Categories
ಚಿಕ್ಕಮಗಳೂರು ಶಿವಮೊಗ್ಗ

ಟಾಪ್ ನ್ಯೂಸ್ ಕರ್ನಾಟಕ

13 ವರ್ಷದ ಬಾಲಕಿ ಹೃದಯಾಘಾತಕ್ಕೆ ಬಲಿ!
– ಶಾಲೆಗೆ ಹೋಗುವಾಗಲೇ ಕುಸಿದು ಬಿದ್ದು ಸಾವು
– ಭದ್ರಾವತಿ: ಯುವಕನ ಬರ್ಬರ ಹತ್ಯೆ: ಮೂವರು ಅರೆಸ್ಟ್!
– ಬೆಂಗಳೂರು: ನಟಿ ಹೇಮಾ ಚೌಧರಿಗೆ ಅನಾರೋಗ್ಯ ಆಸ್ಪತ್ರೆಗೆ ದಾಖಲು!

NAMMUR EXPRESS NEWS
ಮೂಡಿಗೆರೆ: ಶಾಲಾ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿರುವ ಮನಕಲಕುವ ಘಟನೆ ಜೋಗಣ್ಣನಕೆರೆ ಗ್ರಾಮದಲ್ಲಿ ನಡೆದಿದೆ. ಸೃಷ್ಟಿ (13) ಎನ್ನುವ ಮೃತ ವಿದ್ಯಾರ್ಥಿನಿ ದಾರದಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಬೆಳಗ್ಗೆ ಶಾಲೆಗೆ ಹೋಗುವಾಗ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಮಾರ್ಗ ಮಧ್ಯೆ ಅಸುನೀಗಿದ್ದಾಳೆ. ಮೂಡಿಗೆರೆ ಎಂ.ಜಿ.ಎಂ. ಸರ್ಕಾರಿ ಆಸ್ಪತ್ರೆ ವೈದ್ಯರಿಂದ ಹೃದಯಾಘಾತ ಎಂದು ದೃಢಪಟ್ಟಿದೆ. ಇತ್ತೀಚಿಗೆ ಮಕ್ಕಳು, ಯುವಕರು ಹೆಚ್ಚಿನ ಹೃದಯಾಘಾತಕ್ಕೆ ಮೃತಪಡುತ್ತಿರುವ ಪ್ರಕರಣದ ನಡುವೆ ಈ ಪ್ರಕರಣ ಗಮನ ಸೆಳೆದಿದೆ.

ಭದ್ರಾವತಿ: ಯುವಕನ ಬರ್ಬರ ಹತ್ಯೆ: ಮೂವರು ಅರೆಸ್ಟ್!

ಭದ್ರಾವತಿ : ವೈನ್ ಶಾಪ್ ಒಂದರಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಸ್ ನಿಲ್ದಾಣ ಸಮೀಪದ ಬಾರ್ ಒಂದರಲ್ಲಿ ಈ ಘಟನೆ ಸಂಭವಿಸಿದೆ. ಹೇಮಂತ್ ಅಲಿಯಾಸ್ ಕರಿ ಚಿಕ್ಕಿ ಹತ್ಯೆಯಾದವನು. ನ್ಯೂ ಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣ ಸಂಬಂಧ ಸತ್ಯಾನಂದ, ಮುಬಾರಕ್, ಖಲೀಲ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ನಟಿ ಹೇಮಾ ಚೌಧರಿಗೆ ಅನಾರೋಗ್ಯ ಆಸ್ಪತ್ರೆಗೆ ದಾಖಲು!

ಬ್ರೇನ್ ಹ್ಯಾಮರೇಜ್ ಸಮಸ್ಯೆಯಿಂದ ಹಿರಿಯ ನಟಿ ಹೇಮಾ ಚೌಧರಿ ಬಳಲುತ್ತಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಎರಡು ದಿನಗಳ ಹಿಂದೆ ಹೇಮಾ ಚೌಧರಿಗೆ ಬ್ರೈನ್ ಹ್ಯಾಮರೇಜ್ ಆಗಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟಿ ಹೇಮಾ ಅವರ ಮಗ ಐರ್ಲೆಂಡ್ನಲ್ಲಿ ಇದ್ದಾರೆ. ಮಗನಿಗೆ ವಿಷಯ ತಿಳಿಸಿದ್ದು ತಕ್ಷಣ ಬೆಂಗಳೂರಿಗೆ ಬರ್ತಿದ್ದಾರಂತೆ ಆಸ್ಪತ್ರೆಯಲ್ಲಿರು ಹೇಮಾ ಚೌಧರಿ ಅವರ ಸ್ಥಿತಿ ಕೊಂಚ ಗಂಭೀರವಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಹೇಳಲಾಗಿದೆ.

ಇತ್ತೀಚಿಗೆ ಲೀಲಾವತಿ ಅವರ ಪುಣ್ಯತಿಥಿ ಮುಗಿಸಿಕೊಂಡು ಬಂದ ನಂತ್ರ ಹೇಮಾ ಚೌದರಿ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಅನಾರೋಗ್ಯ ಉಂಟಾಗಿದೆ. ಹೇಮಾ ಚೌದರಿ ಸ್ಥಿತಿ ಕೂಡ ಗಂಭೀರವಾಗಿದೆ. ಹೇಮಾ ಚೌಧರಿ ದಕ್ಷಿಣ ಭಾರತದ ಹೆಸರಾಂತ ಕಲಾವಿದೆ ಆಗಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ಮಲಯಾಳಂ ಮತ್ತು ತಮಿಳು ಸುಮಾರು 180ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಹೇಮಾ ಕೂಚಿಪುಡಿ ಕಲಾವಿದೆಯೂ ಆಗಿದ್ದಾರೆ.

 

Categories
ರಾಷ್ಟ್ರೀಯ ವಾರ್ತೆ

ಕರೋನಾ ಆತಂಕದಲ್ಲಿದ್ದವರಿಗೆ ಗುಡ್‌ ನ್ಯೂಸ್

ಕರೋನಾ ಆತಂಕದಲ್ಲಿದ್ದವರಿಗೆ ಗುಡ್‌ ನ್ಯೂಸ್
-ರೂಪಾಂತರಿ ʻJN.1ʼ ಹೆಚ್ಚು ಅಪಾಯಕಾರಿಯಲ್ಲ
– ವಿಶ್ವ ಸಂಸ್ಥೆಯಿಂದ ಮಾಹಿತಿ: ಯಾವ ಸ್ಥಿತಿಯಲ್ಲಿದೆ ಕರೋನಾ?

NAMMUR EXPRESS NEWS
ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ(WHO) ಜೆಎನ್ .1 ಕೋವಿಡ್ ಸ್ಟ್ರೈನ್’ನ್ನ “ಆಸಕ್ತಿಯ ರೂಪಾಂತರ” ಎಂದು ವರ್ಗೀಕರಿಸಿದೆ. ಇದು ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಹೇಳಿದೆ. ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ, ಜೆಎನ್ .1 ರಿಂದಾಗುವ ಸಾರ್ವಜನಿಕ ಅಪಾಯ ಹೆಚ್ಚಿನ ಪ್ರಮಾಣದಲ್ಲಿ ಇರುವುದಿಲ್ಲ. ಹೀಗಾಗಿ ಭಯ ಪಡಬೇಕಿಲ್ಲ. ಜಾಗೃತಿ ವಹಿಸಬೇಕಿದೆ JN.1 ಎಂಬುದು BA.2.86ರ ಭಾಗವಾಗಿದ್ದು ರೂಪಾಂತರಿ ಎಂದು ವರ್ಗೀಕರಿಸಲಾಗಿದೆ. ಪ್ರಸ್ತುತ ಲಸಿಕೆಗಳು, JN.1 ಮತ್ತು COVID-19 ವೈರಸ್‌ ನ ಭಾಗಗಳಿಂದ ಸಂಭವಿಸಬಹುದಾದ ಯಾವುದೇ ಸಾವು ಮತ್ತು ತುರ್ತುಸ್ಥಿತಿಗಳಿಗೆ ಚಿಕಿತ್ಸೆ ನೀಡುತ್ತವೆ ಎಂದು ಯುನೈಟೆಡ್ ನೇಷನ್ಸ್ ಏಜೆನ್ಸಿ ಹೇಳಿದೆ.

ಏಜೆನ್ಸಿಯ ಇತ್ತೀಚಿನ ವರದಿಯ ಪ್ರಕಾರ, ಡಿಸೆಂಬರ್ 8 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸುಮಾರು 15% ರಿಂದ 29% ರಷ್ಟು ಪ್ರಕರಣಗಳಲ್ಲಿ ಸಬ್‌ವೇರಿಯಂಟ್ JN.1 ರಷ್ಟಿದೆ ಎಂದು U.S. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (CDC) ಈ ತಿಂಗಳ ಆರಂಭದಲ್ಲಿ ಹೇಳಿದೆ. ಪ್ರಸ್ತುತ ಚಲಾವಣೆಯಲ್ಲಿರುವ ಇತರ ರೂಪಾಂತರಗಳಿಗೆ ಹೋಲಿಸಿದರೆ JN.1 ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನು ಒಡ್ಡುವುದಿಲ್ಲ ಎಂದು ಹೇಳಿದೆ. ಸಿಡಿಸಿ ಪ್ರಕಾರ, ಸೆಪ್ಟೆಂಬರ್‌ನಲ್ಲಿ US ನಲ್ಲಿ JN.1 ಅನ್ನು ಮೊದಲು ಪತ್ತೆ ಮಾಡಲಾಯಿತು. ಕಳೆದ ವಾರ, ಕೋವಿಡ್ ಸಬ್‌ವೇರಿಯಂಟ್‌ನ ಏಳು ಸೋಂಕುಗಳನ್ನು ಚೀನಾ ಪತ್ತೆ ಮಾಡಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಗುತ್ತಿಗೆದಾರರ ಸಂಘಕ್ಕೆ ಸಿರಿಬೈಲ್ ಧರ್ಮೇಶ್ ಸಾರಥಿ!

ತೀರ್ಥಹಳ್ಳಿ ಗುತ್ತಿಗೆದಾರರ ಸಂಘಕ್ಕೆ ಸಿರಿಬೈಲ್ ಧರ್ಮೇಶ್ ಸಾರಥಿ!
– ಅಧ್ಯಕ್ಷರಾಗಿ ಸಿರಿಬೈಲ್ ಧರ್ಮೇಶ್, ಕಾರ್ಯದರ್ಶಿಯಾಗಿ ನಾಗೇಶ್
– ಸಮಿತಿಯಲ್ಲಿ ಯಾರು ಯಾರು?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಗುತ್ತಿಗೆದಾರರ ಸಂಘದ ನೂತನ ಕಾರ್ಯಕಾರಿ ಸಮಿತಿ ರಚನೆಯಾಗಿದೆ. ಗೌರವಾಧ್ಯಕ್ಷರಾಗಿ ನ್ಯಾಷನಲ್ ಸಂಸ್ಥೆಯ ಇಬ್ರಾಹಿಂ ಷರೀಫ್‌, ಅಧ್ಯಕ್ಷರಾಗಿ ಸಿರಿಬೈಲು ಧರ್ಮೇಶ್, ಉಪಾಧ್ಯಕ್ಷರಾಗಿ ಮಂಗಳ ಭೋಜರಾಜ್, ಕಾರ್ಯದರ್ಶಿಯಾಗಿ ಸಂಕದಹೊಳೆ ನಾಗೇಶ್, ಸಹಕಾರ್ಯದರ್ಶಿಯಾಗಿ ಕಲ್ಮನೆ ಮುಕುಂದೇಶ್ವರ, ಖಜಾಂಚಿಯಾಗಿ ಹಾಜಿ ಸುಲೇಮಾನ್ ಸಾಹೇಬ್, ನಿರ್ದೇಶಕರುಗಳಾಗಿ ಮೇಲಿನಕುರುವಳ್ಳಿ ಪರಮೇಶ್ವರ್, ಕೋಟೆಗದ್ದೆ ರವಿಶೇಖರ್, ಕೈಮರ ಸಂತೋಷ್ ಕುಮಾರ್, ಬಾಳೆಕೊಪ್ಪ ಗುರುಮೂರ್ತಿ, ದೇವರಗುಡಿ ಸಂತೋಷ್ ಕುಮಾರ್, ಗುಡ್ಡಕೇರಿ ವಿಜಯದರ್ಶನ, ಹಿಲಿಕೆರೆ ಅರುಣ್ ಕುಮಾರ್, ಗರಗ ಅಶೋಕ್, ಜೈಪುರ ವಿಠಲ ಆಯ್ಕೆಯಾಗಿದ್ದಾರೆ

Categories
ಕಾರ್ಕಳ

ಕ್ರಿಯೇಟಿವ್‌ ಕಾಲೇಜಲ್ಲಿ ನಿನಾದ- 5 ಬಿಡುಗಡೆ

ಕ್ರಿಯೇಟಿವ್‌ ಕಾಲೇಜಲ್ಲಿ ನಿನಾದ- 5 ಬಿಡುಗಡೆ
– ಯುವ ಲೇಖಕ, ಲೇಖಕಿಯರಿಗೆ ಅತ್ಯುತ್ತಮ ವೇದಿಕೆ
– ಕ್ರಿಯಾಶೀಲ ಮನಸ್ಸುಗಳ ನ್ನು ಕಟ್ಟಲು
ಕ್ರಿಯೇಟಿವ್‌ ಸಂಸ್ಥೆ ಎಂದಿಗೂ ಸಿದ್ಧ: ಎಸ್.ಎಲ್.ಅಶ್ವಥ್

NAMMUR EXPRESS NEWS
ಕಾರ್ಕಳ: ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಹೊರ ತರಲಾಗುತ್ತಿರುವ ತ್ರೈಮಾಸಿಕ ಪತ್ರಿಕೆ “ನಿನಾದ” ಸಂಚಿಕೆ-5ನ್ನು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವರ್ಗದವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಶ್ರೀ ಲಿಂಗಪ್ಪ ಮತ್ತು ಶ್ರೀಮತಿ ರತ್ನಾ ಲಿಂಗಪ್ಪ ದಂಪತಿಗಳು ತ್ರೈಮಾಸಿಕ ಪತ್ರಿಕೆಯನ್ನು ಅನಾವರಣಗೊಳಿಸಿದರು. ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಅಶ್ವತ್‌ ಎಸ್‌. ಎಲ್‌ ಮಾತನಾಡಿ, ನಿನಾದ ಪತ್ರಿಕೆ ವಿದ್ಯಾರ್ಥಿಗಳಿಗೆ, ಯುವ ಬರಹಗಾರರಿಗೆ ಉತ್ತಮವಾದ ವೇದಿಕೆ ಒದಗಿಸುತ್ತಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಒಳ್ಳೆಯ, ಚಿಂತನಾತ್ಮಕ ಅಂಶಗಳನ್ನು ಬೆಳೆಸಲು ಹಾಗೂ ಕ್ರಿಯಾಶೀಲ ಮನಸ್ಸುಗಳ ಕಟ್ಟಲು ಕ್ರಿಯೇಟಿವ್‌ ಎಂದಿಗೂ ಸಿದ್ಧವಾಗಿದೆ. ಈಗಾಗಲೇ ನಾಲ್ಕು ಸಂಚಿಕೆಗಳನ್ನು ಪೂರೈಸಿ ಐದನೇ ಸಂಚಿಕೆ ಸಿದ್ಧವಾಗಿ ಲೋಕಮುಖಕ್ಕೆ ಪ್ರಕಟಗೊಳ್ಳುತ್ತಿದೆ.

ಹೊಸತನದ ಬರಹಗಳು ಓದುಗರನ್ನು ಖಂಡಿತವಾಗಿಯೂ ತಲುಪುತ್ತವೆ. ಓದುಗರೂ ಸಾಕಷ್ಟು ಇದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಎಳವೆಯಲ್ಲಿಯೇ ಸಾಹಿತ್ಯದ ಕುರಿತು ಆಸಕ್ತಿ ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು. “ನಿನಾದ” ಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನಗಳನ್ನು ಬರೆದ ವಿದ್ಯಾರ್ಥಿಗಳನ್ನು “ಪುಸ್ತಕ” ಬಹುಮಾನದೊಂದಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ, ಆದರ್ಶ ಎಂ.ಕೆ, ಉಪನ್ಯಾಸಕ ವರ್ಗದವರು, ನ್ಯೂಸ್‌ ಕಾರ್ಕಳದ ಜ್ಯೋತಿ ರಮೇಶ್‌, ಉಪನ್ಯಾಸಕೇತರ ವರ್ಗದವರು ಉಪಸ್ಥಿತರಿದ್ದರು. ಉಪನ್ಯಾಸಕ ಲೋಹಿತ್‌ ಎಸ್‌.ಕೆ ನಿರೂಪಿಸಿ ವಂದಿಸಿದರು.

Categories
ತೀರ್ಥಹಳ್ಳಿ

ಡಿ.21ಕ್ಕೆ ರೈತ ಸಂಘದಿಂದ ಎನ್.ಡಿ.ಸುಂದರೇಶ್ ನೆನಪು

ಡಿ.21ಕ್ಕೆ ರೈತ ಸಂಘದಿಂದ ಎನ್.ಡಿ.ಸುಂದರೇಶ್ ನೆನಪು
– ಕಡಿದಾಳು ಶಾಮಣ್ಣ ಅವರಿಗೆ ತವರೂರು ಸನ್ಮಾನ
– ಸರ್ವರನ್ನು ಸ್ವಾಗತಿಸಿದ ತೀರ್ಥಹಳ್ಳಿ ರೈತ ಸಂಘ

NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ರಾಜ್ಯ ರೈತರ ಸಂಘ, ತಾಲೂಕು ಘಟಕ ತೀರ್ಥಹಳ್ಳಿ ಮತ್ತು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಡಿ.21ರಂದು ಎನ್ ಡಿ, ಸುಂದರೇಶ್ ಅವರ ನೆನಪು ಮತ್ತು ಕಡಿದಾಳು ಶಾಮಣ್ಣ ಅವರಿಗೆ ತವರೂರು ಸನ್ಮಾನ ,ರೈತೋಪಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಪ್ರಮುಖ ರೈತ ಕಾರ್ಮಿಕ ನಾಯಕರಲ್ಲಿ ಸುಂದರೇಶ್ ಮೇರು ವ್ಯಕ್ತಿತ್ವ. ಹಾಗೆಯೇ ರಾಜ್ಯ ರೈತ ಸಂಘ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಕಡಿದಾಳು ಶಾಮಣ್ಣ. ಇತ್ತೀಚಿನ ಪೀಳಿಗೆಗೆ ಇವರ ವಿಷಯ ತಿಳಿದಿಲ್ಲ. ಹೊಸ ಜಗತ್ತಿಗೆ, ಆಲೋಚನೆಗೆ ಇವರ ವಿಷಯಗಳನ್ನು ತಿಳಿಸಬೇಕಾಗಿದೆ. ಹಾಗಾಗಿ ಅಂತಹ ನಾಯಕರಿಗೆ ರೈತೋಪಚಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಎನ್.ಡಿ. ಸುಂದರೇಶ್ ಅವರ ನೆನಪು ಹಾಗೂ ನಮ್ಮೊಡನೆ ಸಾಕ್ಷಿ ಪ್ರಜ್ಞೆಯಂತಿರುವ ಕಡಿದಾಳು ಶಾಮಣ್ಣನವರಿಗೆ ರೈತೋಪಚಾರದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಏನೇನು..?

ರಾಜ್ಯ ರೈತ ಸಂಘ ತೀರ್ಥಹಳ್ಳಿ ಘಟಕ ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಡಿ.21 ರ ಗುರುವಾರದಂದು ಗೋಪಾಲಗೌಡ ರಂಗಮಂದಿರದಲ್ಲಿ ಎನ್. ಡಿ. ಸುಂದರೇಶ್ ಅವರ ನೆನಪು ಮತ್ತು ಸಾಕ್ಷಿ ಪ್ರಜ್ಞೆಯಂತಿರುವ ಕಡಿದಾಳು ಶಾಮಣ್ಣ ಅವರಿಗೆ ರೈತೋಪಚಾರ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಅಧ್ಯಕ್ಷತೆ ಕೂಡ್ಲು ವೆಂಕಟೇಶ್, ರೈತ ಹೋರಾಟಗಾರರು ಮತ್ತು ಉದ್ಘಾಟನೆಯನ್ನು ರೈತ ಹೋರಾಟಗಾರರು ಹಾಗೂ ಶಾಸಕರು ಆಗಿರುವ ದರ್ಶನ್ ಪುಟ್ಟಣ್ಣಯ್ಯ ಮಾಡಲಿದ್ದಾರೆ. ಮತ್ತು ಸಾಹಿತಿಗಳು ಮತ್ತು ಸಾಮಾಜಿಕ ಹೋರಾಟಗಾರ ಡಾ.ರಾಜೇಂದ್ರ ಚೆನ್ನಿ ಭಾಗವಹಿಸಲಿದ್ದಾರೆ.

Categories
ರಾಜ್ಯ

ಬಗರ್ ಹುಕುಂ ಅಕ್ರಮ ಸಕ್ರಮ ಭಾಗ್ಯ!

ಬಗರ್ ಹುಕುಂ ಅಕ್ರಮ ಸಕ್ರಮ ಭಾಗ್ಯ!
– ಅರ್ಜಿ ವಿಲೇವಾರಿಗೆ ಬಂದಿದೆ ಆಪ್
– ಈ ಆ್ಯಪ್ ಕೆಲಸ ಹೇಗೆ? ಏನೇನು ದಾಖಲೆ ಬೇಕು?

NAMMUR EXPRESS NEWS
ಬಗರ್ ಹುಕುಂ ಅಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಕೃಷಿ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದಕ್ಕೆ ರಾಜ್ಯ ಸರ್ಕಾರ ಬಗರ್ ಹುಕುಂ ಆ್ಯಪ್ ರೂಪಿಸಿದೆ. ಈ ಆಪ್ ಮೂಲಕ ಲಕ್ಷಾಂತರ ರೈತರ ಸಮಸ್ಯೆ ಬಗೆಹರಿಯಲಿದೆ. ನಮೂನೆ 50, 53, 57ರ ಅಕ್ರಮ ಸಕ್ರಮ ಯೋಜನೆಯಡಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವವರಿಗೂ ಸಾಗುವಳಿ ಚೀಟಿ ನೀಡುವುದು ಅಸಾಧ್ಯ. ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿದ್ದು, ಪ್ರತಿಯೊಂದು ಭಾಗಕ್ಕೂ ಅಧಿಕಾರಿಗಳೇ ಹೋಗಿ ಪರಿಶೀಲಿಸುವುದು ಸಾಧ್ಯವಿಲ್ಲ. ಹೀಗಾಗಿ ತಂತ್ರಾಂಶ ಬಳಸಿ ಅರ್ಜಿ ವಿಲೇ ಮಾಡಲಾಗುತ್ತದೆ ಎಂದು ಆ್ಯಪ್ ಬಿಡುಗಡೆ ಮಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.

ಕಂದಾಯ ಗ್ರಾಮ ಘೋಷಿಸಿ ಹಕ್ಕುಪತ್ರ ನೀಡಿ:

ಬಡವರಿಗೆ ಸಹಾಯಮಾಡುವ ನಿಟ್ಟಿನಲ್ಲಿ ಅರ್ಹ ಕಂದಾಯ ಗ್ರಾಮಗಳನ್ನು ಶೀಘ್ರ ಘೋಷಿಸಿ ಹಕ್ಕುಪತ್ರ ವಿತರಿಸಿ ಎಂದು ತಾಕೀತು ಮಾಡಿದರು. ಈಗಾಗಲೆ ಗುರುತಿಸಲಾಗಿರುವ ಕೆಲವು ಗ್ರಾಮಗಳನ್ನು ಕೈಬಿಡುವ ಬಗ್ಗೆ ಕೆಲವು ಅಧಿಕಾರಿಗಳು ಪ್ರಸ್ತಾವನೆ ಕಳುಹಿಸಿದ್ದೀರಿ. ಅಸಲಿಗೆ ಅರಣ್ಯ ಪ್ರದೇಶ ಅಥವಾ ಕೆರೆ ಜಾಗಗಳನ್ನು ಕಂದಾಯ ಗ್ರಾಮಗಳ ಪಟ್ಟಿಯಿಂದ ಕೈಬಿಡುವ ಬಗ್ಗೆ ತಕರಾರಿಲ್ಲ. ಆದರೆ, ಕೆಲವು ಅಸಂಬದ್ಧ ತಕರಾರುಗಳ ಕಾರಣಕ್ಕೆ ಕಂದಾಯ ಗ್ರಾಮಗಳನ್ನು ಕೈಬಿಡಬೇಡಿ ಎಂದರು.

Categories
ಬೆಂಗಳೂರು ರಾಜ್ಯ

ಶೀತ, ಜ್ವರ ಎಲ್ಲೆಡೆ ಹೆಚ್ಚಳ: ಆಸ್ಪತ್ರೆಗಳು ಫುಲ್ ರಶ್!

ಶೀತ, ಜ್ವರ ಎಲ್ಲೆಡೆ ಹೆಚ್ಚಳ: ಆಸ್ಪತ್ರೆಗಳು ಫುಲ್ ರಶ್!
– ಹವಾಮಾನ ವೈಪರೀತ್ಯದಿಂದಾಗಿ ಅನಾರೋಗ್ಯ
– ರಾಜ್ಯ ಸರ್ಕಾರದಿಂದ ಕರೋನಾ ಅಲರ್ಟ್
– ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆಗೇ ಬೇಕು ಇಂಜೆಕ್ಷನ್…!

NAMMUR EXPRESS NEWS
ಬೆಂಗಳೂರು: ಹವಾಮಾನ ಬದಲಾವಣೆಯಿಂದ ಎಲ್ಲೆಡೆ ಶೀತ, ಜ್ವರ ಕೆಮ್ಮು ಹೆಚ್ಚಾಗಿದ್ದು ಆಸ್ಪತ್ರೆಗಳು ಫುಲ್ ರಶ್ ಆಗಿವೆ. ಹವಮಾನ ವೈಪರೀತ್ಯದಿಂದಾಗಿ, ಮಳೆ,ಚಳಿ, ಗಾಳಿ, ಬಿಸಿಲು ಮಿಶ್ರಿತ ವಾತಾವರಣದಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದು ಜನ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ಪ್ರತಿ ಮನೆಯಲ್ಲಿ ಓರ್ವರಿಗೆ ಅನಾರೋಗ್ಯ ಇದೆ. ಈ ಖಾಯಿಲೆ ವೃದ್ಧರು, ಮಕ್ಕಳು ಎಲ್ಲ ವಯಸ್ಸಿನವರಿಗೂ ಕಾಣಿಸಿಕೊಂಡಿದೆ. ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಈಗ ಅತ್ಯಗತ್ಯವಾಗಿದೆ.

ಸರ್ಕಾರದಿಂದ ಕರೋನಾ ಮಾರ್ಗಸೂಚಿ

1. 60 ವರ್ಷ ಮೇಲ್ಪಟ್ಟವರು, ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಮಾಸ್ಕ್ ಧರಿಸಬೇಕು.

2. ಜ್ವರ, ಕೆಮ್ಮು, ನೆಗಡಿ, ಇತ್ಯಾದಿ ಉಸಿರಾಟದ ಸಮಸ್ಯೆ ಇದ್ದಲ್ಲಿ ಅಗತ್ಯ ವೈದ್ಯಕೀಯ ಸಲಹೆಯನ್ನು ಪಡೆಯಬೇಕು.

3. ಗಾಳಿ-ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಹೆಚ್ಚು ಜನಸಂದಣಿಯಿರುವ ಪ್ರದೇಶಗಳಿಗೆ ಭೇಟಿ ನೀಡದೇ ಇರುವುದು

4. ಆಗಾಗ್ಗೆ ಕೈಗಳನ್ನು ಸೋಪು ಹಾಗೂ ನೀರಿನಿಂದ ತೊಳೆದುಕೊಳ್ಳುವುದು

5. ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಹಿರಿಯರು, ದುರ್ಬಲರನ್ನು ಅವಶ್ಯವಿದ್ದಲ್ಲಿ ಮಾತ್ರವೇ ಭೇಟಿ ಮಾಡುವುದು

6. ವಿದೇಶ ಪ್ರಯಾಣದಲ್ಲಿ ಎಚ್ಚರಿಕೆಯಿಂದಿದ್ದು, ಮಾಸ್ಕ್ ಧರಿಸುವುದು.

ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆಗೇ ಬೇಕು ಇಂಜೆಕ್ಷನ್…!

ಕರೋನಾ ಮೂರು ಅಲೆ ಬಂದು ಜನರ ಜೀವ ಬೀದಿ ಮೇಲೆ ಬಿದ್ದರೂ ಸರ್ಕಾರ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿ, ಸೌಲಭ್ಯಕ್ಕೆ ಮುಂದಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಎಲ್ಲಾ ಸರ್ಕಾರಗಳು ಬಡವರು, ಮಧ್ಯಮ ವರ್ಗದವರ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈಗಲೂ ಅನೇಕ ಸರ್ಕಾರದ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ, ಸಿಬ್ಬಂದಿ ಇಲ್ಲ, ಸೌಲಭ್ಯ ಇಲ್ಲ. ಈಗ ಔಷಧಿ ಕೂಡ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕರೋನಾ ಮತ್ತೊಂದು ಬಾರಿ ಬರುವ ಮುನ್ನವಾದ್ರೂ ಸರ್ಕಾರ ಇತ್ತ ಗಮನ ಕೊಡಬೇಕಿದೆ. ಅರೋಗ್ಯ, ಶಿಕ್ಷಣ, ಉದ್ಯೋಗ ಕೊಡುವ ಬಗ್ಗೆ ಸರ್ಕಾರ ಹೊಸ ಹೊಸ ಯೋಜನೆ ರೂಪಿಸಬೇಕಿದೆ.

Categories
ತೀರ್ಥಹಳ್ಳಿ ವೈರಲ್ ವೀಡಿಯೊಗಳು

ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಮೇಲೆ ಕೇಸ್!

ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಮೇಲೆ ಕೇಸ್!
– ತೀರ್ಥಹಳ್ಳಿಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ
– ವಿಡಿಯೋ ಮಾಡಿ ವೈರಲ್ : ಕೇಸ್‌ ದಾಖಲು

NAMMUR EXPRESS NEWS
ತೀರ್ಥಹಳ್ಳಿ: ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಮೇಲೆ ತೀರ್ಥಹಳ್ಳಿಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಸಮೀಪದಲ್ಲಿ ಮಾಳೂರು ಠಾಣೆಯ ಎಎಸ್‌ಐ ಕೃಷ್ಣಮೂರ್ತಿ ಹೆದ್ದಾರಿ ಗಸ್ತುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪತ್ರಕರ್ತೆಯೊಬ್ಬರ ಮೇಲೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿಗೆ ಮಾರಣಾಂತಿಕ ರಸ್ತೆ ಅಪಘಾತಗಳು ಹೆಚ್ಚಾಗಿದ್ದರಿಂದ ಅವುಗಳನ್ನು ತಡೆಯುವ ಸಲುವಾಗಿ ವಾಹನ ತಪಾಸಣೆ ಮಾಡಿ ಅನುಮಾನಸ್ಪದ ಚಾಲಕ ವ್ಯಕ್ತಿಗಳನ್ನು ಹಾಗೂ ಮದ್ಯಪಾನ ಮತ್ತಿತರೆ ಕಾನೂನು ಉಲ್ಲಂಘನೆ ಮಾಡಿದವರ ಬಗ್ಗೆ ಸೀಟ್ ಬೆಲ್ಟ್ ಹಾಕದೇ ಇರುವ ಬಗ್ಗೆ ಮಂಗಳವಾರ ಬೆಳಿಗ್ಗೆ 10-30ರ ಸಮಯದಲ್ಲಿ ಬಾಳೇಬೈಲಿನಲ್ಲಿ ಚೆಕ್ ಮಾಡುತ್ತಿದ್ದಾಗ ಒಬ್ಬರಿಗೆ ಸ್ಥಳದಲ್ಲೇ ದಂಡದ ರಶೀದಿಯನ್ನು ಬರೆಯುತ್ತಿರುವಾಗ ಖಾಸಗಿ ಚಾನಲ್ ಪತ್ರಕರ್ತೆ ಮತ್ತು ಅವರ ಕಡೆಯ ನಾಲೈದು ಜನರು ಗುಂಪು ಗೂಡಿಕೊಂಡು ಬಂದು ಸರ್ಕಾರಿ ಇಲಾಖಾ ವಾಹನಕ್ಕೆ ಅಡ್ಡಲಾಗಿ ನಿಂತು ವಾಹನ ತಪಾಸಣೆ ಮಾಡದಂತೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಸರ್ಕಾರದಿಂದ ನೀಡಿದ ರಶೀದಿ ಪುಸ್ತಕವನ್ನು ಕಸಿದುಕೊಂಡಿದ್ದಾರೆ. ನಂತರ ಎಎಸ್‌ಐ ರವರಿಗೆ ವಾಹನ ತಪಾಸಣೆ ಮಾಡಲು ಬಿಡದೇ ಅಪಘಾತಗಳನ್ನು ತಡೆಯುವ ತಮ್ಮ ಕರ್ತವ್ಯದಿಂದ ಹಿಮ್ಮೆಟ್ಟಿಸುವ ಸಲುವಾಗಿ ಸರ್ಕಾರಿ ಕೆಲಸ ನಿರ್ವಹಿಸದಂತೆ ಅಡ್ಡಿಪಡಿಸಿ, ಪೊಲೀಸರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಾ ಸಾರ್ವಜನಿಕರಿಗೆ ಪ್ರಚೋದನೆ ನೀಡುವ ರೀತಿಯಲ್ಲಿ ವರ್ತಿಸಿದ ಖಾಸಗಿ ಚಾನಲ್ ಮತ್ತು ಅವರ ಜೊತೆಯಲ್ಲಿದ್ದ ಸಿಬ್ಬಂದಿಯವರ ಮೇಲೆ ಕಾನೂನು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಚಿಕ್ಕಮಗಳೂರು ಮಲ್ನಾಡ್

ಟಾಪ್ ನ್ಯೂಸ್ ಮಲೆನಾಡು-ಕರಾವಳಿ

ಹೆದ್ದಾರಿ ಅಗಲೀಕರಣ ವೇಳೆ ದುರಂತ: ಓರ್ವ ಸಾವು
– ಶೃಂಗೇರಿ ತಾಲೂಕಿನ ತನಿಕೋಡು ಚೆಕ್‌ ಪೋಸ್ಟ್ ಬಳಿ ಘಟನೆ
– ಬೆಳ್ತಂಗಡಿ: ಕುಡಿದ ಮತ್ತಲ್ಲಿ ಪತ್ನಿಯ ಕಣ್ಣು ಕಚ್ಚಿದ ಗಂಡ!
– ಹೊಸನಗರ: ತಂಬಾಕು ಅಂಗಡಿಗಳ ಮೇಲೆ ದಾಳಿ

NAMMUR EXPRESS NEWS
ಶೃಂಗೇರಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಿನ್ನಲೆ ಜೆಸಿಬಿಯಿಂದ ಮಣ್ಣು ತೆಗೆಯುವ ವೇಳೆ ನಾಲ್ವರು ಕಾರ್ಮಿಕರ ಮೇಲೆ ಮಣ್ಣು ಕುಸಿದು, ಓರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಸಮೀಪದ ತನಿಕೋಡು ಚೆಕ್‌ ಪೋಸ್ಟ್ ಬಳಿ ಸಂಭವಿಸಿದೆ. ಜೆಸಿಬಿ ಯಂತ್ರ ಬಳಸಿ ರಸ್ತೆಯ ತಡೆಗೋಡೆ ನಿರ್ಮಾಣ ವೇಳೆ ಎಕಾಏಕಿ ಮಣ್ಣು ಕುಸಿದಿದೆ. ತಕ್ಷಣವೇ ಇಬ್ಬರು ಕಾರ್ಮಿಕರನ್ನು ರಕ್ಷಣೆ ಮಾಡಿದ್ದು, ಸ್ವಲ್ಪ ಸಮಯದ ವೇಳೆ ಮತ್ತೊಬ್ಬ ಕಾರ್ಮಿಕನ ರಕ್ಷಣೆ ಮಾಡಲಾಗಿದೆ. ಆದರೆ ಇನ್ನೊಬ್ಬ ಕಾರ್ಮಿಕನ ರಕ್ಷಣೆಗೆ ಸತತ ಒಂದು ಗಂಟೆ ಕಾಲ ಮೂರು ಜೆಸಿಬಿ ಮೂಲಕ ಕಾರ್ಯಾಚಾರಣೆ ಮಾಡಲಾಗಿತ್ತು. ಆದರೆ ಒಂದೂವರೆ ಗಂಟೆಗಳ ಕಾಲ ಮಣ್ಣಿನಡಿಯಲ್ಲಿ ಸಿಲುಕಿದ ಕಾರಣ ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ರಾಜ್ ಕಮಲ್ ಗುತ್ತಿಗೆ ಕಂಪೆನಿಗೆ ಸೇರಿದ ಜೆಸಿಬಿ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಆಂಬುಲೆನ್ಸ್ ಹಾಗೂ ಶೃಂಗೇರಿ ಪೊಲೀಸರು ಭೇಟಿ ನೀಡಿ ಕಾರ್ಮಿಕರ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಶೃಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕುಡಿತ ಮತ್ತಿನಲ್ಲಿ ಪತ್ನಿಯ ಕಣ್ಣನ್ನೆ ಕಚ್ಚಿದ ಪತಿ!

ಕಂಠ ಪೂರ್ತಿ ಕುಡಿದ ಪತಿ ತನ್ನ ಹೆಂಡತಿಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಗಾಯಗೊಳಿಸಿದ ವಿಕೃತ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ನಡೆದಿದೆ. ಮೋಹಿನಿ ಎಂಬ ಮಹಿಳೆಗೆ ಆತನ ಪತಿ ಸುರೇಶ್ ಗೌಡ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಮಹಿಳೆ ಹಾಗೂ ಆಕೆಯ ಮಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸುರೇಶ್ ಗೌಡ(55) ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಕೋಟೆಬಾಗಿಲಿನ ಮೋಹಿನಿ(55)ಯನ್ನು ಕಳೆದ 22 ವರ್ಷದ ಹಿಂದೆ ಮದುವೆಯಾಗಿದ್ದ. ಶಿಶಿಲದಲ್ಲಿ ಮೋಹಿನಿ ತಂದೆಯವರು ಕೊಟ್ಟ ಜಾಗದಲ್ಲಿ ದಂಪತಿ ವಾಸವಾಗಿದ್ದು ಸುರೇಶ್ ಕೂಲಿ ಕೆಲಸ ಮಾಡುತ್ತಿದ್ದ. ಡಿ.18 ರಾತ್ರಿ 12ಗಂಟೆ ಸುಮಾರಿಗೆ ಕಂಠ ಪೂರ್ತಿ ಕುಡಿದು ತೇಲಾಡುತ್ತ ಮನೆಗೆ ಬಂದ ಸುರೇಶ್ ಗೌಡ, ಪತ್ನಿ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಮತ್ತೊಂದೆಡೆ ಮಗಳ ಮೇಲೂ ಹಲ್ಲೆ ನಡೆಸಿದ್ದು ಆಕೆಗೂ ಗಾಯಗಳಾಗಿವೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿ ಸುರೇಶ್‌ಗಾಗಿ ಪೊಲೀಸರು ಹುಡುಕಾಟ ನಡೆಯುತ್ತಿದ್ದಾರೆ.

ಹೊಸನಗರದಲ್ಲಿ ತಂಬಾಕು ಮಾರಾಟ: ಅಂಗಡಿಗಳ ಮೇಲೆ ದಾಳಿ

ಹೊಸನಗರ ಪಟ್ಟಣದ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ಸುರೇಶ್‌ ಅವರ ನೇತೃತ್ವದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕಾಯ್ದೆಯನ್ವಯ ಹೊಸನಗರ ಪಟ್ಟಣದ ಸುಮಾರು 25 ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು 3 ಸಾವಿರ ರೂ. ದಂಡ ಹಾಕಿದ್ದಾರೆ. ಜಿಲ್ಲಾ ಸಮಾಜ ಕಾರ್ಯಕರ್ತ ರವಿರಾಜ್ ಜಿ.ಕೆ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಮೇಶ್ ಆಚಾರ್, ಯಕ್ಷರೋಗ ನಿಯಂತ್ರಣ ಮೇಲ್ವಿಚಾರಕ ಚಂದ್ರಪ್ಪ, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್‌, ಪೊಲೀಸ್‌ ಇಲಾಖೆಯ ವಸಂತ್ ಹಾಗೂ ಪಿಹೆಚ್‌ಸಿಓ ಗೀತಾ, ಬಿ.ಪಿ.ಎಂ ನಿಕೀತ್‌ರಾಜ್ ಇದ್ದರು.

Categories
ಬೆಂಗಳೂರು ರಾಜ್ಯ

ಕೆಲವೇ ವಾರದಲ್ಲಿ ನಡೆಯುತ್ತಾ ತಾಪಂ, ಜಿಪಂ ಚುನಾವಣೆ!

ಕೆಲವೇ ವಾರದಲ್ಲಿ ನಡೆಯುತ್ತಾ ತಾಪಂ, ಜಿಪಂ ಚುನಾವಣೆ!
– ಹೈಕೋರ್ಟ್ ಆದೇಶಕ್ಕೆ ತಲೆ ಬಾಗಿದ ಸರ್ಕಾರ
– 2 ವಾರದಲ್ಲಿ ಚುನಾವಣೆ ಪ್ರಕ್ರಿಯೆ ಶುರು?
– ಏನಿದು ಕೋರ್ಟ್ ಆದೇಶ…? ಇಲ್ಲಿದೆ ವಿವರ..!

NAMMUR EXPRESS NEWS
ಬೆಂಗಳೂರು: ಬಿಬಿಎಂಪಿ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಸೇರಿ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಪ್ರಕ್ರಿಯೆಗಳನ್ನು ಮುಂದಿನ ಎರಡು ವಾರಗಳಲ್ಲಿ ಪೂರ್ಣಗೊಳಿಸುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಭರವಸೆ ನೀಡಿದೆ. ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ಇಂದು ವಿಚಾರಣೆ ನಡೆಸಿ, ಇತ್ಯರ್ಥಪಡಿಸಿದೆ.

ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ‘ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆ’ಗೆ ತಿದ್ದುಪಡಿ ತಂದಿರುವುದನ್ನು ಪ್ರಶ್ನಿಸಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಕೋರಿ ರಾಜ್ಯ ಚುನಾವಣಾ ಆಯೋಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ನ್ಯಾಯಪೀಠ ಸರ್ಕಾರದ ಭರವಸೆಯನ್ನು ಪರಿಗಣಿಸಿ ಅರ್ಜಿ ಇತ್ಯರ್ಥ ಪಡಿಸಿದೆ. ಅಲ್ಲದೆ, ಚುನಾವಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಲ್ಲಿ ಸರ್ಕಾರದಿಂದ ಯಾವುದಾದರೂ ಸಮಸ್ಯೆಗಳು ಎದುರಾದಲ್ಲಿ ಅರ್ಜಿದಾರರ ಅಗತ್ಯವಿದ್ದಲ್ಲಿ ಮತ್ತೆ ನ್ಯಾಯಾಲಯದ ಕದ ತಟ್ಟಬಹುದು ಎಂದು ನ್ಯಾಯಪೀಠ ತಿಳಿಸಿದೆ.

ವಿಚಾರಣೆ ವೇಳೆ ಸರ್ಕಾರದ ಪರವಾಗಿ ಹಾಜರಾಗಿದ್ದ ರಾಜ್ಯ ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, “ಸೈಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಡಿಸೆಂಬರ್ 19ರಂದು ಪೂರ್ಣಗೊಳಿಸಲಾಗುತ್ತಿದ್ದು, ಅಧಿಸೂಚನೆ ಹೊರಡಿಸಲಾಗುವುದು. ಅಲ್ಲದೆ, ಕ್ಷೇತ್ರಗಳಲ್ಲಿ ಮೀಸಲಾತಿ ನಿಗಧಿ ಪಡಿಸುವ ಸಂಬಂಧ ಮುಂದಿನ ಎರಡು ವಾರಗಳಲ್ಲಿ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು. ಆಕ್ಷೇಪಣೆಗಳನ್ನು ಪರಿಶೀಲಿಸಿ ಮುಂದಿನ ಎರಡು ವಾರಗಳಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಾಗಿ” ನ್ಯಾಯಪೀಠಕ್ಕೆ ಭರವಸೆ ನೀಡಿದೆ. ಅರ್ಜಿಗೆ ಸಂಬಂಧಿಸಿದಂತೆ ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಸಮಯಕ್ಕೆ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ 5 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿತ್ತು.

ಈ ದಂಡದ ಮೊತ್ತವನ್ನು ಸರ್ಕಾರ ಪಾವತಿ ಮಾಡಿತ್ತು. ಸ್ಥಳೀಯ ಸಂಸ್ಥೆಗಳಿಗೆ ಹಿಂದುಳಿದ ವರ್ಗಗಳು ಮತ್ತು ಎಸ್ಸಿ ಎಸ್ಟಿ ಜನಾಂಗಕ್ಕೆ ಮೀಸಲಾತಿ ನೀಡುವ ಸಂಬಂಧ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು, ಈ ಸಮಿತಿ ಏಪ್ರಿಲ್ 1 ರಂದು ಮೀಸಲಾತಿ ಪಟ್ಟಿ ಸಲ್ಲಿಸಲಿದೆ. ಈ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ನ್ಯಾಯಪೀಠಕ್ಕೆ ಸರ್ಕಾರ ವಿವರಣೆ ನೀಡಿತ್ತು.