ಕಿಮ್ಮನೆ ವಿರುದ್ಧ ಕೂಗು: ಈಗ ಮಹಿಳೆಗೆ ಸಂಕಷ್ಟ!
– ಯೋಜನೆಗೆ ಮಾರ್ಗದರ್ಶನ ಮಾಡಿದ ಆರಗ ಬಿಟ್ಟು ಕಿಮ್ಮನೆ ಮೇಲೆ ಆರೋಪ ಏಕೆ?
– ಕ್ರಿಮಿನಲ್ ಕೇಸ್ ಹಾಕಲು ಮುಂದಾದ ಯುವ ಕಾಂಗ್ರೆಸ್
– ಆಗುಂಬೆ ಠಾಣೆಯಲ್ಲಿ ದೂರು ದಾಖಲು!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಗಿಂತ ಮುಂಚಿತವಾಗಿ ನಡೆದ ಪ್ರಕ್ರಿಯೆಗಳು. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರು, ಹಾಲಿ ಶಾಸಕರು ಆಗಿರುವ ಶ್ರೀ ಆರಗ ಜ್ಞಾನೇಂದ್ರ ರವರ ಮಾರ್ಗದರ್ಶನ ಶಿಫಾರಸ್ಸಿನ ಮೇರೆಗೆ ಟೆಂಡರ್ ಮೂಲಕ ನ್ಯಾಷನಲ್ ಕನ್ಸ್ಟ್ರಕ್ಷನ್ ಕಂಪೆನಿಯವರು ಕಾಮಗಾರಿ ಕೈಗೆತ್ತಿಕೊಂಡಿರುತ್ತಾರೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ವಿರೋಧ ಮಾಡುವಂತವರು, ನೀರು ಶುದ್ದೀಕರಣ ಘಟಕದ ಕಾಮಗಾರಿ ಮತ್ತು ಮಾಲತಿ ನದಿ ಮತ್ತು ತುಂಗಾ ನದಿಯಿಂದ ನೀರು ತೆಗೆಯುವ ಯೋಜನೆ ಹಾಲಿ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರರವರ ಶಿಫಾರಸ್ಸು ಮತ್ತು ಅನುಮತಿ ಇಲ್ಲದೇ ನಡೆದ ಕಾಮಗಾರಿ ಆಗಿರುವುದಿಲ್ಲ. ವಿರೋಧ ಮಾಡುವಂತಹ ಪ್ರತಿಯೊಬ್ಬರೂ ಕೂಡಾ ಸದರಿ ಯೋಜನೆಗೆ ಅಥವಾ ನಿರ್ದಿಷ್ಟ ನೀರು ಶುದ್ದೀಕರಣ ಘಟಕ ಅಥವಾ ನೀರು ಎಲ್ಲಿಂದ ಸಂಗ್ರಹಣೆ ಮಾಡಿ ನೀರು ಶುದ್ಧೀಕರಣ ಘಟಕಕ್ಕೆ ಒದಗಿಸಬೇಕೆಂತಹ ವಿಚಾರಗಳು ಶಾಸಕರ ಗಮನಕ್ಕೆ ಬಾರದ ಕಾಮಗಾರಿಗಳು ಅಲ್ಲ.
ಭಾರತೀಯ ಜನತಾ ಪಕ್ಷದ ಪ್ರತಿಯೊಬ್ಬ ಜನಪ್ರತಿನಿಧಿ ಮತ್ತು ಪಕ್ಷದ ತಾಲ್ಲೂಕು ಮಟ್ಟದ ಪದಾಧಕಾರಿಗಳು ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಎಲ್ಲರೂ ಕೂಡಾ ಮೇಲ್ಕಂಡ ಯೋಜನೆಗೆ ಬೆಂಬಲಕ್ಕೆ ನಿಂತಿರುತ್ತಾರೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾ ಆಡಳಿತ ಶಾಸಕರ ಸಮ್ಮತಿ ಆಧಾರದ ಮೇರೆಗೆ ಯೋಜನೆಯ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿದ್ದಾರೆ. ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ನ ಮಾಜಿ ಶಾಸಕರು ಮತ್ತು ಮಾಜಿ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ್ ಅವರ ಹೆಸರನ್ನು ಅಥವಾ ಕಾಂಗ್ರೆಸ್ ಪಕ್ಷವನ್ನು ಈ ಸಂಘರ್ಷದಲ್ಲಿ ಎಳೆದು ತರುವ ಅಗತ್ಯವಿಲ್ಲ. ಮೇಲ್ಕಂಡ ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸುವವರು ನೇರವಾಗಿ ಮಾಜಿ ಸಚಿವರು ಮತ್ತು ಹಾಲಿ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರರವರ ವಿರುದ್ಧ ನೇರವಾಗಿ ಹೋರಾಟಕ್ಕಿಳಿಯುವ ಅಥವಾ ಅವರ ನಡೆಗಳನ್ನು ಖಂಡಿಸಬೇಕು….
ಅನಾವಶ್ಯಕವಾಗಿ ಪ್ರಸ್ತುತ ಅಧಿಕಾರದಲ್ಲಿದ ಶ್ರೀ ಕಿಮ್ಮನೆ ರತ್ನಾಕರ್ರವರನ್ನು ಈ ಸಂಘರ್ಷಕ್ಕೆ ಎಳೆದು ತರುವುದು ಹಾಸ್ಯಾಸ್ಪದವಾಗಿದೆ. ಮೇಲ್ಕಂಡ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಅನಾವಶ್ಯಕವಾಗಿ ನಮ್ಮ ನಾಯಕರು , ಮಾಜಿ ಸಚಿವರು ಮತ್ತು ಮಾಜಿ ಶಾಸಕರಾದ ಶ್ರೀ ಕಿಮ್ಮನೆ ರತ್ನಾಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸುತ್ತೇವೆ ಮತ್ತು ಸಂಬಂಧಿಸಿದ ಹೇಳಿಕೆ ನೀಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಕಿಮ್ಮನೆ ಹಾಗೂ ಕಾಂಗ್ರೆಸ್ ಪಕ್ಷವನ್ನು ನಿಂದಿಸಿರುವ ಮಹಿಳೆಗೆ ಬೆಂಬಲಕ್ಕೆ ನಿಂತ ಹೋರಾಟದ ಸಮಿತಿ ಮತ್ತು ಪಧಾದಿಕಾರಿಗಳ ವಿರುದ್ಧವೂ ಕೂಡಾ ಕಾನೂನು ಕ್ರಮ ತೆಗೆದುಕೊಳ್ಳುವ ಬಗ್ಗೆ ಪರಿಶೀಲಿಸಲಾಗುತ್ತದೆ. ಕಾರಣ ಯೋಜನೆ ವಿರೋಧಿ ಹೋರಾಟದ ಸಮಿತಿಯವರು ಈವರೆಗೆ ಅವಹೇಳನಾಕಾರಿ ಹೇಳಿಕೆ ವಿರುದ್ಧ ಯಾವುದೇ ಪ್ರತಿಕ್ರಿಯೆ ನೀಡದಿರುವುದು ನಮ್ಮ ಗಮನದಲ್ಲಿ ಇರುತ್ತದೆ ಎಂದು ತೀರ್ಥಹಳ್ಳಿ ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ ಹಾಗೂ ಪದಾಧಿಕಾರಿಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಆಗುಂಬೆಯಲ್ಲಿ ದೂರು ದಾಖಲು!
ತೀರ್ಥಹಳ್ಳಿ ತಾಲ್ಲೂಕು, ಹೆಗ್ಗೋಡು ಗ್ರಾಮ ಪಂಚಾಯ್ತಿ ಆಲಗೇರಿ ನಿವಾಸಿ ಶಾಂತಾ ಕೋಂ ಗಿರೀಶ ಇವರು ಮಾಜಿ ಸಚಿವ ಶ್ರೀ ಕಿಮ್ಮನೆ ರತ್ನಾಕರ್ ಇವರಿಗೆ ಮಾನಹಾನಿಕಾರಕವಾಗಿ ನಿಂದಿಸಿ ಸಾರ್ವಜನಿಕವಾಗಿ ಅಪಮಾನ ಮಾಡಿ ಹಲ್ಲೆ ನಡೆಸುವಂತೆ ಪ್ರಚೋದನೆ ನೀಡಿ ಜೀವಬೆದರಿಕೆ ಹಾಕಿರುವ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸುವ ವಿಚಾರಣೆ ನಡೆಸಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರರು ಎಸ್ ಸಿ ವಿಭಾಗ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಭಿಮಾನಿ ಪಡುವಳ್ಳಿ ಹರ್ಷೇಂದ್ರ ಕುಮಾರ್ ಆಗುಂಬೆ ಠಾಣೆಗೆ ದೂರು ನೀಡಿದ್ದಾರೆ.
ತೀರ್ಥಹಳ್ಳಿ ಸಮೀಪದ ಭೀಮನಕಟ್ಟೆ ತುಂಗಾನದಿ ತೀರದ ಆಲಗೇರಿ ಎಂಬಲ್ಲಿ ಬಹುಗ್ರಾಮ ನೀರು ಸರಬರಾಜು ಯೋಜನೆಯ ಶುದ್ದೀಕರಣ ಘಟಕದ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯನ್ನು ಸ್ಥಳೀಯ ಕೆಲವು ಸಂಘಟನೆಗಳು ವಿರೋಧಿಸುತ್ತಿವೆ. ಈ ಸಂಬಂಧ ದಿನಾಂಕ 26-02-2024 ರಂದು ಹೆಗ್ಗೋಡು ಶಾಲಾ ಮುಂಭಾಗ ಪ್ರತಿಭಟನೆಗಳು ನಡೆದಿವೆ. ಈ ಸಂದರ್ಭ ಮಧ್ಯಾಹ್ನ 12-30 ರ ಸುಮಾರಿಗೆ ಮಾದ್ಯಮದವರೊಂದಿಗೆ ಮಾತನಾಡಿದ ಸ್ಥಳೀಯರಾದ ಶಾಂತಾ ಕೋಂ ಗಿರೀಶ ಎನ್ನುವವರು ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ರವರಿಗೆ ಹೀನಾಮಾನ ಬೈದು ಚಪ್ಪಲಿಯಲ್ಲಿ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾಳೆ.
“ಕಿಮ್ಮನೆ ಎಲ್ಲಿ ಸತ್ತಿದ್ದಾನೆ, ಅವನು ಓಟು ಕೇಳಲು ಬರಲಿ, ಅವನಿಗೆ ಚಪ್ಪಲಿಯಿಂದ ಹೊಡೆಯಿರಿ” ಅಂತ ಅವಹೇಳನಾಕಾರಿಯಾಗಿ ನಿಂದಿಸಿ ಜನರನ್ನು ಎತ್ತಿಕಟ್ಟಿ ಶಾಂತಿ ಭಂಗಕ್ಕೆ ಪ್ರಯತ್ನಿಸಿರುತ್ತಾಳೆ. ಘಟನೆಗೆ ಸಂಬಂಧ ಪಡದಿರುವ ಕಿಮ್ಮನೆ ರತ್ನಾಕರ್ಗೆ ಅವಹೇಳನ ಮಾಡಿ ನಿಂದಿಸಿರುವ ವೀಡಿಯೋ ಕ್ಲಿಪ್ ಗಳನ್ನು ಈ ದೂರು ಅರ್ಜಿಯ ಜೊತೆ ಲಗತ್ತಿಸಿರುತ್ತೇನೆ. ಎಂದು ಎ ಎಸ್ ಐ ಉಮೇಶ್ ನಾಯಕ್ ಅವರಿಗೆ ಶಾಂತ ವಿರುದ್ಧ ದೂರು ನೀಡಲಾಗಿ ದೂರು ದಾಖಲಿಸಿಕೊಂಡಿದ್ದಾರೆ. ಅಮರನಾಥ ಶೆಟ್ಟಿ ಅಧ್ಯಕ್ಷ ಯುವ ಕಾಂಗ್ರೆಸ್ ತೀರ್ಥಳ್ಳಿ, ಸಾತ್ವಿಕ್ ಆಗುಂಬೆ ಯುವ ಕಾಂಗ್ರೆಸ್ ಕಾರ್ಯದರ್ಶಿ, ಯುವ ಕಾಂಗ್ರೆಸ್ ಮುಖಂಡರುಗಳಾದ ವಿಕ್ರಂ ಶೆಟ್ಟಿ, ಶಶಿಭೂಷಣ್ ಆಗುಂಬೆ, ಅರುಣ್ ಕುಮಾರ್, ಕಿರಣ್ ಕುಮಾರ್ ಚಂದನ್ ಉಪಸ್ಥಿತರಿದ್ದರು.
