Categories
ಹೊಸನಗರ

ಹೊಸನಗರದ ನಗರ ಬಳಿ ದೇಗುಲದಲ್ಲಿ ನಿಧಿ ಶೋಧ?!

ಹೊಸನಗರದ ನಗರ ಬಳಿ ದೇಗುಲದಲ್ಲಿ ನಿಧಿ ಶೋಧ?!
– ವೀರಭದ್ರೇಶ್ವರ ದೇವಸ್ಥಾನದ ನಿಧಿ ತೆಗೆಯಲು ಯತ್ನ
– ಘಟನೆ ನಡೆದು 20 ದಿನ ಕಳೆದರೂ ತನಿಖೆ ಇಲ್ಲ..?

NAMMUR EXPRESS NEWS
ಹೊಸನಗರ: ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅರೋಡಿ ಸಮೀಪ ಕೊಡುಸೆ ಎಂಬ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ದೇವಸ್ಥಾನವೊಂದರ ನಿಧಿ ಕಳ್ಳತನ ಯತ್ನ ನಡೆದಿದೆ. ಈ ಸುದ್ದಿ ಹೊರ ಬಾರದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಸಸೆ ಎಂಬ ಗ್ರಾಮದಲ್ಲಿ ಅತ್ಯಂತ ಪುರಾತನ ಕಾಲದ ಅಂದರೆ ಬಿದನೂರು ಸಂಸ್ಥಾಪಕ ಶಿವಪ್ಪ ನಾಯಕನ ಕಾಲದ ವೀರಭದ್ರೇಶ್ವರ ದೇವಸ್ಥಾನ ಒಂದರಲ್ಲಿ ನೀಧಿ ಕಳ್ಳತನವಾಗಿರುವ ಬಹುದೊಡ್ಡ ಸುದ್ದಿ ಹೊರಬೀಳುತ್ತಿದೆ.

ಕಳೆದ ಆಗಸ್ಟ್ 5 ರಂದು ಈ ದೇವಸ್ಥಾನದಲ್ಲಿ ನಿಧಿ ಕಳ್ಳತನ ನಡೆದಿದೆ. ಆದರೆ ಇದಿಗ 20 ದಿನಗಳು ಕಳೆಯುತ್ತಾ ಬಂದರೂ ಈ ಬಗ್ಗೆ ಎಲ್ಲೂ ತನಿಖೆ ನಡೆಯುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಆದರೆ ನಿಧಿ ಕಳ್ಳತನ ಆಗಿದೆಯೋ… ಯತ್ನವೋ ಅಥವಾ ಬೇರೆ ಕಾರಣಕ್ಕೆ ಬಂಡೆಗಳನ್ನು ಅಗೆಯಲಾಗಿದೆಯೋ ಎಂಬ ಬಗ್ಗೆ ಯಾರ ಬಳಿಯೂ ಉತ್ತರ ಇಲ್ಲ.
ಹೊಸನಗರ ತಾಲೂಕು ನಗರ ಭಾಗದಲ್ಲಿ ನಿಧಿ ಕಳ್ಳತನ ಪ್ರಯತ್ನ ಇದು ಪ್ರಥಮ ಅಲ್ಲ. ಅನೇಕ ಬಾರಿ ಇಂತಹ ಯತ್ನ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ಬೆಂಗಳೂರು ಸಿನಿಮಾ

ಮಾಧ್ಯಮಗಳ ಬಹಿಷ್ಕಾರದಿಂದ ದರ್ಶನ್ ಮುಕ್ತ

ಮಾಧ್ಯಮಗಳ ಬಹಿಷ್ಕಾರದಿಂದ ದರ್ಶನ್ ಮುಕ್ತ
– ವರಮಹಾಲಕ್ಷ್ಮೀ ಹಬ್ಬದ ದಿನವೇ ‘ಕ್ಷಮೆ’ಕೇಳಿದ ನಟ
– ಏನಿದು ವಿವಾದ… ದರ್ಶನ್ ಹೇಳಿದ್ದೇನು…?

NAMMUR EXPRESS NEWS
ಬೆಂಗಳೂರು: ನಟ ದರ್ಶನ್ ಅವರಿಗೆ ದೃಶ್ಯ ಮಾಧ್ಯಮಗಳು ಹಾಕಿದ್ದ ಬಹಿಷ್ಕಾರ ಕೊನೆಗೂ ತೆರವಾಗಿದ್ದು, ವರಮಹಾಲಕ್ಷ್ಮೀ ಹಬ್ಬದ ದಿನವೇ ୧ ಕನ್ನಡ ಪ್ರಮುಖ ಮಾಧ್ಯಮಗಳ ಸಂಪಾದಕರ ನಡುವೆ ನಡೆದ ಮಾತುಕತೆಯ ಬಳಿಕ ನಟ ದರ್ಶನ್ ಗೆ ಹಾಕಲಾಗಿದ್ದ ಬಹಿಷ್ಕಾರ ತೆರವಾಗಿದೆ. ಈ ಬಗ್ಗೆ ನಟ ದರ್ಶನ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಒಂದು ವಿಷಮ ಘಳಿಗೆಯಲ್ಲಿ ಒಬ್ಬ ವ್ಯಕ್ತಿಯ ಮಾತಿಗೆ ನಾನು ಪ್ರತಿಕ್ರಿಯೆ ನೀಡಿದ್ದೆ ಅಷ್ಟೆ.. ಇತರ ಮಾಧ್ಯಮಗಳ ಬಗ್ಗೆ ನಾನು ಆಡಿರೋ ಮಾತು ಅದಾಗಿರಲಿಲ್ಲ ಅಂತ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.ನನ್ನ ಮಾತಿನಿಂದ ನೋವುಂಟಾಗಿದ್ದರೆ ಅಂತಹ ಮಾಧ್ಯಮದ ಹಿರಿಯರಿಗೆ ಕ್ಷಮೆ ಕೋರುವುದರಲ್ಲಿ ಯಾವುದೇ ತಪ್ಪಿಲ್ಲ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮ ರಂಗದ ಕ್ಷಮೆ ಇರಲಿ. ಉತ್ತಮ ಸಮಾಜಕ್ಕೆ ಮಾಧ್ಯಮಗಳ ಅಗತ್ಯವಿದೆ. ನನಗೂ ಮಾಧ್ಯಮಗಳ ಬಗ್ಗೆ ಗೌರವವಿದೆ. ನನ್ನ ಬೆಳವಣಿಗೆಗೆ ಮಾಧ್ಯಮಗಳು ಪ್ರೀತಿಯಿಂದ ನೀಡಿದ ಪ್ರಚಾರದ ಪಾಲೂ ಸಾಕಷ್ಟು ಇದೆ ಅಂತ ದರ್ಶನ್ ಹೇಳಿದ್ದಾರೆ.

ಮಾಧ್ಯಮಗಳ ಬಗ್ಗೆ ದರ್ಶನ್ ಅವಹೇಳನಾಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ದೃಶ್ಯ ಮಾಧ್ಯಮಗಳು ದರ್ಶನ್ ಗೆ ಬಹಿಷ್ಕಾರ ಹಾಕಿದ್ದು.. ಮಾಧ್ಯಮಗಳ ಬಹಿಷ್ಕಾರದ ನಡುವೆಯೇ ನಟ ದರ್ಶನ್ ತಮ್ಮ ಅಭಿಮಾನಿಗಳ ಮೂಲಕ ಸಾಮಾಜಿಕ ಮಾಧ್ಯಮಗಳ ಬಗ್ಗೆ ದರ್ಶನ್ ಅವಹೇಳನಾಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ದೃಶ್ಯ ಮಾಧ್ಯಮಗಳು ದರ್ಶನ್ ಗೆ ಬಹಿಷ್ಕಾರ ಹಾಕಿದ್ದವು. ಮಾಧ್ಯಮಗಳ ಬಹಿಷ್ಕಾರದ ನಡುವೆಯೇ ನಟ ದರ್ಶನ್ ತಮ್ಮ ಅಭಿಮಾನಿಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲೇ ತಮ್ಮ ಚಿತ್ರದ ಪ್ರಚಾರ ಮಾಡಿಸಿದ್ದರು. ಆದ್ರೆ ಇದೀಗ ಕೊನೆಗೂ ನಟನೋರ್ವನಿಂದ ಕ್ಷಮೆ ಕೇಳಿಸುವ ಪ್ರಯತ್ನ ಯಶಸ್ವಿಯಾಗಿದೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕುಂದಾಪುರದಲ್ಲಿ ಸೌಜನ್ಯ ಹೋರಾಟ!
– ಮೂಲ್ಕಿ: ಅರೆಸ್ಟ್ ಮಾಡಲು ಬಂದಾಗ ವಿಷ ಸೇವಿಸಿದ
– ಉಪ್ಪಿನಂಗಡಿ: ಮಹಿಳೆಯ ಮಾನಭಂಗಕ್ಕೆ ಯತ್ನ
– ಉಡುಪಿ: ಶರಣ್ ಪಂಪ್ ವೆಲ್ ಜಾಮೀನು

NAMMUR EXPRESS NEWS
ಕುಂದಾಪುರದಲ್ಲಿ ಧರ್ಮಸ್ಥಳದ ಸೌಜನ್ಯ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆದಿದ್ದು ಸಹಸ್ರಾರು ಜನ ಭಾಗಿಯಾಗಿದ್ದರು. ಕುಂದಾಪುರ ಮತ್ತು ಬೈಂದೂರು ತಾಲೂಕಿನ ಸಾವಿರಾರು ಜನರು ಭಾಗವಹಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಜಸ್ಟಿಸ್ ಫಾರ್ ಸೌಜನ್ಯ ಎನ್ನುವ ಘೋಷಣೆಗಳನ್ನು ಕೂಗುತ್ತಾ ನೆಹರು ಮೈದಾನದಿಂದ ಹೊರಟು ಶಾಸ್ತ್ರಿ ಸರ್ಕಲ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯಳ ಕುಟುಂಬಿಕರು ಭಾಗವಹಿಸಿದರು.

ಅರೆಸ್ಟ್ ಮಾಡಲು ಬಂದಾಗ ವಿಷ ಸೇವಿಸಿದ!

ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಲಯದ ವಾರಂಟ್ ಆದೇಶದಂತೆ ಪೊಲೀಸರು ಬಂಧಿಸಲು ಬಂದ ಸಂದರ್ಭದಲ್ಲಿ ಆರೋಪಿಯೋರ್ವ ಕೀಟನಾಶಕ ಸೇವಿಸಿ, ಬಂಧಿಸಿ ಠಾಣೆಗೆ ಕರೆದೊಯ್ಯುವ ಸಂದರ್ಭದಲ್ಲಿ ಅಸ್ವಸ್ಥನಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ 2017 ರಲ್ಲಿ ನಡೆದ ಅಪರಾಧ ಪ್ರಕರಣ ಒಂದರ ಆರೋಪಿಯಾಗಿದ್ದ ಮಂಗಳೂರಿನ ಮುಳ್ಳೂರು ಗ್ರಾಮದ ಕರುಣಾಕರ ಶೆಟ್ಟಿ (44) ಎಂಬವರ ವಿರುದ್ಧ ವಾರಂಟ್ ಕಾರ್ಯಗತಗೊಳಿಸುವಂತೆ ನ್ಯಾಯಲಯದ ಆದೇಶ ನೀಡಿತ್ತು. ಕರುಣಾಕರ ಶೆಟ್ಟಿ ಉಡುಪಿಯ ಶಿವಳ್ಳಿ ಯಲ್ಲಿರುವ ರಸಿಕ ಬಾರ್ ನಲ್ಲಿ ಕೆಲಸ ಮಾಡಿಕೊಂಡಿರುವ ಬಗೆಗಿನ ಖಚಿತ ಮಾಹಿತಿಯ ಮೇರೆಗೆ ಬಜಪೆ ಪೋಲಿಸ್ ಠಾಣಾ ಉಪನಿರೀಕ್ಷಕರಾದ ಗುರುಪ್ಪ ಕಾಂತಿ ಮತ್ತು ಸಿಬ್ಬಂದಿಗಳು ಆಗಸ್ಟ್ 24 ರಂದು ಸಂಜೆ ವಾರಂಟ್ ಆದೇಶ ಕಾರ್ಯಗತಗೊಳಿಸಿ ಆರೋಪಿಯನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಆರೋಪಿ ಕೆಲಸ ಮಾಡಿಕೊಂಡಿರುವ ಉಡುಪಿಯ ಶಿವಳ್ಳಿಯ ರಸಿಕ ಬಾರ್ ಗೆ ಬಂದಿದ್ದರು.

ಪೊಲೀಸರು ಆಪಾದಿತನನ್ನು ವಶಕ್ಕೆ ಪಡೆಯುವ ಸಮಯ ತಾನು ಬಟ್ಟೆ ಹಾಕಿಕೊಂಡು ಬರುವುದಾಗಿ ಬಾರ್‌ನ ಮೇಲೆ ಇರುವ ರೂಮಿನೊಳಗೆ ಹೋದ ಕರುಣಾಕರ ಯಾವುದೋ ಕೀಟನಾಶಕ ಸೇವನೆ ಮಾಡಿ ಬಂದು ವಾಹನದಲ್ಲಿ ಪ್ರಯಾಣಿಸುವಾಗ ಮಾರ್ಗ ಮಧ್ಯೆ ಅಸ್ವಸ್ಥಗೊಂಡವರನ್ನು, ಬಜಪೆ ಪೋಲಿಸ್ ಠಾಣಾ ಉಪನಿರೀಕ್ಷಕರು ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪ್ಪಿನಂಗಡಿ: ಮಹಿಳೆಯ ಮಾನಭಂಗಕ್ಕೆ ಯತ್ನ!

ಉಪ್ಪಿನಂಗಡಿ ವ್ಯಾಪ್ತಿಯ ತೆಕ್ಕಾರು ಗ್ರಾಮದ ಪಿಂಡಿಕಲ್ಲು ಎಂಬಲ್ಲಿ ಒಂಟಿ ಮಹಿಳೆ ಮತ್ತು ಎಂಡೋಸಲ್ಫಾನ್ ಪೀಡಿತ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವಕ ವಾಸವಿರುವ ಮನೆಗೆ ಏಕಾ ಏಕಿ ನುಗ್ಗಿದ ಐದು ಮಂದಿ ದುಷ್ಕರ್ಮಿಗಳ ತಂಡ ಯುವಕನಿಗೆ ಥಳಿಸಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಗುರುವಾರ ಸಂಭವಿಸಿದೆ. ಹಲ್ಲೆಗೊಳಗಾದವರನ್ನು ಮುಝಮ್ಮಿಲ್ (19) ಎಂಡೋಸಲ್ಫಾನ್ ಪೀಡಿತ ಸಂತ್ರಸ್ತನಾಗಿದ್ದು ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವವನಾಗಿದ್ದಾನೆ ಎನ್ನಲಾಗಿದೆ. ಸಂತ್ರಸ್ತ ಮಹಿಳೆಯನ್ನು ಆತನ ತಾಯಿ ಮೈಮುನ (38) ಎಂದು ಗುರುತಿಸಲಾಗಿದೆ.ಆರೋಪಿಗಳ ಪೈಕಿ ಓರ್ವನನ್ನು ಉಪ್ಪಿನಂಗಡಿಯ ಕೂಟೇಲು ಸಮೀಪದ ಮಹಮ್ಮದ್ ಎಂದು ಗುರುತಿಸಲಾಗಿದೆ.ಉಳಿದ ನಾಲ್ವರು ಅಪರಿಚಿತರು ಎನ್ನಲಾಗಿದೆ.

ಉಡುಪಿ: ಶರಣ್ ಪಂಪ್ ವೆಲ್ ಜಾಮೀನು

ಉಡುಪಿ ಪ್ಯಾರಾ ಮೆಡಿಕಲ್ ಕಾಲೇಜು ವಿಡಿಯೋ ಪ್ರಕರಣವನ್ನ ಖಂಡಿಸಿ ಆಗಸ್ಟ್ 3ರಂದು ಬೃಹತ್ ಪ್ರತಿಭಟನೆ ವೇಳೆ ತಾಯಿಯಂದಿರು ಸೌಟು ಹಿಡಿಯುವ ಕೈಯಲ್ಲಿ ಕತ್ತಿ, ತಲಾವಾರು ಹಿಡಿಯುವ ಮೂಲಕ ಹಿಂದೂ ಸಮಾಜದ ರಕ್ಷಣೆಯಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ತು ಮುಖಂಡ ಶರಣ್ ಪಂಪ್‌ವೆಲ್ ಹೇಳಿದ್ದುಇದು ಪ್ರಚೋದನಕಾರಿ ಭಾಷಣ ಎಂದು ಶರಣ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಉಡುಪಿ ಜಿಲ್ಲಾ ನ್ಯಾಯಾಧೀಶರಿಂದ ಜಾಮೀನು ಮಂಜೂರಾಗಿದೆ

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ಕರಾವಳಿ ಕಾರ್ಕಳ

ಪರಿಸರ ಸ್ವಚ್ಛತೆಗೆ ಬದುಕು ಮೀಸಲಿಟ್ಟ ಕಾರ್ಕಳದ ಗ್ರೀನ್ ಮ್ಯಾನ್!

ಪರಿಸರ ಸ್ವಚ್ಛತೆಗೆ ಬದುಕು ಮೀಸಲಿಟ್ಟ ಕಾರ್ಕಳದ ಗ್ರೀನ್ ಮ್ಯಾನ್!
– ಫೆಲಿಕ್ಸ್‌ ವಾಸ್ ಎಂಬ ಪರಿಸರ ಪ್ರೇಮಿಯ ಕಥೆ
– ಪ್ರತಿ ದಿನ 5 ಕಿಮಿ ಕಸ ಹೆರಕುವ ಪರಿಸರ ಪ್ರೇಮಿ
– ಕಾರ್ಕಳ ಸಿಂಗಾಪುರ ಮಾಡುವ ಕನಸು!

NAMMUR EXPRESS NEWS
ಕಾರ್ಕಳ: ಪರಿಸರ ಮಾಲಿನ್ಯದ ನಡುವೆ ಪರಿಸರ ಸ್ವಚ್ಚವಾಗಿಡುವುದು ದೊಡ್ಡ ಸವಾಲು. ಎಷ್ಟೇ ಪರಿಸರ ಸ್ವಚ್ಛ ಮಾಡಿದ್ರೂ ಮತ್ತೆ ಕಸ ಚೆಲ್ಲಿ ಮಲಿನಗೊಳಿಸುವವರೆ ಹೆಚ್ಚು . ಆದರೆ ಕಾರ್ಕಳದ ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರ ಸಮಾಜ ಸೇವೆ ಈಗ ರಾಜ್ಯಕ್ಕೆ ಮಾದರಿಯಾಗಿದೆ. ಹೌದು. ಉಡುಪಿ ಜಿಲ್ಲೆ ಕಾರ್ಕಳದ ಮಂಗಳ ಪಾದೆ ಫೆಲಿಕ್ಸ್‌ ವಾಸ್ ನಿತ್ಯ ಸುಮಾರು ಐದು ಕಿ ಮೀ ವ್ಯಾಪ್ತಿಯ ಕಸವನ್ನು ಕೈಯಲ್ಲೇ ಹೆರಕುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಎಪ್ಪತ್ತೈದು ವರ್ಷದ ಹಿರಿ ವಯಸ್ಸಿನ ಫೆಲಿಕ್ಸ್‌ ವಾಸ್ ನಿತ್ಯ  ಮುಂಜಾನೆ 5.30 ವಾಕಿಂಗ್ ಹೊರಟು ಕೈಯಲ್ಲಿ  ಗೋಣಿ ಚೀಲ ಜೊತೆಗೊಂದು ಹ್ಯಾಂಡ್  ಸ್ಟಿಕ್ ಹಿಡಿದು ಸಾಗುತ್ತಾರೆ. ಸಾಗುವಾಗ ನಿತ್ಯ ರಸ್ತೆ ಪಕ್ಕದಲ್ಲಿನ ಪ್ಲಾಸ್ಟಿಕ್ ಗಳನ್ನು ತುಂಬಿಸಿಕೊಂಡು ಪುರಸಭೆ ವಾಹನಕ್ಕೆ ನೀಡುತ್ತಾರೆ. ಇವರ ಈ ಕೆಲಸ ಈಗ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.

ಬಂಡೆಗಲ್ಲ ಪ್ರದೇಶದಲ್ಲಿ ಗಿಡನೆಟ್ಟು ಪೋಷಿಸಿದರು!

ಮಂಗಳ ಪಾದೆ ಪ್ರದೇಶ ಸಂಪೂರ್ಣ ಬಂಡೆಗಳಿಂದ ಕೂಡಿದ ಪ್ರದೇಶವಾಗಿದೆ. ಅದಕ್ಕಾಗಿ ರಸ್ತೆ ಪಕ್ಕದಲ್ಲಿ ಸಾಗುವ ಸಾರ್ವಜನಿಕರಿಗೆ ನೆರಳಾಗಲು ವಿವಿಧ ಮಾವಿನ ಗಿಡಗಳು ,ಔಷಧೀಯ ಗುಣದ ಗಿಡಗಳು ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುತಿದ್ದಾರೆ. ಇಲ್ಲಿಯವರೆಗೆ ಒಟ್ಟು  ಐವತ್ತು  ಗಿಡಗಳನ್ನು ನೆಟ್ಟು ಪೋಷಿಸಿ ಬೆಳೆಸುತಿದ್ದಾರೆ. .ಬಿರು ಬೇಸಿಗೆಯಲ್ಲಿ ತಮ್ಮ ಮನೆಯಿಂದಲೆ ಐವತ್ತು  ಕ್ಯಾನ್ ಗಳಲ್ಲಿ ನಿತ್ಯ ನೀರುಣಿಸಿ  ಮರವನ್ನಾಗಿಸಿದ್ದಾರೆ .

ಐದು ಕಿ.ಮೀ ರಸ್ತೆ ಕಸವಿಲ್ಲದ ರಸ್ತೆ!

ಕಾರ್ಕಳ ಪುರಸಭೆ ವ್ಯಾಪ್ತಿಯ ಮಂಗಳಪಾದೆ, ಮಿಯ್ಯರು ಚರ್ಚ್ ಭಾಗ, ಸ್ವರಾಜ್ಯ ಮೈದಾನ, ಭುವನೇಂದ್ರಕಾಲೇಜು ರಸ್ತೆಗಳಲ್ಲಿ ಕಸಗಳು ಕಾಣಸಿಗುವುದೆ ಕಮ್ಮಿ , ಕಾಲೇಜು ವಿದ್ಯಾರ್ಥಿಗಳು ಫೆಲಿಕ್ಸ್‌ ವಾಜ್ ಅವರ ಪರಿಸರ ಜಾಗೃತಿ ಗೆ ಮನಸೋತು ಎಲ್ಲ ವಿದ್ಯಾರ್ಥಿಗಳಿಗಳಿಗೂ ಅರಿವು ಮೂಡಿಸುವ ಕಾರ್ಯಕ್ಕೆ  ಮುಂದಾಗಿದ್ದಾರೆ.ಇವರ ಸ್ವಚ್ಚತಾ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ

ಹಸಿರು ವಾರ್ಡ್… ಜಾಗೃತಿಯ ಬೋರ್ಡ್!

ಮಂಗಳ ಪಾದೆ ವಾರ್ಡ್ ನಲ್ಲಿ ಎಲ್ಲಿ ನೋಡಿದರೂ ಹಸಿರ ದರ್ಶನ  ಕಾಣಿಸುತ್ತದೆ. ಈ ಸ್ವಚ್ಛಂದ ಪರಿಸರ ಕಣ್ಣಿಗೆ ಹಬ್ಬ. ಈ ವಾರ್ಡ್ ನಲ್ಲಿ ಸಾಗುವಾಗ ಪ್ರತಿ ನೂರು ಮೀ ವ್ಯಾಪ್ತಿಯಲ್ಲಿ ಸುಮಾರು  ಪರಿಸರ ಜಾಗೃತಿ ಮೂಡಿಸುವ ಬೋರ್ಡ್ ಹಾಗು ದಾರಿ ಸೂಚಕಗಳನ್ನು ನಿಲ್ಲಿಸಲಾಗಿದೆ. ಈ ಪರಿಸರದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಬೋರ್ಡ್ ಗಳನ್ನು ನಿರ್ಮಿಸಿ ಪರಿಸರ ಉಳಿಸುವ ಕಾರ್ಯವನ್ನು ಮಾಡುತಿದ್ದಾರೆ. ವಾಹನಗಳು ಸಾಗುವಾಗ ದಾರಿ ಸೂಚಕಗಳನ್ನು ನಿಲ್ಲಿಸಿದ್ದಾರೆ.

ಮನಗೆದ್ದ ಕಸದ ಮರ

ಮಂಗಳ ಪಾದೆ ವ್ಯಾಪ್ತಿಯ ಪ್ರತಿ ನೂರು ಮೀ ರಸ್ತೆಯಲ್ಲಿ ಹಸಿಕಸ ಒಣಕಸವನ್ನು ವಿಂಗಡಿಸಿ ರಸ್ತೆ ಬದಿಯಲ್ಲಿ  ಕಬ್ಬಿಣದ ಕಂಬವನ್ನು ಸರಳನ್ನು ಸೇರಿಸಿ ರೆಂಬೆಗಳಂತೆ ವ್ಯವಸ್ಥೆ ಕಲ್ಪಿಸಲಾಗಿದೆ.  ಅಕ್ಕಪಕ್ಕದ ಮನೆಯರು ಕಸವನ್ನು ವಿಂಗಡಿಸಿ ಕಬ್ಬಿಣದ ಕಂಬಕ್ಕೆ ನೇತು ಹಾಕುತ್ತಾರೆ. ಇದರಿಂದಾಗಿ ಪರಿಸರದಲ್ಲಿ ಸಾಕುಪ್ರಾಣಿಗಳ  ಬಂದು ಕಸವನ್ನು ಎಳೆದು ಹಾಕಲು ಸಾಧ್ಯವಾಗುವುದಿಲ್ಲ. ಸ್ವರಾಜ್ಯ ಮೈದಾನದ ಬಳಿ ದೊಡ್ಡಗಾತ್ರದ ಚೀಲಗಳನ್ನು ನೇತುಹಾಕಿ ದ್ದಾರೆ‌.ಪುರಸಭೆ ವಾಹನವು  ನಿತ್ಯ ಆಗಮಿಸಿ ವಾಹನದಲ್ಲಿ ಕಸವನ್ನು ತುಂಬಿಕೊಂಡು ಹೋಗುತ್ತಾರೆ. ‌

ತಮ್ಮ ವಾಹನವೇ ಕಸದ ಗಾಡಿ!

ಫೆಲಿಕ್ಸ್‌ ವಾಸ್ ಅವರ ಕಾರಿನಲ್ಲಿ ಹಾರೆ, ಪಿಕ್ಕಾಸಿ , ಕಸತುಂಬಿಸಲು ಗೋಣಿ ಚೀಲ, ಸುತ್ತಿಗೆ, ಹಗ್ಗ , ಗಿಡಗಳು, ಕಸವನ್ನು ತುಂಬಿಸಲು ಸ್ಟಿಕ್ , ಮಾಸ್ಕ್ ,ಗ್ಲೌಸ್ , ಪರಿಸರ ಜಾಗೃತಿಯ ಬೋರ್ಡ್, ಬುಟ್ಟಿ ಗಳನ್ನು ಕಾರಿನಲ್ಲಿ ಇಟ್ಟುಕೊಂಡು ಸಾಗುತ್ತಾರೆ. ಕಸವನ್ನು ಹಾಕಿದ್ದರೆ ಅಲ್ಲೊಂದು ಬೋರ್ಡ್ ನೆಟ್ಟು ಪರಿಸರ ಜಾಗೃತಿಯ ಬೋರ್ಡ್ ಹಾಕುತ್ತಾರೆ.

ಗಲ್ಫ್ ರಾಷ್ಟ್ರಗಳಲ್ಲಿ ವಾಹನ ಚಾಲಕರಾಗಿ ಮೂವೈತ್ತದು ವರ್ಷ ದುಡಿದು  ಬಳಿಕ ಕಾರ್ಕಳದಲ್ಲಿಯೆ ನೆಲೆಸಿದರು.    ಪರಿಸರ ಉಳಿಸಲು ಪಣತೊಟ್ಟು ಬದಲಾವಣೆಗೆ ಕಾರಣರಾದರು. ಪ್ರತಿ ಬೋರ್ಡ್ , ದಾರಿ ಮಾಹಿತಿಗಳು ,ಕಸದ  ಮರ , ನಿರ್ಮಾಣ ಮಾಡಲು ಸ್ವಂತ ಖರ್ಚಿನಲ್ಲಿ ತೊಡಗಿಸಿಕೊಂಡಿದ್ದಾರೆ. ಯಾರ ಸಹಕಾರವನ್ನು ನಿರೀಕ್ಷಿಸಿಲ್ಲ .

ಪರಿಸರ ಸ್ವಚ್ಛತೆಗೆ 3 ಗಂಟೆ ಮೀಸಲು!

ನಿತ್ಯ ಮೂರು ಘಂಟೆ ಪರಿಸರ ಸ್ವಚ್ಛ ತೆ ಮೀಸಲಿಟ್ಟ ಫೆಲಿಕ್ಸ್‌ ವಾಜ್ , ಮೂವತ್ತು ಕೆಜಿ ಕಸ ಸಂಗ್ರಹಿಸುತ್ತಾರೆ, ನಿತ್ಯ ಮೂರುಘಂಟೆ ಪ್ರಯಾಣಿಸಿ ಐದು ಕಿಮೀ ಸಂಚರಿಸುತ್ತಾರೆ. ಒಂಬತ್ತು ವರ್ಷಗಳಿಂದ ಸತತವಾಗಿ ರೂಢಿಸಿಕೊಂಡಿರುವ ಫೆಲಿಕ್ಸ್‌ ಉತ್ತಮ ವ್ಯಾಯಾಮ  ಜೊತೆ ಪರಿಸರ ಜಾಗೃತಿಗೆ ಪ್ರೇರಣೆಯಾಗಿದ್ದಾರೆ‌

ನಮ್ಮ ಕಾರ್ಕಳವೇ ನಮಗೆ ಸಿಂಗಪುರ!

ಸ್ವಚ್ಛ ನಗರವೆಂದು ಸಿಂಗಾಪುರ ವನ್ನು ಉದಾಹರಣೆಗೆ ನೀಡುವ  ಬದಲು ನಮ್ಮೂರೆ  ಸ್ವಚ್ಛ ಮಾಡೋಣ ,  ಬದಲಾವಣೆ ನಮ್ಮಿಂದಲೆ ಪ್ರಾರಂಭವಾಗಲಿ  . ವ್ಯಾಯಮದ ಜೊತೆ ಪರಿಸರ ಉಳಿಸಲು ಸಣ್ಣ ಪ್ರಯತ್ನ. ಸ್ವಚ್ಛ ಬ್ರಿಗೆಡ್  ಕಾರ್ಯಕರ್ತರ ಜೊತೆ ಜೊತೆಯಾಗುತ್ತಾರೆ. ಅವರೆಲ್ಲರ ಸಹಕಾರವು ಇದೆ ಎನ್ನುತ್ತಾರೆ ಫೆಲಿಕ್ಸ್‌ ವಾಜ್ ಪುರಸಭೆ ವ್ಯಾಪ್ತಿಯ ಕೆಲಸವನ್ನು ತಾನೇ ಖುದ್ದಾಗಿ ಮಾಡುತ್ತಾರೆ. ಅವರನ್ನು ಪುರಸಭೆ ಸ್ವಚ್ಚತಾ ರಾಯಭಾರಿಯನ್ನಾಗಿ ಗುರುತಿಸಿದೆ ಕಾರ್ಕಳ ಪುರಸಭೆ ಸದಸ್ಯ ವಿನ್ನಿ ಮಂಡೋನ್ಸಾ  ಹೇಳಿದ್ದಾರೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬ!

ತೀರ್ಥಹಳ್ಳಿಯಲ್ಲಿ ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬ!
– ಮನೆ ಮನೆಯಲ್ಲಿ ಸುಮಂಗಲಿಯರ ಸಡಗರ
– ದೇಗುಲದಲ್ಲಿ ಮಹಿಳಾ ಭಕ್ತರಿಗಾಗಿ ಬಾಗಿನ ಸಮರ್ಪಣೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗಿದೆ. ಶುಭ ಶುಕ್ರವಾರದ ದಿನ ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರು ಸಂಭ್ರಮಿಸಿದ್ದಾರೆ. ಲಕ್ಷ್ಮಿ ದೇವಿಯನ್ನು ಆರಾಧಿಸುವ ಮುತ್ತೈದೆಯರೇ ಆಚರಿಸುವ ವಿಶೇಷವಾದ ವ್ರತ ವರಮಹಾಲಕ್ಷ್ಮಿ ಹಬ್ಬ. ಬೆಳಿಗ್ಗೆಯಿಂದಲೇ ಎಲ್ಲೆಡೆ ಆಚರಣೆ ಕಂಡು ಬಂದಿತು. ಮನೆ ಮನೆಯಲ್ಲಿ ಸುಮಂಗಲಿಯರ ಸಡಗರ, ಸಂಪತ್ತಿನ ಅಧಿದೇವತೆ ದರ್ಶನಕ್ಕಾಗಿ ಹೋಗುವ ಮಹಿಳಾ ಭಕ್ತರಿಗೆ ತಾಲೂಕಿನ ಮಾರಿಕಾಂಬ, ಇಂದವರ ಶ್ರೀ ಮಹಾಲಕ್ಷ್ಮಿ, ಕಿತ್ತನಗದ್ದೆ ಸಾಂಬ ಸದಾಶಿವ, ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದಿದ್ದು ಲಕ್ಷ್ಮಿಯ ಪ್ರಮುಖ ದೇಗುಲದಲ್ಲಿ ವಿಶೇಷ ಉಡುಗೊರೆಯಾಗಿ ಬಾಗಿನ ನೀಡಿದ್ದಾರೆ. ರಾಜ್ಯದ ಎಲ್ಲಾ ಮುಜರಾಯಿ ದೇಗುಲದಲ್ಲಿಯೂ ಮಹಿಳಾ ಭಕ್ತರಿಗಾಗಿ ಅರಿಶಿನ, ಕುಂಕುಮ, ಬಳೆ, ಹಣವನ್ನು ಕೊಡಲಾಗಿದೆ.

ಮನೆ, ಕಚೇರಿಯಲ್ಲಿ ವಿಶೇಷ ಪೂಜೆ

ವರಮಹಾಲಕ್ಷ್ಮಿ ಹಬ್ಬವನ್ನು ಮನೆ, ಕಚೇರಿಗಳಲ್ಲಿ ವಿಶೇಷವಾಗಿ ಆಚರಣೆ ಮಾಡಲಾಯಿತು. ಮನೆ, ಕಚೇರಿಯಲ್ಲಿ ವಿಶೇಷ ಅಲಂಕಾರ ಮಾಡಿ, ಪೂಜೆ ಮಾಡಿ ಎಲ್ಲರಿಗೂ ಪ್ರಸಾದ ನೀಡಲಾಯಿತು. ಹಣ, ಚಿನ್ನ ಇಟ್ಟು ಪೂಜೆ ಮಾಡಲಾಯಿತು.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ಬೆಂಗಳೂರು

ಮಳೆಗಾಲದಲ್ಲಿ ಬಿಸಿಲ ಬೇಗೆಗೆ ಜನ ಸುಸ್ತು!

ಮಳೆಗಾಲದಲ್ಲಿ ಬಿಸಿಲ ಬೇಗೆಗೆ ಜನ ಸುಸ್ತು!
– ಮಳೆ ಇಲ್ಲದೆ ಕೃಷಿಕರು ಕಂಗಾಲು
– ಭತ್ತದ ನಾಟಿ ಮಾಡಿದವರ ಕಥೆ ಗೋವಿಂದ
– ಹೀಗೆ ಅದರೆ ಕುಡಿಯುವ ನೀರಿಲ್ಲ: ಮುಂದಿನ ವಾರದಿಂದ ಮಳೆ?

NAMMUR EXPRESS NEWS
ಬೆಂಗಳೂರು: ಮಳೆಗಾಲದಲ್ಲಿ ಬಿಸಿಲ ಬೇಗೆಗೆ ಜನ ಸುಸ್ತಾಗಿದ್ದಾರೆ. ಅಚ್ಚರಿ ಎಂದರೆ ಅತೀ ಹೆಚ್ಚು ಮಳೆ ಸುರಿಯುವ ಮಲೆನಾಡು ಮತ್ತು ಕರಾವಳಿಯಲ್ಲೂ ಕೂಡ ಈ ಸಲ ಮಳೆ ಇಲ್ಲದಾಗಿದೆ. ಒಂದು ಕಡೆ ಮಳೆ ಇಲ್ಲದೆ ರಾಜ್ಯದ ಕೃಷಿಕರು ಕಂಗಾಲಾಗಿದ್ದಾರೆ. ಭತ್ತದ ನಾಟಿ ಮಾಡಿದವರ ಕಥೆ ಗೋವಿಂದ ಎನ್ನುವ ಸ್ಥಿತಿ ನಿರ್ಮಾಣ ಆಗಿದೆ.

ಹೀಗೆ ಅದರೆ ಕುಡಿಯುವ ನೀರಿಲ್ಲ..!

ರಾಜ್ಯಕ್ಕೆ ಈ ಬಾರಿ ಮುಂಗಾರು ಎಂಟ್ರಿ ಕೊಟ್ಟಿದ್ದೇ ತಡವಾಗಿ, ಜುಲೈ ತಿಂಗಳ ಮಧ್ಯದಲ್ಲಿ ಅಬ್ಬರದ ಮಳೆಯಾದ ಹಿನ್ನೆಲೆ ಬಹುತೇಕ ಜಿಲ್ಲೆಗಳಲ್ಲಿ ಕೆರೆ, ಹಳ್ಳ, ಕೋಡಿಗಳು ತುಂಬಿ ಹರಿದಿದ್ದವು. ಅಲ್ಲದೆ ಜಲಾಶಯಗಳ ನೀರಿನ ಮಟ್ಟದಲ್ಲೂ ಸುಧಾರಿಸಿತ್ತು. ಆದರೆ ಆಗಸ್ಟ್ ಆರಂಭದಿಂದಲೂ ಇಲ್ಲಿವರೆಗೂ ಮಳೆರಾಯ ತನ್ನ ಆರ್ಭಟವನ್ನು ನಿಲ್ಲಿಸಿದ್ದು, ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಮತ್ತೆ ಆರ್ಭಟಿಸಲಿದ್ದಾನೆ ಎನ್ನುವ ಮುನ್ಸೂಚನೆ ಇದೆ. ಆದರೆ ಮಳೆ ಬಂದ ಮೇಲೆ ಬಂತು ಅಷ್ಟೇ. ಆದ್ದರಿಂದ ಕುಡಿಯುವ ನೀರಿಗೂ ಪರದಾಟ ನಡೆಸಬೇಕಾದ ಸ್ಥಿತಿ ಇದೆ. ಇದೀಗ ಮುಂಗಾರು ಕೈಕೊಟ್ಟ ಹಿನ್ನೆಲೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲ ಧಗೆ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಆಗಾಗ ಜಿನುಗು ಮಳೆಯಾಗುತ್ತಿದೆ. ಇನ್ನು ಇಂದು ಕೂಡ ಈ ಭಾಗದಲ್ಲಿ ಸಾಧರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಾಗೆಯೇ

ಸೆಪ್ಟೆಂಬರ್ ತಿಂಗಳಲ್ಲಿ ಮಳೆ?

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೆಪ್ಟೆಂಬರ್ ತಿಂಗಳ ಆರಂಭದಿಂದ ಮಳೆರಾಯ ಆರ್ಭಟಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಒಂದು ವೇಳೆ ಇದರಂತೆಯೇ ಮಳೆರಾಯ ಕರುಣೆ ತೋರಿದರೆ ಬತ್ತಿಹೋಗುತ್ತಿರುವ ಕೆರೆ, ಹಳ್ಳಗಳಿಗೆ ಜೀವಕಳೆ ಬಂದಂತಾಗುತ್ತದೆ. ಮತ್ತೊಂದೆಡೆ ಜಲಾಶಗಳಲ್ಲಿ ನೀರಿನ ಮಟ್ಟವೂ ಕೂಡ ಏರಿಕೆಯಾಗುತ್ತದೆ. ಇನ್ನು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕಲಬುರಗಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಮಂಡ್ಯ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶುಕ್ರವಾರದಿಂದ 3 ದಿನಗಳ ಕಾಲ ಮಳೆ ಬೀಳುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಶುಕ್ರವಾರ ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಒಳನಾಡಿನ ಹಲವೆಡೆ ಮಳೆ ಸುರಿಯುವ ಸಾಧ್ಯತೆಯಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಬೆಳಗ್ಗೆ ಮೋಡಕವಿದ ವಾತಾವರಣ ಇದ್ದು, ಸಂಜೆ ವೇಳೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಅಂತಲೂ ತಿಳಿಸಿದೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಟಿಎಪಿಸಿಎಂಎಸ್ ಜಿಲ್ಲೆಗೆ ನಂಬರ್ 1

ತೀರ್ಥಹಳ್ಳಿ ಟಿಎಪಿಸಿಎಂಎಸ್ ಜಿಲ್ಲೆಗೆ ನಂಬರ್ 1
– ಸೆ.2 ರಂದು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ಸಭೆ
– ಏಳು ಬೀಳುಗಳ ನಡುವೆ ಪ್ರಗತಿ ಹೆಜ್ಜೆ: ಸಂಘದ ಅಧ್ಯಕ್ಷನಾಗರಾಜ್ ಶೆಟ್ಟಿ

NAMMUR EXPRESS NEWS
ತೀರ್ಥಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸಂಸ್ಥೆ ಅನೇಕ ಏಳು ಬೀಳುಗಳನ್ನು ಕಂಡು ಕೆಲಸ ನಿರ್ವಹಿಸುತ್ತಿದೆ. ನಮ್ಮ ಸಂಘ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ. ಸಂಘದ ಜೊತೆಗೆ ಸಮುದಾಯ ಭವನ ಮಾಡಿಕೊಂಡು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ ಹೇಳಿದ್ದಾರೆ. ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸೆ.2 ರಂದು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಯಲಿದೆ. ಸಂಘದಲ್ಲಿ 2022-23 ನೇ ಸಾಲಿನ ವರ್ಷದ ಅಂತ್ಯಕ್ಕೆ ವಿವಿಧ ಸಂಸ್ಥೆಗಳಲ್ಲಿ 9.60.000.00 ಮೌಲ್ಯದ ಷೇರುಗಳನ್ನು ಬ್ಯಾಂಕ್ ಗಳಲ್ಲಿ 2.91.36.184 ರೂ ಗಳ ಠೇವಣಿಗಳನ್ನು ಹೊಂದಿದ್ದು ಒಟ್ಟಾರೆ 3.00.96.184 ರೂ ಗಳ ಹೂಡಿಕೆಯನ್ನು ಹೊಂದಿದೆ ಎಂದರು.

ಟಿಎಪಿಸಿಎಂಎಸ್ ಗೆ ರೈತರೇ ಆಧಾರ ಸ್ಥಂಭ. ಇಲ್ಲಿನ ರೈಸ್ ಮಿಲ್ ಕೂಡ ರೈತರಿಗೆ ಅನುಕೂಲವಾಗಲು ರೈತರ ಭತ್ತವನ್ನು ಖರೀದಿ ಮಾಡಿ ಅಕ್ಕಿಯನ್ನು ವಾಪಾಸ್ ಕೊಡುತ್ತೇವೆ. ಸಂಘದ ಸದಸ್ಯರ ಕೃಷಿಗೆ ಅವಶ್ಯಕತೆ ಇರುವ ರಾಸಾಯನಿಕ ಗೊಬ್ಬರ, ಉತ್ತಮ ಬೀಜ, ಕ್ರಿಮಿನಾಶಕಗಳು, ವ್ಯವಸಾಯ ಉಪಕರಣಗಳು ಖರೀದಿಸಿ ರೈತರಿಗೆ ಮಾರಾಟ ಮಾಡುತ್ತೇವೆ ಎಂದರು.
ಸಹಕಾರಿ ನಾಯಕರಾದ ವಿಜಯದೇವ್, ಮಂಜಪ್ಪ ಗೌಡ, ತಾರಾನಾಥ್, ಕಾರ್ಯದರ್ಶಿ ರಚನಾ ಸೇರಿ ಹಲವರು ಉಪಸ್ಥಿತರಿದ್ದರು

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

– ಅಂಕೋಲಾದ ನದಿಯಲ್ಲಿ ಮೊಸಳೆ!
– ಕಡೂರಲ್ಲಿ ತಹಸೀಲ್ದಾರ್ ಆಗಿದ್ದ ಉಮೇಶ್ ಅರೆಸ್ಟ್
– ಶಿವಮೊಗ್ಗ: ಮನೆಯಲ್ಲಿದ್ದ ಚಿನ್ನ ಬಸ್ ಚಾಲಕನಿಗೆ ತಂದು ಕೊಟ್ಟ ಬಾಲಕಿ!

NAMMUR EXPRESS NEWS
ಚಿಕ್ಕಮಗಳೂರು: ಕಡೂರಿನಲ್ಲಿ ಈ ಹಿಂದೆ ತಹಸೀಲ್ದಾರ್ ಆಗಿದ್ದ ಉಮೇಶ್ ರವರನ್ನು ಸಾವಿರಾರು ಎಕರೆ ಭೂಮಿಯನ್ನ ಅಕ್ರಮವಾಗಿ ಮಂಜೂರು ಮಾಡಿದ್ದ ಆರೋಪದಡಿಯಲ್ಲಿ ಅರೆಸ್ಟ್ ಮಾಡಲಾಗಿದೆ. ಮೀಸಲು ಅರಣ್ಯ ಜಾಗವನ್ನು 8 ಜನರಿಗೆ ಉಮೇಶ್ ತಹಸೀಲ್ದಾರ್ ಆಗಿದ್ದ ವೇಳೆಯಲ್ಲಿ ಪರಭಾರೆ ಮಾಡಿದ್ದರು. ಕಡೂರು ಠಾಣೆಯಲ್ಲಿ ಉಮೇಶ್ ಸೇರಿ ಮೂವರ ವಿರುದ್ಧ ಕೇಸ್ ದಾಖಲಾಗಿತ್ತು. ಕಡೂರಿನಲ್ಲಿ 3500 ಎಕರೆ ಭೂಮಿಯನ್ನ ಉಮೇಶ್ ಅಕ್ರಮವಾಗಿ ಮಂಜೂರು ಮಾಡಿದ್ದರು. ಇತ್ತೀಚೆಗೆ ಪ್ರಮೋಷನ್ ಆಗಿಸಾವಿರಾರು ಎಕರೆ ಭೂಮಿಯನ್ನ ಅಕ್ರಮವಾಗಿ ಮಂಜೂರು ಮಾಡಿದ್ದ ಆರೋಪದಡಿಯಲ್ಲಿ ಉಮೇಶ್ ರವರನ್ನು ಬಂಧಿಸಲಾಗಿದೆ.

ಸೇತುವೆ ಬಳಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ!

ಮೊಸಳೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜನರು ನದಿಗಿಳಿಯುವ ಪ್ರಯತ್ನ ಮಾಡಬಾರದೆಂದು ಉತ್ತರ ಕನ್ನಡ ಜಿಲ್ಲೆ ಅಂಕೋಲ ತಾಲ್ಲೂಕು ಆಡಳಿತ ಎಚ್ಚರಿಗೆ ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನಲ್ಲಿ ಹಿಲ್ಲೂರು ಹೆಸರಿನ ಗ್ರಾಮವೊಂದಿದ್ದು ಅಲ್ಲಿಮ ಹೊಸಕಂಬಿ ಸೇತುವೆ ಬಳಿ ಬೃಹತ್ ಗಾತ್ರದ ಮೊಸಳೆಯೊಂದುಕಾಣಿಸಿಕೊಂಡಿದೆ. ಸ್ಥಳೀಯರು ಹೇಳುವ ಪ್ರಕಾರ ಮೊಸಳೆ ಸುಮಾರು 7 ಅಡಿಗಳಷ್ಟು ಉದ್ದವಿದೆ. ಈ ಮೊಸಳೆ ಕಳೆದ ವಾರ ಕಾರವಾರ ಬಳಿಯ ಕದಂಬ ನೌಕಾನೆಲೆ ಬಳಿ ಕಾಣಿಸಿಕೊಂಡಿತ್ತು ಮತ್ತು ಅದನ್ನು ಹಿಡಿದು ಗಂಗಾವಳ ನದಿಯಲ್ಲಿ ಬಿಡಲಾಗಿತ್ತು. ಅದೀಗ ಹೊಸಕಂಬಿ ಸೇತುವೆ ಬಳಿ ಕಾಣಿಸಿಕೊಂಡಿದೆಯೆಂದು ಜನ ಹೇಳುತ್ತಿದ್ದಾರೆ.

ಚಾಲಕನಿಗೆ ಚಿನ್ನಾಭರಣ ಕೊಟ್ಟ ಬಾಲಕಿ!

ಅಚ್ಚರಿಯ ರೀತಿಯಲ್ಲಿ ಬಾಲಕಿಯೋರ್ವಳು ತನಗೆ ಪರಿಚಯನಾದ ಬಸ್ ಚಾಲನಿಗೆ ಮನೆಯಲ್ಲಿದ್ದ 2 ಲಕ್ಷದ 25 ಸಾವಿರ ರೂ ಮೌಲ್ಯದ ಚಿನ್ನಾಭರಣ ಮತ್ತು ನಗದು ನೀಡಿದ ಬಗ್ಗೆ ತಾಯಿ ದೂರು ದಾಖಲಿಸಿದ್ದಾರೆ. 6 ತಿಂಗಳ ಹಿಂದೆ ಈಸೂರು ಗ್ರಾಮಕ್ಕೆ ತೆರಳಲು ಖಾಸಗಿ ಬಸ್ ನಲ್ಲಿ ಪ್ರಯಾಣಿಸುವ ವೇಳೆ ಸುನೀಲ ಎಂಬ ಚಾಲಕ ಎಸ್ ಎಸ್ ಎಲ್ ಸಿ ಓದುತ್ತಿರುವ ಬಾಲಕಿಗೆ ಪರಿಚಯವಾಗಿರುತ್ತಾನೆ. ಪರಿಚಯವಾದ ಚಾಲಕ ಮನೆಯ ಬಳಿ ಮಹಿಳೆಯೋರ್ವಳ ಜೊತೆಗೆ ಬಂದು ಲಾರಿ ಖರೀದಿಸಬೇಕು ಹಣ ಬೇಕಿದೆ.

ಆತನ ಮಾತಿಗೆ ಮರುಳಾದ ಬಾಲಕಿ ಮನೆಯಲ್ಲಿದ್ದ 50 ಸಾವಿರ ಕ್ಯಾಶ್ 15 ಗ್ರಾಂ ಚಿನ್ನ ಮತ್ತು 5 ಗ್ರಾಂ ಚಿನ್ನದ ಉಂಗುರ ಕೊಟ್ಟು ಸಹಕರಿಸಿದ್ದಾಳೆ. ಅಲ್ಲದೆ ಮತ್ತೆ ಬಾಲಕಿ ಶಾಲೆಯಿಂದ ಮನೆಗೆ ಬರುವ ವೇಳೆ ಖರೀದಿಗೆ ಹಣ ಸಾಕಾಗುತ್ತಿಲ್ಲವೆಂದು ಹೇಳಿದ್ದಾನೆ. ಆ ವೇಳೆ ಕುತ್ತಿಗೆಯಲ್ಲಿದ್ದ ಚಿನ್ನಾಭರಣವನ್ನ ಬಾಲಕಿ ತೆಗೆದುಕೊಟ್ಟಿದ್ದಾಳೆ.ಈ ಘಟನೆ ಭಾರೀ ಕುತೂಹಲ ಮೂಡಿದೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ಉದ್ಯೋಗ ಸುದ್ದಿ ಬೆಂಗಳೂರು

ಅತಿಥಿ ಉಪನ್ಯಾಸಕರ ನೇಮಕ ಶುರು

ಅತಿಥಿ ಉಪನ್ಯಾಸಕರ ನೇಮಕ ಶುರು
– ಅರ್ಹ ಅಭ್ಯರ್ಥಿಗಳು ಆ.25ರಿಂದ ಅರ್ಜಿ ಸಲ್ಲಿಸಬಹುದು
– ಏನಿದು ಹುದ್ದೆ… ಇಲ್ಲಿದೆ ಡೀಟೇಲ್ಸ್

NAMMUR EXPRESS NEWS
ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಪ್ರತಿವರ್ಷದಂತೆ ಈ ಬಾರಿಯೂ (2023-24) ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯ ರ್ಥಿಗಳು ಆ.25ರಿಂದ dce.karnataka. gov.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆ.2 ಕೊನೆಯ ದಿನ. ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಸೆ.4ರಂದು ರಾಜ್ಯವ್ಯಾಪಿ ಮೆರಿಟ್‌ ಪಟ್ಟಿ ಪ್ರಕಟಿಸಲಾಗುವುದು. ಸೆ.16 ರಂದು ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು ಆಯ್ಕೆಯಾದವರ ಪಟ್ಟಿ ಪ್ರಕಟಿಸಲಾಗುವುದು. 10 ತಿಂಗಳ ಅವಧಿಗೆ, ಮಾಸಿಕ 32,000, 30,000, 28,000 ಮತ್ತು 26,000 ರು. ಗೌರವಧನ ನೀಡಲಾ ಗುತ್ತದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!

Categories
ಸಿನಿಮಾ

ಬೆಳ್ಳಿ ತೆರೆ ಮೇಲೆ ಟೋಬಿ ಮ್ಯಾಜಿಕ್!?

ಬೆಳ್ಳಿ ತೆರೆ ಮೇಲೆ ಟೋಬಿ ಮ್ಯಾಜಿಕ್!?
– ರಾಜ್ ಬಿ ಶೆಟ್ಟಿ ಅಭಿನಯದ ಸಿನಿಮಾ
– ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ

NAMMUR EXPRESS NEWS
ಬೆಂಗಳೂರು: ರಾಜ್ ಬಿ.ಶೆಟ್ಟಿ ನಟನೆಯ ಸಿನಿಮಾ ‘ಟೋಬಿ’ ಸಿನಿಮಾ ಬಿಡುಗಡೆಗೊಂಡಿದ್ದು ಉತ್ತಮ ಸ್ಪಂದನೆ ಸಿಗುತ್ತಿದೆ.
ರಾಜ್ ಬಿ.ಶೆಟ್ಟಿ, ಚೈತ್ರ ಜೆ.ಆಚಾರ್ ಹಾಗೂ ಸಂಯುಕ್ತ ಹೊರನಾಡು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಟೋಬಿ. ಇದರಲ್ಲಿ ಕುರಿ ಒಂದು ಪ್ರಮುಖ ಪಾತ್ರ ಮಾಡಿದೆ. ‘ಗರುಡ ಗಮನ ವೃಷಭ ವಾಹನ’ ಸಿನಿಮಾದ ಯಶಸ್ಸಿನ ಬಳಿಕ ರಾಜ್ ನಟಿಸಿರುವ ಈ ಸಿನಿಮಾ ರಾಜ್ಯದ 175 ಏಕಪರದೆ ಚಿತ್ರಮಂದಿರಗಳಲ್ಲಿ ಹಾಗೂ 60 ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ‘ಕೆಣಕಿದರೆ ಕುರಿಯೂ ಮಾರಿಯಾಗಬಲ್ಲದು!’ ಎನ್ನುವ ಟ್ಯಾಗ್‌ಲೈನ್ ಇರುವ “ಟೋಬಿ’ಗೆ ಬಾಸಿಲ್ ಅಲ್ಟಲಕ್ಕಲ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಸಿನಿಮಾದ ಮೂಲ ಕಥೆಯನ್ನು ಟಿ.ಕೆ.ದಯಾನಂದ್ ಬರೆದಿದ್ದಾರೆ. ರಾಜ್ ಬಿ.ಶೆಟ್ಟಿ ಇದನ್ನು ವಿಸ್ತರಿಸಿದ್ದು, ನಟಿಸುವುದರ ಜೊತೆಗೆ ನಿರ್ದೇಶನದತ್ತಲೂ ಗಮನಹರಿಸಿದ್ದಾರೆ. ಈ ಹಿಂದೆ ‘ಲೈಟರ್ ಬುದ್ಧ ಫಿಲ್ಡ್‌ ನಡಿ ನಿರ್ಮಾಣವಾದ ರಾಜ್ ಬಿ.ಶೆಟ್ಟಿ ನಟನೆಯ ‘ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ರವಿ ರೈ ಕಳಸ ಅವರೇ ‘ಟೋಬಿ’ ನಿರ್ಮಾಣ ಮಾಡಿದ್ದಾರೆ. ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ರಾಜ್ಯದಾದ್ಯಂತ ವಿತರಣೆ ಮಾಡಲಿದೆ. ಚಿತ್ರಕ್ಕೆ ಮಿಥುನ್ ಮುಕುಂದನ್ ಸಂಗೀತ ನಿರ್ದೇಶನವಿದ್ದು, ಪ್ರವೀಣ್ ಶ್ರೀಯನ್ ಛಾಯಾಗ್ರಹಣವಿದೆ. ‘ಗರುಡ ಗಮನ..’ ಸಿನಿಮಾದ ತಾಂತ್ರಿಕ ವಿಭಾಗದಲ್ಲಿ ಇದೇ ತಂಡ ಕಾರ್ಯನಿರ್ವಹಿಸಿತ್ತು. ಮಲೆನಾಡು, ಬೆಂಗಳೂರು, ಕರಾವಳಿ ಸೇರಿದಂತೆ ಎಲ್ಲೆಡೆ ಸಿನಿಮಾಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ರಿಷಬ್, ರಕ್ಷಿತ್ ಶೆಟ್ಟಿ ಕೂಡ ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ : ಚಂದ್ರನಂಗಳದಲ್ಲಿ ಭಾರತದ ಮುದ್ರೆ!