ವೈದ್ಯಕೀಯ ಲೋಕವೇ ಬೆರಗಾಗುವಂತಹ ಘಟನೆಯೊಂದರಲ್ಲಿ ಆಂಧ್ರಪ್ರದೇಶದ 74 ವರ್ಷದ ವೃದ್ಧೆಯೊಬ್ಬರು ಐವಿಎಫ್ (IVF) ತಂತ್ರಜ್ಞಾನದ ನೆರವಿನಿಂದ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಪೂರ್ವ ಗೋದಾವರಿ ಜಿಲ್ಲೆಯ ನೆಲ್ಲಪರ್ತಿಪಡು ಗ್ರಾಮದ ನಿವಾಸಿ ಮಂಗಾಯಮ್ಮ (74) ಹಾಗೂ ಅವರ ಪತಿ ಇ. ರಾಜಾರಾವ್ (82) ಈ ಅಪರೂಪದ ಸಾಧನೆ ಮಾಡಿದ ದಂಪತಿ. 1962ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಮದುವೆಯಾಗಿ 57 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಸಮಾಜದ ನಿಂದನೆಗಳನ್ನು ಮೆಟ್ಟಿ ನಿಂತು ಕೊನೆಗೂ ತಾಯ್ತನದ ಕನಸು ನನಸು ಮಾಡಿಕೊಂಡಿದ್ದಾರೆ. ಗುಂಟೂರಿನ ಅಹಲ್ಯಾ ನರ್ಸಿಂಗ್ ಹೋಮ್ನಲ್ಲಿ ಡಾ. ಉಮಾಶಂಕರ್ ಅವರ ನೇತೃತ್ವದ ವೈದ್ಯರ ತಂಡವು ಇವರಿಗೆ ಐವಿಎಫ್ ಚಿಕಿತ್ಸೆ ನೀಡಿತ್ತು. ವಯಸ್ಸಿನ ಕಾರಣದಿಂದಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದ್ದು, ತಾಯಿ ಮತ್ತು ಇಬ್ಬರೂ ನವಜಾತ ಶಿಶುಗಳು ಸಂಪೂರ್ಣ ಆರೋಗ್ಯವಾಗಿದ್ದಾರೆ.
ಈ ಹಿಂದೆ 2016ರಲ್ಲಿ ಪಂಜಾಬ್ನ 72 ವರ್ಷದ ದಲ್ಜಿಂದರ್ ಕೌರ್ ಎಂಬುವವರು ಮಗುವಿಗೆ ಜನ್ಮ ನೀಡಿದ್ದು ದಾಖಲೆಯಾಗಿತ್ತು. ಈಗ 74ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಮಂಗಾಯಮ್ಮ ಅವರು ಜಗತ್ತಿನ ಅತ್ಯಂತ ಹಿರಿಯ ವಯಸ್ಸಿನ ತಾಯಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.







