ಕರವೇಯಿಂದ ತೀರ್ಥಹಳ್ಳಿಯಲ್ಲಿ ಅದ್ದೂರಿ ರಾಜ್ಯೋತ್ಸವ!
– ನ.25ರಂದು ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕಾರ್ಯಕ್ರಮ
– ಕುಂದಗನ್ನಡದ ಹಾಸ್ಯಮಯ ನಗೆ ನಾಟಕ
– ಸಾಧಕ ಕನ್ನಡ ವಿದ್ಯಾರ್ಥಿಗಳಿಗೆ ಸನ್ಮಾನ
– ಕನ್ನಡ ಬೋರ್ಡ್ ಇಲ್ಲದಿದ್ರೆ ಮಸಿ ಬಳಿಯುತ್ತೇವೆ!
NAMMUR EXPRESS NEWS
ತೀರ್ಥಹಳ್ಳಿ: ಕನ್ನಡಕ್ಕೆ ರಜತ ಸಂಭ್ರಮ ತುಂಬಿದ ಕಾರಣಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ತವರಿನಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಸಿದ್ಧತೆ ನಡೆದಿದೆ. ನವೆಂಬರ್ 25 ರ ಶನಿವಾರ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ವಿಶೇಷವಾಗಿ ರಾಜ್ಯೋತ್ಸವ ಆಚರಣೆ ಮಾಡಲು ಕರವೇ ಸಜ್ಜಾಗಿದೆ. ಸೋಮವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಹೆಗ್ಡೆ, ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ತಾಲೂಕಿನ ಎಲ್ಲಾ ಶಾಲೆಯ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ನೀಡಲಾಗುವುದು, ಹಾಗೆ ಡ್ಯಾನ್ಸ್ ಪ್ಯಾಲೇಸ್ ಅಕಾಡೆಮಿ ತೀರ್ಥಹಳ್ಳಿ ಡ್ಯಾನ್ಸ್ ಕಾರ್ಯಕ್ರಮ ಬಳಿಕ ಸಂಜೆ 6 ಗಂಟೆಗೆ ದುರ್ಗಾ ಕಲಾತಂಡ ಹಾರಾಡಿ ಬ್ರಹ್ಮಾವರ ಇವರಿಂದ ” ಒಂದಲ್ಲಾ ಒಂದ್ ಸಮಸ್ಯೆ” ಎಂಬ ಕುಂದ ಕನ್ನಡದ ಹಾಸ್ಯಮಯ ನಗೆ ನಾಟಕ ಆಯೋಜನೆ ಮಾಡಲಾಗಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಗೃಹಸಚಿವರು, ಹಾಲಿ ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥ್ ಗೌಡ, ಆರ್ ಮದನ್, ಪ. ಪಂ ಅಧ್ಯಕ್ಷೆ ಗೀತಾ ರಮೇಶ್ ಭಾಗಿಯಾಗಲಿದ್ದಾರೆ. ಸರ್ವರನ್ನು ಈ ಕಾರ್ಯಕ್ರಮಕ್ಕೆ ಸ್ವಾಗತಿಸಲಾಗಿದೆ. ತೀರ್ಥಹಳ್ಳಿ ತಾಲೂಕು ಕರವೇ ಅಧ್ಯಕ್ಷರಾದ ಸುರೇಂದ್ರ ಯಡೂರು, ಮಲ್ಲಕ್ಕಿ ರಾಘವೇಂದ್ರ, ವಿಜಯ್ ಬಿಳಿಗಿರಿ, ವಿಕ್ರಮ್ ಶೆಟ್ಟಿ, ಶ್ರೀಕಾಂತ್, ಕಟ್ಟೆ ಕರಣ್, ಅರ್ಜುನ್ ಸೇರಿ ಹಲವರು ಉಪಸ್ಥಿತರಿದ್ದರು.
ಪ್ರತಿ ಅಂಗಡಿಯಲ್ಲಿ ಕನ್ನಡ ಧ್ವಜ ಹಾರಬೇಕು!
ಕರವೇ ಕನ್ನಡ ರಾಜ್ಯೋತ್ಸವದಂದು ಪಟ್ಟಣದ ಪ್ರತಿಯೊಂದು ಅಂಗಡಿ ಮುಂಗಟ್ಟುಗಳ ಮುಂಭಾಗ ಕನ್ನಡ ಬಾವುಟವನ್ನು ಕಟ್ಟಬೇಕು. ಪ್ರತಿಯೊಂದು ಅಂಗಡಿಗಳಿಗೂ ಕನ್ನಡ ಧ್ವಜವನ್ನು ನಾವೇ ತಲುಪಿಸುತ್ತೇವೆ.ಹಾಗೂ ಮುಂದಿನ ದಿನಗಳಲ್ಲಿ ಪಟ್ಟಣದ ಪ್ರತಿಯೊಂದು ಅಂಗಡಿ ಹೆಸರುಗಳು ಕನ್ನಡದಲ್ಲಿ ಇರುವಂತೆ ಪಟ್ಟಣ ಪಂಚಾಯತ್ ಗೆ ತಿಳಿಸಿದ್ದೇವೆ. ಒಂದು ತಿಂಗಳೊಳಗೆ ಸರಿ ಪಡಿಸದಿದ್ದರೆ ಮಸಿ ಬಳಿಯಬೇಕಾಗುತ್ತದೆ ಎಂದು ಕರವೇ ಮುಖಂಡರು ಹೇಳಿದರು.