Categories
ರಾಜ್ಯ ರಾಷ್ಟ್ರೀಯ ವಾರ್ತೆ

ಮ್ಯಾಟ್ರಿಮೋನಿ ಆಪ್ಸ್ ಇನ್ನು ಇರೋದು ಡೌಟು!

ಮ್ಯಾಟ್ರಿಮೋನಿ ಆಪ್ಸ್ ಇನ್ನು ಇರೋದು ಡೌಟು!
– ಆನ್‌ಲೈನ್‌ನಲ್ಲಿ ಇನ್ನು ಸಂಗಾತಿ ಸಿಗಲ್ಲ!
– ಆನ್‌ಲೈನ್‌ ಮೂಲಕ ಸಂಗಾತಿ ಹುಡುಕುವರಿಗೆ ಬೇಸರ

NAMMUR EXPRESS NEWS
ನವದೆಹಲಿ: ಆನ್‌ಲೈನ್‌ನಲ್ಲೇ, ಅದರಲ್ಲೂ ಆಪ್ ಮೂಲಕವೇ ನಮಗೆ ಬೇಕಾದ ಯುವತಿಯರು ಯುವಕರನ್ನು ಹುಡುಕಿಕೊಳ್ಳಲು, ನಮ್ಮ ಆಸಕ್ತಿ, ಅಭಿರುಚಿ, ಸ್ಟೇಟಸ್‌ಗೆ ಅನುಗುಣವಾಗಿ ಸಂಗಾತಿಯನ್ನು ಸುಲಭವಾಗಿ ಪತ್ತೆಹಚ್ಚಲು ಮ್ಯಾಟ್ರಿಮೋನಿ ಆಪ್ ಗಳು ಪ್ರಮುಖ ಸಾಧನವಾಗಿವೆ. ಹೊಸ ಯುವಕ-ಯುವತಿಯರ ಸಂಬಂಧಕ್ಕೆ ಇದು ಏಣಿಯಾಗಿದೆ. ಆದರೆ, ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಗೂಗಲ್‌ ಸಂಸ್ಥೆಯು ಪ್ಲೇಸ್ಟೋರ್‌ನಿಂದ ಭಾರತ್‌ ಮ್ಯಾಟ್ರಿಮೋನಿ ಆಪ್ ಅನ್ನು ತೆಗೆದುಹಾಕಿದೆ. ಇದರಿಂದಾಗಿ ಆನ್‌ಲೈನ್‌ ಮೂಲಕ ಸಂಗಾತಿಯನ್ನು ಹುಡುಕುವವರಿಗೆ ಭಾರಿ ಹಿನ್ನಡೆಯಾಗಿದೆ. ಹೌದು, ಭಾರತದ 10 ಕಂಪನಿಗಳ ಆಪ್ ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದುಹಾಕುವ ಪ್ರಕ್ರಿಯೆಗೆ ಗೂಗಲ್‌ ಚಾಲನೆ ನೀಡಿದೆ.

ಆಪ್ ಗಳ ಮೂಲಕ ಆಗುವ ಪೇಮೆಂಟ್‌ನಲ್ಲಿ ಶೇ.11ರಿಂದ ಶೇ.26ರಷ್ಟು ಹಣವನ್ನು ಗೂಗಲ್‌ಗೆ ಶುಲ್ಕವಾಗಿ ನೀಡಬೇಕು ಎಂಬ ನಿಯಮವಿದೆ. ಆದರೆ, ಇದನ್ನು ತಡೆಯಬೇಕು ಎಂಬ ದಿಸೆಯಲ್ಲಿ ಭಾರತದ ಸ್ಟಾರ್ಟಪ್‌ ಕಂಪನಿಗಳು ಪ್ರಯತ್ನಿಸುತ್ತಿವೆ. ಇನ್ನು ಸ್ಟಾರ್ಟಪ್‌ಗಳಿಗೆ ಯಾವುದೇ ವಿನಾಯಿತಿ ನೀಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ಆದೇಶ ನೀಡಿದೆ.

ಗೂಗಲ್ ನಿಯಮ ಉಲ್ಲಂಘನೆ

ಗೂಗಲ್‌ ಸಂಸ್ಥೆಯು ಇದೆಲ್ಲ ಕಾರಣಗಳಿಂದಾಗಿ ಭಾರತದ 10 ಕಂಪನಿಗಳ ಆಪ್ ಗಳನ್ನು ಗೂಗಲ್‌ ಕಂಪನಿಯು ತೆಗೆದುಹಾಕುತ್ತಿದೆ. “ನಿಯಮಗಳ ಉಲ್ಲಂಘನೆಯಾಗಿದೆ ಎಂದು ಗೂಗಲ್‌ ಕಂಪನಿಯು ನೋಟಿಸ್‌ ನೀಡುತ್ತಿದೆ. ಮ್ಯಾಟ್ರಿಮೋನಿ ಸರಣಿಯ ಒಂದೊಂದೇ ಆಪ್ ಗಳನ್ನು ಪ್ಲೇಸ್ಟೋರ್‌ನಿಂದ ಡಿಲೀಟ್ ಮಾಡಲಾಗುತ್ತಿದೆ. ಭಾರತದ ಇಂಟರ್‌ನೆಟ್‌ ಕ್ಷೇತ್ರದಲ್ಲಿ ಇದೊಂದು ಕರಾಳ ದಿನ” ಎಂದು ಮ್ಯಾಟ್ರಿಮೋನಿ ಸಂಸ್ಥಾಪಕ ಮುರುಗಾವೇಲ್‌ ಜಾನಕಿರಾಮ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಯಾವ ಯಾವ ಆಪ್ ಡಿಲೀಟ್!

ಆನ್‌ಲೈನ್‌ ಮೂಲಕವೇ ಸಂಗಾತಿಗಳನ್ನು ಹುಡುಕುವ ಮತ್ತೊಂದು ಆಪ್ ಆಗಿರುವ ಜೀವನ್‌ಸಾಥಿ ಆಪ್ ಅನ್ನು ಕೂಡ ತೆರವುಗೊಳಿಸಲಾಗುತ್ತಿದ್ದು, ಇದಕ್ಕಾಗಿ ಇನ್ಫೋ ಎಡ್ಜ್‌ ಕಂಪನಿಗೂ ನೋಟಿಸ್‌ ನೀಡಿದೆ ಎಂದು ತಿಳಿದುಬಂದಿದೆ. ಇನ್ನು ಮ್ಯಾಟ್ರಿಮೋನಿ ಆಪ್ ಗಳಾದ ಭಾರತ್‌ ಮ್ಯಾಟ್ರಿಮೋನಿ, ಕ್ರಿಶ್ಚಿಯನ್‌ ಮ್ಯಾಟ್ರಿಮೋನಿ, ಮುಸ್ಲಿಂ ಮ್ಯಾಟ್ರಿಮೋನಿ ಹಾಗೂ ಜೋಡಿ ಆಪ್ ಗಳನ್ನು ಈಗಾಗಲೇ ಡಿಲೀಟ್‌ ಮಾಡಲಾಗಿದೆ ಎಂದು ಮುರುಗಾವೇಲ್‌ ಜಾನಕಿರಾಮ್‌ ಮಾಹಿತಿ ನೀಡಿದ್ದಾರೆ. ಆಪ್ ಗಳನ್ನು ರಿಮೂವ್‌ ಮಾಡುತ್ತಲೇ ಮ್ಯಾಟ್ರಿಮೋನಿ ಹಾಗೂ ಇನ್ಫೋ ಎಡ್ಜ್‌ ಷೇರುಗಳ ಮೌಲ್ಯವೂ ಕುಸಿತ ಕಂಡಿದೆ. ಇದು ಎರಡೂ ಕಂಪನಿಗಳಿಗೆ ಹೆಚ್ಚಿನ ಆತಂಕ ತಂದೊಡ್ಡಿದೆ.

Categories
ತೀರ್ಥಹಳ್ಳಿ ವ್ಯವಹಾರ

ಫ್ಯಾಷನ್ ಬ್ರಿಗೇಡ್ ವಾರ್ಷಿಕ ಡ್ರಾ..!

ಫ್ಯಾಷನ್ ಬ್ರಿಗೇಡ್ ವಾರ್ಷಿಕ ಡ್ರಾ..!
– 9 ಮಂದಿ ಗ್ರಾಹಕರಿಗೆ ವಿಶೇಷ ಬಹುಮಾನ.. ಯಾರಿಗೆ ಲಕ್?..ಇಲ್ಲಿದೆ ಡೀಟೇಲ್ಸ್
– ಸಂತೋಷ್ ದೇವಾಡಿಗ, ಸುಜಿತ್ ಸಾಲಿಯಾನ್, ಕಟ್ಟೆ ಕರಣ್, ಉಮೇಶ್ ಶೆಟ್ಟಿ, ಶ್ರೀನಂದಾ ಅವರಿಂದ ಡ್ರಾ

NAMMUR EXPRESS BUSINESS NEWS
ತೀರ್ಥಹಳ್ಳಿಯ ಪ್ರಸಿದ್ಧ ಪುರುಷರ ಫ್ಯಾಷನ್ ವಸ್ತ್ರ ಮಳಿಗೆ ಫ್ಯಾಷನ್ ಬ್ರಿಗೇಡ್ ಸಂಸ್ಥೆಯ ವಾರ್ಷಿಕ ಡ್ರಾ ನಡೆದಿದ್ದು, ಸುಮಾರು 9 ಮಂದಿ ಗ್ರಾಹಕರಿಗೆ ವಿಶೇಷ ಬಹುಮಾನ ಲಭ್ಯವಾಯಿತು. ಪುರುಷರ ಎಲ್ಲಾ ರೀತಿಯ ವಸ್ತ್ರಗಳು, ಫ್ಯಾಷನ್ ಬಟ್ಟೆಗಳು ಲಭ್ಯವಿರುವ ಅಪಾರ ಗ್ರಾಹಕರ ಮೆಚ್ಚಿನ ಅಂಗಡಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಘಟಕದ ತಾಲೂಕು ಅಧ್ಯಕ್ಷರಾದ ಸಂತೋಷ್ ದೇವಾಡಿಗ, ತೀರ್ಥಹಳ್ಳಿ ಎನ್ ಎಸ್ ಯು ಐ ಅಧ್ಯಕ್ಷ ಸುಜಿತ್ ಸಾಲಿಯಾನ್, ಕರವೇ ಪ್ರಮುಖರೂ ಉದ್ಯಮಿ ಕಟ್ಟೆ ಕರಣ್, ಉಮೇಶ್ ಶೆಟ್ಟಿ, ದಬ್ಬಣಗದ್ದೆ ಶ್ರೀನಂದಾ ಡ್ರಾ ನಡೆಸಿಕೊಟ್ಟರು.

ಏನಿದು ಯೋಜನೆ..?

ವಿಶೇಷ ಬಂಪರ್ ಬಹುಮಾನ ಪ್ರತಿ 1000 ರೂ ಖರೀದಿ ಮೇಲೆ ಒಂದು ಕೂಪನ್ ನೀಡಲಾಗಿತ್ತು. ಗ್ರಾಹಕರು ಈ ಯೋಜನೆ ಜತೆಗೆ ಅತ್ಯಂತ ಉತ್ತಮ ಡಿಸೈನ್, ಗುಣಮಟ್ಟ, ಸೇವೆಗಾಗಿ ಫ್ಯಾಷನ್ ಬ್ರಿಗೇಡ್ ಬಟ್ಟೆ ಅಂಗಡಿಯಲ್ಲಿ ಖರೀದಿ ಮಾಡಿದ್ದರು. ಈ ಹಿಂದೆ ತಿಲಿ ಫ್ಯಾಷನ್ ಇದ್ದ ಅಂಗಡಿ ಹೊಸ ಮ್ಯಾನೇಜ್ ಮೆಂಟ್ ಜತೆ ಫ್ಯಾಷನ್ ಬ್ರಿಗೇಡ್ ಆಗಿ ಬದಲಾಗಿ ಇದೀಗ ವಸ್ತ್ರ ಉದ್ಯಮದಲ್ಲಿ ತಮ್ಮದೇ ಗ್ರಾಹಕರನ್ನು ಹೊಂದಿದೆ.

ಬಹುಮಾನ ಗೆದ್ದವರು ಯಾರು ಯಾರು..?

ಬಂಪ‌ರ್ ಬಹುಮಾನ: ವಾಷಿಂಗ್ ಮೆಷಿನ್
ಶ್ರೇಯಸ್ ಕುಕ್ಕೆ 9901310067

ಮೊದಲ ಬಹುಮಾನಃ  ಸ್ಮಾರ್ಟ್ ಎಲ್‌.ಇ. ಡಿ ಟಿವಿ
ಮಹಾಬಲೇಶ್ ಪುರ್ಲೆಕೊಪ್ಪ 9481063239

ದ್ವಿತೀಯ ಬಹುಮಾನ: ಸ್ಪೋರ್ಟ್ಸ್ ಸೈಕಲ್
ಸುನಿಲ್ S L ಶಿವಳ್ಳಿ 9480766112

ತೃತೀಯ ಬಹುಮಾನ : ಸ್ಮಾರ್ಟ್ ವಾಚ್
ಸುನಿಲ್ H R ಹುಲಿಗುದ್ದು 8762329033

ಆಕರ್ಷಕ 5 ಸಮಾಧಾನಕರ ಬಹುಮಾನಗಳು

ಮಹೇಶ್ R ಬೆಟ್ಟಮಕ್ಕಿ 9731315573

ಸುನಿಲ್ ಕುಮಾರ್ V M ವರ್ತೆಕೇರಿ 8147651947

ಶಿವರಾಜ್ ಬಂಡಿಗಡಿ 9731368464

ಪವನ್ K ದವಣೆಬೈಲು 8217047189

ರಥನ್ ನಾಲೂರು 8277331235

ಕೂಡಲೇ ಭೇಟಿ ನೀಡಿ ಬಹುಮಾನ ಪಡೆದುಕೊಳ್ಳಿ

ಕಟ್ಟೆ ಕಾಂಪ್ಲೆಕ್ಸ್, ಮಾರಿಕಾಂಬಾ ದೇವಸ್ಥಾನ ಪಕ್ಕ ಆಜಾದ್ ರಸ್ತೆ, ತೀರ್ಥಹಳ್ಳಿ

9740556069, 9845497914

Categories
ಮಲ್ನಾಡ್ ಹೊಸನಗರ

ನಿರುದ್ಯೋಗ ಸಮಸ್ಯೆಗೆ ಮಲೆನಾಡಲ್ಲಿ ಎರಡನೇ ಬಲಿ!

ನಿರುದ್ಯೋಗ ಸಮಸ್ಯೆಗೆ ಮಲೆನಾಡಲ್ಲಿ ಎರಡನೇ ಬಲಿ!
– ಸಾಗರ: ಮನೆ ಟೆರೇಸ್ ಮೇಲೆ ನೇಣಿಗೆ ಶರಣಾದ ವ್ಯಕ್ತಿ
– ಹೊಸನಗರ: ವಿಷ ಸೇವಿಸಿ ಯುವಕ ಆತ್ಮಹತ್ಯೆ
– ಸೊರಬ: ಒಡಹುಟ್ಟಿದ ಅಣ್ಣನನ್ನೇ ಕೊಂದ ತಮ್ಮ

NAMMUR EXPRESS NEWS
ಸಾಗರ: ಮನೆಯ ಟೆರೇಸ್ ಮೇಲಿನ ಸಿಂಟೆಕ್ಸ್‌ ಸ್ಟ್ಯಾಂಡಿಗೆ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರು ನಗರದಲ್ಲಿ ನಡೆದಿದೆ. ಮಧುಸೂದನ್(55) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಸಾಗರದ ಹೆಸರಾಂತ ಬೇಕರಿ ಒಂದರ ಉದ್ಯೋಗಿಯಾಗಿದ್ದ ಮಧುಸೂದನ್ ಇತ್ತಿಚೆಗೆ ಕೆಲಸ ಬಿಟ್ಟಿದ್ದ ಎನ್ನಲಾಗಿದೆ. ಬೇಕರಿಯಲ್ಲಿ ಕೆಲಸ ಬಿಟ್ಟ ಬಳಿಕ ಬೇರೆಡೆ ಸಿಕ್ಕಿರಲಿಲ್ಲ. ಉದ್ಯೋಗಕ್ಕಾಗಿ ಸಿರ್ಸಿಗೆ ಹೋಗಬೇಕಾಗಿತ್ತು. ಉದ್ಯೋಗ ಅರಸಿಕೊಂಡು ಸಿರ್ಸಿಗೆ ಹೋಗಲಾಗದೆ, ಸ್ಥಳೀಯವಾಗಿ ಯಾವುದೇ ಉದ್ಯೋಗವಿಲ್ಲದೆ ಜೀವನದಲ್ಲಿ ಜುಗುಪ್ಪೆಗೊಂಡು ತನ್ನ ಸಂಬಂಧಿಕರ ಮನೆಯ ಟೆರೇಸ್ ಮೇಲಿನ ಸಿಂಟೆಕ್ಸ್ ಸ್ಟ್ಯಾಂಡಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಟೆರೇಸ್‌ ಮೇಲೆ ಮೃತದೇಹ ಕಂಡು ಗಾಬರಿಗೊಂಡ ಸಂಬಂಧಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷ ಸೇವಿಸಿ ಯುವಕ ಆತ್ಮಹತ್ಯೆ

ಹೊಸನಗರ ತಾಲೂಕು ರಿಪ್ಪನ್‌ಪೇಟೆ ಪಟ್ಟಣದ ಸಮೀಪದ ಮೂಗೂಡ್ತಿ ಗ್ರಾಮದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನಡೆದಿದೆ. ಮೂಗೂಡ್ತಿ ಗ್ರಾಮದ ನಿವಾಸಿ ಕೀರ್ತಿ (22) ಮೃತಪಟ್ಟ ಯುವಕನಾಗಿದ್ದು ಈತನು ಬೆಂಗಳೂರಿನಲ್ಲಿ ಕ್ಯಾಟರಿಂಗ್ ವೃತ್ತಿ ಮಾಡಿಕೊಂಡಿದ್ದನು. ಗುರುವಾರ ಸಂಜೆ ಬೆಂಗಳೂರಿನಿಂದ ಸ್ವಗ್ರಾಮ ಮೂಗೂಡ್ತಿಗೆ ಬಂದು ತನ್ನ ಅಣ್ಣನಿಗೆ ಮೊಬೈಲ್ ಮೂಲಕ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತಿದ್ದೇನೆ ಎಂದು ಸ್ವತೋಟಕ್ಕೆ ತೆರಳಿ ವಿಷ ಸೇವಿಸಿದ್ದಾನೆ. ಗಾಬರಿಗೊಂಡ ಅಣ್ಣ ತಮ್ಮನಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾನೆ. ಕೆಲಸಮಯದ ನಂತರ ಆತನೆ ಅಣ್ಣನಿಗೆ ಕರೆ ಮಾಡಿ ತೋಟದಲ್ಲಿ ವಿಷ ಸೇವಿಸಿರುವ ಮಾಹಿತಿ ನೀಡಿದ್ದಾನೆ ತಕ್ಷಣ ತೋಟಕ್ಕೆ ತೆರಳಿ ಆತನನ್ನು ಕೂಡಲೇ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಿ ಅಲ್ಲಿಂದ ಮಣಿಪಾಲ್ ಗೆ ಕರೆದೊಯ್ದು ನಂತರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸಂಜೆ ಚಿಕಿತ್ಸೆ ಫಲಿಸದೇ ಕೀರ್ತಿ ಮೃತಪಟ್ಟಿದ್ದಾನೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಡಹುಟ್ಟಿದ ಅಣ್ಣನನ್ನೇ ಹತ್ಯೆಗೈದ ತಮ್ಮ!

ಆನಂದಪುರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದಲ್ಲಿ ಗುರುವಾರ ಸಂಜೆ ಓರ್ವ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಆರೋಪಿಗಳು ಎಸ್ಕೆಪ್ ಆಗಿದ್ದರು. ಹೆದ್ದಾರಿ ಪಕ್ಕದಲ್ಲಿ ಕೊಲೆ ನೋಡಿದ ಜನರು ಗಾಬರಿಯಾಗಿದ್ದರು. ಕೊಲೆಯಾದ ವ್ಯಕ್ತಿ ಸೊರಬ ತಾಲೂಕಿನ ಉಡಿನೀರು ಗ್ರಾಮದ ರಫಿಕ್ (39) ಎನ್ನುವುದು ಪೊಲೀಸರಿಗೆ ತನಿಖೆ ವೇಳೆ ತಿಳಿದು ಬಂದಿದೆ. ಮೃತ ರಫಿಕ್ ನನ್ನು ಅವನ ಸ್ವಂತ ತಮ್ಮ ಇನಾಯತ್ ಹಾಗೂ ಅಕ್ಕನ ಮಗ ಸಮೀರ್ ಶಿವಮೊಗ್ಗಕ್ಕೆ ಶಾಪಿಂಗ್ ನೆಪದಲ್ಲಿ ಕರೆದುಕೊಂಡು ಬಂದು ಹಿಂದಿರುಗುವಾಗ ಮೊದಲು ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಬಳಿಕ ತಂತಿಯಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾರೆ. ಕೊನೆಗೆ ಹೋಗುವಾಗ ಆತನ ಮೇಲೆ ಕಾರ್ ಕೂಡ ಹತ್ತಿಸಿದ್ದಾರೆ. ಆತ ಮೃತಪಟ್ಟಿರುವುದು ಖಚಿತವಾದ ಬಳಿಕ ಇಬ್ಬರು ಕಾರ್‌ನಲ್ಲಿ ಅಲ್ಲಿಂದ ಎಸ್ಕೆಪ್ ಆಗಿದ್ದರು. ಕುಟುಂಬದಲ್ಲಿ ಶುರುವಾದ ಆಸ್ತಿ ವಿವಾದವು ಅಣ್ಣ ಮತ್ತು ತಮ್ಮ ಇಬ್ಬರನ್ನು ಬಲಿ ಪಡೆದಿದೆ. ಅಣ್ಣನ ಕೊಲೆ ಕೇಸ್‌ನಲ್ಲಿ ಈಗ ತಮ್ಮನು ಜೈಲು ಸೇರಿದ್ದಾನೆ. ಮೂವರು ಗಂಡು ಮಕ್ಕಳಲ್ಲಿ ಇಬ್ಬರು ಕೊಲೆಯಾಗಿದ್ದಾರೆ.

Categories
ಬೆಂಗಳೂರು ಮಾಹಿತಿ ರಾಜ್ಯ

ಪೋಷಕರೆ ಗಮನಿಸಿ: ಮಾ.3ಕ್ಕೆ ಪಲ್ಸ್ ಪೋಲಿಯೋ

ಪೋಷಕರೆ ಗಮನಿಸಿ: ಮಾ.3ಕ್ಕೆ ಪಲ್ಸ್ ಪೋಲಿಯೋ
– 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿ
– ನಿಮ್ಮೂರಲ್ಲೂ ಲಸಿಕೆ ಹಾಕ್ತಾರೆ.. ಮರೆಯಬೇಡಿ

NAMMUR EXPRESS NEWS
ಬೆಂಗಳೂರು: ಪೊಲಿಯೋ ರಾಷ್ಟ್ರೀಯ ರೋಗನಿರೋಧಕ ದಿನದ ಅಂಗವಾಗಿ ಮಾರ್ಚ್ 3ರಂದು ನಡೆಯುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಯಾವುದೇ ಅರ್ಹ ಮಗು ಪೋಲಿಯೋ ಲಸಿಕೆಯಿಂದ ಹೊರಗುಳಿಯದಂತೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ. ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಯವರು ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆಯನ್ನು ನೀಡುವ ಮೂಲಕ ಚಾಲನೆ ನೀಡಲಿದ್ದಾರೆ.

ಲಸಿಕೆ ನೀಡಲು ತರಬೇತಿ

ಲಸಿಕೆ ನೀಡಲು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನಗರ ಪ್ರದೇಶಗಳಲ್ಲಿ ಲಸಿಕೆ ನೀಡಲು ಅವಶ್ಯಕತೆ ಇರುವ ಕಡೆಗಳಲ್ಲಿ ತರಬೇತಿಯಲ್ಲಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ನೇಮಿಸಿಕೊಳ್ಳಲಾಗಿದೆ. ಪ್ರವಾಸಿ ಸ್ಥಳಗಳು, ಜನಸಂದಣಿ ಹೆಚ್ಚು ಇರುವ ಕಡೆ ಟ್ರಾನ್ಸಿಟ್ ಬೂತ್‌ಗಳನ್ನು ತೆರೆಯಲಾಗುವುದು. ಲಸಿಕಾ ಕಾರ್ಯಕರ್ತೆಯರು ಇಲ್ಲಿ ಕಂಡು ಬರುವ ಮಕ್ಕಳಿಗೆ ಲಸಿಕೆಯನ್ನು ನೀಡುವರು. ಎಲ್ಲಾ ಕೆಎಸ್‌ಆರ್ ಟಿಸಿ ಬಸ್‌ ನಿಲ್ದಾಣಗಳಲ್ಲಿ ಟ್ರಾನ್ಸಿಟ್‌ ಬೂತ್‌ಗಳನ್ನು ತೆರೆಯಲಾಗುವುದು. ಒಂದರಿಂದ ನಾಲ್ಕನೇ ದಿನದವರೆಗಿನ ದಿನಗಳಲ್ಲಿ ಸಂತೆ ನಡೆಯುವ ಸ್ಥಳಗಳಲ್ಲಿ ಸಹ ಟ್ರಾನ್ಸಿಟ್‌ ಬೂತ್‌ಗಳನ್ನು ತೆರೆದು ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುವುದು.

ತೋಟ, ಮನೆಗೂ ಬರ್ತಾರೆ

ಕಾರ್ಮಿಕರು ಹೆಚ್ಚಾಗಿ ಇರುವ ತೋಟಗಳನ್ನು ಗುರಿಯಾಗಿಸಿ, ಮನೆ ಮನೆಗೆ ಭೇಟಿ ಸಂದರ್ಭದಲ್ಲಿ ಇಂತಹ ಪ್ರದೇಶಗಳಲ್ಲಿ ಕಂಡುಬರುವ ಮಕ್ಕಳಿಗೆ ಲಸಿಕೆ ನೀಡಲು ಸೂಕ್ತ ಕ್ರಮ ಕೈಗೊಳ್ಳಲು ಎಲ್ಲಾ ಮೇಲ್ವಿಚಾರಕರಿಗೆ ಮಾಹಿತಿ ಸೂಚಿಸಲಾಗಿದೆ.
ಸಾರ್ವಜನಿಕರು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಸದುಪಯೋಗ ಮಾಡಿಕೊಂಡು ತಮ್ಮ ಮನೆಯಲ್ಲಿರುವ 0-5 ವರ್ಷದೊಳಗಿನ ಮಕ್ಕಳು ಇದ್ದಲ್ಲಿ ಕಡ್ಡಾಯವಾಗಿ ಲಸಿಕೆ ಹಾಕಿಸುವುದು, ತಮ್ಮ ಮನೆಯ ಸಮೀಪವಾಗಲಿ ಅಥವಾ ತಮ್ಮ ತೋಟದಲ್ಲಿ ಕಾರ್ಮಿಕರ ಮಕ್ಕಳೇ ಇರಲಿ ಅಥವಾ ತಮ್ಮ ಮನೆಯ ಸಮೀಪಕ್ಕೆ ಹೊಸದಾಗಿ ಬಂದಿರುವ ಕುಟುಂಬಗಳಲ್ಲಿ 5 ವರ್ಷದೊಳಗಿನ ಮಕ್ಕಳು ಕಂಡುಬಂದಲ್ಲಿ ಹಾಗೂ ತಮ್ಮ ಗಮನಕ್ಕೆ ಬರುವ ಯಾವುದೇ ಮಗುವನ್ನು ಹತ್ತಿರದ ಲಸಿಕಾ ಬೂತ್‌ಗಳಲ್ಲಿ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ತಿಳಿಸಲಾಗಿದೆ.

Categories
ಆರೋಗ್ಯ ಹೊಸನಗರ

ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆ ಸರಿ ಆಯ್ತು..!

ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆ ಸರಿ ಆಯ್ತು..!
– ಇನ್ನು ಮುಂದೆ 24 ಗಂಟೆಯೂ ವೈದ್ಯರ ಸೇವೆ ಲಭ್ಯ
– ನಮ್ಮೂರ್ ಎಕ್ಸ್ ಪ್ರೆಸ್ ವಿಶೇಷ ವರದಿ ಎಫೆಕ್ಟ್
– ಶಾಸಕ ಬೇಳೂರು ಗೋಪಾಲಕೃಷ್ಣ ಖಡಕ್ ಆದೇಶ

NAMMUR EXPRESS NEWS
ಹೊಸನಗರ: ಹೊಸನಗರ ತಾಲೂಕು ರಿಪ್ಪನ್‌ಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಈಗ ಎಲ್ಲಾ ಸೌಲಭ್ಯಗಳು ಬರಲಿವೆ. ಇತ್ತೀಚಿಗೆ ಅನೇಕ ಜನರ ಆರೋಪದಿಂದ ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ ವಿಶೇಷ ವರದಿಯೊಂದನ್ನು ಮಾಡಿತ್ತು. ಈ ಹಿನ್ನೆಲೆ ಅನೇಕ ಮಾಧ್ಯಮಗಳು ಕೂಡ ಆಸ್ಪತ್ರೆ ಸಮಸ್ಯೆ ಬಗ್ಗೆ ದನಿ ಎತ್ತಿದ್ದವು. ಇದೀಗ ಹೊಸನಗರ-ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕೈಗಾರಿಕಾ ಅರಣ್ಯ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ ಖಡಕ್ ಕ್ರಮ ತೆಗೆದುಕೊಂಡಿದ್ದಾರೆ.

ಏನೇನು ಹೊಸ ಸೌಲಭ್ಯ?

ರಿಪ್ಪಿನಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ವೈದ್ಯರು ಕಾರ್ಯ ನಿರ್ವಹಿಸಲಿದ್ದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ರಾತ್ರಿ ಪಾಳಿಯಲ್ಲಿ ಸಮರ್ಪಕವಾದ ವೈದ್ಯರ ಸೇವೆಯ ಕೊರತೆಯಿಂದ ಹಲವಾರು ಅವಘಡಗಳು ನಡೆದಿತ್ತು. ಈ ಬಗ್ಗೆ ಸಂಬಂದಪಟ್ಟವರಿಗೆ ಎಷ್ಟೇ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗದೇ ಜನಸಾಮಾನ್ಯರು ಹಿಡಿಶಾಪ ಹಾಕುತಿದ್ದದ್ದು ಸರ್ವೇ ಸಾಮಾನ್ಯವಾಗಿತ್ತು. ಇತ್ತೀಚೆಗೆ ವೈದ್ಯರ ಕೊರತೆಯಿಂದ ಮಹಿಳೆಯೊಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದ ಶಾಸಕರು ಸ್ಥಳದಲ್ಲಿಯೇ ಸಂಭದಪಟ್ಟ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಿ ಆಸ್ಪತ್ರೆಯ ನ್ಯೂನ್ಯತೆಗಳನ್ನು ಸರಿಪಡಿಸುವಂತೆ ತಾಕೀತು ಮಾಡಿದ್ದರು.

3 ವೈದ್ಯರು, 5 ಮಂದಿ ನರ್ಸ್ ನಿಯೋಜನೆ

ಕಳೆದ ಹಲವಾರು ವರ್ಷಗಳಿಂದ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರುಗಳ ಸೇವೆ ನಿರಂತರವಾಗಿ ಇರಲಿಲ್ಲ. ಮಹಿಳೆಯರು ವೃದ್ಧರು ಹಾಗೂ ಮಕ್ಕಳಿಗೆ ತುರ್ತು ಚಿಕಿತ್ಸೆಯ ಅಗತ್ಯತೆಯ ಸಂದರ್ಭದಲ್ಲಿ ಜತೆಗೆ ಹೃದಯಘಾತ,ರಸ್ತೆ ಅಪಘಾತ, ಹಾಗೂ ವಿಷ ಸೇವನೆಯಂತಹ ತುರ್ತು ಸಂದರ್ಭದಲ್ಲಿ ವೈದ್ಯರುಗಳ ಸೇವೆ ಇಲ್ಲದೆ ಮೃತಪಟ್ಟಿರುವ ಘಟನೆಯೂ ಸಹ ನಡೆದಿತ್ತು. ಇದನ್ನೆಲ್ಲ ಗಮನಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ಗ್ರಾಮೀಣ ಪ್ರದೇಶದ ಜನತೆಯ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ದಿನದ 24 ಗಂಟೆ ಸೇವೆಯನ್ನು ಸಲ್ಲಿಸಲು ಮೂರು ಜನ ವೈದ್ಯರು ಹಾಗೂ 05 ಜನ ದಾದಿಯರನ್ನು ನೇಮಕಗೊಳಿಸಿದ್ದಾರೆ.

ಯಾವ ಯಾವ ವೈದ್ಯರು ಲಭ್ಯ!

ಹೊರ ರೋಗಿಗಳು ಬೆಳಿಗ್ಗೆ 09 ರಿಂದ ಸಂಜೆ 4.30 ರೊಳಗೆ ಚಿಕಿತ್ಸೆ ಪಡೆದುಕೊಳ್ಳಬಹುದು ಆ ನಂತರದಲ್ಲಿ ಎಮರ್ಜೆನ್ಸಿಯಂತಹ ಪ್ರಕರಣಗಳಿಗೆ ವೈದ್ಯರ ಸೇವೆ ಲಭ್ಯವಿದೆ. ರೇಬಿಸ್ ಇಂಜೆಕ್ಷನ್, ಹಾಗೂ ಮಾತ್ರೆಗಳನ್ನು ಪಡೆದುಕೊಳ್ಳುವವರು ಸಂಜೆ 4.30 ರೊಳಗೆ ಪಡೆದುಕೊಳ್ಳಬಹುದಾಗಿದೆ.

ಆಂಬುಲೆನ್ಸ್ ಸರಿಯಾಗಿಲ್ಲ!

ರಿಪ್ಪಿನಪೇಟೆ ಸರ್ಕಾರಿ ಆಸ್ಪತೆ ಆಂಬುಲೆನ್ಸ್ ಬಗ್ಗೆ ಸ್ವಲ್ಪ ಗಮನಿಸಬೇಕಿದೆ. ಜತೆಗೆ ಸಿಬ್ಬಂದಿ ಸಮಯ ಪಾಲನೆ, ಅಧಿಕಾರಿಗಳ ಕಾಳಜಿ ಬೇಕಿದೆ.

ನಮ್ಮೂರ್ ಎಕ್ಸ್ ಪ್ರೆಸ್ ವಿಶೇಷ ವರದಿಗೆ ಹೊಸನಗರ ತಾಲೂಕಿನ ಜನ ಧನ್ಯವಾದ ಅರ್ಪಿಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ದೊಡ್ಡ ಸರ್ಕಾರಿ ಕಟ್ಟಡ ಉದ್ಘಾಟನೆಗೆ ಸಿದ್ಧ!

ತೀರ್ಥಹಳ್ಳಿಯ ದೊಡ್ಡ ಸರ್ಕಾರಿ ಕಟ್ಟಡ ಉದ್ಘಾಟನೆಗೆ ಸಿದ್ಧ!
– 3 ಅಂತಸ್ತಿನ ತಾಲೂಕು ಪಂಚಾಯತ್ ನೂತನ ಕಟ್ಟಡ
– ಮಾ.4 ಸೋಮವಾರ ಉದ್ಘಾಟನೆ: ಏನಿದು ವಿಶೇಷ?
– ಎಸಿಸಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಯಿಂದ ಉತ್ತಮ ಕಾಮಗಾರಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಅತೀ ದೊಡ್ಡ ಸರ್ಕಾರಿ ಕಟ್ಟಡ ನೂತನ ತಾಲೂಕು ಪಂಚಾಯತ್ ಮಾ.4ರ ಸೋಮವಾರ ಲೋಕಾರ್ಪಣೆಗೊಳ್ಳಲಿದೆ. ಮಾ.4ಕ್ಕೆ ಸೋಮವಾರದಂದು ಮಧ್ಯಾಹ್ನ 3:00ಕ್ಕೆ ಗ್ರಾಮೀಣಾಭಿವೃದ್ಧಿ ಭವನ(ತಾಲ್ಲೂಕು ಪಂಚಾಯತ್ ಕಟ್ಟಡ ) ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗಿದೆ. ಶಾಸಕರಾದ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮೀಣಾ ಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಗ್ರಾಮೀಣಾಭಿವೃದ್ಧಿ ಭವನದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಈಗಾಗಲೇ ಅಂತಿಮ ಸಿದ್ಧತೆ ನಡೆದಿದೆ. ತೀರ್ಥಹಳ್ಳಿಯ ಪ್ರಸಿದ್ಧ ಗುತ್ತಿಗೆ ಸಂಸ್ಥೆ ಎಸಿಸಿ ಕನ್ಸ್ಟ್ರಕ್ಷನ್ಸ್ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಈ ಕಾಮಗಾರಿ ಮಾಡಿದೆ. ಮೂರು ಅಂತಸ್ತಿನ ಈ ಕಟ್ಟಡದ ಮೇಲೆ ದೊಡ್ಡ ಗಡಿಯಾರ ಇರಲಿದ್ದು, ಗಂಟೆಗೊಮ್ಮೆ ಹೊಡೆದುಕೊಳ್ಳಲಿದೆ.

ಏನೇನಿದೆ ಈ ಕಟ್ಟಡದಲ್ಲಿ…?

ರಾಜ್ಯದಲ್ಲೇ ಮಾದರಿಯಂತಿರುವ ಹಾಗೂ ತೀರ್ಥಹಳ್ಳಿಯ ಹೆಗ್ಗುರುತು ಆಗಲಿರುವ ಈ ಗ್ರಾಮೀಣಾಭಿವೃದ್ಧಿ ಭವನದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ, ತಾಲೂಕು ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿ, ತಾಲೂಕು ಪಂಚಾಯತ್ ಕಚೇರಿ, ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆರೋಗ್ಯ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಅಕ್ಷರ ದಾಸೋಹ, ಹಿಂದುಳಿದ ವರ್ಗಗಳ ಇಲಾಖೆ, ಕಾರ್ಮಿಕ ಹಾಗೂ ಕೈಗಾರಿಕಾ ಇಲಾಖೆ ಒಂದೇ ಸೂರಿನಡಿ ಸೇವೆ ಸಲ್ಲಿಸಲಿವೆ.

Categories
ಚಿಕ್ಕಮಗಳೂರು ಬೆಂಗಳೂರು

ರಾಜಧಾನಿ ಕೆಫೆಯಲ್ಲಿ ನಿಗೂಢ ಸ್ಪೋಟ!

ರಾಜಧಾನಿ ಕೆಫೆಯಲ್ಲಿ ನಿಗೂಢ ಸ್ಪೋಟ!
– 10ಕ್ಕೂ ಹೆಚ್ಚು ಮಂದಿಗೆ ಗಾಯ: ಏನಿದು ಬ್ಲಾಸ್ಟ್?
– ಉದ್ಯೋಗ ಸಿಗದಕ್ಕೆ ಯುವಕ ಆತ್ಮಹತ್ಯೆ!
– ಸೇನೆಯ ಪರೀಕ್ಷೆಯಲ್ಲಿ ಫೇಲ್ ಆದ ಯುವಕ: ಶೃಂಗೇರಿಯಲ್ಲಿ ಘಟನೆ

NAMMUR EXPRESS NEWS
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಪೋಟ ಸಂಭವಿಸಿದೆ. ಸ್ಪೋಟದ ತೀವ್ರತೆಗೆ ಹೋಟೆಲ್ ಹಾನಿ ಉಂಟಾಗಿದೆ. ಘಟನೆಯಿಂದಾಗಿ ಕಫೆಯಲ್ಲಿದ್ದ ಹಲವು ಗ್ರಾಹಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಲ್ಲಿ ಪದೇ ಪದೇ ಸ್ಪೋಟ ಪ್ರಕರಣಗಳು ಸಂಭವಿಸುತ್ತಿದೆ. ಇದೀಗ ಬೆಂಗಳೂರಿನ ಕುಂದಲಹಳ್ಳಿ ಗೇಟ್ ಬಳಿಯಲ್ಲಿ ಇರುವ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟಕ್ಕೆ ಬಾಯ್ಲರ್ ಸ್ಪೋಟಗೊಂಡಿರುವುದು ಕಾರಣ ಎನ್ನಲಾಗುತ್ತಿದೆ.

ಆದರೆ ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನೆಯಿಂದಾಗಿ ಸ್ಥಳೀಯರು ಆತಂಕ ಗೊಂಡಿದ್ದಾರೆ. ಘಟನೆಯಿಂದಾಗಿ ಸುಮಾರು ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಸ್ಪೋಟ ಸಂಭವಿಸುವ ವೇಳೆಯಲ್ಲಿ ಕಫೆಯಲ್ಲಿ ಸಾಕಷ್ಟು ಗ್ರಾಹಕರು ಇದ್ದರು, ಈ ಪೈಕಿ ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂಧಿ ಭೇಟಿ ನೀಡಿದ್ದು, ಬೆಂಕಿ ನಂದಿಸಿದ್ದಾರೆ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.

ಉದ್ಯೋಗ ಸಿಗದಕ್ಕೆ ಯುವಕ ಆತ್ಮಹತ್ಯೆ!

ಶೃಂಗೇರಿ: ಉದ್ಯೋಗ ಸಿಗದ ಕಾರಣ ತಾಲ್ಲೂಕಿನ ಕಿಗ್ಗಾ ಸಮೀಪದ ಯಡದಾಳು ಗ್ರಾಮದ ಕಾರ್ತಿಕ್ (23) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ತಾಯಿ, ಸಹೋದರ ಇದ್ದಾರೆ. ‘ಸೇನೆ ಸೇರುವ ಹಂಬಲದಲ್ಲಿದ್ದ ಕಾರ್ತಿಕ್ ಎರಡು ವರ್ಷಗಳಿಂದ ಸಿದ್ಧತೆ ಮಾಡಿಕೊಂಡಿದ್ದರು. ಎರಡು ಬಾರಿ ಸೇನಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. 23 ವರ್ಷ ತುಂಬಿದ್ದರಿಂದ ಸೇನಾ ಸಂಬಂಧಿತ ಪರೀಕ್ಷೆಗಳಿಗೆ ಹಾಜರಾಗಲು ವಯಸ್ಸು ಮೀರಿತ್ತು. ಬೇರೆ ಕೆಲಸಕ್ಕೂ ಪ್ರಯತ್ನಿಸಿರಲಿಲ್ಲ. ಇದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಅವರ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೆತ್ ನೋಟ್ ಬರೆದಿಟ್ಟಿರುವ ಕಾರ್ತಿಕ್, ‘ನಾನು ಭಾರತೀಯ ಸೇನೆ ಸೇರಿದಂತೆ ಹಲವು ಕೋರ್ಸ್‌ಗಳ ಪರೀಕ್ಷೆ ಎದುರಿಸಿದ್ದೇನೆ. ಇದು ನನ್ನ ಕೊನೆಯ ಪ್ರಯತ್ನವಾಗಿತ್ತು. ಇದೂ ವಿಫಲವಾಗಿದೆ. ಇದನ್ನು ನನ್ನ ಮನೆಯವರಿಗೆ ಹೇಳುವ ಧೈರ್ಯ ನನಗಿಲ್ಲ. ಮೊಬೈಲ್ ಫೋನ್ ಅನ್ನು ಇಎಂಐ ಮೂಲಕ ಖರೀದಿಸಿದ್ದು, ಅದನ್ನು ನನ್ನ ಖಾತೆಯಿಂದಲೇ ಪಾವತಿಸಿ’ ಎಂದು ಅದರಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Categories
ಬೆಂಗಳೂರು

ಬೆಂಗಳೂರಿನಲ್ಲಿ ರಾಜ್ಯಮಟ್ಟದ ಈಡಿಗ ಕ್ರಿಕೆಟ್ ಲೀಗ್..!

ಬೆಂಗಳೂರಿನಲ್ಲಿ ರಾಜ್ಯಮಟ್ಟದ ಈಡಿಗ ಕ್ರಿಕೆಟ್ ಲೀಗ್..!
– ಬೆಂಗಳೂರಿನ ಕ್ರಿಕೆಟ್ ಮೂಲಕ ರಾಜ್ಯದ ಈಡಿಗ ಸಮಾಜದ ಸಮ್ಮಿಲನ
– ಮಾ.2ರಂದು ಬೆಳಗ್ಗೆ ಉದ್ಘಾಟನಾ ಸಮಾರಂಭ

NAMMUR EXPRESS NEWS
ಬೆಂಗಳೂರು: ಆರ್ಯ ಈಡಿಗ ಯೂತ್ ಕಮಿಟಿ(ರಿ) ಬೆಂಗಳೂರು ಇವರ ಆಶ್ರಯದಲ್ಲಿ ಮಾರ್ಚ್ 2 ಮತ್ತು 3 ರಂದು ರಾಜ್ಯ ಮಟ್ಟದ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನು ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯದ ಅಥ್ಲೆಟಿಕ್ ಮೈದಾನದಲ್ಲಿ ನಡೆಸಲಾಗುವುದು. ಮಾರ್ಚ್ 2 ರ ಶನಿವಾರ ಬೆಳಗ್ಗೆ 9:30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಶ್ರೀ ಕ್ಷೇತ್ರ ಕಾರ್ತಿಕೇಯ ಶ್ರೀ ಶ್ರೀ ಯೋಗೇಂದ್ರ ಶ್ರೀಗಳು ಹಾಗೂ ಸೋಲೂರು ಮಠ ವಿಖ್ಯಾತನಂದಾ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಆರ್ಯ ಈಡಿಗರ ಸಂಘದ ರಾಜ್ಯಾಧ್ಯಕ್ಷರಾದ ಡಾ. ತಿಮ್ಮೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಾರ್ಯಕ್ರಮವು ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ರಾಮಪ್ಪ, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ಜೆಪಿ ಗ್ರೂಪ್ ಚೇರ್ಮನ್ ಜೆಪಿ ಸುಧಾಕರ್, ತೀರ್ಥಹಳ್ಳಿ ಆರ್ಯ ಈಡಿಗರ ಸಂಘದ ಅಧ್ಯಕ್ಷರಾದ ಎಂ ಜಿ ರಾಮಚಂದ್ರ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ ಎಂ ಸಂಜಯ್, ರಾಜ್ಯ ಎಸ್ ಎನ್ ಜಿ ವಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಸುಂಟರಹಳ್ಳಿ ರವರ ಉಪಸ್ಥಿತಿಯಲ್ಲಿ ನಡೆಯಲಿದೆ. ಮಾರ್ಚ್ 3ರ ಭಾನುವಾರ ಸಂಜೆ ಐದಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ, ಆರ್ಯ ಈಡಿಗರ ಸಂಘದ ಸಂಘಟನಾ ಕಾರ್ಯದರ್ಶಿ ಕೆಎಸ್ ದುಷ್ಯಂತ್, ರಾಜ್ಯ ಒಬಿಸಿ ಬಿಜೆಪಿ ಕಾರ್ಯದರ್ಶಿ ಪ್ರಕಾಶ್ ರಾಮೊಹಳ್ಳಿ, ಎಸ್ ಎನ್ ಜಿ ವಿ ರಾಜ್ಯ ಖಜಾಂಚಿ ದಿನೇಶ್ ಮಳಲಗದ್ದೆ, ಸಿನಿಮಾ ನಿರ್ದೇಶಕ ರಾಜ್ ಗುರು ಬಿ, ಬೆಂಗಳೂರು ಡಿವೈಎಸ್ಪಿ ರೀನಾ ಸುವರ್ಣ, ಎಸಿಪಿ ಕ್ರೈಂ ಬ್ರಾಂಚ್ ಪರಮೇಶ್ವರ, ಬೇಗೂರು ಇನ್ಸ್ಪೆಕ್ಟರ್ ಮಹೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸರ್ವರನ್ನು ಆಯೋಜಕರು ಸ್ವಾಗತಿಸಿದ್ದಾರೆ.

Categories
ತೀರ್ಥಹಳ್ಳಿ

ಮಾ.4ರಂದು ಡಾ.ಆರ್.ಎಂ.ಮಂಜುನಾಥ ಗೌಡ ಅಧಿಕಾರ ಸ್ವೀಕಾರ

ಮಾ.4ರಂದು ಡಾ.ಆರ್.ಎಂ.ಮಂಜುನಾಥ ಗೌಡ ಅಧಿಕಾರ ಸ್ವೀಕಾರ
– ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಅಧಿಕಾರ
– ಸರ್ವರನ್ನು ಸ್ವಾಗತಿಸಿದ ಸಹಕಾರಿ ನಾಯಕ: ಶಿವಮೊಗ್ಗ ಜಿಲ್ಲೆಯಲ್ಲಿ ಸಿದ್ಧತೆ

NAMMUR EXPRESS NEWS
ತೀರ್ಥಹಳ್ಳಿ: ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಹಕಾರಿ ನಾಯಕ, ಮಾಜಿ ಅಪ್ಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ ಮಂಜುನಾಥಗೌಡ ಅವರು ಇದೀಗ ಮಲೆನಾಡು ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು,ಅವರ ಅಧಿಕಾರ ಸ್ವೀಕಾರ ಸಮಾರಂಭ ಮಾರ್ಚ್ 4ರ ಸೋಮವಾರ ಬೆಳಗ್ಗೆ 11 :30ಕ್ಕೆ ಶಿವಮೊಗ್ಗದ ಮಲೆನಾಡು ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಸಚಿವರಾದ ಮಧು ಬಂಗಾರಪ್ಪ, ಕೆ ಜೆ ಜಾರ್ಜ್, ದಿನೇಶ್ ಗುಂಡೂರಾವ್, ಮಂಕಾಳ ವೈದ್ಯ, ಲಕ್ಷ್ಮಿ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ, ಸಂತೋಷ್ ಲಾಡ್, ವೆಂಕಟೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಸೇರಿದಂತೆ ಕಾಂಗ್ರೆಸ್ ನ ಎಲ್ಲಾ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ನಾಯಕರು, ತಾಲೂಕು ನಾಯಕರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವರನ್ನು ಡಾ.ಆರ್.ಎಂ ಮಂಜುನಾಥ ಗೌಡ ಅಭಿಮಾನಿಗಳು ಸ್ವಾಗತಿಸಿದ್ದಾರೆ.

Categories
ತೀರ್ಥಹಳ್ಳಿ ಸಾಗರ

ಸಾಗರದಲ್ಲಿ ಯಡಿಯೂರಪ್ಪನವರಿಗೆ ಅದ್ದೂರಿ ಸನ್ಮಾನ!

ಸಾಗರದಲ್ಲಿ ಯಡಿಯೂರಪ್ಪನವರಿಗೆ ಅದ್ದೂರಿ ಸನ್ಮಾನ!
– ಮಾ.5 ರಂದು ಈಡಿಗ 26 ಪಂಗಡಗಳ ವತಿಯಿಂದ ಕಾರ್ಯಕ್ರಮ
– ಸುಮಾರು 45 ಸಾವಿರ ಜನ ಸೇರುವ ನಿರೀಕ್ಷೆ
– ಹರತಾಳು ಹಾಲಪ್ಪ ನೇತೃತ್ವದಲ್ಲಿ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ನಾಮಧಾರಿ, ಬಿಲ್ಲವ, ದೀವರು ಸೇರಿದಂತೆ 26 ಪಂಗಡಗಳ ವತಿಯಿಂದ ಮಾರ್ಚ್ 5ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಸಾಗರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರಿಗೆ ಅದ್ದೂರಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಹರತಾಳು ಹಾಲಪ್ಪ ಅವರು ರಾಜ್ಯಮಟ್ಟದಲ್ಲಿ ಸಂಘಟನೆ ಮಾಡಿ ಯಡಿಯೂರಪ್ಪನವರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಡಲು ಆಯೋಜನೆ ಮಾಡುತ್ತಿದ್ದಾರೆ. ಈಡಿಗ ಸಮಾಜಕ್ಕೆ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಸರ್ಕಾರದಿಂದ ಕೊಟ್ಟಿರುವ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸುವ ಉದ್ದೇಶದಿಂದ ಹಾಗೂ ಜಾತಿಭೇದ ಮರೆತು ರಾಜಕಾರಣ ಮಾಡಿದ ಹಿರಿಯ ನಾಯಕರಿಗೆ ಸನ್ಮಾನಿಸುವ ಉದ್ದೇಶದಿಂದ ಈ ಸನ್ಮಾನ ನಡೆಸಲಾಗುತ್ತಿದೆ ಎಂದರು.

ಯಡಿಯೂರಪ್ಪನವರ ಸೇವೆ ಎಲ್ಲಾ ಸಮಾಜದವರಿಗೂ ಅನುಕೂಲವಾಗಿದೆ. ನಮ್ಮ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು ಶಕ್ತಿಸಾಗರ ಸಂಗಮದ ಮೂಲಕ ಯಡಿಯೂರಪ್ಪನವರನ್ನು ಸನ್ಮಾನ ಮಾಡುತ್ತಿದ್ದೇವೆ. ಯಡಿಯೂರಪ್ಪ ಅಷ್ಟೇ ಅಲ್ಲದೆ ಬಂಗಾರಪ್ಪನವರು ಕೂಡ ಒಳೊಳ್ಳೆ ಕೆಲಸ ಮಾಡಿಸಿಕೊಟ್ಟಿದ್ದಾರೆ ಎಂದರು. ಕಾರ್ಯಕ್ರಮಕ್ಕೆ ಸುಮಾರು 45000 ಜನ ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ತೀರ್ಥಹಳ್ಳಿ ತಾಲೂಕಿನ ಸಮಾಜದ ಬಾಂಧವರು ಪಕ್ಷಭೇದ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು. ಈಡಿಗ ಸಮಾಜದ ಪ್ರಮುಖರಾದ ಅಶೋಕ್ ಮೂರ್ತಿ, ಬೇಗುವಳ್ಳಿ ಸತೀಶ್, ಕವಿರಾಜ್ ಬೇಗುವಳ್ಳಿ ಮತ್ತು ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷರಾದ ಹೆದ್ದೂರು ನವೀನ್ ಮತ್ತು ಪ್ರಮುಖರು ಇದ್ದರು.