Categories
ಚಿಕ್ಕಮಗಳೂರು

ಚಿಕ್ಕಮಗಳೂರು ಪ್ರವಾಸಿ ತಾಣ ಎಲ್ಲೆಲ್ಲೂ ಪ್ಲಾಸ್ಟಿಕ್

ಚಿಕ್ಕಮಗಳೂರು ಪ್ರವಾಸಿ ತಾಣ ಎಲ್ಲೆಲ್ಲೂ ಪ್ಲಾಸ್ಟಿಕ್
– ಪ್ಲಾಸ್ಟಿಕ್ ಬಳಕೆ ಮತ್ತು ಮದ್ಯಪಾನ ಬಳಕೆ ಕಡ್ಡಾಯವಾಗಿ ನಿಷೇಧ
– ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ

NAMMUR EXPRESS NEWS
ಚಿಕ್ಕಮಗಳೂರು: ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆಲ್ಲ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್‌ ಹಾವಳಿಯೂ ಮಿತಿ ಮೀರುತ್ತಿದೆ. ಗಿರಿ ಶಿಖರ ನೋಡಲು ಬರುವ ಜನ ಪ್ಲಾಸ್ಟಿಕ್ ಬಾಟಲಿಯ ರಾಶಿ ನೋಡಬೇಕಾಗಿದೆ. ಚಿಕ್ಕಮಗಳೂರು ಜಿಲ್ಲೆಯು ಪರ್ವತ ಶ್ರೇಣಿ ಪ್ರದೇಶವಾಗಿದ್ದು, ಪಶ್ಚಿಮ ಘಟ್ಟದ ಒಂದು ಭಾಗ. ಹಲವು ನದಿಗಳ ಉಗಮ ಸ್ಥಾನ ಕೂಡ. ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮಳ್ಳಯ್ಯನಗಿರಿಯು ಪ್ರಮುಖ ಆಕರ್ಷಣೀಯ ಸ್ಥಳ. ಈ ಪರ್ವತವು ಭದ್ರ ವನ್ಯಜೀವಿ ಅಭಯಾರಣ್ಯ ಸುತ್ತುವರಿದಿದೆ. ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಚಿಕ್ಕಮಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಹಿರೇಕೊಳಲೆ ಕೆರೆ ಕೂಡ ಇದೆ. ಹಸಿರು ಶೋಲಾ ಕಾಡು, ಹುಲ್ಲುಗಾವಲು ಮತ್ತು ಹಲವು ಜೀವ ವೈವಿಧ್ಯತೆಯಿಂದ ಕೂಡಿದೆ.

`ಪ್ರವಾಸಿ ತಾಣ, ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮದ್ಯಪಾನ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ, ತಪ್ಪಿದ್ದಲ್ಲಿ ₹1000 ದಂಡ ವಿಧಿಸಲಾಗುವುದು’ ಎಂಬ ಫಲಕಗಳನ್ನು ಗಿರಿ ಶ್ರೇಣಿ ಮಾರ್ಗದಲ್ಲಿ ಅಲ್ಲಲ್ಲಿ ಅಳವಡಿಸಲಾಗಿದೆ. ಅವುಗಳ ಬಣ್ಣ ಮಾಸಿರುವ ಜತೆಗೆ ಅವುಗಳಿಗೆ ಕಿಮ್ಮತ್ತು ಇಲ್ಲವಾಗಿದೆ. ಫಲಕಗಳ ಅಡಿಯಲ್ಲೇ ಪ್ಲಾಸ್ಟಿಕ್‌ ಬಾಟಲಿಯ ರಾಶಿಯನ್ನು ಗಿರಿ ಶ್ರೇಣಿಯಲ್ಲಿ ಕಾಣಬಹುದು. ಗಿರಿ ಶ್ರೇಣಿಯ ಮಾರ್ಗದಲ್ಲಿ, ದರ್ಗಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಲೋಟ, ಬಾಟಲಿ, ತಟ್ಟೆ, ಚೀಲ, ಪೊಟ್ಟಣಗಳದ್ದೇ ಕಾರುಬಾರು. ಪ್ಲಾಸ್ಟಿಕ್ ತ್ಯಾಜ್ಯ ರಾರಾಜಿಸುತ್ತಿದೆ. ಇಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವುದು ಸವಾಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಮದ್ಯ ಸೇವಿಸಿ ಬಾಟಲಿಗಳನ್ನು ಎಸೆಯುತ್ತಾರೆ. ಕಸ ತೊಟ್ಟಿಗೂ ಹಾಕುವುದಿಲ್ಲ. ಬೆಟ್ಟಸಾಲಿನ ಸೊಬಗು ಕಣ್ಣುಂಬಿಕೊಳ್ಳಲು, ದತ್ತಪೀಠ, ದರ್ಗಾ ದರ್ಶನಕ್ಕೆ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ವಾರಾಂತ್ಯದಲ್ಲಂತೂ ಗಿರಿಮಾರ್ಗವು ಪ್ರವಾಸಿಗರ ವಾಹನಗಳಿಂದ ಗಿಜಿಗುಡುತ್ತದೆ.

ಊಟ ಉಪಹಾರಕ್ಕೆ ಪ್ಲಾಸ್ಟಿಕ್ ತಟ್ಟೆಲೋಟ ಬಳಸಿ, ಎಲ್ಲೆಂದರಲ್ಲಿ ಬಿಸಾಕಿದ್ದಾರೆ. ಕುರುಕುಲು ತಿನಿಸು ತಿಂದು ಪೊಟ್ಟಣಗಳನ್ನು ಎಸೆದಿದ್ದಾರೆ. ಗಾಳಿಗೆ ಇಡಿ ಗಿರಿಯ ತುಂಬ ಹರಡಿಕೊಳ್ಳುತ್ತಿವೆ. ಕೆಲವು ಕಡೆ ಮದ್ಯದ ಬಾಟಲಿಗಳು ಬಿದ್ದಿವೆ. ಕೆಲವು ಕಡೆ ಪ್ಲಾಸ್ಟಿಕ್ ತಿಪ್ಪೆಗಳೇ ನಿರ್ಮಾಣವಾಗಿವೆ. ಇದೊಂದು ಅಪೂರ್ವ ತಾಣ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಜೈನ ಎಲ್ಲ ಸಮುದಾಯದವರು ಇಲ್ಲಿಗೆ ಬರುತ್ತಾರೆ. ಸ್ವಚ್ಛತೆ ಕಾಪಾಡುವುದು ಆದ್ಯ ಕರ್ತವ್ಯ ಎಂಬುದನ್ನು ಪ್ರವಾಸಿಗರು ತಿಳಿದುಕೊಳ್ಳಬೇಕು. ನಿಯಮ ಪಾಲಿಸದವರ ವಿರುದ್ಧ ಸಂಬಂಧಪಟ್ಟವರು ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಪ್ರವಾಸಿಗರು ಹೇಳುತ್ತಾರೆ.

Categories
ತೀರ್ಥಹಳ್ಳಿ ಶಿಕ್ಷಣ ಶಿವಮೊಗ್ಗ

ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮ

ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮ
– ಪ್ರಥಮ ಸ್ಥಾನ ಪಡೆದ ಸಹ್ಯಾದ್ರಿ ಪ್ರೌಢಶಾಲಾ ವಿದ್ಯಾರ್ಥಿಗಳು
– ತೀರ್ಥಹಳ್ಳಿ ತಾಲ್ಲೂಕಿಗೆ ಮತ್ತು ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ

NAMMUR EXPRESS NEWS
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ವತಿಯಿಂದ ದಿನಾಂಕ 26-02- 2024ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ “ಮಕ್ಕಳ ಹಬ್ಬ- 2024” ಕಾರ್ಯಕ್ರಮದಲ್ಲಿ ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿಗಳ ಜನಪದ ನೃತ್ಯ ತಂಡ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ ಹಾಗೂ ಕುಮಾರಿ. ಪ್ರಣಮ್ಯ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ನೆರೆದ ಪ್ರೇಕ್ಷರಕರ ಪ್ರಶಂಸೆಗೆ ಪಾತ್ರರಾಗಿ ತೀರ್ಥಹಳ್ಳಿ ತಾಲ್ಲೂಕಿಗೆ, ಶಿಕ್ಷಣ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ. ಈ ಪ್ರತಿಭೆಗಳನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು,
ಬೋಧಕ ಮತ್ತು ಬೋಧಕೇತರ ವರ್ಗದವರು ಅಭಿನಂದಿಸಿ ಶುಭ ಹಾರೈಸಿರುತ್ತಾರೆ. ಜನಪದ ನೃತ್ಯ ತಂಡದಲ್ಲಿ ಅನ್ವಿ ಸಿ. ಶೇಖರ್, ಪೂರ್ವಿ, ಶ್ರೇಯಾ.ಪಿ, ರೇಣುಕ, ಹಂಸ, ಸ್ನೇಹ, ಆರ್ಯ ಮತ್ತು ಸಾಗರ್ ಭಾಗವಹಿಸಿದ್ದು, ಈ ತಂಡಕ್ಕೆ ಜನಪದ ಗೀತೆಯನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಸಂಗೀತ ಶಿಕ್ಷಕಿಯಾದ ಶ್ರೀಮತಿ ಉಷಾ ಇವರು ಹಾಡಿರುವರು.

* ಚಿತ್ರಕಲೆ ಪ್ರಥಮ ಸ್ಥಾನ – ಪ್ರಣಮ್ಯ
* ಜನಪದ ನೃತ್ಯ – ಪ್ರಥಮ ಸ್ಥಾನದೊಂದಿಗೆ ಸಹ್ಯಾದ್ರಿ ತಂಡ

Categories
ತೀರ್ಥಹಳ್ಳಿ

ಸರ್ಕಾರಿ ಆಸ್ಪತ್ರೆ ಗುತ್ತಿಗೆ ನೌಕರರಿಗೆ ಸಿಗದ ಸಂಬಳ..!

ಸರ್ಕಾರಿ ಆಸ್ಪತ್ರೆ ಗುತ್ತಿಗೆ ನೌಕರರಿಗೆ ಸಿಗದ ಸಂಬಳ..!
– ಸಾಲ ಮಾಡಿ ಬದುಕು ಸಾಗಿಸುವ ದುಸ್ಥಿತಿ
– ಆಸ್ಪತ್ರೆಯಲ್ಲಿ ಎಲ್ಲಾ ಕೆಲಸ ಇವರದ್ದೇ..ಆದ್ರೆ ಸೌಲಭ್ಯ ಇಲ್ಲ
– ಶಿಕ್ಷಣ ಸಚಿವರ ತವರಲ್ಲಿ 4 ತಿಂಗಳಿಂದ ಸಂಬಳ ಇಲ್ಲ!

NAMMUR EXPRESS NEWS
ತೀರ್ಥಹಳ್ಳಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ಗುತ್ತಿಗೆ ಸಿಬ್ಬಂದಿಗೆ 4 ತಿಂಗಳಿಂದ ಸಂಬಳ ನೀಡದೇ ನಿರ್ಲಕ್ಷಿಸಲಾಗಿದೆ. ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ದಿನನಿತ್ಯ ಆಸ್ಪತ್ರೆ ಸ್ವಚ್ಛತೆ, ವೈದ್ಯರಿಗೆ ಸಕಾಲಕ್ಕೆ ಟೀ, ಕಾಫಿ, ಬಿಸ್ಕೆಟ್, ರೋಗಿಗಳ ಬಗ್ಗೆ ಕಾಳಜಿ, ಲ್ಯಾಬೋರೋಟರಿಯಲ್ಲಿ ಉತ್ಪತ್ತಿಯಾದ ತ್ಯಾಜ್ಯ, ಆಸ್ಪತ್ರೆಯಲ್ಲಿನ ಬೆಡ್ ಸ್ವಚ್ಛವಾಗಿಡುವುದು, ನೆಲ ಒರೆಸುವುದು ಸೇರಿ ಹತ್ತು ಹಲವಾರು ಕೆಲಸಗಳಲ್ಲಿ ತೊಡಗಿಕೊಂಡವರ ಸ್ಥಿತಿ ಸಂಬಳವಿಲ್ಲದೆ ಶೋಚನೀಯವಾಗಿದೆ.

ಸಾಲ ಪಡೆಯುವ ದುಸ್ಥಿತಿ: ಈ ಕೆಲಸವನ್ನೇ ನೆಚ್ಚಿಕೊಂಡಿರುವ ನೌಕರರ ಪಾಡು ಹೇಳತೀರದಾಗಿದೆ. ಮಕ್ಕಳ ಶಾಲೆಯ ಶುಲ್ಕ, ಪೋಷಕರ ಔಷಧೋಪಚಾರ ಹಾಗೂ ತಿಂಗಳ ರೇಷನ್ ತರುವುದಕ್ಕೂ ಕಷ್ಟವಾಗಿ ಮತ್ತೂಬ್ಬರ ಬಳಿ ಕೈಯೊಡ್ಡುವ ದುಸ್ಥಿತಿ ನಿರ್ಮಾಣ ವಾಗಿದೆ. ಸಾಲ ಮಾಡಿ ಸಂಸಾರ ತೂಗಿಸಿದ್ದು, ಈಗ ಕೆಲವರು ಸಾಲ ಹಿಂದಿರುಗಿಸುವಂತೆಯೂ, ಹೊಸದಾಗಿ ಮತ್ಯಾರೂ ಸಾಲ ಕೊಡದಂತೆಯೂ ಆಗಿದ್ದು, ನಮ್ಮ ಬಗ್ಗೆ ತಲೆಕೆಡಿಸಿಕೊಳ್ಳುವವರೇ ಇಲ್ಲದಂತಾಗಿದೆ ಎಂದು ಕೆಲ ನೌಕರರು ಅಳಲು ತೋಡಿಕೊಂಡಿದ್ದಾರೆ.

ಸಂಬಳವಿಲ್ಲದೆ ಶೋಚನೀಯ ಸ್ಥಿತಿ!

ಕಳೆದ 4 ತಿಂಗಳಿನಿಂದ ವೇತನ ಸಿಗದೆ ನೌಕರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬದುಕು ಸಾಗಿಸುವುದಕ್ಕೆ ಪರದಾಡುತ್ತಿದ್ದಾರೆ.
ಜನರ ಕಷ್ಟಕ್ಕೆ ತುರ್ತಾಗಿ ಸ್ಪಂದಿಸುವ ನೌಕರರ ಸಂಬಳದ ಬಗ್ಗೆ ಸರ್ಕಾರಕ್ಕೆ ಎಷ್ಟು ಕೇಳಿದರೂ ಕೂಡ ಗಮನಹರಿಸುತ್ತಿಲ್ಲ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗನ ಕಾಯಲೆ ನೋಡಿಕೊಳ್ಳೋರು ಇವರೇ..!

ತೀರ್ಥಹಳ್ಳಿ ಸೇರಿದಂತೆ ಮಲೆನಾಡಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಂಗನ ಕಾಯಲೆ ಸೇರಿ ಎಲ್ಲಾ ಸಣ್ಣ ಪುಟ್ಟ ಕೆಲಸ ಮಾಡುವ ಸಿಬ್ಬಂದಿಗೆ ತಿಂಗಳುಗಟ್ಟಲೆ ಸಂಬಳ ಕೊಡದಿದ್ದರೆ ಕಥೆ ಏನು..? ಬದುಕು ಸಾಗಿಸುವುದು ಹೇಗೆ? ನೊಂದವರ ಬದುಕಿಗೆ ನಗು ಮೊಗದ ಸೇವೆ ಕೊಡುವುದು ಹೇಗೆ? ತಕ್ಷಣ ಅರೋಗ್ಯ ಇಲಾಖೆ, ಸರ್ಕಾರ, ಜಿಲ್ಲಾಡಳಿತ ತಕ್ಷಣ ಗಮನಿಸಲಿ.

Categories
ಶಿವಮೊಗ್ಗ

1 ವರ್ಷ ಪೂರೈಸಿದ ಶಿವಮೊಗ್ಗ ವಿಮಾನ ನಿಲ್ದಾಣ

1 ವರ್ಷ ಪೂರೈಸಿದ ಶಿವಮೊಗ್ಗ ವಿಮಾನ ನಿಲ್ದಾಣ
– ಅಲ್ಪಾವಧಿಯಲ್ಲೇ ಉತ್ತಮ ಸ್ಪಂದನೆ
– ನಾಮಕರಣ ಭಾಗ್ಯವೇ ಇಲ್ಲ!

NAMMUR EXPRESS NEWS
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನದಲ್ಲಿ ಬಂದಿಳಿದು, ವಿಮಾನ ನಿಲ್ದಾಣ ಉದ್ಘಾಟಿಸಿದ ಶಿವಮೊಗ್ಗ ಏರ್‌ಪೋರ್ಟ್ ಅಸ್ಥಿತ್ವಕ್ಕೆ ಬಂದು ಒಂದು ವರ್ಷ ಪೂರೈಸಿದೆ. ಅಂದಿನಿಂದ ನಿತ್ಯ ನೂರಾರು ಪ್ರಯಾಣಿಕರು ವಿವಿಧೆಡೆ ಹಾರಾಟ ನಡೆಸುತ್ತಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೊಂಡು ಒಂದು ವರ್ಷ ಗತಿಸಿದೆ. ಈ ಅಲ್ಪ ಅವಧಿಯಲ್ಲಿ ವಾಯುಯಾನ ಕ್ಷೇತ್ರದಲ್ಲಿ ಹಲವು ಮೈಲಿಗಲ್ಲುಗಳು ಸ್ಥಾಪನೆಗೊಂಡಿವೆ. ರಾಜ್ಯದಲ್ಲಿರುವ ಹಲವು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳು ಆರಂಭವಾದರೂ ನಿರೀಕ್ಷಿತ ಸ್ಪಂದನೆ ಇಲ್ಲ. ಒಂದೆರಡು ವಿಮಾನಗಳು ಸಂಚರಿಸಿದರೆ ಅದೇ ಹೆಚ್ಚು. ಆದರೆ, ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗ ಈ ವಿಚಾರದಲ್ಲಿ ಭಿನ್ನ ಎನಿಸಿಕೊಂಡಿದೆ. ಮಧ್ಯ ಕರ್ನಾಟಕದ ಕೈಮರದಂತಿರುವ ಇಲ್ಲಿ ವಿಮಾನಗಳ ಹಾರಾಟದ ನಿರೀಕ್ಷೆ ದಿಟವಾಗಿದೆ.

ಬರೀ ಆರು ತಿಂಗಳ ಅವಧಿಯಲ್ಲಿ(ಆ.31, 2023ರಿಂದ ಫೆ.26, 2024ರ ವರೆಗೆ) ವಿಮಾನಗಳು 288 ಸಲ ಆಗಮನ ಮತ್ತು ನಿರ್ಗಮನವಾಗಿವೆ. ಹೈದರಾಬಾದ್‌, ತಿರುಪತಿ, ಗೋವಾ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಿಂದ ಶಿವಮೊಗ್ಗಕ್ಕೆ 11,681 ಜನ, ಶಿವಮೊಗ್ಗದಿಂದ ವಿವಿಧೆಡೆ 13,401 ಜನ ಸೇರಿದಂತೆ 25 ಸಾವಿರಕ್ಕೂ ಹೆಚ್ಚು ಜನ ಪ್ರಯಾಣಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ, ಸರಾಸರಿ ಶೇ.50ಕ್ಕೂ ಅಧಿಕ ಆಸನಗಳು ಭರ್ತಿ ಆಗಿರುತ್ತಿವೆ. ತಜ್ಞರ ಪ್ರಕಾರ, ವಿಮಾನ ಹಾರಾಟ ಆರಂಭಗೊಂಡ ಇಷ್ಟು ಕಡಿಮೆ ಸಮಯದಲ್ಲಿ ಹೆಚ್ಚಿನ ಮಾರ್ಗಗಳಿಗೆ ವಿಮಾನ ಸಂಚಾರ ಲಭ್ಯವಾಗಿದ್ದಲ್ಲದೇ ಜನಸ್ಪಂದನೆಯೂ ನಿರೀಕ್ಷೆಯಷ್ಟಿದೆ. ಇದು ಉತ್ತಮ ಬೆಳವಣಿಗೆಯಾಗಿದೆ.

ನಾಮಕರಣ ಭಾಗ್ಯವೇ ಇಲ್ಲ!

ವಿಚಿತ್ರವೆಂದರೆ, ಶಿವಮೊಗ್ಗದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಗೊಂಡು ಒಂದು ವರ್ಷ ಹಾಗೂ ಲೋಹದ ಹಕ್ಕಿಗಳ ಹಾರಾಟ ಆರಂಭವಾಗಿ ಆರು ತಿಂಗಳು ಗತಿಸಿದೆ. ಆದರೆ, ಇದುವರೆಗೆ ನಾಮಕರಣ ಭಾಗ್ಯ ಪ್ರಾಪ್ತವಾಗಿಲ್ಲ. ಯಾವುದೇ ವಿಮಾನ ನಿಲ್ದಾಣಕ್ಕೆ ಹೆಸರು ಅಂತಿಮಗೊಳಿಸಬೇಕಾದರೆ, ಕೇಂದ್ರ ಸರಕಾರ ಕ್ಯಾಬಿನೆಟ್‌ನಲ್ಲಿಆ ವಿಷಯವನ್ನು ತರಬೇಕು. ಅಲ್ಲಿ ಒಪ್ಪಿಗೆ ಸಿಕ್ಕ ಬಳಿಕ ಗೆಜೆಟ್‌ ಹೊರಡಿಸಬೇಕಾಗುತ್ತದೆ. ಈಗಾಗಲೇ ರಾಜ್ಯದಿಂದ ‘ಕುವೆಂಪು’ ಅವರ ಹೆಸರಿಡುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ, ಕೇಂದ್ರದಲ್ಲಿ ಹೆಸರು ನನೆಗುದಿಗೆ ಬಿದ್ದಿದೆ. ತಾತ್ಕಾಲಿಕವಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಎಂದು ನಮೂದಿಸಿದ್ದು, ಇದಿನ್ನು ಅಂತಿಮವಾಗಿಲ್ಲ. ಹೆಸರೇ ಇಲ್ಲದ ನಿಲ್ದಾಣದಿಂದ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.

 ಶೀಘ್ರವೇ ನೈಟ್‌ಲ್ಯಾಂಡಿಂಗ್‌

ಶಿವಮೊಗ್ಗ ನಿಲ್ದಾಣದಿಂದ ವಿಮಾನಗಳ ಸಂಚಾರ ಆರಂಭವಾಗಿರುವುದರಿಂದ ನೈಟ್‌ಲ್ಯಾಂಡಿಂಗ್‌ ಸೌಲಭ್ಯ ಕಲ್ಪಿಸಲು ವಿಳಂಬವಾಗುತ್ತಿದೆ. ಶೇ.60ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇನ್ನುಳಿದ ಕೆಲಸವನ್ನು ಶೀಘ್ರವೇ ಮುಗಿಸಲಾಗುವುದು ಎನ್ನುತ್ತಾರೆ ವಿಮಾನ ನಿಲ್ದಾಣ ಅಧಿಕಾರಿಗಳು. ನೈಟ್‌ ಲ್ಯಾಂಡಿಂಗ್‌ ಕಾಮಗಾರಿ ಪೂರ್ಣಗೊಂಡ ಬಳಿಕ ದೂರ ಮಾರ್ಗದ ವಿಮಾನಗಳ ಸಂಚಾರವೂ ಆರಂಭವಾಗಲಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಹೊಸ ಸೇತುವೆಯಲ್ಲಿ ಮದ್ಯಪಾನ ಮಾಡಿ ಬೈಕ್ ಚಲಾವಣೆ.!

ತೀರ್ಥಹಳ್ಳಿಯ ಹೊಸ ಸೇತುವೆಯಲ್ಲಿ ಮದ್ಯಪಾನ ಮಾಡಿ ಬೈಕ್ ಚಲಾವಣೆ.!
– ಡಿವೈಎಸ್ಪಿ ಗಜಾನನ ವಾಮಾನ ಸುತಾರ ನೇತೃತ್ವದಲ್ಲಿ 2 ಬೈಕ್ ವಶ
– ಮೂರು ಜನರ ಮೇಲೆ ಪ್ರಕರಣ ದಾಖಲು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ತುಂಗಾ ನದಿಗೆ ರಾಷ್ಟ್ರೀಯ ಹೆದ್ದಾರಿ 169 ಕುರುವಳ್ಳಿಯಿಂದ ರಾಷ್ಟ್ರೀಯ ಹೆದ್ದಾರಿ 169 (ಎ) ಗೆ ಸಂಪರ್ಕ ಕಲ್ಪಿಸುವ ನೂತನ ಸೇತುವೆಯನ್ನು ನಿರ್ಮಿಸಲಾಗಿದೆ .ಈ ಸೇತುವೆ ನೋಡಲು ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ಮತ್ತು ವಾಯುವಿಹಾರ ಹೋಗುವವರಿಗೆ ಒಂದು ಸುಂದರ ತಾಣವಾಗಿದೆ. ಸಂಜೆ ಹೊತ್ತು ಮಹಿಳೆಯರು ,ಮಕ್ಕಳು ಕುಟುಂಬ ಸಮೇತರಾಗಿ ಈ ಸೇತುವೆಯನ್ನು ವೀಕ್ಷಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ .ಈ ವಿಚಾರವನ್ನು ದುರ್ಬಳಕೆ ಮಾಡಿಕೊಂಡ ಕೆಲವು ಪುಂಡರು ಕಾರ್ ಮತ್ತು ಬೈಕ್ ಗಳನ್ನು ವೇಗವಾಗಿ ಓಡಿಸುವುದು, ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಮಾಡುವುದು ಇತ್ಯಾದಿ ಇನ್ನಿಲ್ಲದ ರಗಳೆಗಳನ್ನು ಮಾಡುತ್ತಿದ್ದರು.

ಇದನ್ನು ಗಮನಿಸಿದ ತೀರ್ಥಹಳ್ಳಿಯ ಯುವ, ಜನಸ್ನೇಹಿ ಡಿವೈಎಸ್ಪಿ ಗಜಾನನ ವಾಮನ ಸುತಾರವರು ಕೆಲವು ದಿನಗಳ ಹಿಂದೆ ದಿಡೀರ್ ಪರಿಶೀಲನೆಗೆ ಮಾಡಿ ಕಾನೂನು ವಿರುದ್ಧ ವಾಹನ ಚಲಾವಣೆ ಮತ್ತು ಸೇತುವೆಯ ಮೇಲೆ ಕಿರಿಕಿರಿ ಉಂಟು ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲು ಮಾಡಿ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಇದೀಗ ಮತ್ತೆ ಸೇತುವೆಯ ಮೇಲೆ ಮಧ್ಯಪಾನ ಸೇವಿಸಿ ಬೈಕ್ ಚಲಾವಣೆ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಮೂರು ಜನರ ಮೇಲೆ ಪ್ರಕರಣವನ್ನು ದಾಖಲು ಮಾಡಿ ಎರಡು ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯದಿಂದ ಡಿವೈಎಸ್ಪಿ ಅವರನ್ನು ಜನರು ಅಭಿನಂದಿಸಿದ್ದಾರೆ . ಈ ರೀತಿ ತೀರ್ಥಹಳ್ಳಿಯಲ್ಲಿ ಗಾಂಜಾ ಮತ್ತು ಇತರ ಕೆಲವು ಅಕ್ರಮಗಳ ಬಗ್ಗೆ ಡಿವೈಎಸ್ಪಿ ಯವರು ತಮ್ಮ ತಂಡದೊಂದಿಗೆ ದಿಢೀರ್ ದಾಳಿ ಮತ್ತು ಪರಿಶೀಲನೆಗೆ ಮುಂದಾಗುತ್ತಿರುವುದು ಆಕ್ರಮ ದಂದೆಕೋರರಿಗೆ ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಮಾಡುವವರಿಗೆ ಎಚ್ಚರಿಕೆಯ ಸಂದೇಶವಾಗಿರುತ್ತದೆ.

Categories
ಬೆಂಗಳೂರು ರಾಜ್ಯ

ರಾಜ್ಯ ಸಭಾ ಚುಣಾವಣೆ ಫಲಿತಾಂಶ ಪ್ರಕಟ

ರಾಜ್ಯ ಸಭಾ ಚುಣಾವಣೆ ಫಲಿತಾಂಶ ಪ್ರಕಟ
– ಯಾವ ಪಕ್ಷಕ್ಕೆ ಏಷ್ಟು ಮತ?
ಇಲ್ಲಿದೆ ವಿವರ

NAMMUR EXPRESS NEWS
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿಂದು ಬೆಳಗ್ಗೆಯಿಂದ ತೀವ್ರ ಸಂಚಲನ ಸೃಷ್ಟಿಸಿದ್ದ ರಾಜ್ಯಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಅಜಯ್ ಮಕೇನ್ ಸಯ್ಯದ್ ನಾಸೀರ್ ಹುಸೇನ್ ಮತ್ತು ಜಿಸಿ ಚಂದ್ರಶೇಖರ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇತ್ತ ಬಿಜೆಪಿಯ ನಾರಾಯಣ ಬಾಂಡಗೆ ಗೆಲುವನ್ನು ಕಂಡಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ 5ನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕುಪೇಂದ್ರ ರೆಡ್ಡಿ ) ಸೋತಿದ್ದಾರೆ. ಮತದಾನ ಪ್ರಕ್ರಿಯೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಸೋಲಿನ ಸುಳಿವುನ್ನು ನೀಡಿದ್ದರು. ಅಂತಿಮವಾಗಿ ಕಾಂಗ್ರೆಸ್ನಿಂದ ಮೂವರು ಮತ್ತು ಬಿಜೆಪಿಯ ಒಬ್ಬರು ರಾಜ್ಯಸಭೆಗೆ ತೆರಳಲಿದ್ದಾರೆ. ಮತದಾನದ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಟ್ಟು 223 ಮತದಾರರಲ್ಲಿ 222 ಮತದಾರರು ತಮ್ಮ ಮತವನ್ನು ಚಲಾವಣೆ ಮಾಡಿದ್ದಾರೆ. (ಶೇ. 99.5% ಮತದಾನವಾಗಿದೆ)
ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಹೀಗಿದೆ

ಅಭ್ಯರ್ಥಿಗಳ ಹೆಸರು ಪಕ್ಷ ಪಡೆದ ಮತಗಳು

ಅಜಯ್ ಮಕೇನ್ – ಕಾಂಗ್ರೆಸ್ – 47
ಸಯ್ಯದ್ ನಾಸೀರ್ ಹುಸೇನ್ – ಕಾಂಗ್ರೆಸ್- 47
ಜಿಸಿ ಚಂದ್ರಶೇಖರ್ – ಕಾಂಗ್ರೆಸ್ – 45
ನಾರಾಯಣ ಬಾಂಡೆಗೆ – ಬಿಜೆಪಿ – 47
ಕುಪೇಂದ್ರ ರೆಡ್ಡಿ ಜೆಡಿಎಸ್ – 36
ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಗೈರು

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಂ ಹೆಬ್ಬಾರ್ ಮತದಾನಕ್ಕೆ ಗೈರಾಗುವ ಮೂಲಕ ಬಿಜೆಪಿಗೆ ಶಾಕ್ ನೀಡಿದರು. ಶಾಸಕರ ಭವನದಲ್ಲಿಯೇ ಇದ್ರೂ ಶಾಸಕರು ಮತದಾನ ಮಾಡದೇ ಗೈರಾಗಿದ್ದರು.

56 ಸ್ಥಾನಗಳಿಗೆ ನಡೆದ ಚುನಾವಣೆ :

15 ರಾಜ್ಯಗಳಿಂದ ಖಾಲಿ ಇರುವ 56 ಸ್ಥಾನಗಳಿಗೆ ಇಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆದಿದೆ. ಉತ್ತರ ಪ್ರದೇಶದಿಂದ 10 ಸ್ಥಾನಗಳು, ಮಹಾರಾಷ್ಟ್ರ ಮತ್ತು ಬಿಹಾರದಿಂದ ತಲಾ 6 ಸ್ಥಾನಗಳು, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಿಂದ ತಲಾ 5 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಉಳಿದಂತೆ ಗುಜರಾತ್ ಮತ್ತು ಕರ್ನಾಟಕದಿಂದ ತಲಾ 4 ಸ್ಥಾನಗಳು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ ಮತ್ತು ಒಡಿಶಾದಿಂದ ತಲಾ 3 ಸ್ಥಾನಗಳು ಹಾಗೇ ಉತ್ತರಾಖಂಡ, ಛತ್ತೀಸ್‌ಗಢ, ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ಒಂದು ಸ್ಥಾನಕ್ಕೆ ಚುನಾವಣೆ ನಡೆದಿದೆ ಮತದಾನ ಪ್ರಕ್ರಿಯೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಸೋಲಿನ ಸುಳಿವುನ್ನು ನೀಡಿದ್ದರು. ಅಂತಿಮವಾಗಿ ಕಾಂಗ್ರೆಸ್ನಿಂದ ಮೂವರು ಮತ್ತು ಬಿಜೆಪಿಯ ಒಬ್ಬರು ರಾಜ್ಯಸಭೆಗೆ ತೆರಳಲಿದ್ದಾರೆ.ಮತದಾನದ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಟ್ಟು 223 ಮತದಾರರಲ್ಲಿ 222 ಮತದಾರರು ತಮ್ಮ ಮತವನ್ನು ಚಲಾವಣೆ ಮಾಡಿದ್ದಾರೆ.

(ಶೇ. 99.5% ಮತದಾನವಾಗಿದೆ)ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಗೈರು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಂ ಹೆಬ್ಬಾರ್ ಮತದಾನಕ್ಕೆ ಗೈರಾಗುವ ಮೂಲಕ ಬಿಜೆಪಿಗೆ ಶಾಕ್ ನೀಡಿದರು. ಶಾಸಕರ ಭವನದಲ್ಲಿಯೇ ಇದ್ರೂ ಶಾಸಕರು ಮತದಾನ ಮಾಡದೇ ಗೈರಾಗಿದ್ದರು. 56 ಸ್ಥಾನಗಳಿಗೆ ನಡೆದ ಚುನಾವಣೆ 15 ರಾಜ್ಯಗಳಿಂದ ಖಾಲಿ ಇರುವ 56 ಸ್ಥಾನಗಳಿಗೆ ಇಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ (Voting) ನಡೆದಿದೆ. ಉತ್ತರ ಪ್ರದೇಶದಿಂದ 10 ಸ್ಥಾನಗಳು, ಮಹಾರಾಷ್ಟ್ರ ಮತ್ತು ಬಿಹಾರದಿಂದ ತಲಾ 6 ಸ್ಥಾನಗಳು, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಿಂದ ತಲಾ 5 ಸ್ಥಾನಗಳಿಗೆ ಚುನಾವಣೆ ನಡೆದಿದೆ.ಉಳಿದಂತೆ ಗುಜರಾತ್ ಮತ್ತು ಕರ್ನಾಟಕದಿಂದ ತಲಾ 4 ಸ್ಥಾನಗಳು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ ಮತ್ತು ಒಡಿಶಾದಿಂದ ತಲಾ 3 ಸ್ಥಾನಗಳು ಹಾಗೇ ಉತ್ತರಾಖಂಡ, ಛತ್ತೀಸ್‌ಗಢ, ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ಒಂದು ಸ್ಥಾನಕ್ಕೆ ಚುನಾವಣೆ ನಡೆದಿದೆ.

Categories
ಬೆಂಗಳೂರು ರಾಜ್ಯ

ಗ್ರಾಹಕರಿಗೆ ಗುಡ್ ನ್ಯೂಸ್..!

ಗ್ರಾಹಕರಿಗೆ ಗುಡ್ ನ್ಯೂಸ್..!
– ಕರ್ನಾಟಕದ ವೈರಲ್ ಸ್ಟಾ‌ರ್ ಬೆಳ್ಳುಳ್ಳಿ ದರ ಇಳಿಕೆ
– ಮಧ್ಯಪ್ರದೇಶದಿಂದ ಪೂರೈಕೆ ಹೆಚ್ಚಳ : ಸಗಟು ಬೆಲೆಯಲ್ಲಿ ಇಳಿಕೆ

NAMMUR EXPRESS NEWS
ಬೆಂಗಳೂರು: ಮಾರುಕಟ್ಟೆಯಲ್ಲಿ ಏರಿಕೆಯ ಹಾದಿ ಹಿಡಿದಿದ್ದ ಬೆಳ್ಳುಳ್ಳಿ ಬೆಲೆ ಇಳಿಕೆಯಾಗತೊಡಗಿದೆ. ಮಧ್ಯಪ್ರದೇಶದಿಂದ ಪೂರೈಕೆ ಹೆಚ್ಚಾದ ಕಾರಣ ಸಗಟು ಬೆಲೆಯಲ್ಲಿ ಇಳಿಕೆಯಾಗಿದೆ. ಕಳೆದ ವರ್ಷ ಡಿಸೆಂಬರ್ ಎರಡನೇ ವಾರದಲ್ಲಿ, ಈ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಬೆಳ್ಳುಳ್ಳಿ ಬೆಲೆ ಗಮನಾರ್ಹವಾಗಿ ಹೆಚ್ಚಾಗಿತ್ತು. ನಾಟಿ ಬೆಳ್ಳುಳ್ಳಿ ಬೆಲೆ ಕೆಜಿಗೆ 500 ರೂ.ಗೆ ತಲುಪಿತ್ತು, ಹೈಬ್ರಿಡ್‌ ಬೆಳ್ಳುಳ್ಳಿ ಬೆಲೆ ಕೆಜಿಗೆ 450 ರೂ.ವರೆಗೂ ಮಾರಾಟವಾಗಿತ್ತು. ಇದೀಗ ಬೆಲೆ ಕುಸಿದಿದ್ದು, ಯಶವಂತಪುರ ಎಪಿಎಂಸಿಯಲ್ಲಿ ಕೆಜಿಗೆ 70 ರಿಂದ 150 ರೂ.ಗೆ ಇಳಿದಿದೆ. ಉತ್ತಮ ಗುಣಮಟ್ಟದ ಬೆಳ್ಳುಳ್ಳಿಯ ಪ್ರತಿ ಕಿಲೋಗ್ರಾಂಗೆ 150 ರೂ ಬೆಲೆ ಇದೆ. ಮಾರುಕಟ್ಟೆಯಲ್ಲಿ ಕೆಜಿಗೆ 250 ರೂ. ಬೆಲೆ ಇದೆ. ಕೆಲವು ವ್ಯಾಪಾರಿಗಳು ಕೆಜಿಗೆ 300 ರೂ. ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈಗಾಗಲೇ ಕೊಯ್ದು ಮಧ್ಯಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಬಂದ ನಂತರ ಮುಂದಿನ ವಾರ ಬೆಳ್ಳುಳ್ಳಿಯ ಸಗಟು ಬೆಲೆ ಕೆಜಿಗೆ 100 ರಿಂದ 120 ರೂ.ಗೆ ಇಳಿಯಲಿದೆ.

Categories
ಬೆಂಗಳೂರು ರಾಜ್ಯ

ಯುವನಿಧಿ: ಸ್ವಯಂ ಘೋಷಣೆ ಪತ್ರ ಕಡ್ಡಾಯ

ಯುವನಿಧಿ: ಸ್ವಯಂ ಘೋಷಣೆ ಪತ್ರ ಕಡ್ಡಾಯ
– ಸೇವಾ ಸಿಂಧು ಪೋರ್ಟಲ್‌ನಲ್ಲಿ ಅವಕಾಶ
– ನಿರುದ್ಯೋಗಿಗಳಿಗೆ ಸರ್ಕಾರದ ಹಣ: ಪಡೆಯೋದು ಹೇಗೆ?

NAMMUR EXPRESS NEWS
ಕರ್ನಾಟಕ ರಾಜ್ಯದ ಮಹತ್ವಾಕಾಂಕ್ಷಿ ಯುವನಿಧಿ ಯೋಜನೆಯನ್ನು 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ, 2023ರಲ್ಲಿ ತೇರ್ಗಡೆಯಾಗಿ ಅರ್ಹತೆ ಹೊಂದಿದ ಪದವಿ ಸ್ನಾತಕೊತ್ತರ ಪದವಿ ಮತ್ತು ಡಿಪ್ಲೊಮಾಗಳ ಅಭ್ಯರ್ಥಿಗಳಿಗೆ ಈಗಾಗಲೇ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿಯಾಗಿದ್ದು, ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿನ ಪೂರೈಸಿದ ಅಭ್ಯರ್ಥಿಗಳಿಗೆ ಜನವರಿ 2024ರಿಂದ ನೇರ ನಗದು ವರ್ಗಾವಣೆ ಮಾಡಲಾಗಿದೆ. ಈ ಯೋಜನೆ ಪ್ರತಿ ತಿಂಗಳು ಪಡೆಯಬೇಕಿದ್ದರೆ ಪ್ರತಿ ಮಾಹೆಯಲ್ಲಿ ತಾನು ನಿರುದ್ಯೋಗಿ ಎಂದು, ವ್ಯಾಸಂಗ ಮುಂದುವರಿಸುತ್ತಿಲ್ಲ ಹಾಗೂ ಸ್ವಯಂ ಉದ್ಯೋಗಿಯಲ್ಲ ಎಂದು ಫೆ.29ರವರೆಗೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಸ್ವಯಂ ಘೋಷಣ ಪ್ರಮಾಣ ಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಪ್ರಯೋಜನ ಪಡೆಯುತ್ತಿರುವ ಅರ್ಹ ಅಭ್ಯರ್ಥಿಗಳು ಪ್ರತಿ ತಿಂಗಳು ಘೋಷಣೆ ಮಾಡದಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುವುದಿಲ್ಲ ಎಂದು ತಿಳಿಸಿದೆ. ಈಗಾಗಲೇ ನೋಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ಜನವರಿ 2024ರಲ್ಲಿ ನೇರ ನಗದು ವರ್ಗಾವಣೆ ಮಾಡಲಾಗಿದೆ. ಮುಂದಿನ ತಿಂಗಳು ಈ ಪ್ರಯೋಜನ ಪಡೆದುಕೊಳ್ಳಲು ಸ್ವಯಂ ಘೋಷಣೆ ಮಾಡಬೇಕಾಗಿದ್ದು, ಎಸ್.ಎಂ.ಎಸ್ ಮೂಲಕ ಅಭ್ಯರ್ಥಿಗಳಿಗೆ ಸಂದೇಶ ರವಾನಿಸಲಾಗುತ್ತದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್‌ ಸೀಡೆಡ್ ಬ್ಯಾಂಕ್ ಖಾತೆಯನ್ನು ಹೋದಿರಬೇಕು. ಅಭ್ಯರ್ಥಿಗಳು ಸ್ವಯಂ ಘೋಷಣೆ ಮಾಡಿಕೊಳ್ಳಲು hllt;// sevbsiqghugs.mbwqb|bmb.gov.iq ವೆಬ್ಸೈಟ್ ಮೂಲಕ ವೀಕ್ಷಿಸಬಹುದು.

Categories
ಬೆಂಗಳೂರು ರಾಜ್ಯ

ರೇಷನ್ ಕಾರ್ಡುದಾರರಿಗೆ ಗುಡ್ ನ್ಯೂಸ್..!

ರೇಷನ್ ಕಾರ್ಡುದಾರರಿಗೆ ಗುಡ್ ನ್ಯೂಸ್..!
– ಅನ್ನಭಾಗ್ಯ ಯೋಜನೆ ದಶಮಾನೋತ್ಸವ
– ಫೆ. 28 ರೊಳಗೆ ಪಡಿತರ ವಿತರಣೆಗೆ ಸೂಚನೆ

NAMMUR EXPRESS NEWS
ಬೆಂಗಳೂರು: ಫೆ .29 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಅನ್ನಭಾಗ್ಯ ಯೋಜನೆಯ ದಶಮಾನೋತ್ಸವ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸುವರ್ಣ ಮಹೋತ್ಸವ ಮತ್ತು ಪಡಿತರ ವಿತರಕರ ರಾಜ್ಯ ಮಟ್ಟದ ಸಮಾವೇಶ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರಿಗೆ ಫೆಬ್ರವರಿ-2024 ರ ಮಾಹೆಯ ಪಡಿತರ ವಿತರಣೆಯನ್ನು ಫೆ.28 ರೊಳಗೆ ಪೂರ್ಣಗೊಳಿಸಬೇಕು. ಫೆ.29 ರಂದು ಬಹುತೇಕ ನ್ಯಾಯಬೆಲೆ ಅಂಗಡಿಗಳ ಮಾಲಿಕರು ಹಾಗೂ ಪಡಿತರ ಫಲಾನುಭವಿಗಳು ಸಮಾವೇಶದಲ್ಲಿ ಭಾಗವಹಿಸುವ ಕಾರಣ, ಈ ತಿಂಗಳ ಕೊನೆಯ ದಿನಾಂಕದವರೆಗೆ ಕಾಯದೇ ಈವರೆಗೆ ಪಡಿತರ ಪಡೆಯದೇ ಇರುವ ಫಲಾನುಭವಿಗಳು ತಮ್ಮ ಪಾಲಿನ ಪಡಿತರವನ್ನು ಪಡೆಯಬೇಕೆಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

Categories
ಬೆಂಗಳೂರು ರಾಜ್ಯ

ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ..!

ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ..!
– ನಿಯಮ ಅನುಸರಿಸದ ವ್ಯಾಪಾರಿಗಳು!
– ಅಂಗಡಿಗಳಿಗೆ ಬಿಬಿಎಂಪಿ ನೋಟಿಸ್‌!

NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯ ನೀತಿಯ ಅನುಷ್ಠಾನ ಪ್ರಾಧಿಕಾರವಾಗಿರುವ ಬಿಬಿಎಂಪಿ ಆರೋಗ್ಯ ಇಲಾಖೆ ನಿಯಮವನ್ನು ಅನುಸರಿಸದ 50 ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳು ಮತ್ತು ಅಂಗಡಿಗಳಿಗೆ ನೋಟಿಸ್‌ ಕಳುಹಿಸಿದೆ. ಅಧಿಕಾರಿಗಳ ಪ್ರಕಾರ, ಆರೋಗ್ಯ ನಿರೀಕ್ಷಕರು ಮಾರ್ಷಲ್‌ಗಳನ್ನು ನಿಯೋಜಿಸಿ ಮತ್ತು ನಿರಂತರ ತಪಾಸಣೆಯ ಮೂಲಕ ಈ ಆದೇಶವನ್ನು 40,000ಕ್ಕೂ ಹೆಚ್ಚು ಅಂಗಡಿ ಮತ್ತು ಸಂಸ್ಥೆಗಳಲ್ಲಿ ಜಾರಿಗೊಳಿಸಲಾಗಿದೆ ಮತ್ತು 3,616 ಪ್ರಕರಣಗಳು ಬಾಕಿ ಉಳಿದಿವೆ. ಅಧಿಕಾರಿಗಳು ಫೆಬ್ರುವರಿ 28 ಅನ್ನು ನೀತಿಯ ಅನುಷ್ಠಾನಕ್ಕೆ ಕೊನೆಯ ದಿನಾಂಕವೆಂದು ನಿಗದಿಪಡಿಸಿದ್ದಾರೆ.

ವಿಫಲವಾದರೆ ಬಿಬಿಎಂಪಿಯು ವ್ಯಾಪಾರ ಪರವಾನಗಿಯನ್ನು ಅಮಾನತುಗೊಳಿಸಬಹುದು ಮತ್ತು ದಂಡವನ್ನು ವಿಧಿಸಬಹುದು. ಬಿಬಿಎಂಪಿ ಆರೋಗ್ಯ ಇಲಾಖೆಯ ಮುಖ್ಯ ಆರೋಗ್ಯಾಧಿಕಾರಿ ಸೈಯದ್ ಸಿರಾಜುದ್ದೀನ್ ಮದನಿ ಪ್ರಕಾರ, ಪಾಲಿಕೆಯು ಸುಮಾರು 50,220 ನಿಯಮ ಉಲ್ಲಂಘನೆ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು 50,216 ಪ್ರಕರಣಗಳಲ್ಲಿ ಆದೇಶದ ಅನುಷ್ಠಾನಕ್ಕೆ ನೋಟಿಸ್‌ ನೀಡಿದೆ. ಇಲ್ಲಿಯವರೆಗೆ, 46,600 ಅಂಗಡಿಗಳು ಮತ್ತು ವ್ಯಾಪಾರಿಗಳು ಕರ್ನಾಟಕ ಸರ್ಕಾರ ಮತ್ತು ಬಿಬಿಎಂಪಿ ಹೊರಡಿಸಿದ ಆದೇಶವನ್ನು ಜಾರಿಗೆ ತಂದಿದ್ದಾರೆ.

ಸೂಚನಾ ಫಲಕದಲ್ಲಿ ಶೇ 60ರಷ್ಟು ಕನ್ನಡ ಪ್ರದರ್ಶಿಸುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ವಲಯ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಇತ್ತೀಚೆಗೆ, ಫೆಬ್ರುವರಿ 28ರ ಸರ್ಕಾರದ ಗಡುವಿನ ಹೊರತಾಗಿಯೂ, ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯ ನೀತಿಯನ್ನು ಅನುಷ್ಠಾನ ಮಾಡುವಲ್ಲಿ ವಿಫಲವಾದ ಆರೋಪದ ಮೇರೆಗೆ ಕೆಆರ್ ಪುರಂನ ಹಿರಿಯ ಆರೋಗ್ಯ ನಿರೀಕ್ಷಕರನ್ನು ಅಮಾನತು ಮಾಡಲಾಗಿದೆ. ಶೇ 60ರಷ್ಟು ಕನ್ನಡ ನಿಯಮ ಜಾರಿ ಮಾಡದ ಟಿ.ಸಿ.ಪಾಳ್ಯದ ಅಂಗಡಿಗಳ ನಾಮಫಲಕಕ್ಕೆ ಹಾನಿ ಮಾಡಿದ ಆರೋಪದ ಮೇಲೆ ಹಿರಿಯ ಆರೋಗ್ಯ ನಿರೀಕ್ಷಕ ಕೆ.ಎಲ್.ವಿಶ್ವನಾಥ್‌ ಅವರನ್ನು ಬಿಬಿಎಂಪಿ ಅಮಾನತು ಮಾಡಿದೆ.