Categories
ತೀರ್ಥಹಳ್ಳಿ

ಗಾಂಧಿ ಗ್ರಾಮ ಪುರಸ್ಕಾರ ಸ್ವೀಕರಿಸಿದ ಸಿಂಗನಬಿದಿರೆ ಗ್ರಾಪಂ ಅಧ್ಯಕ್ಷ ನವೀನ್ ಮತ್ತು ತಂಡ!

ಗಾಂಧಿ ಗ್ರಾಮ ಪುರಸ್ಕಾರ ಸ್ವೀಕರಿಸಿದ ಸಿಂಗನಬಿದಿರೆ ಗ್ರಾಪಂ ಅಧ್ಯಕ್ಷ ನವೀನ್ ಮತ್ತು ತಂಡ!
– 2022- 23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ
– ಬೆಂಗಳೂರಲ್ಲಿ ಸಚಿವ ಪ್ರಿಯಾಂಕಾ ಖರ್ಗೆ ಅವರಿಂದ ಸ್ವೀಕಾರ

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದಲ್ಲಿ 2022-23ರ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ರಾಜ್ಯದ 233 ಗ್ರಾಮ ಪಂಚಾಯತ್‌ಗಳು ಆಯ್ಕೆಯಾಗಿದ್ದು ಗಾಂಧಿ ಜಯಂತಿಯಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತ ಗ್ರಾಮಗಳ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒ ಸೇರಿದಂತೆ ಅಧಿಕಾರಿಗಳು ಭಾಗಿಯಾಗಲಿದ್ದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪುರಸ್ಕರಿಸಿದರು.
ಈ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತೀರ್ಥಹಳ್ಳಿಯ 38 ಗ್ರಾಮ ಪಂಚಾಯಿತಿಗಳ ಪೈಕಿ ಸಿಂಗನಬಿದಿರೆ ಗ್ರಾಮ ಪಂಚಾಯತ್ ಆಯ್ಕೆ ಆಗಿದ್ದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನವೀನ್ ಕುಳ್ಳು0ಡೆ, ಸುಜಾತ ಉಪಾಧ್ಯಕ್ಷರು, ಪಿಡಿಓ ಭಾಸ್ಕರ್ ಪ್ರಶಸ್ತಿ ಸ್ವೀಕರಿಸಿದರು. ಕುಸುಮ ಸದಸ್ಯರು, ತಿಮಪ್ಪ ಸದಸ್ಯರು, ಸದೇಶ ಸದಸ್ಯರು, ದಿವ್ಯ ಸದಸ್ಯರು ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Categories
ಚಿಕ್ಕಮಗಳೂರು

ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ” ರವರ ಜನ್ಮ ದಿನಾಚರಣೆ

ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ” ರವರ ಜನ್ಮ ದಿನಾಚರಣೆ
-ಜಯಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿ ಸಂಭ್ರಮಾಚರಣೆ.
-ಪುಷ್ಪ ನಮನ ಸಲ್ಲಿಸಿದ ನಂತರ ಶಾಲಾ ಸುತ್ತಮುತ್ತ ಶ್ರಮದಾನ, ಸ್ವಚ್ಛತೆ ಕೆಲಸ ಪೂರ್ಣಗೊಳಿಸಿದರು.

NAMMUR EXPRESS NEWS
ಜಯಪುರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಬೇರೆ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ ವಿನೂತನವಾಗಿ ಗಾಂಧೀ ಜಯಂತಿಯನ್ನು ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಶ್ರೀಲತಾ, ಉಪಾಧ್ಯಕ್ಷರಾದ ಶ್ರೀಮತಿ ಶೃತಿ, CRP ಧನಂಜಯ್, ಮುಖ್ಯ ಶಿಕ್ಷಕರು ಶ್ರೀಮತಿ ಮಂಜುಳಾ, ಎಸ್ ಡಿ ಎಂ ಸಿ ಯ ಎಲ್ಲ ಸದಸ್ಯರು, ಊರಿನ ಗ್ರಾಮಸ್ಥರುಗಳು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಅತ್ಯಂತ ಪ್ರಾಮಾಣಿಕವಾಗಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ ಶಿಕ್ಷಕರುಗಳಾದ ಶ್ರೀಮತಿ ಹೇಮಾವತಿ ಮತ್ತು ಶ್ರೀಯುತ ಶಿವಕುಮಾರ್ ಇವರುಗಳ ಕೈಯಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುಷ್ಪ ನಮನ ಸಲ್ಲಿಸಿದ ನಂತರ ಶಾಲಾ ಸುತ್ತಮುತ್ತ ಶ್ರಮದಾನ ಮಾಡಿ ಸ್ವಚ್ಛಗೊಳಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಹೇಮಾವತಿ ಮತ್ತು ಶ್ರೀಯುತ ಶಿವಕುಮಾರ್ ಅವರನ್ನು ಅತ್ಯಂತ ಗೌರವದಿಂದ
ಸನ್ಮಾನಿಸಿದರು. ಮುಖ್ಯ ಅತಿಥಿಗಳಿಗೆ ಶಾಲು ಹೊದಿಸಿ, ಹಾರ ಹಾಕಿ, ಫಲ ತಾಂಬೂಲಗಳೊಂದಿಗೆ ಬೆಳ್ಳಿ ಕಾಣಿಕೆಗಳನ್ನು ನೀಡಿ ಗೌರವಿಸಿದರು. ಸನ್ಮಾನಿತರು ಕಾರ್ಯಕ್ರಮವನ್ನು ಉದ್ದೇಶಿಸಿ ಗಾಂಧಿ ಜಯಂತಿ ಬಗ್ಗೆ ಮಾತನಾಡುತ್ತಾ ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ ವ್ಯಕ್ತಿತ್ವ ಹಾಗೂ ಅವರು ದೇಶಕ್ಕೆ ನೀಡಿದ ಮಹಾನ್ ಕೊಡುಗೆಗಳ ಬಗ್ಗೆ ತಿಳಿಸಿದರು. ಈ ಮಹಾನ್ ವ್ಯಕ್ತಿಗಳು ನಡೆದು ಬಂದ ದಾರಿಯಲ್ಲಿ ನಾವಲ್ಲರೂ ಸಾಗಬೇಕು . ನಮ್ಮ ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವುದರ ಜೊತೆಗೆ ನಮ್ಮ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರಿಯಾಗುವಂತೆ ಮಕ್ಕಳನ್ನು ಪೋಷಿಸಿ ಬೆಳೆಸಬೇಕು ಎಂದು ತಿಳಿಸಿದರು.

ಸನ್ಮಾನಿತರಾದ ಇಬ್ಬರು ಶಿಕ್ಷಕರುಗಳು ಸದರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಅನುಭವಗಳನ್ನು ಸಭಿಕರಲ್ಲಿ ಹಂಚಿಕೊಂಡರು ಈ ಸಂದರ್ಭದಲ್ಲಿ ಪೋಷಕರು ಹಾಗೂ ಮಕ್ಕಳು ಭಾವುಕರಾಗಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡರು. ಶಾಲೆಯನ್ನು ಉತ್ತಮ ರೀತಿಯಲ್ಲಿ ನಡೆಸಲು ಪೋಷಕರು, ಶಾಲಾ ಎಸ್ ಡಿ ಎಂ ಸಿ ಸಮಿತಿಯವರು ಉತ್ತಮವಾಗಿ ಸಹಕರಿಸಿರುವುದಾಗಿ ತಿಳಿಸಿದರು. ಮುಂದೆಯೂ ಕೂಡ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶಾಲಾ ಸಮಿತಿ ಹಾಗೂ ಪೋಷಕರು ಸಹಕಾರವನ್ನು ನೀಡಬೇಕು ಎಂದು ಸೂಚಿಸಿದರು.

ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಶ್ರೀಯುತ ಧನಂಜಯ್‌ ರವರು ಸನ್ಮಾನಿತರಾದ ಈ ಇಬ್ಬರು ಶಿಕ್ಷಕರುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಖಾಸಗಿ ಶಾಲಾ ಮಕ್ಕಳಿಗಿಂತ ಕಡಿಮೆ ಇಲ್ಲದಂತೆ ಮಕ್ಕಳಲ್ಲಿ ಕಲಿಕೆ ಹಾಗೂ ಶಿಸ್ತನ್ನು ಮೂಡಿಸಿರುತ್ತಾರೆ. ಶಾಲಾ ಶೈಕ್ಷಣಿಕ ಮತ್ತು ಇಲಾಖಾ ಚಟುವಟಿಕೆಗಳಲ್ಲಿ ಇಬ್ಬರು ಶಿಕ್ಷಕರು ಸರಿಸಮಾನವಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಅತ್ಯಂತ ಉತ್ಸಾಹದಿಂದ ಕರ್ತವ್ಯ ನಿರ್ವಹಿಸಿ ಬೇರೆ ಶಾಲೆಗೆ ವರ್ಗಾವಣೆಗೊಂಡಿರುವ ಇಬ್ಬರು ಶಿಕ್ಷಕರನ್ನು ಗೌರವಯುತವಾಗಿ ಸನ್ಮಾನಿಸಿದ ಶಾಲಾ ಸಮಿತಿ ಮತ್ತು ಗ್ರಾಮಸ್ಥರಿಗೆ ಇಲಾಖೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.

ವೇದಿಕೆಯ ಅಧ್ಯಕ್ಷತೆ ವಹಿಸಿದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಶ್ರೀಲತಾ ರವರು ಮಾತನಾಡುತ್ತಾ ಗಾಂಧಿ ಜಯಂತಿಯ ದಿನದಂದು ಶಾಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ಗೌರವಿಸಿದ್ದು ಎಲ್ಲರಿಗೂ ಸಂತಸ ತಂದಿದೆ ಎಂಬ ವಿಚಾರವನ್ನು ಹಂಚಿಕೊಂಡರು. ಇಬ್ಬರು ಶಿಕ್ಷಕರು ಅತ್ಯಂತ ಪ್ರಾಮಾಣಿಕವಾಗಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಶಾಲಾ ಸಮಿತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ SDMC ಅಧ್ಯಕ್ಷರ ಸ್ಥಾನವನ್ನು ಮಹಿಳೆಯರಿಗೆ ನೀಡಿ ಪ್ರೋತ್ಸಾಹ ನೀಡಿರುತ್ತಾರೆ ಇವರ ಮುಂದಿನ ವೃತ್ತಿ ಜೀವನ ಮತ್ತು ವ್ಯಯಕ್ತಿಕ ಜೀವನ ಚೆನ್ನಾಗಿರಲೆಂದು ದೇವರಲ್ಲಿ ಪ್ರಾರ್ಥಿಸಿಕೊಂಡರು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಸರಳ ವ್ಯಕ್ತಿತ್ವ ಜೀವನದ ಬಗ್ಗೆ ಮಕ್ಕಳಿಗೆ ತಿಳಿಸಿ ಅಧ್ಯಕ್ಷೀಯ ಭಾಷಣವನ್ನು ಮುಗಿಸಿದರು. ಲಘು ಉಪಹಾರ ಮತ್ತು ಸಿಹಿಯನ್ನು ಹಂಚಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಹಿಂದೂ ಮುಸ್ಲಿಂ ಸೌಹಾರ್ದತೆ!

ತೀರ್ಥಹಳ್ಳಿಯಲ್ಲಿ ಹಿಂದೂ ಮುಸ್ಲಿಂ ಸೌಹಾರ್ದತೆ!
– ಛತ್ರಕೇರಿ ಗಣಪತಿ ವಿಸರ್ಜನೆ ವೇಳೆ ಉಪಹಾರ ಹಂಚಿದ ಮುಸ್ಲಿಂ ಬಾಂಧವರು
– ಈದ್ ಮಿಲಾದ್ ಆಚರಣೆ ಜತೆಯೇ ಗಣೇಶನಿಗೆ ನಮನ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಶಾಂತಿ, ಸುವ್ಯವಸ್ಥೆಗೆ ಹೆಸರಾದ ಊರು, ತೀರ್ಥಹಳ್ಳಿ ಹೆಸರೇ ಎಲ್ಲರಿಗೂ ಅಚ್ಚು ಮೆಚ್ಚು. ಈ ನಡುವೆ ತೀರ್ಥಹಳ್ಳಿಯಲ್ಲಿ ಹಿಂದೂ, ಮುಸ್ಲಿಂ ಬಾಂಧವರು ಸೌಹಾರ್ದತೆ ಮೆರೆದಿದ್ದಾರೆ. ಹೌದು.ಸೋಮವಾರ ಛತ್ರಕೆರಿ ಗಣಪತಿ ವಿಸರ್ಜನೆ ವೇಳೆ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಸೀಬಿನಕೆರೆ ಸರ್ಕಲ್ ನಲ್ಲಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬದ ಅಂಗವಾಗಿ ತಿಂಡಿ ಉಪಹಾರದ ವ್ಯವಸ್ಥೆ ಮಾಡಿದ್ದು, ಎಲ್ಲರೂ ಸೌಹಾರ್ದಯುತವಾಗಿ ಹಬ್ಬದಲ್ಲಿ ಪಾಲ್ಗೊಂಡರು. ಎಸ್. ಕೆ. ಫ್ರೆಂಡ್ಸ್ ಈ ವೇಳೆ ಜತೆಗಿದ್ದರು. ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಅನ್ನು ಸಂಭ್ರಮದಿಂದ ಆಚರಿಸುವ ಮೂಲಕ ತೀರ್ಥಹಳ್ಳಿಯ ಹಿಂದೂ ಮುಸ್ಲಿಂ ಬಾಂಧವರು ಸೌಹಾರ್ದತೆ ಮೆರೆದಿದ್ದಾರೆ. ಇನ್ನು ಈ ಒಂದು ಸೌಹಾರ್ದತೆಗೆ ಛತ್ರಕೇರಿ ಗೆಳೆಯರ ಬಳಗ, ತೀರ್ಥಹಳ್ಳಿಯ ಮೆರವಣಿಗೆಯಲ್ಲಿ ಪಾಲ್ಗೊಂಡವರು ಧನ್ಯವಾದ ಅರ್ಪಿಸಿದ್ದಾರೆ.

ಶ್ರೀ ಸಿದ್ದಿ ವಿನಾಯಕ ಯುವಕ ಸಂಘದ 40ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ರಾಜಭೀದಿ ಉತ್ಸವದ ಸಮಯದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ಎಲ್ಲಾ ಕಲಾತಂಡ ಹಾಗೂ ಸಂಘದ ಸದಸ್ಯರುಗಳಿಗೆ ಸೀಬಿನಕೆರೆ ಮಿಲ್ಲತೆ ಮೊಹರಂ ಕಮಿಟಿ, ಹಾಗೂ ಸ್ಥಳೀಯರು ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು.

Categories
ಬೆಂಗಳೂರು ಮಂಗಳೂರು

ಡ್ರಗ್ಸ್ ಮಾಫಿಯಾ..ಜೋಕೆ!

ಡ್ರಗ್ಸ್ ಮಾಫಿಯಾ..ಜೋಕೆ!
– ಯುವ ಜನತೆಯ ಭವಿಷ್ಯ ಹಾಳು ಮಾಡುತ್ತಿರುವ ಮಾದಕ ದ್ರವ್ಯ
– ಪೊಲೀಸ್ ಇಲಾಖೆ ಆಗಬೇಕಿದೆ ಇನ್ನು ಅಲರ್ಟ್
– ಬೆಂಗಳೂರು, ಕರಾವಳಿಯಲ್ಲಿ ಹೆಚ್ಚು..!

NAMMUR EXPRESS NEWS
ಬೆಂಗಳೂರು/ ಮಂಗಳೂರು: ರಾಜ್ಯದಲ್ಲಿ ಪ್ರತಿದಿನ ವರದಿಯಾಗುತ್ತಿರುವ ಪ್ರಕರಣಗಳನ್ನು ಗಮನಿಸಿದರೆ ಡ್ರಗ್ಸ್ ಮಾಫಿಯಾ ದೊಡ್ಡ ಮಟ್ಟದಲ್ಲಿ ಜಾಲ ವಿಸ್ತರಣೆ ಮಾಡಿಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಈ ಮಾಫಿಯಾಗೆ ವಿದ್ಯಾರ್ಥಿಗಳೇ ಟಾರ್ಗೆಟ್. ಬಹುತೇಕ ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳೇ ಈ ಮಾಫಿಯಾದ ಪ್ರಮುಖ ಮಾರಾಟ ಕೇಂದ್ರಗಳಾಗುತ್ತಿವೆ. ಪ್ರತಿಷ್ಠಿತ ಕುಟುಂಬಗಳ ಮಕ್ಕಳು ಶೋಕಿಗಾಗಿ ವ್ಯಸನಿಗಳಾದರೆ, ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ವಯೋಸಹಜ ಆಕರ್ಷಣೆಯಿಂದ ವ್ಯಸನಿಗಳಾಗುತ್ತಿದ್ದಾರೆ. ಗಾಂಜಾದಿಂದ ಆರಂಭವಾಗುವ ದುಶ್ಚಟ ನಂತರ ಇತರ ಅಮಲು ಪದಾರ್ಥಗಳತ್ತ ವಾಲುವಂತೆ ಮಾಡುತ್ತಿದೆ. ಕಾಲೇಜುಗಳು ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಧೃಢಪಟ್ಟಿದೆ. ವಿಶೇಷವಾಗಿ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಮಾದಕದ್ರವ್ಯಕ್ಕೆ ಬಲಿಯಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಎಂದು ವರದಿ ಹೇಳುತ್ತದೆ.

ಮಾದಕ ಸೇವನೆಯಿಂದ ಅಪಘಾತ ಹೆಚ್ಚಳ

ಡ್ರಗ್ಸ್ ಪ್ರಮುಖವಾಗಿ ಎರಡು ಗಂಭೀರ ಸ್ವರೂಪದ ಸಮಸ್ಯೆಗೆ ಕಾರಣವಾಗುತ್ತಿದೆ. ಅಪಘಾತ, ಅಪರಾಧ ಕೃತ್ಯಗಳಿಗೆ ಕಾರಣವಾಗುವುದಷ್ಟೇ ಅಲ್ಲ, ವಿದ್ಯಾರ್ಥಿಗಳ ಭವಿಷ್ಯವನ್ನೇ ನಾಶ ಮಾಡುತ್ತಿದೆ. ಪ್ರೌಢಶಾಲೆ, ಪಿಯು ಹಂತದಲ್ಲಿ ಟಾಪರ್‌ಗಳಾಗಿರುವ ವಿದ್ಯಾರ್ಥಿಗಳು ನಂತರ ಡ್ರಗ್ಸ್ಗೆ ಬಲಿಯಾಗಿ ಶಿಕ್ಷಣವನ್ನೇ ಮೊಟಕು ಮಾಡಿದ ನಿದರ್ಶನಗಳಿಗೆ ಲೆಕ್ಕ ಇಲ್ಲ. ಪಾಲಕರು ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡು ಉನ್ನತ ಶಿಕ್ಷಣ ಕೊಡಿಸಲು ಮುಂದಾದರೆ ಅವರಲ್ಲಿ ದಾರಿ ತಪ್ಪುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚತೊಡಗಿದೆ.

ಪೊಲೀಸ್ ಇಲಾಖೆ ಇನ್ನಷ್ಟು ಜಾಗೃತಿ ಮೂಡಿಸಬೇಕು

ಪೊಲೀಸ್ ಇಲಾಖೆ ಮಾದಕ ದ್ರವ್ಯ ಕುರಿತು ಜಾಗೃತಿ ಮೂಡಿಸುವುದು ಒಳ್ಳೆಯ ಕೆಲಸವೇ. ಆದರೆ ಇದರಿಂದಲೇ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಸಮಸ್ಯೆಯ ಮೂಲದಲ್ಲಿ ಚಿಕಿತ್ಸೆ ನೀಡಿದರೆ ಉದ್ದೇಶ ಸಫಲವಾಗುತ್ತದೆ. ಇಲ್ಲವಾದರೆ ಇಂಥ ಪ್ರಯತ್ನಗಳು ಕೇವಲ ಕಣ್ಮರೆಸುವ ತಂತ್ರಗಳಾಗಬಹುದು. ಇಂದು ಸಮಾಜವನ್ನು ಕಾಡುತ್ತಿರುವ ಹಲವು ಮಾಫಿಯಾಗಳಲ್ಲಿ ಡ್ರಗ್ಸ್ ಮಾಫಿಯಾ ಪ್ರಭಾವಶಾಲಿಯಾಗಿದೆ. ಪೊಲೀಸ್ ಇಲಾಖೆ ಸಮಸ್ಯೆಯ ಮೂಲಕ್ಕೆ ಹೋಗಿ ಈ ಮಾಫಿಯಾವನ್ನು ಮಟ್ಟ ಹಾಕಬೇಕು. ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಮಾದಕ ದ್ರವ್ಯ ಕಳ್ಳ ಸಾಗಾಣಿಕೆ ಕುರಿತ ಮಾಹಿತಿಯನ್ನು ಇಲಾಖೆಯೊಂದಿಗೆ ಹಂಚಿಕೊಳ್ಳಿ ಎಂದು ಅಧಿಕಾರಿಗಳು ಹೇಳುತ್ತಾರೆ.

ಬೆಂಗಳೂರು ಡ್ರಗ್ಸ್ ಕ್ಯಾಪಿಟಲ್!?

ರಾಜ್ಯದಲ್ಲಿ ಬೆಳಕಿಗೆ ಬರುವ ಪ್ರಕರಣಗಳು ಒಂದು ತೂಕವಾದರೆ ಬೆಂಗಳೂರಿನಲ್ಲಿ ಬೆಳಕಿಗೆ ಬರುವ ಪ್ರಕರಣಗಳು ಮತ್ತೊಂದು ತೂಕ. ಈ ಮಾಫಿಯಾ ಅತಿ ಬುದ್ಧಿ ವಂತಿಕೆಯಿಂದ ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತದೆ. ಜಾಲ ವಿಸ್ತರಣೆಗೆ ಹಲವರ (?) ನೆರವನ್ನೂ ಪಡೆಯುತ್ತಿದೆ ಎಂಬ ಆರೋಪವೂ ಪ್ರಬಲವಾಗಿದೆ. ಈ ‘ಹಲವರ’ ಪಟ್ಟಿಯಲ್ಲಿ ಅಧಿಕಾರಿಗಳು ಇರಬಹುದು, ಜನಪ್ರತಿನಿಧಿಗಳೂ ಇರಬಹುದು. ಇಂತಹ ಕೃತ್ಯಗಳಿಗೆ ಸಹಾಯಹಸ್ತ ಚಾಚುವುದು ಸಮಾಜಘಾತುಕ ಚಟುವಟಿಕೆಗೆ ಸಮ ಎಂದು ಪರಿಗಣಿಸಬೇಕಾಗುತ್ತದೆ. ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಎಲ್ಲ ಆರೋಪಿಗಳಿಗೆ ಶಿಕ್ಷೆಯಾಗುವುದಿಲ್ಲ. ಶಿಕ್ಷೆ ಪ್ರಮಾಣ ಮತ್ತು ನಿರಪರಾಧಿಯಾಗಿ ಹೊರಬರುವ ಪ್ರಮಾಣ ಗಮನಿಸಿದರೆ ಶಿಕ್ಷೆ ಪ್ರಮಾಣ ಕಡಿಮೆಯೇ. ಇದಕ್ಕೆ ಪೊಲೀಸ್ ಇಲಾಖೆಯ ‘ಮಾಮೂಲಿ’ ನಿರ್ಲಕ್ಷ್ಯವೇ ಹೊರತು ಬೇರೇನೂ ಕಾರಣವಲ್ಲ. ಡ್ರಗ್ ಮುಕ್ತ ಸಮಾಜ ಚಟುವಟಿಕೆಗಳು ಔಪಚಾರಿಕವಾಗಬಾರದು. ದೇಶದ ಭವಿಷ್ಯವಾಗಿರುವ ಯುವಪೀಳಿಗೆ ಡ್ರಗ್ಸ್‌ಗೆ ಬಲಿಯಾಗದಂತೆ ನೋಡಿಕೊಳ್ಳಬೇಕು.

Categories
ಚಿಕ್ಕಮಗಳೂರು

ಶೃಂಗೇರಿ, ಕೊಪ್ಪದಲ್ಲಿ ಭತ್ತಕ್ಕೆ ರೋಗಗಳ ಕಾಟ!

ಶೃಂಗೇರಿ, ಕೊಪ್ಪದಲ್ಲಿ ಭತ್ತಕ್ಕೆ ರೋಗಗಳ ಕಾಟ!
– ರೈತರು, ಕೂಲಿ ಕಾರ್ಮಿಕರ ಬದುಕಲ್ಲಿ ಕಣ್ಣೀರು
– ಪಾತಾಳಕ್ಕೆ ಬಿದ್ದ ಈರುಳ್ಳಿ, ಆಲೂಗಡ್ಡೆ ದರ!
– ಕಡೂರು, ಬೀರೂರು ಭಾಗದ ರೈತರ ಗೋಳು

NAMMUR EXPRESS NEWS – ಶೃಂಗೇರಿ : ಮಲೆನಾಡಿನ ಹಲವೆಡೆ ಭತ್ತಕ್ಕೆ ರೋಗದ ಕಾಟ ಸಸಿಗೆ ಎಲೆಕಟ್ಟೆ, ಬೆಂಕಿ ಬಾಧೆ ಕಂಡು ಬಂದಿದೆ. ಶೃಂಗೇರಿ, ಕೊಪ್ಪ, ಹರಿಹರಪುರ, ಹಲವು ಭಾಗದಲ್ಲಿ ಮಳೆ ಕೊರತೆಯಿಂದ ಭತ್ತದ ಕೃಷಿಗೆ ಹಿನ್ನಡೆಯಾಗಿರುವುದರ ನಡುವೆ ಲಭ್ಯವಿರುವ ಅಲ್ಪಸ್ವಲ್ಪ ನೀರಿನ ಮೂಲದಿಂದ ನಾಟಿ ಮಾಡಲಾಗಿರುವ ಸಸಿಗೆ ಎಲೆಕಟ್ಟೆ ಮತ್ತು ಬೆಂಕಿ ರೋಗ ಹರಡುತ್ತಿದ್ದು ರೈತರನ್ನು ಆತಂಕಕ್ಕೆ ದೂಡಿದೆ. ಮುಂಗಾರು ವಿಫಲವಾಗಿರುವುದರಿಂದ ಭತ್ತದ ಕೃಷಿಗೆ ಅಡ್ಡಿಯಾಗಿರುವುದು ಒಂದೆಡೆಯಾದರೆ, ನೀರಿನ ಆಶ್ರಯವಿರುವ ಗದ್ದೆಯಲ್ಲಿ ಸಸಿಗಳಿಗೆ ರೋಗ ವ್ಯಾಪಕವಾಗಿ ಹರಡುತ್ತಿದ್ದು ಬೆಳವಣಿಗೆ ಕುಂಠಿತವಾಗಿದೆ. ಶೀಘ್ರದಲ್ಲೇ ವರುಣ ಕೃಪೆ ತೋರದಿದ್ದರೆ ರೋಗ ನಿಯಂತ್ರಣವಾಗದೆ, ಇಳುವರಿ ತೀವ್ರ ಇಳಿತವಾಗಲಿದೆ.

ರೈತರ ಕಣ್ಣೀರು ತಂದ ಈರುಳ್ಳಿ, ಆಲೂಗಡ್ಡೆ!

ಬೀರೂರು: ಮಳೆ ತೀವ್ರ ಕೊರತೆ ಕಾರಣ ಬಯಲು ಭಾಗದ ಜನರ ಬದುಕಿನಾಶ್ರಯದ ಈರುಳ್ಳಿ, ಆಲೂಗೆಡ್ಡೆ ಬೆಳೆ ಸಂಪೂರ್ಣ ಕೈಕೊಟ್ಟಿದ್ದು, ರೈತರು, ಕೂಲಿ ಕಾರ್ಮಿಕರ ಮುಖದಲ್ಲಿ ಚಿಂತೆಯ ಕವಳ ಕಮರುವಂತೆ ಮಾಡಿದೆ. ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳ ರೈತರು ಸಾಂಪ್ರದಾಯಿಕ ಕೃಷಿ ಜತೆಗೆ ಈರುಳ್ಳಿ ಹಾಗೂ ಆಲೂಗೆಡ್ಡೆ ಬಿತ್ತಿದ್ದು ಮುಂಗಾರು ಸಂಪೂರ್ಣ ಕೈಕೊಟ್ಟ ಪರಿಣಾಮ ಬಿತ್ತನೆ ಬೀಜ ಮತ್ತು ಎಳಸು ಬೆಳೆ ಮಣ್ಣುಪಾಲಾಗಿದೆ

Categories
ಉದ್ಯೋಗ ಸುದ್ದಿ

ಆಳ್ವಾಸ್ ಕಾಲೇಜಲ್ಲಿ ಬೃಹತ್ ಉದ್ಯೋಗ ಮೇಳ

ಆಳ್ವಾಸ್ ಕಾಲೇಜಲ್ಲಿ ಬೃಹತ್ ಉದ್ಯೋಗ ಮೇಳ
-200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆ
– ಅಕ್ಟೋಬರ್ 6, 7ಕ್ಕೆ ಬೃಹತ್ ಉದ್ಯೋಗ ಮೇಳ

NAMMUR EXPRESS NEWS
ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪತಿಷ್ಠಾನದ ವತಿಯಿಂದ ಮೂಡಬಿದಿರೆಯ ವಿದ್ಯಾಗಿರಿ ಕಾಲೇಜು ಆವರಣದಲ್ಲಿ ಅಕ್ಟೋಬರ್ 6 ಮತ್ತು 7 ರಂದು `ಆಳ್ವಾಸ್ ಪ್ರಗತಿ-2023′ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಮಾತನಾಡಿ ಅಕ್ಟೋಬರ್ 6 ಹಾಗೂ 7ಕ್ಕೆ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಈ ಮೇಳದಲ್ಲಿ 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 13ನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳ ಇದಾಗಿದೆ. ಈವರೆಗೆ 182 ಕಂಪೆನಿಗಳು ನೋಂದಾಯಿಸಿಕೊಂಡಿದ್ದು, 200ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಐಸಿಐಸಿಐ, ಆಯಕ್ಸಿಸ್, ಉಜೀವನ್ ಫೈನಾನ್ಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್‌ಗಳು ಭಾಗವಹಿಸಲಿವೆ’ ಎಂದು ಮಾಹಿತಿ ನೀಡಿದರು.

ವಿವಿಧ ಕಂಪನಿಗಳು ಭಾಗಿ: “ಗಲ್ಫ್ ಬಹುರಾಷ್ಟ್ರೀಯ ಕಂಪೆನಿಗಳು ಆಳ್ವಾಸ್ ಪ್ರಗತಿಯಲ್ಲಿ ಪಾಲ್ಗೊಳ್ಳಲಿವೆ. ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್‌ಗಳನ್ನು ಸೌದಿ ಅರೇಬಿಯಾಕ್ಕೆ, ಬುರ್ಜೀಲ್ ಹೋಲ್ಡಿಂಗ್ಸ್ ವೈದ್ಯರು, ನರ್ಸ್ ಮತ್ತು ವೈದ್ಯಕೀಯ ತಂತ್ರಜ್ಞರನ್ನು ಒಮನ್‌ಗೆ ಹಾಗೂ ಭವಾನಿ ಶಿಪ್ಪಿಂಗ್ ಪ್ರೈ.ಲಿ ಹಲವಾರು ಹುದ್ದೆಗಳ ಅವಕಾಶವನ್ನು ನೀಡುತ್ತಿದೆ. ಟೊಯೊಟೊ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಪ್ರೈ.ಲಿ, ಹೋಂಡಾ, ಒರ್ಲಿ ಕಾನ್ ಬಲೈರ್ಸ್‌ ಕೋಟಿನ್‌ಇಂಡಿಯಾ ಪ್ರೈ.ಲಿ, ವೂನೋ ಮಿಂಡಾ ಸೇರಿದಂತೆ ಇತರ ಕಂಪೆನಿಗಳು ಐಟಿಐ ಮತ್ತು ಡಿಪ್ಲೊಮಾ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಿವೆ” ಎಂದು ತಿಳಿಸಿದರು.”ಏಸ್ ಡಿಸೈನರ್, ವೋಲ್ವ, ಸನ್ನೆರಾ ಎಂಜಿನಿಯರಿಂಗ್ ಲಿಮಿಟೆಡ್, ಫೌರೆಸಿಯಾ ಎಮಿಷನ್ಸ್ ಕಂಟ್ರೋಲ್ ಟೆಕ್ನಾಲಜೀಸ್ ಇಂಡಿಯಾ ಪ್ರೈ.ಲಿ, ಮೈನಿ ಪ್ರಿಸಿಷನ್ ಇಂಡಿಯಾ ಪ್ರೈ.ಲಿ, ಸ್ವಿಚೇರ್ ಆಯಂಡ್ ಕಂಟ್ರೋಲ್ ಟೆಕ್ನಿಕ್ಸ್ ಸುಮಾರು 200ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಬಿಇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ನೀಡಲಿವೆ” ಎಂದರು.

ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕಂಪೆನಿಗಳ ವಿವರ ಹಾಗೂ ನವೀಕೃತ ಮಾಹಿತಿಗಳನ್ನು ಅಧಿಕೃತ ವೆಬ್‌ಸೈಟ್ www.alvaspragati.com ನಲ್ಲಿ ಪ್ರಕಟಿಸಲಾಗುವುದು.

ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು https://alvaspragati.com/CandidateRegistrationPag e#top ನಲ್ಲಿ ಕಡ್ಡಾಯವಾಗಿ ಉಚಿತ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬೇಕು. ಹೊರ ಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಅಕ್ಟೋಬರ್ 5 ರಿಂದ 7ರ ವರೆಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಐಟಿಐ, ಪಿಯುಸಿ, ಎಸ್‌ಎಸ್‌ಎಲ್‌ಸಿ ಹಾಗೂ ಇನ್ನೂ ಕಡಿಮೆ ವಿದ್ಯಾಭ್ಯಾಸದ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಭ್ಯರ್ಥಿಗಳಿಗೆ ಉಚಿತ ಆನ್‌ಲೈನ್ ನೋಂದಣಿ ಕಡ್ಡಾಯವಾಗಿದೆ.

ಮಾಹಿತಿಗೆ ಮೊ.90089 07716, 96631 90590, 79752 23865, 97414 40490 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಕಂಪೆನಿ ಹಾಗೂ ಸಂಸ್ಥೆಗಳು ನೇಮಕಾತಿ ಮೂಲಕ ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವೀಧಗಳಾದ ವೈದ್ಯಕೀಯ ಮತ್ತು ಅರೆ ವೈದ್ಯಕೀಯ (ಪ್ಯಾರಾಮೆಡಿಕಲ್), ಎಂಜಿನಿಯರಿಂಗ್, ಕಲಾ, ವಾಣಿಜ್ಯ ಮತ್ತು ಆಡಳಿತ ನಿರ್ವಹಣೆ(ಮ್ಯಾನೇಜೆಂಟ್), ಮೂಲ ವಿಜ್ಞಾನ (ಬೇಸಿಕ್ ಸೈನ್ಸ್, ಶುಶೂಷೆ (ನರ್ಸಿಂಗ್‌), ಐಟಿಐ, ಡಿಪ್ಲೊಮಾ ಹಾಗೂ ಕೌಶಲ ಹೊಂದಿದ ಪಿಯುಸಿ ಅಥವಾ ಎಸ್‌ಎಸ್‌ಎಲ್‌ಸಿ ಮತ್ತು ಇತರ ಅರ್ಹ ಪ್ರತಿಭಾವಂತ ಸುಮಾರು 7 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ ಎಂದು ಮಾಹಿತಿಯನ್ನು ನೀಡಿದ್ದರು.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಪುತ್ತೂರು ಬಿಜೆಪಿ ಕಾರ್ಯಕರ್ತನ ಫೋಟೋ ವೈರಲ್!
– ಹಿರೇಬೆಟ್ಟು: ಸೌಜನ್ಯ ಪ್ರಕರಣ ಮರುತನಿಖೆಗೆ ಮೋದಿಗೆ ಪತ್ರ
ಬೆಳ್ತಂಗಡಿ: ಕಾರಿಗೆ ಟೆಂಪೋ ಡಿಕ್ಕಿ: ಚಾಲಕನಿಗೆ ಹಲ್ಲೆ
ಕಾಪು: ಮರ ಬಿದ್ದು ಕಾರ್ಮಿಕ ಸಾವು
ಮಣಿಪಾಲ: ಚೂರಿ ಇರಿತ ನಾಲ್ಕು ಮಂದಿಯ ಬಂಧನ
ಕುಂದಾಪುರ: ಬುಲೆಟ್ ಢಿಕ್ಕಿ: ಬೈಕ್ ಸವಾರನಿಗೆ ಗಾಯ
ಮಂಗಳೂರಲ್ಲಿ: ಸರಣಿ ಅಪಘಾತ: ಗಾಯ

NAMMUR EXPRESS NEWS
ಪುತ್ತೂರು: ಬಿಜೆಪಿ ಕಾರ್ಯಕರ್ತನೊಬ್ಬ ಮಹಿಳೆ ಜೊತೆ ಇರುವ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತಂತೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿನ್ನಲೆ ನವೀನ್ ರೈ ಕೈಕಾರ ಸೆನ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ತನ್ನ ಫೋಟೋವನ್ನ ಬೇರೆ ಯುವತಿಯೊಬ್ಬಳ ಜತೆ ಇರುವಂತೆ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ ಪುತ್ತಿಲ ಪರಿವಾರ ಗ್ರೂಪಿನಲ್ಲಿ ನನ್ನ ಫೋಟೋ ಮತ್ತು ಬೇರೆ ಹುಡುಗಿಯ ಫೋಟೋವನ್ನು ಒಟ್ಟಿಗೆ ಸೇರಿಸಿ ನನ್ನ ಮಾನಕ್ಕೆ ಧಕ್ಕೆ ಬರುವಂತೆ ಮಾಡಿದ್ದು ಫೋಟೋವನ್ನು ದಿನೇಶ್ ಪುತ್ತೂರು ಎಂಬವರು ಪುತ್ತಿಲ ಪರಿವಾರ -1ಎಂಬ ವಾಟ್ಸಾಪ್ ಗ್ರೂಪಿನಲ್ಲಿ ವೈರಲ್ ಮಾಡಿರುವುದಾಗಿ ದೂರು ದಾಖಲಿಸಿದ್ದು ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಸೌಜನ್ಯ ಪ್ರಕರಣ ಮರುತನಿಖೆಗೆ ಪ್ರಧಾನಿಗೆ ಪತ್ರ

ಹಿರೇಬೆಟ್ಟು: ಸೌಜನ್ಯ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಹಲವಾರು ಸಮಯದಿಂದ ಹೋರಾಟ ನಡೆಯುತ್ತಿದ್ದು, ಹಿರೇಬೆಟ್ಟು ಸೌಜನ್ಯ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಸಭೆ ನಡೆಯಿತು, ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ, ತಮ್ಮಣ್ಣ ಶೆಟ್ಟಿ ಹಾಗೂ ಸೌಜನ್ಯ ತಾಯಿ ಸಭೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸಿ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡುವಂತೆ ಮತ್ತು ಧರ್ಮಸ್ಥಳ ಪರಿಸರದಲ್ಲಿ ಇದುವರೆಗೆ ನಡೆದ ಎಲ್ಲಾ ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ವಿಸ್ತ್ರತ ತನಿಖೆ ನಡೆಸುವಂತೆ ಮನವಿ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯಲಾಗಿದೆ.

ಟೆಂಪೋ ಚಾಲಕನ ಮೇಲೆ ತಂಡವೊಂದು ಹಲ್ಲೆ

ಬೆಳ್ತಂಗಡಿ: ಉಜಿರೆ ಮೀನು ತರುವ ಟೆಂಪೋ ಕಾರಿಗೆ ಡಿಕ್ಕಿ ಹೊಡೆದ ಕಾರಣಕ್ಕೆ ಟೆಂಪೋ ಚಾಲಕನ ಮೇಲೆ ತಂಡವೊಂದು ಹಲ್ಲೆ ನಡೆಸಿರು ವುದಾಗಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಕುವೆಟ್ಟು ಗ್ರಾಮದ ಚಿಲಿಂಬಿ ನಿವಾಸಿ ಶೌಕತ್ ಅಲಿ (24) ಹಲ್ಲೆಗೆ ಒಳಗಾದವರು. ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಶೌಕತ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ನಾನು ಟೆಂಪೊವನ್ನು ಹಿಂದಕ್ಕೆ ತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಕಾರಿಗೆ ತಾಗಿದ್ದು ಇದನ್ನು ಪ್ರಶ್ನಿಸಿ ನಾಗೇಶ, ಪ್ರವೀಣ, ಹರಿ, ವಿನಯ್‌ ಹಾಗೂ ಇತರರು ತೀವ್ರವಾಗಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿದೂರು ನೀಡಿರುವ ನ್ಯಾಯತರ್ಪು ಗ್ರಾಮದ ನಿವಾಸಿ, ಉಜಿರೆಯ ಮಾರುಕಟ್ಟೆಯಲ್ಲಿ ಮೀನು ಕ್ಲೀನಿಂಗ್ ಕೆಲಸ ಮಾಡುವ ಗಿರಿಜಾ, ಮೀನು ಸಾಗಾಟದ ಟೆಂಪೋ ಚಾಲಕ ಕಾರಿಗೆ ಟೆಂಪೋವನ್ನು ತಾಗಿಸಿ ಜಮುಂಗೋಳಿ ಸಿದ್ದಾರೆ. ಬಳಿಕ ಮಾರುಕಟ್ಟಿಗೆ ನುಗ್ಗಿ ಕತ್ತಿಯನ್ನು ತೆಗೆಯಲು ಪ್ರಯತ್ನಿಸಿದ್ದನ್ನು ವಿರೋಧಿಸಿದಾಗ ನನ್ನನ್ನು ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಬೆಳ್ತಂಗಡಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಮರ ಬಿದ್ದು ಕಾರ್ಮಿಕ ಸಾವು

ಕಾಪು: ಮಜೂರು ಕರಂದಾಡಿಯ ನಾಗಬನದ ಮೇಲೆ ಅಪಾಯಕಾರಿಯಾಗಿ ವಾಲಿದ್ದ ಮರವನ್ನು ಕಡಿಯುತ್ತಿದ್ದ ವೇಳೆ ಮರ ಉರುಳಿ ಬಿದ್ದು ಬಿಹಾರ ಮೂಲದ ಕಾರ್ಮಿಕನೋರ್ವ ಮರದಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಾಯಗೊಂಡ ಘಟನೆ ಮಜೂರು ಗ್ರಾಮದ ಕರಂಬಾಡಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಕಾರ್ಮಿಕ ಸುಧೀರ್ ಮಾಂಝಿ (50) ಮೃತಪಟ್ಟಿದ್ದು, ಆತನ ಜತೆಗಿದ್ದ ಸಹ ಕಾರ್ಮಿಕರಾದ ರಾಮು ಮತ್ತು ಪ್ರಮೋದ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರದಡಿ ಸಿಲುಕಿದ್ದ ಕಾರ್ಮಿಕರು
ಗ್ರೆಗೊರಿ ಲೂವಿಸ್ ಕೋಡ ಅವರ ಜತೆಗೆ ಕೆಲಸ ಮಾಡುತ್ತಿದ್ದ ಏಳು ಬಿಹಾರ ಮೂಲದ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಮರ ಉರುಳಿ ಬಿದ್ದಾಗ ಮೂವರು ಕಾರ್ಮಿಕರು ಮರದಡಿಯಲ್ಲಿ ಸಿಲುಕಿಕೊಂಡಿದ್ದರು. ಅದರಲ್ಲಿ ಇಬ್ಬರನ್ನು ಜತೆಗಿದ್ದ ಕಾರ್ಮಿಕರು ರಕ್ಷಿಸಿ, ತತ್‌ ಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಕೆಲವು ಗಂಟೆಗಳ ಕಾರ್ಯಾಚರಣೆ
ಮರ ಮತ್ತು ನೆಲದಡಿಯಲ್ಲಿ ಸಿಲುಕಿದ್ದ ಸುಧೀರ್ ಮಾಂಝಿ ಹೊರಗೆ ಬರಲಾಗದೇ ಮರದ ಅಡಿಯಲ್ಲಿ ಸಿಲುಕಿ ಒದ್ದಾಡುವಂತಾಯಿತು ಸ್ಥಳೀಯರು ಮತ್ತು ಕಾರ್ಮಿಕರು ಮರ ತೆರವು ಮತ್ತು ರಕ್ಷಣ ಕಾರ್ಯಾಚರಣೆಯಲ್ಲಿ ತೊಡಗಿಕೊಂಡರು.

ಚೂರಿ ಇರಿತ ನಾಲ್ಕು ಮಂದಿಯ ಬಂಧನ

ಮಣಿಪಾಲ: ಬ್ರಹ್ಮಾವರ ಮೂಲದ ಯುವಕನಿಗೆ ತಂಡವೊಂದು ಚೂರಿ ಇರಿದ ಘಟನೆ ಭಾನುವಾರ ತಡರಾತ್ರಿ ಮಣಿಪಾಲದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಸೈಫ್ ಕುಕ್ಕಿಕಟ್ಟೆ, ಉದಾಫ್ ಚಿಟಾ’ಡಿ, ರಾಹುಲ್ ಶೆಟ್ಟಿ ಕಟಪಾಡಿ ಮತ್ತು ಅಫ್ರಿದಿ ದೊಡ್ಡಣಗುಡ್ಡೆ ಬಂಧಿತರು.ಬ್ರಹ್ಮಾವರದ ನಿವಾಸಿ ಪ್ರತಾಪ್ ಅವರು ಗೆಳೆಯರಾದ ತಿಲಕ್ ಮತ್ತು ಹರ್ಷಿತ್ ಅವರೊಂದಿಗೆ ಮಣಿಪಾಲದಲ್ಲಿ ರಾತ್ರಿ ತಿರುಗಾಡಲು ಹೋಗಿದ್ದಾಗ ಘಟನೆ ನಡೆದಿದೆ ಎಂದು ಮಣಿಪಾಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅದೇ ರೀತಿ ಉದಾಫ್ , ತನ್ನ ಮೇಲೆ ಪ್ರತಾಪ್ ಮತ್ತವರ ತಂಡ ಕೈ ಹಾಗೂ ನಮಗೆ ಕಲ್ಲಿನಿಂದ ಹಲ್ಲೆ ನಡೆಸಿದೆ ಎಂದು ಪ್ರತಿದೂರು ನೀಡಿದ್ದಾರೆ. ಅದರಂತೆ ಈ ಎರಡೂ ಪ್ರಕರಣಗಳು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ

ಬುಲೆಟ್ ಡಿಕ್ಕಿ: ಬೈಕ್ ಸವಾರನಿಗೆ ಗಾಯ

ಕುಂದಾಪುರ: ಬುಲೆಟ್ ಢಿಕ್ಕಿಯಾಗಿ ಬೈಕ್ ಸವಾರ ಫಿಲಿಪ್ ಡಿ’ಸೋಜಾ ಅವರು ಗಾಯಗೊಂಡ ಘಟನೆ ಇಲ್ಲಿನ ಸಂತೆ ಮಾರುಕಟ್ಟೆ ರಸ್ತೆಯಲ್ಲಿ ಸಂಭವಿಸಿದೆ. ಗಾಯಗೊಂಡ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ರಿ ಅಕ್ರಮ ಮರಳುಗಾರಿಕೆ: ಕೇಸ್

ಅಕ್ರಮ ಗಣಿಗಾರಿಕೆ ಯ ವಿರುದ್ಧ ಕಠಿಣ ಕ್ರಮ ಕ್ರಮಕ್ಕೆ ಮುಂದಾಗಿರುವ ಪೊಲೀಸ್ ಇಲಾಖೆ,ಅಕ್ರಮ ದಂಧೆಯಲ್ಲಿ ಭಾಗಿಯಾದವರ ವಿರುದ್ಧ ಮುಲಾಜಿಲ್ಲದೇ ಕೇಸ್ ದಾಖಲಿಸುತ್ತಿದ್ದಾರೆ. ಉಡುಪಿ ಎಸ್ಪಿಯವರ ಖಡಕ್ ಸೂಚನೆ ಹಿನ್ನಲೆಯಲ್ಲಿ ಪೊಲೀಸರು ಅಕ್ರಮ ದಂಧೆಕೋರರಿಗೆ ಬಿಸಿಮುಟ್ಟಿಸುತ್ತಿದ್ದು, ಹೆಬ್ರಿ ತಾಲೂಕಿನ ವರಂಗ ಗ್ರಾಮದ ಮುನಿಯಾಲು ಮಾತಿಬೆಟ್ಟು ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತು ಮಾಹಿತಿ ಪಡೆದ ಪೊಲೀಸರು ಮಾತಿಬೆಟ್ಟು ಪೆರ್ಮಾನು ಎಂಬಲ್ಲಿ ರತ್ನಾಕರ ಪೂಜಾರಿ ಎಂಬವರು ಹೊಳೆಯಿಂದ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 1 ಯೂನಿಟ್ ಮರಳನ್ನು ವಶಪಡಿಸಿಕೊಂಡು ರತ್ನಾಕರ ಪೂಜಾರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಂಗಡಿ ಬೀಗ ಮುರಿದು ಕಳ್ಳತನ

ವಿಟ್ಲ: ಜಿನಸು ಅಂಗಡಿಯ ಬಾಗಿಲಿನ ಬೀಗವನ್ನು ಮುರಿದು ಒಳಪ್ರವೇಶಿಸಿ ಅಂಗಡಿಯಲ್ಲಿದ್ದ ನಗದು ಕಳುವಾಗಿರುವ ಘಟನೆ ಬಂಟ್ವಾಳ ತಾಲೂಕು ವೀರಕಂಭ ಗ್ರಾಮ ಮಂಗಳಪದವು ಎಂಬಲ್ಲಿ ನಡೆದಿದೆ. ವೀರಕಂಭ ಗ್ರಾಮ ಮಂಗಳಪದವು ಎಂಬಲ್ಲಿ ಅಬ್ದುಲ್ ಸಲಾಂ ಎಂಬವರ ಜಿನಸು ಅಂಗಡಿಯ ಬಾಗಿಲಿನ ಬೀಗವನ್ನು ರಾತ್ರಿ ವೇಳೆ ಕಳ್ಳರು ಮುರಿದು ಒಳಪ್ರವೇಶಿಸಿ ಅಂಗಡಿಯಲ್ಲಿದ್ದ ಒಟ್ಟು 80,000/-ರೂ ನಗದು ಹಣವು ಕಳವಾಗಿದ್ದು, ಘಟನೆ ಸಂಬಧಿಸಿದಂತೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 174/2023 ಕಲಂ: 457,380 IPC ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

Categories
ರಾಜಕೀಯ ಶಿವಮೊಗ್ಗ

ಬಿಜೆಪಿ ಗ್ರೂಪ್​ನಿಂದ ಕುಮಾರ್ ಬಂಗಾರಪ್ಪ ಹೊರಕ್ಕೆ?!

ಬಿಜೆಪಿ ಗ್ರೂಪ್​ನಿಂದ ಕುಮಾರ್ ಬಂಗಾರಪ್ಪ ಹೊರಕ್ಕೆ?!
– ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ವದಂತಿ
– ಶಿವಮೊಗ್ಗಕ್ಕೋ…? ಉತ್ತರ ಕನ್ನಡಕ್ಕೋ..?

NAMMUR EXPRESS NEWS
ಸೊರಬ: ಶಿವಮೊಗ್ಗ ಜಿಲ್ಲೆಯಲ್ಲಿ ರಾಜಕಾರಣ ದಿನದಿಂದ ದಿನಕ್ಕೆ ಕುತೂಹಲ ಘಟ್ಟಕ್ಕೆ ಬಂದು ತಲುಪುತ್ತಿದೆ. ಈ ನಡುವೆ ಮಾಜಿ ಶಾಸಕ ಕುಮಾರ್ ಬಂಗಾರಪ್ಪರವರ ನಡೆಯು ಕುತೂಹಲ ಮೂಡಿಸಿದೆ. ಸೊರಬ ತಾಲ್ಲೂಕು ಬಿಜೆಪಿ ಘಟಕದ ವಾಟ್ಸ್ಯಾಪ್ ಗ್ರೂಪ್​ನಿಂದ ಹೊರಬಿದ್ದಿರುವುದು ಚರ್ಚೆಗೆ ಕಾರಣವಾಗಿದೆ. ಚುನಾವಣೆಯ ನಂತರ ಬಿಜೆಪಿಯ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳದ ಕುಮಾರ್ ಬಂಗಾರಪ್ಪ, ಕ್ಷೇತ್ರದಿಂದಲೂ ದೂರ ಉಳಿದಿದ್ದರು. ಈ ಮಧ್ಯೆ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಕಳೆದ ಗುರುವಾರ ಕುಮಾರ್ ಬಂಗಾರಪ್ಪ ಅವರ 60ನೇ ವರ್ಷದ ಜನ್ಮದಿನಾಚರಣೆ ಆಚರಿಸಿದ್ದರು.

ಶಿವಮೊಗ್ಗ ಲೋಕ ಸಭೆ ಗಟ್ಟಿ ಮಾಡಲು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಕುಮಾರ್​ ಬಂಗಾರಪ್ಪರವರನ್ನು ಪಕ್ಷಕ್ಕೆ ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ.​ ಬಂಗಾರಪ್ಪರವರನ್ನು ಉತ್ತರಕನ್ನಡ ಕ್ಷೇತ್ರದಿಂದ ನಿಲ್ಲಿಸಲಾಗುತ್ತದೆ ಎನ್ನಲಾಗಿದೆ. ಸಚಿವ, ಸಹೋದರ ಮಧು ಬಂಗಾರಪ್ಪ ಅವರ ನಿರ್ಧಾರದ ಮೇಲೆ ಎಲ್ಲವೂ ನಿಂತಿದೆ.

Categories
ತುಮಕೂರು

ರೈಲಿಗೆ ತಲೆಕೊಟ್ಟ ಒಂದೇ ಕುಟುಂಬದ ಮೂವರು ಸಾವು!

ರೈಲಿಗೆ ತಲೆಕೊಟ್ಟ ಒಂದೇ ಕುಟುಂಬದ ಮೂವರು ಸಾವು!
– ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣು
– ತುಮಕೂರಿನ ಹಿರೇಹಳ್ಳಿ ಬಳಿ ನಡೆದ ಘಟನೆ

NAMMUR EXPRESS NEWS
ತುಮಕೂರು: ತಾಲೂಕಿನ ಹಿರೇಹಳ್ಳಿ ಬಳಿ ಸೋಮವಾರ ಬೆಳಗಿನ ಜಾವ ರೈಲಿಗೆ ತಲೆಕೊಟ್ಟು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ಧಗಂಗಯ್ಯ (62), ಸುನಂದಾ (50) ಹಾಗೂ ಪುತ್ರಿ ಗೀತಾ (33) ಮೃತರು. ಮೂವರು ಮರಳೂರಿನ ನಿವಾಸಿಗಳು, ಸಿದ್ದಗಂಗಯ್ಯ ನಿವೃತ್ತ ಬೆಸ್ಕಾಂ ಅಧಿಕಾರಿ. ಸುನಂದಾ ಗೃಹಿಣಿ. ಗೀತಾ ಅವರನ್ನು ಸದಾಶಿವನಗರದ ನಿವಾಸಿಯೊಬ್ಬರಿಗೆ ಕೊಟ್ಟು ಮದುವೆ ಮಾಡಿದ್ದರು. ಮೂವರು ಒಟ್ಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೀತಾ ಪತಿ ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

Categories
ಶಿವಮೊಗ್ಗ ಹೊಸನಗರ

ಸಂಪೆಕಟ್ಟೆ ಕಾಡಲ್ಲಿ ಕಾಡುಕೋಣದ ಶಿಕಾರಿ!?

ಜಿಂಕೆ, ಬರ್ಕ, ಕಾಡು ಮೊಲದ ಸಹಿತ ಸಿಕ್ಕಿಬಿದ್ದರು!
– ಇಬ್ಬರ ಬಂಧನ: ಎರಡು ಕಾರು ವಶ
– ಸಂಪೆಕಟ್ಟೆ ಕಾಡಲ್ಲಿ ಕಾಡುಕೋಣದ ಶಿಕಾರಿ!?

NAMMUR EXPRESS NEWS
ಶಿವಮೊಗ್ಗ : ಜಿಂಕೆ, ಬರ್ಕ ಮತ್ತು ಕಾಡು ಮೊಲ ಶಿಕಾರಿ ಮಾಡಿದ್ದ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೆ ಎರಡು ಕಾರುಗಳನ್ನು ವಶಕ್ಕೆ ಪಡೆದ ಘಟನೆ ಶಿವಮೊಗ್ಗ ತಾಲೂಕು ಉಂಬ್ಳೆಬೈಲು ವಲಯ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಈಶ್ವರ್‌, ನವೀನ್‌, ಸುಜಿತ್‌, ಸುನಿಲ್‌, ಭರತ್‌ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಂದು ಓಮ್ನಿ ಮತ್ತು ಮಾರುತಿ 800 ಕಾರು ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಭದ್ರಾವತಿ ಡಿಸಿಎಫ್‌ ಆಶಿಶ್‌ ರೆಡ್ಡಿ, ಎಸಿಎಫ್‌ ರತ್ನಪ್ರಭ ಮಾರ್ಗದರ್ಶನದಲ್ಲಿ ಉಂಬ್ಳೆಬೈಲು ಆರ್‌ಎಫ್‌ಒ ತೇಜ್‌ ವೈ.ಪಿ, ಡಿವೈಆರ್‌ಎಫ್‌ಓ ಗಿಡ್ಡಸ್ವಾಮಿ, ಡಿವೈಆರ್‌ಎಫ್‌ಓ ಅಬ್ದುಲ್‌ ಮಜೀದ್‌, ಗಸ್ತು ವನಪಾಲಕ ‍ಶ್ರೀಕಾಂತ್‌, ರಂಗೇಗೌಡ, ದಿನೇಶ್‌ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸಂಪೆಕಟ್ಟೆ ಕಾಡಲ್ಲಿ ಕಾಡುಕೋಣದ ಶಿಕಾರಿ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಸಂಪೆಕಟ್ಟೆಯಲ್ಲಿ ಕಾಡುಕೋಣುವೊಂದನ್ನು ಬೇಟೆಯಾಡಲಾಗಿದೆ. ಕಾಡುಕೋಣವನ್ನು ಶಿಕಾರಿ ಮಾಡಿ, ಅದರ ಮಾಂಸ ತೆಗೆದುಕೊಂಡು ಕಳೆಬರವನ್ನು ಸಂಪೆಕಟ್ಟೆಯ ಸಮೀಪದ ಎಸೆದು ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕಾಡುಕೋಣದ ತಲೆ ಭಾಗ ಮತ್ತು ಮೂಳೆಯನ್ನು ರಸ್ತೆಯ ಪಕ್ಕ ಎಸೆದು ಹೋಗಲಾಗಿದ್ದು ಸ್ಥಳಿಯರು ಇದನ್ನ ಗಮನಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.