Categories
ತೀರ್ಥಹಳ್ಳಿ

ಬದುಕಿನ ಪಾಠ ಕಲಿಸಿದ ಬಸವಾನಿ ಎನ್. ಎಸ್. ಎಸ್ ಶಿಬಿರ!

ಬದುಕಿನ ಪಾಠ ಕಲಿಸಿದ ಬಸವಾನಿ ಎನ್. ಎಸ್. ಎಸ್ ಶಿಬಿರ!

– 7 ದಿನ ತುಂಗಾ ಡಿಗ್ರಿ ಕಾಲೇಜಿನ ಎನ್. ಎಸ್. ಎಸ್ ವಿಶೇಷ ಶಿಬಿರ
– ಹಲವು ಕಾರ್ಯಕ್ರಮ, ಶ್ರಮದಾನ, ಸಾಂಸ್ಕೃತಿಕ ಕಾರ್ಯಕ್ರಮ
– ವಿದ್ಯಾರ್ಥಿಗಳ ಸೇವಾ ಮನೋಭಾವಕ್ಕೆ ಗ್ರಾಮಸ್ಥರ ಮೆಚ್ಚುಗೆ

NAMMUR EXPRESS NEWS

ತೀರ್ಥಹಳ್ಳಿ: ತೀರ್ಥಹಳ್ಳಿಯ ಆನಂದಗಿರಿಯಲ್ಲಿರುವ ತುಂಗಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕ 1 ಮತ್ತು 2, ವಾರ್ಷಿಕ ವಿಶೇಷ ಶಿಬಿರ 2023- 24 ಬಸವಾನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜೂನ್ 7 ರಿಂದ 13 ವರೆಗೆ ನಡೆಯಿತು. ಇಡೀ ಶಿಬಿರ ವಿದ್ಯಾರ್ಥಿಗಳು ಮತ್ತು ಗ್ರಾಮದ ಜನರನ್ನು ಸೇವೆಗೆ ಸಮರ್ಪಣೆ ಮಾಡಿತು.
ಬೇರೊಂದು ಊರಿನಲ್ಲಿ ಶಿಬಿರ ನಡೆಸಲು ತಾಲೀಮು ನಡೆಸಿ ಹಲವಾರು ಸಭೆಗಳನ್ನು ಮಾಡಿ ಕಾರಣಾಂತರಗಳಿಂದ ಅಲ್ಲಿ ನಡೆಸಲಾಗದೆ ತರಾತುರಿಯಲ್ಲಿ ಬಸವಾನಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
ಶಿಬಿರ ಮೃಗಶಿರ ಮಳೆ ಪ್ರಾರಂಭವಾಗುವ ದಿನವೇ ಉದ್ಘಾಟನಾ ಸಮಾರಂಭ ನೆರವೇರಿತು. ತುಂತುರು ಮಳೆ, ಹಿಮಗಾಳಿ, ವಿದ್ಯುತ್ ಚೆಲ್ಲಾಟದ ನಡುವೆ ಪ್ರಥಮ ದಿನದ ಕಾರ್ಯಕ್ರಮ ಮೊಬೈಲ್ ಬೆಳಕಿನಲ್ಲಿ ನಡೆಯಿತಂದರೆ ತಪ್ಪಾಗಲಾರದು. ಸಂಪೂರ್ಣ ಏಳು ದಿನ ಮಳೆರಾಯ ಶ್ರಮದಾನಕ್ಕೆ ಅಡ್ಡಿಪಡಿಸುತ್ತಲೇ ಇದ್ದ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸವಾನಿಯ, ಅಂಗನವಾಡಿ, ಆಸ್ಪತ್ರೆ ಸುತ್ತಲಿನ ಗಿಡಗಂಟಿಗಳನ್ನ, ಕಸ ಕಡ್ಡಿಗಳನ್ನ ತೆಗೆದು ಸ್ವಚ್ಛಗೊಳಿಸಿದರು. ಬಸವಾನಿಯ ಶ್ರೀ ಸೋಮೇಶ್ವರ ದೇವಸ್ಥಾನದ ಸುತ್ತಮುತ್ತಲು ಶ್ರಮದಾನ ಮಾಡಿದರು. ಬಸವಾನಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸುತ್ತಮುತ್ತಲು ಶ್ರಮದಾನ ಮಾಡಿ ಶುಭ್ರ ವಾತಾವರಣ ನಿರ್ಮಿಸಿದರು. ದೇಶದ ಗಡಿ ಕಾಯ್ದು ತವರಿಗೆ ಮರಳಿದ ನಿವೃತ್ತ ಯೋಧರು, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕುಟುಂಬದ ಹಿರಿಯರು ಇವರನ್ನೆಲ್ಲ ಕರೆಸಿ ಮುಂಜಾನೆ ರಾಷ್ಟ್ರೀಯ ಸೇವಾ ಯೋಜನೆಯ ಧ್ವಜ ಅನಾವರಣಗೊಳಿಸಿ ಅವರ ಅನುಭವದ ಮಾತುಗಳನ್ನ ಶಿಬಿರಾರ್ಥಿಗಳಿಗೆ ಕೇಳಿಸುವ ವ್ಯವಸ್ಥೆಯನ್ನು ಮಾಡಿದ್ದರು.
ಪ್ರತಿದಿನ ಮಧ್ಯಾಹ್ನ ಒಂದೊಂದು ಉಪಯುಕ್ತ ವಿಚಾರದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಲಾಭದಾಯಕ ಪಶುಸಂಗೋಪನೆ ಹಾಗೂ ರೇಬಿಸ್ ಮತ್ತು ಇತರೆ ಪ್ರಾಣಿಜನ್ಯ ರೋಗಗಳು, ಡಾ.ಅರವಿಂದ್ ಪಶುವೈದ್ಯಾಧಿಕಾರಿಗಳು ಶಿಬಿರಾರ್ಥಿಗಳಿಗೆ ಉಪನ್ಯಾಸ ನೀಡಿದರು. ಯುವ ಸಮುದಾಯ ಮತ್ತು ಜಾನಪದ ಬಗ್ಗೆ ಡಾ ಶ್ರೀಪತಿ ಹಳಗುಂದ ಸಾಮಾಜಿಕ ಜಾಲತಾಣ ದುರ್ಬಳಕೆ ಹಾಗೂ ಸೈಬರ್ ಅಪರಾಧಗಳ ಬಗ್ಗೆ ತೀರ್ಥಹಳ್ಳಿಯ ಪೊಲೀಸ್ ಇನ್ಸ್ಪೆಕ್ಟರ್ ಅಶ್ವತ್ ಗೌಡ ಅವರು ತಿಳುವಳಿಕೆ ನೀಡಿದರು. ಶಿಬಿರಾರ್ಥಿಗಳಿಗೆ ಕಾನೂನು ಅರಿವಿನ ಬಗ್ಗೆ, ಮತ್ತು ರಂಗ ತರಬೇತಿಯ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಗಾರ ನಡೆಯಿತು. ಡಾ. ಬಸವರಾಜಪ್ಪ ಎಂ ಟಿ ಜೀವನ ಕೌಶಲ್ಯದ ಬಗ್ಗೆ ಮೈಂಡ್ ಗೇಮ್ ಆಟವನ್ನ ಆಡಿಸುತ್ತಾ ಆಸಕ್ತಿ ಹುಟ್ಟಿಸಿ ತರಬೇತಿ ನೀಡಿದರು. ವಿದ್ಯಾರ್ಥಿಗಳು ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೇದಿಕೆಯಲ್ಲಿ ನೀಡಿ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು. ಪ್ರತಿದಿನ ಒಂದೊಂದು ರೀತಿಯಲ್ಲಿ ವೇದಿಕೆಯನ್ನು ಅಲಂಕರಿಸುತ್ತಿದ್ದರು.
ಗ್ರಾಮೀಣ ಭಾಗದಲ್ಲಿ ದೊರೆಯುವ ಕೃಷಿ ಚಟುವಟಿಕೆಯ ಪರಿಕರಗಳು, ನೈಸರ್ಗಿಕವಾಗಿ ದೊರೆಯುವ ಹೂವುಗಳು ಎಲೆಗಳು ಹುಲ್ಲುಗಳನ್ನ ಅತ್ಯಂತ ನಾಜೂಕಾಗಿ ಬಳಸಿ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯನ್ನು ಸುಂದರವಾಗಿಸಿ ಇನ್ನೊಂದು ಲೋಕಕ್ಕೆ ಕರೆದೊಯ್ಯುತ್ತಿದ್ದರು. ಎಲ್ಲರೂ ವೇದಿಕೆಯನ್ನು ಹತ್ತಬೇಕೆಂಬ ನಿಯಮದೊಂದಿಗೆ ನಿರೂಪಣೆ, ಸ್ವಾಗತ,ವಂದನಾರ್ಪಣೆ ನೀತಿ ಕಥೆಯ ನಾಟಕ, ನೃತ್ಯ,ಹಾಡು ಹೀಗೆ ತಮ್ಮಲ್ಲಿರುವ ವಿವಿಧ ಬಗೆಯ ಕಲಾಕಾರರನ್ನು ಕಲಾ ಕೌಶಲ್ಯವನ್ನ ಎಗ್ಗಿಲ್ಲದೆ ಪ್ರದರ್ಶನ ಗೊಳಿಸುತ್ತಿದ್ದರು.
ನಾಡಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ರಾಷ್ಟ್ರಕವಿ ಕುವೆಂಪು, ದ ರಾ ಬೇಂದ್ರೆ, ಶಿವರಾಮ ಕಾರಂತ, ವೆಂಕಟೇಶ ಅಯ್ಯಂಗಾರ್, ಗೋಕಾಕ್, ಯು ಆರ್ ಅನಂತಮೂರ್ತಿ ಇವರ ಹೆಸರಿನ ತಂಡಗಳನ್ನ ರಚಿಸಿಕೊಂಡು ಆ ದಿನದಲ್ಲಿ ತಮ್ಮ ತಂಡಕ್ಕೆ ವಹಿಸಿದ ಕರ್ತವ್ಯಗಳನ್ನ ಅಚ್ಚುಕಟ್ಟಾಗಿ ನಿರ್ವಹಿಸಿ ಶಿಬಿರವನ್ನ ಸಾರ್ಥಕ ಗೊಳಿಸಿದರು.
ಸಮಾರೋಪ ಸಮಾರಂಭದ ಹಿಂದಿನ ದಿನದ ಕ್ರೀಡಾಕೂಟ, ಊರಿನ ಶಾಲಾ ಮಕ್ಕಳನ್ನ, ಗ್ರಾಮಸ್ಥರನ್ನು ಒಂದೆಡೆ ಸೇರುವಂತೆ ಮಾಡಿತು. ಗ್ರಾಮಸ್ಥರು ಶಿಬಿರಾರ್ಥಿಗಳಿಗೆ ಮತ್ತು ಶಾಲೆಯ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಿದ್ದರು. ತುಂಗಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್ ಕುಮಾರ ಸ್ವಾಮಿ ಇವರ ಮಾರ್ಗದರ್ಶನದಲ್ಲಿ ಶಿಬಿರ ಅಧಿಕಾರಿಗಳಾದ ಡಾ. ಪ್ರಶಾಂತ್, ಡಾ. ಸೃಜನ್ ಜಿ ಬಿ ಹಾಗೂ ಸಹ ಶಿಬಿರಾಧಿಕಾರಿಗಳಾದ ಡಾ. ನರೇಂದ್ರ ಬಿ ಎಸ್, ಕು. ನಂದಿತಾ, ಕು. ಸುನೈನ ಕೆ ಬಹಳ ಶಿಸ್ತುಬದ್ಧವಾಗಿ ಶಿಬಿರ ನಿರ್ವಹಿಸಿದರು. ಬಸವಾನಿ ಜನತೆಯ ಮನ ಗೆದ್ದ ತುಂಗಾ ಮಹಾವಿದ್ಯಾಲಯದ ಶಿಬಿರಾರ್ಥಿಗಳು ಜೀವನ ಪಾಠ ಕಲಿತರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.