Categories
ತೀರ್ಥಹಳ್ಳಿ

ಕುಪ್ಪಳಿ ಸಮೀಪ ಮಾ.17ಕ್ಕೆ ಪುನೀತ್ ನೆನಪಿನೋತ್ಸವ!

ಕುಪ್ಪಳಿ ಸಮೀಪ ಮಾ.17ಕ್ಕೆ ಪುನೀತ್ ನೆನಪಿನೋತ್ಸವ!
– ವಿಶ್ವಮಾನವ ಕನ್ನಡ ವೇದಿಕೆ, ಪುನೀತ್ ಬ್ರಿಗೇಡ್ ಸಂಸ್ಥೆಯಿಂದ ಕಾರ್ಯಕ್ರಮ
– ಸಿನಿಮಾ, ಟಿವಿ ಖ್ಯಾತ ಕಲಾವಿದರಿಂದ ವಿಶೇಷ ಕಾರ್ಯಕ್ರಮ ಪುನೀತ್ ಮ್ಯೂಸಿಕ್ಸ್ ನೈಟ್ಸ್

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಕುಪ್ಪಳಿ ಸಮೀಪ ಕಲ್ಲುಕೊಡಿಗೆಯಲ್ಲಿ ವಿಶ್ವ ಮಾನವ ಕನ್ನಡ ವೇದಿಕೆ ಹಾಗೂ ಪುನೀತ್ ಬ್ರಿಗೇಡ್ ಸಂಸ್ಥೆ ವತಿಯಿಂದ ಪುನೀತ್ ನೆನಪಿನೋತ್ಸವ ಕಾರ್ಯಕ್ರಮ ಮಾ.17ರ ಭಾನುವಾರ ನಡೆಯಲಿದ್ದು, ಖ್ಯಾತ ಸಿನಿಮಾ ಕಲಾವಿದರಿಂದ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಸಿದ್ದತೆ ನಡೆಯುತ್ತಿದೆ.

ಇನ್ನು ಪುನೀತ್ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ರಕ್ತದಾನ ನೇತ್ರದಾನ ನೊಂದಣಿ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಐದು ಸ್ಥಳಗಳಲ್ಲಿ ಗೋವು ಹಾಗೂ ಪ್ರಾಣಿಗಳಿಗೆ ಕುಡಿಯುವ ನೀರಿನ ತೊಟ್ಟಿಗಳ ನಿರ್ಮಾಣದಂತ ಕಾರ್ಯಕ್ರಮಗಳು ಬೆಳಗ್ಗೆ 9:30ಕ್ಕೆ ಆರಂಭಗೊಳ್ಳಲಿದೆ. ಸಂಜೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಿನಿಮಾ ನಟ, ನಟಿಯರು ಆಗಮಿಸಲಿದ್ದು ಇದೇ ವೇಳೆ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಸಂಜೆ 7 ಗಂಟೆಗೆ ಸಿನಿಮಾ, ಟಿವಿ ಕಲಾವಿದರಿಂದ ವಿಶೇಷ ಪುನೀತ್ ಮ್ಯೂಸಿಕ್ಸ್ ನೈಟ್ಸ್, ಕಾಮಿಡಿ, ಪ್ರಸಿದ್ಧ ನಾಟಕ ಚಿಟ್ಟೆ ಪ್ರದರ್ಶನಗೊಳ್ಳಲಿದೆ.

Categories
ಬೆಂಗಳೂರು ರಾಜ್ಯ

ಲೋಕಸಭಾ ಚುನಾವಣೆ: ವೇಳಾಪಟ್ಟಿ ಪ್ರಕಟ ಬೆನ್ನಲ್ಲೇ ನೀತಿ ಸಂಹಿತೆ ಜಾರಿ.!

ಲೋಕಸಭಾ ಚುನಾವಣೆ: ವೇಳಾಪಟ್ಟಿ ಪ್ರಕಟ ಬೆನ್ನಲ್ಲೇ ನೀತಿ ಸಂಹಿತೆ ಜಾರಿ.!
– ನೀತಿ ಸಂಹಿತೆ ಉಲ್ಲಂಘಿಸಿದರೆ ಏನಾಗುತ್ತದೆ?
– ಯಾವೆಲ್ಲ ಚಟುವಟಿಕೆಗೆ ನಿರ್ಬಂಧ? ಇಲ್ಲಿದೆ ವಿವರ

NAMMUR EXPRESS NEWS
ನವದೆಹಲಿ: ಲೋಕಸಭೆ ಚುನಾವಣೆ ದಿನಾಂಕ ಇಂದು ಮಧ್ಯಾಹ್ನ ಪ್ರಕಟವಾಗಲಿದೆ. ಇದರೊಂದಿಗೆ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕವೂ ಪ್ರಕಟವಾಗಲಿದೆ. ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಒಡಿಶಾ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಆಂಧ್ರಪ್ರದೇಶ ಸೇರಿವೆ. ದಿನಾಂಕಗಳ ಘೋಷಣೆಯ ನಂತರವೇ ಚುನಾವಣಾ ಮಾದರಿ ನೀತಿ ಸಂಹಿತೆ ದೇಶಾದ್ಯಂತ ಜಾರಿಗೆ ಬರುತ್ತದೆ. ನೀತಿ ಸಂಹಿತೆ ಎಂದರೆ ಏನು, ಅದನ್ನು ಯಾರು ಜಾರಿಗೊಳಿಸುತ್ತಾರೆ? ಅದು ಜಾರಿಯಾದ ನಂತರ ಯಾವೆಲ್ಲ ಚಟುವಟಿಕೆಗಳಿಗೆ ನಿರ್ಬಂಧವಿರುತ್ತದೆ ಮತ್ತು ಯಾವುದಕ್ಕೆಲ್ಲ ಅನುಮತಿ ಇದೆ ಎಂಬ ಮಾಹಿತಿ ಇಲ್ಲಿದೆ.

ನೀತಿ ಸಂಹಿತೆ ಎಂದರೇನು?:

ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಕೆಲವು ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ನೀತಿ ಸಂಹಿತೆ ಎಂದು ಕರೆಯಲಾಗುತ್ತದೆ. ಲೋಕಸಭೆ ಅಥವಾ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಈ ನಿಯಮಗಳನ್ನು ಪಾಲಿಸುವುದು ಅಗತ್ಯ. ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ನೀತಿ ಸಂಹಿತೆಯ ಅಡಿಯಲ್ಲಿ ತಿಳಿಸಲಾಗಿದೆ. ಭಾರತದ ಸಂವಿಧಾನದ 324 ನೇ ವಿಧಿಯ ಅಡಿಯಲ್ಲಿ, ಚುನಾವಣಾ ಆಯೋಗವು ಶಾಂತಿಯುತ ಚುನಾವಣೆಗಳಿಗಾಗಿ ನೀತಿ ಸಂಹಿತೆಯನ್ನು ಅನುಸರಿಸಲು ರಾಜಕೀಯ ಪಕ್ಷಗಳಿಗೆ ಸೂಚನೆ ನೀಡುತ್ತದೆ.

ಸಚಿವರು, ಶಾಸಕರಿಗೆ ಏನೇನು ನಿರ್ಬಂಧ?:

ಸಚಿವರು ಸರ್ಕಾರಿ ವೆಚ್ಚದಲ್ಲಿ ಚುನಾವಣಾ ರ್‍ಯಾಲಿ ನಡೆಸುವಂತಿಲ್ಲ. ಈ ಅವಧಿಯಲ್ಲಿ ಸಚಿವರು ತಮ್ಮ ನಿವಾಸದಿಂದ ಕಚೇರಿಗೆ ಹೋಗಲು ಮಾತ್ರ ಸರ್ಕಾರಿ ವಾಹನಗಳನ್ನು ಬಳಸಬಹುದು. ಚುನಾವಣಾ ರ್‍ಯಾಲಿಗಳು ಮತ್ತು ಪ್ರವಾಸಗಳಿಗೆ ಅವುಗಳನ್ನು ಬಳಸಬಾರದು.

ನೀತಿ ಸಂಹಿತೆ ನಿಯಮಗಳು ಹೀಗಿವೆ:

ನೀತಿ ಸಂಹಿತೆ ಜಾರಿಯಾದ ನಂತರ ಯಾವುದೇ ರಾಜಕೀಯ ಪಕ್ಷಕ್ಕೆ ಲಾಭವಾಗುವಂತೆ ಯಾವುದೇ ಸಂದರ್ಭದಲ್ಲಿ ಸರ್ಕಾರದ ಹಣವನ್ನು ಬಳಸುವಂತಿಲ್ಲ. ಸರ್ಕಾರದ ಘೋಷಣೆಗಳು, ಉದ್ಘಾಟನೆಗಳು, ಶಂಕುಸ್ಥಾಪನೆ ಮುಂತಾದ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದಿಲ್ಲ. ಆದರೆ ಕೆಲವು ಕೆಲಸಗಳು ಈಗಾಗಲೇ ಪ್ರಾರಂಭವಾಗಿದ್ದರೆ ಅದನ್ನು ಮುಂದುವರಿಸಬಹುದು.

ನೀತಿ ಸಂಹಿತೆ ನಿಯಮಗಳು ಹೀಗಿವೆ:

ನೀತಿ ಸಂಹಿತೆ ಜಾರಿಯಾದ ನಂತರ ಯಾವುದೇ ರಾಜಕೀಯ ಪಕ್ಷಕ್ಕೆ ಲಾಭವಾಗುವಂತೆ ಯಾವುದೇ ಸಂದರ್ಭದಲ್ಲಿ ಸರ್ಕಾರದ ಹಣವನ್ನು ಬಳಸುವಂತಿಲ್ಲ. ಸರ್ಕಾರದ ಘೋಷಣೆಗಳು, ಉದ್ಘಾಟನೆಗಳು, ಶಂಕುಸ್ಥಾಪನೆ ಮುಂತಾದ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದಿಲ್ಲ. ಆದರೆ ಕೆಲವು ಕೆಲಸಗಳು ಈಗಾಗಲೇ ಪ್ರಾರಂಭವಾಗಿದ್ದರೆ ಅದನ್ನು ಮುಂದುವರಿಸಬಹುದು. ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಅಥವಾ ಯಾವುದೇ ಧಾರ್ಮಿಕ ಸ್ಥಳವನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ.

ನೀತಿ ಸಂಹಿತೆಯ ಅಡಿಯಲ್ಲಿ, ಸರ್ಕಾರವು ಯಾವುದೇ ಸರ್ಕಾರಿ ಅಧಿಕಾರಿ ಅಥವಾ ಉದ್ಯೋಗಿಯನ್ನು ವರ್ಗಾಯಿಸಲು ಅಥವಾ ಪೋಸ್ಟ್ ಮಾಡಲು ಸಾಧ್ಯವಿಲ್ಲ. ವರ್ಗಾವಣೆ ಬಹಳ ಮುಖ್ಯವಾಗಿದ್ದರೆ ಚುನಾವಣಾ ಆಯೋಗದಿಂದ ಅನುಮತಿ ಪಡೆಯುವುದು ಅಗತ್ಯ. ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಸಭೆ ಆಯೋಜಿಸುವ, ಮೆರವಣಿಗೆ ನಡೆಸುವ ಮತ್ತು ಧ್ವನಿವರ್ಧಕಗಳನ್ನು ಬಳಸುವ ಮೊದಲು ಸ್ಥಳೀಯ ಪೊಲೀಸ್‌ ಅಧಿಕಾರಿಗಳಿಂದ ಲಿಖಿತ ಅನುಮತಿಯನ್ನು ಪಡೆಯುವುದು ಅವಶ್ಯಕ. ರಾತ್ರಿ 10.00 ರಿಂದ ಬೆಳಗ್ಗೆ 6.00 ರವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.

ನೀತಿ ಸಂಹಿತೆ ಉಲ್ಲಂಘಿಸಿದರೆ ಏನಾಗುತ್ತದೆ?

ಯಾವುದೇ ರಾಜಕೀಯ ಪಕ್ಷ ಅಥವಾ ಅದರ ಅಭ್ಯರ್ಥಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದರೆ, ಅಂಥವರನ್ನು ಪ್ರಚಾರದಿಂದ ನಿಷೇಧಿಸಬಹುದು. ಅಭ್ಯರ್ಥಿಯು ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಬಹುದು. ಇಷ್ಟೇ ಅಲ್ಲ, ಅಗತ್ಯವಿದ್ದರೆ, ಅಭ್ಯರ್ಥಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಸಹ ದಾಖಲಿಸಬಹುದು ಮತ್ತು ಆತ ಜೈಲುಪಾಲಾಗುವ ಸಾಧ್ಯತೆಯೂ ಇದೆ.

ಜನ ಸಾಮಾನ್ಯರಿಗೆ ನೀತಿ ಸಂಹಿತೆ ಹೇಗೆ ಅನ್ವಯ?:

ನೀತಿ ಸಂಹಿತೆ ಕೇವಲ ರಾಜಕೀಯ ಪಕ್ಷಗಳಿಗೆ ಅಥವಾ ಅಭ್ಯರ್ಥಿಗಳಿಗೆ ಸೀಮಿತವಾಗಿಲ್ಲ. ಇದು ಸಾಮಾನ್ಯರಿಗೂ ಅನ್ವಯಿಸುತ್ತದೆ. ಅಂದರೆ, ಯಾರಾದರೂ ತಮ್ಮ ನಾಯಕರ ಪ್ರಚಾರದಲ್ಲಿ ತೊಡಗಿದ್ದರೆ, ಅವರು ಈ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಮೇಲೆ ತಿಳಿಸಿದ ನಿಯಮಗಳನ್ನು ನಿರ್ಲಕ್ಷಿಸಿ ಕೆಲವು ಕೆಲಸಗಳನ್ನು ಮಾಡಲು ಯಾವುದೇ ರಾಜಕಾರಣಿ ನಿಮ್ಮನ್ನು ಕೇಳಿದರೆ, ನೀತಿ ಸಂಹಿತೆಯ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಹೇಳುವ ಮೂಲಕ ನೀವು ನಿರಾಕರಿಸಬಹುದು. ಯಾರಾದರೂ ಪ್ರಚಾರ ಮಾಡಿ ಸಿಕ್ಕಿಬಿದ್ದರೆ ಕ್ರಮ ಕೈಗೊಳ್ಳಬಹುದು.

Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

ಪಾನಿಪುರಿ ಸೇವಿಸಿ 19 ಮಕ್ಕಳು ಅಸ್ವಸ್ಥ
-ಕೊಳೆತ ಆಹಾರ ತಿಂದು 30ಕ್ಕೂ ಹೆಚ್ಚು ಕುರಿ, ಮೇಕೆ ಸಾವು!
– ಈಜಲು ಹೋಗಿದ್ದ ಇಬ್ಬರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಸಾವು
– ಸೂಪರ್ ಸ್ಟಾರ್ ರಜನಿಕಾಂತ್ ಹೆಸರಲ್ಲಿ ಲಕ್ಷ ಲಕ್ಷ ದೋಚಿದ ಕಾಸ್ಟಿಂಗ್ ಡೈರೆಕ್ಟರ್‌

NAMMUR EXPRESS NEWS
ದಾವಣಗೆರೆ: ಪಾನಿಪುರಿ ತಿಂದು 19 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ನಡೆದಿದೆ. ಮಲೆಬೆನ್ನೂರಿನ ಜಾಮಿಯಾ ಮಸೀದಿ ಬಳಿ ಘಟನೆ ನಡೆದಿದ್ದು, ಉಪವಾಸ ಅಂತ್ಯ ಮಾಡಿದ ನಂತರ ಮಸೀದಿ ಮುಂಭಾಗ ಮಾರಾಟ ಮಾಡುತ್ತಿದ್ದ ಪಾನಿಪುರಿ ತಿಂದು 19 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಪಾನಿಪುರಿ ತಿಂದು ಕೆಲವೇ ಹೊತ್ತಿನಲ್ಲಿ ವಾಂತಿಯಾಗಿ ಮಕ್ಕಳು ಅಸ್ವಸ್ಥರಾಗಿದ್ದಾರೆ. ಕೂಡಲೇ ಪೋಷಕರು ಮಕ್ಕಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 19 ಮಕ್ಕಳ ಪೈಕಿ 4 ಮಕ್ಕಳ ಆರೋಗ್ಯ ಚಿಂತಾಜನಕವಾಗಿದೆ. ಇವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಹರಿಹರ ತಹಶೀಲ್ದಾರ್ ಗುರುಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಳೆತ ಆಹಾರ ತಿಂದು 30ಕ್ಕೂ ಹೆಚ್ಚು ಕುರಿ, ಮೇಕೆ ಸಾವು!

ಕೊಪ್ಪಳ : ಆನೆಗೊಂದಿ ಉತ್ಸವದಲ್ಲಿ ಉಳಿದ ಆಹಾರ ಪದಾರ್ಥ ತಿಂದು 30ಕ್ಕೂ ಹೆಚ್ಚು ಕುರಿ, ಮೇಕೆಗಳು ಸಾವನ್ನಪ್ಪಿದ್ದು, 180ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡ ದುರ್ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ಕಡೆಬಾಗಿಲು ಗ್ರಾಮದ ಬಳಿ ನಡೆದಿದೆ. ಆನೆಗೊಂದಿ ಉತ್ಸವಕ್ಕೆ ಬಂದವರಿಗೆ ತಯಾರಿಸಿದ್ದ ಆಹಾರ. ಉತ್ಸವ ಮುಗಿದ ಬಳಿಕ ಉಳಿದ ಆಹಾರ ಪದಾರ್ಥವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಅಲ್ಲೇ ಬಿಸಾಡಿದ್ದಕ್ಕೆ ನಡೆದ ದುರ್ಘಟನೆ. ಕೊಳೆತ ಆಹಾರ ಪದಾರ್ಥ ತಿಂದು ಸಾವನ್ನಪ್ಪಿರುವ ಕುರಿ, ಮೇಕೆಗಳು. ಮೂಕಪ್ರಾಣಿಗಳ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕುರಿಗಾಯಿಗಳುಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಜಲು ಹೋಗಿದ್ದ ಇಬ್ಬರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಸಾವು

ಬೆಂಗಳೂರು: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ. ದಕ್ಷಿಣ ಬೆಂಗಳೂರಿನ ಕಗ್ಗಲೀಪುರ ಬಳಿಯ ಅಗರ ಕೆರೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ವರದಿಗಳು ತಿಳಿಸಿವೆ. ನವೀನ್ ಮತ್ತು ಪೃಥ್ವಿರಾಜ್ (16) ಮೃತಪಟ್ಟ ವಿದ್ಯಾರ್ಥಿಗಳು. ಒಂಭತ್ತು ಮಂದಿ ಸ್ನೇಹಿತರೊಂದಿಗೆ ಈ ಇಬ್ಬರೂ ಕೆರೆಗೆ ಈಜಲು ತೆರಳಿದ್ದರು. ಮಧ್ಯಾಹ್ನದ ಸುಮಾರಿಗೆ ಈಜಲು ಮುಂದಾದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ನೇಹಿತರು ಇವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಸಾಧ್ಯವಾಗಲಿಲ್ಲ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು, ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ತುರ್ತು ಸೇವಾ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ನಂತರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು. ಈ ದುರ್ಘಟನೆಯ ನಂತರ ಕಗ್ಗಲಿಪುರ ಪೊಲೀಸರು ಅಸ್ವಾಭಾವಿಕ ಮರಣ ವರದಿ (ಯುಡಿಆರ್) ಪ್ರಕರಣ ದಾಖಲಿಸಿದ್ದಾರೆ. ಎಲ್ಲಾ ಬಾಲಕರು ಕೆಂಗೇರಿ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಹೆಸರಲ್ಲಿ ಲಕ್ಷ ಲಕ್ಷ ದೋಚಿದ ಕಾಸ್ಟಿಂಗ್ ಡೈರೆಕ್ಟರ್‌

ಬೆಂಗಳೂರು: ನಟಿ ಆಗಬೇಕೆಂಬ ಮಹಾದಾಸೆಗೆ ಬಿದ್ದ ಯುವತಿಯೊಬ್ಬಳು ಲಕ್ಷಾಂತರ ರೂ. ಹಣವನ್ನು ಕಳೆದುಕೊಂಡಿದ್ದಾಳೆ. ಸ್ಟಾರ್‌ ನಟರ ಹೆಸರೇಳಿಕೊಂಡು ವ್ಯಕ್ತಿಯೊಬ್ಬ ಯುವತಿಯಿಂದ ಹಣ ಸುಲಿಗೆ ಮಾಡಿದ್ದಾನೆ. ರಜನಿಕಾಂತ್ ಅವರ ಹೊಸ ಸಿನಿಮಾ Thalaiver 171- code red ಸಿನಿಮಾ ಹೆಸರು ಬಳಸಿಕೊಂಡು ಮೋಸ ಮಾಡಲಾಗಿದೆ. ಕಾಸ್ಟಿಂಗ್ ಡೈರೆಕ್ಟರ್ ಸುರೇಶ್ ಕುಮಾರ್ ಎಂಬಾತ ರಜನಿಕಾಂತ್ ಚಿತ್ರದಲ್ಲಿ ಪಾತ್ರವೊಂದು ಖಾಲಿ ಇದೆ ಎಂದು ಇನ್ಸ್ಟಾಗ್ರಾಂನಲ್ಲಿ ವಿಡಿಯೊವನ್ನು ಹರಿಬಿಟ್ಟಿದ್ದ. ಇದನ್ನು ನೋಡಿ ಯುವತಿಯೊಬ್ಬಳು ಸುರೇಶ್ ಕುಮಾರ್‌ನನ್ನು ಸಂಪರ್ಕ ಮಾಡಿದ್ದಳು. ನಂತರ ಕಾಸ್ಟಿಂಗ್‌ಗೆ ಇಷ್ಟು ಹಣ ಖರ್ಚಾಗುತ್ತೆ ಎಂದು ಸಬೂಬು ಹೇಳಿ, ಹಂತ ಹಂತವಾಗಿ 3,94,000 ರೂ. ಹಣವನ್ನು ದೋಚಿದ್ದಾನೆ.

ಇತ್ತ ಯುವತಿಯಿಂದ ಹಣ ಸುಲಿಗೆ ಮಾಡಿ, ಅವಕಾಶವನ್ನು ಕೊಡದೆ, ಹಣವನ್ನೂ ವಾಪಾಸ್ ಕೊಡದೆ ಪರಾರಿ ಆಗಿದ್ದಾನೆ. ಇತ್ತ ಹಣವೂ ಇಲ್ಲದೆ ಅವಕಾಶವೂ ಇಲ್ಲದೇ ಮೋಸ ಹೋದ ಯುವತಿ ಕಂಗಲಾಗಿದ್ದಾಳೆ. ಕಾಸ್ಟಿಂಗ್ ಡೈರೆಕ್ಟರ್ ಸುರೇಶ್ ಕುಮಾರ್ ವಿರುದ್ಧ ಐಟಿ ಆಕ್ಟ್ ನಡಿ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Categories
ಆರೋಗ್ಯ ರಾಜ್ಯ ಸಿನಿಮಾ

ಪುನೀತ್ ಹೃದಯ ಜ್ಯೋತಿ ಯೋಜನೆ ಜಾರಿ

ಪುನೀತ್ ಹೃದಯ ಜ್ಯೋತಿ ಯೋಜನೆ ಜಾರಿ
– ತೀವ್ರ ಹೃದಯಾಘಾತ ತಡೆಯಲು ಉಚಿತ ಇಂಜೆಕ್ಷನ್!
– ಶೀಘ್ರ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಯೋಜನೆ ಅನುಷ್ಠಾನ

NAMMUR EXPRESS NEWS
ಧಾರವಾಡ : ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯ ಸರ್ಕಾರವು ಡಾ.ಪುನೀತ್ ರಾಜಕುಮಾರ ನೆನಪಿಗಾಗಿ ಹೃದಯಜ್ಯೋತಿ ಯೋಜನೆ ಅನುಷ್ಠಾನಗೊಳಿಸುತ್ತಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಹೇಳಿದರು.

ಇಲ್ಲಿಯ ಸತ್ತೂರಿನ ಡಾ.ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಆರೋಗ್ಯ ಇಲಾಖೆಯು ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಈ ಯೋಜನೆಗೆ ಚಾಲನೆ ನೀಡಿದ ಅವರು, ಅನೇಕ ಸಂದರ್ಭಗಳಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿಸಿದ ಕಾಯಿಲೆಗಳಿಗೆ ತುರ್ತಾಗಿ ಸರಿಯಾದ ಚಿಕಿತ್ಸೆ ಲಭಿಸದೆ ಸಾವು ಸಂಭವಿಸುತ್ತವೆ. ಇದನ್ನು ತಡೆಗಟ್ಟಲು ತಾಲೂಕು ಆಸ್ಪತ್ರೆಗಳಿಗೂ ಹೃದಯ ಸಂಬಂಧಿ ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಿಸಲು ಹೃದಯ ಜ್ಯೋತಿ ಯೋಜನೆ ಜಾರಿಗೊಳಿಸಿದೆ ಎಂದರು.

ಈ ಯೋಜನೆಯನ್ನು ಮೊದಲ ಹಂತದಲ್ಲಿ ರಾಜ್ಯದ 71 ತಾಲೂಕು ಆಸ್ಪತ್ರೆ ಮತ್ತು 15 ಜಿಲ್ಲಾ ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸಿದ್ದು, ಬರುವ ವರ್ಷ ರಾಜ್ಯದ ಎಲ್ಲ ತಾಲೂಕು ಆಸತ್ರೆಗಳಿಗೆ ಯೋಜನೆ ವಿಸ್ತರಿಸಲಾಗುತ್ತದೆ. ವಿವಿಧ ಜಿಲ್ಲಾಸ್ಪತ್ರೆಗಳ 65 ಹೃದಯತಜ್ಞ ವೈದ್ಯರು ಈ ಸೇವೆ ಅನುಷ್ಠಾನದಲ್ಲಿ ಆನ್‌ಲೈನ್ ಸಂಪರ್ಕದಲ್ಲಿದ್ದು ರೋಗಿಯ ಆರೋಗ್ಯ ಮತ್ತು ಜೀವ ರಕ್ಷಣೆಗೆ ತಮ್ಮ ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ. ಯಾವುದೇ ವ್ಯಕ್ತಿಗೆ ಹೃದಯಾಘಾತ ಸಂಭವಿಸಿದರೆ ತಕ್ಷಣ ಈ 30 ಸಾವಿರ ಮೊತ್ತದ ಇಂಜೆಕ್ಷನ್ ಉಚಿತವಾಗಿ ನೀಡಲಾಗುತ್ತದೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಅತೀ ಜನನಿಬಿಡ ಪ್ರದೇಶಗಳಲ್ಲಿನ ಜನರಿಗೆ ಹೃದಯ ಸಂಬಂಧಿ ಕಾಯಿಲೆ ಕಂಡುಬಂದಾಗ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಲು ಸರ್ಕಾರ ಕ್ರಮವಹಿಸಲಿದೆ ಎಂದು ಹೇಳಿದರು.

ಹೃದಯ ಜ್ಯೋತಿ ಯೋಜನೆಯ ತರಬೇತಿ ಪುಸ್ತಕ ಬಿಡುಗಡೆ ಮಾಡಿದೆ ಕಾರ್ಮಿಕ ಸಚಿವ ಸಂತೋಷ ಲಾಡ್. ಇದೊಂದು ರಾಷ್ಟ್ರ ಮಾದರಿ ಯೋಜನೆ. ಅಸಹಾಯಕರ, ಬಡವರ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದರು.

Categories
ಕರಾವಳಿ ರಾಜಕೀಯ ರಾಜ್ಯ

ಅರುಣ್‌ ಪುತ್ತಿಲ ಮರು ಪ್ರವೇಶಕ್ಕೆ ತೆರೆಯದ ಬಿಜೆಪಿ ಬಾಗಿಲು!

ಅರುಣ್‌ ಪುತ್ತಿಲ ಮರು ಪ್ರವೇಶಕ್ಕೆ ತೆರೆಯದ ಬಿಜೆಪಿ ಬಾಗಿಲು!
– ಪುತ್ತಿಲ ಬಿಜೆಪಿ ಸೇರ್ಪಡೆಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರ ತೀವ್ರ ವಿರೋಧ
– ಮುಂದುವರಿದ ಸಂಧಾನ ಮಾತುಕತೆ: ಏನಾಗುತ್ತೆ ರಾಜಕೀಯ?

NAMMUR EXPRESS NEWS
ಪುತ್ತೂರು: ಅರುಣ್‌ ಪುತ್ತಿಲ ಬಿಜೆಪಿಗೆ ಮರು ಸೇರ್ಪಡೆಯಾಗುವ ವಿಚಾರ ಇದೀಗ ತಿರುವು ಪಡೆದುಕೊಂಡಿದ್ದು, ಪುತ್ತಿಲ ಪಕ್ಷಕ್ಕೆ ವಾಪಾಸ್ಸಾಗುವುದಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ರಾಜ್ಯ ನಾಯಕರನ್ನು ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ ಪುತ್ತಿಲ ಅವರು ಭೇಟಿ ಮಾಡಿದ್ದರು. ಅತ್ತ ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರು ಸೇರಿದಂತೆ ಪುತ್ತಿಲ ಪರಿವಾರದ ನಾಯಕರು ಕೂಡ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಮರು ಸೇರ್ಪಡೆ ಹಾದಿಯನ್ನು ಸುಗಮಗೊಳಿಸಿದ್ದರು. ಅಲ್ಲಿನ ನಡೆದಿದ್ದ ಮಾತುಕತೆ ಪ್ರಕಾರ, ಪುತ್ತಿಲ ಅವರು ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಬೇಕಿತ್ತು.

ಆದರೆ, ಬಿಜೆಪಿ ಜಿಲ್ಲಾ ನಾಯಕರು ಹಾಗೂ ಪುತ್ತಿಲ ಪರಿವಾರದವರ ಲೆಕ್ಕಾಚಾರ, ನಿರೀಕ್ಷೆಗಳು ಈಗ ಉಲ್ಟಾ ಹೊಡೆದಿದೆ. ಏಕೆಂದರೆ, ಅರುಣ್‌ ಪುತ್ತಿಲ ಅವರು ಬಿಜೆಪಿಗೆ ವಾಪಾಸ್ಸಾಗುವುದಕ್ಕೆ ಪುತ್ತೂರಿನ ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪುತ್ತಿಲ ಅವರು ಸ್ಥಳೀಯ ಮುಖಂಡರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅಲ್ಲದೆ, ಪಕ್ಷಕ್ಕೆ ವಾಪಾಸ್‌ ಬರುವುದಾದರೆ ಅವರಿಗೆ ಬಿಜೆಪಿಯಲ್ಲಿ ಯಾವುದೇ ಸ್ಥಾನ-ಮಾನ ನೀಡಬಾರದು ಹಾಗೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬೆಂಗಳೂರಿಗೆ ಹೋಗಿ ಅಲ್ಲಿನ ನಾಯಕರೊಂದಿಗೆ ಮಾತುಕತೆ ನಡೆಸಿರುವುದು ಸ್ಥಳೀಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.

ಈ ದಿಢೀರ್‌ ಬೆಳವಣಿಗೆಗಳಿಂದಾಗಿ ಬಿಜೆಪಿಯ ಜಿಲ್ಲಾ ನಾಯಕರು ಕೂಡ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಕೊಂಡಿದ್ದಾರೆ. ಹೀಗಾಗಿ, ಬೆಂಗಳೂರಿನಲ್ಲಿ ಪುತ್ತಿಗೆ ಮರು ಸೇರ್ಪಡೆಯಾಗುವುದಾಗಿ ಸುಳಿವು ಕೊಟ್ಟು, ಇದೀಗ ಆ ಬಗ್ಗೆ ಉಲ್ಟಾ ಹೇಳಿಕೆ ನೀಡುತ್ತಿದ್ದಾರೆ. ನಿನ್ನೆ ಪುತ್ತೂರಿನಲ್ಲಿ ಪುತ್ತಿಲ ಪಕ್ಷಕ್ಕೆ ಸೇರುವ ವಿಚಾರವಾಗಿ ಸ್ಥಳೀಯ ಮುಖಂಡರೊಂದಿಗೆ ಸಂಧಾನ ಮಾತುಕತೆ ನಡೆಸಿದ್ದು, ಅದು ವಿಫಲಗೊಂಡಿತ್ತು. ಆ ಬಳಿಕ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಕೂಡ ಪುತ್ತಿಲ ಬಿಜೆಪಿಗೆ ವಾಪಾಸ್‌ ಬರುವುದು ಮಾಧ್ಯಮದ ಸೃಷ್ಟಿ ಎನ್ನುವ ಹೇಳಿಕೆ ಕೊಟ್ಟಿದ್ದರು.

ಈ ಎಲ್ಲ ಬೆಳವಣಿಗೆಗಳ ನಂತರ ಜಿಲ್ಲೆಯ ಆರ್‌ಎಸ್‌ಎಸ್‌ ನಾಯಕರು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ್ದು, ಇಂದು ಸ್ಥಳೀಯ ಬಿಜೆಪಿ ಮುಖಂಡರ ಜತೆ ಸಂಧಾನ ಸಭೆ ನಡೆಸಲಿದ್ದಾರೆ. ಇಂದಿನ ಸಭೆಯಲ್ಲಿ ಒಮ್ಮತದ ನಿರ್ಧಾರ ಹೊರಬಂದ ಬಳಿಕವಷ್ಟೇ ಪುತ್ತಿಲ ಬಿಜೆಪಿಗೆ ಬರುವ ಹಾದಿ ಸುಗಮವಾಗಬಹುದು. ಸದ್ಯ ಲೋಕಸಭಾ ಚುನಾವಣೆ ಕೂಡ ಬಂದಿರುವ ಕಾರಣ ಪುತ್ತಿಲ ವರ್ಸಸ್‌ ಬಿಜೆಪಿ ನಡುವಿನ ಬಿಕ್ಕಟ್ಟು ಅತ್ಯಂತಗೊಳಿಸುವ ಸಂದಿಗ್ಧ ಪರಿಸ್ಥಿತಿಯಲ್ಲಿ ಪುತ್ತಿಲ ಪರಿವಾರ ಮತ್ತು ಬಿಜೆಪಿ ನಾಯಕರು ಸಿಲುಕಿರುವುದು ಮಾತ್ರ ವಾಸ್ತವ. ಇಲ್ಲದಿದ್ದರೆ ಇದೇ ವೈಮನಸ್ಸು ಚುನಾವಣೆಯಲ್ಲಿ ಬಿಜೆಪಿಗೆ ಮತ್ತೆ ಹಿನ್ನಡೆಯುಂಟು ಮಾಡಿದರೂ ಅಚ್ಚರಿಯಿಲ್ಲ.

Categories
ತೀರ್ಥಹಳ್ಳಿ

ಕಿಮ್ಮನೆ ರತ್ನಾಕ‌ರ್ ಮನವಿಗೆ ಸ್ಪಂದಿಸಿದ ಸರ್ಕಾರ

ಕಿಮ್ಮನೆ ರತ್ನಾಕ‌ರ್ ಮನವಿಗೆ ಸ್ಪಂದಿಸಿದ ಸರ್ಕಾರ
– ಕರ್ನಾಟಕ ರಾಜ್ಯ ಸರ್ಕಾರ ತಾಲೂಕಿನ ಪುರಾಣ ಪ್ರಸಿದ್ದ ದೇಗುಲಗಳ ಅಭಿವೃದ್ಧಿಗೆ ಹಣ ಮಂಜೂರು
– ಕೋದಂಡರಾಮ ಸ್ವಾಮಿ ದೇವಸ್ಥಾನಕ್ಕೆ 25 ಲಕ್ಷ
– ಸುರಾನಿ, ಆಗುಂಬೆ ಜಾವಗಲ್‌ ಎರಡು ದೇವಸ್ಥಾನ ಕ್ಕೆ ತಲಾ 10 ಲಕ್ಷ

NAMMUR EXPRESS NEWS
ತೀರ್ಥಹಳ್ಳಿ : ತಾಲೂಕಿನ ಪುರಾಣ ಪ್ರಸಿದ್ದ ದೇಗುಲಗಳಲ್ಲಿ ಒಂದಾದ ಶ್ರೀ ಕೋದಂಡರಾಮ ಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ 25 ಲಕ್ಷ ಹಣ ಮತ್ತು ಸುರಾನಿ ಗಣಪತಿಕಟ್ಟೆಯ ವಿನಾಯಕ ದೇವಸ್ಥಾನ ಹಾಗೂ ಆಗುಂಬೆ ಜಾವಗಲ್‌ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ತಲಾ 10 ಲಕ್ಷ ಹಣವನ್ನು ಕರ್ನಾಟಕ ರಾಜ್ಯ ಸರ್ಕಾರ ಮಂಜೂರು ಮಾಡಿದೆ.

ದೇವಸ್ಥಾನದ ಜೀರ್ಣೋದ್ದಾರದ ಸಲುವಾಗಿ ವಿಶೇಷ ಕಾಳಜಿ ವಹಿಸಿ ಅಯೋಧ್ಯೆಯ ರಾಮಮಂದಿರದ ಉದ್ಘಾಟನೆ ದಿನ ಕೋದಂಡರಾಮ ದೇವಸ್ಥಾನದ ಸ್ವಚ್ಛತೆ ಹಾಗೂ ವಿಶೇಷ ಪೂಜೆ ಸಲ್ಲಿಸಿ ಜೀರ್ಣೋದ್ದಾರ ಮಾಡುತ್ತೇವೆ ಎಂದು ಹೇಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಎರಡು ತಿಂಗಳ ಒಳಗಾಗಿ ಹಣ ಮಂಜೂರು ಮಾಡಿಸಿದ್ದಾರೆ. ಒಟ್ಟಿನಲ್ಲಿ ಕಿಮ್ಮನೆ ರತ್ನಾಕರ್ ನುಡಿದಂತೆ, ಕೊಟ್ಟ ಮಾತಿನಂತೆ ದೇವಸ್ಥಾನಕ್ಕೆ ಹಣ ಮಂಜೂರು ಮಾಡಿಸಿದ್ದು ದೇವಸ್ಥಾನದ ಜೀರ್ಣೋದ್ದಾರ ಆರಂಭವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Categories
ಬೆಂಗಳೂರು ರಾಜಕೀಯ ರಾಜ್ಯ

ಬಿಎಸ್‌ವೈ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣ.!

ಬಿಎಸ್‌ವೈ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣ.!
– ಸಿಐಡಿ ತನಿಖೆಗೆ ವರ್ಗಾಯಿಸಿದ ಸರ್ಕಾರ

NAMMUR EXPRESS NEWS
ಬೆಂಗಳೂರು: ಹಿರಿಯ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಪೋಕೋ ಕಾಯ್ದೆಯಡಿ ದಾಖಲಾಗಿರುವ ಎಫ್ ಐಆರ್ ಗೆ ಸಂಬಂಧಿಸಿದಂತೆ ತನಿಖೆಯ ಹೊಣೆಯನ್ನು ಅಪರಾಧ ತನಿಖಾ ಇಲಾಖೆಗೆ ವರ್ಗಾಯಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಡಿಜಿ ಹಾಗೂ ಐಜಿಪಿ ಅಲೋಕ್ ಮೋಹನ್ ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧದ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಬಗ್ಗೆ ಶುಕ್ರವಾರ ಸಂಜೆ ವೇಳೆ ಆದೇಶ ಹೊರಡಿಸುವ ಸಾಧ್ಯತೆ ದಟ್ಟವಾಗಿದೆ. ಅಪ್ರಾಪ್ತಯ ಮೇಲೆ ಈ ಹಿಂದೆ ಆಗಿದ್ದ ಅತ್ಯಾಚಾರದ ಬಗ್ಗೆ ಸಹಾಯಯಾಚಿಸಲು ತೆರಳಿದ್ದಾಗ ಘಟನೆ ನಡೆದಿದೆ.

9 ನಿಮಿಷಗಳ ಕಾಲ ಮೊದಲು ಮಾತನಾಡಿದ್ದ ಮಾಜಿ ಸಿಎಂ ಯಡಿಯೂರಪ್ಪ, ಅನಂತರ ಅಪ್ರಪ್ತೆಯನ್ನು ರೂಂ ಒಳಗೆ ಕರೆದು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಅಪ್ರಪ್ತೆಯ ಖಾಸಗಿ ಭಾಗ ಮುಟ್ಟಿರುವ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ರೂಂನಿಂದ ಹೊರ ಬಂದು ಯಡಿಯೂರಪ್ಪ ಅವರು ಕ್ಷಮೆಯಾಚಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ವಿಚಾರವನ್ನ ಯಾರಿಗೂ ಹೇಳಬಾರದೆಂದು ಹೆದರಿಸಿ ನಮ್ಮನ್ನ ತಡೆದಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಜಿ ಪರಮೇಶ್ವರ, ಯಡಿಯೂರಪ್ಪ ಒಬ್ಬ ಹಿರಿಯ ರಾಜಕಾರಣಿ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ನಿನ್ನೆ ರಾತ್ರಿ ಒಬ್ಬ ಮಹಿಳೆ ದೂರು ಕೊಟ್ಟಿದ್ದಾರೆ. ಇದರನ್ನು ಪರಿಗಣಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾನೂನು ಪ್ರಕಾರ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದಿದ್ದರು. ಅನ್ಯಾಯ ಆಗಿದೆ ಎಂದು ನನ್ನ ಬಳಿ ಬಂದಿದ್ದರು. ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದರು. ಅದಾದ ಮೇಲೆ ನನ್ನ ವಿರುದ್ಧ ಏನೇನೋ ಮಾತನಾಡಿದರು. ಬಳಿಕ ಅವರನ್ನ ಕಮಿಷನ‌ರ್ ಬಳಿ ಕಳಿಸಿಕೊಟ್ಟೆ. ಪ್ರಕರಣ ರಾಜಕೀಯ ಪ್ರೇರಿತ ಅಲ್ಲ. ಇದನ್ನು ಕಾನೂನು ರೀತಿಯಲ್ಲಿ ಎದುರಿಸುತ್ತೇನೆ ಎಂದೂ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದರು.

Categories
ಕರಾವಳಿ ಮಂಗಳೂರು

ಆಳ್ವಾಸ್ ನಿಂದ 10 ಕೋಟಿಗೂ ಮಿಕ್ಕಿದ ವಿದ್ಯಾರ್ಥಿವೇತನ”

ಆಳ್ವಾಸ್ ನಿಂದ 10 ಕೋಟಿಗೂ ಮಿಕ್ಕಿದ ವಿದ್ಯಾರ್ಥಿವೇತನ”
– ಮಾ.31, ಎ.14ರಂದು ಆಳ್ವಾಸ್ ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ
– ಯಾರಿಗೆ ಸಿಗುತ್ತೆ ವಿದ್ಯಾರ್ಥಿ ವೇತನ ಇಲ್ಲಿದೆ ಮಾಹಿತಿ

NAMMUR EXPRESS NEWS
ಮಂಗಳೂರು: “ನಾಲ್ಕು ದಶಕಗಳಿಂದ ನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ದತ್ತು ಸ್ವೀಕಾರ, ಸಹಾಯಧನ, ಪ್ರೋತ್ಸಾಹಧನ, ವಿವಿಧ ಶಿಷ್ಯವೇತನ, ಬಹುಮಾನ, ಪುರಸ್ಕಾರಗಳನ್ನು ನೀಡುತ್ತಾ ಬಂದಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಈ ಬಾರಿ ಪಿಯುಸಿ ವಿದ್ಯಾರ್ಥಿಗಳಿಗೆ ಎರಡು ವರ್ಷಕ್ಕೆ 10 ಕೋಟಿಗೂ
ಅಧಿಕ ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿ ವೇತನ ಘೋಷಿಸಿದೆ” ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

“10ನೇ ತರಗತಿಯಲ್ಲಿ ಸಿಬಿಎಸ್‌ಸಿ (ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ) ಐಸಿಎಸ್‌ಇ (ಭಾರತೀಯ ಪ್ರೌಢಶಿಕ್ಷಣದ ಪ್ರಮಾಣ ಪತ್ರ) ಹಾಗೂ ರಾಜ್ಯ ಪಠ್ಯಕ್ರಮ (ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ) ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈ ಶೈಕ್ಷಣಿಕ ವಿದ್ಯಾರ್ಥಿ ವೇತನ ಪರೀಕ್ಷೆಯನ್ನು ಬರೆಯಬಹುದು. ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುವುದು. ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದ ವಿದ್ಯಾರ್ಥಿಗಳು ದೇಶದಲ್ಲೇ ಅತ್ಯುತ್ತಮ ಹಾಗೂ ಅನನ್ಯ ಮಾದರಿಯ ಶಿಕ್ಷಣ ನೀಡುತ್ತಿರುವ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಭಾಗದಲ್ಲಿ ಪದವಿಪೂರ್ವ ಶಿಕ್ಷಣ ಪಡೆಯಲು ಅರ್ಹರಾಗಿರುತ್ತಾರೆ.

ಗಣಿತ, ವಿಜ್ಞಾನ ಹಾಗೂ ಸಾಮಾನ್ಯ ಸಾಮರ್ಥ್ಯ ಕುರಿತು 100 ನಿಮಿಷಗಳ ಪರೀಕ್ಷೆಯು ಮಾರ್ಚ್ 31ರಂದು ಸಿಬಿಎಸ್‌ಸಿ ಮತ್ತು ಐಸಿಎಸ್‌ ಇ ವಿದ್ಯಾರ್ಥಿಗಳಿಗೆ ಹಾಗೂ ಏಪ್ರಿಲ್ 14ರಂದು ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಮೂಡಬಿದಿರೆಯ ವಿದ್ಯಾಗಿರಿ ಶ್ರೀಮತಿ ಸುಂದರಿ ಆಳ್ವ ಆವರಣದಲ್ಲಿನ ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷಾ ಪತ್ರಿಕೆ ಇರಲಿದೆ. ಸಿಬಿಎಸ್‌ ಸಿ ಮತ್ತು ಐಸಿಎಸ್‌ ಇ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮಾರ್ಚ್ 28 ಕೊನೆಯ ದಿನವಾಗಿದ್ದು, ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳು ಏಪ್ರಿಲ್ 10ರವರೆಗೆ ಅರ್ಜಿಯನ್ನು ಸಲ್ಲಿಸಬಹುದು” ಎಂದು ಮಾಹಿತಿ ನೀಡಿದರು.

ವಿದ್ಯಾಥಿಗಳ ಅನುಕೂಲಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು https://scholarship.alvas.org/puc/login.php ಮೂಲಕ ಅರ್ಜಿಯನ್ನು ಸಲ್ಲಿಸಬಹುಡಾಗಿದೆ.

ವಿಶೇಷ ಸೂಚನೆ:

ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆಯ ಅಂಕದ ಆಧಾರದ ಮೇಲೆ ಆಯ್ಕೆಯ ಜೊತೆಯಲ್ಲಿ ಪ್ರತ್ಯೇಕವಾಗಿ ಪ್ರತಿ ವರ್ಷದಂತೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಅಂಕವನ್ನು ಪರಿಗಣಿಸಿ, ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆಯ ಮೇಲೂ ಆಯ್ಕೆಗಳು ನಡೆಯುತ್ತವೆ. ಪರೀಕ್ಷೆಯ ದಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಪೋಷಕರ ಜೊತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸಮಾಲೋಚನೆ ನಡೆಸಲಿದ್ದಾರೆ.

ಶೈಕ್ಷಣಿಕ-ಬೋಧನ ಭಿನ್ನತೆ, ಸಾಮಾಜಿಕ ಅಸಮಾನತೆ, ಆರ್ಥಿಕ ಅಜಗಜಾಂತರ, ಪ್ರಾದೇಶಿಕ ಭೇದಭಾವ, ಲಿಂಗ ತಾರತಮ್ಯ ಎಲ್ಲವನ್ನೂ ಮೀರಿ ಅರ್ಹ ಮಕ್ಕಳಿಗೆ ಅರ್ಹತೆಯ ಆಧಾರದಲ್ಲಿ ಅತ್ಯುನ್ನತ ಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಮಹತ್ವಾಕಾಂಕ್ಷಿ ಸದಾಶಯದಂತೆ ಸಂಪೂರ್ಣ ಪಾರದರ್ಶಕವಾಗಿ ಪ್ರವೇಶ ಪರೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ. ಪ್ರವೇಶ ಪರೀಕ್ಷೆಗಳ ಅಂಕವೇ ಅಂತಿಮ
ಮಾನದಂಡವಾಗಿದೆ.

ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 8884477588/ 6366377827/
6366377823 ಸಂಪರ್ಕಿಸಬಹುದು

Categories
ರಾಜಕೀಯ ರಾಜ್ಯ ಶಿವಮೊಗ್ಗ

ಲೋಕಸಭೆ ಚುನಾವಣೆಗೆ ಶಿವಮೊಗ್ಗದಿಂದ ಸ್ವತಂತ್ರವಾಗಿ ಸ್ಪರ್ಧೆ

ಲೋಕಸಭೆ ಚುನಾವಣೆಗೆ ಶಿವಮೊಗ್ಗದಿಂದ ಸ್ವತಂತ್ರವಾಗಿ ಸ್ಪರ್ಧೆ
– ಬಿ .ವೈ ರಾಘವೇಂದ್ರ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸ್ಪರ್ಧಿಸುವುದು ಖಚಿತ
– ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ

NAMMUR EXPRESS NEWS
ಶಿವಮೊಗ್ಗ : ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸ್ಪರ್ಧಿಸುವುದು ಖಚಿತವಾಗಿದೆ. ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಕೆ.ಎಸ್ ಈಶ್ವರಪ್ಪ ತೀರ್ಮಾನಿಸಿದ್ದಾರೆ. ಶಿವಮೊಗ್ಗದಲ್ಲಿ ಅಭಿಪ್ರಾಯ ಸಂಗ್ರಹ ಸಭೆ ನಡೆಸಿದ ಈಶ್ವರಪ್ಪ ಅವರು ಈ ಮಹತ್ವದ ಘೋಷಣೆ ಮಾಡಿದ್ದಾರೆ. ನನ್ನ ಪ್ರಾಣ ಹೋದರೂ ನಾನು ಮೋದಿ ವಿರುದ್ದ ಹೋಗಲ್ಲ. ನನ್ನ ಹೃದಯ ಬಗೆದರೆ, ಒಂದು ಕಡೆ ಮೋದಿ ಇನ್ನೊಂದು ಕಡೆ ರಾಮ ಇದ್ದಾರೆ. ಯಡಿಯೂರಪ್ಪ ಎದೆ ಬಗೆದರೆ ಒಂದು ಕಡೆ ಇಬ್ಬರು ಮಕ್ಕಳು ಇನ್ನೊಂದು ಕಡೆ ಶೋಭಾ ಕರಂದ್ಲಾಜೆ ಇದ್ದಾರೆ ಎಂದು ನಾನೂ ಹೇಳುತ್ತಿಲ್ಲ ಕಾರ್ಯಕರ್ತರು ಹೇಳುತ್ತಿದ್ದಾರೆ.

ಒಂದು ಕುಟುಂಬದ ಕೈಯಲ್ಲಿ ಬಿಜೆಪಿ ಸಿಗಬಾರದು. ರಾಜ್ಯದ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು. ಅದಕ್ಕಾಗಿ ನೀವು ಒಂದೂವರೆ ತಿಂಗಳು ಸಮಯ ಕೊಡಬೇಕು. ಮೋದಿ ಆಸೆಗೆ ತಕ್ಕಂತೆ ರಾಜ್ಯದಲ್ಲಿ ಬಿಜೆಪಿ ರಾಜ್ಯದಲ್ಲಿ ಗೆಲ್ಲಬೇಕು. ರಾಜ್ಯದಲ್ಲಿ ಟಿಕೆಟ್ ನೀಡುವವರೊಂದಿಗೆ ನನ್ನನ್ನು ಹೋಲಿಸಿ ನಾನು ಅವರಿಗಿಂತ ಒಂದು ಗುಲಗಂಜಿಯಷ್ಟಾದರೂ ಹೆಚ್ಚಿದ್ದೇನೆ. ಎಲ್ಲಾ ಸಮಾಜದವರ ನೂರಾರು ಕರೆಗಳು ಬರುತ್ತಿವೆ. ಅವರೆಲ್ಲರ ಕಳಕಳಿ ನನಗೆ ಅರ್ಥವಾಗುತ್ತದೆ ಎಂದು ಕೆ.ಎಸ್ ಈಶ್ವರಪ್ಪ ತಮ್ಮ ಚುನಾವಣಾ ಯುದ್ಧ ಘೋಷಿಸಿದ್ದಾರೆ. ಕಾರ್ಯಕರ್ತರ ಅಭಿಪ್ರಾಯದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೇ ಮಾಡುತ್ತೇನೆ. ಇದು ಉದ್ವೇಗದ ತೀರ್ಮಾನ ಅಲ್ಲ. ಯೋಚಿಸಿ ತೆಗೆದುಕೊಂಡ ತೀರ್ಮಾನ ಇದಾಗಿದೆ. ಏಕೆಂದರೆ ಪಕ್ಷ ನನಗೆ ಸಂಸ್ಕಾರ ನೀಡಿದೆ. ರಾಜ್ಯದ ನೊಂದ ಕಾರ್ಯಕರ್ತರ ದನಿಗೆ ನಾನು ಧ್ವನಿಯಾಗಲಿದ್ದೇನೆ. ಮೋದಿಗಾಗಿ ಪಕ್ಷಕ್ಕಾಗಿ ನಾನು ಏನು ಬೇಕಾದರೂ ಅನುಭವಿಸಲು ಸಿದ್ದನಿದ್ದೇನೆ ಎಂದು ಗುಡುಗಿದರು.

ವಂಶಪಾರಂಪರ್ಯದ ವಿರುದ್ಧ ನಾನು ಮಾತನಾಡಲ್ಲ. ರಾಜ್ಯದಲ್ಲಿ ಇತ್ತೀಚೆಗೆ ಬಿಜೆಪಿಯಲ್ಲಿ ಕಾಂಗ್ರೆಸ್‌ನ ಕುಟುಂಬ ರಾಜಕಾರಣದ ಸಂಸ್ಕೃತಿ ಕಂಡುಬರುತ್ತಿದೆ. ಇದು ನೊಂದು ತೆಗೆದುಕೊಳ್ಳುತ್ತಿರುವ ನಿರ್ಧಾರ ಇದು. ಹಾವೇರಿಗೆ ಬೊಮ್ಮಾಯಿಗೆ, ಚಿಕ್ಕಮಗಳೂರಿಗೆ ಶೋಭಾಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನುವ ವಿಷಯ ತಿಳಿಯಿತು. ಬಿಎಸ್‌ವೈ ಮಕ್ಕಳಿಗೆ ಟಿಕೆಟ್ ನೀಡಿದ್ದಾರೆ. ನನಗಿಂತ ಹಿರಿಯರಿಗೆ ಟಿಕೆಟ್ ನೀಡಿದ್ದಾರೆ. ಈ ಹಿಂದೆ ಕಾಂತೇಶ್ ಬಿಎಸ್‌ವೈ ಬಳಿ ಹಾವೇರಿಗೆ ನಿಲ್ಲಲು ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದರು. ಆಗ ಬಿಎಸ್‌ವೈ ಟಿಕೆಟ್ ನೀಡುವ ಹಾಗೂ ಗೆಲ್ಲಿಸುವ ಜವಾಬ್ದಾರಿ ನನ್ನದು ಎಂದಿದ್ದರು. ಆದರೆ, ಹಠ ಹಿಡಿದು ಬೊಮ್ಮಾಯಿ, ಶೋಭಾಗೆ ಟಿಕೆಟ್ ಕೊಡಿಸಿದ್ದಾರೆ. ಮಾತು ನೀಡಿದ ಕಾಂತೇಶ್‌ಗೆ ಏಕೆ ಮೋಸ ಮಾಡಿದ್ದೀರಿ? ಬೊಮ್ಮಾಯಿ ಟಿಕೆಟ್ ನೀಡುವ ಕುರಿತ ಸಭೆಯಲ್ಲಿ ಕುರುಬ ಸಮುದಾಯದ ಕಾಂತೇಶ್‌ಗೆ ಟಿಕೆಟ್ ನೀಡಿದರೆ ಅನುಕೂಲ ಎಂದು ಹೇಳಿದ್ದರು. ಕೇಂದ್ರ ಚುನಾವಣೆ ಆಯ್ಕೆ ಸಮಿತಿ ಸಭೆಯಲ್ಲಿ ಬೊಮ್ಮಾಯಿ ಹೆಸರು ಹೇಗೆ ಬಂತು ಎಂಬುದನ್ನು ಹೇಳಲು ಹೋಗುವುದಿಲ್ಲ. ನಾನು ಸುಳ್ಳು ಹೇಳಿದ್ರೆ ನನ್ನ ಮಗ ಹಾಳಾಗಿ ಹೋಗಲಿ ಭಾವುಕರಾಗಿ ಹೇಳಿದರು.

Categories
ಅಡಿಕೆ-ದರ ಕೃಷಿ ತೀರ್ಥಹಳ್ಳಿ ಶಿವಮೊಗ್ಗ

ಅಡಿಕೆ ದರ 15-03-2024

ಅಡಿಕೆ ದರ
15-03-2024
ಸರಕು 46600 80100
ಬೆಟ್ಟೆ 43599 54100
ರಾಶಿ 32569 48500
ಗೊರಬಲು 15169 35669
Nammur Express