ಖಾಲಿ ಖಾಲಿ ತೀರ್ಥಹಳ್ಳಿ..!
– ಬಿಕೋ ಎನ್ನುತ್ತಿದೆ ತೀರ್ಥಹಳ್ಳಿ!
– ಜಾತ್ರೆ, ರಾಮನ ಕಾರ್ಯಕ್ರಮ ಬಳಿಕ ಫುಲ್ ಸೈಲೆಂಟ್!
NAMMUR EXPRESS NEWS
ತೀರ್ಥಹಳ್ಳಿ: ನವಂಬರ್ ತಿಂಗಳ ಕೊನೆಯಿಂದ ಅಡಿಕೆ ಕೊಯ್ಲು ಮತ್ತು ಗದ್ದೆ ಕೊಯ್ಲುಗಳ ನಡುವಲ್ಲಿ ಮತ್ತು ಮುಕ್ತಾಯ ಹಂತದಲ್ಲಿದ್ದಾಗಲೇ ಈ ಕಡೆ ಕಾರ್ತಿಕ ದೀಪೋತ್ಸವದಿಂದ ಶುರುವಾಗಿದ್ದ ರಂಗು ಎಳ್ಳಮವಾಸ್ಯೆಯ ಭರ್ಜರಿ ತಯಾರಿಯಾಗಿ ಅಲ್ಲಿಂದ ಸಂಕ್ರಮಣಕ್ಕೆ ಮುಂದುವರೆದು ಅದಾದ ನಂತರ ರಾಮಮಂದಿರದ ಉದ್ಘಾಟನೆಯವರೆಗೂ ಹರಡಿದ್ದು ಇಡೀ ಪಟ್ಟಣಕ್ಕೆ ಪಟ್ಟಣವೇ ಜನ ಜಾತ್ರೆಯಿಂದ ತುಂಬಿತ್ತು. ಎಲ್ಲಿ ನೋಡಿದರಲ್ಲಿ ಅಲಂಕಾರ, ಪೂಜೆ, ಅಭಿಷೇಕ, ಲೈಟುಗಳು, ಹಾದಿಯ ತುಂಬೆಲ್ಲ ವಿದ್ಯುತ್ ಅಲಂಕಾರ, ಪಟ್ಟಣದಲ್ಲಿ ದಟ್ಟವಾಗಿದ್ದ ಜನಸಂಚಾರ.
ಈ ಎಲ್ಲವೂ ಈಗ ಮುಗಿದು ತೀರ್ಥಹಳ್ಳಿ ನೀರಸವಾಗಿದೆ. ಶನಿವಾರ, ಭಾನುವಾರ ಅತೀ ಕಡಿಮೆ ಜನ ಪಟ್ಟಣದಲ್ಲಿ ಕಂಡು ಬಂತು. ಮಾಮೂಲಿ ಜೀವನಕ್ಕೆ ತೀರ್ಥಹಳ್ಳಿ ವಾಪಸ್ಸಾಗಿದೆ. ಬೀದಿಗಳು ಖಾಲಿಯಾಗಿವೆ. ಅಲಂಕಾರಗಳನ್ನು ತೆಗೆಯಲಾಗಿದೆ. ದೇವಸ್ಥಾನಗಳಲ್ಲಿ ರಶ್ ಇಲ್ಲ. ವ್ಯಾಪಾರ ವಹಿವಾಟುಗಳು ಮಾಮೂಲಿನಂತೆ ನಡೆಯುತ್ತಿವೆ. ಇನ್ನು ಯಕ್ಷಗಾನ, ಗೃಹಪ್ರವೇಶ, ಮದುವೆ ಮುಂಜಿ ಸಮಾರಂಭಗಳು ಆರಂಭವಾಗಲಿವೆ. ಅದಕ್ಕಾಗಿ ಜನ ತಯಾರಿ ನಡೆಸುತ್ತಿದ್ದಾರೆ. ಬೇಸಿಗೆಯ ಕೊನೆಯವರೆಗು ಇನ್ನು ಈ ಸಮಾರಂಭಗಳು ಮುಂದುವರೆಯುತ್ತವೆ. ಸಾಮಾಜಿಕ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಧ್ಯಕ್ಕೆ ಬಿಡುವು ನೀಡಲಾಗಿದೆ.