Categories
Uncategorized

ಬೆಳ್ತಂಗಡಿ: ಕೃಷಿ ತೋಟದ ಬಳಿ ಅಸ್ಥಿಪಂಜರ ಪತ್ತೆ: ತನಿಖೆ ಶುರು •ಕುಂದಾಪುರ: ನಿಧಾನ ಮಾತನಾಡಿ ಎಂದಿದ್ದಕ್ಕೆ ಬಾಟಲಿಯಿಂದ ಹಲ್ಲೆ •ಬ್ರಹ್ಮಾವರ: ನಡುರಸ್ತೆಯಲ್ಲಿ ತಾಯಿಯನ್ನು ಬಿಟ್ಟುಹೋದ ಪಾಪಿ ಮಗ •ಮಂಗಳೂರು: ಡ್ರಗ್ಸ್ ಜಾಲ ಪತ್ತೆ; ಮೂವರ ಬಂಧನ

ಬೆಳ್ತಂಗಡಿ: ಅಪರಿಚಿತ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ, ಸೋಮವಾರದಂದು ಬಳಂಜ ಗ್ರಾಮದ ನಾಲ್ಕೂರು ಸಮೀಪದ ಪಾಡಿ ಎನ್ನುವಲ್ಲಿ ನಡೆದಿದೆ. ಮನುಷ್ಯನ ತಲೆಬುರುಡೆಯ ಜೊತೆಗೆ, ಎಲುಬುಗಳು ಮತ್ತು ವಸ್ತ್ರಸಹಿತವಾಗಿ ಅಸ್ಥಿಪಂಜರ ಕಂಡುಬಂದಿದೆ ಎನ್ನುವ ಮಾಹಿತಿ ಲಭಿಸಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವೇಣೂರು ಠಾಣೆಯ ಪೊಲೀಸರು ಮತ್ತು ಎಫ್ಎಸ್ಎಲ್ ತಂಡ ಪರಿಶೀಲನೆಯನ್ನು ನಡೆಸಿದ್ದು, ಹೆಚ್ಚಿನ ಮಾಹಿತಿಗಾಗಿ ತೀವ್ರ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.

•ಕುಂದಾಪುರ: ನಿಧಾನ ಮಾತನಾಡಿ ಎಂದಿದ್ದಕ್ಕೆ ಬಾಟಲಿನಿಂದ ಹಲ್ಲೆ

ಕುಂದಾಪುರ: ಮೆಲ್ಲಗೆ ಮಾತನಾಡಿ ಎಂದು ಹೇಳಿದ್ದಕ್ಕೆ, ಆ ವ್ಯಕ್ತಿಯ ಮೇಲೆ ಗಾಜಿನ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ, ಬಗ್ವಾಡಿ ತಿರುವಿನ ಬಳಿಯಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ನಡೆದಿದೆ. ಪರಿಣಾಮವಾಗಿ ದೇವಲ್ಕುಂದ ನಿವಾಸಿ ದಿನೇಶ್ ಲೂಯಿಸ್ ಎನ್ನುವವರು ಗಾಯಗೊಂಡಿದ್ದು, ತಕ್ಷಣ ಅವರನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ ಎನ್ನಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಆರೋಪಿಗಳನ್ನು ಸಚಿನ್, ರಜತ್, ಶ್ರೀಕಾಂತ್ ಶೆಟ್ಟಿ ಮತ್ತು ಮಂಜು ಶೆಟ್ಟಿ ಎಂದು ಗುರುತಿಸಲಾಗಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಬ್ರಹ್ಮಾವರ: ನಡುರಸ್ತೆಯಲ್ಲಿ ತಾಯಿ ಬಿಟ್ಟು ಹೋದ ಪಾಪಿ ಮಗ!

ಬ್ರಹ್ಮಾವರ: ಪುರುಷನೊಬ್ಬ ತನ್ನ ಹೆತ್ತತಾಯಿಯನ್ನು ನಡುರಸ್ತೆಯಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆಯೊಂದು ಎಸ್ಎಂಎಸ್ ಆಂಗ್ಲ ಮಾಧ್ಯಮ ಶಾಲೆಯ ಸಮೀಪದಲ್ಲಿ ನಡೆದಿದೆ. ವೃದ್ಧೆಯು ಏನೂ ಮಾಡಲೂ ತೋಚದೆ ಚಡಪಡಿಸುತ್ತಿದ್ದ ಸಂದರ್ಭದಲ್ಲಿ ಶಾಲಾ ವಾಹನದ ಚಾಲಕರಾದ ರಾಮನಾಥ ಶೆಣೈ ಎನ್ನುವವರು ಇದನ್ನು ಗಮನಿಸಿ ವೃದ್ಧೆಯನ್ನು ವಿಚಾರಿಸಿದ್ದಾರೆ ಎನ್ನಲಾಗಿದೆ. ಆಗ ವೃದ್ಧೆಯು ತನ್ನ ಹೆಸರು ಸರಸ್ವತಿ, ತಮಿಳುನಾಡಿನ ತಿರುವಳ್ಳುವೂರು ನಿವಾಸಿಯಾಗಿದ್ದು, ಮಗ ಕಾರಿನಲ್ಲಿ ಕರೆತಂದು ಈ ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ವಿಷಯವನ್ನು ತಿಳಿದುಕೊಂಡ ಬಳಿಕ ರಾಮನಾಥ ಶೆಣೈ ಅವರು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ನಿತ್ಯಾನಂದ ಒಳಕಾಡು ಅವರು 112 ತುರ್ತು ಪೊಲೀಸ್ ಸಹಾಯವಾಣಿಯ ಸಿಬ್ಬಂದಿಯ ಸಹಕಾರದೊಂದಿಗೆ ವೃದ್ಧೆಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಬಳಿಕ ನಿತ್ಯಾನಂದ ಒಳಕಾಡು ಅವರು ಮಹಿಳಾ ಪೊಲೀಸ್ ಠಾಣೆ ಮತ್ತು ಹಿರಿಯ ನಾಗರಿಕ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ, ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

•ಮಂಗಳೂರು: ಡ್ರಗ್ಸ್ ಜಾಲ ಪತ್ತೆ; ಮೂವರ ಬಂಧನ

ಮಂಗಳೂರು: ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಅನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ ಘಟನೆ ಕಳೆದೆರಡು ದಿನಗಳ ಹಿಂದೆ ನಡೆದಿದೆ. ಆರೋಪಿಗಳು ಬೆಂಗಳೂರಿನಿಂದ ನಿಷೇಧಿತ ಎಂಡಿಎಂಎ ಅನ್ನು ಖರೀದಿಸಿ, ಮಂಗಳೂರಿಗೆ ತಂದು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗಳ ತಂಡವು ಕಳೆದೆರಡು ದಿನಗಳ ಹಿಂದೆ ಉಳ್ಳಾಲದ ಮುಡಿಪು ಕಾಯರ್ ಗೋಳಿ ಎನ್ನುವಲ್ಲಿ ಕಾರ್ಯಾಚರಣೆಯನ್ನು ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.‌ ಆರೋಪಿಗಳನ್ನು ನವಾಜ್ ಅಲಿಯಾಸ್ ನವ್ವಾ, ಮೊಹಮ್ಮದ್ ಆರೀಫ್ ಮತ್ತು ಲಾಯ್ಡ ಡಿಸೋಜಾ ಎಂದು ಗುರುತಿಸಲಾಗಿದೆ. ಕಾರ್ಯಾಚರಣೆಯ ಬಳಿಕ 240ಗ್ರಾಂ ತೂಕದ ಸುಮಾರು 24ಲಕ್ಷ ರೂಪಾಯಿಗಳಷ್ಟು ಬೆಲೆಬಾಳುವ ಎಂಡಿಎಂಎ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಳಿದ ಆರೋಪಿಗಳ ಪತ್ತೆಗಾಗಿ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.