ಹುಡುಗಿ ಹೆಸರಲ್ಲಿ ಫೇಸ್ಬುಕ್ ಅಕೌಂಟ್ ಮಾಡಿ 7.25 ಲಕ್ಷ ವಂಚನೆ!
– ತೀರ್ಥಹಳ್ಳಿಯ ಹುಡುಗನಿಂದ ವಂಚನೆ: ಅರೆಸ್ಟ್
– ತೀರ್ಥಹಳ್ಳಿ ಹೊರ ವಲಯದಲ್ಲಿ ಗಾಂಜಾ ವ್ಯಸನಿಗಳ ಕಾಟ!
NAMMUR EXPRESS NEWS
ತೀರ್ಥಹಳ್ಳಿ: ಫೇಸ್ಬುಕ್ ಜಾಲ ತಾಣದಲ್ಲಿ ಹುಡುಗಿಯರ ಹೆಸರಲ್ಲಿ ತೀರ್ಥಹಳ್ಳಿಯ ಯುವಕನೊಬ್ಬ 7.25 ಲಕ್ಷ ವಂಚಿಸಿ ಇದೀಗ ಅರೆಸ್ಟ್ ಆಗಿರುವ ಘಟನೆಯೊಂದು ನಡೆದಿದೆ. ತುಮಕೂರಿನ ಪೋಲಿಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು, ಆ ದೂರಿನ ಮೇರೆಗೆ ಪೋಲೀಸರು ತೀರ್ಥಹಳ್ಳಿಯಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ತೀರ್ಥಹಳ್ಳಿಯ 21 ವರ್ಷದ ಈ ಹುಡುಗ ಫೇಸ್ಬುಕ್ ನಲ್ಲಿ ದಿವ್ಯ ಮತ್ತು ಶರ್ಮಿಳಾ ಎಂಬ ಹೆಸರಿನಲ್ಲಿ ಅಕೌಂಟ್ ಹೊಂದಿದ್ದು ಹುಡುಗರೊಂದಿಗೆ ಮೆಸೆಂಜರ್ ನಲ್ಲಿ ಮಾತುಕತೆಗಿಳಿದು ನಿಧಾನವಾಗಿ ಸಲಿಗೆ ಬೆಳೆಸಿಕೊಂಡು ನಂತರ ವಾಟ್ಸಾಪ್ ನಂಬರ್ ಮೂಲಕ ಇನ್ನಷ್ಟು ಹತ್ತಿರವಾಗಿ ಒಂದಿಷ್ಟು, ಸುಳ್ಳು ಮತ್ತು ಸಿಂಪಥಿಯ ಕಥೆಗಳನ್ನು ಸೃಷ್ಟಿಸಿ ಹೇಳಿ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಪೋಲಿಸ್ ತನಿಖೆಯಿಂದ ತಿಳಿದಿದೆ.
ಈ ಆರೋಪಿ ತುಮಕೂರಿನ ಯುವಕನೊಂದಿಗೆ ಹೀಗೆ ವಾಟ್ಸಾಪಿನ ಮತ್ತು ಮಸೆಂಜರ್ ಮೂಲಕ ಮಾತಿಗಿಳಿದಿದ್ದು 7.25 ಲಕ್ಷ ಹಣ ಪಡೆದು ವಂಚಿಸಿರುತ್ತಾನೆ. ಹಣ ಕಳೆದುಕೊಂಡ ಮಗ ಖಿನ್ನತೆಯಿಂದ ಇದ್ದದ್ದನ್ನು ಗಮನಿಸಿದ ಹುಡುಗನ ತಂದೆ ಈ ಕುರಿತು ತುಮಕೂರು ಸಿಇಎನ್ ಠಾಣೆಯಲ್ಲಿ ಆಗಸ್ಟ್ 15ಕ್ಕೆ ದೂರು ನೀಡಿದ್ದು ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ಇವನೊಂದಿಗೆ ಇನ್ನಷ್ಟು ಜನರಿರುವ ಶಂಕೆಯಿದ್ದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
ತೀರ್ಥಹಳ್ಳಿ ಹೊರ ವಲಯದಲ್ಲಿ ಗಾಂಜಾ ವ್ಯಸನಿಗಳ ಕಾಟ!
ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಂತಿರುವ ತುಡ್ಕಿ-ಬದನೇಹಿತ್ಲು, ಕುರುವಳ್ಳಿ, ಸೀಬಿನಕೆರೆ, ಯಡೆಹಳ್ಳಿ, ಇಂದಿರಾ ನಗರ ಗ್ರಾಮಗಳಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗುತ್ತಿದೆ. ತುಂಗಾ ಕಾಲೇಜು ಗುಡ್ಡ, ತುಡ್ಕಿ ಗದ್ದೆಬಯಲು, ಇಂದಾವರಗಳಲ್ಲಿ ಠಿಕಾಣಿ ಹೂಡುವ ಯುವಕರು ಗಾಂಜಾ ಎಳೆದು ಚಿತ್ರ ವಿಚಿತ್ರವಾಗಿ ವರ್ತಿಸುವುದು, ಪುಂಡಾಟಿಕೆ ನಡೆಸುವುದು, ಪರಸ್ಪರ ಬಡಿದಾಡಿಕೊಳ್ಳುವುದು ಮಾಮೂಲಿಯಾಗಿ ಬಿಟ್ಟಿದೆ. ಇತ್ತೀಚೆಗೆ ಗಾಂಜಾ ಅಮಲಿನಲ್ಲಿ ಯುವಕನೊಬ್ಬನ ಮರ್ಮಾಂಗಕ್ಕೆ ಒದ್ದು ಆತ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾನೆ. ಗಾಂಜಾ ಹಾವಳಿ ತಡೆಗಟ್ಟುವಂತೆ ಗ್ರಾಮಸ್ಥರು ಪೋಲೀಸ್-ಅಬಕಾರಿ ಇಲಾಖೆಯನ್ನು ಆಗ್ರಹಿಸಿದ್ದಾರೆ.
