ತೀರ್ಥಹಳ್ಳಿಯಲ್ಲಿ ಭಾರಿ ಮಳೆಗೆ ಅನಾಹುತ!
– ಮುಳುವಾಡಿಯಲ್ಲಿ ರಸ್ತೆ ಸಂಪರ್ಕ ಬಂದ್: ಗ್ರಾಮಸ್ಥರ ಪರದಾಟ
– ನಾಬಳ: ಜಾನುವಾರು ಕೊಟ್ಟಿಗೆ ಕುಸಿದು ಬಿದ್ದು ಮೃತಪಟ್ಟ ಕರು!
– ಮಿಲ್ಕೇರಿಯಲ್ಲಿ ರಸ್ತೆಗೆ ಬಿದ್ದ ವಿದ್ಯುತ್ ಕಂಬ: ಸಂಚಾರ ಅಸ್ತವ್ಯಸ್ತ
– ಹಲವೆಡೆ ತೋಟಗಳು ನೀರಲ್ಲಿ ಮುಳುಗಡೆ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಕಳೆದ ಎರಡು ದಿನಗಳಿಂದ ಬಾರಿ ಮಳೆಯಾಗುತ್ತಿದ್ದು, ಎಲ್ಲೆಡೆ ಅನಾಹುತಗಳು ಸೃಷ್ಟಿಯಾಗಿದೆ.
ಕಳೆದೆರಡು ದಿನಗಳಿಂದ ಶಾಲಾ ಕಾಲೇಜಿಗೆ ಕೂಡ ರಜೆ ಘೋಷಣೆ ಮಾಡಲಾಗಿದೆ. ಇನ್ನು ಬಾರಿ ಮಳೆಯಿಂದ ತೀರ್ಥಹಳ್ಳಿಯಲ್ಲಿ ಅನಾಹುತಗಳು ಸೃಷ್ಟಿಯಾಗಿದ್ದು, ನಾಲೂರು ಕೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳುವಾಡಿಯಲ್ಲಿ ಧರೆ ಕುಸಿದು, ಮರ ರಸ್ತೆಗೆ ಬಿದ್ದು, ರಸ್ತೆ ಸಂಪರ್ಕ ಬಂದ್ ಆಗಿದ್ದು ಗ್ರಾಮಸ್ಥರಿಗೆ ಸಂಚಾರಕ್ಕೆ ಅಡ್ಡಿಯಾಗಿದೆ. ಇಷ್ಟೊತ್ತಾದರೂ ಕೂಡ ಯಾವುದೇ ಅಧಿಕಾರಿಗಳು ಬರಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಟ್ಟಿಗೆ ಗೋಡೆ ಕುಸಿದು ಬಿದ್ದು ಜಾನುವಾರು ಸಾವು
ಹೊನ್ನೇತಾಳು ಗ್ರಾಮ ಪಂಚಾಯತಿಯ ನಂಟೂರು ಗ್ರಾಮದ ನಾಬಳದಲ್ಲಿ ಅತಿಯಾದ ಮಳೆಗೆ ಜಾನುವಾರು ಕೊಟ್ಟಿಗೆ ಗೋಡೆ ಕುಸಿದು ಬಿದ್ದು ಒಂದು ಕರು ಮೃತಪಟ್ಟು, ಮೂರು ಜಾನುವಾರುಗಳಿಗೆ ಗಂಭೀರ ಗಾಯವಾಗಿದೆ. ನಾಬಳ ವೀಣಮ್ಮ ಎಂಬುವವರಿಗೆ ಸೇರಿದ ಕೊಟ್ಟಿಗೆ ಅತಿಯಾದ ಮಳೆಗೆ ಕುಸಿದು ಬಿದ್ದಿದ್ದು ತಕ್ಷಣ ಮನೆಯವರು ಅಕ್ಕಪಕ್ಕದವರಿಗೆ ವಿಷಯ ತಿಳಿಸಿ ಮಣ್ಣಿನ ಗೋಡೆಯ ಅಡಿಯಲ್ಲಿ ಸಿಲುಕಿದ್ದ ಜಾನುವಾರುಗಳನ್ನು ರಕ್ಷಿಸಿದ್ದು ದುರಾದೃಷ್ಟವಶಾತ್ ಕರು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಪಟ್ಟಣದಲ್ಲೇ ಬಿದ್ದ ವಿದ್ಯುತ್ ಕಂಬ
ತೀರ್ಥಹಳ್ಳಿ ಪಟ್ಟಣದ ಮಿಲ್ಕೇರಿ ರಸ್ತೆಯಲ್ಲಿ ಮರ ಹಾಗೂ ವಿದ್ಯುತ್ ಕಂಬ ಒಂದು ರಸ್ತೆಗೆ ಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಮಳೆಯಾಗಿರುವುದರಿಂದ ವಾಹನ ಸಂಚಾರ ಕಡಿಮೆ ಇದ್ದಾ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
ಹಲವೆಡೆ ತೋಟಗಳು ನೀರಲ್ಲಿ ಮುಳುಗಡೆ
ತೀರ್ಥಹಳ್ಳಿ ತಾಲೂಕಿನ ತುಂಗಾ ಮತ್ತು ಮಾಲತಿ ನದಿ ಹರಿಯುವ ಕಡೆಗಳಲ್ಲಿ ನೀರು ತೋಟ, ಗದ್ದೆಗೆ ನುಗ್ಗಿ ಭಾರೀ ಹಾನಿ ಸಂಭವಿಸಿದೆ.
