ಬೆಂಗಳೂರು/ನವದೆಹಲಿ: ಸೆಪ್ಟೆಂಬರ್ 28ರ ಸೋಮವಾರದಿಂದ ಸೆಪ್ಟೆಂಬರ್ 30ರ ಬುಧವಾರದವರೆಗೆ ಮೂರು ದಿನಗಳ ಕಾಲ ಬ್ಯಾಂಕ್ ಮುಷ್ಕರ ನಡೆಯಲಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರದಂದು ಕೂಡ ಬ್ಯಾಂಕ್ ಕಾರ್ಯನಿರ್ವಹಣೆ ಮಾಡಿತು. ಆದರೆ, ಇದೀಗ ಬಂದ ಮಾಹಿತಿಯ ಪ್ರಕಾರ ಸೆಪ್ಟೆಂಬರ್ 28ರ ಸೋಮವಾರದಿಂದ ಪ್ರಾರಂಭಗೊಳ್ಳಬೇಕಿದ್ದ ಬ್ಯಾಂಕ್ ಮುಷ್ಕರವು ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ.
ಭಾರತೀಯ ಬ್ಯಾಂಕ್ ಗಳ ಸಂಘ ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನಡುವೆ ಮಹತ್ವಪೂರ್ಣವಾದ ಮಾತುಕತೆ ನಡೆದಿದ್ದು, ಅದು ಯಶಸ್ವಿಗೊಂಡ ಹಿನ್ನೆಲೆಯಲ್ಲಿ, ಅಂದರೆ ಮಾತುಕತೆಯಿಂದ ಬ್ಯಾಂಕ್ ನೌಕರರಿಗೆ ಸಕಾರಾತ್ಮಕ ಫಲಿತಾಂಶ ದೊರೆತಿರುವ ಪರಿಣಾಮವಾಗಿ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಸೋಮವಾರದಿಂದ ಎಲ್ಲಾ ಬ್ಯಾಂಕ್ ಶಾಖೆಗಳು ಮತ್ತು ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ದೇಶದ ಮತ್ತು ರಾಜ್ಯದ ವಿವಿಧ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಅಧಿಕೃತ ಮಾಹಿತಿಯನ್ನು ನೀಡಿದೆ. ಹೀಗಾಗಿ ಗ್ರಾಹಕರು ತಮ್ಮ ಬ್ಯಾಂಕ್ ಕೆಲಸಗಳನ್ನು ಮಾಡಿಕೊಳ್ಳಲು ಶಾಖೆಗಳಿಗೆ ಭೇಟಿ ನೀಡಲು ಯಾವುದೇ ರೀತಿಯ ಸಮಸ್ಯೆ ಇಲ್ಲ.







