ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬ: ನಿಯಮಗಳೇನು?
– ಎಲ್ಲಾ ಗಣಪತಿ ಪೆಂಡಾಲ್ ಬಳಿ ಸಿಸಿ ಕ್ಯಾಮರಾ ಅಳವಡಿಕೆ ಬಗ್ಗೆ ಚರ್ಚೆ
– ಶಾಂತಿಯಿಂದ ಹಬ್ಬ ಆಚರಿಸೋಣ: ದಂಡಾಧಿಕಾರಿ ರಂಜಿತ್
– ಶುರುವಾಗಿದೆ ಗಣೇಶ ಅನುಮತಿಗೆ ಏಕಗವಾಕ್ಷಿ ಕೇಂದ್ರ
NAMMUR EXPRESS NEWS
ತೀರ್ಥಹಳ್ಳಿ : ಎರಡು ಹಬ್ಬಗಳು ನಿನ್ನೆ ಮೊನ್ನೆ ಶುರುವಾಗಿದ್ದಲ್ಲ, ಹಿಂದಿನಿಂದಲೂ ಹಾಗೂ ಮುಂದೆಯೂ ಆಚರಿಸಬೇಕಾದ ಹಬ್ಬ, ಈ ಸಭೆ ಅಧಿಕಾರಿಗಳಿಂದ ನಿಮಗೆ ನಿರ್ಬಂಧ ಹೇರಲು ಮಾಡುತ್ತಿಲ್ಲ. ಎರಡು ಹಬ್ಬಗಳನ್ನು ಜೊತೆ ಜೊತೆಗೆ ಆಚರಿಸಬೇಕು ಎಂಬ ಕಾರಣದಿಂದ ಈ ಸಭೆ ಮಾಡುತ್ತಿದ್ದೇವೆ ಎಂದು ತಾಲೂಕು ದಂಡಾಧಿಕಾರಿ ರಂಜಿತ್ ಎಸ್ ತಿಳಿಸಿದ್ದಾರೆ.
ತೀರ್ಥಹಳ್ಳಿ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಸೌಹಾರ್ದ ಸಭೆ ನಡೆಸಿ ಮಾತನಾಡಿದರು. ಎಲ್ಲಾ ಇಲಾಖೆ ಅಧಿಕಾರಿಗಳನ್ನು ತಾಲೂಕು ಕಛೇರಿಯಲ್ಲಿ ಹಬ್ಬದ ಅಂಗವಾಗಿ ಒಂದೇ ಕಡೆ ಸೇರಿಸುವ ಸಲುವಾಗಿ ಏಕಗವಾಕ್ಷಿ ಕೇಂದ್ರ ತೆರೆಯಲಾಗಿದೆ. ಕಳೆದ ಬಾರಿ ನಿಮಗೆ ಏನೇ ಸಮಸ್ಯೆ ಆಗಿದ್ದರು ಅದರ ಬಗ್ಗೆ ಮಾತನಾಡಬಹುದು, ಧಾರ್ಮಿಕ ಹಬ್ಬ ಆಗಿರುವುದರಿಂದ ನಮ್ಮ ಈ ತೀರ್ಥಹಳ್ಳಿಯಲ್ಲಿ ಯಾವುದೇ ಸಂಘರ್ಷ ಹಾಗೂ ಕೋಮುಗಲಭೆ ಆಗುವ ಕೆಲಸ ನಡೆಯಬಾರದು ಎಂದು ಈ ಶಾಂತಿ ಸೌಹಾರ್ದ ಸಭೆ ನಡೆಸುತ್ತಿದ್ದೇವೆ ಎಂದರು.
ಡಿ ವೈ ಎಸ್ ಪಿ ಅರವಿಂದ್ ಕಲಗುಜ್ಜಿ ಹೇಳಿದ್ದೇನು?
ಡಿ ವೈ ಎಸ್ ಪಿ ಅರವಿಂದ್ ಕಲಗುಜ್ಜಿ ಮಾತನಾಡಿ ಗಣಪತಿ ಹಾಗೂ ಈದ್ ಮಿಲಾದ್ ಹಬ್ಬ ಒಟ್ಟೊಟ್ಟಿಗೆ ಬರುವುದರಿಂದ ಎಲ್ಲರೂ ಸೇರಿ ಹಬ್ಬ ಮಾಡಬೇಕು. ನೀವು ಶಾಂತಿ ಸುವ್ಯವಸ್ಥೆಯಿಂದ ಹಬ್ಬ ಮಾಡಿದರೆ ನಾವು ನಿಮ್ಮ ಜೊತೆಗೆ ಹಬ್ಬ ಮಾಡುತ್ತೇವೆ. ಶಾಂತಿ ಕದಡಿದರೆ ನಾವು ಕೆಲಸದ ನಿಮಿತ್ತ ಬರಬೇಕಾಗುತ್ತದೆ. ಮೊದಲೆಲ್ಲ ಗಣಪತಿ ತರುವಾಗ ಘಂಟೆ ಬಾರಿಸಿ ತರುತ್ತಿದ್ದೇವು ಈಗ ಪಟಾಕಿ, ಡಿ ಜೆ ಆಗಿ ಬದಲಾಗಿದೆ ಹಾಗಾಗಿ ಅತ್ಯಂತ ಸಂಭ್ರಮದ ಜೊತೆಗೆ ಆಚರಿಸಿ ಎಂದರು. ಎಲ್ಲಾ ಗಣಪತಿ ಪೆಂಡಾಲ್ ಬಳಿ ಸಿಸಿ ಕ್ಯಾಮರಾ ಅಳವಡಿಕೆ ಬಗ್ಗೆ ಮಾತನಾಡಿ ಯಾವುದೇ ಸಂದರ್ಭದಲ್ಲಿ ಅಹಿತಕರ ಘಟನೆ ನಡೆದಾಗ ಯಾವುದೇ ಕಿಡಿಗೇಡಿಗಳು ತೊಂದರೆ ಮಾಡಿದರೂ ಅಂತಹವರನ್ನು ಹಿಡಿಯಲು ಅವಕಾಶ ಸಿಗುತ್ತದೆ. ಈಗ ಅತ್ಯಂತ ಕಡಿಮೆ ಹಣದಲ್ಲಿ ಸಿಸಿ ಕ್ಯಾಮರಾ ಸಿಗುತ್ತದೆ, ಪಟಾಕಿ ಹೊಡೆಯಲು ಸಾವಿರಾರು ಹಣ ಖರ್ಚು ಮಾಡುವಾಗ ಸಿಸಿ ಕ್ಯಾಮರ ಅಳವಡಿಕೆ ಬಗ್ಗೆ ಯಾಕೆ ಹೀಗೆ? ಸಿಸಿ ಕ್ಯಾಮರವನ್ನು ಎಲ್ಲರೂ ಅಳವಡಿಸಬೇಕು ಎಂದರು.
ಡಿಜೆ, ಅದ್ದೂರಿ ಲೈಟ್ ಬಂದ್!
ಇನ್ನು ಕಳೆದ ಬಾರಿ ಗಣಪತಿ ವಿಸರ್ಜನೆ ವೇಳೆ ಡಿಜೆ ಜೊತೆಗೆ ಬಳಸುವ ಲೇಸರ್ ಲೈಟ್ ನಿಂದ ಸಮಸ್ಯೆ ಆಗಿದೆ. ಹಾಗಾಗಿ ಈ ಬಾರಿ ಅದಕ್ಕೆ ಕಡಿವಾಣ ಹಾಕಬೇಕು. ಅಧಿಕಾರಿಗಳ ಜೊತೆಗೆ ಚರ್ಚಿಸಿ ಅದಕ್ಕೆ ಕಡಿವಾಣ ಹಾಕುತ್ತೇವೆ ಎಂದು ತಿಳಿಸಿದರು. ಬಹಳ ಮುಖ್ಯವಾಗಿ ಚರ್ಚೆ ಆದಂತಹ ಗಣಪತಿ ವಿಸರ್ಜನೆ ವೇಳೆ ಡಿಜೆ ಬಳಕೆ ಬಗ್ಗೆ ಅತಿಯಾದ ಸೌಂಡ್, ಲೈಟಿಂಗ್ ವ್ಯವಸ್ಥೆ ಮಾಡುವುದರಿಂದ ಚಿಕ್ಕ ಮಕ್ಕಳು, ಹಿರಿಯರು ಎಲ್ಲರಿಗೂ ತೊಂದರೆ ಆಗುತ್ತದೆ. ಕಾನೂನು ಜಾರಿ ಆಗಿದೆ. ಅದನ್ನು ನಾವು ಕಾಪಾಡಬೇಕು. ಡಿಜೆ ಹಾಕಬಾರದು ಎಂಬ ಆದೇಶ ಇದೆ. ಅದಕ್ಕೆ ನೀವೆಲ್ಲರೂ ಸಹಕಾರ ನೀಡಬೇಕು ಎಂದು ಅರವಿಂದ್ ಕಲಗುಜ್ಜಿ ತಿಳಿಸಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಮಾತನಾಡಿ ಸೌಹಾರ್ದಕ್ಕೆ ಹೆಸರುವಾಸಿಯಾಗಿರುವ ನಮ್ಮ ತೀರ್ಥಹಳ್ಳಿಯಲ್ಲಿ ಯಾವುದೇ ಸಂಘರ್ಷ ಆಗುವುದಿಲ್ಲ. ಆದರೂ ಅಧಿಕಾರಿಗಳ ಕೆಲಸ ಹಾಗಾಗಿ ಸೌಹಾರ್ದ ಸಭೆ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟಿಗೆ ಸೇರಿ ಎರಡು ಹಬ್ಬಗಳನ್ನು ಆಚರಿಸೋಣ ಎಂದರು.
ಸಭೆಯಲ್ಲಿ ಎಲ್ಲಾ ಗಣಪತಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಮಸೀದಿ ಮುಖಂಡರುಗಳು ಉಪಸ್ಥಿತರಿದ್ದರು. ಈ ವೇಳೆ ಎಲ್ಲರಿಗೂ ಸಭೆ ನಡೆಸಿದ ಅಧಿಕಾರಿಗಳು ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗರಾಜ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶೈಲ, ಇನ್ಸ್ಪೆಕ್ಟರ್ ಇಮ್ರಾನ್ ಬೇಗ್, ಜೆ ಸಿ ಆಸ್ಪತ್ರೆ ಆರೋಗ್ಯ ಅಧಿಕಾರಿ, ಮೆಸ್ಕಾಂ ಅಧಿಕಾರಿ ಪ್ರಶಾಂತ್ ಸೇರಿ ಹಲವರು ಉಪಸ್ಥಿತರಿದ್ದರು.