Categories
ತೀರ್ಥಹಳ್ಳಿ

ತೀರ್ಥಹಳ್ಳಿ ಬಿಜೆಪಿ ಕಾರ್ಯಕರ್ತ ತನಿಖೆ ನಂತರ ಹೇಳಿದ್ದೇನು?

ತೀರ್ಥಹಳ್ಳಿ ಬಿಜೆಪಿ ಕಾರ್ಯಕರ್ತ ತನಿಖೆ ನಂತರ ಹೇಳಿದ್ದೇನು?
– ಕೆಲವು ಮಾಹಿತಿ ಕೇಳಿದ್ದು ಕೊಟ್ಟಿದ್ದೇನೆ, ಸುಮ್ಮನೆ ಅಪಪ್ರಚಾರ ಬೇಡ
– ದಾಖಲೆ ಕೊಡುವಾಗ, ಜೆರಾಕ್ಸ್ ಮಾಡಿಸುವಾಗ ಎಚ್ಚರ!
– ಆನ್ಲೈನ್ ಟ್ರೇಡ್, ಅಪರಿಚಿತರ ಬಳಿ ಹಣ ವ್ಯವಹಾರ ಹುಷಾರ್

NAMMUR EXPRESS NEWS
ಶಿವಮೊಗ್ಗ : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಶಂಕಿತರ ಪರಿಚಯದವರ ಮನೆ, ಕೆಲವು ಅಂಗಡಿಗಳ ಮೇಲೆ ದಾಳಿ ಮಾಡಿರುವ ಎನ್. ಐ. ಎ ಅಧಿಕಾರಿಗಳು ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ಅವರನ್ನು ವಿಚಾರಣೆ ನಡೆಸಿ ವಾಪಸ್​ ಕಳುಹಿಸಿದೆ. ಇದರ ಬೆನ್ನಲ್ಲೇ ಸಾಯಿ ಪ್ರಸಾದ್​ ಎನ್​ಐಎ ವಿಚಾರಣೆ ನಡೆಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ಮುಜಾಮಿಲ್ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ತನಿಖೆ ಭಾಗವಾಗಿ ನನಗೂ ಸೇರಿ ಮೂವರಿಗೆ ನೋಟಿಸ್ ನೀಡಲಾಗಿತ್ತು. ಜೊತೆಗೆ ನನ್ನ ತಮ್ಮನಿಗೂ ನೋಟಿಸ್ ಬಂದಿತ್ತು. ನಮಗೆ ನೋಟಿಸ್ ಏಕೆ ಕೊಟ್ಟಿದ್ದಾರೆಂದು ತಿಳಿದಿರಲಿಲ್ಲ. ಮತೀನ್ ಎಂಬಾತ ಸಾಯಿ ಸ್ಲ್ಯಾಷ್_ಪಿ ಎಂಬ ಅಕೌಂಟ್ ನಿಂದ ಕ್ರಿಪ್ಟೋ ಕರೆನ್ಸಿ ವ್ಯವಹಾರ ಮಾಡಿದ್ದಾನೆ. ಸಾಯಿ ಪಕ್ಕದಲ್ಲಿ ಪಿ ಇರುವುದರಿಂದ ನನ್ನ ತಮ್ಮ ಹಾಗೂ ನನಗೆ ಕರೆಸಿದ್ದರು ಎಂದು ಬಳಿಕ ಗೊತ್ತಾಯಿತು ಎಂದರು.

ಭವಿಷ್ಯದ ದೃಷ್ಟಿಯಿಂದ ನಾನು ಕ್ರಿಪ್ಟೋ ಎಂಬ ಅಧಿಕೃತ ಆ್ಯಪ್ ಮೂಲಕ ಶೇರ್ ನಲ್ಲಿ ಹಣ ಹೂಡಿಕೆ ಮಾಡಿದ್ದೇನೆ. ಅದು ನನ್ನ ಬ್ಯಾಂಕ್ ಮೂಲಕವೇ ಕೆವೈಸಿ ಬಳಸಿ ಮಾಡಿದ್ದೇನೆ. ಈ ಬಗ್ಗೆ ಅಧಿಕಾರಿಗಳಿಗೆ ನಾನು ತಿಳಿಸಿದ್ದೇನೆ. ಹೀಗಾಗಿ ಎಲ್ಲಾ ರೀತಿಯಲ್ಲೂ ಅಧಿಕಾರಿಗಳು ತನಿಖೆ ಮಾಡಿ ಕಳುಹಿಸಿದ್ದಾರೆ. ಜೊತೆಗೆ ಮುಜಾಮಿಲ್​ನನ್ನು ವಿಚಾರಣೆ ಮಾಡಿ ಕಳಿಸಿದ್ದಾರೆ. ಬಾಲ್ಯದಲ್ಲಿ ನಾವು ಅವರು ಸ್ನೇಹಿತರು ಅಷ್ಟೇ. ಅವರ ಕೆಲಸವೇನಾದರೂ ಇದ್ದರೆ ನಾನು ಮಾಡಿಕೊಡುತ್ತಿದ್ದೆ. ಅವರ ಅಂಗಡಿಯಲ್ಲಿ ಮೊಬೈಲ್ ಖರೀದಿ ಮಾಡಿದ್ದೇವೆ. ಆರೋಗ್ಯಕರ ವ್ಯವಹಾರ ಮಾಡುತ್ತಿದ್ದೇವೆ. ಈ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಕೊಟ್ಟಿದ್ದೇನೆ. ಬೇರೇನೂ ವ್ಯವಹಾರ ಅಧಿಕಾರಿಗಳಿಗೆ ಕಂಡು ಬಂದಿಲ್ಲ ಎಂದು ಸಾಯಿ ಪ್ರಸಾದ್​ ತಿಳಿಸಿದ್ದಾರೆ.
ದೇಶದ ವಿಚಾರ ಬಂದಾಗ ಪಕ್ಷ ಜಾತಿ ಎಂಬುದು ಬರಲ್ಲ. ಈ ಪ್ರಕರಣದಿಂದ ಯುವಕರು ಎಚ್ಚರವಾಗಿರಬೇಕು. ಎಲ್ಲಿ ಬೇಕಲ್ಲಿ ದಾಖಲೆ ಪತ್ರಗಳು ಜೆರಾಕ್ಸ್, ಸ್ಕ್ಯಾನಿಂಗ್ ಮಾಡಿಸಬಾರದು. ನಾನೊಬ್ಬ ಬಿಜೆಪಿ ಸಣ್ಣ ಕಾರ್ಯಕರ್ತ ಅಷ್ಟೇ. ಯಾವುದೇ ಮುಖಂಡ, ನಾಯಕನಲ್ಲ. ಸಣ್ಣಪುಟ್ಟ ಪೇಂಟಿಂಗ್ ಮಾಡಿಕೊಂಡು ಬದುಕುತ್ತಿದ್ದೇವೆ. ಸುಖಾಸುಮ್ಮನೆ ಗೊತ್ತಿಲ್ಲದೇ ಆರೋಪ ಮಾಡಬಾರದು. ಮೊದಲು ವಿಚಾರಪೂರ್ತಿ ತಿಳಿದುಕೊಳ್ಳಿ. ತಪ್ಪಿದ್ದರೆ ನೇರವಾಗಿ ಗುಂಡು ಹೊಡೆಯಿರಿ. ಇಂತಹ ಕೆಲಸ ಮಾಡುತ್ತೇವೆ ಎಂದು ತಿಳಿದರೆ, ಮನೆಯಲ್ಲೇ ಮೊದಲು ಹೊಡೆಯುತ್ತಾರೆ. ಈ ವಿಚಾರದಲ್ಲಿ ನನ್ನದೇನೂ ತಪ್ಪಿಲ್ಲ. ನಾವು ಯಾವುದೇ ದೇಶ ವಿರೋಧಿ ಚಟುವಟಿಕೆ ಮಾಡಲ್ಲ. ನಾನು ಹಿಂದೂಪರ ಸಂಘಟನೆಯಲ್ಲಿದ್ದೇನೆ. ಹುಟ್ಟಿನಿಂದಲೂ ಆ ಬುದ್ಧಿ ನಮಗೆ ಬಂದಿಲ್ಲ. ನಾಳೆ ನಿಮ್ಮ ಮಕ್ಕಳು ಕೂಡ ಇದರಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ನೋಡಿಕೊಂಡು ಆರೋಪ ಮಾಡಿ ಎಂದು ಸಾಯಿ ಪ್ರಸಾದ್ ಮನವಿ ಮಾಡಿದ್ದಾರೆ.

ಆನ್ಲೈನ್ ಟ್ರೇಡ್, ಅಪರಿಚಿತರ ಬಳಿ ಹಣ ವ್ಯವಹಾರ ಹುಷಾರ್

ಕೆಲವು ಕ್ರಿಪ್ಟೋ ಕರೆನ್ಸಿ ವ್ಯವಹಾರಗಳು, ಅಪರಿಚಿತರ ಬಳಿ ಹಣ ಹಾಕಿಸುವ ಪ್ರಕ್ರಿಯೆ ಬಗ್ಗೆ ಎಚ್ಚರ ಇರಲಿ. ಇಲ್ಲವಾದಲ್ಲಿ ಹೀಗೆ ಅನವಶ್ಯಕವಾಗಿ ವಿಚಾರಣೆ, ತನಿಖೆ ಎದುರಿಸಬೇಕಾಗುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.