆಚ್ಚಿನ ಕಾಳಜಿ ವಹಿಸಿದ್ದು ಹೆರಿಗೆ ತಜ್ಞರು ಶೃಂಗೇರಿ ಬರಲು ಒಪ್ಪಿಕೊಂಡಲ್ಲಿ ಅವರನ್ನು ಕೂಡಲೇ ನೇಮಕಾತಿ ಮಾಡಲಾಗುವುದು.
| ಡಾ. ಅಶ್ವತ್ಥ ಬಾಬು ಡಿಎಚ್‌ಒ ಚಿಕ್ಕಮಗಳೂರು
– ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ, ಶೃಂಗೇರಿ
ಅಳವಡಿಸಿದ ಬ್ಯಾನರ್ ಕದ್ದ ಕಿಡಿಗೇಡಿಗಳು.
ಆಸ್ಪತ್ರೆ ಹೋರಾಟ ಸಮಿತಿ ಅಳವಡಿಸಿದ್ದ ಬ್ಯಾನರ್‌ಗಳನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಕದ್ದಿದ್ದಾರೆ. ಈ ಬಗ್ಗೆ ಆಸ್ಪತ್ರೆ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಿದೆ.
