ಮಂಗಳೂರು/ ಶಿವಮೊಗ್ಗ: ದಿ ಸೆಂಟ್ರಲ್ ಅರೆಕಾನಟ್ ಆ್ಯಂಡ್ ಕೋಕೋ ಮಾರ್ಕೆಟಿಂಗ್ ಆ್ಯಂಡ್ ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೊ) ಅಡಿಕೆ ಬೆಳೆಗಾರರಲ್ಲಿ ಪ್ರಮುಖ ವಿನಂತಿ ಮಾಡಿಕೊಂಡಿದೆ.
ಅಡಿಕೆ ಸಂಸ್ಕರಣೆಯಲ್ಲಿ ಪಾಲಿಸಬೇಕಾದ ಗುಣಮಟ್ಟ ಮಾನದಂಡಗಳನ್ನು ಮನವಿ ಮಾಡಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI) ಹಾಗೂ ವಿವಿಧ ರಾಜ್ಯಗಳ ಆಹಾರ ಮತ್ತು ಔಷಧ ಆಡಳಿತ(FDA) ಅಧಿಕಾರಿಗಳು ಅಡಿಕೆಯ ಗುಣಮಟ್ಟದ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ.
ಖರೀದಿದಾರ ಉದ್ಯಮಗಳು ರಾಶಿ ಇಡಿ ಅಡಿಕೆಯಲ್ಲಿ ಕನಿಷ್ಠ ಶೇ 40ರಷ್ಟು “ಆಪಿ” ಅಂಶವನ್ನು ನಿರೀಕ್ಷಿಸುತ್ತಿವೆ. ಈ ಹಿನ್ನೆಲೆಯಲ್ಲಿ ಬೆಳೆಗಾರರ ಅಡಿಕೆಗೆ ಉತ್ತಮ ಮಾರುಕಟ್ಟೆ ಹಾಗೂ ದರ ದೊರಕುವಂತಾಗಲು ಈ ಕೆಳಗಿನ ಮಾನದಂಡಗಳನ್ನು ತಪ್ಪದೇ ಪಾಲಿಸುವಂತೆ ಕ್ಯಾಂಪ್ಕೊ ಆಡಳಿತ ವಿನಂತಿ ಮಾಡಿದೆ.
ಗುಣಮಟ್ಟ ಹಾಗೂ ಮಾನದಂಡಗಳು ಏನೇನು..?
1. ಅಡಿಕೆ ಬೇಯಿಸಲು ಸಾಂಪ್ರದಾಯಿಕವಾಗಿ ಬಳಸುವ “ಚೊಗರು” ಮಾತ್ರ ಬಳಸಿ.
2. ಬಣ್ಣ ತರಿಸುವ ಉದ್ದೇಶದಿಂದ “ಕಾಚು” ಸೇರಿದಂತೆ ಯಾವುದೇ ಬಣ್ಣಕಾರಕ ವಸ್ತು ಅಥವಾ ರಾಸಾಯನಿಕವನ್ನು ಸೇರಿಸಬೇಡಿ.
3. ಅಡಿಕೆ ಕತ್ತರಿಸಿದಾಗ ಒಳಭಾಗ ಬಿಳಿಯಾಗಿ ಕಾಣದಷ್ಟು ಸರಿಯಾಗಿ ಬೇಯಿಸಿ.
4. ಅಡಿಕೆಯ ತೇವಾಂಶ ಶೇಕಡ 7 ಮೀರದಂತೆ ಸರಿಯಾಗಿ ಒಣಗಿಸಿ.
5. ಕೆಳದರ್ಜೆಯ ಅಡಿಕೆಯನ್ನು ಉತ್ತಮ ಗುಣಮಟ್ಟದ ರಾಶಿ ಇಡಿಯೊಂದಿಗೆ ಬೆರೆಸಬೇಡಿ.
6. ರಾಶಿ ಇಡಿಯಲ್ಲಿ ಕನಿಷ್ಠ ಶೇ 40ರಷ್ಟು ಆಪಿ(ಎಳೆಅಡಿಕೆ/ಚಾಕಲೇಟ್ ಕಟಿಂಗ್) ಅಂಶ ಇರುವಂತೆ ಗುಣಮಟ್ಟ ಕಾಪಾಡಿ. ಇದನ್ನು ಸೂಕ್ತ ಹಂತದ ಕೊಯ್ಲಿನ ಮೂಲಕ ಸಾಧಿಸಬೇಕೇ ಹೊರತು ಬೆರಕೆಯ ಮೂಲಕವಲ್ಲ.
7. ಕಲ್ಲುಗೋಟು ಅಥವಾ ರುಬ್ಬುಗುಂಡು ಅಡಿಕೆಗಳನ್ನು ರಾಶಿ ಇಡಿಯೊಂದಿಗೆ ಬೆರೆಸಬೇಡಿ.
8. ಬೇರೆ ಪ್ರದೇಶದ ಅಡಿಕೆಯನ್ನು ಸ್ಥಳೀಯ ಅಡಿಕೆಯೊಂದಿಗೆ ಬೆರೆಸಬೇಡಿ.
9. ಉತ್ತಮ ರಾಶಿ ಇಡಿ ಅಡಿಕೆಯ ಗಾತ್ರ “ಮಿನ್ನೆ”(18ಮಿ.ಮೀ) ಗಿಂತ ದೊಡ್ಡದಾಗಿಯೂ, “ವಚ್ರಾಸ್/ ಸೇವರ್ಧನ್” (26ಮಿ.ಮೀ) ಗಿಂತ ಚಿಕ್ಕದಾಗಿಯೂ ಇರಲಿ.
10. ಮಿನ್ನೆ ಮತ್ತು ವಚ್ರಾಸ್/ ಸೇವರ್ಧನ್ ಗಾತ್ರದ ಅಡಿಕೆಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಮಾರಾಟಕ್ಕೆ ತನ್ನಿ.
ಗುಣಮಟ್ಟ ಪರಿಶೀಲನೆ ಮಾಡಿಯೇ ಅಡಿಕೆ ಖರೀದಿ!
ಕ್ಯಾಂಪ್ಕೊದಲ್ಲಿ ಅಡಿಕೆ ಖರೀದಿ ಹಾಗೂ ದರ ನಿರ್ಧಾರವು ಗುಣಮಟ್ಟ ಪರಿಶೀಲನೆಗೆ ಒಳಪಟ್ಟಿರುತ್ತದೆ. ಮೇಲಿನ ಮಾನದಂಡಗಳನ್ನು ಪೂರೈಸದ ಅಡಿಕೆಯನ್ನು ಖರೀದಿಸಲು ಅಥವಾ ನಿರ್ದಿಷ್ಟ ದರ ನೀಡಲು ಸಂಸ್ಥೆ ಬದ್ಧವಾಗಿರುವುದಿಲ್ಲ ಎಂದು ಸಂಸ್ಥೆ ಹೇಳಿದೆ.







