Categories
ಬೆಂಗಳೂರು

ಸಾಲ ಕೊಟ್ಟವರು ಸುಸ್ತಿದಾರರಿಂದ ಬಲವಂತವಾಗಿ ವಾಹನ ಸೀಜ್ ಮಾಡಂಗಿಲ್ಲ!

ಸಾಲ ಕೊಟ್ಟವರು ಸುಸ್ತಿದಾರರಿಂದ ಬಲವಂತವಾಗಿ ವಾಹನ ಸೀಜ್ ಮಾಡಂಗಿಲ್ಲ!
– ವಾಹನ ಕಿತ್ತುಕೊಂಡ ಹಣಕಾಸು ಸಂಸ್ಥೆಗಳಿಗೆ ದಂಡ
– ಹೈಕೋರ್ಟ್ ಮಹತ್ವದ ತೀರ್ಪು

NAMMUR EXPRESS NEWS
ಬೆಂಗಳೂರು: ಸಾಲ ಮಾಡಿ ವಾಹನಗಳನ್ನು ಖರೀದಿಸಿದ ಮಾಲೀಕರು ಸುಸ್ತಿದಾರರಾಗಿದ್ದ ವೇಳೆ ಸಾಲವಸೂಲಾತಿ ಏಜೆಂಟ್‌ಗಳು ಗೂಂಡಾ ಗಳ ಮೂಲಕ ಬಲವಂತವಾಗಿ ವಾಹನಗಳನ್ನು ಜಪ್ತಿ ಮಾಡುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಬಲವಂತವಾಗಿ ಸುಸ್ತಿದಾರರ ವಾಹನಗಳನ್ನು ಕಿತ್ತುಕೊಳ್ಳುವುದು ಸಂವಿಧಾನದ ವಿಧಿ 21 ಖಾತರಿಪಡಿಸಿರುವ ಜೀವಿಸುವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಒಂದು ವೇಳೆ ಬಲವಂತವಾಗಿ ವಾಹನಗಳನ್ನು ಕಿತ್ತುಕೊಂಡಲ್ಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಬಹುದಾಗಿದೆ ಎಂದು ಪಾಟ್ನಾ ಹೈಕೋರ್ಟ್ ಇತ್ತೀಚಿನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಅಕ್ರಮವಾಗಿ ವಾಹನಗಳನ್ನು ಜಪ್ತಿ ಮಾಡುತ್ತಿರುವ ಹಣಕಾಸು ಸಂಸ್ಥೆಗಳ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ರಾಜೀವ್ ರಂಜನ್ ಪ್ರಸಾದ್ ಅವರಿದ್ದ ಪೀಠ, ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕ್ಗಳು ವಾಹನಗಳ ಸಾಲ ವಸೂಲಾತಿಯನ್ನು ಆ‌ರ್. ಬಿ.ಐ ಮಾರ್ಗಸೂಚಿ ಮತ್ತು ಇತರೆ ಕಾನೂನಿನ ಅನುಸಾರ ಮಾಡಬೇಕೇ ವಿನಃ ಬಲವಂತದ ಕ್ರಮವಾಗಿರಬಾರದು. ವಸೂಲಿ ಕ್ರಮ ಕೈಗೊಳ್ಳುವಾಗ ಸಂವಿಧಾನ ಖಾತರಿಪಡಿಸಿರುವ ಜೀವನೋಪಾಯದ ಹಕ್ಕಿನ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದೆ.

ಇದೇ ವೇಳೆ ಕಿರುಕುಳ ನೀಡಿ ವಾಹನ ಕಿತ್ತುಕೊಂಡ ಪ್ರಕರಣಗಳಲ್ಲಿ ಪ್ರತಿವಾದಿಗಳಾಗಿರುವ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ ಹೈಕೋರ್ಟ್ ತಲಾ 50 ಸಾವಿರ ರೂ ದಂಡ ವಿಧಿಸಿದೆ. ಅಲ್ಲದೇ ಸಾಲವನ್ನು ಬಲವಂತವಾಗಿ ಗೂಂಡಾಗಳ ಮೂಲಕ ವಸೂಲಿ ಮಾಡುವ ಕ್ರಮ ಕೈ ಬಿಟ್ಟು ಕಾನೂನು ಪ್ರಕಾರ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವಂತೆ ಆದೇಶಿಸಿದೆ. ಅಂತಿಮವಾಗಿ ಬಲವಂತವಾಗಿ ಜಪ್ತಿ ತಡೆಗಟ್ಟಲು ಎಲ್ಲಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ

Categories
ಮಲ್ನಾಡ್ ಹವಾಮಾನ ಸುದ್ದಿ

ಬೆಳಗ್ಗೆ 9 ಗಂಟೆವರೆಗೆ ಮುಂದುವರಿದ ಮಂಜು!

ಬೆಳಗ್ಗೆ 9 ಗಂಟೆವರೆಗೆ ಮುಂದುವರಿದ ಮಂಜು!
– ಸೈಕ್ಲೋನ್ ಎಫೆಕ್ಟ್ : ಚಳಿಗೆ ಜನ ಜೀವನ ತತ್ತರ
– ಸುಗಮ ಸಂಚಾರಕ್ಕೂ ಅಡಚಣೆ: ಬೆಂಕಿ ಮೊರೆ!

NAMMUR EXPRESS NEWS
ಮಲೆನಾಡು: ಮಲೆನಾಡಿನಲ್ಲಿ ಚಳಿಗಾಲ ಆರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಚಳಿ ಅನುಭವ ಜನರಿಗೆ ಅಷ್ಟಾಗಿ ಆಗಿರಲಿಲ್ಲ. ಆದರೆ ಕಳೆದ ನಾಲ್ಕೈದು ದಿನಗಳಿಂದ ಮಂಜು ಆವರಿಸಿಕೊಳ್ಳುತ್ತಿದ್ದು, ನೀರಿನ ಹನಿ ಸುರಿಸುತ್ತಿದೆ. ಕಳೆದ ಎರಡು ದಿನಗಳಿಂದ ಮಂಜಿನಿಂದಾಗಿ ಬೆಳಗ್ಗೆ 9 ಗಂಟೆಯಾದರೂ ರಸ್ತೆಗಳು ಕಾಣದಂತಾಗಿದ್ದು, ಸೈಕ್ಲೋನ್ ಎಫೆಕ್ಟ್ ನಿಂದಾಗಿ ಎಲ್ಲೆಡೆ ತಂಡಿ ಹೆಚ್ಚಾಗಿ ಮಂಜು ಮುಸುಕಿದೆ. ಸೂರ್ಯ ಮುಳಗುತ್ತಿದ್ದಂತೆ ಆರಂಭವಾಗುವ ತಣ್ಣನೆಯ ಚಳಿ ರಾತ್ರಿ ಪೂರಾ ವಾತಾವರಣದೊಂದಿಗೆ ಬೆರತು ಬೆಳಗ್ಗೆ 9 ಗಂಟೆಯಾದರೂ ಮಂಜು ಆವರಿಸಿಕೊಂಡು ಜನರನ್ನು ಮನೆಯಿಂದ ಹೊರಬಾರದಂತೆ ಮಾಡಿದೆ.

ವಾಹನ ಸಂಚಾರಕ್ಕೆ ಅಡಚಣೆ

ಮಂಜಿನ ಎಫೆಕ್ಟ್‌ನಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದ್ದು, ವಾಹನ ಸವಾರರು ತೀವ್ರ ಪರದಾಡುವಂತಾಗಿದೆ. ಒಂಬತ್ತು ಗಂಟೆ ಯಾದರೂ ವಾಹನಗಳ ಹೆಡ್‌ಲೈಟ್‌ ಆರಿಸದೆ ಸಂಚರಿಸುವ ವಾಹನಗಳು, ಮನೆಯಿಂದ ಜನ ಆಚೆ ಬರಲು ಹಿಂದೆಮುಂದೆ ನೋಡುವಂತಾಗಿದೆ. ನಿತ್ಯ ಕೆಲಸಕ್ಕೆ ಹೋಗುವ ರೈತರು ಹೇಗಾಪ್ಪ ತೋಟದತ್ತ ಹೋಗುವುದು ಎಂದು ಯೋಚಿಸುತ್ತಾ ಕಂಬಳಿ ಹೊದ್ದು ಮನೆಯಲ್ಲಿ ಕೂರುತ್ತಿದ್ದಾರೆ. ಆಗುಂಬೆ ಸೇರಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾತಾವರಣ ಕೂಲ್ ಕೂಲ್ ಆಗಿದೆ.

ಬೆಂಕಿ ಶಾಖಕ್ಕೆ ಮೊರೆ!

ಚುಮು ಚುಮು ಚಳಿಯಿಂದ ತಪ್ಪಿಸಿಕೊಳ್ಳಲು ಜನತೆ ಮನೆಯ ಒಲೆಯ ಮುಂದೆ ಬೆಂಕಿ ಕಾಯಿಸಲು ಮುಂದಾಗುತ್ತಿದ್ದು, ಕೆಲಸಗಳಿಗೆ ಬೆಳಗ್ಗೆ ಹೊರಡುವ ಜನತೆ ಬಸ್‌ ನಿಲ್ದಾಣಗಳಲ್ಲಿ ಚಳಿಗೆ ನಡುಗುತ್ತ ನಿಂತಿರುವಂತ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿದೆ.

ರಾಜಧಾನಿಯಲ್ಲೂ ಚಳಿ ಚಳಿ

ಸೈಕ್ಲೋನ್ ಎಫೆಕ್ಟ್ ಹಿನ್ನೆಲೆ ರಾಜಧಾನಿಯಲ್ಲಿ ಭಾರೀ ಚಳಿ, ತಂಡಿ ಗಾಳಿ ಹೆಚ್ಚಾಗಿದೆ. ಅನೇಕರ ಅರೋಗ್ಯದಲ್ಲಿ ಏರುಪೇರು ಕಂಡು ಬರುತ್ತಿದೆ.

Categories
ಕರಾವಳಿ ಮಂಗಳೂರು

ಅನಧಿಕೃತ ಕ್ಲಿನಿಕ್, ಲ್ಯಾಬ್‌ಗಳಿಗೆ ಬೀಗ!

ಅನಧಿಕೃತ ಕ್ಲಿನಿಕ್, ಲ್ಯಾಬ್‌ಗಳಿಗೆ ಬೀಗ!
– ಆರೋಗ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ
– ನೊಂದಣಿಗೆ ಒಂದು ವಾರ ಗಡುವು

NAMMUR EXPRESS NEWS
ಮಂಗಳೂರು: ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಕ್ಲಿನಿಕ್, ಪ್ರಯೋಗಾಲಯಗಳ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಮುಚ್ಚಿಸಿ ಬೀಗ ಜಡಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಾಚರಣೆ ಕೈಗೊಂಡಿತ್ತು. ಕೆಪಿಎಂಇಎ ಕಾಯ್ದೆ-2017ರ ಅಡಿಯಲ್ಲಿ ನೋಂದಣಿಯಾಗದೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆ/ ಕ್ಲಿನಿಕ್‌ಗಳು/ಲ್ಯಾಬೋರೇಟರಿ ಗಳಿಗೆ ತನಿಖಾ ತಂಡದ ಸದಸ್ಯರು ದಿಢೀ‌ರ್ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು.ಆಗ ವಾಮಂಜೂರಿನ ಮೂಡುಶೆಡ್ಡೆಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಒಂದು ಕ್ಲಿನಿಕ್ ಹಾಗೂ ಲ್ಯಾಬೋರೇಟರಿ ಹಾಗೂ ನಗರದ ಹಂಪನಕಟ್ಟೆಯಲ್ಲಿರುವ ಒಂದು ಕ್ಲಿನಿಕ್‌ಗೆ ಬೀಗಮುದ್ರೆ ಹಾಕಿದ್ದಾರೆ.

ನೋಂದಣಿಗೆ ವಾರದ ಗಡುವು

ಮಂಗಳೂರು ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಈಗಾಗಲೇ ಕೆಪಿಎಂಇಎ ಅಡಿ ನೋಂದಣಿ ಮಾಡಿಕೊಳ್ಳದ ಅಲೋಪತಿ ಕ್ಲಿನಿಕ್. ಆಯುಷ್ ಕ್ಲಿನಿಕ್, ಡೆಂಟಲ್ ಕ್ಲಿನಿಕ್, ಜನೆಟಿಕ್ ಲ್ಯಾಬೋ ರೇಟರಿಗಳು, ಫಿಸಿಯೋಥೆರಪಿ ಸೆಂಟರ್‌ಗಳು, ಲ್ಯಾಬ್‌ ಹಾಗೂ ಈಗಾಗಲೇ ನೋಂದಣಿಯಾಗಿ ನವೀಕರಿಸಲು ಬಾಕಿ ಇರುವ ಸಂಸ್ಥೆಗಳು ಕಡ್ಡಾಯವಾಗಿ 1 ವಾರದೊಳಗೆ ನೋಂದಣಿ ಮಾಡಬೇಕು. ಈ ಅವಧಿಯೊಳಗೆ ನೋಂದಣಿ ಮಾಡದಿದ್ದಲ್ಲಿ ಕೆಪಿಎಂಇ ಕಾಯ್ದೆಯಡಿ ನಿರ್ದಾಕ್ಷಿಣ್ಯ ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಎಚ್ಚರಿಸಿದ್ದಾರೆ.

Categories
ಉಡುಪಿ ಕರಾವಳಿ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಮಲ್ಪೆ ಬೀಚಲ್ಲಿ ಜೀಪ್ ಓಡಿಸಿ ಹುಚ್ಚಾಟ: ಕೇಸ್
– ಉಡುಪಿ: ವಾಕಿಂಗ್ ತೆರಳಿದ್ದ ವೃದ್ಧನ ಮೇಲೆ ಹಲ್ಲೆಗೈದ ದುಷ್ಕರ್ಮಿಗಳು
ಮಂಗಳೂರು: ಏಣಿಗೆ ಕರೆಂಟ್ ತಗಲಿ ವ್ಯಕ್ತಿಯ ಸಾವು

NAMMUR EXPRESS NEWS
ಮಲ್ಪೆ : ಪ್ರವಾಸಿ ತಾಣವಾಗಿರುವ ಮಲ್ಪೆ ಬೀಚ್ ಮಧ್ಯೆ ಅಪಾಯಕಾರಿ ರೀತಿಯಲ್ಲಿ ಜೀಪು ಚಲಾಯಿಸಿದ ಇಬ್ಬರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಭಾರತ್ ಮತ್ತು ನಂಜಿಗೌಡ ಎಂಬವರು ಡಿ.5ರಂದು ಮಧ್ಯಾಹ್ನ ಬೀಚ್‌ನ ಸಾರ್ವಜನಿಕ ಶೌಚಾಲಯದಿಂದ ಫಿಶರ್ ಮ್ಯಾನ್ ಹೋಟೆಲ್‌ಗೆ ಬೀಚ್ ಮಧ್ಯದಲ್ಲಿ ಬೀಚ್ ಮಧ್ಯದಲ್ಲಿ ಜೀಪ್ ಚಲಾಯಿಸಿಕೊಂಡು ಬಂದು ನಿಲ್ಲಿಸಿದ್ದು, ಬೀಚ್‌ಗೆ ಯಾವುದೇ ವಾಹನ ಪ್ರವೇಶವಿಲ್ಲದೇ, ಮಹಿಳೆಯರು ಮಕ್ಕಳು ಸೇರಿದಂತೆ ಸುಮಾರು ಜನ ತುಂಬಿರುವ ಜೀಪನ್ನು ಬೀಚ್ ಮಧ್ಯದಲ್ಲಿ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸುವುದಾಗಿ ದೂರಲಾಗಿದೆ.

ಮೊಬೈಲ್,ಪರ್ಸ್ ಕದ್ದು ಪರಾರಿ ಆದ ಕಳ್ಳರು

ಉಡುಪಿ: ಮರೆವು ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರಿಗೆ ಅಪರಿಚಿತರ ತಂಡ ಹಲ್ಲೆ ನಡೆಸಿ ಸುಲಿಗೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 76 ಬಡಗಬೆಟ್ಟು ಗ್ರಾಮದ ಬೈಲೂರು ನಿವಾಸಿ ಸಂಜೀವ (೮೨) ಎಂಬವರು ಒಂದು ವರ್ಷದಿಂದ ಮರೆವು ಖಾಯಿಲೆಯಿಂದ ಬಳಲುತ್ತಿದ್ದು, ನ.೩೦ರಂದು ಬೆಳಗ್ಗೆ ಮನೆಯಿಂದ ವಾಕಿಂಗ್‌ಗೆ ತೆರಳಿದ್ದರು. ಈ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಸಂಜೀವ ಅವರಿಗೆ ಹಲ್ಲೆ ಮಾಡಿ ಮೊಬೈಲ್, ಪರ್ಸ್ ಮತ್ತು ಚಿನ್ನದ ಉಂಗುರವನ್ನು ಸುಲಿಗೆ ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರೆಂಟ್ ತಗಲಿ ವ್ಯಕ್ತಿಯ ಸಾವು

ಏಣಿ ಮೂಲಕ ವಿದ್ಯುತ್ ಪ್ರವಹಿಸಿ ಕಾರ್ಮಿಕ ಮೃತಪಟ್ಟ ಘಟನೆ ಅಳಪೆ ಗ್ರಾಮದ ಶಿಲ್ಪ ಪಡ್ಡುವಿನಲ್ಲಿ ನಡೆದಿದೆ. ಬಂಟ್ವಾಳ ಅಬ್ದುಲ್ ರೆಹಮಾನ್ (43) ಮೃತರು ಹೆನ್ರಿ ಡಿ’ಸೋಜಾ ಎಂಬವರ ಮನೆಯಲ್ಲಿ ಮೇಲ್ಟಾವಣಿ ಬಳಿ ಕಬ್ಬಿಣದ ಏಣಿ ಮೇಲೆ ನಿಂತು ಪೈಟಿಂಗ್ ಮಾಡುತ್ತಿದ್ದಾಗ ಪಕ್ಕದಲ್ಲಿದ್ದ ಹೈಟೆನ್ಸನ್ ವೈರ್ ತಾಗಿ ವಿದ್ಯುತ್ ಪ್ರವಹಿಸಿ ಕೆಳಗೆ ಕುಸಿದು ಬಿದ್ದರು. ಅವರ ಜತೆ ಕೆಲಸ ಮಾಡುತ್ತಿದ್ದ ರಾಜೇಶ್ ಮತ್ತು ಬಾಲಕೃಷ್ಣ ಅವರು ಆಸ್ಪತ್ರೆಗೆ ಕರೆದೊಯ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಹುಚ್ಚನ ಹುಚ್ಚಾಟಕ್ಕೆ ಬ್ರೇಕ್!

ತೀರ್ಥಹಳ್ಳಿಯಲ್ಲಿ ಹುಚ್ಚನ ಹುಚ್ಚಾಟಕ್ಕೆ ಬ್ರೇಕ್!
– ಪೊಲೀಸ್ ಇಲಾಖೆ, ಸ್ಥಳೀಯ ಪ್ರಮುಖರಿಂದ ಆಸ್ಪತ್ರೆಗೆ
– ನಿಮ್ಹಾನ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ಹುಚ್ಚನೊಬ್ಬ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು ಹುಚ್ಚಾಟ ಮೆರೆಯುತ್ತಿದ್ದಾನೆ ಎಂಬ ಸುದ್ದಿ ಪ್ರಕಟವಾದ ಬೆನ್ನಲ್ಲೇ ಸ್ಥಳೀಯ ಪ್ರಮುಖರು, ಪೊಲೀಸ್ ಇಲಾಖೆ ನೆರವಿನೊಂದಿಗೆ ಆತನನ್ನು ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಆತ ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಕಿರಿಕಿರಿ ಮಾಡುತ್ತಿದ್ದಾನೆ. ಇದರಿಂದ ಪಟ್ಟಣದಲ್ಲಿ ಓಡಾಡಲು ಜನರು ಸಂಕಷ್ಟ ಅನುಭವಿಸುವಂತಾಗಿದೆ. ರಸ್ತೆ ಮಧ್ಯ ನಿಂತು ಕೂಗಾಡುತ್ತಾ, ಇನ್ನು ಯುವತಿಯರಿಗೆ ಕೂಡ ಕೀಟಲೆ ನೀಡುತ್ತಿದ್ದು, ಇದರಿಂದ ಯುವತಿಯರಿಗೆ ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ. ಈತನ ಅಸಭ್ಯ ವರ್ತನೆಯಿಂದ ಯುವತಿಯರು ಹಾಗೂ ಮಹಿಳೆಯರು ಪಟ್ಟಣದಲ್ಲಿ ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಮ್ಮೂರ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು.

ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ಪ್ರಮುಖರಾದ ವಿನೋದ ಶೆಟ್ಟಿ, ಬೆಟ್ಟಮಕ್ಕಿ ಸುದೀಪ್ ಶೆಟ್ಟಿ, ಬೆಟ್ಟಮಕ್ಕಿ ಪೂರ್ಣೇಶ್ ಪೂಜಾರಿ, ಸುಮಂತ್, ಕುರುವಳ್ಳಿ ನಾಗರಾಜ್, ಅಂಜನ್ ಹೆಗ್ಡೆ ಸಹಕಾರದಿಂದ ಹಿಡಿದು ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಲಾಯಿತು. ಬೆಟ್ಟಮಕ್ಕಿ ಸುದೀಪ್ ಶೆಟ್ಟಿ ಅವರು ಸಂಪೂರ್ಣ ಅಂಬುಲ್ಯನ್ಸ್ ವೆಚ್ಚವನ್ನ ನೀಡಿ ತೀರ್ಥಹಳ್ಳಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಹಿಡಿದು ಕಳಿಸಲು ನೆರವಾದರು. ಈ ಹಿಂದೆ ಕೂಡ ಸೊಪ್ಪುಗುಡ್ಡೆ ರಾಘವೇಂದ್ರ ನೇತೃತ್ವದಲ್ಲಿ ಅನೇಕರಿಗೆ ಚಿಕಿತ್ಸೆ ಕೊಡಿಸಲಾಗಿತ್ತು.

Categories
ಕೃಷಿ ಬೆಂಗಳೂರು ರಾಜ್ಯ

ರಾಜ್ಯದ ರೈತರಿಗೆ ಗುಡ್ ನ್ಯೂಸ್..!

ರಾಜ್ಯದ ರೈತರಿಗೆ ಗುಡ್ ನ್ಯೂಸ್..!
– ಮುಂದಿನ ವಾರ ಹೆಕ್ಟೇರ್ ಗೆ 22,500ವರೆಗೆ ಬೆಳೆ ಪರಿಹಾರ ಪಾವತಿ

NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರದಿಂದ ರೈತರ ಬೆಳೆಹಾನಿಗೆ ಪರಿಹಾರವನ್ನು ಘೋಷಣೆ ಮಾಡಿತ್ತು. ಅದರಂತೆ ಮುಂದಿನ ವಾರ ಹೆಕ್ಟೇ‌ರ್ ಗೆ 22,500ರವರೆಗೆ ಬೆಳೆಹಾನಿ ಪರಿಹಾರ ಪಾವತಿ ಮಾಡಲಾಗುತ್ತಿದೆ. ಈ ಕುರಿತಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಮಾಹಿತಿ ನೀಡಿದ್ದು, ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಎನ್ ಡಿ ಆರ್ ಎಫ್ ಅನುದಾನ ನಿರೀಕ್ಷಿಸಿ, ಬೆಳೆಹಾನಿ ಪರಿಹಾರದ ಮೊದಲ ಕಂತಾಗಿ ಅರ್ಹ ರೈತರಿಗೆ ತಲಾ 2,000 ಪಾವತಿಸಲು ತಿರ್ಮಾನಿಸಲಾಗಿದೆ. ಮುಂದಿನವಾರ ಆ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದರು.

ಇನ್ನೂ ಶೇ.33ಕ್ಕಿಂತ ಹೆಚ್ಚು ಹಾನಿಯಾದ ವಿಸ್ತೀರಣಕ್ಕೆ ಪ್ರತಿ ಹೆಕ್ಟೇರ್ ಗೆ ಪರಿಹಾರ ದರ ಕೂಡ ನಿಗದಿ ಪಡಿಸಲಾಗಿದೆ. ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇ‌ರ್ ಗೆ ರೂ.8,500 ಪರಿಹಾರ ನೀಡಲಾಗುತ್ತದೆ. ನೀರಾವರಿ ಬೆಳೆಗೆ 17,000 ಹಾಗೂ ಬಹು ವಾರ್ಷಿಕ ಬೆಳೆಗೆ ರೂ.22,500ರವರೆಗೆ ಬೆಳೆ ಪರಿಹಾರ ನೀಡೋದಾಗಿ ತಿಳಿಸಿದರು. ಕೇಂದ್ರದಿಂದ ಅನುದಾನ ಬಂದ ಕೂಡಲೇ ಎನ್ ಡಿ ಆ‌ರ್ ಎಫ್ ಮಾರ್ಗಸೂಚಿಯಂತೆ ಬರ ಪರಿಹಾರವನ್ನು ರೈತರಿಗೆ ನೀಡಲಾಗುತ್ತದೆ ಎಂಬುದಾಗಿ ಹೇಳಿದ್ದಾರೆ.

Categories
ಮಾಹಿತಿ

ಮದುವೆಯಾಗಬೇಕಾ? ಉಚಿತ ಮಾಂಗಲ್ಯ ಭಾಗ್ಯ ಯೋಜನೆ..!

ಮದುವೆಯಾಗಬೇಕಾ? ಉಚಿತ ಮಾಂಗಲ್ಯ ಭಾಗ್ಯ ಯೋಜನೆ..!
– ಮದುವೆಗೆ 60,000 ರೂಪಾಯಿ ಸಹಾಯಧನ
– ಏನಿದು ಯೋಜನೆ.. ಯಾರು ಮದುವೆ ಆಗಬಹುದು?

NAMMUR EXPRESS NEWS
ಮಾಂಗಲ್ಯಭಾಗ್ಯ ಯೋಜನೆಯಡಿ ರಾಜ್ಯ ಸರಕಾರವೇ ವಿವಾಹವಾಗುವ ಎಲ್ಲಾ ವರ್ಗದ ವಧು-ವರರಿಗೆ 60,000 ನಗದು ಸಹಾಯಧನ ನೀಡುತ್ತದೆ. ಹೆಸರು ನೋಂದಣಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಪ್ರಾಪ್ತವಯಸ್ಕ ಜೋಡಿಗಳಿಗೆ ಸರಳವಾಗಿ ಮದುವೆ ಮಾಡಿಸಲು ಅನ್ನಭಾಗ್ಯದಂತೆ ‘ಮಾಂಗಲ್ಯ ಭಾಗ್ಯ’ ಹೆಸರಿನಲ್ಲಿ ಸಾಮೂಹಿಕ ವಿವಾಹ ಯೋಜನೆಯನ್ನು ರಾಜ್ಯ ಸರಕಾರ ಆಯೋಜಿಸಿದೆ. ಮದುವೆಗಾಗುವ ದುಂದು ವೆಚ್ಚವನ್ನು ತಪ್ಪಿಸುವ ಮೂಲಕ ಬಡ ಹಾಗೂ ಮಧ್ಯಮ ವರ್ಗಗಳನ್ನು ಸಾಲಮುಕ್ತರನ್ನಾಗಿಸಲು ಮುಜರಾಯಿ ಇಲಾಖೆ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

ಏನಿದು ಮಾಂಗಲ್ಯಭಾಗ್ಯ ಯೋಜನೆ?:

ಇದೊಂದು ಸರಕಾರವೇ ನಡೆಸಿಕೊಡುವ ಸರಳ ಸಾಮೂಹಿಕ ವಿವಾಹ ಯೋಜನೆಯಾಗಿದೆ. 2020ರ ಜನವರಿ 10ರಂದು ‘ಸಪ್ತಪದಿ’ ಹೆಸರಿನಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದೀಗ ಹಾಲಿ ಕಾಂಗ್ರೆಸ್‌ ಸರಕಾರ ‘ಸಪ್ತಪದಿ’ ಬದಲು ‘ಮಾಂಗಲ್ಯ ಭಾಗ್ಯ’ ಎಂದು ಹೆಸರು ಬದಲಿಸಿ, ಈ ಹಿಂದೆ ಆಯ್ದ 100 ದೇವಾಲಯಗಳಲ್ಲಿ ಮಾತ್ರ ಜಾರಿಗೆ ತಂದಿದ್ದ ಯೋಜನೆಯನ್ನು ರಾಜ್ಯದ ಎಲ್ಲಾ ‘ಎ’ ಮತ್ತು ‘ಬಿ’ ಗ್ರೇಡ್ ದೇವಾಲಯಗಳಿಗೂ ವಿಸ್ತರಿಸಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯಡಿ ರಾಜ್ಯದಲ್ಲಿ 34,563 ದೇವಾಲಯಗಳಿದ್ದು; ಇವುಗಳಲ್ಲಿ ‘ಎ’ ಮತ್ತು ‘ಬಿ’ ಗ್ರೇಡ್ ದೇವಾಲಯಗಳಲ್ಲಿ ಮಾಂಗಲ್ಯಭಾಗ್ಯ ವಿವಾಹ ಕಾರ್ಯಕ್ರಮ ನೆರವೇರಿಸಲಾಗುತ್ತಿದೆ.

ವಿವಾಹಗಳು ಯಾವ ದಿನಾಂಕದ೦ದು ನಡೆಯಲಿವೆ?:

2023ರ ನವೆಂಬರ್, ಡಿಸೆಂಬರ್ ಮತ್ತು 2024ರ ಜನವರಿಯಲ್ಲಿ ಸಾಮೂಹಿಕ ವಿವಾಹಗಳು ನೆರವೇರುತ್ತಿವೆ. ಈಗಾಗಲೇ ನವೆಂಬರ್ 16, 19 ಮತ್ತು 29ರಂದು ಹಾಗೂ ಡಿಸೆಂಬರ್ 7, 10ರಂದು ವಿವಿಧ ದೇವಾಲಯಗಳಲ್ಲಿ ಸಾಮೂಹಿಕ ವಿವಾಹಗಳು ನೆರವೇರಿವೆ. ಅದೇ ರೀತಿ ಬರಲಿರುವ 2024ರ ಜನವರಿ 28 ಮತ್ತು 31ರಂದು ಮತ್ತೊಂದು ಸುತ್ತಿನ ವಿವಾಹ ಮಹೋತ್ಸವಕ್ಕೆ ದಿನಾಂಕಗಳನ್ನು ನಿಗದಿಪಡಿಸಲಾಗಿದೆ.

ಸಹಾಯಧನ ಮತ್ತು ಸೌಲಭ್ಯ ಏನೇನು?

ಸರ್ಕಾರದ ಈ ಉಚಿತ ಯೋಜನೆ ವಿವಾಹ ಕಾರ್ಯಕ್ರಮದಲ್ಲಿ ಪ್ರತಿ ನವಜೋಡಿಗೆ ಅಗತ್ಯತೆಗೆ ಅನುಗುಣವಾಗಿ ಪ್ರೋತ್ಸಾಹಧನ ಹಾಗೂ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು; ಆ ವಿವರ ಈ ಕೆಳಗಿನಂತಿದೆ:
– ವರನಿಗೆ ಹೂವಿನ ಹಾರ ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ 5,000 ರೂಪಾಯಿ
– ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣಕ್ಕಾಗಿ 10,000 ರೂಪಾಯಿ
– ವಧುವಿಗೆ ಎರಡು ಚಿನ್ನದ ತಾಳಿ, ಒಂದು ಗುಂಡುಗಳಿಗೆ 45,000 ರೂಪಾಯಿ
– ಉಚಿತ ಪ್ರೋತ್ಸಾಹಧನವನ್ನು ವಿವಾಹವಾಗುವ ಜೋಡಿಗಳಿಗೆ ಒಟ್ಟು 60,000 ರೂಪಾಯಿ ನೀಡಲಾಗುತ್ತದೆ.
– ಈ ವಿವಾಹಕ್ಕೆ ಆಗಮಿಸುವ ವಧು-ವರರು, ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ವ್ಯವಸ್ಥೆ ವೆಚ್ಚವನ್ನು ದೇವಸ್ಥಾನದ ನಿಧಿಯಿಂದ ಭರಿಸಲಾಗುತ್ತದೆ.

Categories
ಅಪಘಾತ ತೀರ್ಥಹಳ್ಳಿ

ಬೈಕಿನಲ್ಲಿ ಚಲಿಸುವ ವೇಳೆ ನಾಯಿ ಅಡ್ಡ: ವ್ಯಕ್ತಿ ಸ್ಥಳದಲ್ಲೇ ಸಾವು

ಬೈಕಿನಲ್ಲಿ ಚಲಿಸುವ ವೇಳೆ ನಾಯಿ ಅಡ್ಡ: ವ್ಯಕ್ತಿ ಸ್ಥಳದಲ್ಲೇ ಸಾವು
– ತೀರ್ಥಹಳ್ಳಿಯ ಕಲ್ಮನೆ ಸಮೀಪದ ಹೆಗ್ಗೋಡಿನಲ್ಲಿ ಘಟನೆ

NAMMUR EXPRESS NEWS
ತೀರ್ಥಹಳ್ಳಿ: ಬೈಕಿನಲ್ಲಿ ಚಲಿಸುವ ವೇಳೆ ನಾಯಿ ಅಡ್ಡ ಬಂದು ಬೈಕ್ ಅಪಘಾತ ಆಗಿ ವ್ಯಕ್ತಿ ಸ್ಥಳದಲ್ಲೇ ಸಾವು ಕಂಡ ಘಟನೆ ಬುಧವಾರ ತೀರ್ಥಹಳ್ಳಿ ತಾಲೂಕಿನ ಕಲ್ಮನೆ ಸಮೀಪದ ಹೆಗ್ಗೋಡಿ ನಲ್ಲಿ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಕಮ್ಮರಡಿ ಸಮೀಪದ ಅರೇಹಳ್ಳಿ ಗ್ರಾಮ ಪಂಚಾಯಿತಿಯ ಜೋಡುಕಟ್ಟೆ ಬೈಲು ಊರಿನ ಹಮೀದ್ (55) ರೆಹಮತ್ ದಂಪತಿಗಳು ಬೆಳಗ್ಗೆ 10.30 ರ ಸುಮಾರಿಗೆ Tvs ಜುಪಿಟರ್ ಸ್ಕೂಟರ್ ನಲ್ಲಿ ರಸ್ತೆಯಲ್ಲಿ ಹೋಗುವಾಗ ನಾಯಿ ಬೈಕ್ ಗೆ ಅಡ್ಡ ಸಿಕ್ಕಿ ಹಮೀದ್ ಎನ್ನುವವರು ಸಾವನಪ್ಪಿದ್ದಾರೆ. ರೆಹಮತ್ ಹಮೀದ್ ಅವರ ಹೆಂಡತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಮೀದ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಹಮೀದ್ ಅವರು ಮಂಗಳೂರಿನಲ್ಲಿ ಕೆಲಸದಲ್ಲಿದ್ದರು.

Categories
ಬೆಂಗಳೂರು

ಬಿಯ‌ರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..!

ಬಿಯ‌ರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..!
– ಚಳಿಗಾಲ ಶುರು: ಬಿಯರ್ ಮೊರೆ ಹೋದ ಮದ್ಯ ಪ್ರಿಯರು
– ಪ್ರತಿ ದಿನ ಮಾರಾಟ ಹೆಚ್ಚಳ: ಸರ್ಕಾರಕ್ಕೆ ಖುಷಿ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಬಿಯರಿಗೆ ಎಲ್ಲಿಲ್ಲದ ಡಿಮ್ಯಾಂಡ್ ಶುರುವಾಗಿದೆ. ಇದರ ಜೊತೆಗೆ ಲಿಕ್ಕ‌ರ್ ಸೇಲ್ ಫುಲ್ ಸಹ ಜೋರಿದೆ. ನವೆಂಬರ್‌ನಲ್ಲಿ ಬಿಯ‌ರ್ ಮಾರಾಟ ಪ್ರಮಾಣ ಹೆಚ್ಚಾಗಿದೆ. ಈ ಮೂಲಕ ಗ್ಯಾರಂಟಿಗಳನ್ನು ಜಾರಿಗೊಳಿಸಿದ ಸರ್ಕಾರಕ್ಕೆ ಮದ್ಯಪ್ರಿಯರು ಆರ್ಥಿಕವಾಗಿ ಕೈ ಜೋಡಿಸಿದ್ದಾರೆ. ರಾಜ್ಯದಲ್ಲಿ ವರ್ಷಾಂತ್ಯದ ವೇಳೆ ಬಿಯರ್, ಲಿಕ್ಕರ್ ಸೇಲ್ ಹೆಚ್ಚಿದೆ. ಮದ್ಯ ಪ್ರಿಯರು ಹೊಸ ವರುಷ ಬರುವ ಮುನ್ನವೇ ಬಿಯರ್, ಹಾಟ್ ಡ್ರಿಂಕ್ಸ್ ಸೇಲ್ ಹೆಚ್ಚಾಗಿದೆ. ಚಳಿಗಾಲ ಶುರುವಾಗ್ತಿದ್ದಂತೆ ರಾಜ್ಯದಲ್ಲಿ ಬಿಯರ್ ಗೆ ಭಾರೀ ಬೇಡಿಕೆ ಬಂದಿದೆ.

Categories
ಅಪರಾಧ ಚಿಕ್ಕಮಗಳೂರು

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಓರ್ವ ಅರೆಸ್ಟ್!

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಓರ್ವ ಅರೆಸ್ಟ್!
– ಕೊಪ್ಪದ ಜಯಪುರದಲ್ಲಿ ನಡೆದ ಘಟನೆ
– ಕಾರು ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು
ಸಾವು

NAMMUR EXPRESS NEWS
ಜಯಪುರ: ಅಪ್ರಾಪ್ತ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ 50 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ಜಯಪುರ ಪೊಲೀಸರು,ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಜೈಲಿಗಟ್ಟಿದ್ದಾರೆ. ಅಂಗಡಿಗೆ ವಸ್ತುಕೊಳ್ಳಲು ಬಂದ ಬಾಲಕಿಗೆ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದ್ದು. ಈ ಕುರಿತು ಬಾಲಕಿ ಪೋಷಕರಿಗೆ ತಿಳಿಸಿದ್ದಳು. ಸಂತ್ರಸ್ಥ ಬಾಲಕಿಯ ಪೋಷಕರು ಆರೋಪಿಯ ವಿರುದ್ದ ಜಯಪುರ ಠಾಣೆಗೆ ದೂರು ನೀಡಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಜಯಪುರ ಪೊಲೀಸ್ ಠಾಣೆಯ ಪಿಎಸ್ಐ ಅಂಬರೀಶ್ ಆರೋಪಿಯನ್ನು ಬಂಧಿಸಿ, ಪೋಕ್ಸೋ ಹಾಗೂ ಐಪಿಸಿ 354 kaಯ್ದೆ ಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಡೂರಲ್ಲಿ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಕಡೂರು: ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಿಕ್ಕಪಟ್ಟಣಗೆರೆ ಗೇಟ್ ಬಳಿ ನಡೆದಿದೆ. ನಯನ (26) ಮನು (27) ಮೃತ ದುರ್ದೈವಿಗಳು. ಮೃತ ಪಟ್ಟ ದುರ್ದೈವಿಗಳು ಕಡೂರಿನಿಂದ-ಚಿಕ್ಕಮಗಳೂರಿಗೆ ತೆರಳುತ್ತಿದ್ದು, ಕಾರಿಗೆ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.