Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಮುಂಬೈ ಆರ್ಭಟಕ್ಕೆ ತವರಲ್ಲೇ ನಲುಗಿದ ಹೈದ್ರಾಬಾದ್
* ಪಾಯಿಂಟ್ ಟೇಬಲ್‌ನಲ್ಲಿ ಆರ್‌ಸಿಬಿ ಹಿಂದಿಕ್ಕಿದ ಮುಂಬೈ

NAMMMUR EXPRESS SPORTS NEWS
ಹೈದ್ರಾಬಾದ್: ಟ್ರೆಂಟ್ ಬೌಲ್ಟ್ ಮಾರಕ ಬೌಲಿಂಗ್ ಮತ್ತು ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಮಂಬೈ ಇಂಡಿಯನ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 7 ವಿಕೆಟ್ ಗಳಿಂದ ಬಗ್ಗು ಬಡಿದಿದೆ. ಸತತ ನಾಲ್ಕನೇ ಗೆಲುವು ಕಂಡಿರುವ ಮುಂಬೈ ಪಡೆ ಇದೀಗ ಅಂಕಪಟ್ಟಿಯಲ್ಲೂ ವ್ಯಾಪಕ ಜಿಗಿತ ಕಂಡಿದೆ. 6ನೇ ಸ್ಥಾನದಲ್ಲಿದ್ದ ಹಾರ್ದಿಕ್ ಪಾಂಡ್ಯ ಬಳಗ ಇದೀಗ 9 ಪಂದ್ಯಗಳಲ್ಲಿ 5 ಗೆಲುವು ಮತ್ತು 4 ಸೋಲಿನೊಂದಿಗೆ 10 ಅಂಕಗಳನ್ನು ಕಲೆ ಹಾಕಿದ್ದು 3ನೇ ಸ್ಥಾನಕ್ಕೇರಿದೆ. ಹೀಗಾಗಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ 3ರಿಂದ 4ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಮುಂಬೈ ವಿರುದ್ಧ ಪರಾಭವಗೊಂಡ ಸನ್ ರೈಸರ್ಸ್ ತಂಡ ಆಡಿರುವ 8 ಪಂದ್ಯಗಳಿಂದ 2 ಗೆಲುವಿನೊಂದಿಗೆ 9ನೇ ಸ್ಥಾನದಲ್ಲೇ ಮುಂದುವರಿದಿದೆ.
ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 144 ರನ್ ಗಳ ಗುರಿ ಪಡೆದ ಮುಂಬೈ ಕೇವಲ 3 ವಿಕೆಟ್ ಕಳೆದುಕೊಂಡು ಇನ್ನೂ 26 ಎಸೆತಗಳು ಬಾಕಿ ಇರುವಂತೆ ಜಯಶಾಲಿಯಾಯಿತು. ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ರಾನ್ ರಿಕಲ್ಟನ್ ಅವರು ಬೇಗನೇ ಔಟಾದರೂ ರೋಹಿತ್ ಶರ್ಮಾ(70) ಮತ್ತು ವಿಲ್ ಜಾಕ್ಸ್(22) ತಂಡದ ಇನ್ನಿಂಗ್ಸ್ ಕಟ್ಟಿದರು. ವಿಲ್ ಜಾಕ್ಸ್ ವಿಕೆಟ್ ಪತನದ ಬಳಿಕ ಸೂರ್ಯಕುಮಾರ್ ಯಾದವ್ (40) ಅವರು ರೋಹಿತ್ ಶರ್ಮಾ ಅವರ ಜೊತೆ ಸೇರಿ ಹೈದರಾಬಾದ್ ಬೌಲರ್ ಗಳನ್ನು ಗೋಳು ಹೊಯ್ದುಕೊಂಡರು. ಈ ಸೀಸನ್ ನಲ್ಲಿ 2ನೇ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ 46 ಎಸೆತಗಳಿಂದ 8 ಬೌಂಡರಿ ಮತ್ತು 3 ಸಿಕ್ಸರ್ ಗಳನ್ನು ಒಳಗೊಂಡ 70 ರನ್ ಗಳನ್ನು ಚಚ್ಚಿದರು. ಇನ್ನು ಸೂರ್ಯಕುಮಾರ್ ಅವರು 19 ಎಸೆತಗಳಿಂದ 5 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 40 ರನ್ ಗಳಿಸಿ ಅಜೇಯರಾಗುಳಿದರು.

* ಸನ್ ರೈಸರ್ಸ್ ಬ್ಯಾಟರ್‌ಗಳು ಸಂಪೂರ್ಣ ವೈಫಲ್ಯ
ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್ ತಂಡದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಅಗ್ರಕ್ರಮಾಂಕದ ಟ್ರಾವಿಸ್ ಹೆಡ್ (0), ಇಶಾನ್ ಕಿಶನ್(1), ಅಭಿಷೇಕ್ ಶರ್ಮಾ(8)), ನಿತೀಶ್ ಕುಮಾರ್ ರೆಡ್ಡಿ(2), ಅನಿಕೇತ್ ವರ್ಮಾ(12) ಮೊದಲಾದ ಘಟಾನುಘಟಿ ಬ್ಯಾಟರ್‌ಗಳು ಮುಂಬೈ ಬೌಲರ್‌ಗಳ ದಾಳಿಯ ಮುಂದೆ ತರಗೆಲೆಗಳಂತೆ ಉದುರಿದರು ಪರಿಣಾಮ ಹೈದರಾಬಾದ್ ತಂಡ ಕೇವಲ 35 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು.
ಈ ಸಂದರ್ಭದಲ್ಲಿ ಸ್ಪೋಟಕ ಬ್ಯಾಟರ್ ಹೆನ್ರಿಚ್ ಕ್ಲಾಸನ್ ಜೊತೆ ಸೇರಿ ಕರ್ನಾಟಕದ ಅಭಿನವ್ ಮನೋಹರ್ ತಂಡಕ್ಕೆ ಕೊಂಚ ಚೇತರಿಕೆ ನೀಡಿದರು. ಇವರಿಬ್ಬರು 6ನೇ ವಿಕೆಟ್ ಗೆ ಮಹತ್ವದ 99 ರನ್ ಗಳ ಜೊತೆಯಾಟವಾಡಿದರು. ಹೆನ್ರಿಚ್ ಕ್ಲಾಸನ್ ಅವರು 44 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 71 ರನ್ ಗಳಿಸಿ ಬುಮ್ರಾ ಬೌಲಿಂಗ್ ನಲ್ಲಿ ತಿಲಕ್ ವರ್ಮಾಗೆ ಕ್ಯಾಚ್ ನೀಡಿದರು. ಅಭಿನವ್ ಮನೋಹರ್ ಅವರು 37 ಎಸೆತಗಳಿಂದ 2 ಬೌಂಡರಿ ಮತ್ತು 3 ಸಿಕ್ಸರ್ ಗಳಿದ್ದ 43 ರನ್ ಗಳಿಸಿ ಬೌಲ್ಟ್ ಬೌಲಿಂಗ್ ನಲ್ಲಿ ಹಿಟ್ ವಿಕೆಟ್ ಆದರ. ಅಂತಿಮವಾಗಿ ಸನ್ ರೈಸರ್ಸ್ 8 ವಿಕೆಟ್ ನಷ್ಟಕ್ಕೆ 143 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಮುಂಬೈ ಪರ ಟ್ರೆಂಟ್ ಬೌಲ್ಟ್ 26 ರನ್ ಗೆ 4 ವಿಕೆಟ್ ಮತ್ತು ದೀಪರ್ ಚಾಹಲ್ 12 ರನ್ ಗಳಿಗೆ 2 ವಿಕೆಟ್ ಕಹಳಿಸಿದರು. ಉಳಿದೆರಡು ವಿಕೆಟ್ ಗಳನ್ನು ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಹಂಚಿಕೊಂಡರು. ಟ್ರೆಂಟ್ ಬೌಲ್ಟ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು

* ಇಂದಾದರು ತವರಲ್ಲಿ ಗೆಲ್ಲುತ್ತಾ ಆರ್‌ಸಿಬಿ
ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಆರ್‌ಸಿಬಿ ಹಾಗೂ ರಾಜಸ್ಥಾನ್ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿದೆ. ತವರಿನಲ್ಲಿ ಆಡಿದ ಮೂರಕ್ಕೆ ಮೂರು ಪಂದ್ಯದಲ್ಲಿ ಸೋತಿರುವ ಆರ್‌ಸಿಬಿ ಇಂದಾದರೂ ತವರಲ್ಲಿ ಗೆಲ್ಲಲಿದೆಯಾ ಎಂಬ ಕುತೂಹಲವಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.