ಕರ್ನಾಟಕ ಟಾಪ್ ನ್ಯೂಸ್: ವಿಶೇಷ ಸುದ್ದಿಗಳು… ಒಮ್ಮೆ ಓದಿ..!
ಮಳೆಗೆ ಬೆಂಗಳೂರು ಕಂಗಾಲು!
– ಕರ್ನಾಟಕದಲ್ಲಿ ಮತ್ತೆ ಮಳೆ: 8 ಜಿಲ್ಲೆಗಳಲ್ಲಿ ಮಳೆ ಮಳೆ
– ಮದುವೆ ಆಗಬೇಕಿದ್ದವನಿಗೆ ಉದ್ಯೋಗ ಇಲ್ಲ ಎಂದು ಯುವತಿ ಆತ್ಮಹತ್ಯೆ!
– ಹಾವೇರಿ : ಹೆತ್ತ ಮಗಳನ್ನೇ ಕೊಂದ ಪಾಪಿ ತಾಯಿ!
– ಬೀದರ್: ಮಾಜಿ ಶಾಸಕರನ್ನೇ ಖೆಡ್ದಾಕ್ಕೆ ಬೀಳಿಸಿದ ಸೈಬರ್ ಕಳ್ಳರು!
NAMMUR EXPRESS NEWS
ಕರ್ನಾಟಕದಲ್ಲಿ ಇಂದಿನಿಂದ ಮತ್ತೆ ಮಳೆ ಶುರುವಾಗಲಿದೆ. 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಗದಗ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ ತುಮಕೂರು, ವಿಜಯನಗರದಲ್ಲಿ ಮಳೆಯಾಗಿದೆ. ಗೋಕರ್ಣ, ಸಿದ್ದಾಪುರ, ಕುಮಟಾ, ಹಳಿಯಾಳದಲ್ಲಿ ಮಳೆಯಾಗಿದೆ. ಬೆಂಗಳೂರಿನಲ್ಲಿ ಕೂಡ ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗೆಯವರೆಗೂ ಗುಡುಗು ಸಹಿತ ಮಳೆಯಾಗಿದೆ. ಮಳೆಗೆ ಅನೇಕ ಕಡೆ ಭಾರೀ ಹಾನಿ ಆಗಿದೆ.
ಮದುವೆ ಆಗಬೇಕಿದ್ದವನಿಗೆ ಉದ್ಯೋಗ ಇಲ್ಲ ಎಂದು ಯುವತಿ ಆತ್ಮಹತ್ಯೆ!
ಕಂಪನಿಯೊಂದರಲ್ಲಿ ಕೆಲಸ ಎಂದು ನಂಬಿಸಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗ ನಿರುದ್ಯೋಗಿ ಎಂದು ತಿಳಿದ ನಂತರ ಮನನೊಂದ ಯುವತಿ ತಾನು ಕೆಲಸ ಮಾಡುವ ಕಚೇರಿಯಲ್ಲಿ ವಿಷದ ಮಾತ್ರೆಗಳನ್ನ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿ ನಡೆದಿದೆ.
ಕೆ.ಆರ್.ಪೇಟೆ ತಾಲೂಕಿನ ವಳಗೆರೆ ಮೆಣಸ ಗ್ರಾಮದ ಕಾವ್ಯ (26) ಮೃತ ದುರ್ದೈವಿ.ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಕಾವ್ಯ ತನ್ನ ಸಹೋದರರಿಗೆ ಮೊಬೈಲ್ ನಲ್ಲಿ ಮೆಸೇಜ್ ಮಾಡಿ ವಿಷದ ಮಾತ್ರೆ ಸೇವಿಸಿದ್ದಾಳೆ.
ಈಕೆಗೆ 15 ದಿನಗಳ ಹಿಂದೆ ಹಾಸನದ ಕಿರಣ್ ಎಂಬ ಹುಡುಗನ ಜೊತೆ ಮದುವೆ ಫಿಕ್ಸ್ ಆಗಿತ್ತು.ಖಾಸಗಿ ಕಂಪನಿ ಉದ್ಯೋಗಿ ಎಂದು ನಂಬಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದ.ನಂತರ ಹುಡುಗನಿಗೆ ಯಾವುದೇ ಕೆಲಸ ಇಲ್ಲವೆಂದು ಖಚಿತವಾಗಿದೆ.ಇದರಿಂದ ಕಾವ್ಯ ಮನನೊಂದಿದ್ದಳು.ಮನೆಯವರು ಧೈರ್ಯ ಹೇಳಿದ್ದರು.ಎಂದಿನಂತೆ ಕಚೇರಿಗೆ ಬಂದ ಕಾವ್ಯ ಧಾನ್ಯಗಳಿಗೆ ಬಳಸುವ ಕ್ರಿಮಿನಾಶಕ ಮಾತ್ರೆಗಳನ್ನ ಸೇವಿಸಿ ತನ್ನ ಸಹೋದರರಿಗೆ ಮೆಸೇಜ್ ಮಾಡಿದ್ದಾಳೆ. ಅಸ್ವಸ್ಥಳಾದ ಕಾವ್ಯಳನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಕಾವ್ಯ ಸಾವನ್ನಪ್ಪಿದ್ದಾಳೆ.
• ಬೀದರ್: ಮಾಜಿ ಶಾಸಕರನ್ನೇ ಖೆಡ್ದಾಕ್ಕೆ ಬೀಳಿಸಿದ ಸೈಬರ್ ಕಳ್ಳರು!
ಬೀದರ್: ಬೀದರ್ ಜಿಲ್ಲೆಯ ಔರಾದ್ ನಲ್ಲಿ ಮಾಜಿ ಶಾಸಕರಾದ ಗುಂಡಪ್ಪ ವಕೀಲ್ ಎನ್ನುವವರು ಸೈಬರ್ ಕ್ರೈಂ ಜಾಲಕ್ಕೆ ಸಿಲುಕಿ, 30 ಲಕ್ಷ ರೂಪಾಯಿ ಕಳೆದುಕೊಂಡ ಸಂಗತಿ ನಡೆದಿದೆ. ಸಿಬಿಐ, ಈಡಿ ಮತ್ತು ನ್ಯಾಯಾಧೀಶರ ಹೆಸರಿನಲ್ಲಿ ವಂಚಿಸಲಾಗಿದೆ ಎಂದು ತಿಳಿದುಬಂದಿದೆ. ಕಳೆದ ತಿಂಗಳು ಸಿಬಿಐ ಅಧಿಕಾರಿಗಳು ಎಂದು ಶಾಸಕರಿಗೆ ಕರೆ ಮಾಡಿ, ” ನೀವು ನರೇಶ್ ಗೋಯಲ್ ಲಾಂಡರಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ. ನಮಗೆ ನಿಮ್ಮ ಎಟಿಎಂ ಕಾರ್ಡ್ ಗಳು ಸಿಕ್ಕಿದ್ದು, ಇದರಿಂದ ಸಾಕಷ್ಟು ಅವ್ಯವಹಾರ ನಡೆದಿದೆ” ಎಂದು ಡಿಜಿಟಲ್ ಅರೆಸ್ಟ್ ರೀತಿಯ ನಾಟಕವಾಡಿ 30 ಲಕ್ಷ ರೂಪಾಯಿ ಲಪಟಾಯಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.
• ಹಾವೇರಿ : ಹೆತ್ತ ಮಗಳನ್ನೇ ಕೊಂದ ಪಾಪಿ ತಾಯಿ!
ಹಾವೇರಿ: ತನ್ನ ಅನೈತಿಕ ಸಂಬಂಧಕ್ಕೆ ಮಗಳು ಅಡ್ಡಿಯಾಗಿದ್ದಾಳೆ ಎನ್ನುವ ಕಾರಣಕ್ಕಾಗಿ, ಪ್ರಿಯಕರನೊಂದಿಗೆ ಸೇರಿ ಪಾಪಿ ತಾಯಿಯು ನಾಲ್ಕು ವರ್ಷದ ಪುಟ್ಟ ಕಂದನನ್ನು ಹತ್ಯೆ ಮಾಡಿದ ಘಟನೆ, ರಾಣೆಬೆನ್ನೂರು ತಾಲ್ಲೂಕಿನ ಗುಡ್ಡದ ಅನ್ವೇರಿ ಗ್ರಾಮದಲ್ಲಿ ನಡೆದಿದೆ. ಗಂಗಮ್ಮ ಗುತ್ತಲ, ಅಣ್ಣಪ್ಪ ಮಡಿವಾಳ ಕೊಲೆಯ ಆರೋಪಿಗಳಾಗಿದ್ದು, ಪೊಲೀಸರು ಅವರನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.