Categories
ತೀರ್ಥಹಳ್ಳಿ

ಶಿಕ್ಷಣ ಕ್ಷೇತ್ರಕ್ಕೆ ನ್ಯಾಷನಲ್ ಸಂಸ್ಥೆಯ ಮಹಾನ್ ಕೊಡುಗೆ!

ಶಿಕ್ಷಣ ಕ್ಷೇತ್ರಕ್ಕೆ ನ್ಯಾಷನಲ್ ಸಂಸ್ಥೆಯ ಮಹಾನ್ ಕೊಡುಗೆ!
– 367 ವಿದ್ಯಾರ್ಥಿಗಳಿಗೆ 12 ಲಕ್ಷ ರೂ. ಗಳಿಗೂ ಹೆಚ್ಚು ಸ್ಕಾಲರ್ಶಿಪ್ ವಿತರಣೆ
– ಹಾಜಿ ಶೇಖ್ ಅಹಮದ್ ಫೌಂಡೇಶನ್ ಚಾರಿಟಬಲ್ ಟ್ರಸ್ಟ್ ಮಾದರಿ ಸೇವೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ನ್ಯಾಷನಲ್ ಸಂಸ್ಥೆ ಹಾಗೂ ಹಾಜಿ ಶೇಖ್ ಅಹಮದ್ ಫೌಂಡೇಶನ್ ಚಾರಿಟಬಲ್ ಟ್ರಸ್ಟ್ ಈ ವರ್ಷ ಕೂಡ 367 ವಿದ್ಯಾರ್ಥಿಗಳಿಗೆ 12 ಲಕ್ಷ ರೂ. ಗಳಿಗೂ ಹೆಚ್ಚು ಸ್ಕಾಲರ್ಶಿಪ್ ವಿತರಣೆ ಮಾಡುವ ಮೂಲಕ ಮತ್ತೆ ಸಾಮಾಜಕ್ಕೆ ತನ್ನದೇ ಕೊಡುಗೆ ನೀಡಿದೆ.
ಬಡ ಮಕ್ಕಳ ಶಿಕ್ಷಣ ನಿಲ್ಲಬಾರದೆಂದು ವಿದ್ಯಾರ್ಥಿ ವೇತನ ಆರಂಭ ಮಾಡಿದ್ದ ಸಂಸ್ಥೆ ತನ್ನ ಉದ್ಯಮದ ಜತೆಗೆ ಸಾಮಾಜಿಕ ಕಳಕಳಿ ಮೆರೆದಿದೆ. ಈ ವರ್ಷ 367 ವಿದ್ಯಾರ್ಥಿಗಳಿಗೆ 12 ಲಕ್ಷ ರೂ. ಗಳಿಗೂ ಹೆಚ್ಚು ಸ್ಕಾಲರ್ಶಿಪ್ ವಿತರಣೆ ಮಾಡಿದ್ದು ಸಾವಿರಾರು ಜನರ ಸಮ್ಮುಖದಲ್ಲಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳಿಗೆ ವಿತರಣೆ ಮಾಡಿದೆ.
ಪ್ರಾಸ್ತವಿಕ ಮಾತನಾಡಿದ ನ್ಯಾಷನಲ್ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯ ಪಾಲುದಾರ ಯೂಸೂಫ್ ಹೈದರ್, ನಾವು ಸಮಾಜದಿಂದ ಪಡೆದುದನ್ನು ವಾಪಾಸು ಹಿಂದಿರುಗಿಸಬೇಕೆಂದರೆ ಅದು ವಿದ್ಯಾದಾನದ ಮೂಲಕವೇ ಸಾಧ್ಯ. ನಮ್ಮ ತಂದೆಯವರಾದ ಹಾಜಿ ಶೇಖ್ ಅಹಮದ್ ಸಾಹೇಬ್ ಅವರು ನೀಡಿದ ಸಲಹೆಯಂತೆ 2010ರಲ್ಲಿ 10 ವಿದ್ಯಾರ್ಥಿಗಳಿಗೆ 50 ಸಾವಿರ ರೂ.ಗಳ ಸ್ಕಾಲರ್ಶಿಪ್ ನೀಡುವ ಮೂಲಕ ಇದು ಆರಂಭವಾಯಿತು. ಇದೀಗ 12 ಲಕ್ಷಕ್ಕೂ ಹೆಚ್ಚು ವಿತರಣೆ ಮಾಡಿದ್ದೇವೆ ಎಂದರು.
ತೀರ್ಥಹಳ್ಳಿಯ ವಿದ್ಯಾಧಿರಾಜ ಸಭಾ ಭವನದಲ್ಲಿ ಜೂ.1ರಂದು ಹಾಜಿ ಶೇಖ್ ಅಹಮದ್ ಫೌಂಡೇಶನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ವರ್ಷ 307 ಜನ ವಿದ್ಯಾರ್ಥಿಗಳಿಗೆ 9 ಲಕ್ಷ 49 ಸಾವಿರ ರೂ.ಗಳ ಸ್ಕಾಲರ್ಶಿಪ್ ವಿತರಿಸಿದ್ದೆವು. ವಿದ್ಯಾರ್ಥಿಗಳು ಮೊಬೈಲು ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಅಗತ್ಯವಿದ್ದಾಗ ಮಾತ್ರ ಇವುಗಳನ್ನು ಬಳಸಬೇಕು. ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ದಿಯಾಗುತ್ತದೆ ಎಂದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೆನರಾ ಬ್ಯಾಂಕ್ ಡಿಜಿಎಮ್ ದೇವರಾಜ್ ಅವರು, ತೀರ್ಥಹಳ್ಳಿಯ ನ್ಯಾಷನಲ್ ಸಮೂಹ ಸಂಸ್ಥೆಗಳ ಸಾಮಾಜಿಕ ಕಾರ್ಯಗಳನ್ನು ಪ್ರಶಂಸಿದರು. ವಿಶೇಷ ಉಪನ್ಯಾಸ ನೀಡಲು ಆಗಮಿಸಿದ್ದ ಶಿಕ್ಷಕ ಎನ್. ಜಿ. ಸ್ವಾಮಿ ಅವರು, ನ್ಯಾಷನಲ್ ಸಮೂಹ ಸಂಸ್ಥೆಗಳ 6 ಜನ ಸಹೋದರರು ಮತ್ತು ಕುಟುಂಬ ವರ್ಗದವರು ಒಗ್ಗಟ್ಟಿನಿಂದ ಇದ್ದು ತಮ್ಮ ಸಂಸ್ಥೆಯನ್ನೂ ಬೆಳೆಸುವುದರ ಜೊತೆಗೆ ಸಮಾಜ ಸೇವೆಯಲ್ಲಿಯೂ ತೊಡಗಿರುವುದು ಶ್ಲಾಘನೀಯ ಎಂದರು.
ನ್ಯಾಷನಲ್ ಸಮೂಹ ಸಂಸ್ಥೆಯ ಡಿ.ಎಸ್. ಅಬ್ದುಲ್ ರೆಹಮಾನ್ ಮಾತನಾಡಿ, ತಮ್ಮ ತಂದೆಯ ಇಚ್ಚೆಯಂತೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು. ಈ ಭಾಗದಲ್ಲಿ ನೀಟ್ ಮತ್ತು ಸಿ.ಇ.ಟಿ. ತರಬೇತಿ ತರಗತಿಗಳ ಅವಶ್ಯಕತೆಯೂ ಇದ್ದು, ಈ ಕುರಿತು ಯೋಚಿಸಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಪಿಯುಸಿ ವಿಜ್ಞಾನದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ದೀಕ್ಷಾ ಹಾಗೂ ಇತರ ರಾಂಕ್ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ನ್ಯಾಷನಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಇಬ್ರಾಹಿಂ ಷರೀಪ್ ಅವರು ವಹಿಸಿದ್ದರು. ಸಮಾರಂಭದಲ್ಲಿ ತೀರ್ಥಹಳ್ಳಿ ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಸೌರಭ್, ನ್ಯಾಷನಲ್ ಸಂಸ್ಥೆಯ ಅಬ್ದುಲ್ ಕಲಾಂ, ಮೊಯ್ದಿನ್ ಕಬೀರ್, ಮಂಜುನಾಥ ಮಲ್ಯ, ಶಾರೀಕ್ ಇದ್ದರು. ಪ್ರಶಾಂತ್ ಹೆಗ್ಗಾರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.