ಟಾಪ್ 4 ನ್ಯೂಸ್ ಕರ್ನಾಟಕ
ಕೆಕೆಆರ್ಟಿಸಿ ಬಸ್ ಡಿಕ್ಕಿಗೆ 3 ಬೈಕ್ ಸವಾರರು ಬಲಿ!
– ಕಲಬುರಗಿಯಲ್ಲಿ ನಡೆದ ದುರಂತ
– ಯಾದಗಿರಿ : ಮನೆಯ ಶೀಟ್ ಮೇಲಿದ್ದ ಕಲ್ಲು ಬಿದ್ದು ಬಾಲಕಿ ಸಾವು
– ಬೆಳಗಾವಿ : ಆಟವಾಡುತ್ತ ಸಂಪ್ಗೆ ಬಿದ್ದು 2 ವರ್ಷದ ಕಂದಮ್ಮ ದುರ್ಮರಣ
– ಯಾದಗಿರಿ: ಮಳೆ ಅವಾಂತರದಿಂದಾಗಿ ಮರ ಬಿದ್ದು ಮಹಿಳೆ ಸಾವು
NAMMUR EXPRESS NEWS
ಕಲಬುರಗಿ: ಕಮಲಾಪುರ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ಬೈಕ್ ಸವಾರರು ಸಾವಿಗೀಡಾಗಿದ್ದಾರೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬೆಂಗಳೂರು ಕ್ರಾಸ್ ಬಳಿ ದುರ್ಘಟನೆ ನಡೆದಿದೆ. ಬೈಕ್ ಮತ್ತು ಕೆಕೆಆರ್ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರರು ಸ್ಥಳದಲ್ಲೆ ಮರಣ ಹೊಂದಿದ್ದಾರೆ. ಮೃತಪಟ್ಟವರು ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್ ಗ್ರಾಮದವರು. ಕಿಣ್ಣಿ ಸಡಕ್ ಗ್ರಾಮದಿಂದ ಕಲಬುರಗಿಗೆ ಬೈಕಿನಲ್ಲಿ ಬರುತ್ತಿದ್ದರು. ಕಲಬುರಗಿಯಿಂದ ಹುಮನಾಬಾದ್ ಕಡೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಅಪ್ಪಳಿಸಿದೆ. ಮೃತರನ್ನು ಚಂದ್ರಕಾಂತ್(17), ವಿಶಾಲ್ (20), ಸಮೀರ್ (23) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಕಮಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
– ಯಾದಗಿರಿ : ಮನೆಯ ಶೀಟ್ ಮೇಲಿದ್ದ ಕಲ್ಲು ಬಿದ್ದು ಬಾಲಕಿ ಸಾವು
ಯಾದಗಿರಿ: ಮಳೆ ಅವಾಂತರಕ್ಕೆ ನಾಲ್ಕು ವರ್ಷದ ಬಾಲಕಿ ಬಲಿಯಾಗಿರುವ ಘಟನೆ ಜಿಲ್ಲೆಯ ಗುರುಮಠಕಲ್ ಪಟ್ಟಣದ ಚಪೆಟ್ಲಾ ರಸ್ತೆ ಬದಿ ನಡೆದಿದೆ. ಬಾಲಕಿ ಮನಸ್ವಿ ತಿಪ್ಪಣ್ಣ ಯಾದವ್ ಮೃತ ಬಾಲಕಿ. ಮನೆ ಶೀಟ್ ಮೇಲೆ ಇಟ್ಟಿದ್ದ ಕಲ್ಲು ತಲೆ ಮೇಲೆ ಬಿದ್ದಿದ್ದರಿಂದ ಬಾಲಕಿ ಮೃತಪಟ್ಟಿದ್ದಾಳೆ. ಜಮೀನಿನ ಶೀಟ್ ಮನೆಯಲ್ಲಿ ಪೋಷಕರ ಜತೆ ಬಾಲಕಿ ವಾಸವಾಗಿದ್ದಳು. ಬಿರುಗಾಳಿ ಸಹಿತ ಭಾರಿ ಮಳೆ ಹಿನ್ನೆಲೆ ಮನೆ ಶೀಟ್ ಮೇಲೆ ಇಟ್ಟಿದ್ದ ಕಲ್ಲು ಬಿದ್ದು ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಸ್ಥಳದಲ್ಲಿ ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ.
– ಬೆಳಗಾವಿ : ಆಟವಾಡುತ್ತ ಸಂಪ್ಗೆ ಬಿದ್ದು 2 ವರ್ಷದ ಕಂದಮ್ಮ ದುರ್ಮರಣ
ಬೆಳಗಾವಿ: 2 ವರ್ಷದ ಮಗುವೊಂದು ಆಟವಾಡುತ್ತ ಹೋಗಿ ನೀರಿನ ಸಂಪ್ಗೆ ಬಿದ್ದು ಸಾವಿಗೀಡಾದ ದುರ್ಘಟನೆ ಬೆಳಗಾವಿಯ ಕಂಗ್ರಾಳ ಗಲ್ಲಿಯಲ್ಲಿ ನಡೆದಿದೆ. ಸಾಯೀಶಾ ಸಂದೀಪ್ ಬಡವನಾಚೆ(2) ಮೃತಪಟ್ಟ ಮಗು. ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಣ್ಮರೆಯಾದುದರಿಂದ ಗಾಬರಿಯಾದ ಪೋಷಕರು ಹುಡುಕಾಟ ಆರಂಭಿಸಿದ್ದರು. ಎಷ್ಟೇ ಹುಡುಕಿದರೂ ಕಾಣದಿದ್ದಾಗ ಪೋಷಕರು ಸಂಪ್ ಒಪನ್ ಮಾಡಿ ನೋಡಿದ್ದರು. ಸಂಪ್ ಓಪನ್ ಮಾಡುತ್ತಿದ್ದಂತೆ ಅಲ್ಲಿ ಬಿದ್ದಿದ್ದ ಮಗು ಸಾಯೀಶಾ ಕಂಡುಬಂದಿದ್ದಳು. ಕೂಡಲೇ ಸಮೀಪದ ಆಸ್ಪತ್ರೆಗೆ ಮಗುವನ್ನು ಪೋಷಕರು ಕರೆದೊಯ್ದರಾದರೂ, ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮಗು ತೀರಿ ಹೋಗಿದ್ದರ ಬಗ್ಗೆ ವೈದ್ಯರು ಮಾಹಿತಿ ನೀಡಿದರು. ಖಡೇ ಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
– ಯಾದಗಿರಿ: ಮಳೆ ಅವಾಂತರದಿಂದಾಗಿ ಮರ ಬಿದ್ದು ಮಹಿಳೆ ಸಾವು
ಯಾದಗಿರಿ: ಮಳೆ ಅವಾಂತರದಿಂದಾಗಿ, ನೀರು ತರಲು ಹೋದ ಮಹಿಳೆ ಮೇಲೆ ಮರ ಬಿದ್ದು ಮಹಿಳೆ ಸಾವಿಗೀಡಾಗಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ. ಶ್ವೇತಾ ರಾಠೋಡ (21) ಮೃತ ಮಹಿಳೆ. ಬಿರುಗಾಳಿ ಸಹಿತ ಮಳೆ ಬರುತ್ತಿದ್ದಾಗಲೇ ನೀರು ತರಲು ಹೋದ ಶ್ವೇತಾ ರಾಠೋಡ ಮೇಲೆ ಮರ ಬಿದ್ದಿದೆ. ಗಂಭೀರ ಗಾಯಗೊಂಡ ಶ್ವೇತಾರನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ.