Categories
ತೀರ್ಥಹಳ್ಳಿ

ಮೇಗರವಳ್ಳಿ ಸೊಸೈಟಿಗೆ ಪ್ರಮೋದ್ ಹೆಗ್ಡೆ ಸಾರಥಿ!

ಮೇಗರವಳ್ಳಿ ಸೊಸೈಟಿಗೆ ಪ್ರಮೋದ್ ಹೆಗ್ಡೆ ಸಾರಥಿ!
– ಉಪಾಧ್ಯಕ್ಷರಾಗಿ ಪಣತ ಮಹೇಶ್ ಅವಿರೋಧ ಆಯ್ಕೆ
– ನೂತನ ಪದಾಧಿಕಾರಿಗಳು, ಸದಸ್ಯರಿಗೆ ಅಭಿನಂದನೆಗಳು

NAMMUR EXPRESS NEWS
ತೀರ್ಥಹಳ್ಳಿ: ಮೇಗರವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ನೂತನ ಅಧ್ಯಕ್ಷರಾಗಿ ಹಿರಿಯ ಸಹಕಾರಿ, ಎಂ ಆರ್ ಪ್ರಮೋದ್ ಹೆಗ್ಡೆ, ಉಪಾಧ್ಯಕ್ಷರಾಗಿ ಪಣತ ಮಹೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 2023-24 ರಿಂದ 2027-28ನೇ ಸಾಲಿಗೆ ನೂತನ ನಿರ್ದೇಶಕರಾಗಿ, ಎಂ ಆರ್ ಪ್ರಮೋದ್ ಹೆಗ್ಡೆ ಮೇಗರವಳ್ಳಿ, ಪಣತ ಮಹೇಶ್, ರತ್ನಾಕರ್ ಭಟ್, ಸತ್ಯನಾರಾಯಣ ದೋಗ್ರ, ಪಟೇಲ್ ವೆಂಕಟೇಶ್ ಹೆಗಡೆ, ಚಿಪ್ಪಿನಕೊಡಿಗೆ ವೆಂಕಟೇಶ್, ವಸುಪಾಲ್ ಕೊರೋಡಿ, ನವೀನ್ ಎಂ ವೈ ( ನಂದ ಹೆಗ್ಡೆ ), ಗೀತಾ ಎಸ್,ವೈ ಆಂದಿನಿ, ಮಂಜುಳ ಕೆ ಆರ್ ಮಳವಾಡಿ, ಮಹಾಬಲ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾ ಕಾರ್ಯಕ್ಕೆ ಸಹಕಾರ ನೀಡಿದ ಅಧ್ಯಕ್ಷರು_ ಉಪಾಧ್ಯಕ್ಷರು, ಎಲ್ಲಾ ನಿರ್ದೇಶಕರು, ಸಿಬ್ಬಂದಿಗಳಾದ ಪ್ರಭಾರ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ವೆಂಕಟೇಶ್ ಮೇಗರವಳ್ಳಿ, ನಿತಿನ್ ಬಿ ಯು ಗುಡ್ಡೇಕೇರಿ, ಪ್ರಿಯಾಂಕ ಕೋಟೆಗುಡ್ಡೆ, ಜಗದೀಶ್ ವಡೇಗದ್ದೆ ಅವರಿಗೂ ಚುನಾವಣಾಧಿಕಾರಿ ಮಂಜು ಬಾಬು ಹೆಚ್.ಪಿ ಅವರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ರಾಷ್ಟ್ರೀಯ ವಾರ್ತೆ

ಸಾಲಗಾರರೇ ನಿಮಗಿದೋ ಸಿಹಿ ಸುದ್ದಿ!

ಸಾಲಗಾರರೇ ನಿಮಗಿದೋ ಸಿಹಿ ಸುದ್ದಿ!
– ಸಾಲದ ಮೇಲೆ ಹೆಚ್ಚುವರಿ ಬಡ್ಡಿ ವಿಧಿಸುವಂತಿಲ್ಲ
– ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಆರ್ ಬಿಐ
– ಬ್ಯಾಂಕ್ ಸಾಲದ ಬಡ್ಡಿ ನಿಯಮ ಬದಲು: ಏನಿದು?

NAMMUR EXPRESS NEWS
ನವದೆಹಲಿ: ಸಾಲ ಖಾತೆಗಳ ಮೇಲೆ ಬ್ಯಾಂಕ್ ಗಳು ದಂಡ ವಿಧಿಸುವ ಪ್ರಕ್ರಿಯೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಾಲಗಾರರು ಸಾಲ ಪಡೆಯುವ ಸಂದರ್ಭದಲ್ಲಿನ ಷರತ್ತುಗಳನ್ನು ಪಾಲಿಸದ ಸಂದರ್ಭದಲ್ಲಿ ಹಲವು ಬ್ಯಾಂಕ್ ಗಳು ನಿಗದಿತ ಬಡ್ಡಿದರದ ಮೇಲೆ ದಂಡದ ರೂಪದಲ್ಲಿ ಹೆಚ್ಚಿನ ಬಡ್ಡಿ (ಪೆನಲ್ ರೇಟ್ ಆಫ್ ಇಂಟರೆಸ್ಟ್) ವಿಧಿಸೋದನ್ನು ಗಮನಿಸಿರುವ ಆರ್ ಬಿಐ, ಇದರ ತಡೆಗೆ ಈ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಯಾವಾಗ ಜಾರಿ?:

ಹೊಸ ಮಾರ್ಗಸೂಚಿಗಳು 2024ರ ಜನವರಿ 1ರಿಂದ ಜಾರಿಗೆ ಬರಲಿವೆ. ಇದರ ಅನ್ವಯ ಸಾಲ ಒಪ್ಪಂದದಲ್ಲಿನ ನಿಯಮಗಳು ಹಾಗೂ ಷರತ್ತುಗಳನ್ನು ಪಾಲಿಸದ ಸಂದರ್ಭದಲ್ಲಿ ಬ್ಯಾಂಕ್ ಗಳು ದಂಡ ವಿಧಿಸುವಾಗ ಅದನ್ನು ‘ದಂಡ ಶುಲ್ಕ’ ಎಂದು ಪರಿಗಣಿಸಬೇಕೇ ಹೊರತು ‘ದಂಡ ಬಡ್ಡಿ’ಯ ರೂಪದಲ್ಲಿ ವಿಧಿಸುವಂತಿಲ್ಲ. ಅಂದರೆ ಸಾಲದ ಬಡ್ಡಿದರಕ್ಕೆ ಈ ದಂಡ ಬಡ್ಡಿಯನ್ನು ಸೇರಿಸಿ ಸಾಲಗಾರರ ಮೇಲೆ ಹೆಚ್ಚಿನ ಹೊರೆ ವಿಧಿಸುವಂತಿಲ್ಲ ಎಂದು ಆರ್ ಬಿಐ ಈ ಮೂಲಕ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ.

ಸಾಲದ ಬಡ್ಡಿದರದ ಮೇಲೆ ಯಾವುದೇ ಹೆಚ್ಚುವರಿ ಮೊತ್ತವನ್ನು ವಿಧಿಸದೆ ಈ ಮಾರ್ಗಸೂಚಿಗಳನ್ನು ಕಾಗದ ಹಾಗೂ ಅನುಷ್ಠಾನ ಎರಡರಲ್ಲೂ ಪಾಲನೆ ಮಾಡುವಂತೆ ಬ್ಯಾಂಕ್ ಗಳಿಗೆ ಆರ್ ಬಿಐ ಸೂಚಿಸಿದೆ. ಸಾಲಗಳ ಮೇಲೆ ವಿಧಿಸುವ ದಂಡ ಶುಲ್ಕ ಅಥವಾ ಅದೇ ಮಾದರಿಯ ಶುಲ್ಕಗಳಿಗೆ ಸಂಬಂಧಿಸಿ ಬ್ಯಾಂಕ್ ಗಳು ಒಂದು ಮಂಡಳಿಯಿಂದ ಅನುಮೋದಿತಗೊಂಡಿರುವ ನೀತಿಗಳನ್ನು ರೂಪಿಸಿಕೊಂಡು ಅದನ್ನು ಪಾಲಿಸುವಂತೆ ಕೂಡ ಆರ್ ಬಿಐ ಸಲಹೆ ನೀಡಿದೆ.

ಬಡ್ಡಿ ಬೇಡ ಒಮ್ಮೆ ಶುಲ್ಕ ವಿಧಿಸಿ!

ಪ್ರಸ್ತುತ ಬ್ಯಾಂಕ್ ಗಳು ಸಾಲಗಾರರು ಇಎಂಐ ಅನ್ನು ನಿಗದಿತ ಸಮಯಕ್ಕೆ ಸರಿಯಾಗಿ ಪಾವತಿಸಲು ವಿಫಲರಾದ ಸಂದರ್ಭದಲ್ಲಿ ದಂಡ ಬಡ್ಡಿ ವಿಧಿಸುತ್ತವೆ. ಸಾಮಾನ್ಯವಾಗಿ ಶೇ.2ರಷ್ಟು ದಂಡ ಬಡ್ಡಿ ವಿಧಿಸಲಾಗುತ್ತದೆ. ಅಂದರೆ ಈ ದಂಡ ಬಡ್ಡಿಯನ್ನು ಸಾಲದ ಮೇಲಿನಬಡ್ಡಿಗೆ ಸೇರಿಸಲಾಗುತ್ತದೆ. ಉದಾಹರಣೆಗೆ ನಿಮ್ಮ ಸಾಲದ ಬಡ್ಡಿ ತಿಂಗಳಿಗೆ ಶೇ.10ರಷ್ಟಿದ್ದರೆ ಅದರ ಮೇಲೆ ಈ ಹೆಚ್ಚುವರಿ ಶೇ.2ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಆಗ ನಿಮ್ಮ ಸಾಲದ ಒಟ್ಟು ಬಡ್ಡಿದರ ಶೇ.12ರಷ್ಟು ಆಗುತ್ತದೆ. ಇದು ಸಾಲಗಾರರ ಮೇಲಿನ ಬಡ್ಡಿ ಹೊರೆಯನ್ನು ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ಆರ್ ಬಿಐ ದಂಡ ಬಡ್ಡಿ ಬದಲು ದಂಡ ಶುಲ್ಕ ವಿಧಿಸುವಂತೆ ಸೂಚಿಸಿದೆ.

ದಂಡ ಶುಲ್ಕಗಳಿಗೆ ಸಂಬಂಧಿಸಿ ಆರ್ ಬಿಐ ಈ ವರ್ಷದ ಏಪ್ರಿಲ್ ನಲ್ಲಿ ದಂಡ ಶುಲ್ಕಗಳ ಕರಡು ಪ್ರತಿ ರಚಿಸಿತ್ತು. ಇನ್ನು ಆರ್ ಬಿಐ ಹೊಸ ಮಾರ್ಗಸೂಚಿಗಳ ಅನ್ವಯ ವೈಯಕ್ತಿಕ ಸಾಲಗಾರರಿಗೆ ಉದ್ಯಮ ಹೊರತುಪಡಿಸಿ ಇತರ ಉದ್ದೇಶಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ದಂಡ ಶುಲ್ಕ ಸಂಸ್ಥೆಗಳಿಗೆ ವಿಧಿಸುವ ದಂಡ ಶುಲ್ಕಕ್ಕಿಂತ ಜಾಸ್ತಿ ಇರಬಾರದು ಎಂದು ಹೇಳಿದೆ.
ದಂಡ ಶುಲ್ಕದ ಮೊತ್ತ ನ್ಯಾಯಸಮ್ಮತವಾಗಿರಬೇಕು ಹಾಗೂ ಸಾಲ ಒಪ್ಪಂದದ ನಿಯಮಗಳು ಹಾಗೂ ಷರತ್ತುಗಳಿಗೆ ತಕ್ಕದಾಗಿರಬೇಕು. ಇನ್ನು ಈ ಸಂಬಂಧ ಯಾವುದೇ ನಿರ್ದಿಷ್ಟ ಅಥವಾ ಉತ್ಪನ್ನ ವಿಭಾಗಕ್ಕೆ ಸಂಬಂಧಿಸಿ ತಾರತಮ್ಯ ಮಾಡಬಾರದು ಎಂದು ಆರ್ ಬಿಐ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿದೆ. ಇನ್ನು ದಂಡ ಶುಲ್ಕ ಯಾಕೆ ವಿಧಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಬ್ಯಾಂಕ್ ಗಳು ಗ್ರಾಹಕರಿಗೆ ಸಾಲದ ಒಪ್ಪಂದಲ್ಲೇ ತಿಳಿಸಬೇಕು. ಇನ್ನು ಅತ್ಯಂತ ಪ್ರಮುಖವಾದ ನಿಯಮಗಳು ಹಾಗೂ ಷರತ್ತುಗಳು/ ಕೀ ಫ್ಯಾಕ್ಸ್ ಸ್ಟೇಟೆಂಟ್ ಗಳನ್ನು ಬ್ಯಾಂಕ್ ವೆಬ್ ಸೈಟ್ ನಲ್ಲಿ ಬಡ್ಡಿದರ ಹಾಗೂ ಸೇವಾ ಶುಲ್ಕಗಳ ಅಡಿಯಲ್ಲಿ ನಮೂದಿಸಬೇಕು.

ಇನ್ನು ಆರ್ ಬಿಐ ಪ್ರಕಾರ ಇಂಥ ಶುಲ್ಕಗಳನ್ನು ವಿಧಿಸೋದು ಗ್ರಾಹಕರಲ್ಲಿ ಆರ್ಥಿಕ ಶಿಸ್ತು ಮೂಡಿಸಲು ಅಗತ್ಯವಾಗಿದೆ. ಆದರೆ, ಈ ಶುಲ್ಕಗಳನ್ನು ಆದಾಯ ಹೆಚ್ಚಳದ ಸಾಧನವಾಗಿ ಬಳಸಬಾರದು ಎಂದು ಆರ್ ಬಿಐ ತಿಳಿಸಿದೆ. ಆರ್ ಬಿಐ ಹೊಸ ಮಾರ್ಗಸೂಚಿಗಳು ಎಲ್ಲ ವಾಣಿಜ್ಯ ಬ್ಯಾಂಕ್ ಗಳು, ಸಣ್ಣ ಹಣಕಾಸಿನ ಬ್ಯಾಂಕ್ ಗಳು (ಪೇಮೆಂಟ್ ಬ್ಯಾಂಕ್ ಗಳನ್ನು ಹೊರತುಪಡಿಸಿ), ಗೃಹ ಹಣಕಾಸು ಕಂಪನಿಗಳು ಹಾಗೂ ಎಸ್ ಐಡಿಬಿಐ, ಎಕ್ಸಿಂ ಬ್ಯಾಂಕ್ಸ್ ಮುಂತಾದ ಇತರ ಹಣಕಾಸು ಸಂಸ್ಥೆಗಳು ಸೇರಿದಂತೆ ಎನ್ ಬಿಎಫ್ ಸಿಗಳಿಗೆ ಅನ್ವಯಿಸುತ್ತದೆ.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ಕರಾವಳಿ

ನಾಗರಪಂಚಮಿ: ಶಾಲಾ ಕಾಲೇಜಿಗೆ ರಜೆಗೆ ಪಟ್ಟು!

ನಾಗರಪಂಚಮಿ: ಶಾಲಾ ಕಾಲೇಜಿಗೆ ರಜೆಗೆ ಪಟ್ಟು!
– ಕರಾವಳಿಯಲ್ಲಿ ನಾಗರಾಧನೆ ಪ್ರಮುಖ ಹಬ್ಬ
– ಮಾಜಿ ಸಚಿವ ಸುನೀಲ್ ಕುಮಾರ್ ಪಟ್ಟು

NAMMUR EXPRESS NEWS
ಕರಾವಳಿ: ಕರಾವಳಿಯ ಉಭಯ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಜಿಲ್ಲಾಧಿಕಾರಿಗಳಿಗೆ ಮಾಜಿ ಸಚಿವ ಸುನಿಲ್ ಕುಮಾರ್ ಮನವಿ ಮಾಡಿದ್ದಾರೆ. ಉಡುಪಿ ದಕ್ಷಿಣ ಕನ್ನಡ ಉಭಯ ಜಿಲ್ಲೆಗಳಿಗೆ ನಾಡಹಬ್ಬ ನಾಗರ ಪಂಚಮಿ ದಿನ (ಆಗಸ್ಟ್ 21) ಶಾಲಾಕಾಲೇಜು ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಸಾರ್ವತ್ರಿಕ ರಜೆ ಘೋಷಿಸುವಂತೆ ಮಾಜಿ ಶಾಸಕ ಸುನಿಲ್ ಕುಮಾರ್ ಅವರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಶ್ರೀ ಪರಶುರಾಮ ಸೃಷ್ಟಿಯೆಂಬ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಕರಾವಳಿಯಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲ್ಪಡುವ ದೈವ ದೇವರುಗಳ ಆರಾಧನೆಯಲ್ಲಿ ನಾಗಾರಾಧನೆಯ ಪ್ರಮುಖವಾದದು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜನರು ನಾಗರ ಪಂಚಮಿ ದಿನದಂದು ತಮ್ಮ ಕುಟುಂಬಕ್ಕೆ ಸಂಬಂಧಪಟ್ಟ ಮೂಲಸ್ಥಾನದ ನಾಗದೇವರುಗಳಿಗೆ ಹಾಗೂ ದೇವಸ್ಥಾನಗಳಲ್ಲಿ ನಾಗರ ಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಆದ್ದರಿಂದ ಆಗಸ್ಟ್ 21 ಸೋಮವಾರ ನಾಗರಪಂಚಮಿಯ ವಿಶೇಷ ದಿನದಂದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜು ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ 18-08-2023

ಆಸ್ಪತ್ರೆಯಲ್ಲಿ ಮೃತಪಟ್ಟ ಬಾಲಕ ಸ್ಮಶಾನದಲ್ಲಿ ಜೀವಂತ!
– ಧಾರವಾಡ ಜಿಲ್ಲೆಯಲ್ಲಿ ನಡೆಯಿತು ಅಚ್ಚರಿಯ ಘಟನೆ
– ವೈದ್ಯರೇ ಇತ್ತೀಚಿಗೆ ಯಾಮಾರಿಸ್ತಾ ಇದ್ದಾರಾ?
– ಬಾಲಕನ ನದಿಯಲ್ಲಿ ಮುಳುಗಿಸಿ ಕೊಂದವನಿಗೆ ಜೈಲು
– ಪ್ಯಾಕೆಟ್ ಮಾಡಿ ದನದ ಮಾಂಸದ ಹೋಂ ಡೆಲಿವರಿ!

NAMMUR EXPRESS NEWS
ಧಾರವಾಡ: ಅನಾರೋಗ್ಯದಿಂದ ಕಾರಣದಿಂದ ಒಂದೂವರೆ ವರ್ಷದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದ ಬಳಿಕ ಒಂದೂವರೆ ವರ್ಷದ ಮಗುವನ್ನು ಅಂತ್ಯಕ್ರಿಯೆಗೆಂದು ಸ್ಮಶಾನಕ್ಕೆ ತೆಗೆದುಕೊಂಡು ಹೋದಾಗ ಕೈಕಾಲು ಅಲುಗಾಡಿಸಿದ ವಿಚಿತ್ರ ಘಟನೆ ಧಾರವಾಡದಲ್ಲಿ ನಡೆದಿದೆ.
ಬಸವರಾಜ್ ಎಂಬ ಒಂದೂವರೆ ವರ್ಷದ ಮಗು ಮೃತಪಟ್ಟಿದೆ ಎಂದು ಹುಬ್ಬಳ್ಳಿ ಕಿಮ್ಸ್ ವೈದ್ಯರು ತಿಳಿಸಿದ್ದರು. ಅನಾರೋಗ್ಯದ ಕಾರಣ ಆಗಸ್ಟ್ 13 ರಂದು ಮಗುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕ್ಸಿಜನ್ ತೆಗೆದರೆ ಮಗು ಸಾವನ್ನಪ್ಪಬಹುದು ಎಂದು ವೈದ್ಯರು ಹೇಳಿದ್ದರು. ಆದರೆ ಗುರುವಾರ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ ಹಿನ್ನೆಲೆ ಮಗುವಿನ ಪೋಷಕರು ಮಗುವನ್ನು ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿದ್ದಾರೆ. ಅಂತ್ಯಕ್ರಿಯೆ ಮಾಡುವ ಸಂದರ್ಭ ಬಾಯಿಗೆ ನೀರು ಹಾಕಿದ್ದೇ ತಡ ಮಗು ಕೈಕಾಲು ಅಲುಗಾಡಿಸಿದೆ. ತಕ್ಷಣ ಮಗು ಜೀವಂತವಾಗಿದೆ ಎಂದು ಖುಷಿಯಿಂದ ಪೋಷಕರು ಮತ್ತೆ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಮಗುವಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದ ಆರೋಪಿಗೆ ಶಿಕ್ಷೆ

ಹಳೆ ದ್ವೇಷದ ಹಿನ್ನೆಲೆಯಲ್ಲಿ ಚುರ್ಚಿಗುಂಡಿಯ ಬಸವರಾಜಪ್ಪ ಎಂಬುವವರು ತನ್ನ ಸ್ನೇಹಿತನಾದ ಆಲೊಳ ಗ್ರಾಮದ ಲಿಂಗರಾಜು ಎಂಬುವವರ 8 ವರ್ಷದ ಪುತ್ರ ಪ್ರೇಮ್ ಕುಮಾರ್ ನನ್ನು ಅಪಹರಿಸಿ ನಂತರ ಶಿಕಾರಿಪುರ ತಾಲೂಕು ಚುರ್ಚಿಗುಂಡಿ ಗ್ರಾಮದ ಬಳಿಯ ಕುಮದ್ವತಿ ನದಿಯಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆಗೈದ ಘಟನೆ 2017ರ ಮಾರ್ಚ್2ರಂದು ನಡೆದಿತ್ತು. ಘಟನೆ ಸಂಬಂಧ ವಿನೋಬನಗರ ಪೊಲೀಸರು ಆರೋಪಿ ಬಸವರಾಜಪ್ಪನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್. ಪಲ್ಲವಿ ಅವರು ಆರೋಪಿ ಬಸವರಾಜಪ್ಪರಿಗೆ ಜೀವಾವಧಿ ಶಿಕ್ಷೆ ಹಾಗೂ 3.25 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪುಷ್ಪ ವಾದಿಸಿದ್ದರು.

ಪ್ಯಾಕೆಟ್ ಮಾಡಿ ದನದ ಮಾಂಸದ ಹೋಂ ಡೆಲಿವರಿ!

ಸಕಲೇಶಪುರ: ದನದ ಮಾಂಸವನ್ನು ಪ್ಯಾಕೆಟ್ ಮಾಡಿ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳನ್ನು ಬಂಧಿಸುರುವ ಘಟನೆ ಸಕಲೇಶಪುರದ ಕುಶಾಲನಗರ ಬಡಾವಣೆಯಲ್ಲಿ ನಡೆದಿದೆ.
ಖಚಿತ ಮಾಹಿತಿ ಪಡೆದಿದ್ದ ಬಜರಂಗದಳ ಕಾರ್ಯಕರ್ತರು ಪೋಲಿಸರಿಗೆ ಮಾಹಿತಿ ತಿಳಿಸಿದ್ದು ಹಮೀದ್, ಜಬಿವುಲ್ಲಾ ಎಂಬುವರನ್ನು ಬಂಧಿಸಲಾಗಿದೆ.ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರಮೋದ್ ನೇತೃತ್ವದ ತಂಡ ಠಾಣೆ ಹಿಂಭಾಗ ರಸ್ತೆ ಆಶೋಕ ರಸ್ತೆಯಲ್ಲಿ ಬಳಿ ಬಿಳಿ ಬಣ್ಣದ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಪರಿಶೀಲಿಸಿದಾಗ ಸ್ಕೂಟರ್ ನಲ್ಲಿ ದನದ ಮಾಂಸ ಪ್ಯಾಕೆಟ್ ಪತ್ತೆಯಾಗಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆಜಾದ್ ರಸ್ತೆಯ ಹಮೀದ್ ಎಂಬುವವನು ಮನೆ ಮನೆಯಿಂದ ಆರ್ಡರ್ ಪಡೆದು ಹೋಂ ಡೆಲಿವರಿ ಮಾಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲೂ ಕನ್ನಡಕ್ಕೆ ಕುತ್ತು!?

ತೀರ್ಥಹಳ್ಳಿಯಲ್ಲೂ ಕನ್ನಡಕ್ಕೆ ಕುತ್ತು!?
– ಕನ್ನಡ ನಾಮಫಲಕಕ್ಕೆ ತಿಲಾಂಜಲಿ ಇಡ್ತಿದ್ದಾರಾ?
– ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯಕ್ಕೆ ಕರವೇ ಮನವಿ: ಏನಿದು ಮನವಿ..?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿರುವ ಬಹುತೇಕ, ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿ ನಾಮಫಲಕವನ್ನು ಆಂಗ್ಲ ಭಾಷೆಯಲ್ಲಿ ಅಳವಡಿಸಿದ್ದು, ಸಣ್ಣದಾಗಿ ಕನ್ನಡದಲ್ಲಿ ಬೋರ್ಡ್ ಹಾಕಲಾಗಿದೆ. ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ತೀರ್ಥಹಳ್ಳಿ ಕರವೇ ಸ್ಥಳೀಯ ಆಡಳಿತವನ್ನು ಅಗ್ರಹಿಸಿದೆ. ಕರ್ನಾಟಕ ಸರ್ಕಾರದ ಆದೇಶದಂತೆ 70 % ಭಾಗಶಃ ಕನ್ನಡದಲ್ಲಿಯೇ ಇರಬೇಕು ಎಂಬುದಾಗಿದೆ, ಆದರೆ ಬಹುತೇಕ ಅಂಗಡಿ ಮುಂಗಟ್ಟುಗಳಲ್ಲಿ ಆಂಗ್ಲ ಭಾಷೆಯಲ್ಲಿ ನಾಮಫಲಕ ಅಳವಡಿಸಿದ್ದಾರೆ. ಕೆಲವೊಂದು ಇಂಗ್ಲಿಷಲ್ಲಿ ದೊಡ್ಡದಾಗಿ ನಾಮಫಲಕವನ್ನು ಅಳವಡಿಸಿ ಕನ್ನಡವನ್ನು ಚಿಕ್ಕದಾಗಿ ಸೇರಿಸಿರುತ್ತಾರೆ.

ತಾವುಗಳು ದಯಮಾಡಿ ಇದನ್ನು ಗಮನಿಸಿ. ಈ ಕೂಡಲೇ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಬಳಸಬೇಕೆಂದು ಆದೇಶವನ್ನು ಹೊರಡಿಸಬೇಕು. ಹಿಂದೆ ನಾಮಫಲಕಗಳಲ್ಲಿ ಆಗಿರುವ ದೋಷವನ್ನು ಸರಿಪಡಿಸಿಕೊಳ್ಳಲು ಒಂದು ತಿಂಗಳ ಕಾಲಾವಕಾಶವನ್ನು ನೀಡಿ ಸಂಪೂರ್ಣ ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲಾ ನಾಮಫಲಕಗಳು ಕನ್ನಡದಲ್ಲಿ ಬರುವಂತೆ ಗಮನಹರಿಸಬೇಕು. ಕನ್ನಡಕ್ಕೆ ಮಾನ್ಯತೆ ಬರುವಂತೆ ಮಾಡಬೇಕೆಂದು ಪಟ್ಟಣ ಪಂಚಾಯತ್ ಮುಖ್ಯಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಮನವಿ ಮಾಡಿದೆ. ಈ ಸಂದರ್ಭದಲ್ಲಿ ಕರವೇ ಪ್ರಮುಖರಾದ ಮಲ್ಲಕ್ಕಿ ರಾಘವೇಂದ್ರ, ಯಡೂರು ಸುರೇಂದ್ರ, ಶ್ರೀಕಾಂತ್ ಬೆಟ್ಟಮಕ್ಕಿ, ಜ್ಯೋತಿ ದಿಲೀಪ್,ವಿಕ್ರಮ್ ಶೆಟ್ಟಿ, ಅರ್ಜುನ್, ವಾಣಿ ಗಣೇಶ್ ಸೇರಿ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ : ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

[embedyt] https://www.youtube.com/watch?v=6xcRyzTIs_U%5B/embedyt%5D

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ನಂದಿನಿ ಸಿಹಿ ಉತ್ಸವ

ತೀರ್ಥಹಳ್ಳಿಯಲ್ಲಿ ನಂದಿನಿ ಸಿಹಿ ಉತ್ಸವ
– ಗ್ರಾಹಕರಿಗೆ ಶೇ.20ರಷ್ಟು ರಿಯಾಯಿತಿಯಲ್ಲಿ ಸಿಹಿ
– ತೀರ್ಥಹಳ್ಳಿಯ ಆಗುಂಬೆ ನಂದಿನಿ ಪಾರ್ಲರ್ ಅಲ್ಲಿ ಕಾರ್ಯಕ್ರಮ

NAMMUR EXPRESS NEWS
ಗ್ರಾಹಕರಿಗೆ ಶೇ.20ರಷ್ಟು ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ಉತ್ಪನ್ನಗಳ ಮಾರಾಟ ಮಾಡಲು ಶಿಮುಲ್ ನಿರ್ಧರಿಸಿದೆ. ಅತ್ಯುತ್ತಮ ಗುಣಮಟ್ಟಣದ ಸಿಹಿ ತಿನಿಸುಗಳ ಉತ್ಪನ್ನ ಗ್ರಾಹಕರಿಗೆ ದೊರೆಯಲಿದೆ. ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದಲ್ಲಿರುವ ನಂದಿನಿ ಪಾರ್ಲರ್ ಅಲ್ಲಿ ನಡೆದ ಕಾರ್ಯಕ್ರಮದಲ್ಲಿ ನಂದಿನಿ ಸಿಹಿ ಉತ್ಸವವನ್ನು ಗುರುವಾರ ಉದ್ಘಾಟಿಸಲಾಯಿತು.

ಉತ್ತಮ ಸ್ಪಂದನೆ:

ಗ್ರಾಮಾಂತರ ಪ್ರದೇಶಕ್ಕೂ ನಂದಿನಿ ಹಾಲಿನ ಉತ್ಪನ್ನಗಳು ಪೂರೈಕೆ ಆಗಬೇಕು ಎಂಬ ಮಹತ್ವದ ಉದ್ದೇಶದಲ್ಲಿ ಶಿಮುಲ್ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲೆಡೆ ಉತ್ತಮ ಸ್ಪಂದನೆ ಸಿಕ್ಕಿದೆ. ಪ್ರವಾಸಿ ಸ್ಥಳ ಹೊಂದಿರುವ ತೀರ್ಥಹಳ್ಳಿ ತಾಲೂಕಿನಲ್ಲಿ ನಂದಿನಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಶಿಮುಲ್ ನಿರ್ದೇಶಕ ಕಡಿದಾಳ್ ತಾರಾನಾಥ್ ಹೇಳಿದ್ದಾರೆ. ಈ ಸಂದರ್ಭ ಶಿಮುಲ್ ಅಧಿಕಾರಿಗಳಾದ ಬಸವರಾಜ, ನವೀನ್, ಪಾರ್ಲರ್ ಮಾಲೀಕ ಸುನಿಲ್‌ ಮತ್ತಿತರರು ಇದ್ದರು. ತೀರ್ಥಹಳ್ಳಿ ಪಟ್ಟಣದ ಆಗುಂಬೆ ವೃತ್ತದಲ್ಲಿ ನಂದಿನಿ ಸಿಹಿ ಉತ್ಸವವನ್ನು ಗುರುವಾರ ಉದ್ಘಾಟಿಸಲಾಯಿತು.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ತೀರ್ಥಹಳ್ಳಿ

ಯುವ ಸಹಕಾರಿಯಾಗಿ ನವೀನ್ ಟಿ. ಆರ್!

ಯುವ ಸಹಕಾರಿಯಾಗಿ ನವೀನ್ ಟಿ. ಆರ್!
– ವಿಶ್ವಕರ್ಮ ಸೌಹಾರ್ದ ಸಹಕಾರಿ ಚುನಾವಣೆಯಲ್ಲಿ ಜಯಭೇರಿ
– ಪತ್ರಕರ್ತರಾಗಿ, ಯುವ ಸಂಘಟಕರಾಗಿ ಸಮಾಜ ಸೇವೆ

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ವಿಶ್ವಕರ್ಮ ಸೌಹಾರ್ದ ಸಹಕಾರಿ ಸಂಘ 2023- 28ರವರೆಗಿನ 5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಪತ್ರಕರ್ತ, ಯುವ ಸಂಘಟಕ ನವೀನ್ ಟಿ. ಆರ್ ಗೆಲುವು ಸಾಧಿಸಿದ್ದಾರೆ. ಅಚ್ಚರಿ ಎಂದರೆ ಅದೇ ಸಂಸ್ಥೆಯಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಅದೇ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ತೀರ್ಥಹಳ್ಳಿಯ ಪ್ರಮುಖ ದಿನ ಪತ್ರಿಕೆ ಛಲಗಾರದಲ್ಲಿ ಸುಮಾರು 12 ವರ್ಷ ಪತ್ರಕರ್ತರಾಗಿ ವಿವಿಧ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವ ಕರ್ಮ ಸೇವಾ ಬಳಗದ ಮೂಲಕ ಸಮುದಾಯದ ಕೆಲಸ ಮಾಡುತ್ತಿದ್ದಾರೆ. ಸಮಾಜದ ಅಭಿವೃದ್ಧಿ, ವಧು ವರರ ವೇದಿಕೆ ವಿಶ್ವ ಕರ್ಮ ವೇದಿಕೆ ಮೂಲಕ ಯುವ ಜನತೆ ಜತೆ ಇದ್ದಾರೆ. ಸೇವಾಭಾರತಿ, ಜ್ಯುನಿಯರ್ ಕಾಲೇಜಲ್ಲಿ ಓದಿದ್ದಾರೆ. ನವೀನ್ ಅವರು ರಮೇಶ್ ಟಿ.ಎನ್ ಮತ್ತು ಆಶಾ ಅವರ ಪುತ್ರ. ಪತ್ನಿ ಮಂಜುಳಾ, ಮಗಳು ಹಿಮಾನ್ವಿ. ಇದೀಗ ಅವರ ಸಹಕಾರಿ ಹುದ್ದೆ ಲಭಿಸಿರುವುದು ಅವರ ಸೇವೆಗೆ ಸಂದ ಫಲ. ಅದರಲ್ಲೂ ನವೀನ್ ಅವರ ಸಿಂಡಿಕೆಟ್ ಇಂದ ಗೆದ್ದಿದ್ದು ನವೀನ್ ಮಾತ್ರ.

ಚುನಾವಣೆ ಏನಾಗಿತ್ತು?

13 ಸಂಖ್ಯಾಬಲದ ಸೊಸೈಟಿಯಲ್ಲಿ 2 ಮಹಿಳೆ, 2 ಬಿಸಿಎಂ ‘ಎ’ ಮತ್ತು 9 ಸಾಮಾನ್ಯ ವರ್ಗಕ್ಕೆ ನಿರ್ದೇಶಕ ಸ್ಥಾನ ಮೀಸಲು ನಿಗಧಿ ಪಡಿಸಲಾಗಿತ್ತು. ಸ್ಪರ್ಧಿಸಿದ್ದ 24 ಸ್ಪರ್ಧಿಗಳ ಪೈಕಿ ಯುವ ಪತ್ರಕರ್ತ ನವೀನ್ ಟಿ.ಆರ್., ಉಪೇಂದ್ರ, ಶಂಕರಾಚಾರ್ ಬಿ.ಜಿ, ಮನೋಜ್, ಚಂದ್ರಶೇಖರ್, ನಾಗಪ್ಪ ಆಚಾರ್, ಜ್ಯೋತಿ ಎ.ಎಸ್., ಭಾಸ್ಕರ ಸಿ, ಮೋಹನ್ ಎಸ್.ಜಿ., ರಾಘವೇಂದ್ರ ಎನ್, ಶಾರದ, ರಾಘವೇಂದ್ರ ಪಿ, ಮಂಜುನಾಥ್ ಎಸ್ ಗೆಲುವು ಸಾಧಿಸಿದ್ದಾರೆ.

ಎಲ್ಲಾ 23 ಮಂದಿಗೂ, ಸಮುದಾಯದವರಿಗೂ ಅಭಿನಂದನೆಗಳು

ನವೀನ್ ಅವರು ತಮ್ಮ ಜತೆಗೆ ಆಯ್ಕೆಯಾದ ಎಲ್ಲಾ ನಿರ್ದೇಶಕರು ಮತ್ತು ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿದ್ದ ಉಮಾಪತಿ ಎಲ್‌ಜಿ ಅರಳಸುರುಳಿ, ಲಕ್ಷ್ಮೀನಾರಾಯಣ್ ಬಿ ಎಸ್ ಬಿಳಲುಕೊಪ್ಪ, ಅಮಿತ್ ಕುಮಾರ್ ಸುರಾನಿ, ಕೌಸಲ್ಯ ಕೆ ಎಸ್ ತುಂಬೇಸರ, ನಾಗರಾಜ್ ಕೆ.ಜೆ ಮೇಲಿನ ಕುರುವಳ್ಳಿ, ನಾಗೇಶ್ ಜೆ ಜಂಬೇ, ಪುರುಷೋತ್ತಮ ಟಿ ಎಂ ಬೀಳಲುಕೊಪ್ಪ,ಶಿವಕುಮಾರ್ ಟಿ ಜೆ ತುದುರು, ಶಂಕರಾಚಾರ್ಯ ಕೊಂಡ್ಲೂರು, ಶ್ರೀನಿವಾಸ್ ಆಚಾರ್, ನೇರಳೆ ಇವರುಗಳಿಗೆ ಮತನೀಡಿದ ಶೇರುದಾರ ಸಮಾಜ ಬಾಂಧವರಿಗೂ, ಚುನಾವಣೆ ಸಂದರ್ಭದಲ್ಲಿ ಸಲಹೆ ಸಹಕಾರ ನೀಡಿದ ಹಿರಿಯರಿಗೆ ಹಾಗೂ ಪ್ರತ್ಯಕ್ಷ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ತೀರ್ಥಹಳ್ಳಿ ಸಾಗರ ಹೊಸನಗರ

ಕಾಗೋಡು ತಿಮ್ಮಪ್ಪ ಅವರಿಗೆ ಕಿಮ್ಮನೆ ಸನ್ಮಾನ!

ಕಾಗೋಡು ತಿಮ್ಮಪ್ಪ ಅವರಿಗೆ ಕಿಮ್ಮನೆ ಸನ್ಮಾನ!
– ಸಾಗರದ ನಿವಾಸದಲ್ಲಿ ಸನ್ಮಾನಿಸಿ ಗೌರವ
– ತೀರ್ಥಹಳ್ಳಿ: ಯುವ ಮುಖಂಡ ನವೀನ್ ಅವರಿಗೆ ಕಿಮ್ಮನೆ ಮತ್ತು ಮುಖಂಡರಿಂದ ಗೌರವ
– ಹೊಸನಗರ: ತುಂಗಾ ಸೊಸೈಟಿಯಲ್ಲಿ ಮಂಜುನಾಥ ಗೌಡರಿಗೆ ಸನ್ಮಾನ

NAMMUR EXPRESS NEWS
ಸಾಗರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2023-2024 ಪ್ರಸಕ್ತ ಸಾಲಿನ ಡಿ ದೇವರಾಜ ಅರಸ್ ಪ್ರಶಸ್ತಿಗೆ ಭಾಜನರಾದ ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರು, ಮಾಜಿ ವಿಧಾನಸಭೆ ಸಭಾಪತಿ ಕಾಗೋಡು ತಿಮ್ಮಪ್ಪನವರಿಗೆ ಸಾಗರದ ಅವರ ನಿವಾಸದಲ್ಲಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಸನ್ಮಾನಿಸಿ ಆಶೀರ್ವಾದ ಪಡೆದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕಲ್ಗೋಡ್ ರತ್ನಾಕರ್, ತೀರ್ಥಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಡಬ ರಾಘವೇಂದ್ರ, ಕೆಸ್ತೂರು ಮಂಜುನಾಥ್,ಕಾಂಗ್ರೆಸ್ ಮುಖಂಡರಾದ ಬಿಪಿ ರಾಮಚಂದ್ರ ಅವರು ಸಂದರ್ಭದಲ್ಲಿ ಜೊತೆಯಿದ್ದರು.

ಯುವ ಮುಖಂಡ ನವೀನ್ ಅವರಿಗೆ ಕಿಮ್ಮನೆ ಮತ್ತು ಮುಖಂಡರಿಂದ ಗೌರವ

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಸಿಂಗನಬಿದರೆ ಗ್ರಾಮಪಂಚಾಯತಿಗೆ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಯುವ ಮುಖಂಡ ನವೀನ್ ಕುಳ್ಳುoಡೆ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಸುಜಾತಾ ಅವರನ್ನು ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಸನ್ಮಾನಿಸಿ ಅಭಿನಂದಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್ , ಮುಖಂಡರಾದ ಆಮ್ರಪಾಲಿ ಸುರೇಶ್ , ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ್ ಶೆಟ್ಟಿ , ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಸದಸ್ಯರುಗಳಾದ ಜಯಪ್ರಕಾಶ್ ಶೆಟ್ಟಿ , ಗೀತಾ ರಮೇಶ್ , ಮಂಜುಳಾ ನಾಗೇಂದ್ರ ಹಾಗೂ ಮುಖಂಡರಾದ ವಿಲಿಯಂ ಮಾರ್ಟಿಸ್ , ಸಾಮಾಜಿಕ ಜಾಲತಾಣ ಅಧ್ಯಕ್ಷ ಶ್ರೇಯಸ್ ರಾವ್ ಮತ್ತು ಮಂಜುನಾಥ್ ಅವರುಗಳು ಉಪಸ್ಥಿತರಿದ್ದರು.

ತುಂಗಾ ಸೊಸೈಟಿಯಲ್ಲಿ ಮಂಜುನಾಥ ಗೌಡರಿಗೆ ಸನ್ಮಾನ

ಹೊಸನಗರ ತುಂಗಾ ಅಡಿಕೆ ಮಾರಾಟ ಸೌಹಾರ್ದ ಸೊಸೈಟಿ ನೂತನವಾಗಿ ನಿರ್ದೇಶಕರುಗಳಾಗಿ ಆಯ್ಕೆಯಾದ ಆಡಳಿತ ‌ಮಂಡಳಿ ವತಿಯಿಂದ ರಾಜ್ಯದ ಹಿರಿಯ ಸಹಕಾರಿಗಳು, ಡಿಸಿಸಿ ಬ್ಯಾಂಕ್ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರು, ಕೆಪಿಸಿಸಿ ರಾಜ್ಯ ಸಂಚಾಲಕರು ಡಾ ಆರ್ ಎಂ ಮಂಜುನಾಥ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್ 18-08-2023

ಗಿಫ್ಟ್ ತಂದಿದ್ದಕ್ಕೆ ಮದುವೆ ನಿಂತು ಹೋಯ್ತು!
– ಕಡಬ: ಮಾವನ ಎಡವಟ್ಟಿನಿಂದ ನಿಶ್ಚಿತಾರ್ಥ ರದ್ದು!
– ಉಡುಪಿ: ನೀರಿಗೆ ಬಿದ್ದ ಮೀನುಗಾರ ನಾಪತ್ತೆ
– ಮಂಗಳೂರು: ಬಾಲಕಿ ಮೇಲೆ ರೇಪ್: ಅರೆಸ್ಟ್
– ಭಟ್ಕಳ: ಸರ್ಕಾರಿ ಅಕ್ಕಿಗೆ ಕನ್ನ ಹಾಕಿದರ ಬಂಧನ
– ಕಾರ್ಕಳ :ಅಕಸ್ಮಾತ್ ಕೆರೆಗೆ ಬಿದ್ದು ಸಾವು
– ಬಂಟ್ವಾಳ:ಅಂಬ್ಯುಲೆನ್ಸ್ ಪಲ್ಟಿ: ಚಾಲಕ ಮೃತ್ಯು

NAMMUR EXPRESS NEWS
ನಿಶ್ಚಿತಾರ್ಥ ದಿನ ವರನ ಕಡೆಯವರು ತಂದ ಗಿಫ್ಟ್ ನೋಡಿ, ಈ ಸಂಬಂಧ ನಮಗೆ ಬೇಡ ಎಂದು ವಧುವಿನ ಕಡೆಯವರು ಗಲಾಟೆ ಎಬ್ಬಿಸಿದ್ದಾರೆ. ಮಡಿಕೇರಿ ಭಾಗದಿಂದ ಕಡಬ ತಾಲೂಕಿನ ಸುಂಕದಕಟ್ಟೆ ಎಂಬ ಕುಗ್ರಾಮಕ್ಕೆ ವರನ ಕಡೆಯವರು ಮದುವೆ ನಿಶ್ಚಿತಾರ್ಥಕ್ಕೆಂದು ಬಂದಿದ್ದರು. ಇತ್ತ ವಧುವಿನ ಮನೆಯಲ್ಲಿ ಅತಿಥಿಗಳಿಗೆ ಭಾರೀ ಭೋಜನ ತಯಾರಾಗುತ್ತಿತ್ತು. ವರನ ಕಡೆಯವರು ವಧುವಿಗೆಂದು ಚಾಕಲೇಟ್, ಸಿಹಿತಿನಿಸು, ಡ್ರೆಸ್, ಚಿನ್ನಾಭರಣದ ಜೊತೆ ಅದ್ಧೂರಿಯಾಗಿ ಬಂದಿದ್ದರು.ನಿಶ್ಚಿತಾರ್ಥ ನಡೆಯಿತು, ಮದುವೆ ಜನವರಿ ತಿಂಗಳಲ್ಲಿ ಎಂಬುವುದು ಅಲ್ಲೇ ನಿಗದಿಯಾಯಿತು. ಆಗ ವರನ ಕಡೆಯವರು ತಮ್ಮ ಭಾವೀ ಸೊಸೆಗೆ ಪ್ರೀತಿಯಿಂದ ತಂದಿದ್ದ ಚಾಕಲೇಟ್ಸ್, ಉಡುಪು, ಚಪ್ಪಲಿ, ಗಿಫ್ಟ್ ಬಾಕ್ಸ್’ಗಳನ್ನು ಕೊಡಲು ಮುಂದಾದರು. ಹುಡುಗಿಯ ಮಾವ (ತಾಯಿಯ ಸಹೋದರನ) ಗಿಫ್ಟ್ ಕೊಡಬಾರದು ಎಂದು ಮಾಡಿದ ರಂಪಾಟ, ಚೀರಾಟ ನೋಡಿ ಹುಡುಗನ ಕುಟುಂಬಸ್ಥರು ಈ ಸಂಬಂಧ ನಮಗೆ ಬೇಡ ಎಂದು ಹಿಂತಿರುಗಿ ಹೋಗಿದ್ದಾರೆ. ಹುಡುಗಿಯ ಮಾವ ಮಾಡಿದ ಅವಾಂತರದಿಂದ ಮದುವೆ ನಿಶ್ಚಿತಾರ್ಥ ಕಾರ್ಯ ನಿಂತುಹೋಗಿದೆ.

ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆ!

ಮೀನುಗಾರಿಕೆ ನಡೆಸುವ ವೇಳೆ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆಯಾದ ಘಟನೆ ಮಲ್ಪೆಯಲ್ಲಿ ನಡೆಯಲಿದೆ. ಮೀನುಗಾರ ಗೋಪಾಲ ಶನಿಯಾರ್ ನಾಯ್ಕ (35) ನಾಪತ್ತೆಯಾದವರು. ಆ. 11ರಂದು ಅವರು ಇತರ ಮೀನುಗಾರರ ಜತೆ ಮಲ್ಪೆ ಬಂದರಿನಿಂದ ಬೋಟಿನಲ್ಲಿ ತೆರಳಿದ್ದು, ಆ. 13ರಂದು ಮಧ್ಯಾಹ್ನದ ವೇಳೆ ಮೀನುಗಾರಿಕೆ ನಡೆಸುತ್ತಿರುವಾಗ ಆಕಸ್ಮಿಕವಾಗಿ ಬೋಟಿನಿಂದ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ.

ವಿಕಲಚೇತನ ಬಾಲಕಿಯ ಮೇಲೆ ರೇಪ್: ಅರೆಸ್ಟ್!

ಖಾಸಗಿ ಆಸ್ಪತ್ರೆಯಲ್ಲಿ ವಿಕಲಚೇತನ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಲು ಯತ್ನಿಸುತ್ತಿದ್ದ ಮುಂಬೈ ಮೂಲದ ವ್ಯಕ್ತಿ ಹಾಗೂ ಸಂತ್ರಸ್ತ ಬಾಲಕಿಯ ಮೇಲಿನ ಹಲ್ಲೆಗೆ ಸಹಕರಿಸಿದ ಮಹಿಳೆಯನ್ನು ಮಹಿಳಾ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.. ಆರೋಪಿಗಳನ್ನು ಬಿಹಾರ ಮೂಲದ ಅಬ್ದುಲ್ ಹಲೀಂ (37) ಮತ್ತು ಕುಲಶೇಖರ ನಿವಾಸಿ ಶಮೀನಾ ಬಾನು (22) ಎಂದು ಗುರುತಿಸಲಾಗಿದೆ. ದೂರುದಾರ ಮಹಿಳೆಯ ಕಿರಿಯ ಸಹೋದರ ಮನ್ಸೂರ್ ಅಹಮದ್ ಬಾಬಾ ಶೇಖಾ ಮತ್ತು ಆರೋಪಿ ಅಬ್ದುಲ್ ಹಲೀಂ ಸ್ನೇಹಿತರು. ಆಗಸ್ಟ್ 10 ರಂದು ಕಾಸರಗೋಡಿನಿಂದ ಬೈಕ್‌ನಲ್ಲಿ ಹಿಂತಿರುಗುತ್ತಿದ್ದಾಗ ಅವರ ಬೈಕ್ ಅಪಘಾತಕ್ಕೀಡಾಗಿದ್ದು, ಹೊಸಂಗಡಿಯಲ್ಲಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರೂ ಆಸ್ಪತ್ರೆಯ ಒಂದೇ ಕೋಣೆಯಲ್ಲಿದ್ದರು, ಅವರ ನಡುವೆ ಪರದೆ ಇತ್ತು.

ಅಪಘಾತದ ಬಗ್ಗೆ ವಿಚಾರಿಸಲು ದೂರುದಾರ ಮಹಿಳೆ ಮತ್ತು ಅವರ ಹಿರಿಯ ಮಗಳು ಮಂಜೇಶ್ವರ ಠಾಣೆಗೆ ತೆರಳಿದ್ದರು. ದೂರುದಾರ ಮಹಿಳೆ ತನ್ನ ಕಿರಿಯ ಸಹೋದರನ ಪತ್ನಿ ಶಮೀನಾ ಬಾನು ಎಂಬಾಕೆಯೊಂದಿಗೆ ವಿಕಲಚೇತನ ಕಿರಿಯ ಮಗಳನ್ನು ಬಿಟ್ಟು ಹೋಗಿದ್ದಾಳೆ. ಆರೋಪಿ ಶಮೀನಾ ಬಾನು ಆಸ್ಪತ್ರೆಯಲ್ಲಿ ಆರೋಪಿ ಅಬ್ದುಲ್ ಹಲೀಂ ಜೊತೆ ಅನೈತಿಕವಾಗಿ ವರ್ತಿಸುತ್ತಿರುವುದನ್ನು ಅಪ್ರಾಪ್ತ ಅಂಗವಿಕಲ ಬಾಲಕಿ ನೋಡಿದ್ದಾಳೆ. ನಂತರ ಶಮೀನಾ ವಿಕಲಚೇತನ ಬಾಲಕಿಯನ್ನು ಆರೋಪಿ ಅಬ್ದುಲ್ ಹಲೀಂನ ಹಾಸಿಗೆಯ ಮೇಲೆ ಕೂರಿಸಿದ್ದಳು. ಸಂತ್ರಸ್ತ ಬಾಲಕಿಯನ್ನು ಹಾಸಿಗೆಯ ಮೇಲೆ ಕೂರಿಸಿದ ಕೂಡಲೇ ಆರೋಪಿ ಅಬ್ದುಲ್ ಕಿರುಕುಳ ನೀಡಿದ್ದಾನೆ. ಹುಡುಗಿ ವಿರೋಧಿಸಿದಳು. ನಂತರ ಆರೋಪಿ ಶಮೀನಾ ಸಹಾಯದಿಂದ ಅಬ್ದುಲ್ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.ಈ ಸಂಬಂಧ ಸಂತ್ರಸ್ತ ಬಾಲಕಿಯ ತಾಯಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಗಸ್ಟ್ 16ರಂದು ಶಮೀನಾ ಬಾನು ಅವರನ್ನು ಬಂಧಿಸಲಾಗಿತ್ತು. ಮುಂಬೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ ಹಲೀಂನನ್ನು ಗೋವಾ ಪೊಲೀಸರು ಮಡಗಾಂವ್‌ನಲ್ಲಿ ಬಂಧಿಸಿದ್ದಾರೆ. ಇಬ್ಬರನ್ನೂ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅನ್ನ ಭಾಗ್ಯ ಅಕ್ಕಿ ಸಾಗಣೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರ ಕಾರ್ಯಾಚರಣೆಯಿಂದ ಅಕ್ರಮವಾಗಿ ಸಂಗ್ರಹಿಸಿದ್ದ ಸರಕಾರ ಅನ್ನ ಭಾಗ್ಯ ಯೋಜನೆ 6000 ಕೆ.ಜಿ. ಅಕ್ಕಿಯನ್ನು ಹಾಗೂ ಆರೋಪಿಗಳ ಸಹಿತ ವಶಕ್ಕೆ ಪಡೆದ್ದಿದಾರೆ.ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಾಗಟೆಬೈಲ್ ಮೆಂಗೋ ಫಾರ್ಮ್ ಎದುರುಗಡೆ ಇರುವ ಗೋಡನ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಸರ್ಕಾರದ ಅನ್ನ ಭಾಗ್ಯ ಯೋಜನೆಯ 6000 ಕೆ.ಜಿ ಅಕ್ಕಿಯನ್ನು ಭಟ್ಕಳ ಗ್ರಾಮೀಣ ಪೊಲೀಸ ಠಾಣೆಯ ಪೊಲೀಸ ಇನ್ಸೆಕ್ಟರ್ ಗೋಪಿಚಂದನ ನೇತೃತ್ವದಲ್ಲಿ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿ ಆರೋಪಿಗಳ ಸಹಿತ ಸರ್ಕಾರದ ಅನ್ನಭಾಗ್ಯ ಯೋಜನೆಯ 6000 ಕೆ.ಜಿ ಅಕ್ರಮ ಅಕ್ಕಿ ವಶಕ್ಕೆ ಪಡೆದಿದ್ದಾರೆ.

ನಂದಳಿಕೆ: ದೇವಸ್ಥಾನದ ಕೆರೆಗೆ ಬಿದ್ದು

ಕಾರ್ಕಳ ತಾಲೂಕು ನಂದಳಿಕೆಯಲ್ಲಿ ಆಕಸ್ಮಿಕವಾಗಿ ದೇವಸ್ಥಾನದ ಕೆರೆಗೆ ಬಿದ್ದು ಹಾನಗಲ್ ನಿವಾಸಿ ಮಂಜಪ್ಪ (30) ಮೃತಪಟ್ಟ ಘಟನೆ ನಡೆದಿದೆ. ನಂದಳಿಕೆ ಕೊಡ್ನರಬೆಟ್ಟು ಬಳಿಯಲ್ಲಿ ಹಲವು ಸಮಯದಿಂದ ಕೆಲಸ ಮಾಡಿಕೊಂಡಿದ್ದರು.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೋಗಿ ಇದ್ದ ಅಂಬ್ಯುಲೆನ್ಸ್ ಪಲ್ಟಿ: ಚಾಲಕ ಮೃತ್ಯು

ರೋಗಿಯೋರ್ವರನ್ನು ತುರ್ತಾಗಿ ಮಂಗಳೂರಿಗೆ ಸಾಗಿಸುತ್ತಿದ್ದ ಖಾಸಗಿ ಅಂಬ್ಯುಲೆನ್ಸ್ ವಾಹನವೊಂದು
ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಅಂಚಿಕಟ್ಟೆ ಎಂಬಲ್ಲಿ ಪಲ್ಟಿಯಾಗಿದ್ದು, ವಾಹನ ಚಾಲಕ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಸಾರ ಅಂಬ್ಯುಲೆನ್ಸ್ ವಾಹನ ವಗ್ಗ ಸಮೀಪದ ಕೊಪ್ಪಳ ಅಂಚಿಕಟ್ಟೆ ಎಂಬಲ್ಲಿ ರಸ್ತೆ ಮಧ್ಯ ಪಲ್ಟಿಯಾಗಿದ್ದು, ಚಾಲಕ ಶಬೀರ್ ಗಂಭೀರವಾಗಿ ಗಾಯಗೊಂಡಿದ್ದ, ಈತನ ಸಹಿತ ವಾಹನದಲ್ಲಿದ್ದ ರೋಗಿಯನ್ನು ಬದಲಿ ವಾಹನದಲ್ಲಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಂಬುಲೆನ್ಸ್ ಚಾಲಕ ಚಿಕಿತ್ಸೆಗೆ ಸ್ಪಂದಿಸಿದೆ ಮೃತ ಪಟ್ಟ ಬಗ್ಗೆ ಆಸ್ಪತ್ರೆಯ ಮೂಲಗಳು ಪೋಲೀಸರಿಗೆ ಮಾಹಿತಿ ನೀಡಿದೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?

ತೀರ್ಥಹಳ್ಳಿಯಲ್ಲಿ ಗಾಂಜಾ ಹೊಡೆದವರು ಅರೆಸ್ಟ್!?
– ಯಡೆಹಳ್ಳಿಕೆರೆ ಬಳಿ ಇಬ್ಬರು ಪೊಲೀಸರ ವಶಕ್ಕೆ
– ಗಾಂಜಾ ಅಡ್ಡೆಯಾಗುತ್ತಿದೆಯಾ ಮಲೆನಾಡು?
– ಪೋಲೀಸರ ಖಡಕ್ ಕ್ರಮಕ್ಕೆ ಜನರ ಮೆಚ್ಚುಗೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಕೋಣಂದೂರು ಬಳಿ ಇತ್ತೀಚಿಗೆ ತಾನೇ ತೋಟದಲ್ಲೇ ಗಾಂಜಾ ಗಿಡ ಬೆಳೆದ ಇಬ್ಬರನ್ನು ಅರೆಸ್ಟ್ ಮಾಡಿರುವ ಪ್ರಕರಣ ಮಾಸುವ ಮುನ್ನವೇ ತೀರ್ಥಹಳ್ಳಿ ಪಟ್ಟಣದ ಯಡೆಹಳ್ಳಿ ಕೆರೆ ಬಳಿ ಗಾಂಜಾ ಸೇವನೆ ಮಾಡಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮತ್ತೆ ಮತ್ತೆ ತೀರ್ಥಹಳ್ಳಿ ತಾಲೂಕಿನ ಹಲವು ಭಾಗಗಳಲ್ಲಿ ಅನೈತಿಕ ಗಾಂಜಾ ಚಟುವಟಿಕೆಗಳು ನಡೆಯುತ್ತಿವೆ. ಇದೀಗ ಯಡೆಹಳ್ಳಿ ಕೆರೆ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಸಿಕ್ಕಿಬಿದ್ದಿರುವ ಘಟನೆ ಕಂಡುಬಂದಿದೆ. ತೀರ್ಥಹಳ್ಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ತೀರ್ಥಹಳ್ಳಿಯಲ್ಲಿ ಹೆಚ್ಚಿದ ಅಮಲು!:

ತೀರ್ಥಹಳ್ಳಿ ತಾಲೂಕಿನಲ್ಲಿ ಯುವಕರು, ಕೆಲವು ವಿದ್ಯಾರ್ಥಿಗಳು ಗಾಂಜಾ ಅಮಲಲ್ಲಿ ತೇಲಾಡುತ್ತಿರುವ ದೃಶ್ಯ ಮಾಮೂಲಾಗಿದೆ. ನದಿ ತೀರ, ಕಾಲೇಜಗಳ ಸಮೀಪ, ಹೋಟೆಲ್ ಬಾರ್ ರೆಸ್ಟೋರೆಂಟ್ ಸೇರಿ ಹಲವು ಅಡ್ಡೆಗಳಲ್ಲಿ ಗಾಂಜಾ ಗಮ್ಮತ್ತು ನಡೆಯುತ್ತಿದೆ. ಇದೀಗ ಪೊಲೀಸರು ಕಾರ್ಯಚರಣೆ ನಡೆಸುತ್ತಿರುವುದು ಜನರ ಮೆಚ್ಚುಗೆ ಗಳಿಸಿದೆ.
ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ, ಸಿಪಿಐ ಅಶ್ವತ್ ಗೌಡ ನೇತೃತ್ವದಲ್ಲಿ ಪೊಲೀಸರು ಖಡಕ್ ಕ್ರಮ ಜರುಗಿಸುತ್ತಿದ್ದಾರೆ.

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ