ವಸತಿ ನಿಗಮದಲ್ಲಿ ಹಗರಣ: ಬಿಜೆಪಿ ಮಳೆಯಲ್ಲೇ ಹೋರಾಟ!
– ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಮಾತಿನ ಏಟು
– ಆಡಳಿತ ಮಾಡಲು ಬರದ ಸರ್ಕಾರ ಎಂದ ನಾಯಕರು!
NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದ ವಸತಿ ನಿಗಮದಲ್ಲಿ ನಡೆದಿರುವ ಭಾರಿ ಭ್ರಷ್ಟಾಚಾರ ಹಾಗೂ ರಾಜ್ಯ ಸರ್ಕಾರದ ದುರಾಡಳಿತವನ್ನು ಖಂಡಿಸಿ ತೀರ್ಥಹಳ್ಳಿ ತಾಲೂಕು ಬಿಜೆಪಿ ವತಿಯಿಂದ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮಳೆಯಲ್ಲೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಗಮನ ಸೆಳೆಯಿತು.
ಕಳೆದ 2023 ರಲ್ಲಿ ನಡೆದಂತಹ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿ ಘೋಷಣೆಗಳನ್ನು ಮಾಡುವುದರ ಮೂಲಕ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿ ಅಧಿಕಾರಕ್ಕೇರಿರುತ್ತಾರೆ. ನುಡಿದಂತೆ ನಡೆದ್ದಿದ್ದೇವೆ ಎನ್ನುತ್ತಲೇ ನುಡಿದಂತೆ ನಡೆಯದ ಎಂದಿನ ಜಾಯಮಾನವನ್ನು ಕಾಂಗ್ರೆಸ್ ಪಕ್ಷವು ಈ ಬಾರಿಯೂ ಮುಂದವರೆಸಿರುವುದು ರಾಜ್ಯದ ಜನತೆಯ ದೌರ್ಭಾಗ್ಯ ಎಂದರೆ ಅತಿಶಯೋಕ್ತಿಯಲ್ಲ. ರಾಜ್ಯದಲ್ಲಿ ತರಕಾರಿ, -ಹಣ್ಣು, ಹಂಪಲು, ಹೂವು ಸೇರಿದಂತೆ ಬಹುತೇಕ ದೈನಂದಿನ ವಸ್ತುಗಳ ಅಸಹಜ ಬೆಲೆ ಏರಿಕೆಯಿಂದಾಗಿ ಶ್ರೀ ಸಾಮಾನ್ಯನ ಬದುಕು ದುಸ್ತರವಾಗಿದೆ. ಈ ಸಂದರ್ಭದಲ್ಲಿ ಜನತೆಯ ನೆರವಿಗೆ ಧಾವಿಸಬೇಕಿದ್ದ ಸರ್ಕಾರವು ಸಹಾಯ ಹಸ್ತ ನೀಡುವ ಬದಲಾಗಿ ಗಾಯದ ಮೇಲೆ ಬರೆಯೆಂಬತೆ ರಾಜ್ಯಸರ್ಕಾರದ ಅಧೀನದಲ್ಲಿರುವ ಅನೇಕ ತೆರಿಗೆಗಳನ್ನು ಯಥೇಚ್ಛವಾಗಿ – ಮನಸೋಇಚ್ಛೆ ಏರಿಸಿ ಶ್ರೀ ಸಾಮಾನ್ಯನ ಬದುಕನ್ನು ಇನಷ್ಟು ಸಂಕಷ್ಟಕ್ಕೆ ದೂಕಿದೆ. ಕೃಷಿ ವಿದ್ಯುತ್ ಸಂಪರ್ಕ ದರ 100 ಪಟ್ಟು ಹೆಚ್ಚಾಗಿದೆ. ವಚನ ನೀಡಿದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರನ್ನು ತಲುಪುತ್ತಿಲ್ಲ. ರಾಜ್ಯದ ಸರ್ವಾಂಗೀಣ ಪ್ರಗತಿ ಕುಂಠಿತವಾಗಿದೆ. ಅಬಕಾರಿ ಶುಲ್ಕ, ಮುದ್ರಾಂಕ ಶುಲ್ಕ ಕೈಗೆಟುಕದ ರೀತಿ ಏರಿಕೆಯಾಗಿದೆ. ಶಿಲಾನ್ಯಾಸ-ಗುದ್ದಲಿಪೂಜೆ-ಉದ್ಘಾಟನೆ
ಎಂಬ ಶಬ್ದಗಳು ಸರ್ಕಾರದ ಶಬ್ದಕೋಶದಿಂದ ಮಾಯವಾಗಿದೆ. ಒಟ್ಟಾರೆ ರಾಜ್ಯದ ಆಡಳಿತ ಯಂತ್ರ ಕುಸಿತವಾಗಿ ಒಳಜಗಳಕ್ಕೆ ಮೀಸಲಾಗಿದೆ.
ಇದೆಲ್ಲದರ ನಡುವೆ ರಾಜ್ಯಸರ್ಕಾರದ ಅಧೀನದಲ್ಲಿರುವ ಅನೇಕ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸ್ವತಃ ಸಚಿವರುಗಳೇ ಈ ಎಲ್ಲಾ ಭ್ರಷ್ಟಾಚಾರದ ಪಿತಾಮಹರಾಗಿದ್ದು ರಾಜ್ಯದ ಸತ್ಪ್ರಜೆಗಳು ಲಂಚವಿಲ್ಲದೇ ಯಾವುದೇ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತಿಲ್ಲ. ವರ್ಗಾವಣೆ ಮಾಫಿಯ, ವಾಲ್ಮೀಕಿ ನಿಗಮದಿಂದ ಆರಂಭಿಸಿ ಇಂದಿನ ವಸತಿ ಇಲಾಖೆಯ ಹಗರಣದವರೆಗೆ ಸ್ವತಃ ಕಾಂಗ್ರೆಸ್ ಸರ್ಕಾರದ ಸಚಿವರುಗಳು ನೇರವಾಗಿ ಭಾಗಿಯಾಗಿರುವುದನ್ನು ಕಾಂಗ್ರೆಸ್ ಪಕ್ಷದ ಶಾಸಕರಾದ ಬಿ.ಆರ್.ಪಾಟೀಲ್, ರಾಜು ಕಾಗೆ, ವೈ.ಎನ್.ಗೋಪಾಲಕೃಷ್ಣ, ಗೋಪಾಲಕೃಷ್ಣ ಬೇಳೂರು ಮುಂತಾದವರು ಸ್ಪಷ್ಟವಾಗಿ ಮಾದ್ಯಮಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಸ್ವತಃ ಸದನದಲ್ಲಿ ಮುಖ್ಯಮಂತ್ರಿಗಳು ಹಗರಣ ನಡೆದಿರುವುದನ್ನು ಒಪ್ಪಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಅಧಿಕಾರ ಲಾಲಸೆಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈ ಭ್ರಷ್ಟಾಚಾರಿಗಳೆಲ್ಲ ತಮ್ಮ ಶಿಷ್ಯರು ಎಂಬ ಕಾರಣಕ್ಕಾಗಿ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ರಾಜ್ಯದ ದುರಂತವೇ ಸರಿ. ಆರ್.ಸಿ.ಬಿ ಗೆದ್ದ ಸಂಭ್ರಮವನ್ನು ಇವರು ತಮ್ಮ ಕುಟುಂಬದವರನ್ನು ಸಂತೋಷ ಪಡಿಸಲು ಬಳಸಿಕೊಂಡ ಪರಿಣಾಮ ಆದ ಸಾವು ನೋವುಗಳಿಗೆ ಅಧಿಕಾರಿಗಳ ತಲೆದಂಡ ಮಾಡುವ ಮೂಲಕ ತಮ್ಮಲ್ಲಿ ಎಳ್ಳಷ್ಟು ಪಾಪಪ್ರಜ್ಞೆ ಇಲ್ಲ ಎಂದು ಸಾಬೀತುಪಡಿಸಿಕೊಂಡಿದ್ದಾರೆ. ಭ್ರಷ್ಟ ಸಚಿವರು ಮತ್ತು ಭ್ರಷ್ಟ ಅಧಿಕಾರಿಗಳ ವಜಾ ಬದಲಾಗಿ ಅಮಾಯಕರನ್ನು ಈ ಸರ್ಕಾರ ಬಲಿ ನೀಡುತ್ತಿದೆ. ಈ ರೀತಿಯ ಜನವಿರೋಧಿ ಸರ್ಕಾರ ಆಡಳಿತದಲ್ಲಿರುವುದ ರಾಜ್ಯದ ಪ್ರಗತಿಗೆ ಮಾರಕ. ಒಂದೆಡೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸುಶಾಸನದಲ್ಲಿ ದೇಶ ವಿಕಸಿತವಾಗುತ್ತಿದ್ದರೆ, ಇತ್ತ ಕರ್ನಾಟಕ ಅದಕ್ಷರ ಆಡಳಿತಗಾರರರಿಂದ ಅಭಿವೃದ್ಧಿ ಶೂನ್ಯವಾಗುತ್ತಿದೆ. ಇದನ್ನು ಸ್ವತಃ ಗೃಹಸಚಿವರೇ ಒಪ್ಪಿಕೊಂಡಿದ್ದಾರೆ. ಹಾಗಾಗಿ ಈ ಎಲ್ಲಾ ಕಾರಣಗಳಿಂದ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕೆಂದು ಭಾರತೀಯ ಜನತಾ ಪಾರ್ಟಿ ಈ ಮೂಲಕ ಆಗ್ರಹಿಸುತ್ತದೆ ಎಂದು ನಾಯಕರು ಅಗ್ರಹಿಸಿದರು.
ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಕುಕ್ಕೆ ಪ್ರಶಾಂತ್, ಪ್ರಮುಖರಾದ ಸಂದೇಶ್ ಜವಳಿ, ಚಂದವಳ್ಳಿ ಸೋಮಶೇಖರ್, ಮಧುರಾಜ್ ಹೆಗ್ಡೆ, ಸಂತೋಷ್ ದೇವಾಡಿಗ, ಅಂಜುರ ಕುಡುಮಲ್ಲಿಗೆ, ಪ್ರದೀಪ್ ಗಬಡಿ, ಶ್ರೀಕಾಂತ್ ಬಸವಾನಿ,, ಪ್ರಮೋದ್, ಯತಿರಾಜ್ ಇತರರು ಇದ್ದರು.
