ಅದ್ದೂರಿಯಾಗಿ ನಡೆದ ಕರಿಮನೆ ದೇವಾಲಯಗಳ ಯಶಸ್ವಿ ಪುನರ್ ಪ್ರತಿಷ್ಠಾಪನೆ ಮಹೋತ್ಸವ!
– ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮೂರು ದಿನಗಳ ಕಾಲ ವಿಜೃಂಭಣೆ
– ಪರಿವಾರ ದೈವಗಳ ದೈವಗುಡಿ ಪ್ರತಿಷ್ಠಾಪನೆ
– ಸಾವಿರಾರು ಭಕ್ತರು ಭಾಗಿ!
NAMMUR EXPRESS NEWS
ತೀರ್ಥಹಳ್ಳಿ: ತಾಲೂಕಿನ ಹೊದಲ ಅರಳಾಪುರ ಗ್ರಾ.ಪಂ.ವ್ಯಾಪ್ತಿಯ ಪ್ರತಿಷ್ಠಿತ ಕರಿಮನೆಯ
ಶ್ರೀ ಶಂಕರೇಶ್ವರ, ಶ್ರೀ ಲಕ್ಷ್ಮೀನಾರಾಯಣ,
ಶ್ರೀ ಹನುಮಂತ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾಪನೆ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನೆರವೇರಿತು.
ಮಾ. 7ರ ಶುಕ್ರವಾರ ಪ್ರತಿಷ್ಠಾನೆಯ ಸಂಬಂಧ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಾ. 8ರ ಶನಿವಾರದಂದು ಪರಿವಾರ ದೈವಗಳಾದ ಬ್ರಹ್ಮ, ಭೂತರಾಜ, ಚೌಡಿ, ಜಟ್ಟಿಗ, ಕ್ಷೇತ್ರಪಾಲ ದೈವಗುಡಿಗಳ ಪ್ರತಿಷ್ಠಾಪನೆ ಆಯೋಜಿಸಲಾಗಿತ್ತು.
ಮಾ.9ರ ಭಾನುವಾರದಂದು ಬೆಳಿಗ್ಗೆ ಕ್ಷೇತ್ರದ
ಶ್ರೀ ಶಂಕರೇಶ್ವರ, ಶ್ರೀ ಲಕ್ಷ್ಮೀನಾರಾಯಣ, ಶ್ರೀ ಹನುಮಂತ ದೇವರುಗಳ ಪುನರ್ ಪ್ರತಿಷ್ಟೆ ಸಮಾರಂಭದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಶ್ರೀ ಕ್ಷೇತ್ರ ಕರಿಮನೆ ದೇವರುಗಳ ಉತ್ಸವ ಹಂಗಾರುಕೊಡಿಗೆ ಜಲದುರ್ಗಿ ದೇವಸ್ಥಾನದವರೆಗೆ ಮತ್ತು ಸಂಜೆ ಆಶ್ಲೇಷ ಬಲಿ ಸೇವೆ ಏರ್ಪಡಿಸಲಾಗಿತ್ತು.
ಮುಖ್ಯ ಪುರೋಹಿತರಾದ ಬೆಂಗಳೂರಿನ ವೇದಬ್ರಹ್ಮ ಸುಧಾಕರ್ ಶರ್ಮರವರ ತಂಡ ಹಾಗೂ ಮಾರ್ಗದರ್ಶಕರು, ಗುರುಗಳಾದ ರಂಜದಕಟ್ಟೆಯ ವಿಶ್ವನಾಥ ಪೈಗಳ ಸಾರಥ್ಯ,ಶ್ರೀ ಕ್ಷೇತ್ರ ಕರಿಮನೆ ದೇವಾಲಯದ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡಿತು.
