ರೋಲ್ ಕಾಲ್ ಪ್ರಶ್ನಿಸಿದ್ದಕ್ಕೆ ಪ್ರತಿಮಾ ಕೊಲೆ?!
– ಓರ್ವನ ಬಂಧನ: ಮತ್ತಷ್ಟು ತನಿಖೆ ಚುರುಕು
– ತೀರ್ಥಹಳ್ಳಿಯ ತವರಲ್ಲಿ ಮಡುಗಟ್ಟಿದ ಮೌನ
– 15 ದಿನಗಳ ಹಿಂದಷ್ಟೇ ಹೊಸ ಮನೆ ಗೃಹಪ್ರವೇಶ
NAMMUR EXPRESS NEWS
ತೀರ್ಥಹಳ್ಳಿ: ಒಕ್ಕಲಿಗ ಸಂಪ್ರದಾಯದಂತೆ ಭೂ ವಿಜ್ಞಾನಿ ಪ್ರತಿಮಾ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ಸೋಮವಾರ ಸ್ವಗ್ರಾಮದಲ್ಲಿ ನೆರವೇರಿಸಿದರು. ಆದರೆ ಈ ಕೊಲೆಯ ಇನ್ನಷ್ಟು ತನಿಖೆ ಚುರುಕುಗೊಂಡಿದೆ. ಈಗಾಗಲೇ ಪ್ರತಿಮಾ ಕಾರು ಚಾಲಕ ಕಿರಣ್ ಎಂಬಾತನನ್ನು ಮಲೆ ಮಹದೇಶ್ವರ ಬೆಟ್ಟದಲ್ಲಿ ಬಂಧಿಸಲಾಗಿದೆ. ಇನ್ನು ಮೂವರ ವಿಚಾರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ದ್ವೇಷದಿಂದ ಹೊಂಚು ಹಾಕಿ ಕೊಲೆ!
ನ.4ರ ರಾತ್ರಿ ಬೆಂಗಳೂರಿನ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಪ್ರತಿಮಾರನ್ನು ಅವರದ್ದೇ ಕಾರು ಚಾಲಕ ಕಿರಣ್ ಹತ್ಯೆ ಮಾಡಿ ಪರಾರಿ ಆಗಿದ್ದ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ಪ್ರತಿಮಾರ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದರು. ಇದಕ್ಕೂ ಮೊದಲು ತೀರ್ಥಹಳ್ಳಿಯ ಸತ್ಯನಾರಾಯಣ ಮನೆಯಲ್ಲಿ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಮಾ ಅವರ ಕುಟುಂಬಸ್ಥರು, ಹಿತೈಷಿಗಳು, ಸ್ನೇಹಿತರು ಅಂತಿಮ ದರ್ಶನ ಪಡೆದುರು. ಮಾಜಿ ಸಚಿವ ಆರಗ ಜ್ಞಾನೇಂದ್ರ ಅಂತಿಮ ದರ್ಶನ ಪಡೆದು, ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ತೀರ್ಥಹಳ್ಳಿಯ ಕುರುವಳ್ಳಿ ಹಿಂದೂ ರುದ್ರ ಭೂಮಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಶಿವನ ವಿಗ್ರಹದ ಮುಂದೆ ಮೃತದೇಹವಿಟ್ಟು ಪೂಜೆ ಸಲ್ಲಿಸಿದರು. ಅಂತಿಮ ವಿಧಿ ವಿಧಾನ ಸಲ್ಲಿಸಿ, ಪುತ್ರ ಪಾರ್ಥ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
15 ದಿನಗಳ ಹಿಂದಷ್ಟೇ ಮನೆ ಗೃಹಪ್ರವೇಶ
ಪ್ರತಿಮಾ ಸಾವು ತುಂಬಾ ನೋವು ತಂದಿದೆ. ಈ ಸಾವಿಗೆ ನ್ಯಾಯ ಬೇಕು ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ಕಳೆದ 15 ದಿನಗಳ ಹಿಂದಷ್ಟೇ ಮನೆ ಗೃಹಪ್ರವೇಶ ಮಾಡಿದ್ದರು ಎಂದು ಪ್ರತಿಮಾ ಸಂಬಂಧಿ ಕಾಂತರಾಜು ಪ್ರತಿಕ್ರಿಯಿಸಿದರು.
ಗಣಿ ಮಾಫಿಯಾ ಶಂಕೆ?
ಕಿರಣ್ ಬಳಸಿಕೊಂಡು ಗಣಿ ಮಾಫಿಯಾ ಆಕೆಯನ್ನು ಕೊಲೆ ಮಾಡಿರುವ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಕಿರಣ್ ಗಣಿ ಮತ್ತು ಬಂಡೆಗಳಿಂದ ಹಣ ರೋಲ್ ಕಾಲ್ ಮಾಡುತ್ತಿದ್ದ ಎನ್ನಲಾಗಿದೆ. ಜತೆಗೆ ದಾಳಿಗಳ ಬಗ್ಗೆ ಮಾಹಿತಿದಾರನಾಗಿದ್ದ ಹಾಗಾಗಿ ಕೆಲಸದಿಂದ ತೆಗೆಯಲಾಗಿತ್ತು ಎಂದು ಹೇಳಲಾಗಿದೆ.