ಹೊಸ ವರ್ಷದ ರಾತ್ರಿಯೇ ಬಸ್ ಸ್ಟಾಂಡ್ ಮಾಡಿದರು!
– ಗುಂಡು, ತುಂಡು ಬಿಟ್ಟು ಮಾದರಿ ಕಾರ್ಯಕ್ರಮ
– ಸಮರ್ಪಣಾ ತಂಡದಿಂದ ಮತ್ತೊಂದು ಮಾದರಿ ಕೆಲಸ!
NAMMUR EXPRESS NEWS
ತೀರ್ಥಹಳ್ಳಿ: ಹೊಸ ವರ್ಷವೆಂದರೆ ಗುಂಡು, ತುಂಡು, ಮೋಜು ಮಸ್ತಿಯೇ ಎಲ್ಲೆಡೆ ತುಂಬಿರುವಾಗ ಇಲ್ಲೊಂದು ತಂಡ ಬಹಳ ಅರ್ಥಪೂರ್ಣವಾಗಿ ಹೊಸ ವರ್ಷ ಆಚರಿಸಿ ಹೊಸ ಮುನ್ನುಡಿ ಬರೆದಿದ್ದಾರೆ. ತೀರ್ಥಹಳ್ಳಿ ತಾಲೂಕು ರಾಮಕೃಷ್ಣಪುರದ ಸಮರ್ಪಣಾ ಎಂಬ ತಂಡವು ತಮ್ಮ ಊರಿನ ಹಳೆಯ ಬಸ್ ನಿಲ್ದಾಣವನ್ನು ಸುಣ್ಣ ಬಣ್ಣಗೊಳಿಸಿ ನಮ್ಮ ಮಲೆನಾಡಿನ ಅತ್ಯಂತ ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳನ್ನು ಹಾಗೆಯೇ ತಮ್ಮೂರ ಸಮೀಪದಲ್ಲಿನ ಅದ್ಭುತ ಪುರಾಣ ಪ್ರಸಿದ್ದ ದೇವಾಲಯಗಳ ಚಿತ್ರಗಳನ್ನು ಗೋಡೆಯ ಮೇಲೆ ಪ್ರದರ್ಶನ ಮಾಡಿ ಒಂದು ವಿಶೇಷವಾದ ಹಾಗೂ ವಿನೂತನ ಪ್ರಯತ್ನ ಮಾಡಿ ಇಡೀ ತಾಲೂಕಿನ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೇ ಹೊಸ ನಾಮಫಲಕವನ್ನು ಹಾಗೂ ಬಸ್ ವೇಳಾಪಟ್ಟಿಯನ್ನು ಕೂಡಾ ಹಾಕಿ ಪ್ರಯಾಣಿಕರಿಗೆ ಆಗುವ ತೊಂದರೆಯಿಂದ ಮುಕ್ತಿ ನೀಡಿದ್ದಾರೆ.
ಹೊಸ ವರ್ಷ ಎಂದರೆ ಹೊಸತನ!
ಹೊಸ ವರ್ಷವೆಂದರೆ ಕೇವಲ ಮೋಜು ಮಾತ್ರವಲ್ಲ. ತಮ್ಮಿಂದ ಸಮಾಜಕ್ಕೆ ಕೊಡಬಹುದಾದ ಕಾಣಿಕೆಯನ್ನು ಕೂಡಾ ನೆನಪಿಸಿದ್ದಾರೆ. ಸಮರ್ಪಣಾ ತಂಡಕ್ಕೆ ಇತ್ತೀಚೆಗೆ ಆಗುಂಬೆ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದಿಂದ ಹಮ್ಮಿಕೊಂಡ ವಿಶ್ವ ಮಾನವ ದಿನಾಚರಣೆಯಂದು ವಿಶ್ವ ಮಾನವ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು ಇವರ ಕಾರ್ಯತತ್ಪರತೆಗೆ ಸಾಕ್ಷಿಯಾಗಿರುತ್ತದೆ. ತಮ್ಮಿಂದ ಸಮಾಜಕ್ಕಾಗುವ ಕೊಡುಗೆಯನ್ನು ಯುವ ಜನತೆ ನೀಡುವ ಮೂಲಕ ತಮ್ಮ ಊರು, ತಾಲೂಕು, ರಾಜ್ಯವನ್ನೇ ಮಾದರಿಯಾಗಿಸುವ ನಿಟ್ಟಿನಲ್ಲಿ ಇವರ ಕಾರ್ಯ ಪ್ರೇರಣೆಯಾಗಿದೆ.
