ಶಿವಮೊಗ್ಗದ ಕಾರು ಶೋ ರೂಂನಲ್ಲಿ ಹೊತ್ತಿ ಉರಿದ ಕಾರುಗಳು!
– ಬೆಂಕಿ ಹತ್ತಿದ್ದುಹೇಗೆ..? ಏನೆಲ್ಲಾ ಸುಟ್ಟು ಹೋಗಿದೆ?
• ಕಡೂರು: ಕ್ಯಾಬ್ ಚಾಲಕನ ಬರ್ಬರ ಕೊಲೆ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಹುಂಡೈ ಶೋರೂಂನಲ್ಲಿ ಅಗ್ನಿ ಅವಘಡ ಸಂಭವಿಸಿ ಕೋಟ್ಯಂತರ ಮೌಲ್ಯದ ಕಾರುಗಳು ಬೆಂಕಿಯಲ್ಲಿ ಬೆಂದು ಹೋಗಿವೆ. ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಕಟ್ಟಡಗಳಿಗೂ ವ್ಯಾಪಿಸಿ ಅಪಾರ ಹಾನಿ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದು ಹೆಚ್ಚಿನ ಹಾನಿಯನ್ನು ತಪ್ಪಿಸಿದ್ದಾರೆ. ಶಿವಮೊಗ್ಗದ ಶಂಕರಮಠ ರಸ್ತೆಯಲ್ಲಿ ಹುಂಡೈ ಶೋರೂಂನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಶೋಂರೂಂ ಧಗಧಗಿಸಿದೆ. ತಡ ರಾತ್ರಿ 10 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿಯ ಕೆನ್ನಾಲಿಗೆಗೆ ಶೋರೂಂನಲ್ಲಿದ್ದ ಕಾರುಗಳು ಸುಟ್ಟು ಕರಕಲಾಗಿವೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ 5 ಅಗ್ನಿಶಾಮಕ ಸಿಬ್ಬಂದಿ 2 ಗಂಟೆಗಳ ಕಾಲ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ.
ಈ ವೇಳೆ ಬೆಂಕಿ ಕಿಡಿ ಸಿಡಿದು ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇನ್ನು ಶೋರೂಂನ ಹೊರ ಹಾಗೂ ಒಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಜ್ವಾಲೆ ಅಕ್ಕಪಕ್ಕದ ಕಟ್ಟಡಗಳಿಗೂ ವ್ಯಾಪಿಸಿದ್ದರಿಂದ ಟಾಟಾ ಶೋರೂಂ ಕೂಡ ಧಗಧಗಿಸಿದೆ. ಬೆಂಕಿ ಹೊತ್ತಿಕೊಂಡ ವಿಷಯ ತಿಳಿದು ಜಮಾಯಿಸಿದ ನೂರಾರು ಮಂದಿ ಕೆಲ ಕಾರುಗಳನ್ನು ಬೆಂಕಿಯಿಂದ ರಕ್ಷಿಸಲು ಯತ್ನಿಸಿದ್ರು. ಹುಂಡೈ ಎರಡು ಅಂತಸ್ತಿನ ಕಟ್ಟಡವಾಗಿದ್ದು ಮೇಲೆ ಶೋರೂಂ ಇದ್ದು, ಕೆಳಗೆ ಸರ್ವೀಸ್ ಸೆಂಟರ್ ಇದ್ದು ಸುಟ್ಟು ಹೋಗಿದೆ. ಸುಮಾರು ಒಂದು ಎಕರೆ ಪ್ರದೇಶದಲ್ಲಿ ಹುಂಡೈ ಸೇರಿ ಅಕ್ಕಪಕ್ಕದಲ್ಲೇ ಇರುವ ವಿವಿಧ ಕಂಪನಿಗಳ ಕಚೇರಿಗಳಿಗೂ ಕೂಡ ಬೆಂಕಿಯಿಂದ ಹಾನಿಯಾಗಿದೆ ಎನ್ನಲಾಗಿದೆ. ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗ್ತಿದೆ. ರಾತ್ರಿ ವೇಳೆ ಬೆಂಕಿ ಹೊತ್ತಿಕೊಂಡಿದ್ದು ಕಚೇರಿಯ ಸಿಬ್ಬಂದಿ ಇರದ ಕಾರಣ ಯಾವುದೇ ಸಾವು-ನೋವಿನ ವರದಿಯಾಗಿಲ್ಲ.
ಕಡೂರಲ್ಲಿ ಕ್ಯಾಬ್ ಚಾಲಕನ ಬರ್ಬರ ಹತ್ಯೆ
ಕಡೂರು: ಕ್ಯಾಬ್ ಚಾಲಕನನ್ನು ಬರ್ಬರವಾಗಿ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹುಲಿಗೊಂದಿ ಹೊಸೂರು ಗ್ರಾಮದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದರ್ಶನ್ (21) ಮೃತ ಕ್ಯಾಬ್ ಚಾಲಕ. ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಕೆಲಸ ಮಾಡುತ್ತಿದ್ದ ದರ್ಶನ್, ಹಾಫ್ ಮರ್ಡರ್ ಕೇಸಿನಲ್ಲಿ ಜೈಲು ಸೇರಿದ್ದ. ಇತ್ತೀಚೆಗೆ ಬೇಲ್ ಪಡೆದು ಇಬ್ಬರು ಸ್ನೇಹಿತರ ಜೊತೆ ಕಡೂರಿನ ಮಾಡಾಳು ಗ್ರಾಮದ ತಾತನ ಮನೆಗೆ ಬಂದಿದ್ದ.
ವಾರದ ಹಿಂದೆ ಬೆಂಗಳೂರಿಗೆ ವಾಪಸ್ ಹೋಗಿದ್ದ ಮೃತ ದರ್ಶನ್ ಸ್ನೇಹಿತರು, ಗುರುವಾರ ರಾತ್ರಿ ಪುನಃ ಬಂದಿದ್ದಾರೆ. ತಾತನಿಗೆ ಫ್ರೆಂಡ್ಸ್ ಬಂದಿದ್ದಾರೆ, ಹೊಲದ ಶೆಡ್ ನಲ್ಲಿ ಮಲಗುತ್ತೇನೆ ಎಂದು ಹೇಳಿ ಹೋಗಿದ್ದಾನೆ. ದರ್ಶನ್ ಕಾರಿನಲ್ಲಿ ಹೋಗಿದ್ದನ್ನ ದರ್ಶನ್ ತಾತ ಕೂಡ ನೋಡಿದ್ದರು. ರಾತ್ರಿ ಹೊಲಕ್ಕೆ ಹೋಗಿ ನೋಡಿದಾಗ ಶೆಡ್ ನಲ್ಲಿ ದರ್ಶನ್ ಇರಲಿಲ್ಲ. ಸ್ನೇಹಿತರ ಜೊತೆ ಎಲ್ಲೋ ಹೋಗಿರಬಹುದು ಎಂದು ತಾತ ಮನೆಗೆ ಬಂದಿದ್ದರು. ಬೆಳಗ್ಗೆ ಮಾಡಾಳು ಗ್ರಾಮದ ತುಸು ದೂರದಲ್ಲಿ ದರ್ಶನ್ ಮೃತದೇಹ ಪತ್ತೆಯಾಗಿದೆ. ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.