Categories
ಮಂಗಳೂರು

ಪುತ್ತೂರು, ಮಂಗಳೂರಲ್ಲಿ ಹೊಸ ಯೋಜನೆ!

ಪುತ್ತೂರು, ಮಂಗಳೂರಲ್ಲಿ ಹೊಸ ಯೋಜನೆ!
• ಪುತ್ತೂರು: ಆರು ಹೊಸ ಮಾರ್ಗಗಳಿಗೆ ಬಸ್ ಚಾಲನೆ
• ಮಂಗಳೂರು: ಬೊಂದೇಲ್ ನಲ್ಲಿ ರಂಗಮಂದಿರ ನಿರ್ಮಾಣ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಪುತ್ತೂರು: ಪುತ್ತೂರಿನ ಸುತ್ತಮುತ್ತಲ ಜನರ ಬೇಡಿಕೆಯ ಮೇರೆಗೆ, ಆರು ಹೊಸ ಮಾರ್ಗಗಳಲ್ಲಿ ಬಸ್ ಚಾಲನೆಗೊಂಡಿವೆ.‌ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಚಾಲಕರ ಮತ್ತು ನಿರ್ವಾಹಕರ ಕೊರತೆ ಇತ್ತು.‌ ಹೀಗಾಗಿ ಬಸ್ ಗಳ‌ ಸಂಖ್ಯೆಯು ಕಡಿಮೆಯಿತ್ತು.‌ ಇದೀಗ ಸಿಬ್ಬಂದಿಗಳ ಕೊರತೆ ನೀಗಿದ್ದು, ಆರು ಬಸ್ ಗಳಿಗೆ ಚಾಲನೆ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕರಾದ ಅಶೋಕ್ ಕುಮಾರ್ ರೈ ಅವರು “ಈಗ ಪ್ರಯಾಣಿಕರ ಬೇಡಿಕೆಯನ್ನು ಆರು ಮಾರ್ಗಗಳಲ್ಲಿ ಬಸ್ ಗಳನ್ನು ಬಿಡುವ ಮೂಲಕ ಈಡೇರಿಸಿದ್ದೇವೆ, ಇದರೊಂದಿಗೆ ಉಪ್ಪಿನಂಗಡಿ ಮತ್ತು ಸುಳ್ಯಕ್ಕೂ ಹೆಚ್ಚುವರಿ ಬಸ್ ಗಳನ್ನು ಹಾಕಲಾಗಿದೆ. ಮುಂಬರುವ ದಿನಗಳಲ್ಲಿ ನಮ್ಮ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಪುತ್ತೂರಿನಲ್ಲಿ ಸಿಟಿ ಬಸ್ ಗಳನ್ನು ಚಾಲನೆಗೊಳಿಸಲು ನಿರ್ಧರಿಸಿದ್ದಾರೆ.‌ ಇದಕ್ಕೆ ಸಂಬಂಧಿಸಿದಂತೆ ಆಟೋ ಚಾಲಕರೊಂದಿಗೆ ಮಾತುಕತೆ ನಡೆಸಿ, ಮುಂದಿನ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ಈಗ ಚಾಲನೆಗೊಂಡಿರುವ ಬಸ್ ಗಳು ಶಾಲಾ ಮಕ್ಕಳಿಗೆ ಕೊರತೆಯಾಗದ ರೀತಿಯಲ್ಲಿ ಪ್ರಾರಂಭಗೊಂಡಿದೆ. ಮತ್ತು ಶಾಲಾ ಮಕ್ಕಳು ಬೋಳುವಾರಿನಿಂದ ಪುತ್ತೂರಿನ ತನಕ ಬಸ್ ಪಾಸ್ ಬೇಕೆಂದು ಸಲ್ಲಿಸಿದ ಮನವಿಗೆ ಸ್ಪಂದಿಸಿದ್ದೇವೆ ಎಂದು ತಿಳಿಸಿದರು.‌ ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರಾದ ಎಂ.ಎಸ್. ಮೊಹಮ್ಮದ್, ಪುತ್ತೂರು ತಾಲ್ಲೂಕಿನ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಉಮಾನಾಥ ಶೆಟ್ಟಿ, ರುಕ್ ಬಾಯಬೆ, ನಗರಯೋಜನಾ ಪ್ರಾಧಿಕಾರದ ಸದಸ್ಯರಾದ ನಿಹಾಲ್ ಶೆಟ್ಟಿ, ಲ್ಯಾನ್ಸಿ ಮಸ್ಕರೇನಸ್, ಕೊಡಪದವು ಗ್ರಾಮ ಪಂಚಾಯಿತಿ ಸದಸ್ಯ ಸುಭಾಷ್ ಚಂದ್ರ ಶೆಟ್ಟಿ, ಬೊಂಡಾಲ ಚಿತ್ತರಂಜನ ಶೆಟ್ಟಿ, ಬಂಟ್ವಾಳ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಸಿರಾಜ್ ಮದಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಡಿಪೋ ಮ್ಯಾನೇಜರ್ ಆದ ಸುಬ್ರಹ್ಮಣ್ಯ ಪ್ರಕಾಶ್ ಪಾಲ್ಗೊಂಡಿದ್ದರು.

• ಮಂಗಳೂರು: ಬೊಂದೇಲ್ ನಲ್ಲಿ ರಂಗಮಂದಿರ ನಿರ್ಮಾಣ 

ಮಂಗಳೂರು: 35 ವರ್ಷಗಳಿಂದ ಮಂಗಳೂರಿಗರ ಬಹುಬೇಡಿಕೆಯಾಗಿದ್ದ, ರಂಗಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪೌರಾಡಳಿತ ನಿರ್ದೇಶನಾಲಯವು ತಾಂತ್ರಿಕ ಮಂಜೂರಾತಿ ನೀಡಿದೆ. ಇದರಿಂದಾಗಿ ಟೆಂಡರ್ ಅನ್ನು ಆಹ್ವಾನಿಸಲು ಮಂಗಳೂರು ನಗರಪಾಲಿಕೆಗೆ ಅನುಮತಿ ದೊರೆತಂತಾಗಿದೆ. ಈ ಹಿಂದೆ ಬೊಂದೇಲ್ ನ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಬಳಿಯಿರುವ ಜಮೀನಿನಲ್ಲಿ ಜಿಲ್ಲಾ ರಂಗಮಂದಿರ ನಿರ್ಮಿಸುವ ನಿಟ್ಟಿನಲ್ಲಿ ದಕ್ಷಿಣಕನ್ನಡ ಜಿಲ್ಲಾಡಳಿತವು ಸಿದ್ಧಪಡಿಸಿದ 9.95 ಕೋಟಿ ಅಂದಾಜುಪಟ್ಟಿ ಹಾಗೂ ನೀಲನಕ್ಷೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ಟೆಂಡರ್ ಕರೆಯಲು ಮಂಜೂರಾತಿ ನೀಡುವಂತೆ, ಮಂಗಳೂರು ಪಾಲಿಕೆ ಆಯುಕ್ತರು ಪೌರಾಡಳಿತ ನಿರ್ದೇಶನಾಲಯಕ್ಕೆ ಮನವಿಯನ್ನು ಸಲ್ಲಿಸಿತ್ತು.‌ ಇದೀಗ ಅನುಮತಿ ದೊರೆತಿದ್ದು, ರಂಗ ಮಂದಿರ ನಿರ್ಮಾಣಕ್ಕೆ ಕಾಮಗಾರಿಯು ತ್ವರಿತಗತಿಯಲ್ಲಿ ಪ್ರಾರಂಭಗೊಂಡಿದೆ ಎಂಬ ಮಾಹಿತಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.