ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಕನ್ನಡವೇ ಪ್ರಧಾನವಾಗಿದ್ದು, ಅಲ್ಲಿನ ನಿವಾಸಿಗಳು ಅನಕ್ಷರಸ್ಥರು, ರೈತರು, ಕೃಷಿ ಕಾರ್ಮಿಕರೇ ಆಗಿದ್ದಾರೆ. ಆದರೆ ಇದೀಗ ಅನೇಕ ರಾಷ್ಟ್ರೀಯ ಬ್ಯಾಂಕ್ ಸಿಬ್ಬಂದಿಗಳು ಕನ್ನಡೇತರರಾಗಿರುವುದರಿಂದ ಸ್ಥಳೀಯರು ತಮ್ಮ ಬ್ಯಾಂಕ್ ಕೆಲಸಗಳನ್ನು ಮಾಡಿಕೊಳ್ಳಲು ಪರದಾಡುವಂತಾಗಿದೆ.
ಸಾಮಾನ್ಯ ಜನರಿಗೆ ಅನುಕೂಲವಾಗಲೆಂದು ಗ್ರಾಮೀಣ ಭಾಗಗಳಲ್ಲಿ ಬ್ಯಾಂಕ್ ಗಳನ್ನು ತೆರೆಯಲಾಗಿದ್ದು, ಇತರೆ ರಾಷ್ಟ್ರೀಯ ಬ್ಯಾಂಕ್ ಗಳಿಗೆ ಹೋಲಿಸಿದರೆ ಹಳ್ಳಿಗಾಡಿನ ಜನರಿಗೆ ಗ್ರಾಮೀಣ ಬ್ಯಾಂಕ್ ಗಳ ಸೇವೆಯಿಂದ ಹೆಚ್ಚು ಪ್ರಯೋಜನವಾಗಿದೆ. ಆದರೆ ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿಗೆ ಕನ್ನಡ ಬರಲ್ಲ, ಜನರಿಗೆ ಕನ್ನಡ ಬಿಟ್ಟು ಬೇರೆ ಬರಲ್ಲ. ಆದ್ದರಿಂದ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಕೂಡಲೇ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ನಿಯಮ ಮಾಡಿ ಆಯಾ ರಾಜ್ಯದಲ್ಲಿ ಆಯಾ ರಾಜ್ಯದ ಭಾಷೆ ಬರುವ ಸಿಬ್ಬಂದಿ ನೇಮಕಾತಿ ಮಾಡಿದಲ್ಲಿ ಬ್ಯಾಂಕಿಗೂ ಒಳ್ಳೆಯದು… ಗ್ರಾಹಕರಿಗೂ ಕೂಡ ಒಳ್ಳೆಯದು ಎಂಬ ಅಗ್ರಹ ಜನರಿಂದ ವ್ಯಕ್ತವಾಗಿದೆ.
ಬ್ಯಾಂಕ್ ವಿಲೀನವಾಗಿದ್ದೆ ದೊಡ್ಡ ಸಮಸ್ಯೆ!
ಬರೆಯಲು ಬಾರದ ಅನಕ್ಷರಸ್ಥರಿಗೆ ಸ್ವತಃ ಬ್ಯಾಂಕ್ ಸಿಬ್ಬಂದಿಗಳೇ ಸಹಾಯ ಮಾಡುವುದು, ಸ್ವಲ್ಪ ಹೆಚ್ಚು ಕಡಿಮೆಯಾದರೂ ತಾಳ್ಮೆಗೆಡದೆ ಕಾಗದ ಪತ್ರಗಳನ್ನು ಸರಿಪಡಿಸಿಕೊಳ್ಳಲು ಸಲಹೆ ನೀಡುವುದು ಮಾಡುತ್ತಿದ್ದರು. ಆದರೆ, ಗ್ರಾಮೀಣ ಬ್ಯಾಂಕ್ ಗಳನ್ನೆಲ್ಲ ವಿಲೀನಗೊಳಿಸಿದರ ಪರಿಣಾಮವಾಗಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಾತ್ರ ಅಸ್ತಿತ್ವದಲ್ಲಿದೆ. ಹೀಗಾಗಿ ಈ ಬ್ಯಾಂಕ್ ಗೆ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ದೇಶದ ಯಾವುದೇ ರಾಜ್ಯದ ಶಾಖೆಗಳಿಂದ ವರ್ಗಾಯಿಸಬಹುದು ಎನ್ನುವ ನಿಯಮ ಜಾರಿಗೆ ಬಂದಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ.
ಕನ್ನಡ ಬರಲ್ಲ.. ಹೇಳೋಕೆ ಆಗಲ್ಲ…!
ಹಳ್ಳಿಗಳ ಬ್ಯಾಂಕಿಗೆ ವರ್ಗವಾಗಿ ಬಂದಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕನ್ನಡದಲ್ಲಿ ವ್ಯವಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಗ್ರಾಹಕರು ತಮ್ಮ ಬ್ಯಾಂಕ್ ಸೇವೆಗಳನ್ನು ಪಡೆಯಲು ಸಂವಹನದ ಅಡಚಣೆಯಿಂದಾಗಿ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ದನಿ ಎತ್ತಬೇಕು ಕನ್ನಡ ಪರ ಸಂಘಟನೆಗಳು!
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಬಸನಗೌಡ ಪೊಲೀಸ ಪಾಟೀಲ ಮಾತನಾಡಿ, “ಕರ್ನಾಟಕದ ಹೆಸರಿನ ಬ್ಯಾಂಕ್ ಗಳಲ್ಲಿ ಕನ್ನಡ ಬಲ್ಲ ಅಧಿಕಾರಿಗಳೇ ಇಲ್ಲವೆಂದರೆ ಹೇಗೆ? ಈ ಸಮಸ್ಯೆಯನ್ನು ಸರಿಪಡಿಸಲು ಆಡಳಿತ ಮಂಡಳಿ ತಕ್ಷಣ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಎಲ್ಲಾ ಬ್ಯಾಂಕುಗಳ ಕೇಂದ್ರ ಕಛೇರಿಯ ಬಳಿ ಪ್ರತಿಭಟನೆಯನ್ನು ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಜನ.. ತೊಂದರೆಗೊಳಗಾದವರು ಹೇಳೋದು ಏನು?
ಬ್ಯಾಂಕುಗಳ ಶಾಖೆಗಳಲ್ಲಿ ಕನ್ನಡಬಾರದ ಅಧಿಕಾರಿಗಳಿದ್ದರೆ, ನಾವು ಹೇಳಿದ್ದು ಅವರಿಗೆ ಗೊತ್ತಾಗುವುದಿಲ್ಲ. ಅವರ ಮಾತು ನಮಗೆ ಅರ್ಥವಾಗುವುದಿಲ್ಲ. ಇದರಿಂದಾಗಿ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಕನ್ನಡಬಾರದ ಸಿಬ್ಬಂದಿಗಳಿಂದಾಗಿ ಗ್ರಾಹಕರು ಮತ್ತು ಅಧಿಕಾರಿ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹೀಗಾಗಿ ಕೇವಲ ಕರ್ನಾಟಕ ಮೂಲದವರನ್ನು ಮಾತ್ರ ರಾಜ್ಯದ ಶಾಖೆಗಳಿಗೆ ನೇಮಿಸುವ ನಿಟ್ಟಿನಲ್ಲಿ ವರ್ಗಾವಣೆ ನೀತಿಯನ್ನು ಬದಲಾಯಿಸಬೇಕು, ಇಲ್ಲವೆಂದಾದರೆ ಇತರೆ ಭಾಗಗಳಿಂದ ವರ್ಗವಾಗಿ ಕರ್ನಾಟಕಕ್ಕೆ ಆಗಮಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕನ್ನಡ ಕಲಿಯುವುದನ್ನು ಕಡ್ಡಾಯಗೊಳಿಸಬೇಕು. ಬ್ಯಾಂಕ್ ಆಡಳಿತ ಮಂಡಳಿ ಈ ಬಗ್ಗೆ ತಕ್ಷಣ ಗಮನಿಸಬೇಕು ಎಂಬುದು ಕೋಟಿ ಕೋಟಿ ಕನ್ನಡಿಗರ ಅಗ್ರಹ.







