ತೀರ್ಥಹಳ್ಳಿ ನೂತನ ಲೂರ್ದು ಮಾತೆಯ ಚರ್ಚ್ ಶಿಲಾನ್ಯಾಸ!
– 125 ವರ್ಷಗಳ ಚರ್ಚ್ ಪುನರ್ನಿರ್ಮಾಣಕ್ಕೆ ಶಂಕು ಸ್ಥಾಪನೆ
– ಎಲ್ಲರ ಸಹಕಾರದೊಂದಿಗೆ ಹೊಸ ಚರ್ಚ್ ನಿರ್ಮಾಣಕ್ಕೆ ಸಿದ್ಧತೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಹೃದಯ ಭಾಗದಲ್ಲಿರುವ 125 ವರ್ಷಗಳ ಇತಿಹಾಸ ಹೊಂದಿರುವ ಲೂರ್ದುಮಾತೆ ದೇವಾಲಯದ ಪುನರ್ನಿರ್ಮಾಣಕ್ಕೆ ಭಾನುವಾರದಂದು ಶಿಲಾನ್ಯಾಸ, ಆಶೀರ್ವಚನ ಕಾರ್ಯಕ್ರಮ ಸಾಂಗ್ಯವಾಗಿ ನೇರವೇರಿತು.
ತೀರ್ಥಹಳ್ಳಿ ಪಟ್ಟಣದ ಹೆಗ್ಗುರುತುಗಳಲ್ಲಿ ಒಂದಾಗಿದ್ದ ಸುಮಾರು 43 ವರ್ಷಗಳಷ್ಟು ಹಳೆಯದಾದ ಚರ್ಚ್ ಕಟ್ಟಡ ಮಲೆನಾಡಿನ ಮಳೆಗೆ ಶಿಥಿಲಾವಸ್ಥೆ ತಲುಪಿದ್ದು, ಹೊಸ ಚರ್ಚ್ ನಿರ್ಮಾಣ, ತೀರ್ಥಹಳ್ಳಿಯ ಭಕ್ತಾದಿಗಳ ಬಹುದಿನಗಳ ಅಗ್ರಹಪೂರ್ವಕ ಬೇಡಿಕೆಯಾಗಿತ್ತು. ಶಿವಮೊಗ್ಗ ಧರ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸದರಿ ಚರ್ಚ್ ನ ನವೀಕರಣಕ್ಕೆ ಧರ್ಮಕ್ಷೇತ್ರದ ಬಿಷಪ್ಪ್ ಅತೀ ವಂದನೀಯ ಫ್ರಾನ್ಸಿಸ್ ಸೆರಾವೋರವರು ಹಸಿರು ನಿಶಾನೆ ತೋರಿದ್ದು, ಈಗಾಗಲೇ ಹೊಸ ಚರ್ಚ್ ನ ಸುಂದರ ಹೊರನೋಟದ ಚಿತ್ರಣವನ್ನು ಬಿಡುಗಡೆಗೊಳಿಸಲಾಗಿರುತ್ತದೆ.
ಧರ್ಮಕೇಂದ್ರದ ಗುರುಗಳಾಗಿರುವ ವಂ. ವೀರೇಶ್ ವಿಕ್ಟರ್ ಮೋರಾಸ್ ಅವರ ನೇತೃತ್ವದಲ್ಲಿ ಹಲವು ಅಡೆತಡೆಗಳ ನಡುವೆಯೂ ಚರ್ಚ್ ನಿರ್ಮಾಣ ಸಮಿತಿಯು ಪುನರ್ ನಿರ್ಮಾಣದ ಕಾರ್ಯಕ್ಕೆ ಭರದಿಂದ ಸಿದ್ಧತೆ ನಡೆಸಿದೆ.
ನವ ದಿನಗಳ ಮರಿಯ ಜಯಂತಿಯ ಸಿದ್ಧತೆಯ ಕೊನೆಯ ದಿನವಾದ ಭಾನುವಾರದಂದು ತೀರ್ಥಹಳ್ಳಿಗೆ ಆಗಮಿಸಿ ಪೂಜಾವಿಧಿ ನಡೆಸಿಕೊಟ್ಟ ಬಿಷಪ್ಪ್ ಅತೀ ವಂ|| ಫ್ರಾನ್ಸಿಸ್ ಸೆರಾವೋರವರು ನಂತರ ಅಡಿಗಲ್ಲಿನಲ್ಲಿ ಧಾರ್ಮಿಕ ವಸ್ತುಗಳನ್ನು ಇರಿಸಿ ವಿಶೇಷ ಪ್ರಾರ್ಥನಾ ವಿಧಿಗಳೊಂದಿಗೆ ಪವಿತ್ರಿಕರಣದ ಸಾಂಗ್ಯವನ್ನು ನೆರೆವೇರಿಸಿದರು. ಚರ್ಚ್ ಪದಾಧಿಕಾರಿಗಳು ಹಾಗೂ ಆಹ್ವಾನಿತ ಗಣ್ಯರು ಅಡಿಗಲ್ಲಿಗೆ ಸಾಂಕೇತಿಕವಾಗಿ ಗಾರೆ ಲೇಪಿಸುವ ಮೂಲಕ ಶಿಲಾನ್ಯಾಸದಲ್ಲಿ ಕೈಜೋಡಿಸಿದರು.
ನೆರೆದಿದ್ದ ಎಲ್ಲಾರಿಗೂ ಆಶೀರ್ವಚನಗಳನ್ನು ನೀಡಿದ ಬಿಷಪ್ಪ್ ಅತೀ ವಂ|| ಫ್ರಾನ್ಸಿಸ್ ಸೆರಾವೋರವರು ನೂತನ ದೇವಾಲಯವು ಸರ್ವಧರ್ಮಗಳ ಸಮನ್ವಯದ ಸಂಕೇತವಾಗಲೆಂದು ಹಾರೈಸಿದರು.
ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ರವರು ಮಾತನಾಡಿ ಎಲ್ಲಾ ದೇವಾಲಯಗಳ ಮೂಲ ಉದ್ದೇಶ ತಾಳ್ಮೆ, ಶಾಂತಿಯಿಂದ ತುಂಬಿದ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದಾಗಿದೆ. ತೀರ್ಥಹಳ್ಳಿ ಚರ್ಚ್ಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ನನ್ನಿಂದಾದ ಎಲ್ಲಾ ರೀತಿಯ ಸಹಕಾರವನ್ನು ನೀಡಿದ್ದೇನೆ, ಮುಂದೆಯು ಕೂಡ ನಮ್ಮ ಸಹಕಾರ ಹೀಗೆ ಇರಲಿದೆ ಎಂದರು.
ಮತ್ತೋರ್ವ ಅತಿಥಿಗಳಾದ ಡಾ.ಮಂಜುನಾಥ್ ಗೌಡ ಮಾತನಾಡಿ, ಎಲ್ಲಾ ಧರ್ಮದವರು ಸೇರಿ ಈ ಅಡಿಗಲ್ಲನ್ನು ಹಾಕಿದ್ದೇವೆ. ಇದು ಎಲ್ಲರನ್ನು ಒಂದಾಗಿಸುವ ಭದ್ರ ಬುನಾದಿಯಾಗಲಿ ಎಂದು ಹಾರೈಸಿ, ಐದು ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಮಂಜೂರು ಮಾಡಿಸುವ ಭರವಸೆ ನೀಡಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ ರವರು ಮಾತನಾಡಿ ಚರ್ಚ್ ನಿರ್ಮಾಣ ಯಾವುದೇ ಅಡೆತಡೆಯಿಲ್ಲದೆ ಶೀಘ್ರವೇ ಆಗಲಿ ಎಂದು ಹಾರೈಸಿದರು.
ಗುರುಗಳಾದ ವಂ|| ವೀರೇಶ್ ರವರು ಈ ಸಮಯದಲ್ಲಿ ಪ್ರವಾಸದಲ್ಲಿರುವ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರರವರು ತೀರ್ಥಹಳ್ಳಿಯ ಚರ್ಚ್ನ ಬಗ್ಗೆ ಹೊಂದಿರುವ ಅತೀವ ಕಾಳಜಿ ಹಾಗೂ ಅವರು ಚರ್ಚ್ ನಿರ್ಮಾಣಕ್ಕೆ ನೀಡುತ್ತಿರುವ ಸಹಕಾರವನ್ನು ನೆನಪಿಸಿಕೊಂಡು ಅವರಿಗೂ ಕ್ರೈಸ್ತ ಜನತೆಯ ಪರವಾಗಿ ವಿಶೇಷ ವಂದನೆಗಳನ್ನು ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಗೀತಾ ರಮೇಶ್,ಶಬನಮ್, ಸುಶೀಲಾ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ರತ್ನಾಕರ್ ಶೆಟ್ಟಿ, ಅಮರ್ ನಾಥ್ ಶೆಟ್ಟಿ, ಒಕ್ಕಲಿಗರ ಸಂಘದ ಅಧ್ಯಕ್ಷರಾದ ಕೂಳೂರು ಕೃಷ್ಣಮೂರ್ತಿ, ಒಕ್ಕಲಿಗ ಮುಖಂಡರಾದ ಶಶಿಧರ್ ಈಚಲ್ ಬೈಲ್, ಅಮ್ರಪಾಲಿ ಸುರೇಶ್, ನಾಗರಾಜ್ ಪೂಜಾರಿ ಹಾಗೂ ಇತರರನ್ನು ಗೌರವಿಸಲಾಯಿತು.
ಮೈಸೂರು ಧರ್ಮಕ್ಷೇತ್ರಕ್ಕೆ ವರ್ಗಾವಣೆ ಹೊಂದಿರುವ ಬಿಷಪ್ಪ್ ಅತೀ ವಂ|| ಫ್ರಾನ್ಸಿಸ್ ಸೆರಾವೋರವರನ್ನು ತೀರ್ಥಹಳ್ಳಿಯ ಕ್ರೈಸ್ತ ಜನತೆಯ ಪರವಾಗಿ ಸನ್ಮಾನಿಸಲಾಯಿತು. ಚರ್ಚ್ ಪಾಲನಾ ಪರಿಷತ್ ಕಾರ್ಯದರ್ಶಿ ಓವಿನ್ ಡಿʼಸೋಜರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
