ದಸರಾ ರಜೆ ವಿಸ್ತರಣೆ!
* ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಮಾತ್ರ ರಜೆ ವಿಸ್ತರಣೆ
* ಶಿಕ್ಷಕರ ಒತ್ತಾಯದ ಮೇರೆಗೆ ನಿರ್ಧಾರ: ದೀಪಾವಳಿ ನಂತರ ಶಾಲೆ ಶುರು
NAMMMUR EXPRESS NEWS
ಬೆಂಗಳೂರು: ಜಾತಿ ಗಣತಿ ದಿನಾಂಕ ವಿಸ್ತರಣೆಯಾದ ಹಿನ್ನೆಲೆ ಕರ್ನಾಟಕ ಸರ್ಕಾರವು ಶಾಲೆಗಳ ದಸರಾ ರಜೆಯನ್ನು ವಿಸ್ತರಣೆ ಮಾಡಿದೆ. ಈ ಮೂಲಕ ಅಕ್ಟೋಬರ್ 7 ಕ್ಕೆ ಮುಕ್ತಾಯವಾಗಬೇಕಿದ್ದ ರಜೆ ಅಕ್ಟೋಬರ್ 18ವರೆಗೂ ವಿಸ್ತರಣೆಯಾಗಿದೆ. ಇನ್ನು ಶಾಲೆಗಳು ಪುನರಾರಂಭವಾಗುವುದು ಅಕ್ಟೋಬರ್ 23 ರಿಂದ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಜಾತಿ ಗಣತಿ ಸಮೀಕ್ಷೆ ಕಾರ್ಯವನ್ನು ಶಿಕ್ಷಕರು ಕೈಗೊಂಡಿದ್ದಾರೆ. ನಿಗದಿತ ಕಾಲಾವಧಿಯಲ್ಲಿ ಜಾತಿ ಗಣತಿ ಕಾರ್ಯ ಪೂರ್ಣಗೊಂಡಿಲ್ಲ. ಗಣತಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಹೀಗಾಗಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ದಸರಾ ರಜೆಯನ್ನು ವಿಸ್ತರಣೆ ಮಾಡಲಾಗಿದೆ ಎಂದಿದ್ದಾರೆ.
* ಶಿಕ್ಷಕರ ಒತ್ತಾಯದ ಮೇರೆಗೆ ರಜೆ ವಿಸ್ತರಣೆ – ಸಿ ಎಂ
ದಸರಾ ರಜೆ ವಿಸ್ತರಣೆ ಮಾಡುವ ಬಗ್ಗೆ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿದ್ದರು. ಜತೆಗೆ ರಜಾ ಅವಧಿಯನ್ನು ಮುಂದಿನ ದಿನಗಳಲ್ಲಿ ಹೆಚ್ಚುವರಿ ತರಗತಿಯನ್ನು ನಡೆಸಿ ಸರಿದೂಗಿಸಲಾಗುವುದು ಎಂದು ಭರವಸೆ ನೀಡಿದ್ದರು. ಈ ಹಿನ್ನೆಲೆ ರಜೆ ವಿಸ್ತರಣೆಗೆ ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
* ದೀಪಾವಳಿ ಬಳಿಕವೇ ಸರ್ಕಾರಿ ಶಾಲೆಗಳು ರೀಓಪನ್
ಕರ್ನಾಟಕದಲ್ಲಿ ದಸರಾ ರಜೆಯು ಸೆಪ್ಟೆಂಬರ್ 22 ರಂದು ಆರಂಭವಾಗಿತ್ತು. ಅಕ್ಟೋಬರ್ 7 ಕ್ಕೆ ಮುಕ್ತಾಯವಾಗಬೇಕಿತ್ತು. ಸದ್ಯ ಸರ್ಕಾರ ಅಕ್ಟೋಬರ್ 18 ವರೆಗೂ ರಜೆ ವಿಸ್ತರಣೆ ಮಾಡಿದೆ. ಅಕ್ಟೋಬರ್ 19 ಭಾನುವಾರವಾಗಿದ್ದು, ಅಕ್ಟೋಬರ್ 20 ಹಾಗೂ 22 ಕ್ಕೆ ದೀಪಾವಳಿ ರಜೆ ಇರುವುದರಿಂದ ಶಾಲೆಗಳು ಬಹುತೇಕ ಹಬ್ಬಗಳು ಮುಗಿದ ಬಳಿಕವೇ ಆರಂಭವಾಗಲಿವೆ.
ದಸರಾ ರಜೆ ವಿಸ್ತರಣೆಯು ಕೇವಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಾತ್ರ ಅನ್ವಯವಾಗಲಿದ್ದು, ಖಾಸಗಿ ಶಾಲೆಗಳು ಆಯಾ ಸಂಸ್ಥೆಗಳ ಸೂಚನೆಯಂತೆ ನಡೆಯಲಿವೆ.