ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
* ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆಲುವಿನತ್ತ ಹರಿಣಗಳು: ಕೇವಲ 69 ರನ್ ಬಾಕಿ
* ತ್ಯಾಗ,ಹೋರಾಟವಿದ್ದರೆ ಮಾತ್ರ ಇಂಗ್ಲೆಂಡ್ ಸರಣಿ ಗೆಲ್ಲಬಹುದು: ಗಂಭೀರ್
NAMMMUR EXPRESS SPORTS NEWS
ಲಾರ್ಡ್ಸ್: ಆರಂಭಿಕ ಬ್ಯಾಟರ್ ಏಡೆನ್ ಮಾರ್ಕಂ ಮತ್ತು ನಾಯಕ ಟೆಂಬಾ ಬವುಮಾ ಅವರ ದಿಟ್ಟ ಬ್ಯಾಟಿಂಗ್ ಬಲದಿಂದ ದಕ್ಷಿಣ ಆಫ್ರಿಕಾ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಆಸ್ಪ್ರೇಲಿಯಾ ವಿರುದ್ಧ ಗೆಲುವಿನತ್ತ ದಾಪುಗಾಲಿಟ್ಟಿದೆ.
ಪಂದ್ಯದ ನಾಲ್ಕನೇ ದಿನವಾದ ಶನಿವಾರ ಬ್ಯಾಟಿಂಗ್ ಸ್ಥಿರತೆ ಕಾಯ್ದುಕೊಂಡಲ್ಲಿ 27 ವರ್ಷಗಳ ನಂತರ ಐಸಿಸಿ ಟ್ರೋಫಿ ಎತ್ತಿಹಿಡಿಯುವ ಅದ್ಭುತ ಅವಕಾಶ ಹರಿಣಗಳ ಪಾಲಿಗೆ ಒಲಿಯಲಿದೆ. 1998ರಲ್ಲಿ ಏಕದಿನ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವುದನ್ನು ಹೊರತುಪಡಿಸಿ ದಕ್ಷಿಣ ಆಫ್ರಿಕಾ, ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಹಲವು ವರ್ಷಗಳಿಂದಲೂ ಚೋಕರ್ಸ್ ಹಣೆಪಟ್ಟಿ ಕಟ್ಟಿಕೊಂಡಿರುವ ದಕ್ಷಿಣ ಆಫ್ರಿಕಾ, ಈಗ ಅದನ್ನು ಕಳಚುವ ಅದ್ಭುತ ಅವಕಾಶವನ್ನು ಹೊಂದಿದೆ.
* ಇನ್ನು ಬೇಕಿರುವುದು ಕೇವಲ 69 ರನ್
ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಶುಕ್ರವಾರ 282 ರನ್ಗಳ ಕಠಿಣ ಗುರಿ ಪಡೆದ ದಕ್ಷಿಣ ಆಫ್ರಿಕಾ, ದಿನದಾಟದ ಅಂತ್ಯಕ್ಕೆ 56 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದೆ. ಐತಿಹಾಸಿಕ ಗೆಲುವಿಗೆ ಉಳಿದ 8 ವಿಕೆಟ್ಗಳಲ್ಲಿ 69 ರನ್ ಗಳಿಸಬೇಕಿದೆ. ಮಾರ್ಕಂ(102; 159 ಎಸೆತ, 11 ಫೋರ್) ಮತ್ತು ಬವುಮಾ (65*; 121 ಎಸೆತ, 5 ಫೋರ್) ಕ್ರೀಸ್ ಕಾಯ್ದುಕೊಂಡಿದ್ದಾರೆ.
ವೇಗಿಗಳಿಗೆ ಹೆಚ್ಚು ನೆರವಾಗುತ್ತಿರುವ ಪಿಚ್ನಲ್ಲಿ ರನ್ ಗಳಿಸಲು ಬ್ಯಾಟರ್ಗಳು ಹರಸಾಹಸ ಪಡುತ್ತಿದ್ದರೂ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ಏಡೆನ್ ಮಾಕ್ರಂ ಮತ್ತು ಕಾಲಿನ ಗಾಯದ ನಡುವೆಯೂ ತಂಡಕ್ಕೆ ಆಸರೆಯಾದ ಟೆಂಬಾ ಬವುಮಾ, ತಂಡದ ಹೋರಾಟಕ್ಕೆ ಬಲ ತುಂಬಿದರು. ಮಿಚೆಲ್ ಸ್ಟಾರ್ಕ್ ಸೇರಿ ಆಸೀಸ್ ವೇಗಿಗಳನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ 3ನೇ ವಿಕೆಟ್ಗೆ 143* ರನ್ಗಳ ಅತ್ಯುತ್ತಮ ಜತೆಯಾಟದ ನಿರ್ವಹಿಸಿದರು. 2 ರನ್ ಗಳಿಸಿದ್ದ ವೇಳೆ ಸ್ಮಿತ್ ಅವರಿಂದ ಜೀವದಾನ ಪಡೆದ ಬವುಮಾ, ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು.
* ಬ್ಯಾಟಿಂಗ್ನಲ್ಲೂ ಆಸರೆಯಾದ ಸ್ಟಾರ್ಕ್
8 ವಿಕೆಟ್ಗೆ 114 ರನ್ಗಳಿಂದ 2ನೇ ಇನಿಂಗ್ಸ್ ಮುಂದುವರಿಸಿದ ಆಸ್ಪ್ರೇಲಿಯಾ, ಮಿಚೆಲ್ ಸ್ಟಾರ್ಕ್(58*; 136 ಎಸೆತ, 5 ಫೋರ್) ಅವರ ಜವಾಬ್ದಾರಿಯುತ ಅರ್ಧ ಶತಕದ ಬಲದಿಂದ ದಕ್ಷಿಣ ಆಫ್ರಿಕಾಕ್ಕೆ ಕಠಿಣ ಸವಾಲು ಒಡ್ಡಿತು. 2ನೇ ದಿನದಾಟದಂತ್ಯಕ್ಕೆ 16 ರನ್ ಗಳಿಸಿದ್ದ ಸ್ಟಾರ್ಕ್, 3ನೇ ದಿನ ವೇಗಿಗಳಾದ ಕಗಿಸೊ ರಬಾಡ ಮತ್ತು ಲುಂಗಿ ಎನ್ಗಿಡಿ ಅವರ ಮಾರಕ ದಾಳಿಯನ್ನು ಪ್ರಬಲವಾಗಿ ಎದುರಿಸಿದರು. 10ನೇ ವಿಕೆಟ್ಗೆ ಜೋಶ್ ಹೇಜಲ್ವುಡ್ ಜತೆ 59 ರನ್ಗಳ ಮಹತ್ವದ ಜೊತೆಯಾಟ ನಿರ್ವಹಿಸಿದ ಸ್ಟಾರ್ಕ್, ಆಸೀಸ್ಗೆ ಗೆಲುವಿನ ಭರವಸೆ ಮೂಡಿಸಿದರು.
* ತ್ಯಾಗ,ಹೋರಾಟವಿದ್ದರೆ ಮಾತ್ರ ಇಂಗ್ಲೆಂಡ್ ಸರಣಿ ಗೆಲ್ಲಬಹುದು: ಗಂಭೀರ್
ಲಂಡನ್: ನಾವು ತ್ಯಾಗ ಮಾಡಿದರೆ, ಹೋರಾಟ ಬಿಡದಿದ್ದರೆ ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಸ್ಮರಣೀಯಗೊಳಿಸಬಹುದು ಎಂದು ಭಾರತದ ಕೋಚ್ ಗೌತಮ್ ಗಂಭೀರ್, ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.
ಗುರುವಾರ ಅಭ್ಯಾಸದ ವೇಳೆ ಆಟಗಾರರ ಜೊತೆ ಮಾತನಾಡಿದ ಗಂಭೀರ್, ‘ಈ ಸರಣಿಯನ್ನು ನಾವು 2 ವಿಧದಲ್ಲಿ ನೋಡಬಹುದು. ಅತ್ಯಂತ ಅನುಭವಿಗಳಾದ ಮೂವರು ಆಟಗಾರರಿಲ್ಲದೆ ನಾವು ಈ ಸರಣಿ ಆಡುತ್ತಿದ್ದೇವೆ ಮತ್ತು ದೇಶಕ್ಕಾಗಿ ಏನಾದರೂ ಸಾಧಿಸಲು ನಮಗೆ ಸಿಕ್ಕ ಉತ್ತಮ ಅವಕಾಶ ಇದು. ಈ ತಂಡವನ್ನು ನೋಡುವಾಗ ಬದ್ಧತೆ, ಉದ್ವೇಗ ಕಂಡುಬರುತ್ತದೆ. ನಾವು ಏನಾದರೂ ತ್ಯಾಗ ಮಾಡಲು ಸಿದ್ದವಿದ್ದರೆ, ನಮ್ಮ ಆರಾಮದಾಯಕ ಬದುಕಿನಿಂದ ಆಚೆ ಬಂದರೆ, ಹೋರಾಡಿದರೆ ಈ ಸರಣಿ ಸ್ಮರಣೀಯಗೊಳಿಸಬಹುದು. ಪ್ರತಿ ದಿನ ಅಲ್ಲ, ಪ್ರತಿ ಅವಧಿ, ಪ್ರತಿ ಓವರ್, ಪ್ರತಿ ಎಸೆತದಲ್ಲೂ ನಾವು ಹೋರಾಡಬೇಕು ಎಂದು ಗಂಭೀರ್ ಹೇಳಿದ್ದಾರೆ.
