ತೀರ್ಥಹಳ್ಳಿ ಮಾರಿ ಜಾತ್ರೆ: 3ನೇ ದಿನದ ಸಂಭ್ರಮ..!
– ಇಂದು ಸಂಜೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ
– ಸುಮಾರು 5000 ಜನರಿಗೆ ಅನ್ನ ಸಂತರ್ಪಣೆ: ಎಲ್ಲೆಲ್ಲೂ ಸಂಭ್ರಮದ ವಾತಾವರಣ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಮಾರಿಕಾಂಬ ಜಾತ್ರೆಯ ಮೂರನೇ ದಿನವಾದ ಗುರುವಾರ ಬೆಳಗ್ಗೆಯಿಂದ ಸಹಸ್ರಾರು ಭಕ್ತರು ಮಾರಿಕಾಂಬ ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸುತ್ತಿದ್ದಾರೆ. ಹರಿದು ಬಂತು ಭಕ್ತ ಸಾಗರ: ತಾಯಿಯ ದರ್ಶನ ಪಡೆಯಲು ಭಕ್ತ ಸಾಗರ ಹರಿದು ಬಂದಿದೆ. ಬೆಳಗಿನಿಂದಲೇ ಸರತಿಯಲ್ಲಿ ನಿಂತಿರುವ ಜನರು, ದೇವಿಯ ದರ್ಶನ ಪಡೆಯುತ್ತಿದ್ದಾರೆ. ಯಾವುದೆ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎಲ್ಲೆಲ್ಲೂ ಸಂಭ್ರಮದ ವಾತಾವರಣ ಮನೆ ಮಾಡಿದೆ.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ :
ಪ್ರಸಿದ್ಧ ಮಾರಿಕಾಂಬ ದೇವಿಯ ಜಾತ್ರೆ ರಂಗೇರಿದೆ. ಜನರು ಭಕ್ತಿಯಲ್ಲಿ ಮಿಂದೇಳುತ್ತಿದ್ದಾರೆ. ಎರಡನೇ ದಿನವಾದ ಬುಧವಾರದ ಸಂಜೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಸಂಜೆ 6ರಿಂದ ಡ್ಯಾನ್ಸ್ ಪ್ಯಾಲೇಸ್ ತೀರ್ಥಹಳ್ಳಿ ಇವರಿಂದ ನೃತ್ಯ ಸಂಭ್ರಮ ಹಾಗೂ ವಿಠಲ ನಾಯಕ್ ಕಲ್ಕಡ ಮತ್ತು ತಂಡದವರಿಂದ ಗೀತ ಸಾಹಿತ್ಯ ಸಂಭ್ರಮ ನಡೆದಿದೆ. ಮೂರನೇ ದಿನವಾದ ಇಂದು ಬೆಳಗ್ಗಿನಿಂದ ದೇವಸ್ಥಾನದಲ್ಲಿ ಪಾರಾಯಣ, ಜಾತ್ರಾ ವಿಶೇಷ ಪೂಜೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಹಾಗೂ ಮಧ್ಯಾಹ್ನ ಟಿಎಪಿಸಿ ಎಂ ಎಸ್ ಸಭಾಂಗಣದಲ್ಲಿ ಸುಮಾರು 5000 ಭಕ್ತರಿಗೆ ಅನ್ನಸಂತರ್ಪಣಾ ಕಾರ್ಯ ನಡೆದಿದೆ. ಶ್ರೀಮತಿ ಶೋಭಾ ಮತ್ತು ಶ್ರೀ ನಾಗರಾಜ್ ಶೆಟ್ಟಿ ಮತ್ತು ಕುಟುಂಬದವರು ಇಂದಿನ ಸಂಪೂರ್ಣ ಅನ್ನಸಂತರ್ಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇನ್ನು ರಾತ್ರಿ ರಂಗ ಪೂಜೆ ಹಾಗೂ ಪ್ರೊ. ಕೃಷ್ಣೇಗೌಡ ಮತ್ತು ಸಂಗಡಿಗರಿಂದ ನಗೆ ನೈವೇದ್ಯ ಕಾರ್ಯಕ್ರಮ ನಡೆಯಲಿದೆ.