ಶಿಕ್ಷಕರ ಕ್ಷೇತ್ರದ ಅಖಾಡಕ್ಕೆ ಅರುಣ್ ಹೊಸಕೊಪ್ಪ ಎಂಟ್ರಿ
– ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಘೋಷಣೆ
– ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರನ್ನು ಆಯ್ಕೆ ಮಾಡಿ: ಡಾ.ಅರುಣ್ ಹೊಸಕೊಪ್ಪ
NAMMUR EXPRESS NEWS
ತೀರ್ಥಹಳ್ಳಿ: ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಗುರುವಾರ ಅಧಿಕೃತವಾಗಿ ಅನೌನ್ಸ್ ಆಗಿದ್ದು, ಜೂನ್ 3 ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಅಭ್ಯರ್ಥಿಗಳು ಸಿದ್ಧತೆ ನಡೆಸಿದ್ದಾರೆ. ತೀರ್ಥಹಳ್ಳಿ ಮೂಲದ ಬರಹಗಾರ, ಉಪನ್ಯಾಸಕ ಡಾ.ಅರುಣ್ ಹೊಸಕೊಪ್ಪ ಈ ಬಾರಿ ಮತ್ತೆ ಶಿಕ್ಷಕರ ಪ್ರತಿನಿಧಿಯಾಗಲು ಸ್ಪರ್ಧೆ ಮಾಡಲಿದ್ದಾರೆ. ಕಳೆದ ಎರಡು ದಶಕಗಳಿಂದ ಶಿಕ್ಷಕರ ಹಾಗೂ ಉಪನ್ಯಾಸಕರ ಪರವಾಗಿ ರಾಜ್ಯ ಮಟ್ಟದಲ್ಲಿ ದನಿ ಎತ್ತುತ್ತಿರುವ ಡಾ.ಅರುಣ್ ಹೊಸಕೊಪ್ಪ ತೀರ್ಥಹಳ್ಳಿಯ ಅನ್ನಪೂರ್ಣ ಗ್ರಾಂಡ್ ಹೋಟೆಲಿನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮತ ಪ್ರಚಾರ ಶುರು ಮಾಡಿದ್ದಾರೆ.
2012 ಮತ್ತು 2018ರಲ್ಲಿ ಸ್ಪರ್ಧೆ, ಮತ ಹಾಕಿದವರಿಗೆ ಧನ್ಯವಾದ
ಪತ್ರಕರ್ತರ ಜತೆ ಮಾತನಾಡಿದ ಅರುಣ್ ಹೊಸಕೊಪ್ಪ ಅವರು, ನಾನು 2012 ಮತ್ತು 2018ರಲ್ಲಿ ಈ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿ ಹೆಚ್ಚು ಮತಗಳನ್ನು ತೆಗೆದುಕೊಂಡರೂ ಕೂಡ ಗೆಲುವು ಸಾಧಿಸಲು ವಿಫಲನಾಗಿದ್ದೆ. ಈಗ ಮತ್ತೆ ಮತ್ತೊಂದು ಬಾರಿ ಪ್ರಯತ್ನ ಮಾಡುತ್ತಿದ್ದೇನೆ. ಆದ್ದರಿಂದ ಎಲ್ಲ ಶಿಕ್ಷಕ ಮಿತ್ರರು ಇದೊಂದು ಸಾರಿ ನನಗೆ ಅವಕಾಶ ಮಾಡಿಕೊಡಬೇಕಾಗಿ ವಿನಂತಿ ಮಾಡಿದರು. ಸುಮಾರು 25 ಸಾವಿರ ಶಿಕ್ಷಕರು ಈ ಬಾರಿ ಶಿಕ್ಷಕರ ಕ್ಷೇತ್ರದಿಂದ ಶಿಕ್ಷಕನಾಗಿ ಕೆಲಸ ಮಾಡಿರುವಂತಹ ನನಗೆ ಒಂದು ಅವಕಾಶ ಕೊಡುತ್ತಾರೆ ಎಂದು ವಿಶ್ವಾಸವಿದೆ ಎಂದರು.
ಹಿಂದೆ ಗೆದ್ದವರು ಶಿಕ್ಷಕರೇ ಅಲ್ಲ…
ಕೊಡಗು, ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಇದರ ವ್ಯಾಪ್ತಿಗೆ ಬರುತ್ತದೆ. ಹಿಂದಿನ ಚುನಾವಣೆಯಲ್ಲಿ ಗೆದ್ದಿರುವಂತಹ ಹಾಲಿ ಸದಸ್ಯರು ಅವರು ಶಿಕ್ಷಕರು ಅಲ್ಲದೆ ಹೋದರೂ ಕೂಡ, ಅವರು ಏನೋ ಒಂದು ಕೆಲಸ ಮಾಡುತ್ತಾರೆ ಎಂಬ ಆಲೋಚನೆಯಿಂದ ಶಿಕ್ಷಕರು ಅವರನ್ನು ಗೆಲ್ಲಿಸಿದ್ದರು, ಆದರೆ ಅವರು ಆರು ವರ್ಷದ ಅವಧಿಯಲ್ಲಿ ಶಿಕ್ಷಕರ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ. ಯಾವುದೇ ರೀತಿಯ ಸ್ಪಂದನೆಯನ್ನು ಶಿಕ್ಷಕರಿಗೆ ಮಾಡದೇ ಇರುವ ಕಾರಣದಿಂದಾಗಿ ಈ ಬಾರಿ ನನಗೆ ಒಂದು ಅವಕಾಶವನ್ನು ಕೊಡುತ್ತಾರೆ ಎಂದರು.
ಶಿಕ್ಷಕರು ಇಲ್ಲಿ ಮತದಾನ ಮಾಡಲು ಶಿಕ್ಷಣ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಅವರು ಹೊಂದಿರಬೇಕು. ಈ ಬಾರಿ ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರನ್ನೇ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ ಸಣ್ಣಪುಟ್ಟ ಸಮಸ್ಯೆಗಳು ಬಹಳ ಇದೆ. ಇದನ್ನೆಲ್ಲ ಬಗೆಹರಿಸುವ ಕಾರಣದಿಂದಾಗಿ ನನ್ನ ಬಲವಾದ ಉತ್ತರ ಶಿಕ್ಷಕರನ್ನು ಆಯ್ಕೆ ಮಾಡಿ ಎಂದು ಹೇಳಿದರು. ಈ ಶಿಕ್ಷಕರ ಕ್ಷೇತ್ರದಲ್ಲಿ ಇದುವರೆಗೆ ಈ ಆರು ಜಿಲ್ಲೆಗಳಲ್ಲಿ ಎಲ್ಲ ಜಿಲ್ಲೆಗಳಿಗೂ ಒಂದೊಂದು ಅವಕಾಶ ಕೊಟ್ಟಿದ್ದು ರಾಜಕೀಯದ ಸೆಂಟರ್ ಶಿವಮೊಗ್ಗ ಜಿಲ್ಲೆಗೆ ಇನ್ನು ಶಿಕ್ಷಕರ ಕ್ಷೇತ್ರದಲ್ಲಿ ಯಾರೂ ಕೂಡ ಎಂಎಲ್ ಸಿ ಆಗಿಲ್ಲ. ಒಂದು ಬಾರಿ ನಮ್ಮ ಜಿಲ್ಲೆಗೂ ಅವಕಾಶ ಕೊಡಿ ಎಂದು ಮನವಿ ಮಾಡಿದರು.
