ಪರಶುರಾಮ ಕ್ಷೇತ್ರದಲ್ಲಿ ಜಾತ್ರೆ ಹಬ್ಬ..!
– ಎಳ್ಳಮವಾಸ್ಯೆ ಜಾತ್ರೆಗಿದೆ ಪೌರಾಣಿಕ ಹಿನ್ನೆಲೆ
– 3 ದಿನ ನಡೆಯುವ ಜಾತ್ರೆಯಲ್ಲಿ ಲಕ್ಷ ಜನ ಭೇಟಿ?
– ಎಲ್ಲಾ ಭಕ್ತರಿಗೂ ಅನ್ನ ದಾನ ಮಾಡುವ ಸ್ವಯಂ ಸೇವಕರು!
NAMMUR EXPRESS NEWS
ತೀರ್ಥಹಳ್ಳಿ ಜಾತ್ರಾ ವಿಶೇಷ: ಮಲೆನಾಡಿನ ಮಡಿಲು, ತುಂಗಾ ದಡದಲ್ಲಿರುವ ತೀರ್ಥಹಳ್ಳಿ ಪೌರಾಣಿಕ ಮಹತ್ವ ಇರುವ ತೀರ್ಥಹಳ್ಳಿಯಲ್ಲಿ ಎಳ್ಳಮಾವಾಸ್ಯೆ ಜಾತ್ರೆ ರಂಗು ಎಲ್ಲೆಡೆ ಮನೆ ಮಾಡಿದೆ. ನೂರಾರು ಅಂಗಡಿಗಳು ಬಂದಿದ್ದು, ಮುಂಜಾನೆಯೇ ಜನ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ತೀರ್ಥಹಳ್ಳಿಯಲ್ಲಿ ನಡೆಯುವ ವೈಭವದ ದಸರಾ ಮತ್ತು ಎಳ್ಳಮಾವಾಸ್ಯೆ ಜಾತ್ರೆ ವಿಶೇಷ ಆಚರಣೆಯಾಗಿದೆ. ಪ್ರತಿವರ್ಷ ಡಿಸೆಂಬರ್ ತಿಂಗಳ ಕೊನೆ ಅಥವಾ ಜನವರಿ ಮೊದಲ ಎರಡು ವಾರದಲ್ಲಿ ನಡೆಯುವ ಶ್ರೀ ರಾಮೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುತ್ತಾರೆ.
ಒಟ್ಟು ಐದು ದಿನ ನಡೆಯುವ ಜಾತ್ರೆ ಸಾರ್ವಜನಿಕ ತೀರ್ಥಸ್ನಾನ, ರಥೋತ್ಸವ ಮತ್ತು ತೆಪ್ಪೋತ್ಸವಗಳೆಂಬ ಮೂರು ಹಂತಗಳಲ್ಲಿ ನಡೆಯುತ್ತದೆ. ಅಮವಾಸ್ಯೆಗೆ ಎರಡು ದಿನ ಮೊದಲು ಆರಂಭವಾಗುವ ಜಾತ್ರೆ ಐದನೇ ದಿನದ ತೆಪ್ಪೋತ್ಸವ, ಓಕುಳಿಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಅಲ್ಲದೇ ಮಕರ ಸಂಕ್ರಾತಿಯೆಂದು ಚಿಕ್ಕರಥ ಎಳೆಯುವ ಸಂಪ್ರದಾಯವಿದೆ. ರಥ ಬೀದಿಯಲ್ಲಿ ಇದು ಮೂರು ದಿನದ ಜಾತ್ರೆ ಎಂದು ಕರೆಸಿಕೊಂಡರೂ ಸಂಕ್ರಾತಿಯವರೆಗೂ ಜಾತ್ರೆಯ ಗೌಜು ಇರಲಿದೆ. ಮಲೆನಾಡು ಭಾಗದ ದೊಡ್ಡ ಜಾತ್ರೆಗಳಲ್ಲಿ ಒಂದಾದ ಈ ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಜನ ಆಗಮಿಸಿ ಪುಣ್ಯ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ.
ಪೌರಾಣಿಕ ಕ್ಷೇತ್ರದ ಇತಿಹಾಸ
ತುಂಗಾ ನದಿ ತೀರದ ಪಕ್ಕದ ಎತ್ತರದ ಪ್ರದೇಶದಲ್ಲಿ ಶ್ರೀ ರಾಮೇಶ್ವರ ದೇವಾಲಯಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಈ ದೇವಾಲಯದಲ್ಲಿ ಋಷಿ ಪರಶುರಾಮರು ಸ್ಥಾಪಿಸಿದ ಶಿವಲಿಂಗವಿದೆ. ಗರ್ಭಗುಡಿಯ ಹೊರಗೆ ದುರ್ಗಾ ಮತ್ತು ಗಣಪತಿ ವಿಗ್ರಹಗಳಿದೆ. ಋಷಿ ಪರಶುರಾಮರು ತಮ್ಮ ಆಯುಧ ಪರಶುವನ್ನು ತೊಳೆದ ಪವಿತ್ರ ಸ್ಥಳ ರಾಮತೀರ್ಥ ದೇವಾಲಯದ ಪಕ್ಕದಲ್ಲಿದೆ. ರಾಮತೀರ್ಥದ ಸುತ್ತಲೂ ಚಕ್ರತೀರ್ಥ, ಶಂಕತೀರ್ಥ, ಗದಾತೀರ್ಥ ಮತ್ತು ಪದ್ಮತೀರ್ಥ ಎಂಬ ಸ್ಥಳಗಳಿವೆ. ರಾಮತೀರ್ಥದ ಸಮೀಪದಲ್ಲೇ ಕಲ್ಲಿನ ಮಂಟಪವಿದ್ದು ಇದನ್ನು “ರಾಮ ಮಂಟಪ ಎಂದು ಕರೆಯುತ್ತಾರೆ. ಈ ಮಂಟಪದ ಮುಂಭಾಗದಲ್ಲಿ ಕಲ್ಲಿನ ತಳಪಾಯವಿದೆ ಪಕ್ಕದ ಜೋಗಿಗುಡ್ಡದಲ್ಲಿ ಒಂದು ಗುಹೆ ಇದ್ದು ಇಲ್ಲಿ ಮುನಿಗಳು ಜೋಗಿಗಳು ಕುಳಿತು ಧ್ಯಾನ ಮಾಡಿದ ಕುರುಹುಗಳಿವೆ.
ತೀರ್ಥ ಸ್ನಾನ ಎಂದರೆ ಏನು?
ಪರಶುರಾಮ ತಂದೆಯ ಆದೇಶದಂತೆ ತಾಯಿ ರೇಣುಕಾದೇವಿಯ ಶಿರಚ್ಛೇದನ ಮಾಡುತ್ತಾನೆ. ಆನಂತರ ಮಾತೃಹತ್ಯಾದೋಷದಿಂದ ತನ್ನ ಮುಕ್ತಿ ಹೇಗೆಂದು ತಂದೆಯನ್ನೇ ಕೇಳುತ್ತಾನೆ. “ನೀನು ಕೊಡಲಿಯನ್ನು ಎಲ್ಲಾ ನದಿಗಳಲ್ಲಿಯೂ ಅದ್ದಿ ತೊಳೆಯತ್ತಾ ಹೋಗು. ನಿನ್ನ ಪರಶುವಿನಲ್ಲಿ ಅಂಟಿದ ರಕ್ತದ ಕಲೆ ಪೂರ್ತಿ ತೊಳೆಯುತ್ತದೋ ಅಲ್ಲಿಗೆ ದೋಷ ಕಳೆದಂತೆ. ಆ ನೀರು ಪವಿತ್ರ ತೀರ್ಥವಾಗುತ್ತದೆ’ ಎಂದು ಜಮದಗ್ನಿ ಹೇಳುತ್ತಾನೆ. ತಂದೆಯ ಮಾತಿನಂತೆ ಪರಶುರಾಮ ಸಂಚಾರ ಹೊರಟು ಎಲ್ಲಾ ನದಿ, ತೀರ್ಥಗಳಲ್ಲೂ ತನ್ನ ಪರಶುವನ್ನು ತೊಳೆದರೂ ಅದರಲ್ಲಿ ಅಡಗಿದ್ದ ಎಳ್ಳು ಕಾಳಿನಷ್ಟು ರಕ್ತದ ಕಲೆ ಹಾಗೆಯೇ ಉಳಿಯಿತಂತೆ.
ಕೊನೆಗೆ ತುಂಗೆಯ ಈ ಪ್ರದೇಶದಲ್ಲಿ ಕೊಡಲಿಯನ್ನು ತೊಳೆದಾಗ ಅದರಲ್ಲಿದ್ದ ಎಳ್ಳಿನ ಕಾಳಿನಷ್ಟು ಗಾತ್ರದ ಕಲೆ ಮಾಯವಾಯಿತಂತೆ. ಅದು ಮಾರ್ಗಶಿರ ಬಹುಳ ಅಮಾವಾಸ್ಯೆ. ಪರಶುರಾಮನ ಮಾತೃಹತ್ಯಾ ದೋಷವನ್ನು ಪರಿಹಾರ ಮಾಡಿದ ಈ ಮಡುವಿನಲ್ಲಿ ಸರ್ವಶಕ್ತಿಯೂ ಪ್ರವಹಿಸುತ್ತದೆ. ಜನರ ಪಾಪವನ್ನೆಲ್ಲಾ ತೊಳೆದು ಪುನೀತರನ್ನಾಗಿಸುತ್ತದೆ ಎಂಬ ಪ್ರತೀತಿ ಬೆಳೆದಿದೆ. ಈ ಕಾರಣಕ್ಕಾಗಿ ಲಕ್ಷಾಂತರ ಜನರು ರಾಮಕೊಂಡದಲ್ಲಿ ಮುಳುಗಿ ತೀರ್ಥಸ್ನಾನ ಮಾಡಿ ಪಾವನರಾಗುತ್ತಾರೆ.
ಸಾವಿರಾರು ಜನರಿಗೆ ಅನ್ನದಾನ
ಶ್ರೀ ರಾಮೇಶ್ವರ ಅನ್ನದಾನ ಮಿತ್ರ ವೃಂದದ ಸ್ವಯಂ ಸೇವಕರು ಕಳೆದ ಒಂದು ತಿಂಗಳಿಂದ ಅನ್ನದಾನ ತಯಾರಿ ಮಾಡುತ್ತಿದ್ದಾರೆ. ಲಕ್ಷ ಜನರಿಗೆ ಊಟದ ವ್ಯವಸ್ಥೆ ಆಗಲಿದೆ.
