Categories
ಉಡುಪಿ ರಾಜ್ಯ

ರಾಜ್ಯದೆಲ್ಲೆಡೆ ಬಿಸಿಲಿನ ತಾಪ

ರಾಜ್ಯದೆಲ್ಲೆಡೆ ಬಿಸಿಲಿನ ತಾಪ
– ನೀರಿಗಾಗಿ ಎಲ್ಲೆಡೆ ಪರದಾಟ!
– ಉಡುಪಿ ಜಿಲ್ಲೆಯಲ್ಲೂ ಅಂತರ್ಜಲದ ಮಟ್ಟ ಕುಸಿತ!
– ಮುನ್ನೆಚ್ಚರಿಕೆ ವಹಿಸದಿದ್ದರೆ ಅಪಾಯ!

NAMMUR EXPRESS NEWS
ಉಡುಪಿ: ರಾಜ್ಯದೆಲ್ಲೆಡೆ ಬಿಸಿಲಿನ ತಾಪ ಏರುತ್ತಿದ್ದು ಕೆರೆ ಬಾವಿಗಳು ಒಣಗಿ ನಿಂತಿವೆ. ನೀರಿಗಾಗಿ ಪರದಾಟ ಶುರುವಾಗಿದೆ. ಈ ಮಧ್ಯ ಅಂತರ್ ಜಲ ಮಟ್ಟವೂ ಕುಸಿದು ನೀರಿನ ಮೂಲಗಳು ಒಣಗಿ ಹೋಗುತ್ತಿವೆ. ಬೋರ್ ನಲ್ಲಿಯೂ ನೀರು ಬಾರದೆ ನೀರಿನ ತೊಂದರೆ ಶುರುವಾಗಿದೆ. ಉಡುಪಿ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕುಸಿಯುತ್ತಿರುವುದರ ಪರಿಣಾಮವಾಗಿ ಅಂತರ್ಜಲ ಮಟ್ಟವೂ ಕಾಲಕ್ರಮೇಣ ಕುಸಿಯುತ್ತಿದೆ. ಜನವರಿ ಒಂದೇ ತಿಂಗಳ ಅವಧಿಯಲ್ಲಿ ಅಂತರ್ಜಲ 0.26 ಮೀಟರ್‌ಗಳಷ್ಟು ಕುಸಿದಿದೆ. ಪಟ್ಟಣ ಪ್ರದೇಶ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಕೆಲವರು ಟ್ಯಾಂಕ‌ರ್ ನೀರಿನ ಮೊರೆ ಹೋಗುತ್ತಿದ್ದಾರೆ. ನದಿ ನೀರಿನ ಮಟ್ಟವೂ ಕಡಿಮೆಯಾಗುತ್ತಿದೆ. ಮಳೆ ನೀರಿನ ಸದುಪಯೋಗ ಹಾಗೂ ನೀರಿನ ಮೂಲಗಳ ಸಂರಕ್ಷಣೆ ಮಾಡದಿದ್ದಲ್ಲಿ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಜಲ ತಜ್ಞರು.

ತಿಂಗಳುವಾರು ಮಾಹಿತಿ ಈ ಕೆಳಗಿನಂತೆಯಿದೆ :

2023ರ ಜನವರಿಯಲ್ಲಿ ಅಂತರ್ಜಲ ಮಟ್ಟ 7.79 ಮೀಟರ್ ಇತ್ತು. ಫೆಬ್ರವರಿಯಲ್ಲಿ 8.35 ಮೀ.ಗೆ ಇಳಿದಿತ್ತು. ಮಾರ್ಚ್‌ ನಲ್ಲಿ 9.07 ಮೀ., ಎಪ್ರಿಲ್‌ನಲ್ಲಿ 9.64 ಮೀ.. ಮೇ ತಿಂಗಳಿನಲ್ಲಿ 10.2 ಮೀ.ಗೆ ಮುಟ್ಟಿತ್ತು. ಜೂನ್‌ನಲ್ಲಿ ಬರಬೇಕಾದ ಮಳೆ ತಡವಾಯಿತು. ಜುಲೈ ತಿಂಗಳಿನಲ್ಲಿ ಮಳೆ ಬಂದದ್ದರಿಂದ 3.25 ಮೀ.ಗೆ ಏರಿಕೆಯಾಗಿತ್ತು. ಆಗಸ್ಟ್‌ನಲ್ಲಿ 4.83 ಮೀ.ಗೆ ಇಳಿದಿತ್ತು. ಸೆಪ್ಟೆಂಬರ್‌ನಲ್ಲಿ 4.93 ಮೀ.ಗೆ ಕುಸಿದಿತ್ತು. ಅಕ್ಟೋಬರ್‌ನಲ್ಲಿ 5.96 ಮೀ.ಗೆ ಇಳಿದು, ನವೆಂಬರ್‌ನಲ್ಲಿ 6.94 ಮೀ.ಗೆ ಕುಸಿದಿತ್ತು. ಡಿಸೆಂಬರ್‌ನಲ್ಲಿ 7.77 ಮೀಟ‌ರ್ ಕೆಳಗೆ ಹೋಗಿದೆ.

2024ರ ಜನವರಿಯಲ್ಲಿ 8.03 ಮೀಟ‌ಗೆರ್‌ಗೆ ಇಳಿದಿದ್ದು, ಕಳೆದ ವರ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ. ಜತೆಗೆ ಮಳೆಯೂ ಒಟ್ಟು ಶೇ. 25ರಷ್ಟು ಕಡಿಮೆಯಾಗಿತ್ತು. 2024ರ ಜನವರಿ ಅಂತ್ಯಕ್ಕೆ ಜಿಲ್ಲೆಯ ಅಂತರ್ಜಲ ಮಟ್ಟ 8.03 ಮೀ. ನಷ್ಟಿದ್ದರೆ, ಕಳೆದ ವರ್ಷ ಇದೇ. ವೇಳೆಗೆ 7.79 ಮೀ. ಇತ್ತು. ಅಂದರೆ 0.23 ಮೀ.ನಷ್ಟು ಇಳಿದಿದೆ. ಮಳೆ ಬಾರದೆ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಅಂತರ್ಜಲ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ. ಹಿಂದಿನ ಮಳೆಗಾಲದಲ್ಲೂ ಮಳೆ ಕೊರತೆ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗಿಲ್ಲ ಎನ್ನುವುದು ಆತಂಕಕ್ಕೆ ಕಾರಣ

ಎಚ್ಚರಿಕೆ ಅಗತ್ಯ:

ಉಡುಪಿ ಮತ್ತು ಬೈಂದೂರಿನ ಕೆಲವು ಪ್ರದೇಶಗಳಲ್ಲಿ ಅಂತರ್ಜಲದ ಮಟ್ಟ ಅಪಾಯದ ಹಂತ ತಲುಪಿದೆ. ಕಾರ್ಕಳ ಹಾಗೂ ಕುಂದಾಪುರದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕಾಪು, ಬ್ರಹ್ಮಾವರ ಮತ್ತು ಹೆಬ್ರಿ ಭಾಗದಲ್ಲಿ ಇಂದಿನಿಂದಲೇ ವಿಶೇಷ ಎಚ್ಚರಿಕೆ ವಹಿಸುವುದು ಉತ್ತಮ ಎನ್ನುವ ಪರಿಸ್ಥಿತಿ ಇದೆ. ಅಂತರ್ಜಲ ಮಟ್ಟದ ವೃದ್ಧಿಗಾಗಿ ಜಲಮೂಲಗಳ ರಕ್ಷಣೆ, ಕಿಂಡಿ ಅಣೆ ಕಟ್ಟುಗಳಿಗೆ ನಿರ್ದಿಷ್ಟ ಸಮಯದಲ್ಲಿ ಹಲಗೆ ಹಾಕುವುದು, ಪ್ರತೀ ಮನೆ ಯಲ್ಲೂ ಮಳೆನೀರು ಶೇಖರಣೆ, ನಿರುಪಯುಕ್ತ ತೆರೆದ ಬಾವಿ, ಬೋರ್‌ವೆಲ್‌ಗಳಿಗೆ ಜಲ ಮರುಪೂರಣ ಮಾಡುವ ಪ್ರಕ್ರಿಯೆ ನಡೆಸಬೇಕು ಎನ್ನುತ್ತಾರೆ ಅಂತರ್ಜಲ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು.

ಇಲಾಖೆಯಿಂದ ನಿರ್ದೇಶನ :

ಹೆಚ್ಚಿನ ಪ್ರಮಾಣದ ನೀರು ಬಳಕೆಯಾಗುವ ಶಾಲೆ, ಆಸ್ಪತ್ರೆ, ಸಭಾಭವನ, ಹೊಟೇಲ್‌ಗಳಿಗೆ ನೀರನ್ನು ಮಿತವಾಗಿ ಬಳಸುವಂತೆ ಜಿಲ್ಲಾ ಅಂತರ್ಜಲ ನಿರ್ದೇಶನಾಲಯದಿಂದ ಸುತ್ತೋಲೆ ನೀಡಲಾಗಿದೆ. ಎಲ್ಲಿಯೂ ನೀರು ಮಲಿನ, ಪೋಲಾಗದಂತೆ ಎಚ್ಚರ ವಹಿಸಬೇಕು. ಕೈ, ತಟ್ಟೆ ತೊಳೆದ ನೀರನ್ನು ತೋಟಕ್ಕೆ ಬಳಸುವ ಮೂಲಕ ಸದ್ಬಳಕೆ ಮಾಡಬೇಕು ಎಂದು ಸೂಚಿಸಿದೆ.  ಮಳೆ ಕೊರತೆ ಇರುವುದರಿಂದ ಅಂತರ್ಜಲ ಮಟ್ಟ ಕುಸಿದಿದೆ. ನೀರಿನ ಮೂಲಗಳ ಸಂರಕ್ಷಣೆಯ ಜತೆಗೆ ಮಳೆ ನೀರಿನ ಸದ್ಬಳಕೆಯೂ ಆಗಬೇಕು ಹಾಗೂ ಅಗತ್ಯವಾಗಿ ನೀರಿನ ಮಿತ ಬಳಕೆ ಮಾಡಬೇಕು.

Categories
ತೀರ್ಥಹಳ್ಳಿ ಮಲ್ನಾಡ್ ಹೊಸನಗರ

ಮಲೆನಾಡು ಕೋಳಿ ಸಾಕಾಣಿಕೆದಾರರ ಎರಡನೇ ವರ್ಷದ ಮಹಾಸಭೆ!

ಮಲೆನಾಡು ಕೋಳಿ ಸಾಕಾಣಿಕೆದಾರರ ಎರಡನೇ ವರ್ಷದ ಮಹಾಸಭೆ!
– ಕೋಳಿ ಸಾಕಾಣಿಕೆಯ ಬಗ್ಗೆ ಮಾಹಿತಿ ಕಾರ್ಯಗಾರ
– ಕೋಳಿ ಸಾಕಾಣಿಕೆ ಮಾಲೀಕರ ಬೇಡಿಕೆ ಸರ್ಕಾರದ ಮುಂದೆ ನೀಡಲು ಭರವಸೆ.

NAMMUR EXPRESS NEWS
ಮಲೆನಾಡು ಕೋಳಿ ಬೆಳೆಗಾರರ ಸಂಘ ಹೊಸನಗರ ತೀರ್ಥಹಳ್ಳಿ ಇದರ ಎರಡನೇ ವರ್ಷದ ವಾರ್ಷಿಕ ಮರು ಸಭೆಯನ್ನು ದಿನಾಂಕ 25.02.2024 ರಂದು ಹೊಸನಗರ ತಾಲೂಕಿನ ಮೂದುಗೊಪ್ಪ ನಗರ ಗ್ರಾಮ ಪಂಚಾಯಿತಿ ಶ್ರೀಧರಪುರ ಶ್ರೀರಾಮ ಸಭಾಭವನದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಂಕಿತ್ ಮೇಕೆರಿ, ಉದ್ಘಾಟನೆ ಶ್ರೀ ಆರಗ ಜ್ಞಾನೇಂದ್ರ ನೆರವೇರಿಸಿದರು.

ಪ್ರಾರ್ಥನೆ ಹನಿ ಮತ್ತು ಸ್ಪಂದನ ತಂಡದವರು ಮಾಡಲಾಯಿತು. ನಿರೂಪಣೆ ಮಾರುತಿ ಹೆಚ್ ಜಿ ಬೈಸೆ, ಸ್ವಾಗತವನ್ನ ಜಯರಾಮ್ ಸಂಪೆಕಟ್ಟೆ ಮಾಡಿದರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳು ಶ್ರೀ ನಂಜುಂಡಪ್ಪ ರಾಜ್ಯಾದ್ಯಕ್ಷರು ಕೋಳಿ ಸಾಕಣೆದಾರರ ಒಕ್ಕೂಟ ಕರ್ನಾಟಕ, ಶ್ರೀ ಕೆ ಬಿ ಕುಮಾರ್ ಕಾನಗೆದ್ದೆ ಗೌರವ ಅಧ್ಯಕ್ಷರು ಮಲೆನಾಡು ಕೋಳಿ ಬೆಳಗಾರರ ಸಂಘ, ದೀಪಕ್ ವ್ಯವಸ್ಥಾಪಕರು ಬೇಗಾನೆ ಕಂಪನಿ ಮ್ಯಾನೇಜರ್, ರಮೇಶ್ ಸೂಪರ್ವೈಸರ್ ಬೇಗಾನೆ ಕಂಪನಿ, ರಾಜ್ಯ ಸಂಘದ ಕಾರ್ಯದರ್ಶಿ ಚಂದ್ರಶೇಖರ್,ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಭರತ್ ಭೂಷಣ್ ಪ್ರಾಧ್ಯಾಪಕರು ಆಗಮಿಸಿ ಕೋಳಿ ಬೆಳೆಯ ಬಗ್ಗೆ ತರಬೇತಿ ನೀಡಿದರು.

ಆಗರ ಜ್ಞಾನೇಂದ್ರ ಅವರು ಮಾತನಾಡಿ ಕೋಳಿ ಫಾರಂ ಮಾಲೀಕರ ಬೇಡಿಕೆಗಳನ್ನು ಸರ್ಕಾರದ ಜೊತೆ ಮಾತುಕತೆ ಮಾಡಿ ಬಗೆಹರಿಸುವುದಾಗಿ ಭರವಸೆ ನೀಡಿದರು. ಶ್ರೀನಿವಾಸ್ ಶೆಟ್ರು ಸಂಘದ ಸ್ಥಾಪಕ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರು ಮತ್ತಿ ಮನೆ ಇವರು ಸಂಘವು ನಡೆದು ಬಂದ ಹಾದಿಯ ಬಗ್ಗೆ ವರದಿ ವಚನವನ್ನು ಮಾಡಿದರು. ಪ್ರಾಸ್ತಾವಿಕವಾಗಿ ಕೆಬಿ ಕುಮಾರ್ ಗೌರವ ಅಧ್ಯಕ್ಷರು ಮಾತನಾಡಿದರು. ವಂದನಾರ್ಪಣೆಯನ್ನ ಶಶಿಕುಮಾರ್ ಅವರು ಮಾಡಿದರು.ಈ ಕಾರ್ಯಕ್ರಮ ಎರಡು ತಾಲೂಕಿನಿಂದ ಸುಮಾರು 300ಕ್ಕೂ ಹೆಚ್ಚು ಜನ ಕೋಳಿ ಫಾರಂ ಮಾಲೀಕರು ಆಗಮಿಸಿದ್ದರು ಶ್ರೀಪತಿ ತೊಗರೆ ಇವರು ರೈತರ ಅನಿಸಿಕೆಯನ್ನ ಹೇಳಿದರು.

Categories
ಉಡುಪಿ ಕರಾವಳಿ

ಹೆಬ್ರಿಯಲ್ಲಿ ನೀರಲ್ಲಿ ಮುಳುಗಿ ವೈದ್ಯ ಸೇರಿ ಇಬ್ಬರು ಸಾವು.!

ಹೆಬ್ರಿಯಲ್ಲಿ ನೀರಲ್ಲಿ ಮುಳುಗಿ ವೈದ್ಯ ಸೇರಿ ಇಬ್ಬರು ಸಾವು.!
– ಈಜಲು ಹೋಗಿ ಓರ್ವ ನೀರುಪಾಲು: ಸ್ನೇಹಿತನ ರಕ್ಷಣೆ ಮಾಡಲು ಹೋಗಿ ಮೃತಪಟ್ಟ ವೈದ್ಯ
– ಶೃಂಗೇರಿ ವೈದ್ಯ ಸಾವು: ಏನಿದು ಘಟನೆ..?

NAMMUR EXPRESS NEWS
ಶೃಂಗೇರಿ/ಹೆಬ್ರಿ: ಹೆಬ್ರಿ ಸಮೀಪ ಸೀತಾನದಿ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿದ ವೈದ್ಯ ಸೇರಿದಂತೆ ಇಬ್ಬರು ಮುಳುಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ಸಂಭವಿಸಿದೆ. ಶಿವಮೊಗ್ಗ ಮೂಲದ, ಶೃಂಗೇರಿಯ ಧನ್ವಂತರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ದೀಪಕ್(34) ಹಾಗೂ ಶಿವಮೊಗ್ಗದ ಉದ್ಯಮಿ ಸಿನು ಡ್ಯಾನಿಯಲ್ ಮೃತರು. ಡಾ. ದೀಪಕ್, ಸಿನು ಡ್ಯಾನಿಯಲ್ ಹಾಗೂ ಡಾ. ವಿನ್ಸೆಂಟ್ ಮೋಹನ್‌ ಮೂವರು ಆಪ್ತರಾಗಿದ್ದರು.

ಭಾನುವಾರ ಒಟ್ಟಿಗೆ ಹೆಬ್ರಿಯಲ್ಲಿ ಊಟ ಮಾಡಿದ್ದಾರೆ. ಬಳಿಕ ಸೋಮೇಶ್ವರ ಕಡೆ ಹೋಗುವಾಗ ಸೀತಾನದಿಯಲ್ಲಿ ಸ್ನಾನಕ್ಕಿಳಿದಿದ್ದಾರೆ. ಸಿನು ಡ್ಯಾನಿಯಲ್ ಸ್ನಾನ ಮಾಡುತ್ತಾ ಮುಂದೆ ಹೋಗಿದ್ದು, ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಗಮನಿಸಿದ ಡಾ. ದೀಪಕ್ ನೀರಿಗೆ ಹಾರಿ ಅವರನ್ನು ರಕ್ಷಿಸಲು ಮುಂದಾಗಿದ್ದು ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ. ಡಾ. ವಿನ್ಸೆಂಟ್ ಸ್ನೇಹಿತರನ್ನು ರಕ್ಷಿಸಲು ನದಿಗೆ ಧುಮುಕಿದರೂ ಈಜು ಬಾರದ ಕಾರಣ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಅಲ್ಲಿದ್ದ ಮರದ ಬೇರೊಂದನ್ನು ಹಿಡಿದು ಮೇಲೆ ಬಂದಿದ್ದಾರೆ. ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ತೀರ್ಥಹಳ್ಳಿ

ಜಲ ಜೀವನ್ ಮಿಷನ್ ಯೋಜನೆ ಅವೈಜ್ಞಾನಿಕ ಜಾರಿ ವಿರುದ್ಧ ಜನ ಹೋರಾಟ

ಮಾಧ್ಯಮ ಪ್ರಕಟಣೆ
– ಜಲ ಜೀವನ್ ಮಿಷನ್ ಯೋಜನೆ ಅವೈಜ್ಞಾನಿಕ ಜಾರಿ ವಿರುದ್ಧ ಜನ ಹೋರಾಟ
– ಮುಳಬಾಗಿಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು
ಹಾಗೂ ಭೀಮೇಶ್ವರ ಸಂಗಮ ಉಳಿಸಿ ಸಂಘಟನೆಗಳ ಪತ್ರಿಕಾ ಹೇಳಿಕೆ

NAMMUR EXPRESS
ತೀರ್ಥಹಳ್ಳಿ:
ತೀರ್ಥಹಳ್ಳಿ ತಾಲೂಕಿನ 36 ಗ್ರಾಮ ಪಂಚಾಯಿತಿಗಳ 1617 ಜನ ವಸತಿಗಳ(ಮಜರೆ)ಹೆಸರಿನಲ್ಲಿ 344 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ಜಾರಿಯಾಗುತ್ತಿರುವ ಅವೈಜ್ಞಾನಿಕ ಯೋಜನೆ ವಿರೋಧಿ ಹೋರಾಟದ ಭಾಗವಾಗಿ 23-02-2024ರಂದು ಶಿವಮೊಗ್ಗ ಜಿಲ್ಲಾಧಿಕಾರಿಗಳು ಕರೆದ ಸಭೆಯನ್ನು ಧಿಕ್ಕರಿಸಲಾಗಿದೆ. ತಾಲೂಕಿಗೆ ವೈಜ್ಞಾನಿಕ ಕುಡಿಯುವ ನೀರಿನ ಯೋಜನೆ ಜಾರಿಗೆ ಹೋರಾಟ ಮುಂದುವರಿಯಲಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಮುಂದೆ ತೀರ್ಥಹಳ್ಳಿ ತಾಲೂಕು, ಮುಳಬಾಗಿಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ, ತಾಲೂಕು ರೈತ ಸಂಘದ ಪರವಾಗಿ ಈ ಮಾಹಿತಿ ನೀಡ ಬಯಸುತ್ತೇವೆ:

ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಎರಡು ನದಿಗಳ ಸಂಗಮ ಸ್ಥಳವನ್ನು ಉಳಿಸಿಕೊಳ್ಳಲು ಹಾಗೂ ಅವೈಜ್ಞಾನಿಕ ಹಾಗೂ ಅಸಂವಿಧಾನಾತ್ಮಕ ರೀತಿಯಲ್ಲಿ ಜಾರಿಗೆ ತರಲು ಹೊರಟಿರುವ ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸಿ ಸ್ಥಳೀಯರು ಚಳವಳಿ ನಡೆಸಿಕೊಂಡು ಬಂದಿರುವುದು ತಮಗೆ ಗೊತ್ತೇ ಇದೆ. ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ ಹೆಸರಿನಲ್ಲಿ, ತಾಲೂಕು ರೈತ ಸಂಘದ ನೇತೃತ್ವದಲ್ಲಿ ಸಂಘಟಿತರಾದ ಗ್ರಾಮಸ್ಥರು ಸದರಿ ಯೋಜನೆಯ ಸುದ್ದಿ ತಿಳಿದಾಗಿನಿಂದಲೂ ಆತಂಕವನ್ನು ವ್ಯಕ್ತಪಡಿಸಿಕೊಂಡೇ ಬಂದಿದ್ದಾರೆ.

ವಿಶ್ವದ ಕೆಲವೇ ಪರಿಸರ ಸೂಕ್ಷ್ಮ ಪ್ರದೇಶಗಳ ಸಾಲಿನಲ್ಲಿ ಬರುವ ತೀರ್ಥಹಳ್ಳಿಯಲ್ಲಿ ಇಂತಹದೊಂದು ಯೋಜನೆ ಸ್ಥಳೀಯರ ಕೃಷಿ ಹಾಗೂ ವಾಸ ಭೂಮಿಗೆ ಮಾತ್ರವೇ ಕಂಟಕವಾಗುವುದಿಲ್ಲ, ಬದಲಿಗೆ ಭವಿಷ್ಯದಲ್ಲಿ ಮಲೆನಾಡಿನ ಪರಿಸರದಲ್ಲೂ ನೀರಿನ ಹಾಹಾಕಾರವನ್ನು ಕೃತಕವಾಗಿ ಸೃಷ್ಟಿಸುವ ಸಾಧ್ಯತೆ ಇದೆ. ಜತೆಗೆ, ವಿಕೇಂದ್ರಿಕರಣಕ್ಕಾಗಿ ಸಂವಿಧಾನಕ್ಕೆ ತರಲಾದ 73ನೇ ತಿದ್ದುಪಡಿಯ ಅಡಿಯಲ್ಲಿ ಮೂಡಿಬಂದ ‘ಜಲ್‌ ಜೀವನ್ ಮಿಷನ್‌’ನ ಮೂಲ ಆಶಯವನ್ನೇ ಇಲ್ಲಿ ಬಲಿಕೊಡಲಾಗಿದೆ. ಕಳೆದ ಆರು ತಿಂಗಳಿನಿಂದ ಈ ವಿಚಾರಗಳನ್ನು ಹಲವು ಸ್ವರೂಪಗಳಲ್ಲಿ ಸಾರ್ವಜನಿಕ ಅವಗಾಹನೆಗೆ ತರಲಾಗಿದೆ.

ಅತ್ಯಂತ ಪ್ರಜಾಸತ್ತಾತ್ಮಕ ರೀತಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಬಳಕೆಯಿಂದ ಹಿಡಿದು, ಆಹೋರಾತ್ರಿ ಸತ್ಯಾಗ್ರಹವನ್ನು ಸಂಘಟಿಸುವ ಮೂಲಕ, ಶಕ್ತಿಕೇಂದ್ರ ವಿಧಾನಸೌಧದ ಕೊಠಡಿಗಳಲ್ಲಿ ಹಿರಿಯ ಅಧಿಕಾರಿಗಳಿಗೆ ಸದರಿ ಯೋಜನೆಯ ಕುರಿತು ಆತಂಕಗಳನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿಕೊಂಡು ಬರಲಾಗಿದೆ. ಕುಡಿಯುವ ನೀರಿನ ನೆಪ ಮುಂದಿಟ್ಟು 350 ಕೋಟಿ ರೂಪಾಯಿಯ ಯೋಜನೆಯ ಅನುಷ್ಠಾನದ ಕುರಿತಾದ ಮೂಲಭೂತ ಪ್ರಶ್ನೆಗಳನ್ನು ಆಡಳಿತ ಮುಂದೆ ಹಲವು ಬಾರಿ ಇಡಲಾಗಿದೆ.

ದಿ-27-01-2024ರಂದು ಸಂಗಮ ಸಮಿತಿ, ತೀರ್ಥಹಳ್ಳಿ ತಾಲೂಕು ರೈತ ಸಂಘದ ಮುಖಂಡರು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿತ್ತು. ಅವರ ತೀರ್ಮಾನದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ರೈತರ ಮುಖಾಮುಖಿ ಚರ್ಚೆಗೆ ವಿಕಾಸಸೌಧದಲ್ಲಿ ಸಭೆ ಏರ್ಪಡಿಸಲಾಗಿತ್ತು. ಆದರೆ, ಸಭೆಯು ‘ಪ್ರಗತಿ ಪರಿಶೀಲನೆ’ ಎಂದು ತೇಪೆ ಹಚ್ಚುವ ಪಿಪಿಟಿಯ ಮೂಲಕ ಆರಂಭವಾಯಿತು. ಸರ್ಚ್‌ ಎಂಜಿನ್‌ನಿಂದ ಎಬ್ಬಿದ ಮಕ್ಕಳ ಚಿತ್ರಗಳನ್ನು ತೀರ್ಥಹಳ್ಳಿ ಆರಗ ಗ್ರಾಮ ಪಂಚಾಯ್ತಿಯ ಫ್ಲೋರೈಡ್‌ ಪತ್ತೆ ಸುದ್ದಿಗೆ ಅಂಟಿಸಲಾಗಿತ್ತು.

ಗೂಗಲ್‌ ಮ್ಯಾಪ್‌ ಮೂಲಕ ಮಲೆನಾಡಿನ ಇಳಿತಗ್ಗುಗಳನ್ನು ಅರ್ಥಮಾಡಿಸುವ ವ್ಯರ್ಥ ಪ್ರಯತ್ನವನ್ನು ಅಧಿಕಾರಿಗಳು ಮಾಡಿದರು. ಈ ಸಮಯದಲ್ಲಿ ಅವರು ತೋರಿಸುತ್ತಿದ್ದ ಆತುರ, ಆಕರ ತಂದ ಅನುಮಾನಾಸ್ಮದ ಅಂಕಿ- ಅಂಶಗಳು ಯೋಜನೆಯ ಅವೈಜ್ಞಾನಿಕತೆಯನ್ನು ಎತ್ತಿತೋರಿಸಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರಬಹುದು ಎಂಬ ಆಶಯದಲ್ಲಿ ಊರಿಗೆ ಮರಳಲಾಗಿತ್ತು. ಇದಾದ ನಂತರವೇ ರೈತರಿಗೆ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯಿಂದ ಮಾತುಕತೆಗೆ ಆಹ್ವಾನಿಸಲಾಗಿತ್ತು.

ನಿರಾಶಾದಾಯಕ ಬೆಳವಣಿಗೆ ಏನೆಂದರೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಷ್ಟೂ ಚರ್ಚೆ ಪೂರ್ವಾಗ್ರಹಪೀಡಿತವಾಗಿತ್ತು. ತಾರ್ಕಿಕ ಪರಿಹಾರ ಕಂಡುಕೊಳ್ಳುವುದಕ್ಕಿಂತ ಹೆಚ್ಚಾಗಿ ಟೆಂಡರ್‌ ಕಾಮಗಾರಿಗಷ್ಟೆ ಆದ್ಯತೆ ನೀಡುತ್ತಿರುವುದು ಸ್ಪಷ್ಟಪಡಿಸಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಕುರಿತು ಭಾಗವಹಿಸಿದ ರೈತರ ಪ್ರತಿಕ್ರಿಯೆ ಇಷ್ಟೆ: “ರೈತರಿಗೆ ಯೋಜನೆಯ ಅವೈಜ್ಞಾನಿಕತೆಯನ್ನು ಜಿಲ್ಲಾಡಳಿತಕ್ಕೆ ಮನವರಿಗೆ ಮಾಡಿಕೊಡಲು ಆಗದೇ ಹೋಗಿರಬಹುದು ಅಥವಾ ರೈತರು ಮುಂದಿಕೊಂಡು ಬಂದ ವಿಚಾರವನ್ನು ಕಡೆಗಣಿಸುವುದಕ್ಕಾಗಿಯೇ ಪೂರ್ವಾಗ್ರಹಪೀಡಿತರಾಗಿ ಇಂತಹದೊಂದು ಸಭೆಯನ್ನು ಆಯೋಜಿಸಿರುವ ಸಾಧ್ಯತೆಯೂ ಇದೆ ಅನ್ನಿಸಿತು. ಹೀಗಾಗಿ, ಸಭೆಯಿಂದ ಮಧ್ಯೆದಲ್ಲಿಯೇ ಹೊರಬರುವ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಜತೆಗೆ, ಹೋರಾಟದ ಹಾದಿಯೇ ನಿರ್ಣಾಯಕ ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ಜನ ಚಳವಳಿಯ ಭಾಷೆಯಲ್ಲಿಯೇ ಸರಕಾರಕ್ಕೆ ಯೋಜನೆಯ ಅವೈಜ್ಞಾನಿಕತೆಯನ್ನು ಮುಂದಿನ ದಿನಗಳಲ್ಲಿ ಅರ್ಥಪಡಿಸಲಾಗುವುದು.”

ಜಿಲ್ಲಾಡಳಿತ ಬಲಪ್ರಯೋಗವನ್ನೇ ಅಸ್ತ್ರವನ್ನಾಗಿ ನಂಬಿಕೊಂಡಂತಿದೆ. ಆದರೆ ಮಲೆನಾಡಿನ ಶಾಂತ ಪರಿಸರದಲ್ಲಿ ಅಂತಹದೊಂದು ನಡೆ ಭವಿಷ್ಯವನ್ನು ಇನ್ನಷ್ಟು ಆತಂಕಕ್ಕೆ ದೂಡುವ ಸಾಧ್ಯತೆ ಇದೆ. ಈ ಹಿನ್ನೆಯಲ್ಲಿ ರೈತರು ಮುಂದಿಟ್ಟುಕೊಂಡು ಬಂದಿರುವ ಬೇಡಿಕೆಯನ್ನು ಸರಕಾರಕ್ಕೆ ಅರ್ಥಮಾಡಿಕೊಳ್ಳಬೇಕು ಎಂದು ಆಶಿಸುತ್ತೇವೆ. ಜತೆಗೆ, ಭೀಮೇಶ್ವರ ಉಳಿಸಿ ಸಂಗಮ ಸಮಿತಿ, ತಾಲೂಕು ರೈತ ಸಂಘ ಮುಂದಿನ ದಿನಗಳಲ್ಲಿ ಸದರಿ ಯೋಜನೆಯ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಆತಂಕಗಳನ್ನು ದೂರಮಾಡುವ ನಿಟ್ಟಿನಲ್ಲಿ ಹೋರಾಟ ಮುಂದುವರಿಸಲಿವೆ. ತಾಲೂಕಿಗೆ ವೈಜ್ಞಾನಿಕವಾಗಿರುವ ಮತ್ತು ಶಾಶ್ವತವಾಗಿರುವ ಕುಡಿಯುವ ನೀರಿನ ಯೋಜನೆ ಜಾರಿಗಾಗಿ ಚಳವಳಿ ಜಾರಿಯಲ್ಲಿರಲಿದೆ.

ದಿನಾಂಕ: 24.02.2024
ಸ್ಥಳ: ತೀರ್ಥಹಳ್ಳಿ

ಇಂತಿ,
ಮುಳಬಾಗಿಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು
ಹಾಗೂ ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ, ತೀರ್ಥಹಳ್ಳಿ ತಾಲೂಕು ರೈತ ಸಂಘ.

Categories
ಬೆಂಗಳೂರು ರಾಜ್ಯ

ನಿರುದ್ಯೋಗಿಗಳಿಗೆ ಶಾಕಿಂಗ್ ನ್ಯೂಸ್!

ನಿರುದ್ಯೋಗಿಗಳಿಗೆ ಶಾಕಿಂಗ್ ನ್ಯೂಸ್!
– ಯುವನಿಧಿ ಯೋಜನೆಗೆ ಬಂತು ಮಹತ್ವದ ಆದೇಶ
– ನಿರುದ್ಯೋಗಿ ಎಂಬ ಘೋಷಣೆ ಪ್ರತಿ ತಿಂಗಳು ಕಡ್ಡಾಯ

NAMMUR EXPRESS NEWS
ಕರ್ನಾಟಕ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯ ಯುವನಿಧಿ ಯೋಜನೆಯಲ್ಲಿ ಅರ್ಹ ಫಲಾನುಭವಿಗಳು ಇನ್ನು ಮುಂದೆ ಸ್ವಯಂ ಘೋಷಣೆ ಮಾಡಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ 2022-23 ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ 2023ರಲ್ಲಿ ತೇರ್ಗಡೆಯಾಗಿ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಈ ಸ್ವಯಂ ಘೋಷಣೆ ನಿಯಮವನ್ನು ಜಾರಿಗೊಳಿಸಲಾಗಿದೆ. ಶೈಕ್ಷಣಿಕ ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿವಸ ಪೂರೈಸಿದ ಅಭ್ಯರ್ಥಿಗಳಿಗೆ ಜನವರಿ 2024 ರಂದು ನೇರ ನಗದು ವರ್ಗಾವಣೆ ಮಾಡಲಾಗಿರುತ್ತದೆ. ಅಭ್ಯರ್ಥಿಗಳು ಯುವ ನಿಧಿ ಯೋಜನೆಯ ಪ್ರಯೋಜನ ಪ್ರತಿ ತಿಂಗಳು ಪಡೆಯಬೇಕಿದ್ದರೆ ತಾನು ನಿರುದ್ಯೋಗಿ ಎಂಬ ಘೋಷಣೆಯನ್ನು ಪ್ರತಿ ತಿಂಗಳು ಮಾಡಬೇಕಾಗಿರುತ್ತದೆ. ಸ್ವಯಂ ಉದ್ಯೋಗಿ ಅಲ್ಲ, ವ್ಯಾಸಂಗ ಮುಂದುವರಿಸುತ್ತಿಲ್ಲ ಮತ್ತು ತಾನು ನಿರುದ್ಯೋಗಿ ಎಂಬ ಘೋಷಣೆಯನ್ನು ಮಾಡಬೇಕಾಗಿದೆ.

ಪ್ರಸಕ್ತ ಫೆಬ್ರವರಿ ತಿಂಗಳ 29 ರವರೆಗೆ ಸೇವಾ ಸಿಂಧು ಪೋರ್ಟಲ್ ನಲ್ಲಿ ಸ್ವಯಂ ಘೋಷಣೆ ಪ್ರಮಾಣ ಪತ್ರವನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಯೋಜನ ಪಡೆಯುತ್ತಿರುವ ಅರ್ಹ ಅಭ್ಯರ್ಥಿಗಳು ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡದೇ ಇದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುವುದಿಲ್ಲ ಈಗಾಗಲೇ ನೋಂದಾವಣೆ ಮಾಡಿಕೊಂಡ ಎಲ್ಲ ಅಭ್ಯರ್ಥಿಗಳಿಗೆ ಜನವರಿ 2024 ರಲ್ಲಿ ನೇರ ನಗದು ವರ್ಗಾವಣೆ ಮಾಡಲಾಗಿದೆ. ಮುಂದಿನ ತಿಂಗಳ ಪ್ರಯೋಜನ ಪಡೆದುಕೊಳ್ಳಲು ಸ್ವಯಂ ಘೋಷಣೆ ಮಾಡಬೇಕಾಗಿರುವ ಕುರಿತು ಎಲ್ಲಾ ಅಭ್ಯರ್ಥಿಗಳಿಗೆ ಈಗಾಗಲೇ ಎಸ್‌ಎಂಎಸ್ ಸಂದೇಶ ರವಾನಿಸಲಾಗಿದೆ.ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವೆಬ್ಲೆಟನ್ನು ಸಂಪರ್ಕಿಸಬಹುದು:
https://sevasindhugs.karnataka.gov.in/

Categories
ಕರಾವಳಿ ಮಂಗಳೂರು

ಮಂಗಳೂರಿನಲ್ಲಿ ಹೆಚ್ಚಿದ ಪಬ್ ಗಳ ಹಾವಳಿ..!

ಮಂಗಳೂರಿನಲ್ಲಿ ಹೆಚ್ಚಿದ ಪಬ್ ಗಳ ಹಾವಳಿ..!
– ಡ್ರಗ್ಸ್‌ ನಶೆಯಲ್ಲಿ ತೇಲುವ ಯುವ ಜನತೆ
– ಎತ್ತ ಸಾಗುತ್ತಿದೆ ಬುದ್ಧಿವಂತರ ಜಿಲ್ಲೆ.!?
– ನಗರದ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿರುವ ಪಬ್ ಗಳು!

NAMMUR EXPRESS NEWS
ಮಂಗಳೂರು: ಸ್ಮಾರ್ಟ್ ಸಿಟಿ ಮಂಗಳೂರು ಒಂದು ಸುಂದರ ನಗರವಾಗಿದೆ. ಹಾಗೆ ಬುದ್ಧಿವಂತರ ಜಿಲ್ಲೆ ಎಂಬ ಬಿರುದು ಕೂಡ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಎಂಬ ಪಿಶಾಚಿ ಯುವ ಜನತೆಯ ಹಾದಿ ತಪ್ಪಿಸುತ್ತಿದೆ ಎಂದರೆ ತಪ್ಪಾಗಲಾರದು. ಪೊಲೀಸ್ ಇಲಾಖೆಯು “ಆಂಟಿ ಡ್ರಗ್ ಸ್ಕ್ವಾಡ್” ಎಂಬ ಘಟಕ ರಚಿಸಿ ಬಿಗು ಕಾರ್ಯಾಚರಣೆ ನಡೆಸಿ ಹಲವೆಡೆ ಡ್ರಗ್ಸ್ ಪೆಡ್ಲರ್ ಗಳ ಹೆಡೆಮುರಿ ಕಟ್ಟಿದೆ. ಆದರೆ ಈಗಿನ ದಿನಗಳಲ್ಲಿ ಯಾವುದೇ ಲೈಸೆನ್ಸ್ ಇಲ್ಲದೆ ಕಾರ್ಯಾಚರಣೆ ನಡೆಸುತ್ತಿರುವ ಪಬ್ ಗಳು ಡ್ರಗ್ಸ್ ಎಂಬ ಮಹಾಮಾರಿಯ ಅಕ್ರಮ ಅಡ್ಡೆಯಾಗಿದೆ. ನಮ್ಮ ಮಂಗಳೂರಿನಲ್ಲಿ ಇರುವ ತುಳುನಾಡಿನ ಸಂಪ್ರದಾಯಕ್ಕೆ ಧಕ್ಕೆ ತರುವಂತೆ ಈ ಪಬ್ ಗಳು ಇಂದಿನ ದಿನಗಳಲ್ಲಿ ಕಾರ್ಯಾಚರಿಸುತ್ತಿವೆ.

ಈ ಪಬ್ ಗಳು ಮಂಗಳೂರಿನಲ್ಲಿ ಈಗಿನ ದಿನಗಳಲ್ಲಿ ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 3 ರಿಂದ 4 ಗಂಟೆಯವರೆಗೂ ಜೋರಾಗಿ ಡಿ.ಜೆ. ಸೌಂಡ್ಸ್ ಇಟ್ಟುಕೊಂಡು ತೆರೆದಿರುತ್ತವೆ. ಅರೆಬರೆ ಬಟ್ಟೆ ತೊಟ್ಟ ಹುಡುಗಿಯರು ಮತ್ತಿನಲ್ಲಿ ಡ್ಯಾನ್ಸ್ ಮಾಡುವುದು, ನಶೆಯಲ್ಲಿಯೇ ರಸ್ತೆಗಳಲ್ಲಿ ತೇಲಾಡಿಕೊಂಡು ಹೋಗುವುದು, ರಾತ್ರಿ ಸಂಚರಿಸುವವರಿಗೆ ಮುಜುಗರ ಉಂಟುಮಾಡಿದೆ. ಇದೆಲ್ಲ ಸದ್ಯ ಮಂಗಳೂರು ನಗರದಲ್ಲಿ ರಾತ್ರಿ ಹೊತ್ತು ಸರ್ವೇ ಸಾಮಾನ್ಯವಾಗಿದೆ.

ಮಂಗಳೂರಿನ ಕೆಲವು ಪಬ್ ಗಳಿಗೆ ಯುವಜನತೆ ಹೆಚ್ಚಾಗಿ ಬರುತ್ತಿದ್ದು, ಪ್ರತಿಷ್ಠಿತ ಕಾಲೇಜುಗಳ ಸಂಖ್ಯೆ ಹೆಚ್ಚಿರುವುದರಿಂದ, ಇಲ್ಲಿ ಹೊರ ರಾಜ್ಯದಿಂದ ಕಲಿಯಲು ಬಂದಿರುವ ವಿಧ್ಯಾರ್ಥಿಗಳ ದಂಡು ಕಾಣ ಸಿಗುವುದೇ ಹೆಚ್ಚು! ಶನಿವಾರ ಆದಿತ್ಯವಾರ ಬಂದರಂತೂ ಇಲ್ಲಿ ಜನಸಾಗರವೇ ಸೇರುತ್ತದೆ. ಬೆಳಿಗ್ಗೆ 4 ಗಂಟೆವರೆಗೂ ಕೆಲವು ಪಬ್ ತೆರೆದಿರುತ್ತದೆ. ಶಾಲಾ ಕಾಲೇಜು ಹತ್ತಿರದ 100 ಮೀಟರ್ ಅಂತರದಲ್ಲಿ ಯಾವುದೇ ಬಾರ್, ಪಬ್ ಗಳು ಕಾರ್ಯಚರಿಸುವಂತಿಲ್ಲ.

ಆದರೆ, ಇವೆಲ್ಲಾ ಕಾನೂನು ಕೆಲವು ಪಬ್ ಗೆ ಅನ್ವಯವಾಗುವುದಿಲ್ಲವೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಯಾಕೆಂದರೆ ಕೆನರಾ ಕಾಲೇಜು, ಎಸ್.ಡಿ.ಎಂ. ಕಾಲೇಜು, ಶ್ರೀ ದೇವಿ ಕಾಲೇಜು, ಇನ್ನೂ ಹಲವಾರು ಕಾಲೇಜುಗಳ ಹತ್ತಿರವೇ ಪಬ್ ಇದೆ. ಅರೆಬರೆ ಬಟ್ಟೆ ಹಾಕಿಕೊಂಡು ರಾತ್ರಿ ಇಡೀ ಡ್ರಗ್ಸ್‌, ಮದ್ಯಪಾನದಲ್ಲಿ ಯುವಜನತೆ ತೊಡಗಿಕೊಂಡು ಡಿ.ಜೆ. ಹಾಡಿಗೆ ನಶೆಯಲ್ಲಿ ನರ್ತಿಸುವುದು ಕಾಣಬಹುದು. ತಕ್ಷಣ ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುವಂತೆ ಜನತೆ ಆಗ್ರಹಿಸಿದ್ದಾರೆ.

Categories
ಬೆಂಗಳೂರು ರಾಜ್ಯ

ಮೇ 12ಕ್ಕೆ ಕಾಮೆಡ್-ಕೆ ಪರೀಕ್ಷೆ..!

ಮೇ 12ಕ್ಕೆ ಕಾಮೆಡ್-ಕೆ ಪರೀಕ್ಷೆ..!
– ಡ್ರೆಸ್ ಕೋಡ್ ಇಲ್ಲ, ಮುಖ ಮುಚ್ಚಿಕೊಳ್ಳುವಂತಿಲ್ಲ.!
– 22 ಸಾವಿರ ಸೀಟುಗಳ ಭರ್ತಿಗೆ ಪರೀಕ್ಷೆ
– ಏ.5ರಂದು ಅರ್ಜಿ ಸಲ್ಲಿಸಲು ಕೊನೆಯ ದಿನ

NAMMUR EXPRESS NEWS
ಬೆಂಗಳೂರು: ಖಾಸಗಿ ಕಾಲೇಜುಗಳ ಎಂಜಿನಿಯಾರಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ‘ಕಾಮೆಡ್-ಕೆ’ಪರೀಕ್ಷೆ ಮೇ 12ರಂದು ನಡೆಯಲಿದೆ. ‘ಕಾಮೆಡ್-ಕೆ’ ಮತ್ತು ‘ಯುನಿ-ಗೇಜ್’ ಸಹಯೋಗದೊಂದಿಗೆ ರಾಜ್ಯದಲ್ಲಿ 150ಕ್ಕೂ ಹೆಚ್ಚಿನ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ದೇಶದಲ್ಲಿನ 55 ವಿಶ್ವವಿದ್ಯಾಲಯಗಳಲ್ಲಿರುವ 22 ಸಾವಿರ ಸೀಟುಗಳ ಭರ್ತಿಗೆ ಈ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳಿಗೆ ಫೆ.15ರಿಂದ ಮಾಕ್ ಟೆಸ್ಟ್ ಕೂಡ ಇರಲಿದೆ. ಏ.5ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.ಕಳೆದ ವರ್ಷ 1.04 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಈ ಪೈಕಿ 85 ಸಾವಿರ ಅಭ್ಯರ್ಥಿಗಳು ಪರೀಕ್ಷೆ ತೆಗೆದು ಕೊಂಡಿದ್ದು, 10 ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿ ಗಳು ಸೀಟು ಪಡೆದುಕೊಂಡಿದ್ದರು. ಆನ್‌ಲೈನ್ ನಲ್ಲೇ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ಕೌನ್ಸೆಲಿಂಗ್ ಕೂಡ ನಡೆಯಲಿದೆ.

ಡ್ರೆಸ್ ಕೋಡ್ ಇಲ್ಲ, ಮುಖ ಮುಚ್ಚಿಕೊಳ್ಳುವಂತಿಲ್ಲ!

ನೀಟ್ ಮಾದರಿಯಲ್ಲಿ ನಾವು ಅಭ್ಯರ್ಥಿಗಳಿಗೆ ಡ್ರೆಸ್‌ಕೋಡ್ ನಿಗದಿ ಮಾಡಿಲ್ಲ. ಆದರೆ, ಮುಖ ಮುಚ್ಚಿಕೊಂಡು ಬಂದರೆ ಪ್ರವೇಶ ನಿರಾಕರಿಸಲಾಗುವುದು, ಮುಖ ಸ್ಪಷ್ಟವಾಗಿ ಕಾಣಬೇಕು.

Categories
ಅಡಿಕೆ-ದರ ಕೃಷಿ ಬೆಂಗಳೂರು ರಾಜ್ಯ

ಅಡಿಕೆ ದರದಲ್ಲಿ ಕುಸಿತ!

ಅಡಿಕೆ ದರದಲ್ಲಿ ಕುಸಿತ!
– ಮಲೆನಾಡು, ಕರಾವಳಿ, ಮಧ್ಯ ಕರ್ನಾಟಕದಲ್ಲಿ ಅಡಿಕೆ ಬೆಳೆಗಾರರ ಆತಂಕ
– ವಿದೇಶಿ ಆಮದು ಎಫೆಕ್ಟ್: ಅಡಿಕೆ ಬೆಳೆಗಾರರಿಗೆ ತೊಂದರೆ

NAMMUR EXPRESS NEWS
ಬೆಂಗಳೂರು: ಅಡಿಕೆ ಬೆಳೆ ದರ ದಿನ ಕಳೆದಂತೆ ಕುಸಿಯುತ್ತಿದೆ. ಕಳೆದ ಹದಿನೈದು ದಿನಗಳಲ್ಲಿ ಬರೋಬ್ಬರಿ 2300 ರೂಪಾಯಿ ಪ್ರತಿ ಕ್ವಿಂಟಲ್ ಗೆ ಕುಂಠಿತವಾಗಿದೆ. ಇದರಿಂದ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಕರಾವಳಿ ಭಾಗದ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ. ಅದೇ ರೀತಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿಯೂ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ. ಚನ್ನಗಿರಿ ಭಾಗದಲ್ಲಂತೂ ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ಇಲ್ಲಿನ ರೈತರಿಗೆ ಅಡಿಕೆಯೇ ಆಧಾರ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ 57 ಸಾವಿರ ರೂಪಾಯಿ ಪ್ರತಿ ಕ್ವಿಂಟಲ್ ಅಡಿಕೆ ವಹಿವಾಟು ನಡೆದಿತ್ತು.

ಆದ್ರೆ, ಈ ವರ್ಷ 47 ಸಾವಿರ ರೂಪಾಯಿ ಆಸುಪಾಸಿನಲ್ಲಿದೆ. ಬರೋಬ್ಬರಿ ಹತ್ತು ಸಾವಿರ ರೂಪಾಯಿ ಒಂದು ಕ್ವಿಂಟಲ್‌ ಅಡಿಕೆಗೆ ಕಡಿಮೆಯಾಗಿದೆ. ಇದರಿಂದಾಗಿ ಸಣ್ಣ ಮಧ್ಯಮ ರೈತರು ನಷ್ಟ ಅನುಭವಿಸಿದ್ದಾರೆ. ಈ ಬಾರಿ ಅಡಿಕೆ ಇಳುವರಿ ಕಡಿಮೆ ಬಂದಿದೆ. ಒಂದು ಎಕರೆಗೆ ಕೇವಲ ಐದು ಕ್ವಿಂಟಲ್ ಅಡಿಕೆ ಆಗಿದೆ. ಅಂದರೆ ಒಂದು ಎಕರೆ ಹೊಂದಿದವರು 50 ಸಾವಿರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಬೆಳೆಯೂ ಕಡಿಮೆ, ಧಾರಣೆಯೂ ಕುಸಿತ, ಅಡಿಕೆ ಗಿಡಗಳು ಒಣಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರು ದುಬಾರಿ ಹಣ ಕೊಟ್ಟು, ಅಕ್ರಮವಾಗಿ ಪಂಪ್ ಸೆಟ್ ಹಾಕಿ ತೋಟಗಳಿಗೆ ನೀರುಣಿಸಬೇಕಾಗಿದೆ. ಜಿಲ್ಲಾಡಳಿತವು ಅಕ್ರಮವಾಗಿ ಪಂಪ್ ಸೆಟ್ ಅಳವಡಿಸಿರುವುದನ್ನು ತೆಗೆದು ಹಾಕಲಾಗುತ್ತಿದೆ. ಹಾಗಾಗಿ, ತೋಟ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ.

ವಿದೇಶಿ ಅಡಿಕೆ ಎಫೆಕ್ಟ್..!

ಅಡಿಕೆಗೆ ಮತ್ತೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಭೀತಿ ಎದುರಾಗಿದೆ. ವಿದೇಶಗಳಿಂದ ಅಕ್ರಮವಾಗಿ ಅಡಿಕೆ ಕರಾವಳಿ ಮಾರುಕಟ್ಟೆಗಳಿಗೆ ಆಗಮಿಸುತ್ತಿರುವುದೇ ಈ ಆತಂಕಕ್ಕೆ ಕಾರಣ. ಅತ್ಯಂತ ಹೆಚ್ಚು ಗುಣಮಟ್ಟದ ಅಡಿಕೆ ಬೆಳೆಯುವ ಪ್ರದೇಶವಾದ ಮಲೆನಾಡು, ಬಯಲಸೀಮೆ ಹಾಗೂ ಮಧ್ಯಕರ್ನಾಟಕ, ಕರಾವಳಿ ಭಾಗದ ಅಡಿಕೆಗೆ ಉತ್ತರ ಭಾರತದ ಹಲವೆಡೆ ಭಾರೀ ಬೇಡಿಕೆಯಿದೆ. ಈ ಬೇಡಿಕೆಗಳಿಗೆ ಅನುಗುಣವಾಗಿ ಕರಾವಳಿ ಭಾಗದ ಕೃಷಿಕರು ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದು, ಕೊರೊನಾ ಲಾಕ್ ಡೌನ್ ಬಳಿಕ ಅಡಿಕೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಧಾರಣೆ ಲಭಿಸುತ್ತಿತ್ತು. ಕೆಜಿ ಗೆ 500 ರೂಪಾಯಿ ಗಡಿದಾಟಿದ್ದ ಅಡಿಕೆ ಬೆಲೆ ಇದೀಗ ನಿಧಾನವಾಗಿ ಕುಸಿಯಲಾರಂಭಿಸುತ್ತಿದೆ.

ಹಳೆ ಅಡಿಕೆ ಬೆಲೆ ಕೆಜಿಗೆ 46ರಿಂದ 48 ರೂಪಾಯಿ ಆಸುಪಾಸಿನಲ್ಲಿದೆ. ಆದರೆ ಬರ್ಮಾ ಹಾಗೂ ಇತರ ಕಡೆಗಳಲ್ಲಿ ಇದೇ ರೀತಿಯ ಅಡಿಕೆಯನ್ನು ಬೆಳೆಯಲಾಗುತ್ತಿದ್ದು ದೇಶೀ ಮಾರುಕಟ್ಟೆಗೆ ಹೋಲಿಸಿದರೆ, ಅದರ ಬೆಲೆ ತೀರ ಕಡಿಮೆಯಾಗಿದೆ. ಈ ಅಡಿಕೆಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲು ಹಲವು ನಿಬಂಧನೆಗಳಿದ್ದರೂ, ಹೆಚ್ಚಿನ ಲಾಭಗಳಿಸುವ ಉದ್ದೇಶದಿಂದ ಅಡಿಕೆ ಖರೀದಿದಾರರು ವಿದೇಶಿ ಅಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದ್ದಾರೆ.

ಕರಾವಳಿ ಅಡಿಕೆಗೂ ಡಿಮ್ಯಾಂಡ್ ಕಡಿಮೆ ಆಯ್ತು!

ಆಮದಾಗುವ ಅಡಿಕೆಗಳಲ್ಲಿ ಕೆಲವು ಮಾತ್ರ ತೆರಿಗೆ ಕಟ್ಟಿ ದೇಶಿ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದು ಅದಕ್ಕಿಂತ ದುಪ್ಪಟ್ಟು ಪ್ರಮಾಣದ ಅಡಿಕೆ ಅಕ್ರಮವಾಗಿ ಆಮದಾಗುತ್ತಿದೆ.ಈ ಅಡಿಕೆಯನ್ನು ದಕ್ಷಿಣ ಕನ್ನಡ ಭಾಗದಲ್ಲಿ ಬೆಳೆಯುವ ಉತ್ತಮ ಗುಣಮಟ್ಟದ ಅಡಿಕೆಯೊಂದಿಗೆ ಬೆರೆಸಿ ಉತ್ತರ ಭಾರತಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ದಕ್ಷಿಣಕನ್ನಡ ಜಿಲ್ಲೆಯ ಅಡಿಕೆಯ ಗುಣಮಟ್ಟವೂ ಕುಸಿಯುವ ಜೊತೆಗೆ ಬೆಲೆಯೂ ಕುಸಿಯುವ ಆತಂಕವಿದೆ. ಅಡಿಕೆ ಮಾರುಕಟ್ಟೆಯಲ್ಲಿ ಸಣ್ಣ ಬದಲಾವಣೆಗಳಾದರೂ, ಅದು ನೇರವಾಗಿ ಅಡಿಕೆ ಬೆಳೆಗಾರನ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೆ ಬಹುತೇಕ ವಹಿವಾಟುಗಳಲ್ಲಿ ಅಡಿಕೆಯ ಪಾತ್ರವೂ ಪ್ರಮುಖವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಅಡಿಕೆ ಬೆಳೆಗಾರರ ಹಿತ ಕಾಯಬೇಕಿದೆ ಎಂದು ರೈತರು ಒತ್ತಾಯಿಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕು ಪ್ರಥಮ ಜಾನಪದ ಸಮ್ಮೇಳನಕ್ಕೆ ಸಜ್ಜು!

ತೀರ್ಥಹಳ್ಳಿ ತಾಲೂಕು ಪ್ರಥಮ ಜಾನಪದ ಸಮ್ಮೇಳನಕ್ಕೆ ಸಜ್ಜು!
– ಫೆ.27 ರಂದು ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕಾರ್ಯಕ್ರಮ
– ತಾಲೂಕು ಕಛೇರಿ ಮುಂಭಾಗದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ

NAMMUR EXPRESS NEWS
ತೀರ್ಥಹಳ್ಳಿ : ಕರ್ನಾಟಕ ಜಾನಪದ ಪರಿಷತ್ತು ತೀರ್ಥಹಳ್ಳಿ ವತಿಯಿಂದ ತೀರ್ಥಹಳ್ಳಿಯಲ್ಲಿ ಪ್ರಥಮ ತಾಲೂಕು ಜಾನಪದ ಸಮ್ಮೇಳನವನ್ನು ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಸಲಾಗುವುದು. ಬೆಳಗ್ಗೆ 9 ಗಂಟೆಗೆ ತಾಲೂಕು ಕಚೇರಿ ಮುಂಭಾಗದಿಂದ ಗೋಪಾಲಗೌಡರಂಗ ಮಂದಿರದವರೆಗೆ ಸಮ್ಮೇಳನಾಧ್ಯಕ್ಷರಾದ ಉಬ್ಬುರು ರಾಮಣ್ಣಅವರ ಮೆರವಣಿಗೆ ಪ್ರಾರಂಭವಾಗುವುದು. ಯಕ್ಷಗಾನ ಕಲಾವಿದರಾದ ಬಿ ಗಣಪತಿಯವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ನಂತರ ಬೆಳಗ್ಗೆ 10 ಗಂಟೆಯಿಂದ 12ರವರೆಗೆ ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷರಾದ ಲೀಲಾವತಿ ಜಯಶೀಲ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನೆಯನ್ನು ಶಾಸಕ ಆರಗ ಜ್ಞಾನೇಂದ್ರ ಅವರು ನೆರವೇರಿಸಲಿದ್ದಾರೆ.ನಂತರ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರವರು ನೆರವೇರಿಸಲಿದ್ದು, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್ ಎಂ ಮಂಜುನಾಥಗೌಡ ಅವರು ಆಶಯ ನುಡಿಯಲಿದ್ದಾರೆ.

ಉದ್ಯಮಿ ಎಂ ಬಿ ದೇವಪ್ಪ ಅವರು ಪುಸ್ತಕ ಬಿಡುಗಡೆ ಮಾಡಲಿದ್ದು,ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್ ಎಂ ಮಂಜುನಾಥಗೌಡ, ಪಟ್ಟಣ ಪಂಚಾಯತ್ ಅಧ್ಯಕ್ಷರು ಗೀತಾ ರಮೇಶ್, ತಹಶೀಲ್ದಾರ್ ಜಕ್ಕನಗೌಡರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಟಿ ಕೆ ರಮೇಶ್ ಶೆಟ್ಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶೈಲಾ ಎನ್, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ, ತಾಲೂಕು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ರೇಣುಕಾ ಮಹಾಬಲೇಶ್ವರ ಹೆಗಡೆ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರು ಹೆಚ್ ಏನ್ ಈಶ್ವರ,ಕನ್ನಡ ಸಾಹಿತ್ಯ ಪರಿಷತ್ತು ಆಗುಂಬೆ ಹೋಬಳಿ ಅಧ್ಯಕ್ಷರು ವೆಂಕಟೇಶ್ ನಡಬೂರು, ಕನ್ನಡ ಸಾಹಿತ್ಯ ಪರಿಷತ್ ಕೋಣಂದೂರು ಹೋಬಳಿ ಅಧ್ಯಕ್ಷರಾದ ಶ್ರೀಪತಿ ಹಳಗುಂದ, ಕನ್ನಡ ಸಾಹಿತ್ಯ ಪರಿಷತ್ತು ಮಂಡಗದ್ದೆ ಹೋಬಳಿ ಅಧ್ಯಕ್ಷರು ಬಿ ಮಂಜಪ್ಪ, ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹೋಬಳಿ ಘಟಕ ಪ್ರಕಾಶ್ ಕೂಲಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಧ್ಯಾಹ್ನ 12 ರಿಂದ 1 ಗಂಟೆಗಳವರೆಗೆ ತೀರ್ಥಹಳ್ಳಿ ಸುತ್ತಮುತ್ತಲಿನ ಜಾನಪದ ಹಾಗೂ ಸಮ್ಮೇಳನಾಧ್ಯಕ್ಷರ ಜೀವನ ಸಾಧನೆ ಕುರಿತು ಹಿರಿಯ ಸಾಹಿತಿಗಳಾದ ಡಾ. ಜೆ ಕೆ ರಮೇಶ್ ರವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ.

ಮಧ್ಯಾಹ್ನ 1 ರಿಂದ 5 ಗಂಟೆಗಳವರೆಗೆ ಜಾನಪದ ಕಲಾ ಪ್ರದರ್ಶನವಿರುತ್ತದೆ. ಹಾಗೂ ಸಂಜೆ 5 ರಿಂದ 7 ಗಂಟೆಗಳವರೆಗೆ ಶಾಂತವೇರಿ ಗೋಪಾಲಗೌಡರಂಗ ಮಂದಿರದಲ್ಲಿ ಸಮರೂಪ ಸಮಾರಂಭ ನಡೆಯಲಿದೆ. ಸಾಧಕರಿಗೆ ಹಾಗೂ ಕಲಾವಿದರಿಗೆ ಸನ್ಮಾನ ಸಮಾರಂಭ ನಡೆಯಲಿದೆ. ನಿವೃತ್ತ ಕುಲಪತಿಗಳಾದ ಡಾ. ಅಂಬಳಿಕೆ ಹಿರಿಯಣ್ಣ ಅವರು ಸಮಾರೋಪ ನುಡಿ ಆಡಲಿದ್ದಾರೆ. ಸಮ್ಮೇಳನಾಧ್ಯಕ್ಷರಿಗೆ ಅಭಿನಂದನೆಯನ್ನು ಶಾಸಕ ಆರಗ ಜ್ಞಾನೇಂದ್ರ ಅವರು ಸಲ್ಲಿಸಲಿದ್ದು, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಡಿ ಮಂಜುನಾಥ್ ಅವರು ನಡೆಸಿಕೊಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ ಉಪಾಧ್ಯಕ್ಷರಾದ ಡಿ ಸಿ ದೇವರಾಜ್ ದಬ್ಬಣಗದ್ದೆ, ಜಾನಪದ ಪರಿಷತ್ ಹೋಬಳಿ ಘಟಕ ಕೋಣಂದೂರು ಅಧ್ಯಕ್ಷರಾದ ಪ್ರೋ ಕೆ ಎಂ ಸುಧಾಕರ್ ರವರು ಆಗಮಿಸಲಿದ್ದಾರೆ. ತೀರ್ಥಹಳ್ಳಿ ತಾಲೂಕು ಜನಪದ ಪರಿಷತ್ ಅಧ್ಯಕ್ಷರಾದ ಲೀಲಾವತಿ ಜಯಶೀಲ, ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ ಮಂಜುನಾಥ್, ವೆಂಕಟೇಶ್, ಚಂದ್ರೇಗೌಡರು, ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ತಾಲೂಕು ಜನಪದ ಪರಿಷತ್ ನ ಎಲ್ಲಾ ಪದಾಧಿಕಾರಿಗಳು ಸೇರಿದಂತೆ ಪ್ರಮುಖರು ಸರ್ವರನ್ನು ಸ್ವಾಗತಿಸಿದ್ದಾರೆ.

Categories
ಉಡುಪಿ ಕರಾವಳಿ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಬ್ಯಾಂಕ್ ಮ್ಯಾನೇಜರಿಂದ ಕೋಟಿಗಟ್ಟಲೆ ಗೋಲ್ಮಾಲ್!
– ಅಂಕೊಲದಲ್ಲಿ ನಡೆದ ಘಟನೆ: ಕೋಟಿ ಕೋಟಿ ಹಣ ವಂಚನೆ
– ಉಡುಪಿ: ಡಾಕ್ಟರ್ ಎಂದು ನಂಬಿಸಿ ಮೋಸ
– ಮಂಗಳೂರು: ಸ್ಟಾಕ್ ಟ್ರೇಡಿಂಗ್ ಹೆಸರಲ್ಲಿ 18 ಲಕ್ಷ ಮೋಸ!

NAMMUR EXPRESS NEWS
ಅಂಕೋಲಾ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಷ್ಟ್ರೀಕೃತ ಬ್ಯಾಂಕಿನ ವ್ಯವಸ್ಥಾಪಕನೊಬ್ಬ ತನ್ನ ಬ್ಯಾಂಕಿಗೆ ಮತ್ತು ಗ್ರಾಹಕರಿಗೆ ಸೇರಿದಂತೆ 1.94 ಕೋಟಿ ರೂ. ವಂಚನೆ ಮಾಡಿರುವ ಕುರಿತು ಅಂಕೋಲಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.  ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡ ಕೆನರಾ ಬ್ಯಾಂಕ್ 2ನೇ ಶಾಖೆ (ಸಿಂಡಿಕೇಟ್)ಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಗದಗ ಜಿಲ್ಲೆಯ ಹುಲಕೋಟಿ ಗ್ರಾಮದ ವೆಂಕಟೇಶ ಎಫ್. ಮಜ್ಜಿಗುಡ್ಡ ಎಂಬಾತನೇ ವಂಚನೆಯ ಆರೋಪಿ ಎನ್ನಲಾಗಿದೆ.

ಸೆ 21, 2020 ರಿಂದ ಜ.31, 2023 ರವರೆಗೆ ಅಂದಿನ ಬ್ಯಾಂಕಿನ ಸೀನಿಯರ್ ಮೆನೇಜರ್ ಆಗಿ ಕಾರ್ಯನಿರ್ವಹಿಸಿದ ವೆಂಕಟೇಶ ಮಜ್ಜಿಗುಡ್ಡ ಈತನು ತನ್ನ ಅವಧಿಯಲ್ಲಿ ಬ್ಯಾಂಕಿನ ಖಾತೆಯಿಂದ ಹಣವನ್ನು ತನ್ನ ಖಾತೆಗೆ, ತನ್ನ ಹತ್ತಿರದ ಸಂಬಂಧಿಕರ ಖಾತೆಗೆ ಹಾಗೂ ಸ್ನೇಹಿತರ ಖಾತೆಗೆ ಹಣ ವರ್ಗಾವಣೆ ಮಾಡಿ ನಗದು ರೂಪದಲ್ಲಿ ಹಣ ತೆಗೆದುಕೊಂಡಿರುವ ಕುರಿತು ಬ್ಯಾಂಕಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿದಲ್ಲದೇ ಅನೇಕ ಬ್ಯಾಂಕ್ ಗ್ರಾಹಕರ ಖಾತೆಯಿಂದ ಖಾತೆದಾರರ ಅನುಮತಿ ಇಲ್ಲದೇ ಯಾವುದೇ ದಾಖಲೆಗಳಿಲ್ಲದೆ ಬೇರೆ, ಬೇರೆ ಗ್ರಾಹಕರ ಖಾತೆಗೆ ಹಣ ವರ್ಗಾಯಿಸಿದ್ದಾರೆ.

ಬ್ಯಾಂಕಿನಿಂದ ಗ್ರಾಹಕರಿಗೆ ಸಾಲ ನೀಡುವಾಗ ಸರಿಯಾಗಿ ದಾಖಲಾತಿಗಳನ್ನು ನಿರ್ವಹಿಸಿದೆ ಬ್ಯಾಂಕ್ ಸ್ಲಿಪ್ಸ್ ಮತ್ತು ಚಲನ್ಸಗಳ ಸಾಕ್ಷಿ ನಾಶಪಡಿಸಿರುತ್ತಾರೆ. ಬ್ಯಾಂಕಿನಲ್ಲಿ ಖಾತೆಹೊಂದಿರುವ ಸ್ವಸಹಾಯ ಸಂಘಗಳಿಗೆ ಸಾಲ ಕೊಟ್ಟ ನಂತರ ಅವರಿಂದ ಬ್ಯಾಂಕ್‌ನಲ್ಲಿ ಡಿಪಾಸಿಟ್ ಹಣ ಇಡಬೇಕು, ಸಾಲ ಮುಕ್ತಾಯವಾದ ನಂತರ ಡಿಪಾಸಿಟ್ ಹಣ ಸಾಲಕ್ಕೆ ಮರುಪಾವತಿಯಾಗುವುದಾಗಿ ಹೇಳಿ ನಂಬಿಸಿ ಹಣ ಪಡೆದು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಗ್ರಾಹರಿಗೆ ಮತ್ತು ಬ್ಯಾಂಕಿಗೆ ಮೋಸ ವಂಚನೆ ಮಾಡಿರುತ್ತಾನೆ.

ಸುಮಾರು 50 ಸ್ವಸಹಾಯ ಸಂಘಗಳಿಂದ 1.94 ಕೋಟಿ ರೂ. ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾನೆ ಎಂದು ಹಾಲಿ ಬ್ಯಾಂಕಿನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರತೀಕ್ಷಾ ವಿನೋದ ಖರೆ ಪೊಲೀಸ್ ದೂರು ನೀಡಿದ್ದಾರೆ. ಪಿಐ ಶ್ರೀಕಾಂತ ತೋಟಗಿ ಅವರ ಮಾರ್ಗದರ್ಶನದಲ್ಲಿ ಎಚ್‌ಸಿ ಮಮತಾ ಆನಂದ ಗುನಗಾ ಪ್ರಕರಣ ವನ್ನು ದಾಖಲಿಸಿಕೊಂಡು ಪ್ರಥಮ ವರದಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಡಾಕ್ಟರ್ ಎಂದು ನಂಬಿಸಿ ಮೋಸ..!

ಉಡುಪಿ: ಅಪರಿಚಿತ ವ್ಯಕ್ತಿಯೊಬ್ಬ ತಾನು ಡಾಕ್ಟರ್ ಎಂಬುದಾಗಿ ನಂಬಿಸಿ ಮಹಿಳೆ ಒಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಮಲ್ಪೆ ನಿವಾಸಿ ವಿನಿತಾ ಎಂಬ ಮಹಿಳೆಗೆ ಜನವರಿ 24ರಂದು ವಾಟ್ಸಪ್ ನಲ್ಲಿ ವ್ಯಕ್ತಿಯೊಬ್ಬ ಪರಿಚಯ ಆಗಿದ್ದು ನಿಮ್ಮ ಬಿಸಿನೆಸ್ನಲ್ಲಿ ಪಾಲುದಾರಿಕೆ ಮಾಡ್ತೀನಿ ಎಂದಿದ್ದ. ಅಲ್ಲದೆ, ತಾನು ಲಂಡನ್ನಲ್ಲಿ ಡಾಕ್ಟ‌ರ್ ಆಗಿದ್ದು, ಸದ್ಯದಲ್ಲೇ ಭಾರತಕ್ಕೆ ಬರಲು ಪ್ಲಾನ್ ಮಾಡಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದ. ಫೆ.2ರಂದು ಬೇರೊಂದು ನಂಬರಲ್ಲಿ ಫೋನ್ ಬಂದಿತ್ತು. ದೆಹಲಿ ಏರ್ಪೋಟ್್ರ ಕಚೇರಿಯಿಂದ ಫೋನ್ ಮಾಡುತ್ತಿದ್ದೇನೆಂದು ಹೇಳಿದ್ದ ಆ ವ್ಯಕ್ತಿ, ಲಂಡನ್ ಡಾಕ್ಟರಿನ ಫ್ರೆಂಡ್ ಎಂದು ಹೇಳಿದ್ದ. ಡಾಕ್ಟರನ್ನು ಏರ್ಪೋಟ್್ರ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅವರನ್ನು ಬಿಡಿಸಿ ತರಲು ದಂಡ ಕಟ್ಟಬೇಕಾಗಿದೆ. ಎಂದಿದ್ದ.

ಆ ನಂತರವೂ ಫೋನ್ ಬಂದಿದ್ದು, ಡಾಕ್ಟರ್ ಏರ್ಪೋಟಲ್ಲಿ ಸಿಕ್ಕಿಬಿದ್ದಿದ್ದಾರೆ. ದಂಡ ಕಟ್ಟಲು ಹಣ ಇಲ್ಲ, ಸಹಾಯ ಮಾಡಬಹುದೇ ಎಂದು ಆ ವ್ಯಕ್ತಿ ಕೇಳಿಕೊಂಡಿದ್ದ. ಅದರಂತೆ, ವಿನಿತಾ ಅವರು ಫೆ.16ರಿಂದ 20ರ ನಡುವೆ ತನ್ನ ಕೆನರಾ ಬ್ಯಾಂಕ್ ಖಾತೆಯಿಂದ ಫೋನ್ ಪೇ ಮೂಲಕ 4.96 ಲಕ್ಷ ರೂ. ಹಣ ಕಳಿಸಿದ್ದರು. ಹಣ ಕಳಿಸಿದ ಬಳಿಕ ಫೋನ್ ಸಂಪರ್ಕ ಕಡಿತ ಆಗಿತ್ತು. ಇದರಿಂದ ಮೋಸದ ಅರಿವಾದ ಮಹಿಳೆ ಮಲ್ಪೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸ್ಟಾಕ್ ಟ್ರೇಡಿಂಗ್ ಹೆಸರಲ್ಲಿ 18 ಲಕ್ಷ ಮೋಸ!

ಮಂಗಳೂರು: ಫೇಸ್ ಬುಕ್‌ನಲ್ಲಿ ಕಾಣಿಸಿಕೊಂಡ ಸ್ಟಾಕ್ ಟ್ರೇಡಿಂಗ್ ಜಾಹೀರಾತು ನೋಡಿ ಹಣ ಹೂಡಿಕೆ ಮಾಡಿದ ವ್ಯಕ್ತಿ ಯೊಬ್ಬರು 18.53 ಲ.ರೂ. ವಂಚನೆಗೊಳಗಾದ ಘಟನೆ ವರದಿಯಾಗಿದೆ. ವಿಜಯ ಕುಮಾರ್ ಎಂಬುವವರು ಫೇಸ್‌ಬುಕ್‌ನಲ್ಲಿ ಸ್ಯಾಕ್ ಟ್ರೇಡಿಂಗ್ ಎಂಬ ಜಾಹೀರಾತು ನೋಡಿ ಅದರಲ್ಲಿದ್ದ ಲಿಂಕ್‌ನ ಮೂಲಕ 2013ರ ಡಿ.2ರಂದು ವಾಟ್ಸ್ ಆಫ್ ಗ್ರೂಪ್‌ನಲ್ಲಿ ಸೇರ್ಪಡೆಯಾಗಿದ್ದರು. ಆ ಗ್ರೂಪ್‌ನಲ್ಲಿ ಹಲವಾರು ಅಡ್ಡಿನ್, ಸದಸ್ಯರಿದ್ದರು. ಗ್ರೂಪ್ ಚೀಫ್ ಅಡ್ಮಿನ್ ಆಗಿದ್ದ ಅಮಿತ್ ಶಾ ಎಂಬಾತ ಪ್ರತೀ ದಿನ ಆನ್‌ಲೈನ್ ವೀಡಿಯೋ ಕ್ಲಾಸ್ ಮೂಲಕ ಸ್ಟಾಕ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ ದುಪ್ಪಟ್ಟು ಮಾಡುವ ಬಗ್ಗೆ ವಿವರಿಸುತ್ತಿದ್ದಾರೆ.

ವಿಜಯ ಅವರು ಅದನ್ನು ಸತ್ಯವೆಂದು ಭಾವಿಸಿ ಹಣ ತೊಡಗಿಸಿದ್ದರು. 2024ರ ಜ. 11ರಿಂದ ಫೆ. 5ರ ವರೆಗೆ ಹಂತ ಹಂತವಾಗಿ ಒಟ್ಟು 18.53 ಲ.ರೂ.ಗಳನ್ನು ಪಾವತಿಸಿದ್ದರು. ಅದನ್ನು ಹಿಂಪಡೆಯಲು ಸ್ಟಾಕ್ ಟ್ರೇಡಿಂಗ್ ಕಂಪೆನಿಯ ಕಸ್ಟಮರ್ ಕೇರ್ ಅವರನ್ನು ಸಂರ್ಪಕಿಸಿದಾಗ ಶೇ. 40 ಕಮಿಷನ್ ಆಗಿ ನೀಡುವಂತೆ ಹಾಗೂ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದರು. ಆಗ ಅನುಮಾನ ಬಂದ ವಿಜಯ ಕುಮಾರ್ ಅವರು ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಯಿತು. ಈ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.