ತೀರ್ಥಹಳ್ಳಿ: ರಸ್ತೆ ಅವ್ಯವಸ್ಥೆ ಕೇಳೋರು ಯಾರು?
– ಮಹಿಷಿ-ಹೆದ್ದೂರು ಸಂಪರ್ಕ ರಸ್ತೆ ಕೆಸರುಮಯ
– ಕಳಪೆ ರಸ್ತೆ ಮಾಡಿ ಹಲವೆಡೆ ರಸ್ತೆ ಕುಸಿತ
– ಜನ ನಾಯಕರು, ಅಧಿಕಾರಿಗಳ ಜಾಣ ಕುರುಡು!
NAMMUR EXPRESS NEWS
ನಾವಿಂದು ಸಾಧಾರಣ ರಸ್ತೆಗಳಿಂದ ಶುರುವಾಗಿ, ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ, ದ್ವಿಪಥ, ಚತುಷ್ಪಥ ಹೀಗೆ ಹಲವು ವಿಭಾಗಗಳಾಗಿ ವಿಂಗಡಿಸುವಷ್ಟು ಮುಂದೆ ಬಂದಿದ್ದೇವೆ, ಆದರೂ ಸಹ ಹಳ್ಳಿಗಳ ರಸ್ತೆ ದುರಸ್ತಿ ಬಗೆಗೆ ಆಸಕ್ತಿ ವಹಿಸದಿರುವುದು ದುಃಖದ ಸಂಗತಿ. ಇಂದು ಎಷ್ಟೋ ಹಳ್ಳಿಗಳಲ್ಲಿ ಜನ ಸರಿಯಾದ ರಸ್ತೆ ಸಂಪರ್ಕವಿಲ್ಲದೆ ಬದುಕುತ್ತಿದ್ದಾರೆ. ಮಳೆಗಾಲದಲ್ಲಿ ಈ ರಸ್ತೆಗಳು ಇನ್ನಷ್ಟು ಹದಗೆಟ್ಟಿರುತ್ತವೆ. ಹೊಂಡ ಬಿದ್ದ ರಸ್ತೆಗಳು ಮಳೆಗಾಲದಲ್ಲಿ ನೀರು ತುಂಬಿ ನಿಂತಿರುತ್ತವೆ, ವಾಹನ ಚಾಲಕರಿಗಷ್ಟೇ ಅಲ್ಲದೆ, ಪಾದಚಾರಿಗಳಿಗೂ ಸಹ ಓಡಾಡಲು ಕಷ್ಟವಾಗುತ್ತದೆ.
ಹೌದು. ತೀರ್ಥಹಳ್ಳಿ ತಾಲೂಕಿನ ಹಲವೆಡೆ ರಸ್ತೆ ಅವ್ಯವಸ್ಥೆ ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಒಂದು ಉದಾಹರಣೆ ಮಹಿಷಿ ಮತ್ತು ಹೆದ್ದೂರು ಸಂಪರ್ಕ ರಸ್ತೆ. ಕೋಟಿ ಕೋಟಿ ವೆಚ್ಚ ಮಾಡಿ ಹೊಸ ಸೇತುವೆ ಮಾಡಿದರೂ ರಸ್ತೆ ಮಾಡಿಲ್ಲ. ಇದರಿಂದ ಪ್ರತಿ ದಿನ ಸಾವಿರಾರು ಜನರಿಗೆ ತೊಂದರೆಯಾಗಿದೆ.
ಹಳ್ಳಿ ಹಳ್ಳಿಯಲ್ಲೂ ರಸ್ತೆ ಸಮಸ್ಯೆ
ಮಳೆಗಾಲದಲ್ಲಿ ಜಾರುವ ರಸ್ತೆಗಳು ಇನ್ನಷ್ಟು ಸಮಸ್ಯೆಗೆ ಎಡೆಮಾಡುತ್ತವೆ. ಹಳೆಯ ಡಾಂಬರು ರಸ್ತೆ ಕಿತ್ತು ಹೋಗಿ ಅದಕ್ಕೆ ಬಳಸಿದ ಜಲ್ಲಿಕಲ್ಲುಗಳು ರಸ್ತೆಯಲ್ಲಿ ಕಾಯುತ್ತ ಕುಳಿತ ಯಮನಂತೆ ಭಾಸವಾಗುತ್ತದೆ. ಇನ್ನು ಸರ್ಕಾರದಿಂದ ಬರುವ ಆದಾಯ ಕಡಿಮೆ ಆಗಿ ಎಷ್ಟೋ ರಸ್ತೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ, ಅದು ಮುಂದು ವರೆಯುವುದರೊಳಗಾಗಿ ಮೊದಲ ಅರ್ಧ ಹಾಳಾಗಿರುತ್ತದೆ ಇದು ಹಳ್ಳಿ ರಸ್ತೆಗಳ ಸಮಸ್ಯೆ. ಇನ್ನು ಸಣ್ಣ ಮಟ್ಟದ ವಾಹನ ಓಡಾಟದ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಮರ ಮುರಿದು ಬಿದ್ದು ಆ ಸಮಸ್ಯೆ ಬಗೆಹರಿಸಲು ಹೆಚ್ಚು ಸಮಯ ತೆಗೆದು ಕೊಳ್ಳುತ್ತವೆ. ಆಗ ಪರ್ಯಾಯ ರಸ್ತೆ ಹುಡುಕಿಕೊಳ್ಳುವ ಸಮಸ್ಯೆ ಪ್ರಯಾಣಿಕರಿಗೆ ಬಂದೊದಗುತ್ತದೆ. ಆದರೆ ನಗರಪ್ರದೇಶಗಳಲ್ಲಿ ಪಾದಚಾರಿಗಳು ರಸ್ತೆ ಮೇಲೆ ನಡೆಯಲು ಭಯಪಡುವ ಸಂದರ್ಭ ಬಂದೊದಗಿದೆ.