ತೀರ್ಥಹಳ್ಳಿ, ಹೊಸ ನಗರದಲ್ಲಿ ಜನಜೀವನ ಸ್ತಬ್ದ!
– ವಿದ್ಯುತ್, ನೆಟ್ವರ್ಕ್ ಇಲ್ಲದೆ ಜನ ಕತ್ತಲೆಯಲ್ಲಿ ಜನ
– ಸಾವಿರಾರು ಎಕರೆ ತೋಟ, ಗದ್ದೆ ನೀರಲ್ಲಿ ಮುಳುಗಡೆ
– ಹೊಸ ರಸ್ತೆಯಲ್ಲಿ ಕುಸಿದ ಗುಡ್ಡ: ಸಂಚಾರ ಬಂದ್
– ಹೊಸ ನಗರದಲ್ಲಿ ಮನೆ ಮೇಲೆ ಬೀಳುತ್ತಿರುವ ಮರಗಳು!
NAMMUR EXPRESS NEWS
ತೀರ್ಥಹಳ್ಳಿ/ಹೊಸನಗರ: ತೀರ್ಥಹಳ್ಳಿ ಹಾಗೂ ಹೊಸನಗರದಲ್ಲಿ ಮಳೆ ಅಬ್ಬರಕ್ಕೆ ಜನ ಜೀವನ ಸಂಪೂರ್ಣ ಸ್ತಬ್ದವಾಗಿದ್ದು, ಸಾವಿರಾರು ಎಕರೆ ತೋಟ, ಗದ್ದೆಗೆ ನೀರು ನುಗ್ಗಿದೆ. ರಸ್ತೆ, ಸೇತುವೆ, ಮೋರಿ ಹಾಳಾಗಿದೆ. ರಸ್ತೆ ಮೇಲೆ ಗುಡ್ಡ ಕುಸಿದು ಅನಾಹುತ ಸಂಭವಿಸಿದೆ. ವಿದ್ಯುತ್, ನೆಟ್ವರ್ಕ್ ಇಲ್ಲದೆ ಜನ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.ತೀರ್ಥಹಳ್ಳಿ ತಾಲೂಕಲ್ಲಿ ತುಂಗಾ, ಮಾಲತಿ ನದಿ ಹರಿಯುವ ಎಲ್ಲಾ ಭಾಗದಲ್ಲಿ ನದಿ ಉಕ್ಕಿ ತೋಟ, ಗದ್ದೆಗಳಿಗೆ ಹಾನಿಯಾಗಿದೆ. ಜನ ಜಾನುವಾರುಗಳಿಗೆ ತೊಂದರೆ ಆಗಿದೆ.
ತೀರ್ಥಹಳ್ಳಿ: ಬಾಳೆಬೈಲು – ಕುರುವಳ್ಳಿ ಬೈಪಾಸ್ ರಸ್ತೆಯ ತಡೆಗೋಡೆ ಕುಸಿತ
ತೀರ್ಥಹಳ್ಳಿ : ಕುರುವಳ್ಳಿ – ಬಾಳೇಬೈಲಿನ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದಲ್ಲಿ ನಿರ್ಮಿಸಿರುವ 56 ಕೋಟಿ ರೂ ವೆಚ್ಚದ ತುಂಗಾ ಸೇತುವೆಯ ಬೈಪಾಸ್ ರಸ್ತೆಯ ತಡೆಗೋಡೆಗಳು ಕುಸಿದು ಬಿದ್ದಿದೆ. 56 ಕೋಟಿ ವೆಚ್ಚದಲ್ಲಿ ಹೊಸ ತುಂಗಾ ಸೇತುವೆ ಹಾಗೂ ಬೈಪಾಸ್ ರಸ್ತೆ ನಿರ್ಮಿಸಲಾಗಿತ್ತು. ಉದ್ಘಾಟನೆಗೊಂಡು ಕೆಲವೇ ತಿಂಗಳ ಒಳಗಾಗಿ ತಡೆಗೋಡೆ ಬಿದ್ದು ಮಣ್ಣು ಕುಸಿಯುತ್ತಿದೆ. ಈಗಾಗಲೇ ವಾಹನ ಓಡಾಟವನ್ನು ನಿರ್ಬಂಧಿಸಲಾಗಿದೆ. ಸೋಮವಾರ ಸಂಜೆ ವೇಳೆ ಕುಸಿಯುವ ಹಂತಕ್ಕೆ ತಲುಪಿದ್ದ ತಡೆಗೋಡೆಗಳು ಮಂಗಳವಾರ ಸಂಜೆಯಾಗುವಷ್ಟರಲ್ಲಿ ಕುಸಿದು ಬಿದ್ದಿದೆ.
ಹೊಸನಗರ: ಮನೆ ಮೇಲೆ ಬಿದ್ದ ಮರ!
ಹೊಸನಗರ ತಾಲೂಕು ಉಳುಕೊಪ್ಪ ಬಳಿಯ ಕಟ್ಟಿನಗದ್ದೆ ಹಿರಿಯಣ್ಣ ನಾಯ್ಕ್ ಅವರ ಮನೆ ಮೇಲೆ ಬಿದ್ದ ಮರದಿಂದ ಮನೆ ಸಂಪೂರ್ಣ ಹಾನಿಯಾಗಿದೆ. ಸರ್ಕಾರದ ಪರಿಹಾರದ ನಿರೀಕ್ಷೆಯಲ್ಲಿ ಬಡ ಕುಟುಂಬ ಇದೆ. ಕೂಡಲೇ ತಾಲೂಕು ಆಡಳಿತ ಗಮನಿಸಬೇಕಿದೆ.
ವಿದ್ಯುತ್, ನೆಟ್ವರ್ಕ್ ಇಲ್ಲದೆ ಜನ ಕತ್ತಲೆಯಲ್ಲಿ ಜನ
ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ಭಾರೀ ಮಳೆ, ಗಾಳಿ ಹಾಗೂ ವಿದ್ಯುತ್ ಕಂಬಗಳು ಬಿದ್ದ ಪರಿಣಾಮ ವಿದ್ಯುತ್ ಹಾಗೂ ಮೊಬೈಲ್ ಸಂಪರ್ಕ ಬಹುತೇಕ ಭಾಗದಲ್ಲಿ ಇಲ್ಲ. ಇದರಿಂದ ಜನ ಕತ್ತಲೆಯಲ್ಲಿ ದಿನ ಕಳೆಯುವಂತಾಗಿದೆ.
