Categories
ರಾಜಕೀಯ ರಾಜ್ಯ ರಾಷ್ಟ್ರೀಯ ವಾರ್ತೆ

ನಾಳೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ..!

ನಾಳೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ..!
– ನಾಳೆ ಮಧ್ಯಾಹ್ನ 3 ಗಂಟೆಗೆ ಡೇಟ್ ಅನೌನ್ಸ್!
– 2019ರಲ್ಲಿ 7 ಹಂತದಲ್ಲಿ ಮತದಾನ

NAMMUR EXPRESS NEWS
ನವದೆಹಲಿ: ಮಾ.16ರಂದು ಮಧ್ಯಾಹ್ನ 3 ಗಂಟೆಗೆ ಚುನಾವಣಾ ಆಯೋಗ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಲಿದೆ ಎಂದು ವರದಿಯಾಗಿದೆ. ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಆಯೋಗ ನಾಳೆ ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಿದೆ. 2024 ರ ಸಾರ್ವತ್ರಿಕ ಚುನಾವಣೆ ಮತ್ತು ಕೆಲವು ರಾಜ್ಯ ವಿಧಾನಸಭೆಗಳ ವೇಳಾಪಟ್ಟಿ ಪ್ರಕಟಿಸಲು ಚುನಾವಣಾ ಆಯೋಗವು ಮಾ.16 ರಂದು ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಲಿದೆ. 2019 ರಲ್ಲಿ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆಯಿತು. ಕಳೆದ ಬಾರಿ ಮಾ. 10ರಂದು ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಘೋಷಿಸಿತ್ತು. ಏಪ್ರಿಲ್ 11 ರಂದು ಮೊದಲ ಹಂತದ ಮತದಾನ ನಡೆದಿದ್ದರೆ, ಮೇ 19 ರಂದು ಕೊನೆಯ ಹಂತದ ಮತದಾನ ನಡೆದಿತ್ತು. ಮೇ 23ರಂದು ಫಲಿತಾಂಶ ಹೊರಬಿದ್ದಿತ್ತು. ಆ ಚುನಾವಣೆಯ ಸಮಯದಲ್ಲಿ, ದೇಶದಲ್ಲಿ 91 ಕೋಟಿಗೂ ಹೆಚ್ಚು ಮತದಾರರಿದ್ದರು, ಅದರಲ್ಲಿ 67 ಪ್ರತಿಶತದಷ್ಟು ಜನರು ಮತ ಚಲಾಯಿಸಿದ್ದರು.

2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 2014 ಕ್ಕಿಂತ ದೊಡ್ಡ ಗೆಲುವು ಸಾಧಿಸಿತ್ತು. 2014 ರಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆದ್ದರೆ, 2019 ರಲ್ಲಿ ಅದು 303 ಸ್ಥಾನಗಳನ್ನು ಗೆದ್ದಿದೆ. ಅದೇ ಸಮಯದಲ್ಲಿ, ಎನ್ದಿಎ 353 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ ಶೇ.37.7ರಷ್ಟು ಮತಗಳನ್ನು ಪಡೆದರೆ, ಎನ್ದಿಎ ಶೇ.45ರಷ್ಟು ಮತಗಳನ್ನು ಪಡೆದಿದೆ. ಕಾಂಗ್ರೆಸ್ 52 ಸ್ಥಾನಗಳನ್ನು ಗೆದ್ದಿತ್ತು. ನಾಳೆ ಯಾವುದೇ ಹೊಸ ನೀತಿ ನಿರ್ಧಾರಗಳನ್ನು ಘೋಷಿಸದಂತೆ ಅಧಿಕಾರದಲ್ಲಿರುವ ಸರ್ಕಾರವನ್ನು ನಿರ್ಬಂಧಿಸುವ ಮಾದರಿ ನೀತಿ ಸಂಹಿತೆ, ಘೋಷಣೆಯಾದ ತಕ್ಷಣ ಜಾರಿಗೆ ಬರುತ್ತದೆ.

Categories
ಕರಾವಳಿ

ಟಾಪ್ ನ್ಯೂಸ್ ಕರಾವಳಿ

ಕಾರು ಡಿಕ್ಕಿ ಹೊಡೆದು ಬೈಕ್‌ ಸವಾರ ಆಸ್ಪತ್ರೆಗೆ ದಾಖಲು
– ಯೂಟ್ಯೂಬ್ ಚಾನೆಲ್ ಕಚೇರಿಗೆ ನುಗ್ಗಿ ಲಕ್ಷಾಂತರ ಮೌಲ್ಯದ ಮತ್ತು ಸಾವಿರಾರು ರೂಪಾಯಿ ದೋಚಿದ ವ್ಯಕ್ತಿ
– ತೋಟದಿಂದ ತೆಂಗಿನಕಾಯಿ ತೆಗೆಸುತ್ತಿದ್ದ ಮಹಿಳೆಗೆ ಪಕ್ಕದ ತೋಟದ ಮಾಲಿಕನಿಂದ ಹಲ್ಲೆ, ಜೀವಬೆದಕೆ

NAMMUR EXPRESS NEWS
ಬಂಟ್ವಾಳ: ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕೊಯ್ದ ಗ್ರಾಮದ ಅಣ್ಣಳಿಕೆ ಎಂಬಲ್ಲಿ ಗುರುವಾರ ಸಂಭವಿಸಿದೆ. ಗಾಯಾಳು ಬೈಕ್‌ ಸವಾರನನ್ನು ಪಿಲಿಮೊಗರು ನಿವಾಸಿ ಸುರೇಶ್ ಎಂದು ಹೆಸರಿಸಲಾಗಿದೆ. ಸುರೇಶ್ ಅವರು ಬೈಕಿನಲ್ಲಿ ತನ್ನ ಸ್ನೇಹಿತ ಪುಷ್ಪಂದ್ರ ಸಿಂಗ್ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದ ವೇಳೆ ಅಣ್ಣಳಿಕೆ ಎಂಬಲ್ಲಿ ಉಮೇಶ್‌ ಎಂಬವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ರಸ್ತೆಗೆಸೆಯಲ್ಪಟ್ಟ ಬೈಕ್‌ ಸವಾರ ಸುರೇಶ್ ಅವರು ಗಾಯಗೊಂಡಿದ್ದು ಅವರನ್ನು ತಕ್ಷಣ ಸ್ಥಳೀಯರು ಮಂಗಳೂರು-ಅತ್ತಾವರ ಕೆಎಂಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸಹಸವಾರ ಪುಷ್ಪಂದ್ರ ಸಿಂಗ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಗಾಯಾಳು ಸುರೇಶ್ ಅವರ ಸಹೋದರ ರಾಘವೇಂದ್ರ ಪ್ರಭು ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯೂಟ್ಯೂಬ್ ಚಾನೆಲ್ ಕಚೇರಿಗೆ ನುಗ್ಗಿ ಲಕ್ಷಾಂತರ ಮೌಲ್ಯದ ಮತ್ತು ಸಾವಿರಾರು ರೂಪಾಯಿ ದೋಚಿದ ವ್ಯಕ್ತಿ

ಬೆಳ್ತಂಗಡಿ: ಯೂಟ್ಯೂಬ್ ಚಾನೆಲ್ ಕಚೇರಿಗೆ ಬಂದ ವ್ಯಕ್ತಿಯೊಬ್ಬ ಲಕ್ಷಾಂತರ ರೂಪಾಯಿ ಮೌಲ್ಯದ ವೀಡಿಯೋ ಕ್ಯಾಮೆರಾ, ಸಿಸಿ ಟಿವಿ ಹಾಗೂ ಸಾವಿರಾರು ರೂಪಾಯಿ ನಗದು ದೋಚಿದ ಘಟನೆ ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆಯಲ್ಲಿ ಸಂಜೆ ನಡೆದಿದೆ. ಸವಣಾಲು ಗ್ರಾಮದ ನಿವಾಸಿ ಸುದೀಪ್ (24) ಎಂಬವರ ಯೂಟ್ಯೂಬ್ ಚಾನೆಲ್ ಕಚೇರಿಯಲ್ಲಿ ಈ ಕೃತ್ಯ ನಡೆದಿದ್ದು, ಆರೋಪಿಯನ್ನು ಪ್ರತೀಕ್ ಕೋಟ್ಯಾನ್ ಎಂದು ಗುರುತಿಸಲಾಗಿದೆ.

ಸುದೀಪ್ ಅವರು ಸಂತೆಕಟ್ಟೆ ಸುವರ್ಣ ಆಕೇರ್ಡ್ ಸಂಕೀರ್ಣದಲ್ಲಿ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದು, ಗುರುವಾರ ಸಂಜೆ ಆರೋಪಿ ಪ್ರತೀಕ್ ಕೋಟ್ಯಾನ್ ಕಛೇರಿಗೆ ಬಂದು, ಅಲ್ಲಿ ಕೆಲಸ ಮಾಡುತ್ತಿದ್ದ ಕೃಪೇಶ್‌ ಎಂಬಾತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಛೇರಿಯಲ್ಲಿದ್ದ 4.80 ಲಕ್ಷ ರೂಪಾಯಿ ಮೌಲ್ಯದ ವೀಡಿಯೋ ಕ್ಯಾಮರಾಗಳು, ಸುಮಾರು 7 ಸಾವಿರ ರೂಪಾಯಿ ಮೌಲ್ಯದ ಸಿಸಿ ಕ್ಯಾಮರಾ ಹಾಗೂ ಕ್ಯಾಶ್ ಡ್ರಾಯರಿನಲ್ಲಿದ್ದ ಸುಮಾರು 62 ಸಾವಿರ ರೂಪಾಯಿ ನಗದು ಹಣ ಸಹಿತ ಒಟ್ಟು 5.49 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ದೋಚಿದ್ದಾನೆ. ಈ ಬಗ್ಗೆ ಸುದೀಪ್‌ ಅವರು ಆರೋಪಿ ಪ್ರತೀಕ್ ಕೋಟ್ಯಾನಗೆ ಕರೆಮಾಡಿ ವಿಚಾರಿಸಿದಾಗ, ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 36/2024 0 504, 506, 392 ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತೋಟದಿಂದ ತೆಂಗಿನಕಾಯಿ ತೆಗೆಸುತ್ತಿದ್ದ ಮಹಿಳೆಗೆ ಪಕ್ಕದ ತೋಟದ ಮಾಲಿಕನಿಂದ ಹಲ್ಲೆ, ಜೀವಬೆದಕೆ

ಪುತ್ತೂರು: ತೋಟದಿಂದ ತೆಂಗಿನ ಕಾಯಿ ತೆಗೆಸುತ್ತಿದ್ದ ಮಹಿಳೆಗೆ ಪಕ್ಕದ ತೋಟದ ಮಾಲಿಕ ಹಲ್ಲೆ ನಡೆಸಿದ ಬಗ್ಗೆ ದಕ್ಷಿಣ ಕನ್ನಡ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ನಿವಾಸಿ ಸಂತ್ರಸ್ತ ಮಹಿಳೆಯು ತನ್ನ ತಂದೆಯ ಮನೆಯಲ್ಲಿ ವಾಸವಿದ್ದು, ತಂದೆಯ ಮರಣಾ ನಂತರ ಅವರ ಅಡಿಕೆ ಮತ್ತು ತೆಂಗಿನ ತೋಟವನ್ನು ನೋಡಿಕೊಳ್ಳುತ್ತಿದ್ದಾರೆ. ಬುಧವಾರ ಸಂಜೆ ಮಹಿಳೆ ತನ್ನ ಸಹೋದರನೊಂದಿಗೆ ತೋಟಕ್ಕೆ ತೆರಳಿ, ಪರಿಚಯದ ನೌಫಲ್ ಎಂಬವರಿಂದ ಎಳ ನೀರು ಹಾಗೂ ತೆಂಗಿನ ಕಾಯಿ ತೆಗೆಸುತ್ತಿದ್ದಾಗ, ಪಕ್ಕದ ತೋಟದವ, ಆರೋಪಿ ಎಂ ಕೆ ಉಮ್ಮರ್ ಎಂಬಾತ ಮಹಿಳೆಯ ಬಳಿಗೆ ಬಂದು ತೆಂಗಿನ ಮರದ ವಿಚಾರದಲ್ಲಿ ತಕರಾರು ತೆಗೆದು ಅವ್ಯಾಚವಾಗಿ ಬೈದು, ಅನುಚಿತವಾಗಿ ವರ್ತಿಸಿದ್ದಾನೆ.

ಈ ಸಂದರ್ಭ ಮಹಿಳೆ ಜೋರಾಗಿ ಕೂಗಿದ್ದು, ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಆಕೆಯ ತಮ್ಮ ಮಹಮ್ಮದ್ ಮುಸ್ತಾಫ್ ಹಾಗೂ ತೆಂಗಿನ ಕಾಯಿ ತೆಗೆಯುತ್ತಿದ್ದ ನೌಫಲ್ ಅಲ್ಲಿಗೆ ಬಂದಿದ್ದು, ಈ ಸಂದರ್ಭ ಆರೋಪಿ ಮಹಿಳೆಗೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ಮಹಿಳೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ದ.ಕ ಮಹಿಳಾ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಖ 12/2024 0 447, 354(2), 323, 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Categories
ಬೆಂಗಳೂರು ರಾಜ್ಯ

ಕನ್ನಡ ನಾಮಫಲಕ ಹಾಕದವರಿಗೆ ಶಾಕ್..!

ಕನ್ನಡ ನಾಮಫಲಕ ಹಾಕದವರಿಗೆ ಶಾಕ್..!
– ಟ್ರೇಡ್ ಲೈಸೆನ್ಸ್ ರದ್ದು ಮಾಡಿ ಬೀಗ ಜಡಿದ ಬಿಬಿಎಂಪಿ
– ಅಂಗಡಿ ಮಾಲೀಕರಿಗೆ ಬಿಸಿ ಮುಟ್ಟಿಸಿದ ಬಿಬಿಎಂಪಿ

NAMMUR EXPRESS NEWS
ಬೆಂಗಳೂರು: ಕನ್ನಡ ನಾಮಫಲಕ ಹಾಕದವರಿಗೆ ಬಿಬಿಎಂಪಿ ಶಾಕ್ ನೀಡಿದೆ. ಮಾಲ್ ಆಫ್ ಏಷ್ಯಾದ ಕೆಲವು ಮಳಿಗೆಗಳಿಗೆ ಬೀಗ ಹಾಕಲಾಗಿದೆ. ಕನ್ನಡ ನಾಮಫಲಕ ಹಾಕದವರ ಟ್ರೇಡ್ ಲೈಸೆನ್ಸ್ ರದ್ದು ಮಾಡಲಾಗಿದೆ. ಬಿಬಿಎಂಪಿ ವತಿಯಿಂದ ಅಂಗಡಿಗಳಿಗೆ ನೋಟಿಸ್‌ ಕೊಟ್ಟು ಟ್ರೇಡ್ ಲೈಸೆನ್ಸ್ ರದ್ದು ಮಾಡಲಾಗಿದೆ. ಕನ್ನಡ ನಾಮಫಲಕ ಅಳವಡಿಕೆಗೆ ಕಾಲಾವಕಾಶ ನೀಡಿದರೂ ಕ್ಯಾರೆ ಎನ್ನದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಸಿ ಮುಟ್ಟಿಸಿದೆ.

Categories
ಬೆಂಗಳೂರು ರಾಜ್ಯ ಶಿಕ್ಷಣ

5, 8, 9ನೇ ತರಗತಿ ಪಬ್ಲಿಕ್ ಪರೀಕ್ಷೆ ನಿರ್ಧಾರ ಏನು?

5, 8, 9ನೇ ತರಗತಿ ಪಬ್ಲಿಕ್ ಪರೀಕ್ಷೆ ನಿರ್ಧಾರ ಏನು?
– ಹೈಕೋರ್ಟ್‌ ಇತ್ಯರ್ಥ ಸಾಧ್ಯತೆ
– ಶಿಕ್ಷಣ ಇಲಾಖೆಯ ಸುತ್ತೋಲೆ ರದ್ದತಿ ಕೋರಿದ ಅರ್ಜಿ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ 5, 8, 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿರುವ ಬೋರ್ಡ್‌ ಎಕ್ಸಾಂ‌ ಅರ್ಧದಲ್ಲೇ ನಿಂತಿದೆ. ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಮಕ್ಕಳಿಗೆ ಈ ಬಾರಿ ಪಬ್ಲಿಕ್‌ ಪರೀಕ್ಷೆ ನಡೆಸಲು ಮುಂದಾಗಿತ್ತು. ಅದರ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ಹೈಕೋರ್ಟ್‌ ಮೆಟ್ಟಿಲೇರಿತ್ತು. ಹೈಕೋರ್ಟ್‌ ಪರೀಕ್ಷೆಗೆ ಅನುಮತಿ ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದ್ದರಿಂದ ಮಾರ್ಚ್‌ 12ರಂದು ಸುಪ್ರೀಂಕೋರ್ಟ್‌ ಪರೀಕ್ಷೆಗೆ ತಡೆ ನೀಡಿದೆ. ವಿವಾದವನ್ನು ಹೈಕೋರ್ಟ್‌ನಲ್ಲೇ ಇತ್ಯರ್ಥಪಡಿಸಲು ಸೂಚಿಸಿದೆ. ಈ ನಡುವೆ ಮಾರ್ಚ್‌ 11ರಿಂದ ಆರಂಭಗೊಂಡ ಪರೀಕ್ಷೆಯನ್ನು ಮಧ್ಯದಲ್ಲೇ ನಿಲ್ಲಿಸಲಾಗಿದೆ. ಹೀಗಾಗಿ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ.

ರಾಜ್ಯ ಸರ್ಕಾರ ವಿವಾದವನ್ನು ಇತ್ಯರ್ಥಪಡಿಸಲು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕಾಗಿದೆ. ಆದರೆ, ಅದು ಸಾಧಕ ಬಾಧಕಗಳ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಇತ್ತ ಬೋರ್ಡ್‌ ಪರೀಕ್ಷೆಯನ್ನು ರದ್ದುಪಡಿಸಬೇಕು ಎಂದು ಕೋರಿ ರುಪ್ಸಾ ಬೆಂಬಲಿತ ಕೆಲವು ಪೋಷಕರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕು ಎಂಬ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

– ಶಿಕ್ಷಣ ಇಲಾಖೆಯ ಸುತ್ತೋಲೆ ರದ್ದತಿ ಕೋರಿದ ಅರ್ಜಿ

ರಾಜ್ಯ ಪಠ್ಯಕ್ರಮ ಅಳವಡಿಸಿಕೊಂಡಿರುವ 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಸುತ್ತೋಲೆಗಳನ್ನು ರದ್ದುಪಡಿಸಿದ್ದ ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಅದರ ವಿಚಾರಣೆ ವೇಳೆ ಅನುದಾನ ರಹಿತ ಶಾಲೆಗಳ ಕೆಲ ವಿದ್ಯಾರ್ಥಿಗಳು ಮತ್ತು ಪೋಷಕರ ಪರ ವಕೀಲರ ಮೆಮೊ ಸಲ್ಲಿಸಿ, ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ದೊಡ್ಡ ಮಟ್ಟದ ಸಾರ್ವಜನಿಕ ಹಿತಾಸಕ್ತಿ ಅಡಗಿದೆ. ಆದ್ದರಿಂದ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಬೇಕು ಎಂದು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ರಾಜೇಶ್‌ ರೈ ಕೆ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಕೋರಿದರು. ಈ ಮನವಿಯನ್ನು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸಾ) ಪರ ವಕೀಲರು ಬೆಂಬಲಿಸಿದರು.

ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆಗಳನ್ನು ಮುಂದೂಡಿ ಮಾರ್ಚ್‌ 12ರಂದು ರಾಜ್ಯ ಸರ್ಕಾರ ಮತ್ತೊಂದು ಸುತ್ತೋಲೆ ಹೊರಡಿಸಿದೆ. ಪರೀಕ್ಷೆ ನಡೆಸುವ ಸಂಬಂಧ ಅಧಿಸೂಚನೆಯನ್ನು ಹೈಕೋರ್ಟ್‌ ಏಕ ಸದಸ್ಯ ಪೀಠ ಹಾಗೂ ಸುಪ್ರೀಂ ಕೋರ್ಟ್‌ ಸಹ ರದ್ದುಪಡಿಸಿವೆ. ಇಂತಹ ಸಂದರ್ಭದಲ್ಲಿ ಸುತ್ತೋಲೆ ಹೊರಡಿಸಿಯೇ ಸರ್ಕಾರ ಪರೀಕ್ಷೆ ಮುಂದೂಡಿದೆ. ಈ ಸುತ್ತೋಲೆ ಹಿಂಪಡೆಯಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮತ್ತೊಂದು ಮೊಮೊ ಸಲ್ಲಿಸಿದರು. ಈ ಎರಡೂ ಮೆಮೊಗಳನ್ನು ತಿರಸ್ಕರಿಸಿದ ಪೀಠವು ಮೇಲ್ಮನವಿಯನ್ನು ವಿಚಾರಣೆ ನಡೆಸಿ ಶೀಘ್ರ ಸೂಕ್ತ ನಿರ್ಧಾರ ಪ್ರಕಟಿಸುವಂತೆ ಹೈಕೋರ್ಟ್‌ಗೆ (ವಿಭಾಗೀಯ ಪೀಠಕ್ಕೆ) ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಆದ್ದರಿಂದ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿತು. ಅಂತೆಯೇ, ಮೇಲ್ಮನವಿಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು. ಇದೇ ಸಂದರ್ಭದಲ್ಲಿ ಬೋರ್ಡ್ ಮಟ್ಟದ ಪರೀಕ್ಷೆಗಳನ್ನು ನಡೆಸುವುದಕ್ಕೆ ಅವಕಾಶ ಕಲ್ಪಿಸಬೇಕು ಮತ್ತು ಅವಕಾಶ ಕಲ್ಪಿಸಬಾರದು ಎಂದು ಕೋರಿ ಎರಡು ಪ್ರತ್ಯೇಕ ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳ ವಿಚಾರಣೆಯನ್ನು ಇನ್ನಷ್ಟೇ ನಡೆಸಬೇಕಿದೆ.

ಇದಕ್ಕೂ ಮುನ್ನ ವಿಚಾರಣೆ ವೇಳೆ ಖಾಸಗಿ ಶಿಕ್ಷಣ ಸಂಸ್ಥೆಗ ಪರ ವಕೀಲರು, ಸರ್ಕಾರ ನಡೆಸುವುದಕ್ಕೆ ಮುಂದಾಗಿರುವ ಪರೀಕ್ಷಾ ಕ್ರಮ ಗೊಂದಲಗಳಿಂದ ಕೂಡಿದೆ. ಇದರಿಂದ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಸರ್ಕಾರದ ಈ ಸುತ್ತೋಲೆ ಕರ್ನಾಟಕ ಶಿಕ್ಷಣ ಕಾಯಿದೆಯ ಸೆಕ್ಷನ್ 22ಕ್ಕೆ ಸೀಮಿತವಾಗಿಲ್ಲ. ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಅಲ್ಲದೆ, ಸರ್ಕಾರದ ಸುತ್ತೋಲೆಗಳನ್ನು ಸುಪ್ರೀಂ ಕೋರ್ಟ್ ಕಾನೂನುಬಾಹಿರ ಎಂದು ರದ್ದುಪಡಿಸಿದೆ. ಹೀಗಾಗಿ, ಸುತ್ತೋಲೆ ರದ್ದುಪಡಿಸಿರುವ ಕ್ರಮ ಸರಿಯಾಗಿದೆ ಎಂದು ವಿಭಾಗೀಯ ಪೀಠಕ್ಕೆ ವಿವರಿಸಿದರು.

ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿಕ್ರಮ್ ಹುಯಿಲಗೋಳ ಅವರು ಅರ್ಜಿದಾರರು ವಿನಾಕಾರಣ ಪ್ರಕರಣ ಎಳೆದು ಹೋಗುತ್ತಿದ್ದಾರೆ. ಇದರಿಂದ ಮೇಲ್ಮನವಿ ಇತ್ಯರ್ಥಪಡಿಸಲು ವಿಳಂಬವಾಗಲಿದೆ. ಕರ್ನಾಟಕ ಶಿಕ್ಷಣ ಕಾಯಿದೆಯ ಸೆಕ್ಷನ್ ಪ್ರಕಾರ ರಾಜ್ಯ ಸರ್ಕಾರಕ್ಕೆ ಬೋರ್ಡ್‌ ಪರೀಕ್ಷೆ ನಡೆಸುವುದಕ್ಕೆ ಅವಕಾಶವಿದೆ. ಅದರಂತೆ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡರು. ಇದೀಗ ಶುಕ್ರವಾರದ ವಿಚಾರಣೆಯಲ್ಲಿ ಪರೀಕ್ಷೆಗೆ ಸಂಬಂಧಿಸಿ ಒಂದು ತೀರ್ಮಾನ ಬರಬಹುದು ಎಂಬ ನಿರೀಕ್ಷೆಯಲ್ಲಿ ಮಕ್ಕಳ ಪೋಷಕರು ಇದ್ದಾರೆ.

Categories
ಚಿಕ್ಕಮಗಳೂರು ಮಲ್ನಾಡ್ ಹವಾಮಾನ ಸುದ್ದಿ

ವರ್ಷದ ಮೊದಲ ಮಳೆ!

ವರ್ಷದ ಮೊದಲ ಮಳೆ!
ಕಾಫಿ ನಾಡಲ್ಲಿ ತಂಪೆರೆದ ಮಳೆ… ತಂಪಾಯಿತು ಇಳೆ
– ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರುಣನ ಹರ್ಷ
– ಚಿಕ್ಕಮಗಳೂರಲ್ಲಿ ಭರ್ಜರಿ ಮಳೆ: 3 ಜಿಲ್ಲೆಗಳಿಗೆ ಅಲರ್ಟ್‌

NAMMUR EXPRESS NEWS
ಚಿಕ್ಕಮಗಳೂರು: ಕಾದ ಕಾವಲಿಯಂತಾಗಿದ್ದ ಭೂಮಿಗೆ ಮಳೆಯು ತಂಪೆರೆಯುತ್ತಿದೆ. ಕಾಫಿನಾಡು ಚಿಕ್ಕಮಗಳೂರಲ್ಲಿ ಗುರುವಾರ ವರ್ಷದ ಮೊದಲ ಭರ್ಜರಿ ಮಳೆ ಸುರಿದಿದೆ. ಸುಮಾರು ಒಂದೇ ಗಂಟೆ ಕಾಲ ಸುರಿದ ಮಳೆಗೆ ಹಳ್ಳಿಗರು, ಬೆಳೆಗಾರರು ಸಂತಸಗೊಂಡಿದ್ದಾರೆ. ಚಿಕ್ಕಮಗಳೂರಿನ ಮುತ್ತೋಡಿ ತಪ್ಪಲಿನ ಜಾಗರ ಹೋಬಳಿಯ ಕೊಳಗಾವೆ ಗ್ರಾಮದಲ್ಲಿ ಭಾರೀ ಮಳೆಯಾಗಿದೆ. ಕೊಳಗಾಮೆ ಜತೆಗೆ ಮೇಲಿನಹುಲುವತ್ತಿ ಭಾಗದ ಸುತ್ತಮುತ್ತ 38.5 ಮಿ.ಮೀ ಮಳೆ ಸುರಿದಿದೆ. ಮಳೆಗಾಗಿ ಆಕಾಶ ನೋಡುತ್ತಿದ್ದ ರೈತರು, ಕಾಫಿ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. ಇನ್ನೂ ಕೊಡಗಿನ ವಿರಾಜಪೇಟೆ ತಾಲೂಕಿನ ಕಾಕೋಟುಪರಂಬುನಲ್ಲಿ 3.5 ಮಿ.ಮೀ ಮಳೆಯಾಗಿದೆ.

ದಕ್ಷಿಣ ಒಳನಾಡಲ್ಲಿ ಮಳೆಯ ಸಿಂಚನ

ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ರಾಮನಗರ, ಬೆಂಗಳೂರು ನಗರ ಮತ್ತು ಮಲೆನಾಡಿನ ಹಾಸನ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ. ಕರ್ನಾಟಕದ ಉತ್ತರ ಒಳನಾಡಿನ ಪ್ರತ್ಯೇಕ ಪ್ರದೇಶಗಳಲ್ಲಿ ತಾಪಮಾನವು ದುಪ್ಪಟ್ಟಾಗಲಿದೆ. ಶಾಖದ ತರಂಗ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಕರಾವಳಿಯ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿ.ಸೆ ಹೆಚ್ಚಾಗಲಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ.

Categories
ಕರಾವಳಿ ಕಾರ್ಕಳ

ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾಕ್ಕೆ ನೂತನ ಸಾರಥಿಗಳು!

ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾಕ್ಕೆ ನೂತನ ಸಾರಥಿಗಳು!
– ಅಧ್ಯಕ್ಷರಾಗಿ ವಿನಯಾ ಡಿ. ಬಂಗೇರ
– ಪ್ರಧಾನ ಕಾರ್ಯದರ್ಶಿಯಾಗಿ ದೀಕ್ಷಿತಾ ಶೆಟ್ಟಿ ಬೈಲೂರು, ವಿನುತಾ ಆಚಾರ್ಯ ಈದು

NAMMUR EXPRESS NEWS
ಕಾರ್ಕಳ : ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಮುಡಾರು ಪಂಚಾಯತ್‌ ಸದಸ್ಯೆ ವಿನಯಾ ಡಿ. ಬಂಗೇರ ಆಯ್ಕೆ ಆಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಬೈಲೂರು ಗ್ರಾ.ಪಂ. ಸದಸ್ಯೆ ದೀಕ್ಷಿತಾ ಶೆಟ್ಟಿ ಬೈಲೂರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸ್ಮಾರು ಒಕ್ಕೂಟದ ಅಧ್ಯಕ್ಷೆ, ಈದು ಗ್ರಾಮದ ವಿನುತಾ ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Categories
ಬೆಂಗಳೂರು ರಾಜಕೀಯ ರಾಜ್ಯ

ಬಾಲಕಿಗೆ ಕಿರಿಕಿರಿ: ಯಡಿಯೂರಪ್ಪ ವಿರುದ್ಧ ಕೇಸ್!?

ಬಾಲಕಿಗೆ ಕಿರಿಕಿರಿ: ಯಡಿಯೂರಪ್ಪ ವಿರುದ್ಧ ಕೇಸ್!?
– ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಎಫ್‌ಐಆ‌ರ್
– ಸಹಾಯ ಕೇಳಲು ಹೋಗಿದ್ದಾಗ ಲೈಂಗಿಕ ಕಿರುಕುಳ ದೂರು
– ನಿಜವೋ ಸುಳ್ಳೋ.. ದೂರು ಕೊಟ್ಟಿದ್ದು ಯಾಕೆ.?

NAMMUR EXPRESS NEWS
ಬೆಂಗಳೂರು: ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ ಎಸಗಿದ ಆರೋಪದಡಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ. ಕಳೆದ ಫೆಬ್ರವರಿಯಲ್ಲಿ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಸಂತ್ರಸ್ತೆಯು ಯಡಿಯೂರಪ್ಪ ವಿರುದ್ಧ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಸಂತ್ರಸ್ತೆ ನೀಡಿದ ದೂರಿನ ಅನ್ವಯ ಸದಾಶಿವನಗರ ಠಾಣಾ ಪೊಲೀಸರು ಯಡಿಯೂರಪ್ಪ ವಿರುದ್ಧ ಪೋಕೋ ಹಾಗೂ 354 (A) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಫೆಬ್ರವರಿ 2 ರಂದು 17 ವರ್ಷದ ಬಾಲಕಿ ಸಹಾಯ ಕೇಳಲು ಹೋಗಿದ್ದಾಗ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಸಂತ್ರಸ್ತೆಯು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾಳೆ ಎಂದು ತಿಳಿದುಬಂದಿದೆ. ಲೋಕ ಸಭಾ ನಡುವೆ ಪೋಕೋ ಪ್ರಕರಣ ದಾಖಲಾಗಿರುವುದು ಯಡಿಯೂರಪ್ಪ ಅವರು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ. ಬಂಧನದ ಭೀತಿಯೂ ಎದುರಾಗಿದೆ. ಆದರೆ ದೂರು ಎಷ್ಟು ಸತ್ಯ ಎಂಬುದು ಈಗ ಕುತೂಹಲ ಮೂಡಿಸಿದೆ.

Categories
ಕರಾವಳಿ ಕಾರ್ಕಳ ರಾಜಕೀಯ ರಾಜ್ಯ

ಅರುಣ್‌ ಪುತ್ತಿಲ ಪರಿವಾರ ಬಿಜೆಪಿ ಜತೆ ಸೇರ್ಪಡೆ!

ಅರುಣ್‌ ಪುತ್ತಿಲ ಪರಿವಾರ ಬಿಜೆಪಿ ಜತೆ ಸೇರ್ಪಡೆ!
– ಸಂಸದ ನಳಿನ್‌ ಕುಮಾರ್‌ಗೆ ಟಿಕೆಟ್‌ ಕೈತಪ್ಪಿದ ಬೆನ್ನಲ್ಲೇ ಪುತ್ತಿಲ ಹೊಸ ಹೆಜ್ಜೆ
– ಪುತ್ತೂರು ಬಿಜೆಪಿ ಅಧ್ಯಕ್ಷ ಸ್ಥಾನ ಸಿಗುತ್ತೆ?

NAMMUR EXPRESS NEWS
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಬಿಜೆಪಿಯಲ್ಲಿ ಟಿಕೆಟ್‌ ಸಿಗದೆ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್‌ ಪುತ್ತಿಲ ಅವರು ಇದೀಗ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಇವರಿಗೆ ಕರಾವಳಿಯಲ್ಲಿ ಮಹತ್ವದ ಹೊಣೆ ಸಿಗುವ ಸಾಧ್ಯತೆಗಳಿವೆ. ಕಳೆದ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಗೆ ಗುಡ್‌ಬೈ ಹೇಳಿ ದಕ್ಷಿಣ ಕನ್ನಡದಲ್ಲಿ ತಮ್ಮದೇ ಸ್ವಂತ ಪುತ್ತಿಲ ಪರಿವಾರ ಸಂಘಟನೆಯನ್ನು ಕಟ್ಟಿಕೊಂಡು ಬಿಜೆಪಿ ಪಾಲಿಗೆ ದುಷ್ಮನ್‌ ಆಗಿದ್ದ ಪುತ್ತಿಲ ಇಂದು ಸಂಜೆ ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿಗೆ ತೆರಳಿದ್ದರು.

ಅಲ್ಲಿ ಸಂಧಾನ ಮಾತುಕತೆ ಬಳಿಕ ಅರುಣ್‌ ಪುತ್ತಿಲ ಹಾಗೂ ಪರಿವಾರದವರು ಬಿಜೆಪಿಯೊಂದಿಗೆ ವಿಲೀನಗೊಂಡಿದ್ದಾರೆ. ಈ ಸಂಧಾನ ಮಾತುಕತೆ ವೇಳೆ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿರುವ ಸತೀಶ್‌ ಕುಂಪಲ, ಮಾಜಿ ಸಚಿವ ಸುನೀಲ್‌ ಕುಮಾರ್‌ ಸೇರಿದಂತೆ ಹಲವು ನಾಯಕರು ಇದ್ದರು. ವಿಲೀನದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಭೇಟಿಯಾಗಿದ್ದು, ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.

ಏನಕ್ಕೆ ಬಂಡಾಯ?

ಕಳೆದ ಚುನಾವಣೆಯಲ್ಲಿ ಟಿಕೆಟ್‌ ಸಿಗದೆ ನಳಿನ್‌ ಕುಮಾರ್‌ ಕಟೀಲು ಜತೆ ಮುನಿಸಿಕೊಂಡು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅಂದರೆ, ನಳಿನ್‌ ಕುಮಾರ್‌ ಜತೆಗಿನ ವೈಮನಸ್ಸಿನಿಂದಾಗಿ ಬಿಜೆಪಿಯಿಂದ ಹೊರನಡೆದಿದ್ದ ಪುತ್ತಿಲ ಕಳೆದ ಹತ್ತಾರು ಬಾರಿ ಸಂಧಾನದ ಮಾತುಕತೆಗಳು ನಡೆದಿದ್ದರೂ ವಾಪಾಸ್‌ ಬಿಜೆಪಿಗೆ ಬರುವ ಮನಸ್ಸು ಮಾಡಿರಲಿಲ್ಲ. ಅಲ್ಲದೆ, ಮುಂದಿನ ಲೋಕಸಭೆ ಚುನಾವಣೆಗೆ ಪುತ್ತಿಲ ಸ್ಪರ್ಧಿಸುವುದಾಗಿ ಇತ್ತೀಚೆಗೆ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್‌ ಮಾರ್ತ ಬಹಿರಂಗ ಹೇಳಿಕೆ ಕೂಡ ನೀಡಿದ್ದರು. ಆದರೆ, ಯಾವಾಗ ಸಂಸದ ನಳಿನ್‌ ಕುಮಾರ್‌ ಅವರಿಗೆ ಹೈಕಮಾಂಡ್‌ ಟಿಕೆಟ್‌ ನೀಡಿಲ್ಲ ಎನ್ನುವುದು ಖಚಿತವಾಯಿತೋ ಅದರ ಬೆನ್ನಲ್ಲೇ ಪುತ್ತಿಲ ಅವರು ಬಿಜೆಪಿಗೆ ವಾಪಾಸ್‌ ಬರುವುದಕ್ಕೆ ನಿರ್ಧಾರ ಮಾಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಅಂದರೆ, ಬಿಜೆಪಿಗೆ ದಕ್ಷಿಣ ಕನ್ನಡ ಕ್ಷೇತ್ರದಿಂದ ಬ್ರಿಜೇಶ್‌ ಚೌಟ ಅವರ ಹೆಸರು ಘೋಷಣೆಯಾದ ಒಂದೇ ದಿನದಲ್ಲಿ ಪುತ್ತಿಲ ಅವರು ಬೆಂಗಳೂರಿನ ಬಿಜೆಪಿ ಕಚೇರಿಗೆ ಪಕ್ಷ ಮರು ಸೇರ್ಪಡೆ ವಿಚಾರವಾಗಿ ತೆರಳಿದ್ದು ಗಮನಾರ್ಹ. ಒಂದುವೇಳೆ, ಪುತ್ತಿಲ ಬಿಜೆಪಿಗೆ ವಾಪಾಸ್‌ ಬರದಿದ್ದರೆ, ಈ ಬಾರಿಯ ಚುನಾವಣೆಯಲ್ಲಿಯೂ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮತಗಳ ವಿಭಜನೆಯಾಗುತ್ತಿತ್ತು. ಅದು ಸಹಜವಾಗಿಯೇ ಪಕ್ಷದ ಫಲಿತಾಂಶದ ಮೇಲೂ ಪರಿಣಾಮ ಬೀರುವ ಅಪಾಯವಿತ್ತು. ಈ ಕಾರಣದಿಂದಲೇ ಬಿಜೆಪಿಯ ದಕ್ಷಿಣ ಕನ್ನಡದ ನಾಯಕರು ಪುತ್ತಿಲ ಅವರನ್ನು ಪತ್ತೆಗೆ ವಾಪಾಸ್‌ ಕರೆ ತರುವುದಕ್ಕೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದು, ಇದೀಗ ಅದರಲ್ಲಿ ಯಶಸ್ವಿ ಕೂಡ ಆಗಿದ್ದಾರೆ. ಏಕೆಂದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸಂಜೀವ್‌ ಮಠಂದೂರು ಸೋಲಿಗೆ ಪುತ್ತಿಲ ಅವರ ಸ್ಪರ್ಧೆಯೇ ಪ್ರಮುಖ ಕಾರಣವಾಗಿತ್ತು.

ಅಧ್ಯಕ್ಷ ಗಾದಿಯಲ್ಲಿ ಪುತ್ತಿಲ!

ಇದೀಗ ಪುತ್ತಿಲ ಅವರಿಗೆ ಬಿಜೆಪಿಯಲ್ಲಿ ಯಾವ ಹುದ್ದೆ ನೀಡಿತ್ತಾರೆ ಎನ್ನುವುದೇ ಬಹುದೊಡ್ಡ ಪ್ರಶ್ನೆ. ಜಿಲ್ಲೆಯ ಏಳು ಮಂಡಲಗಳ ಪೈಕಿ ಬಾಕಿ ಇಟ್ಟಿರುವ ಪುತ್ತೂರು ಮಂಡಲ ಅಧ್ಯಕ್ಷತೆಗೆ ಆಯ್ಕೆ ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ. ಇದಕ್ಕೆ ಅರುಣ್ ಪುತ್ತಿಲ ಅವರ ಹೆಸರನ್ನೇ ಸೂಚಿಸುವ ಸಾಧ್ಯತೆ ಇದೆ.

Categories
ರಾಜ್ಯ

ಪೆಟ್ರೋಲ್, ಡೀಸೆಲ್ ಲೀಟರ್ ಗೆ 2 ರೂ ಇಳಿಕೆ!

ಪೆಟ್ರೋಲ್, ಡೀಸೆಲ್ ಲೀಟರ್ ಗೆ 2 ರೂ ಇಳಿಕೆ!
– ವಾಹನ ಸವಾರರಿಗೆ ಗುಡ್ ನ್ಯೂಸ್: ಚುನಾವಣೆಯ ವೇಳೆ ಕೇಂದ್ರದ ಗಿಫ್ಟ್
– ಹಾಗಿದ್ರೆ ನಿಮ್ಮ ಊರಲ್ಲಿ ಎಷ್ಟಿದೆ ದರ?

NAMMUR EXPRESS NEWS
ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಮುನ್ನ ಕೇಂದ್ರ ಸರ್ಕಾರ ಗುರುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ 2 ರೂ.ಗಳಷ್ಟು ಕಡಿತಗೊಳಿಸಿದೆ. ದ್ರವೀಕೃತ ಪೆಟ್ರೋಲಿಯಂ ಅನಿಲ ಮತ್ತು ಸಂಕುಚಿತ ನೈಸರ್ಗಿಕ ಅನಿಲ ಬೆಲೆಗಳಲ್ಲಿ ಇತ್ತೀಚಿನ ಕಡಿತದೊಂದಿಗೆ, ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಬಹುದು ಎಂಬ ಊಹಾಪೋಹಗಳು ಹರಡಿವೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಡುಗೆ ಅನಿಲ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 100 ರೂ.ಗಳಷ್ಟು ಕಡಿತಗೊಳಿಸುವುದಾಗಿ ಘೋಷಿಸಿದ್ದರು. ಬೆಲೆ ಕಡಿತವು ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (ಎಲ್ಪಿಜಿ) ಅಡುಗೆ ಇಂಧನವಾಗಿ ಬಳಸುವ ಸುಮಾರು 33 ಕೋಟಿ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಚಂಚಲತೆ, ಭೌಗೋಳಿಕ ರಾಜಕೀಯ ಸವಾಲುಗಳು ಮತ್ತು ಕಂಪನಿಗಳ ಆರ್ಥಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಪೆಟ್ರೋಲ್ ಮತ್ತು ಡೀಸೆಲ್ನ ಚಿಲ್ಲರೆ ಬೆಲೆಗಳನ್ನು ಕಡಿಮೆ ಮಾಡುವ ನಿರ್ಧಾರವನ್ನು “ಬಹಳ ತಂಪಾಗಿ” ಯೋಚಿಸಬೇಕಾಗಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಕಳೆದ ವಾರ ಹೇಳಿದ್ದರು. ಇಂಧನ ಮಾರಾಟದ ಮೇಲಿನ ಲಾಭದಾಯಕತೆಯ ದೃಷ್ಟಿಯಿಂದ ಒಎಂಸಿಗಳು ಇನ್ನೂ ಸಂಪೂರ್ಣವಾಗಿ ಕಾಡಿನಿಂದ ಹೊರಬಂದಿಲ್ಲ ಎಂದು ಸೂಚಿಸಿದ ಪುರಿ, ಡೀಸೆಲ್ ಮಾರಾಟದಲ್ಲಿ ಅವರು ಇನ್ನೂ ಕಡಿಮೆ ವಸೂಲಾತಿಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದರು, ಆದರೆ ಅದನ್ನು ಪ್ರಮಾಣೀಕರಿಸಲಿಲ್ಲ.

Categories
ಕರಾವಳಿ

ಆಳ್ವಾಸ್ ಕಾಲೇಜಿನ ​​ಹಾಸ್ಟೆಲ್​ನಲ್ಲಿ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ!

ಆಳ್ವಾಸ್ ಕಾಲೇಜಿನ ​​ಹಾಸ್ಟೆಲ್​ನಲ್ಲಿ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ!
– ತಡವಾಗಿ ಬೆಳಕಿಗೆ ಬಂದ ಘಟನೆ
– ನಿಷ್ಪಕ್ಷಪಾತ ತನಿಖೆಗೆ ವಿದ್ಯಾರ್ಥಿ ಸಂಘಟನೆ ಪಟ್ಟು

NAMMUR EXPRESS NEWS
ಮೂಡಬಿದ್ರೆ: ಬೆನ್ನಲ್ಲೇ ಇದೀಗ ಮತ್ತೊಬ್ಬ ವಿದ್ಯಾರ್ಥಿ ಕೋಲಾರ ಮೂಲದ ಸಂಜಯ್ ಭುವನ್ ಎಂಬುವವರು ಹಾಸ್ಟೆಲ್​ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾ.12 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ‌ ಬಂದಿದೆ.
2023 ಡಿಸೆಂಬರ್ 24 ರಂದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತರ್ಚಿಹಾಳ ಗ್ರಾಮದ ಮಲ್ಲಪ್ಪನವರ ಎಂಬುವವರ ಪುತ್ರ ಮನೋಜ್ ಎಂಬಾತ ಜಿಲ್ಲೆಯ ಮೂಡಬಿದ್ರೆಯಲ್ಲಿರುವ ಆಳ್ವಾಸ್​ ಶಿಕ್ಷಣ ಸಂಸ್ಥೆಯ ಹಾಸ್ಟೇಲ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ.

ಜಿಲ್ಲಾಧ್ಯಕ್ಷ ಸುಹಾನ್ ನೇತೃತ್ವದಲ್ಲಿ ಮುತ್ತಿಗೆ‌

ಈ ಕುರಿತು ವಿಷಯ ತಿಳಿಯುತ್ತಿದ್ದಂತೆ ಕಾಲೇಜಿಗೆ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ ಜಿಲ್ಲಾಧ್ಯಕ್ಷ ಸುಹಾನ್ ನೇತೃತ್ವದಲ್ಲಿ ಮುತ್ತಿಗೆ‌ ಹಾಕಲಾಗಿದೆ. ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರಿಂದ ಕಾಲೇಜು ಬಳಿ ಭದ್ರತೆ ಒದಗಿಸಲಾಗಿದೆ. ವಿದ್ಯಾರ್ಥಿ ಆತ್ಮಹತ್ಯೆ ಕುರಿತು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿಷ್ಪಕ್ಷಪಾತ ತನಿಖೆಗೆ ವಿದ್ಯಾರ್ಥಿ ಸಂಘಟನೆ ಪೊಲೀಸರಿಗೆ ಆಗ್ರಹ ಮಾಡಿದೆ.