ಎಲ್.ಐ.ಸಿಯಲ್ಲಿ ದೇಶಕ್ಕೆ ಸಾಧನೆ ಮಾಡಿದ ಅಂಬಳಿಕೆ ಗಿರೀಶ್!
– ಅಂಬಳಿಕೆ ಗಿರೀಶ್ ಸಾಧನೆಗೆ “ಕೋರ್ಟ್ ಆಫ್ ದಿ ಟೇಬಲ್” ಗೌರವ
– 13 ಲಕ್ಷ ಏಜೆಂಟರ ಪೈಕಿ ಅಂಬಳಿಕೆ ಗಿರೀಶ್ ಅನನ್ಯ ಸಾಧನೆ!
NAMMUR EXPRESS NEWS
ತೀರ್ಥಹಳ್ಳಿ: ಜಾಗತಿಕ ಮಟ್ಟದಲ್ಲಿ ವಿವಿಧ ಇನ್ಷೂರೆನ್ಸ್ ಕಂಪನಿಗಳ ಏಜೆಂಟರುಗಳ ಸಾಧನೆ ಪರಿಗಣಿಸಿ ನೀಡಲಾಗುವ ‘ಕೋರ್ಟ್ ಆಫ್ ದಿ ಟೇಬಲ್’ ಈ ಬಾರಿ ತೀರ್ಥಹಳ್ಳಿಯ ಚಿರಪರಿಚಿತ ಜೀವ ವಿಮಾ ಪ್ರತಿನಿಧಿ, ನಗುಮೊಗದ ಸೇವಕ ಅಂಬಳಿಕೆ ಗಿರೀಶ್ ಅವರಿಗೆ ಲಭಿಸಿದೆ. ಇದೊಂದು ಅದ್ಭುತ ಸಾಧನೆಯಾಗಿದ್ದು, ಭಾರತೀಯ ಜೀವವಿಮಾ ನಿಗಮದ ಅಧಿಕಾರಿಗಳು, ಸಿಬ್ಬಂದಿಗಳು, ಅಂಬಳಿಕೆ ಗಿರೀಶ್ ಅವರ ಆತ್ಮೀಯರು ಅವರನ್ನು ಅಭಿನಂದಿಸಿ ಶುಭ ಹಾರೈಸಿದ್ದಾರೆ.
13 ಲಕ್ಷ ಏಜೆಂಟರ ಪೈಕಿ ಅಂಬಳಿಕೆ ಗಿರೀಶ್ ಅನನ್ಯ ಸಾಧನೆ
ದೇಶದ 13 ಲಕ್ಷ ವಿಮಾ ಏಜೆಂಟರ ಪೈಕಿ ಈ ವರ್ಷ 560 ಪ್ರತಿನಿಧಿಗಳಷ್ಟೇ ‘ಕೋರ್ಟ್ ಆಫ್ ದಿ ಟೇಬಲ್’ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ. ಆ ಪೈಕಿ ಕರ್ನಾಟಕದ 8 ಮಂದಿ ಇದ್ದಾರೆ. ಅವರಲ್ಲಿ ಅಂಬಳಿಕೆ ಗಿರೀಶ್ ಒಬ್ಬರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. 22 ಬಾರಿ ‘ಎಮ್ ಡಿ ಆರ್ ಟಿ’ ಸದಸ್ಯರಾಗಿದ್ದ ಅಂಬಳಿಕೆ ಗಿರೀಶ್ ಈ ಬಾರಿ ಇನ್ನೂ ಎತ್ತರದ ಸ್ಥಾನಕ್ಕೇರಿದ್ದಾರೆ. ಕಠಿಣ ಪರಿಶ್ರಮ, ನಿರಂತರ ಪ್ರಯತ್ನ ಹಾಗೂ ಗ್ರಾಹಕ ಸ್ನೇಹಿ ವ್ಯಕ್ತಿತ್ವದಿಂದ ರಾಜ್ಯದ ಯಶಸ್ವೀ ಜೀವವಿಮಾ ಪ್ರತಿನಿಧಿ ಎನಿಸಿರುವ ಅಂಬಳಿಕೆ ಗಿರೀಶ್ ಈವರೆಗೆ ಸತತ 22 ವರ್ಷ ಮಿಲಿಯನ್ ಡಾಲರ್ ರೌಂಡ್ ಟೇಬಲ್ ಕ್ಲಬ್ ಸದಸ್ಯತ್ವ ಪಡೆದು ಸಾಧನೆಗೈದಿದ್ದರು. ಈ ಬಾರಿ ಅದನ್ನು ಮೀರಿ ದಾಖಲೆ ಪ್ರಮಾಣದ ವಿಮಾ ಪಾಲಿಸಿ ಮಾಡಿಸುವ ಮೂಲಕ ‘ಕೋರ್ಟ್ ಆಫ್ ದಿ ಟೇಬಲ್’ ಗೌರವಕ್ಕೆ ಭಾಜನರಾಗಿದ್ದಾರೆ.

ಅಮೇರಿಕಾದಲ್ಲಿ ಪ್ರಶಸ್ತಿ ಪ್ರದಾನ
ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಮೂರು ಜಿಲ್ಲೆಗಳಿಂದ ಈ ಗೌರವಕ್ಕೆ ಪಾತ್ರರಾದ ಏಕೈಕ ಪ್ರತಿನಿಧಿ ಅಂಬಳಿಕೆ ಗಿರೀಶ್. ಅಮೇರಿಕಾದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇವರ ಈ ಸಾಧನೆಗೆ ನಮ್ಮೂರ್ ಎಕ್ಸ್‌ಪ್ರೆಸ್ ಅಭಿನಂದಿಸುತ್ತದೆ.
ಹತ್ತಾರು ಸಂಘ ಸಂಸ್ಥೆಗಳಲ್ಲಿ ಸೇವೆ
ಒಕ್ಕಲಿಗರ ಸಂಘ, ರೋಟರಿ, ಮಲ್ನಾಡ್ ಕ್ಲಬ್, ಬ್ಲಡ್ ಬ್ಯಾಂಕ್, ಸ್ಕೌಟ್ಸ್ ಗೈಡ್ಸ್ ಸೇರಿ ಹತ್ತಾರು ಸಂಘಟನೆಯಲ್ಲಿ ಉನ್ನತ ಹುದ್ದೆ ಅಲಂಕರಿಸಿ ಜನ ಸೇವೆ ಮಾಡಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ ಸಂಘ, ಕನ್ನಡ ಸಾಹಿತ್ಯ ಪರಿಷತ್ ಸೇರಿ ಧಾರ್ಮಿಕ, ಶಿಕ್ಷಣ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದಾರೆ. ಉದ್ಯಮ ಸ್ನೇಹಿ ಹಾಗೂ ಜನಪರ ಕಾಳಜಿಯ ಗಿರೀಶ್ ಅವರಿಗೆ ಈ ಗೌರವ ಸಿಕ್ಕಿರುವುದು ಅವರ ಸ್ನೇಹಿತ ವಲಯಕ್ಕೆ ಸಂತಸ ತಂದಿದೆ.
