ಕೊಪ್ಪ: ದಾರಿಯಲ್ಲಿ ಸಿಕ್ಕಂತಹ ನಗದು ಹಣವನ್ನು ಆಟೋ ಚಾಲಕರೊಬ್ಬರು ಪ್ರಾಮಾಣಿಕವಾಗಿ ಹಿಂತಿರುಗಿಸಿದ ಘಟನೆ ಸೋಮವಾರದಂದು ನಡೆದಿದೆ. ಆಟೋ ಚಾಲಕರಿಗೆ ಭಾನುವಾರದಂದು ದಾರಿಯಲ್ಲಿ 9,120 ರೂಪಾಯಿ ನಗದು ಹಣ ದೊರೆತಿದೆ. ಬಳಿಕ ಅದು ಯಾರ ಹಣವೆಂದು ಪತ್ತೆ ಹಚ್ಚುವ ಪ್ರಯತ್ನ ನಡೆಸಿದ್ದಾರೆ. ಆಗ ಆ ಹಣವು ಕೃಷ್ಣಮೂರ್ತಿ ತಲಮಕ್ಕಿ ಎನ್ನುವವರಿಗೆ ಸೇರಿದ್ದು ಎನ್ನುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಯು.ಪಿ.ವಿಜಯ್ ಕುಮಾರ್, ಸದಸ್ಯರಾದ ರವಿಶೆಟ್ಟಿ ಅವರು ಸೋಮವಾರದಂದು ಕೊಪ್ಪ ಠಾಣೆಯ ಎಎಸ್ಐ ಮಹೇಶ್, ಗುರುಮೂರ್ತಿ ಅವರ ಸಮ್ಮುಖದಲ್ಲಿ ವಾರಸುದಾರರಿಗೆ ಹಣವನ್ನು ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
•ಶಿವಮೊಗ್ಗ: ಬಸ್ ನ ಚಕ್ರದಲ್ಲಿ ಇತ್ತು ಕೆರೆಹಾವು!
ಶಿವಮೊಗ್ಗ: ಸಾಮಾನ್ಯವಾಗಿ ನಾವು ಹಾವುಗಳು ಶೂನಲ್ಲಿ, ಬ್ಯಾಗ್ ನಲ್ಲಿ, ಕಾರು, ಬೈಕ್ ಗಳಲ್ಲಿ ಕಂಡುಬಂದಿರುವ ಕುರಿತು ಕೇಳಿದ್ದೇವೆ. ಆದರೆ ಶಿವಮೊಗ್ಗದಲ್ಲಿ ಬಸ್ ನ ಚಕ್ರವೊಂದರಲ್ಲಿ ಅಡಗಿ ಕುಳಿತಿರುವ ಘಟನೆ ನಡೆದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋದಲ್ಲಿ ನಿಲ್ಲಿಸಿದ್ದ ಬಸ್ ಒಂದರಲ್ಲಿ ವಿಷರಹಿತ ಕೆರೆಹಾವೊಂದು ಬಸ್ ಒಂದರ ಚಕ್ರದಲ್ಲಿ ಅಡಗಿ ಕುಳಿತಿದ್ದು, ಸಿಬ್ಬಂದಿಗಳು ಚಕ್ರವನ್ನು ಪರಿಶೀಲಿಸಲು ಬಂದ ಸಂದರ್ಭದಲ್ಲಿ ಇದು ಪತ್ತೆಯಾಗಿದೆ. ತಕ್ಷಣ ಸಿಬ್ಬಂದಿಗಳು ಉರಗ ತಜ್ಞ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಅವರು ಸತತವಾಗಿ ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ಹೊರಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಹಾವು ಕಿರಣ್ ಅವರಿಗೆ ಕಚ್ಚಲು ಪ್ರಯತ್ನಿಸಿದ್ದು, ಕಿರಣ್ ಅವರು ಅದರಿಂದ ತಪ್ಪಿಸಿಕೊಂಡು ಹಾವನ್ನು ಸುರಕ್ಷಿತವಾಗಿ ಹೊರಗೆ ತಂದಿದ್ದಾರೆ.
•ಸಾಗರ: ಮಾರಕಾಸ್ತ್ರ ತೋರಿಸಿ ಕೊಟ್ಟಿಗೆಯಲ್ಲಿದ್ದ ಹಸು ಕದ್ದೊಯ್ದ ಖದೀಮರು
ಸಾಗರ: ನಾಲ್ವರು ದುಷ್ಕರ್ಮಿಗಳು ಕಾರಿನಲ್ಲಿ ಆಗಮಿಸಿ ಗಿಡ್ಡ ತಳಿಯ ಹಸುವನ್ನು ಕದ್ದೊಯ್ದ ಘಟನೆ, ಹೊಸೂರು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿಯಾದ ವನಜಾಕ್ಷಿ ಎನ್ನುವವರು ಗಿಡ್ಡ ತಳಿಯ ಹಸುವನ್ನು ಸಾಕಿದ್ದು, ಕಳೆದೆರಡು ದಿನಗಳ ಹಿಂದೆ ರಾತ್ರಿಯ ಹೊತ್ತಿಗೆ ಬಿಳಿ ಬಣ್ಣದ ಕಾರಿನಲ್ಲಿ ಆಗಮಿಸಿದ ನಾಲ್ವರು ದುರುಳರು, ಕಾರನ್ನು ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದಾರೆ. ಆಗ ನಾಯಿಯು ಕೂಗಿದ ಸದ್ದು ಕೇಳಿ ಮನೆಯವರು ಹೊರಗೆ ಬಂದಾಗ ಇಬ್ಬರು ಆರೋಪಿಗಳು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ನಿಂತಿದ್ದರು ಎನ್ನಲಾಗಿದೆ. ಉಳಿದ ಇಬ್ಬರು ಆರೋಪಿಗಳು ಕೊಟ್ಟಿಗೆಯ ಸಮೀಪಕ್ಕೆ ತೆರಳಿ ಹಗ್ಗದಿಂದ ಕಟ್ಟಿ ಹಾಕಿದ್ದ ಗಿಡ್ಡ ತಳಿಯ ಹಸುವನ್ನು ಎತ್ತಿಕೊಂಡು ಬಂದು ಕಾರಿನ ಢಿಕ್ಕಿಯಲ್ಲಿ ಹಾಕಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಬಳಿಕ ನಾಲ್ವರು ಆರೋಪಿಗಳು ಕಾರಿನಲ್ಲಿ ಆವಿನಹಳ್ಳಿಯತ್ತ ತೆರಳಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಮನೆಯವರ ಕೂಗಾಟ ಕೇಳಿ ಅಕ್ಕಪಕ್ಕದ ಮನೆಯವರು ಆಗಮಿಸಿದ್ದು, ಆರೋಪಿಗಳು ಅಷ್ಟರಲ್ಲಾಗಲೇ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ವನಜಾಕ್ಷಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಸುಮಾರು 45.000 ಮೌಲ್ಯದ ಹಸು ಕಳುವಾಗಿದೆ.







