Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಇಲ್ಲ!

ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಇಲ್ಲ!
– ಅರ್ಜಿ ಕಡತಕ್ಕೆ ತಿಂಗಳುಗಟ್ಟಲೆ ಧೂಳು
– ತುರ್ತು ಕೆಲಸವೂ ವಿಳಂಬ: ಜನರ ಪರದಾಟ
– ಜನ ನಾಯಕರಿಗೆ ಜನರ ಕಷ್ಟ ಗೊತ್ತಾಗುತ್ತಿಲ್ವಾ?!

NAMMUR EXPRESS NEWS
ತೀರ್ಥಹಳ್ಳಿ: ಆಡಳಿತದಲ್ಲಿ ಮಾತೃಸ್ಥಾನ ಹೊಂದಿ ಸಮಗ್ರ ಜವಾಬ್ದಾರಿ ನಿರ್ವಹಿಸುವ ಕಂದಾಯ ಇಲಾಖೆ ತಾಲೂಕಿನಲ್ಲಿ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ತಾಲೂಕು ಕಚೇರಿ, ಅಟಲ್ ಜನಸ್ನೇಹಿ ಕೇಂದ್ರದಲ್ಲಿ (ನಾಡಕಚೇರಿ) ಸಾರ್ವಜನಿಕರ ತುರ್ತು ಕೆಲಸಗಳಿಗೆ ವಿಳಂಬದ ಕಂಟಕ ಎದುರಾಗಿದೆ. ಹೀಗಾಗಿ ಪ್ರತಿ ದಿನ ನೂರಾರು ಮಂದಿ ತೊಂದರೆಗೆ ಒಳಗಾಗುತ್ತಿದ್ದಾರೆ. ಹತ್ತಾರು ಬಾರಿ ಕಚೇರಿ ಅಲೆದರೂ ನಿರೀಕ್ಷಿತ ಮಟ್ಟದಲ್ಲಿ ಮಹತ್ವದ ಸೇವೆ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ, ಸರಕಾರ, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಇತರೆ ಇಲಾಖೆಗೆ ರವಾನೆ ಆಗುವ ಕಡತಗಳು ತಿಂಗಳುಗಟ್ಟಲೆ ಕಚೇರಿಯಲ್ಲಿ ಧೂಳು ಹಿಡಿಯುವಂತಹ ದಟ್ಟ ದಾರಿದ್ಯ ಸ್ಥಿತಿ ನಿರ್ಮಾಣವಾಗಿದೆ.

ಸಿಬ್ಬಂದಿ ಖಾಲಿ ಖಾಲಿ.. ಇದ್ದವರದ್ದು ಬೇರೆಯೇ ವರಸೆ!

ಕಂದಾಯ ಇಲಾಖೆಗೆ ಸೇರಿದ ತಾಲೂಕು ಕಚೇರಿ, ನಾಡಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು ವಿಭಾಗದಲ್ಲಿ ಒಟ್ಟು 108 ಹುದ್ದೆ ಮಂಜೂರಾಗಿದ್ದು, ಇದರಲ್ಲಿ 47 ಹುದ್ದೆ ಖಾಲಿ ಇದೆ. ಸಿಬ್ಬಂದಿ ಕೊರತೆ ನಡುವೆ ಸರಕಾರ ನೇರವಾಗಿ ನಿಯಮ ಉಲ್ಲಂಘಿಸಿ ಸಿಬ್ಬಂದಿಯನ್ನು ಬೇರೆಡೆಗೆ ನಿಯೋಜನೆ ಮಾಡಿದೆ. ಸುಮಾರು 4 ತಿಂಗಳಿನಿಂದ ಗ್ರೇಡ್ -2 ತಹಸೀಲ್ದಾ‌ರ್ ಹುದ್ದೆ ಖಾಲಿಯಾಗಿದ್ದು, ಇತರೆ ಸಿಬ್ಬಂದಿ ಇಲ್ಲದೆ ಇಡೀ ತಾಲೂಕು ಕಚೇರಿ ಭಣಗುಡುತ್ತಿದೆ. ಎಲ್ಲಾ ಇಲಾಖೆಯಲ್ಲೂ ಖಾಲಿ ಖಾಲಿ ಇದೆ. ಕೆಲವು ಪಿಡಿಓಗಳು ಎರಡು ಎರಡು ಕಡೆ ಕೆಲಸ ಮಾಡಲಾಗುತ್ತಿದೆ. ಇದರಿಂದ ಜನರಿಗೆ ನ್ಯಾಯ ಕೊಡಲು ಆಗುತ್ತಿಲ್ಲ. ಜನ ತೊಂದರೆಗೆ ಸಿಲುಕಿದ್ದಾರೆ.

ಯಾವ ಸರ್ಕಾರ ಬಂದರೂ ಇಷ್ಟೇ ಕಥೆ!

ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಆದಾಯ, ವಾಸಸ್ಥಳ, ಭೂ ಹಿಡುವಳಿ, ಮರಣ, ಕೃಷಿ ಕಾರ್ಮಿಕ, ಜನನ, ಸರಕಾರಿ ನೌಕರಿ ಇಲ್ಲದ ಬಗ್ಗೆ, ಸಾಲ ತೀರಿಸುವ ಶಕ್ತಿ, ಜನಸಂಖ್ಯಾ, ನಾಗರಿಕ ನೋಂದಣಿ ಪ್ರಮಾಣ ಪತ್ರ, ಗೇಣಿ ರಹಿತ, ಮೃತರ ಕುಟುಂಬ ಸದಸ್ಯರ, ಅಧಿಕೃತ ವ್ಯವಸಾಯಗಾರರಿಗೆ, ಸಣ್ಣ, ಅತಿಸಣ್ಣ ರೈತರಿಗೆ ನೀಡುವ, ಜಮೀನು ಇಲ್ಲದಿರುವ, ನಿರುದ್ಯೋಗಿ, ಮರು ವಿವಾಹವಾಗದಿರುವ, ವಿಧವೆ, ಜೀವಂತಸದಸ್ಯರ, ವ್ಯವಸಾಯಗಾರ ಕುಟುಂಬ, ಬೋನೋಫೈಡ್ ದಾಖಲೆ ನೀಡುವ ಅಧಿಕಾರ ನಾಡಕಚೇರಿಗೆ ಸೇರಿದೆ.

ಮಾಸಾಶನ ಮಂಜೂರಾತಿ, ದರಖಾಸ್ತು ರೆಕಾರ್ಡ್‌ಗಳ ತಯಾರಿಕೆ, ಸರಕಾರಿ ಬಾಕಿ ವಸೂಲಾತಿ, ಜಮಾ, ಡಿ.ಸಿ.ಬಿ.ಲೆಕ್ಕಗಳ ನಿರ್ವಹಣೆ, ಪ್ರವಾಹ, ಮುಜರಾಯಿ ಸಂಸ್ಥೆಗಳ ನಿರ್ವಹಣೆ ಮತ್ತು ತನಿಖೆ, ಗ್ರಾಮ ಲೆಕ್ಕಿಗರ ಮತ್ತು ಕಂದಾಯ ನಿರೀಕ್ಷಕರ ತನಿಖೆ, ಪಡಿತರ ಕಾರ್ಡ್, ಸ್ವಾಧೀನ ಪ್ರಕರಣಗಳ ಕಡತಗಳ ತಯಾರಿಕೆ, ಜನನ, ಮರಣ ದಾಖಲೆ ನಿರ್ವಹಣೆ, ಗ್ರಾಮಲೆಕ್ಕಿಗರು ಮತ್ತು ಸ್ವಾಧೀನದಲ್ಲಿರುವ ಮತ್ತಿತರರಿಗೆ ಸಾಂದರ್ಭಿಕ ರಜೆ, ಕರ್ನಾಟಕ ಭೂ ಕಂದಾಯ ಕಾಯಿದೆ ಕಲಂ 94, 104,127,129, ಮತ್ತು 164ರಡಿ ಕ್ರಮ ತೆಗೆದುಕೊಳ್ಳುವ, ಪಹಣಿ ಪತ್ರಿಕೆ,ಮ್ಯುಟೇಷನ್, ಪ್ರಕೃತಿ ವಿಕೋಪಗಳ ಮುನ್ಸೂಚನೆ, ಬರಪರಿಸ್ಥಿತಿ, ಮಳೆ ಮಾಪನ ನಿರ್ವಹಣೆ ಇತ್ಯಾದಿ ಮಹತ್ವದ ಅಧಿಕಾರ ನಾಡಕಚೇರಿ ಉಪತಹಸೀಲ್ದಾರ್ ವ್ಯಾಪ್ತಿಯಲ್ಲಿದ್ದು, ಸೇವೆ ಪಡೆಯುವುದು ಸಾರ್ವಜನಿಕರ ಪಾಲಿಗೆ ಕಷ್ಟಕರವಾಗಿದೆ.

ಈ ಹಿಂದೆ ತೀರ್ಥಹಳ್ಳಿ ಶಾಸಕರೇ ಗೃಹ ಮಂತ್ರಿ ಆಗಿದ್ದರು. ಈಗ ಕಾಂಗ್ರೆಸ್ ಸರ್ಕಾರ ಬಂದಿದೆ. ಇಬ್ಬರು ಪ್ರಭಾವಿ ನಾಯಕರಿದ್ದಾರೆ. ಆದ್ರೆ ಯಾರೇ ಇದ್ರೂ ಜನರ ಸಮಸ್ಯೆಗೆ ಮಾತ್ರ ಪರಿಹಾರ ಸಿಕ್ತಿಲ್ಲ ಎಂಬ ದೂರು ಕೇಳಿ ಬಂದಿದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.