Categories
ಶಿವಮೊಗ್ಗ

ಇತಿಹಾಸ ಪ್ರಸಿದ್ದ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ಜಾತ್ರೆ ರಂಗು!

ಇತಿಹಾಸ ಪ್ರಸಿದ್ದ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ಜಾತ್ರೆ ರಂಗು!
– ಸೆ. 9 ಮಂಗಳವಾರದಿಂದ ಸೆ. 19ರ ಶುಕ್ರವಾರದವರೆಗೆ ಸಂಭ್ರಮ
– ರಾಜ್ಯದ ಮೂಲೆ ಮೂಲೆಯಿಂದ ಭಕ್ತರ ಭೇಟಿ: ದೇವಿ ದರ್ಶನ

NAMMUR EXPRESS NEWS
ಹೊಸನಗರ: ರಿಪ್ಪಿನಪೇಟೆ ಸಮೀಪದ ಇತಿಹಾಸ ಪ್ರಸಿದ್ದ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವವು ಸೆ. 6 ಶನಿವಾರ ಹುಣ್ಣಿಮೆಯಿಂದ ಅಮವಾಸ್ಯೆಯವರೆಗೆ ಆಯೋಜಿಸಲಾಗಿದೆ. ಮಲೆನಾಡಿನ ಪ್ರಸಿದ್ಧ ಜಾತ್ರೆಯಲ್ಲಿ ಒಂದಾದ ಅಮ್ಮನಘಟ್ಟ ಜಾತ್ರೆಗೆ ರಾಜ್ಯದ ಮೂಲೆ ಮೂಲೆಯಿಂದ ಜನ ಬರುತ್ತಾರೆ. ಇತ್ತೀಚಿಗೆ ನೂತನ ದೇವಾಲಯ ನಿರ್ಮಾಣವಾಗಿದೆ.
ಅಮ್ಮನಘಟ್ಟ ದೇವಸ್ಥಾನದ ಸಭಾಭವನದಲ್ಲಿ ಜಾತ್ರಾ ಮಹೋತ್ಸವದ ನೂತನ ಕಾರ್ಯಾಧ್ಯಕ್ಷ, ಜಿ.ಪಂ. ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಮಾಹಿತಿ ನೀಡಿ, ಸೆ.6ರ ಶನಿವಾರ ಹಳೇ ಅಮ್ಮನಘಟ್ಟದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಗೆ ಕಂಕಣಕಟ್ಟಿ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದರು.

ಯಾವತ್ತು ಏನೇನು?

ಸೆ. 9ರ ಮಂಗಳವಾರದಿಂದ ಸೆ. 19ರ ಶುಕ್ರವಾರದವರೆಗೆ ಬರಲಿರುವ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಅಮ್ಮನಘಟ್ಟದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ. ಅಲ್ಲದೆ ಸೆ. 22 ರಿಂದ ಅ.2 ರವರಗೆ ನವರಾತ್ರಿ ಉತ್ಸವ ಹಾಗೂ ವಿಜಯದಶಮಿಯಂದು ದೇವಿಯ ಸನ್ನಿಧಿಯಲ್ಲಿ ಚಂಡಿಕಾ ಹೋಮ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ.

ಸಮಸ್ತ ಭಕ್ತಾದಿಗಳ ನೇತೃತ್ವದಲ್ಲಿ ಕಾರ್ಯಕ್ರಮ

ಎಲ್ಲಾ ಧಾರ್ಮಿಕ ಕಾರ್ಯವು ಹೊಸನಗರ ತಹಸೀಲ್ದಾ‌ರ್ ರಶ್ಮಿ ಹಾಲೇಶ್ ಇವರ ಅಧ್ಯಕ್ಷತೆಯಲ್ಲಿ ಜರುಗಲಿದೆ. ಈ ದೇವಿಯ ಸನ್ನಿಧಿಯೂ ಮಾರುತಿಪುರ, ಕೋಡೂರು, ಮುಂಬಾರು, ಚಿಕ್ಕಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವುದರಿಂದ ಎಲ್ಲಾ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಚುನಾಯಿತ ಪ್ರತಿನಿಧಿಗಳು ಹಾಗೂ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಸರ್ವ ಸದಸ್ಯರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಉಪಸಮಿತಿಗಳನ್ನು ತಾತ್ಕಾಲಿಕವಾಗಿ ರಚಿಸಲಾಗಿದ್ದು ಗೌರವಾಧ್ಯಕ್ಷರಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಇವರನ್ನು ಆಯ್ಕೆ ಮಾಡಲಾಗಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಬಂಡಿ ರಾಮಚಂದ್ರ, ತಾಲ್ಲೂಕು ಪಂಚಾಯಿತ್ ಮಾಜಿ ಸದಸ್ಯ ಎರಗಿ ಉಮೇಶ್, ಜಯಪ್ರಕಾಶ್‌, ಗೌರಮ್ಮ, ನಾಗರಾಜ್, ಇನ್ನಿತರರು ಹಾಜರಿದ್ದರು.

ಕಲ್ಲು ಬಂಡೆಯ ಒಳಗಿದೆ ದೇವಾಲಯ!

ರಮಣೀಯ ಸೌಂದರ್ಯದ ನಡುವೆ ಮನಸೂರೆಗೊಳ್ಳುವ ದಟ್ಟ ಪ್ರಾಕೃತಿಕ ತಪ್ಪಲಿನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವ ಅಮ್ಮನಘಟ್ಟದಲ್ಲಿ ಜೇನುಕಲ್ಲಮ್ಮ ದೇವಿಯು ನೆಲೆಸಿದ್ದಾಳೆ. ಜಮದಗ್ನಿ ಮಹರ್ಷಿಯು ತನ್ನ ಪತ್ನಿ ರೇಣುಕಾದೇವಿಯಲ್ಲಿ ವಿರಸಗೊಂಡು ತಮ್ಮ ಮಗ ಪರಶುರಾಮನಲ್ಲಿ ತಾಯಿಯ ರುಂಡವನ್ನು ಕತ್ತರಿಸುವಂತೆ ಆಜ್ಞಾಪಿಸುತ್ತಾರೆ. ಅಂತೆಯೇ ಸುಪುತ್ರ ರೇಣುಕಾ ದೇವಿಯ ರುಂಡವನ್ನೂ ಕತ್ತರಿಸಿದ ಸಂದರ್ಭ ರೇಣುಕಾದೇವಿಯ ಅಘೋಚರ ಶಕ್ತಿ ಒಂದು ಅಮ್ಮನಘಟ್ಟದಲ್ಲಿ ಕಲ್ಲು ಬಂಡೆಗಳ ಮಧ್ಯ ನೆಲೆಸಿ ನಂತರ ಅದೇ ಶಕ್ತಿಯು ದೇವಿಯಾಗಿ ರೂಪುಗೊಳ್ಳುತ್ತದೆ ಎಂದು ಪುರಾಣ ಪ್ರಸಿದ್ದಿಯಾಗಿದೆ. ಜೇನು ಇರುವ ಗುಹೆಯೊಳಗೆ ತಾಯಿ ನೆಲೆಸಿದ್ದರಿಂದ ಅಮ್ಮನಘಟ್ಟಕ್ಕೆ ಕಲ್ಲಮ್ಮ ಎಂಬ ಹೆಸರು ಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.