Categories
ಅಡಿಕೆ-ದರ ಶಿವಮೊಗ್ಗ

ಅಡಿಕೆ ದರ 27-02-2024

ಅಡಿಕೆ ದರ
27-02-2024
ಸರಕು 48600 82999
ಬೆಟ್ಟೆ 44100 54259
ರಾಶಿ 26009 48559
ಗೊರಬಲು 14001 33319
Categories
ಬೆಂಗಳೂರು ರಾಜ್ಯ ಸಿನಿಮಾ

ಫೆ.29 ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ.!

ಫೆ.29 ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ.!
– ಸಿಎಂ ಸಿದ್ದರಾಮಯ್ಯ ಚಾಲನೆ
– ಫೆ.15ರಿಂದ ಆನ್ ಲೈನ್ ಟಿಕೆಟ್ ಪಡೆಯಲು ಅವಕಾಶ

NAMMUR EXPRESS NEWS
ಬೆಂಗಳೂರು: ಫೆಬ್ರವರಿ 29 ರಿಂದ ಮಾರ್ಚ್ 7ರವರೆಗೆ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ಫೆ.29 ರಂದು ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ವೇಳೆ ಕನ್ನಡ ಸೇರಿದಂತೆ ವಿವಿಧ ವಿದೇಶಿ ಸಿನಿಮಾಗಳು ಪ್ರದರ್ಶನಗೊಳ್ಳಲಿದೆ. ಈ ಬಾರಿ ಸಾಮಾಜಿಕ ನ್ಯಾಯ, ಲಿಂಗತ್ವ ಸಮಾನತೆ, ಜೀವನ ಚರಿತ್ರೆ ವಿಷಯ ಸೇರಿದಂತೆ ಒಟ್ಟು 200ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಹಾಗೂ ಚಿತ್ರೋತ್ಸವದ ಕೋರ್ ಸಮಿತಿಯ ಅಧ್ಯಕ್ಷ ಡಾ.ಕೆ.ವಿ. ತ್ರಿಲೋಕಚಂದ್ರ ತಿಳಿಸಿದ್ದಾರೆ.

ಕನ್ನಡ ಚಿತ್ರರಂಗ 90 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಮತ್ತು ಕರ್ನಾಟಕದ 50 ವರ್ಷಗಳ ಸಂಭ್ರಮದಲ್ಲಿ ಕನ್ನಡ ವಿಶೇಷ ವಿಭಾಗದಲ್ಲಿ 30 ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಟಿಕೆಟ್ ದರ ಎಷ್ಟು..?

1) ಸಾರ್ವಜನಿಕರಿಗೆ ₹ 800
2) ವಿದ್ಯಾರ್ಥಿಗಳು, ಚಿತ್ರೋದ್ಯಮದ ಸದಸ್ಯರು, ಹಿರಿಯ ನಾಗರಿಕರಿಗೆ ₹400

ಎಲ್ಲೆಲ್ಲಿ ಪ್ರದರ್ಶನ?

– ಒರಾಯನ್ ಮಾಲ್, ರಾಜಾಜಿನಗರ
– ರಾಜ್ ಕುಮಾರ್ ಕಲಾಭವನ, ಚಾಮರಾಜಪೇಟೆ
– ಸುಚಿತ್ರಾ ಫಿಲ್ಮಸೊಸೈಟಿ, ಬನಶಂಕರಿ 2ನೇ ಹಂತ
ಚಿತ್ರಗಳ ಹೆಚ್ಚಿನ ವಿವರಕ್ಕಾಗಿ ಮತ್ತು ಫೆಬ್ರವರಿ 15ರಿಂದ ಆನ್ ಲೈನ್ ಟಿಕೆಟ್ ಪಡೆದುಕೊಳ್ಳಲು ಸ್ಕ್ಯಾನ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ: 080-23493410 ಸಂಪರ್ಕಿಸಬಹುದಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

Categories
ಬೆಂಗಳೂರು ರಾಜ್ಯ

ಅಪ್ಪು ಬತ್‌ರ್ಡೇಗೆ ಅಭಿಮಾನಿಗಳಿಗೆ ಗಿಫ್ಟ್

ಅಪ್ಪು ಬತ್‌ರ್ಡೇಗೆ ಅಭಿಮಾನಿಗಳಿಗೆ ಗಿಫ್ಟ್
– ‘ಜಾಕಿ’ ಚಿತ್ರ ಮರು ಬಿಡುಗಡೆಗೆ ಸಜ್ಜು

NAMMUR EXPRESS NEWS
ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಮಾರ್ಚ್ 17ಕ್ಕೆ ಅಪ್ಪು ಹುಟ್ಟು ಹಬ್ಬ. ಅಂದು ಅವರ ನಟನೆಯ ಜಾಕಿ ಸಿನಿಮಾವನ್ನು ಮರು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದುನಿಯಾ ಸೂರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಬಾಕ್ಸ್ ಆಫೀಸಿನಲ್ಲಿ ಸೂಪರ್ ಹಿಟ್ ಚಿತ್ರ ಎಂದು ದಾಖಲಾಗಿದೆ.

ಚಿತ್ರದ ಕಥೆ, ಅಪ್ಪು ಡಾನ್ಸ್, ಹಾಡು ಹಾಗೂ ಸಾಹಸ ಸನ್ನಿವೇಶಗಳಿಂದ ಜಾಕಿ ಸಿನಿಮಾ ಗಮನ ಸೆಳೆದಿತ್ತು. ವಿಚಿತ್ರ ವೇಷಗಳನ್ನೂ ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಹಾಕಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅಪ್ಪು ಜೊತೆ ಭಾವನಾ ನಾಯಕಿಯಾಗಿ ನಟಿಸಿದ್ದರು. ಜಾಕಿ ಚಿತ್ರವನ್ನು ಮತ್ತಷ್ಟು ಅಪ್ ಗ್ರೇಡ್ ಮಾಡಿ ಈ ಬಾರಿ ಥಿಯೇಟರ್ ಗೆ ತರಲಾಗುತ್ತಿದೆ. ಸೌಂಡ್, ರೆಸ್ಯುಲೇಷನ್ ಮತ್ತಷ್ಟು ಹೆಚ್ಚಿಸಲಾಗಿದೆಯಂತೆ. ಇನ್ನಷ್ಟು ಕಲರ್ ಫುಲ್ ನೊಂದಿಗೆ ಜಾಕಿ ಸಿನಿಮಾವನ್ನು ನೋಡಬಹುದಾಗಿದೆಯಂತೆ.

Categories
ಬೆಂಗಳೂರು

ಮಾ.1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ.!

ಮಾ.1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ.!
– ಪರೀಕ್ಷಾ ಕೇಂದ್ರದ ಸುತ್ತಾಮುತ್ತಾ ನಿಷೇಧಾಜ್ಞೆ ಜಾರಿ
– ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಹೇಗಿದೆ? ಇಲ್ಲಿದೆ ಮಾಹಿತಿ

NAMMUR EXPRESS NEWS
ಬೆಂಗಳೂರು: ಮಾರ್ಚ್ 1 ರಿಂದ ಮಾರ್ಚ್ 22 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಈ ಅವಧಿಯಲ್ಲಿ ಪರೀಕ್ಷೆ ಕೇಂದ್ರದ ಸುತ್ತಾಮುತ್ತಾ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟ‌ರ್ ಒಳಗಿನ ಆವರಣವನ್ನು ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144ರ ಮೇರೆಗೆ ನಿರ್ಭಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಅನಧಿಕೃತ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶವನ್ನು ನಿಷೇಧಿಸಿದೆ. ಆಯಾ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನಲ್ಲಿರುವ ಜೆರಾಕ್ಸ್ ಸೆಂಟರ್ ಮತ್ತು ಇಂಟರ್ನೆಟ್ ಸೆಂಟರ್ಗಳನ್ನು ಮುಚ್ಚುವಂತೆಯೂ ಮತ್ತು ಈ ಆದೇಶವು ಪರೀಕ್ಷಾ ಮೇಲ್ವಿಚಾರಣೆ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಕೆಎಸ್ ಆರ್ ಟಿಸಿಯ ನಗರ, ಹೊರ ವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ (ಬೆಳಗ್ಗೆ 10.15ಕ್ಕೆ ಪರೀಕ್ಷೆ ಆರಂಭವಾಗಿ 1.30ಕ್ಕೆ ಮುಕ್ತಾಯ):

01-03-2024 ರ ಶುಕ್ರವಾರ ಕನ್ನಡ ಹಾಗೂ ಅರೇಬಿಕ್ ಪರೀಕ್ಷೆ
04-03-2024 ಸೋಮವಾರ ಗಣಿತ ಪರೀಕ್ಷೆ
05-03-2024 ರಂದು ರಾಜ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ ಪರೀಕ್ಷೆ
06-03-2024 ರಂದು ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋ ಮೊಬೈಲ್‌,ಪರೀಕ್ಷೆ
07-03-2024 ರಂದು ಇತಿಹಾಸ ಹಾಗೂ ಭೌತಶಾಸ್ತ್ರ ಪರೀಕ್ಷೆ
09-03-2024 ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ,ಗೃಹ ವಿಜ್ಞಾನ ಪರೀಕ್ಷೆ
11-03-2024 ರಂದು ತರ್ಕಶಾಸ್ತ್ರ,ವ್ಯವಹಾರ ಅಧ್ಯಯನ ಪರೀಕ್ಷೆ
13-03-2024 ರಂದು ಇಂಗ್ಲಿಷ್ ಪರೀಕ್ಷೆ
15-03-2024ರಂದು ಹಿಂದುಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನ ಶಾಸ್ತ್ರ, ಮೂಲಗಣಿತ ಪರೀಕ್ಷೆ 16-03-2024 ರಂದು ಅರ್ಥಶಾಸ್ತ್ರ ಪರೀಕ್ಷೆ
18-03-2024 ರಂದು ಭೂಗೋಳ ಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆ
20-03-2024 ರಂದು ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ ಪರೀಕ್ಷೆ
22-03-2024 ರಂದು ಹಿಂದಿ ಪರೀಕ್ಷೆ ನಡೆಯಲಿದೆ.

Categories
ಉದ್ಯೋಗ ಸುದ್ದಿ ಬೆಂಗಳೂರು ರಾಜ್ಯ

ಪ್ರತಿ ವರ್ಷ ಇನ್ನು ಉದ್ಯೋಗ ಮೇಳ!

ಪ್ರತಿ ವರ್ಷ ಇನ್ನು ಉದ್ಯೋಗ ಮೇಳ!
– ರಾಜ್ಯ, ಜಿಲ್ಲಾ ಮಟ್ಟದಲ್ಲಿ ಆಯೋಜನೆ; ಸಿಎಂ ಘೋಷಣೆ!
– ತರಬೇತಿ ಕೇಂದ್ರಗಳ ಸ್ಥಾಪನೆ ಭರವಸೆ

NAMMUR EXPRESS NEWS
ಬೆಂಗಳೂರು: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿ ಸುವ ಉದ್ದೇಶದಿಂದ ಪ್ರತಿ ವರ್ಷ ರಾಜ್ಯ ಮತ್ತು ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮೂಲಕ “ಯುವ ಸಮೃದ್ಧಿ ಸಮ್ಮೇಳನ – 2024” ಅಡಿ ಉದ್ಯೋಗ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಉದ್ಯೋಗ ಮೇಳದಲ್ಲಿ 1,10,000ಕ್ಕೂ ಅಧಿಕ ಉದ್ಯೋಗವಕಾಶಗಳಿದ್ದು, 600ಕ್ಕೂ ಅಧಿಕ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಿವೆ. ಈ ಸರ್ಕಾರದ ಅವಧಿವರೆಗೆ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯೋಗ ಮೇಳಗಳನ್ನು ನಿರಂತರವಾಗಿ ಆಯೋಜಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಪ್ರಸ್ತುತ ರಾಜ್ಯ ಮಟ್ಟದಲ್ಲಿ ಉದ್ಯೋಗ ಮೇಳವನ್ನು ವರ್ಷಕ್ಕೆ ಒಮ್ಮೆ ಆಯೋಜಿಸಲಾಗುವುದರ ಜತೆಗೆ ಜಿಲ್ಲಾ ಮಟ್ಟದಲ್ಲಿಯೂ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಕೌಶಲ್ಯ ಅಭಿವೃದ್ಧಿ ನಿಗಮವು ಪ್ರಕಟಣೆ ಮೂಲಕ ತಿಳಿಸಿದ್ದು, ಯೋಜನೆಯ ಗುರಿ ಹಾಗೂ ಕಾರ್ಯಯೋಜನೆ ಬಗ್ಗೆ ವಿವರಿಸಿದೆ. 8ನೇ ತರಗತಿಯಿಂದ 12ನೇ ತರಗತಿಯವರೆಗಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ನಡೆಸುವ ಬಗ್ಗೆಯೂ ತಿಳಿಸಲಾಗಿದೆ. ಇ – ಕೌಶಲ್ಯ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಎಲ್.ಎಂ.ಎಸ್) ಭವಿಷ್ಯದ ಕೌಶಲ್ಯಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ 30ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಕಲಿಯಲು ಕೌಶಲ್ಯ ಆಕಾಂಕ್ಷಿಗಳಿಗೆ ಆನ್‌ಲೈನ್ ವೇದಿಕೆಯನ್ನು ಒದಗಿಸಲಾಗಿದೆ ಎಂದು ಹೇಳಿಕೊಂಡಿದೆ.

ಯುವಜನತೆ ಉದ್ಯೋಗಕ್ಕಾಗಿ ಏನೆಲ್ಲ ಕ್ರಮ?

*ಕರ್ನಾಟಕದಲ್ಲಿ ಅಂದಾಜು ಪ್ರತಿ ವರ್ಷ ಪಿ.ಯು.ಸಿ.ಯಲ್ಲಿ 932450, ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 62437, ಪಾಲಿಟೆಕ್ನಿಕ್‌ನಲ್ಲಿ 48153, ಪದವಿಯಲ್ಲಿ 480000 ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದಾರೆ.

*ಇವರಲ್ಲಿ ನಿರುದ್ಯೋಗದ ಶೇಕಡಾವಾರು ದರ ಪಿರಿಯೋಡಿಕ್ ಲೇಬರ್ ಫೋರ್ಸ್‌ ಸರ್ವೆ ಪ್ರಕಾರ ಶೇ. 2.4 ಇದೆ.

* ರಾಜ್ಯದಲ್ಲಿನ ನಿರುದ್ಯೋಗಿ ಯುವಜನತೆಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸಿಕೊಡುವ ಮುಖೇನ ಇಂದಿನ ಯುವಜನತೆಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡುವುದರೊಂದಿಗೆ ಕೌಶಲ್ಯಯುತ ಮಾನವ ಸಂಪನ್ಮೂಲನವನ್ನು ಒದಗಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

* ರಾಜ್ಯದ ಯುವ ಜನತೆಗೆ ಉಚಿತ ಅಲ್ಪಾವಧಿ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯಮಶೀಲತೆಯ ನೆರವು ಹಾಗೂ ಜೀವನೋಪಾಯಕ್ಕೆ ಅಡಿಪಾಯವನ್ನು ರೂಪಿಸಿ ಮೌಲ್ಯಯುತ ಮಾನವ ಸಂಪನ್ಮೂಲನವನ್ನು ಒದಗಿಸುವ ಗುರಿ ಹೊಂದಲಾಗಿದೆ.

*ಈ ಉದ್ಯೋಗ ಮೇಳದಲ್ಲಿ 1,10,000ಕ್ಕೂ ಅಧಿಕ ಉದ್ಯೋಗವಕಾಶಗಳು ಇದ್ದು, 600ಕ್ಕೂ ಅಧಿಕ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಿವೆ

*ಈ ಸರ್ಕಾರದ ಅವಧಿವರೆಗೆ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯೋಗ ಮೇಳಗಳನ್ನು ನಿರಂತರವಾಗಿ ಆಯೋಜಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

*ಪ್ರಸ್ತುತ ರಾಜ್ಯ ಮಟ್ಟದ ಉದ್ಯೋಗ ಮೇಳವನ್ನು ವರ್ಷಕ್ಕೆ ಒಮ್ಮೆ ಆಯೋಜಿಸಲಾಗುವುದು. ಜತೆಗೆ ಜಿಲ್ಲಾ ಮಟ್ಟದಲ್ಲಿಯೂ ಆಯೋಜಿಸಲು ತೀರ್ಮಾನಿಸಲಾಗಿದೆ.

*ಈ ಬಜೆಟ್‌ನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಯುವನಿಧಿಗೆ ನೋಂದಣಿಯಾದ ಅಭ್ಯರ್ಥಿಗಳಲ್ಲಿ ಕನಿಷ್ಠ 25,000 ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗಾವಕಾಶ ಕಲ್ಪಿಸಲು ಘೋಷಣೆ ಮಾಡಲಾಗಿದೆ.

*ಅದರಂತೆ ಪ್ರತಿಷ್ಠಿತ ಕೈಗಾರಿಕಾ ಸಂಸ್ಥೆಗಳ ಮೂಲಕ ಕೌಶಲ್ಯಾಧಾರಿತ ತರಬೇತಿಯನ್ನು ನೀಡಿ ಉದ್ಯೋಗಾವಕಾಶವನ್ನು ಕಲ್ಪಿಸಲಾಗುವುದು. ಕಲಿಕೆ ಜತೆಗೆ ಕೌಶಲ್ಯ ಕಾರ್ಯಕ್ರಮ ಅನುಷ್ಠಾನಗೊಳಿಸಲು ಘೋಷಿಸಲಾಗಿದೆ.

*ರಾಜ್ಯದ ಆಯ್ದ 62 ಕಾಲೇಜುಗಳಲ್ಲಿನ ಬಿ.ಎ/ ಬಿ.ಕಾಂ/ ಬಿ.ಬಿ.ಎ/ ಬಿ.ಎಸ್.ಸಿ/ ಪದವಿಯ 5 & 6 ನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ 28 ವಿವಿಧ ಕೈಗಾರಿಕಾ ಬೇಡಿಕೆ ಆಧಾರಿತ ಅಲ್ಪಾವಧಿ ತರಬೇತಿ ನೀಡಲಾಗುವುದು.

*ನೇರವಾಗಿ ಕೈಗಾರಿಕೆ/ ಉದ್ಯಮಗಳ ಪ್ರಮಾಣಪತ್ರವನ್ನು ನೀಡುವ ಮುಖೇನ ಉದ್ಯೋಗಾವಕಾಶವನ್ನು ಕಲ್ಪಿಸಲು 102 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 150 ಉನ್ನತೀಕರಿಸಿದ ಸರ್ಕಾರಿ ಐಟಿಐ, 32 ಜಿಟಿಟಿಸಿ ಮತ್ತು 8 ಕೆಜಿಟಿಟಿಐಗಳ ಮೂಲಕ ತರಬೇತಿ ನೀಡಲು ಕ್ರಮ

*ಕರ್ನಾಟಕ ಕರಿಯರ್ ಪ್ಲಾನಿಂಗ್ ಕಾರ್ಯಕ್ರಮದಡಿ “ನನ್ನ ವೃತ್ತಿ, ನನ್ನ ಆಯ್ಕೆ” ಎಂಬ ಧೇಯವಾಕ್ಯದೊಂದಿಗೆ 8 ನೇತರಗತಿಯಿಂದ 12 ನೇ ತರಗತಿಯವರೆಗಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಘೋಷಿಸಲಾಗಿದೆ. ಇದು 150 ಎನ್.ಎಸ್.ಕ್ಯೂ.ಎಫ್ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳುತ್ತಿದೆ.

*ಇ ಕೌಶಲ್ಯ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಎಲ್.ಎಂ.ಎಸ್) ಭವಿಷ್ಯದ ಕೌಶಲ್ಯಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ 30ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಕಲಿಯಲು ಕೌಶಲ್ಯ ಆಕಾಂಕ್ಷಿಗಳಿಗೆ ಆನ್‌ಲೈನ್ ವೇದಿಕೆಯನ್ನು ಒದಗಿಸಲಾಗಿದೆ.

Categories
ಬೆಂಗಳೂರು

ರಾಜ್ಯದಲ್ಲಿ ಹೆಚ್ಚಿದ ಮಂಗನ ಕಾಯಿಲೆ ಆತಂಕ.!

ರಾಜ್ಯದಲ್ಲಿ ಹೆಚ್ಚಿದ ಮಂಗನ ಕಾಯಿಲೆ ಆತಂಕ.!
– ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್ ಘೋಷಣೆ!
– ಮಂಗನ ಕಾಯಿಲೆಗೆ ಶಿವಮೊಗ್ಗದಲ್ಲಿ ಸಿದ್ದಾಪುರದ ಮಹಿಳೆ ಸಾವು
– ಮುನ್ನೆಚ್ಚರಿಕೆ ಕ್ರಮ ಅಗತ್ಯ..!

NAMMUR EXPRESS NEWS
ಬೆಂಗಳೂರು: ಶಿವಮೊಗ್ಗ ಜಿಲ್ಲೆಯಲ್ಲಿ ಆರಂಭವಾದ ಮಂಗನ ಕಾಯಿಲೆ ಇದೀಗ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹಬ್ಬುತ್ತಿದ್ದು, ಆತಂಕ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಮಂಗ ಕಾಯಿಲೆ ದೃಢವಾಗಿದ್ದು ರಾಜ್ಯದ ಜನತೆಗೆ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ಮುನ್ನೆಚ್ಚರಿಕ ಕ್ರಮ ಅಗತ್ಯ : ಮಂಗನ ಕಾಯಿಲೆ (ಕೆಎಫ್ಟಿ)ಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಿವಿಧೆಡೆ ಆರೋಗ್ಯ ಇಲಾಖೆಯ ಸಿಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಮಂಗಗಳು ಸತ್ತಿರುವುದು ಕಂಡುಬಂದರೆ ಕೂಡಲೇ ಸ್ಥಳಿಯಾಡಳಿತ ಅಥವಾ ಆರೋಗ್ಯ ಇಲಾಖೆಯ ಗಮನಕ್ಕೆ ತಂದರೆ ಉತ್ತಮ. ಮಂಗನ ಕಾಯಿಲೆಗೆ ಶಿವಮೊಗ್ಗದಲ್ಲಿ ಸಿದ್ದಾಪುರ ತಾಲ್ಲೂಕಿನ ಮಹಿಳೆ ಸಾವು.!: ಕೆಎಫ್‌ಡಿ ಪಾಸಿಟಿವ್‌ ಹೊಂದಿದ್ದ ನಾಗಮ್ಮ ಸುಬ್ಬ ಮಡಿವಾಳ, ವಯಸ್ಸು 57 ವರ್ಷ, ಜಿಡ್ಡಿ ಉಪಕೇಂದ್ರ ಕೋರ್ಲಕೈ ಸಿದ್ದಾಪುರ ತಾಲ್ಲೂಕು ಇವರು ಫೆ.25 ರ ರಾತ್ರಿ 8.20 ಕ್ಕೆ ಮರಣ ಹೊಂದಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏನಿದೆ ಪ್ರಕಟಣೆಯಲ್ಲಿ?:

ಜ.28 ರಂದು ಆಶಾ ಕಾರ್ಯಕರ್ತೆ ಮನೆ ಭೇಟಿ ಸಂದರ್ಭದಲ್ಲಿ ನಾಗಮ್ಮ ಇವರಿಗೆ ಕೆಮ್ಮು ಮತ್ತು ಜ್ವರ ಇರುವುದು ಗೊತ್ತಾಗಿ ಕಫ ಪರೀಕ್ಷೆಗೆ ನೀಡಲು ಹಾಗೂ ಆಸ್ಪತ್ರೆಗೆ ಹೋಗಲು ತಿಳಿಸಲಾಗಿದ್ದು ರೋಗಿಯು ತಾನು ಆರಮಾಗಿ ಇರುವುದಾಗಿ ಹೇಳಿರುತ್ತಾರೆ. ತದನಂತರ ರೋಗಿಯು ಜ.29 ರಂದು ಸಾಗರದ ಭಾಗವತ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿರುತ್ತಾರೆ. ಜ.30 ರಂದು ಮನೆ ಭೇಟಿ ಸಮಯದಲ್ಲಿ ಜ್ವರ ಅವರಿಗೆ ಜ್ವರ ಇರುವ ಕಾರಣ ಸಮುದಾಯ ಆರೋಗ್ಯಾಧಿಕಾರಿಗಳು ರಕ್ತದ ಮಾದರಿಯನ್ನು ತೆಗೆದುಕೊಂಡು ಪರೀಕ್ಷೆ ನಡೆಸಿ, ಫೆ.1 ರಂದು ಕೆಎಫ್‌ಡಿ ಆಕ್ಟಿಪಿಸಿಆ‌ರ್ ಪಾಸಿಟಿವ್ ಎಂದು ವಿಡಿಎಲ್ ಶಿವಮೊಗ್ಗದಿಂದ ವರದಿ ಬಂದಿರುತ್ತದೆ. ಫೆ.2 ರಂದು ರೋಗಿಯನ್ನು ಸಿದ್ದಾಪುರ ತಾಲ್ಲೂಕಾಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚೇತರಿಕೆಯಾಗದ ಕಾರಣ ಅವರನ್ನು ಫೆ.3 ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರೆಫರ್ ಮಾಡಿರುತ್ತಾರೆ.

ಅಲ್ಲಿಯೂ ಚೇತರಿಕೆ ಆಗದ ಕಾರಣ ಕೆಎಂಸಿ ಮಣಿಪಾಲಕ್ಕೆ ಫೆ.04 ರಂದು ರೆಫರ್ ಮಾಡಿದ್ದು ಅದೇ ದಿನ ಹೋಗಿ ಕೆಎಂಸಿ ಮಣಿಪಾಲಕ್ಕೆ ದಾಖಲಾಗಿರುತ್ತಾರೆ. ಐಸಿಯು ನಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಫೆ.5 ರಂದು ಮರು ರಕ್ತ ಪರೀಕ್ಷೆ ಮಾಡಲಾಗಿ ಫೆ.06 ರಂದು ಕೆಎಫ್‌ಡಿ ಪಾಸಿಟಿವ್ ವರದಿ ಬಂದಿರುತ್ತದೆ. ಫೆ.24 ರಂದು ವೈದ್ಯರ ಸಲಹೆ ವಿರುದ್ದವಾಗಿ ಕೆಎಂಸಿ ಆಸ್ಪತ್ರೆಯಿಂದ ಮಧ್ಯಾಹ್ನ 3.30 ಕ್ಕೆ ಬಿಡುಗಡೆ ಹೊಂದಿರುತ್ತಾರೆ. ಆರೋಗ್ಯ ಇಲಾಖೆಯವರು ಮನವೊಲಿಸಿ ಫೆ.24 ರಂದು ಸಂಜೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಐಸಿಯು ನಲ್ಲಿ ಚಿಕಿತ್ಸೆ ನೀಡಿರುತ್ತಾರೆ. ಆದರೆ ಅವರು ಫೆ.25 ರ ರಾತ್ರಿ 8.20 ಕ್ಕೆ ಮರಣ ಹೊಂದಿರುತ್ತಾರೆಂದು ಡಿಹೆಚ್‌ಓ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.

Categories
ಕರಾವಳಿ ಕಾರ್ಕಳ ಬೆಂಗಳೂರು

ರಾಷ್ಟ್ರಗೀತೆ ಹಾಡಿ ಸಾಧನೆ ಮಾಡಿದ ಕಾರ್ಕಳದ ಹುಡುಗಿ!

ರಾಷ್ಟ್ರಗೀತೆ ಹಾಡಿ ಸಾಧನೆ ಮಾಡಿದ ಕಾರ್ಕಳದ ಹುಡುಗಿ!
– ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ!
– ಒಂದು ಗಂಟೆಯಲ್ಲಿ 81ಬಾರಿ ರಾಷ್ಟ್ರಗೀತೆ!

NAMMUR EXPRESS NEWS
ಬೆಂಗಳೂರು: ಗ್ರೀಷ್ಮ ರೈ ಎಂಬುವವರು ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದು, ಈಕೆ 1 ಗಂಟೆಯಲ್ಲಿ 81 ಬಾರಿ ನಿರಂತರ ರಾಷ್ಟ್ರಗೀತೆ ಹಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆಯನ್ನು ಮಾಡಿರುತ್ತಾರೆ. 9ನೇ ತರಗತಿ ವಿದ್ಯಾರ್ಥಿನಿಯಾಗಿರುವ ಇವರು ಶಾಸ್ತ್ರೀಯ ಸಂಗೀತವನ್ನು ವಿದುಷಿ ಪಾರ್ವತಿ ಭಟ್ ಮತ್ತು ಸುಗಮ ಸಂಗೀತವನ್ನು ಪುತ್ತೂರು ಗಾನಸಿರಿ ಕಲಾಕೇಂದ್ರದ ಡಾ. ಕಿರಣ್ ಕುಮಾರ್ ಮತ್ತು ಶ್ರೀ ಲಕ್ಷ್ಮೀ ಎಸ್ ಪುತ್ತೂರು ಇವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಇವರು ಬೆಳಂದೂರು ಗ್ರಾಮದ ಕಾರ್ಕಳ ನಿವಾಸಿ ಹರೀಶ್ ರೈ ಮತ್ತು ಶಂಕರಿ ರೈ ದಂಪತಿಯ ಪುತ್ರಿ. ಇವರ ಸಾಧನೆ ಎಲ್ಲರಿಗೂ ಸ್ಪೂರ್ತಿ ನೀಡಿದೆ.

Categories
ರಾಜ್ಯ

ಸರ್ಕಾರಿ ಜಾಗದಲ್ಲಿ ಕಟ್ಟಿದ ಅನಧಿಕೃತ ಮನೆಗಳು ಸಕ್ರಮ?

ಸರ್ಕಾರಿ ಜಾಗದಲ್ಲಿ ಕಟ್ಟಿದ ಅನಧಿಕೃತ ಮನೆಗಳು ಸಕ್ರಮ?
– ಕಂದಾಯ ಸಚಿವರ ಮಹತ್ವದ ಮಾಹಿತಿ
– ರೈತರಿಗೆ ಬಗ‌ರ್ ಹುಕುಂ ಜಮೀನು ಹಕ್ಕುಪತ್ರ
– ಯಾವೆಲ್ಲ ಮನೆಗಳು ಸಕ್ರಮವಾಗಲಿವೆ? ಇಲ್ಲಿದೆ ಮಾಹಿತಿ

NAMMUR EXPRESS NEWS
ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಸರಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಮನೆಗಳ ಸಕ್ರಮಕ್ಕೆ ಸರಕಾರ ಅರ್ಜಿ ಆಹ್ವಾನಿಸಿದ್ದು, ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳ ಮನೆಗಳು ಸಕ್ರಮವಾಗಲಿವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಕಳೆದ ಫೆಬ್ರವರಿ 19ರಂದು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ರೈತರಿಗೆ ಬಗ‌ರ್ ಹುಕುಂ ಜಮೀನು ಹಕ್ಕುಪತ್ರ: ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕೃಷಿ ಮಾಡಿಕೊಂಡಿರುವ ಅರ್ಹ ರೈತರ ಬಗರ್ ಹುಕುಂ ಜಮೀನು ಹಾಗೂ ಸರಕಾರಿ ಜಾಗದಲ್ಲಿ ಕಟ್ಟಿಕೊಂಡಿರುವ ಅರ್ಹ ಫಲಾನುಭವಿಗಳ ಮನೆ ಸಕ್ರಮೀಕರಣ ಕೋರಿ ರಾಜ್ಯಾದ್ಯಂತ ಲಕ್ಷಾಂತರ ಅರ್ಜಿಗಳು ಸಲ್ಲಿಕೆಯಾಗಿವೆ.

1991ರಿಂದ 2023ರ ಏಪ್ರಿಲ್ ವರೆಗೂ ನಮೂನೆ 50, 53 ಹಾಗೂ 57ರ ಅಡಿಯಲ್ಲಿ ಬಗರ್ ಹುಕುಂ ಅರ್ಜಿ ಸಲ್ಲಿಕೆಯಾಗಿವೆ.
ಬಗ‌ರ್ ಹುಕುಂ ಜಮೀನು ಸಕ್ರಮೀಕರಣ ಕೋರಿ ಈತನಕ ಒಟ್ಟು 9,56,512 ಅರ್ಜಿ ಸಲ್ಲಿಕೆಯಾಗಿದ್ದು; 54 ಲಕ್ಷ ಎಕರೆ ಭೂಮಿ ಮಂಜೂರಾತಿಗೆ ಕೋರಿಕೆ ಸಲ್ಲಿಕೆಯಾಗಿವೆ. ಹೀಗೆ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಡಿಜಿಟಲ್ ಹಕ್ಕುಪತ್ರ ಸಿಗಲಿದೆ ಎಂದು ಕಂದಾಯ ಸಚಿವರು ಹೇಳಿದ್ದಾರೆ.

ಅನಧಿಕೃತ ಮನೆಗಳು ಸಕ್ರಮ: ಇನ್ನು ಸರಕಾರದ ನಿಯಮಾವಳಿಯಂತೆ 2015ರ ಜನವರಿ 1ಕ್ಕಿಂತಲೂ ಮೊದಲು ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡು ವಾಸವಿರುವ ಅರ್ಹ ಫಲಾನುಭವಿಗಳು ತಾಲ್ಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅನಧಿಕೃತ ವಾಸದ ಮನೆಗಳ ಸಕ್ರಮಕ್ಕೆ ಕರ್ನಾಟಕ ಭೂಕಂದಾಯ ಕಾಯಿದೆಯ 1964ರ ಕಲಂ 94ಸಿ, 94ಸಿಸಿ ಅಡಿ ಅರ್ಜಿ ಸ್ವೀಕೃತಿಗೆ ಈವರೆಗೆ 4-5 ಬಾರಿ ಅವಧಿ ವಿಸ್ತರಿಸಲಾಗಿದೆ.

ವಿಧಾನಸಭೆಯಲ್ಲಿ ಬಿಜೆಪಿಯ ಯಶ್‌ಪಾಲ್‌ ಸುವರ್ಣ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು ‘2016ರಲ್ಲಿ ಮೊದಲ ಬಾರಿಗೆ 94ಸಿ, 94ಸಿಸಿ ಅಡಿ ಅರ್ಜಿ ಸ್ವೀಕೃತಿ ಶುರುವಾಯಿತು. ನಂತರ 2018, 2019, 2021 ಹಾಗೂ ಕೊನೆಗೆ 2022ರ ಮಾರ್ಚ್ 31ರ ವರೆಗೆ ಗಡುವು ವಿಸ್ತರಿಸಲಾಗಿದೆ. ಒಟ್ಟು 5 ಬಾರಿ ಅರ್ಜಿ ಸ್ವೀಕೃತಿಗೆ ಅವಧಿ ವಿಸ್ತರಣೆಯಾಗಿದೆ ಎಂದು ತಿಳಿಸಿದ್ದಾರೆ.

ಮನೆ ಸಕ್ರಮಕ್ಕೆ ಮಂಜೂರಾದ ಅರ್ಜಿಗಳೆಷ್ಟು?:

ಕಂದಾಯ ಸಚಿವರು ವಿಧಾಸಭೆಯಲ್ಲಿ ನೀಡಿದ ಮಾಹಿತಿ ಪ್ರಕಾರ 94ಸಿ ಅಡಿ 6.26 ಲಕ್ಷ ಅರ್ಜಿ ಸ್ವೀಕೃತವಾಗಿವೆ. ಈ ಪೈಕಿ 1.63 ಲಕ್ಷ ಅರ್ಜಿ ಮಂಜೂರಾಗಿದ್ದು; 4.12 ಲಕ್ಷ ಅರ್ಜಿಗಳು ತಿರಸ್ಕೃತಗೊಂಡಿವೆ. ಇನ್ನು 94ಸಿಸಿ ಅಡಿ 2.12 ಲಕ್ಷ ಅರ್ಜಿಗಳು ಸ್ವೀಕೃತಿಯಾಗಿವೆ. ಅದರಲ್ಲಿ 69,236 ಅರ್ಜಿ ಮಂಜೂರಾಗಿದ್ದರೆ, 1.28 ಲಕ್ಷ ಅರ್ಜಿಗಳು ಅನರ್ಹಗೊಂಡಿದೆ.
94ಸಿ ಹಾಗೂ 94ಸಿಸಿ ಅಡಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ತಿರಸ್ಕೃತವಾಗಿರುವ ಬಹುತೇಕ ಅರ್ಜಿಗಳು ಬಡವರ ಹೆಸರಿನಲ್ಲಿ ಸಲ್ಲಿಕೆಯಾದ ಅನರ್ಹರ ಅರ್ಜಿಗಳಾಗಿವೆ. ಇಂತಹ ಅನರ್ಹರೇ ಸಾಕಷ್ಟು ಅರ್ಜಿ ಸಲ್ಲಿಸುತ್ತಿದ್ದು; ಅರ್ಜಿ ಸಲ್ಲಿಕೆ ಅವಧಿಯನ್ನು ಮತ್ತೆ ವಿಸ್ತರಣೆ ಮಾಡುವುದು ಕಷ್ಟಕರ ಎಂದು ಕಂದಾಯ ಸಚಿವರು ಮಾಹಿತಿ ನೀಡಿದ್ದಾರೆ.

ಯಾವೆಲ್ಲ ಮನೆಗಳು ಸಕ್ರಮವಾಗಲಿವೆ?: ಸರಕಾರದ ನಿಯಮಾವಳಿ ಪ್ರಕಾರ 2015ರ ಜನವರಿ 1ಕ್ಕಿಂತಲೂ ಮೊದಲು ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡು ವಾಸವಿರುವ ಅರ್ಹ ಫಲಾನುಭವಿಗಳ ಮನೆಗಳು ಸಕ್ರಮಗೊಳ್ಳಲಿವೆ. ಈ ಫಲಾನುಭವಿಗಳು ಈಗಾಗಲೇ ಕರ್ನಾಟಕ ಭೂಕಂದಾಯ ಕಾಯಿದೆಯ 1964ರ ಕಲಂ 94ಸಿ, 94ಸಿಸಿ ಅಡಿ ಅರ್ಜಿ ಸಲ್ಲಿಸಿದ್ದು; ಆ ಅರ್ಜಿ ಸ್ವೀಕೃತವಾಗಿದ್ದರೆ, ಅಂತಹ ಫಲಾನುಭವಿಗಳ ಮನೆಗಳು ಸಕ್ರಮಗೊಳ್ಳುವ ಸಾಧ್ಯತೆ ಹೆಚ್ಚಿದೆ.

Categories
ಬೆಳಗಾವಿ

ಇಲ್ಲೊಂದು ಅಪರೂಪದ ಮದುವೆ!

ಇಲ್ಲೊಂದು ಅಪರೂಪದ ಮದುವೆ!
– ಕನ್ನಡ ಡಿಂಡಿಮ ಬಾರಿಸಿ ಸಪ್ತಪದಿ ತುಳಿದ ಜೋಡಿ!
– ಬೆಳಗಾವಿಯಲ್ಲಿ ಕನ್ನಡ ಧ್ವಜ, ಪೇಟ, ಫಲಕದ ರಂಗು!

NAMMUR EXPRESS NEWS
ಬೆಳಗಾವಿ: ಬೆಳಗಾವಿಯಲ್ಲಿ ನವಜೋಡಿಯೊಂದು ಕನ್ನಡ ಸಂಭ್ರಮದಲ್ಲೇ ವಿವಾಹ ಮಾಡಿ ಕೊಳ್ಳುವ ಮೂಲಕ ಗಮನ ಸೆಳೆದಿದೆ. ರಾಮತೀರ್ಥ ನಗರದಲ್ಲಿರುವ ಎಚ್.ಕೆ. ಪಾಟೀಲ ಕಲ್ಯಾಣ ಮಂಟಪದಲ್ಲಿ ನಡೆದ ವಿವಾಹ ಕಾರ್ಯಕ್ರಮ ಸಂಪೂರ್ಣವಾಗಿ ಕನ್ನಡ ಮಯವಾಗಿತ್ತು. ದೀಪಕ ಮುಂಗರವಾಡಿ ಮತ್ತು ರಾಜೇಶ್ವರಿ ವಾಂಗಿ ಹಸೆಮಣೆಗೇರಿದವರು. ವಧು ವರರ ಕೈಯಲ್ಲಿ ಕನ್ನಡಿಗ, ಕನ್ನಡತಿ ಎಂಬ ಚಿನ್ನದ ಉಂಗುರ ಬದಲಾಯಿಸಿಕೊಂಡರು. ಕನ್ನಡ ಧ್ವಜ, ಕನ್ನಡ ಪೇಟ, ಕನ್ನಡದ ನಾಮಫಲಕಗಳನ್ನು ಹಾಕಿ ನವ ಜೋಡಿ ಸಪ್ತಪದಿ ತುಳಿದರು.

ಕಲ್ಯಾಣ ಮಂಟಪದ ತುಂಬೆಲ್ಲ ಕನ್ನಡದ ಬಾವುಟಗಳು, ಇಮ್ಮಡಿ ಪುಲಿಕೇಶಿ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮೂರ್ತಿ, ವಿಶ್ವಗುರು ಬಸವಣ್ಣ, ಪುಟ್ಟರಾಜ ಗವಾಯಿ, ಪೂರ್ಣಚಂದ್ರ ತೇಜಸ್ವಿ ಅವರ ಭಾವ ಚಿತ್ರಗಳು ಇಲ್ಲಿ ರಾರಾಜಿಸಿದವು. ಎಲ್ಲೆಲ್ಲೂ ಕನ್ನಡ ಬಾವುಟಗಳು, ಹಳದಿ-ಕೆಂಪು ಪೇಟಾ ತೊಟ್ಟಿದ್ದ ಯುವಕರು ಗಮನ ಸೆಳೆದರು.

Categories
ತೀರ್ಥಹಳ್ಳಿ

ಆಧಾ‌ರ್ ತಿದ್ದುಪಡಿಗೆ ಸಾರ್ವಜನಿಕರ ಪರದಾಟ.!

ಆಧಾ‌ರ್ ತಿದ್ದುಪಡಿಗೆ ಸಾರ್ವಜನಿಕರ ಪರದಾಟ.!
– ದಾಖಲೆ ನೀಡಲು ಅನಕ್ಷರಸ್ಥರ ಗೋಳಾಟ
– ದಶಕ ಕಳೆದರೂ ಗೊಂದಲ ಬಗೆಹರಿಸದ ಆಡಳಿತ

NAMMUR EXPRESS NEWS
ತೀರ್ಥಹಳ್ಳಿ: ಆಡಳಿತದ ಪ್ರತಿಯೊಂದು ಸೇವೆಗೂ ಆಧಾರ್ ಕಾರ್ಡ್ ಕಡ್ಡಾಯ. ಆಧಾರ್ ಸಂಖ್ಯೆ ಇಲ್ಲದಿದ್ದರೆ ಆಡಳಿತದಲ್ಲಿ ವ್ಯಕ್ತಿಗೆ ಬೆಲೆ ಇಲ್ಲ. ಇಂತಹ ಸ್ಥಿತಿ ಹುಟ್ಟು ಹಾಕಿರುವ ಆಡಳಿತಕ್ಕೆ ಆಧಾರ್ ಕಾರ್ಡ್ ನೋಂದಣಿಯಲ್ಲಿನ ಗೊಂದಲ ಬಗೆಹರಿಸಲು ಮಾತ್ರ ದಶಕ ಕಳೆದರೂ ಸಾಧ್ಯವಾಗಿಲ್ಲ, ಆಧಾರ್ ಕಾರ್ಡ್ ನಲ್ಲಿ ಕೆಲವೊಂದು ನಿಯಮಗಳು ಸಾರ್ವಜನಿಕರ ಪಾಲಿಗಂತೂ ಶಾಪವಾಗಿ ಕಾಡುತ್ತಿದೆ. ಸರಳ ನಿಯಮದಲ್ಲಿ ಆಧಾರ್ ನೋಂದಣಿಗೆ ಅವಕಾಶವೇ ಇಲ್ಲದಾಗಿದೆ. ತಿದ್ದುಪಡಿಗಾಗಿ ಪ್ರತಿದಿನ ಕಚೇರಿಗೆ ಅಲೆಯುವ ಶಿಕ್ಷೆಯಿಂದ ಜನರಿಗೆ ಮುಕ್ತಿ ಸಿಕ್ಕಿಲ್ಲ, ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ತಿದ್ದುಪಡಿಗೆ ಜನನ ಪ್ರಮಾಣಪತ್ರ ಇಲ್ಲವೆ ಎಸ್ ಎಸ್‌ಎಲ್‌ಸಿ ವ್ಯಾಸಂಗದ ಅಂಕಪಟ್ಟಿ ಅಥವಾ ಪಾಸ್‌ಪೋರ್ಟ್ ದಾಖಲೆ ನೀಡುವಂತೆ ಬಲವಂತ ಮಾಡಲಾಗುತ್ತಿದೆ. ವಯಸ್ಸಾದವರು, ಅನಕ್ಷರಸ್ಥರು ಆಧಾ‌ರ್ ಕಾರ್ಡ್‌ ಗಾಗಿ ಈ ದಾಖಲೆ ನೀಡಲು ಸಾಧ್ಯವೇ ಎಂಬ ಜನರ ಪ್ರಶ್ನೆಗೆ ಆಡಳಿತ ಹಲವು ರೀತಿ ಸಬೂಬು ಹೇಳುತ್ತಿದೆ.

ತಾಲೂಕು ಕಚೇರಿಯಲ್ಲಿ ತಾಂತ್ರಿಕ ಕಾರಣದ ನೆಪಒಡ್ಡಿ ಒಂದೂವರೆ ವರ್ಷದಿಂದ ಆಧಾರ್ ಕಾರ್ಡ್ ಸೇವೆ ಸ್ಥಗಿತಗೊಳಿಸಿ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, ಇತ್ತೀಚಿಗೆ ತಾಲೂಕು ಕಚೇರಿಯಲ್ಲಿ ಆಧಾರ್ ಕಾರ್ಡ್ ಸೇವೆ ಪುನಾರಂಭಿಸಲಾಗಿದೆ. ತಾಲೂಕಿನ ಬಹುತೇಕ ನಾಡಕಚೇರಿ, ಬಾಪೂಜಿ ಸೇವಾ ಕೇಂದ್ರದಲ್ಲಿ ಆಧಾರ್ ಕಾರ್ಡ್ ಸೇವೆ ಸ್ಥಗಿತವಾಗಿದೆ.

ಜನರಿಗೆ ಕಿರಿಕಿರಿ :

ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ನಂತರ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಬಿರುಸುಗೊಂಡಿದೆ. ಆದರೆ, ದೋಷಪೂರಿತ ಆಧಾರ್ ತಿದ್ದುಪಡಿಗೆ ಸೂಕ್ತ ದಾಖಲೆ ಸಲ್ಲಿಸಲು ಜನರು ಹೆಣಗಾಡುತ್ತಿದ್ದಾರೆ. ಅನಕ್ಷರಸ್ಥರಿಗೆ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಅಸಾಧ್ಯವಾಗುತ್ತಿದೆ. ಜನ್ಮದಿನಾಂಕ ಕುರಿತು ದಾಖಲೆ ಇಲ್ಲದವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ನ್ಯಾಯಾಲಯದ ಆದೇಶದಡಿ ಕಂದಾಯ ಇಲಾಖೆಯಲ್ಲಿ ಜನ್ಮದಿನಾಂಕ ನೋಂದಾಯಿಸಿ ಕೊಂಡು ಆಧಾ‌ರ್ ಕಾರ್ಡ್ ನೋಂದಣಿ, ತಿದ್ದುಪಡಿ ಮಾಡಬೇಕಿದೆ. ಈ ಪ್ರಕ್ರಿಯೆಗೆ ಜನರು ಸಾವಿರಾರು ರೂಪಾಯಿ ಹಣ ಖರ್ಚು ಮಾಡಬೇಕಿದೆ. ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಸಮಸ್ಯೆ ಪರಿಹಾರಕ್ಕೆ ಸರಕಾರ ಅಭಿಯಾನ ಹಮ್ಮಿಕೊಂಡಿಲ್ಲ. ಸ್ಥಳೀಯ ಜನರು, ಗೆಜೆಟೆಡ್ ಅಧಿಕಾರಿಗಳ ದೃಢೀಕರಣ ಪತ್ರ ಮತ್ತು ಸಿಬ್ಬಂದಿಯ ಮಹಜರ್ ವರದಿ ಪರಿಗಣಿಸುತ್ತಿಲ್ಲ.

ಸರಕಾರಕ್ಕೆ ಹಿಡಿ ಶಾಪ :

ಆಧಾರ್ ಕಾರ್ಡ್‌ನಲ್ಲಿ ಸಣ್ಣ ವ್ಯತ್ಯಾಸ ಉಂಟಾದರೂ ಸರಕಾರದ ಸಹಾಯಧನದ ಸೇವೆ ದೊರೆಯುವುದಿಲ್ಲ. ಹೀಗಾಗಿ ಆಧಾರ್ ತಿದ್ದುಪಡಿ ಆಗದ ಅನೇಕ ಅರ್ಹರು ಸರಕಾರದ ಸಹಾಯಧನ ಯೋಜನೆ ಗಳಿಂದ ವಂಚಿತರಗುತ್ತಿದ್ದಾರೆ. ಸರಕಾರದ ಸೌಲಭ್ಯಗಳಿಂದಲೇ ಜೀವನ ನಡೆಸುವಂತಹ ಅನೇಕರು ಆಧಾರ್ ಕಾರ್ಡ್ ಸರಿಯಿಲ್ಲದೆ ಪರಿತಪಿಸುತ್ತಿದ್ದಾರೆ. ಆಧಾರ್ ತಿದ್ದುಪಡಿಗೆ ಸೂಕ್ತ ಮಾರ್ಗದರ್ಶನ ಇಲ್ಲದೆ ಸರಕಾರಕ್ಕೆ ಹಿಡಿಶಾಪ ಹಾಕುತ್ತ ಕೊರಗುವ ಸ್ಥಿತಿಯಲ್ಲಿ ಅನೇಕರಿದ್ದಾರೆ.