ಆಲಬಳ್ಳಿ ಜಾತ್ರೆ ಸಂಭ್ರಮ.. ದೇವತೆಗಳ ಸಮಾಗಮ!
– ಮಲೆನಾಡ ಕಾರ್ಣಿಕ ದೇವಸ್ಥಾನಕ್ಕೆ ಸಾವಿರಾರು ಭಕ್ತರ ಆಗಮನ
– ವಿವಿಧ ಧಾರ್ಮಿಕ ಕಾರ್ಯಕ್ರಮ: ಹರಿಹರಪುರ ಮಠದ ಶ್ರೀಗಳ ಆಶೀರ್ವಚನ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಆಲಬಳ್ಳಿಯ ಪಂಚದೇವರ ಕ್ಷೇತ್ರವಾದ ಶ್ರೀ ಪಂಚಮುಖಿ ಮಹಾಗಣಪತಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ, ಶ್ರೀ ನಾಗದೇವರು, ಶ್ರೀ ಚಾಮುಂಡೇಶ್ವರಿ ಶ್ರೀ ಹೊನ್ನವತ್ತಮ್ಮ ಮತ್ತು ಶ್ರೀ ಗುಳ್ಳೆ ಮಾರಿಯಮ್ಮ ದೇವಸ್ಥಾನದಲ್ಲಿ ಮೇ.13 ಮತ್ತು 14 ರಂದು ಕ್ಷೇತ್ರದ 66ನೇ ವರ್ಷದ ವಾರ್ಷಿಕ ಜಾತ್ರೆ ಉತ್ಸವ ಮತ್ತು ಕೆಂಡಸೇವೆ ಯಶಸ್ವಿಯಾಗಿ ನಡೆಸಲಾಯಿತು. ಮೇ.13ರ ಸೋಮವಾರ ಪಂಚಮುಖಿ ಗಣಪತಿಗೆ ಗಣಹೋಮ, ಪಂಚಮುಖ ಆಂಜನೇಯ ಸ್ವಾಮಿಗೆ ವಾಯುಸ್ತುತಿ, ಮಲ್ಲಿಕಾರ್ಜುನ ಸ್ವಾಮಿಗೆ ರುದ್ರ ಹೋಮ ಮತ್ತು ನಾಗದೇವರಿಗೆ ಪವಮಾನ ಅಭಿಷೇಕ, ಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಹಾಗೂ ರಾತ್ರಿ ಚಾಮುಂಡೇಶ್ವರಿ ವಿಗ್ರಹಕ್ಕೆ ಅಷ್ಟ ಬಂದ ಲೇಪನ ಕಲಶ ಸ್ಥಾಪನೆ ಮಾಡಲಾಗಿದ್ದು, ಮೇ.14ರ ಮಂಗಳವಾರ ಚಾಮುಂಡೇಶ್ವರಿ ಅಮ್ಮನವರಿಗೆ ಚಂಡಿಕಾಹವನ, ಬ್ರಹ್ಮ ಕುಂಭಾಭಿಷೇಕ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ವಾರ್ಷಿಕ ಜಾತ್ರಾ ಉತ್ಸವ ರಾತ್ರಿ 10ಕ್ಕೆ ಕೆಂಡಸೇವೆ ಮಧ್ಯಾಹ್ನ ಹಾಗೂ ರಾತ್ರಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆದಿದೆ.
ಮಂಗಳವಾರ ಸಂಜೆ ಚಾಮುಂಡೇಶ್ವರಿ ಅಮ್ಮನವರ ಪಲ್ಲಕ್ಕಿ ಆಲಬಳ್ಳಿಯಿಂದ ರಾಮೇಶ್ವರ ದೇವಸ್ಥಾನ ತಲುಪಿ ಅಲ್ಲಿಂದ ಮಾರಿಕಾಂಬ ದೇವಸ್ಥಾನ ನಂತರ ಕೊಪ್ಪ ಸರ್ಕಲ್ ಕುರುವಳ್ಳಿ ಮಾರ್ಗವಾಗಿ ಆಲಬಳ್ಳಿ ದೇವಸ್ಥಾನವನ್ನು ತಲುಪಿತು. ಮೇ 14ರ ಮಂಗಳವಾರದಂದು ಶ್ರೀ ಆದಿ ಶಂಕರಾಚಾರ್ಯ ಶಾರದಾ ನೃಸಿಂಹ ಹರಿಹರಪುರ ವೀರಾಧೀಶ್ವರರಾದ ಪರಮಪೂಜ್ಯ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯದಲ್ಲಿ ಶ್ರೀಗಳ ಆಗಮನ ಪೂರ್ಣ ಕುಂಭ ಸ್ವಾಗತ, ಮಧ್ಯಾಹ್ನ ಚಂಡಿಕಾ ಹವನ ಪೂರ್ಣಾಹುತಿ, ಬ್ರಹ್ಮ ಕುಂಭಾಭಿಷೇಕ, ಚಾಮುಂಡೇಶ್ವರಿ ಅಮ್ಮನವರಿಗೆ ಬಂಗಾರದ ಮುಖವಾಡ ಸಮರ್ಪಣೆ ಹಾಗೂ ಶ್ರೀಗಳ ಪಾದ ಪೂಜೆ ನಡೆದಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
