Categories
ಬೆಂಗಳೂರು ರಾಜ್ಯ

ಜನತೆಗೆ ಗುಡ್ ನ್ಯೂಸ್: ಈಗ ವಾಟ್ಸಪ್ ಮೂಲಕವೇ ಸೇವೆ!

ಜನತೆಗೆ ಗುಡ್ ನ್ಯೂಸ್: ಈಗ ವಾಟ್ಸಪ್ ಮೂಲಕವೇ ಸೇವೆ!
– ಪಂಚಮಿತ್ರ ವಾಟ್ಸಪ್ ಚಾಟ್ ಆರಂಭ: ವಾಟ್ಸಪ್ ಚಾಟ್ ಮೂಲಕ ನಾನಾ ಸೇವೆ
– ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ..!

NAMMUR EXPRESS NEWS
ಬೆಂಗಳೂರು: ಗ್ರಾಮ ಪಂಚಾಯಿತಿ ಮಟ್ಟದಲ್ಲೇ ನಾನಾ ಇಲಾಖೆಗಳ ಆಯ್ದ 89 ಸೇವೆ ನೀಡಿಕೆ ಹಾಗೂ ಕುಂದುಕೊರತೆ ಬಗ್ಗೆ ಅಹವಾಲುಗಳನ್ನು ‘ಪಂಚಮಿತ್ರ’ ಹೊಸ ಪೋರ್ಟಲ್ ಹಾಗೂ ವಾಟ್ಸ್‌ಆ್ಯಪ್ ಚಾಟ್ ಡಿಜಿಟಲ್ ವೇದಿಕೆ ಮೂಲಕವೇ ಸಲ್ಲಿಸಲು ಅವಕಾಶ ಕಲ್ಪಿಸುವ ವಿನೂತನ ಪ್ರಯತ್ನವನ್ನು ರಾಜ್ಯ ಸರಕಾರ ದೇಶದಲ್ಲೇ ಪ್ರಥಮ ಬಾರಿಗೆ ಜಾರಿಗೊಳಿಸಿದೆ. ಅದಕ್ಕೆ ಪೂರಕವಾಗಿ ರಾಜ್ಯದ 5,991 ಗ್ರಾಮಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡುವತ್ತ ಹೆಜ್ಜೆ ಇಟ್ಟಿದೆ. ಅದರಂತೆ ಇನ್ನು ಮುಂದೆ ಸಾರ್ವಜನಿಕರು ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ಇಲಾಖೆಗಳ ಆಯ್ದ ಸೇವೆಗಳನ್ನು ‘ವಾಟ್ಸ್ಆ್ಯಪ್ ಚಾಟ್’ ಸೇವೆ ಮೂಲಕವೇ ಪಡೆಯಲು ಅವಕಾಶವಾಗಲಿದೆ. ಜತೆಗೆ ಎಲ್ಲ ಗ್ರಾಮ ಪಂಚಾಯಿತಿಗಳ ಎಲ್ಲ ಸಭೆಗಳ ವೆಬ್ ಕಾಸ್ಟಿಂಗ್‌ ಆಗಲಿದ್ದು, ಸಾರ್ವಜನಿಕರು ನೇರವಾಗಿ ವೀಕ್ಷಿಸಲು ಅವಕಾಶವಾಗಲಿದೆ.

ಈಗಾಗಲೇ 74,902 ಸಭೆಗಳ ವೆಬ್‌ಕಾಸ್ಟಿಂಗ್ ಆಗಿದ್ದು, 1 ಲಕ್ಷ ಸಭೆಗಳ ಶೆಡ್ಯೂಲ್ ಮಾಡಲಾಗಿದೆ. ಹಾಗಾಗಿ ಸಾರ್ವಜನಿಕರು ಇನ್ನು ಮುಂದೆ ಗ್ರಾಮ ಪಂಚಾಯಿತಿಗಳ ಮಾಸಿಕ ಸಭೆ, ಸ್ಥಾಯಿ ಸಮಿತಿ ಸಭೆಗಳನ್ನು ವೆಬ್ ಕಾಸ್ಟಿಂಗ್ ಮೂಲಕ ವೀಕ್ಷಿಸಬಹುದಾಗಿದೆ. ಸಭೆಗಳ ನಡಾವಳಿ ವರದಿಯು ಆ ದಿನವೇ ಪೋರ್ಟಲ್‌ನಲ್ಲಿ ಅಪ್‌ಲೋಡ್ ಆಗುವುದರಿಂದ ಆ ಮೂಲಕವೂ ಸಭೆಯ ವಿವರಗಳನ್ನು ತಿಳಿಯಲು ನೆರವಾಗಲಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಸಾರ್ವಜನಿಕರು ಅನಗತ್ಯವಾಗಿ ಸರಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು. ಅಗತ್ಯ ಸೇವೆಗಳನ್ನು ತ್ವರಿತಗತಿಯಲ್ಲಿ ಒದಗಿಸುವುದು. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಸಲುವಾಗಿ ಹೊಸ ಯೋಜನೆ ಜಾರಿಗೊಳಿಸಲಾಗಿದೆ. ಅದರಂತೆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ 17 ಸೇವೆಗಳು ಮತ್ತು ಇತರ ಇಲಾಖೆಗೆ ಸಂಬಂಧಿಸಿದ 72 ಸೇವೆಗಳು ಈ ಎರಡೂ ಡಿಜಿಟಲ್ ವೇದಿಕೆಗಳಲ್ಲಿ ಲಭ್ಯವಾಗಲಿದೆ.

ಬಳಸುವುದು ಹೇಗೆ?

ವಾಟ್ಸಪ್ ಡಿಜಿಟಲ್ ಸೇವೆ ಪಡೆಯಲು ಸ್ಮಾರ್ಟ್‌ಫೋನ್‌ ಅಗತ್ಯ.  8277506000 ಈ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡು ಚಾಟ್ ಶುರು ಮಾಡಬಹುದು. ಮೊದಲಿಗೆ ‘ಹಾಯ್’ ಎಂಬ ಸಂದೇಶ ಕಳುಹಿಸಬೇಕು. ಆಗ ಪರದೆ ಮೇಲೆ ಭಾಷೆ ಆಯ್ಕೆ ಅವಕಾಶ ಸಿಗಲಿದೆ. ಬಳಿಕ ಜಿಲ್ಲೆ, ತಾಲೂಕು ಹಾಗೂ ನಿರ್ದಿಷ್ಟ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸೇವೆ, ಮಾಹಿತಿ, ಕುಂದುಕೊರತೆ ಎಂಬ ಮೂರು ಆಯ್ಕೆ ಮೂಡಲಿದ್ದು, ಮುಂದಿನ ಸೇವೆ ಪಡೆಯಬಹುದಾಗಿದೆ.

ಪಂಚಮಿತ್ರ’ ಪೋರ್ಟಲ್‌/ ವಾಟ್ಸ್‌ಆ್ಯಪ್ ಚಾಟ್‌ನಲ್ಲಿ ಲಭ್ಯವಿರುವ ಸೇವೆ: ಕಟ್ಟಡ ನಿರ್ಮಾಣ ಪರವಾನಗಿ, ಹೊಸ ನೀರು ಪೂರೈಕೆ ಸಂಪರ್ಕ, ನೀರು ಸರಬರಾಜಿನ ಸಂಪರ್ಕ ಕಡಿತ, ಕುಡಿಯುವ ನೀರಿನ ನಿರ್ವಹಣೆ, ಬೀದಿದೀಪದ ನಿರ್ವಹಣೆ, ಗ್ರಾಮ ನೈರ್ಮಲ್ಯ ನಿರ್ವಹಣೆ, ಉದ್ದಿಮೆ ಪರವಾನಗಿ, ಸ್ವಾಧೀನ ಪ್ರಮಾಣ ಪತ್ರ, ನಾನಾ ಸೇವೆ ಸಂಬಂಧ ರಸ್ತೆ ಅಗೆತಕ್ಕೆ ಅನುಮತಿ, ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ, ನಿರಾಕ್ಷೇಪಣಾ ಪತ್ರ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಜಾಬ್‌ಕಾರ್ಡ್‌ ವಿತರಣೆ, ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವುದು, ಹೊಸ ಇಲ್ಲವೇ ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ, ಹೊಸ/ ಅಸ್ತಿತ್ವದಲ್ಲಿರುವ ಓವರ್‌ ಗೌಂಡ್‌ ಕೇಬಲ್‌ ಮೂಲಸೌಕರ್ಯ/ಭೂಗತ ಕೇಬಲ್ ಮೂಲಸೌಕರ್ಯಕ್ಕಾಗಿ ಅನುಮತಿ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲೂಕು ಪಂಚಾಯತ್ ಹೊಸ ಕಟ್ಟಡ ಕಲರ್ ಫುಲ್!

ತೀರ್ಥಹಳ್ಳಿ ತಾಲೂಕು ಪಂಚಾಯತ್ ಹೊಸ ಕಟ್ಟಡ ಕಲರ್ ಫುಲ್!
– 3 ಅಂತಸ್ತಿನ ತಾಲೂಕು ಪಂಚಾಯತ್ ನೂತನ ಕಟ್ಟಡ
– ಮಾ.4 ಸೋಮವಾರ ಉದ್ಘಾಟನೆ: ತೀರ್ಥಹಳ್ಳಿಗೆ ಹೊಸ ಕಳೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಅತೀ ದೊಡ್ಡ ಸರ್ಕಾರಿ ಕಟ್ಟಡ ನೂತನ ತಾಲೂಕು ಪಂಚಾಯತ್ ಮಾ.4ರ ಸೋಮವಾರ ಲೋಕಾರ್ಪಣೆಗೊಳ್ಳಲಿದೆ. ಈಗಾಗಲೇ ತಾಲೂಕು ಕಚೇರಿ ಪಕ್ಕ ಇರುವ ಕಟ್ಟಡಕ್ಕೆ ಬೆಳಕಿನ ಅಲಂಕಾರ ಮಾಡಲಾಗಿದೆ. ಸಿಬ್ಬಂದಿಗಳಲ್ಲಿ ಹೊಸ ಸಂಭ್ರಮ ಕಾಣುತ್ತಿದೆ.

ಮಾ.4ಕ್ಕೆ ಸೋಮವಾರದಂದು ಮಧ್ಯಾಹ್ನ 3:00ಕ್ಕೆ ಗ್ರಾಮೀಣಾಭಿವೃದ್ಧಿ ಭವನ(ತಾಲ್ಲೂಕು ಪಂಚಾಯತ್ ಕಟ್ಟಡ ) ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗಿದೆ. ಶಾಸಕರಾದ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮೀಣಾ ಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಗ್ರಾಮೀಣಾಭಿವೃದ್ಧಿ ಭವನದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಈಗಾಗಲೇ ಅಂತಿಮ ಸಿದ್ಧತೆ ನಡೆದಿದೆ. ತೀರ್ಥಹಳ್ಳಿಯ ಪ್ರಸಿದ್ಧ ಗುತ್ತಿಗೆ ಸಂಸ್ಥೆ ಎಸಿಸಿ ಕನ್ಸ್ಟ್ರಕ್ಷನ್ಸ್ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಈ ಕಾಮಗಾರಿ ಮಾಡಿದೆ. ಮೂರು ಅಂತಸ್ತಿನ ಈ ಕಟ್ಟಡದ ಮೇಲೆ ದೊಡ್ಡ ಗಡಿಯಾರ ಇರಲಿದ್ದು, ಗಂಟೆಗೊಮ್ಮೆ ಹೊಡೆದುಕೊಳ್ಳಲಿದೆ.

ಏನೇನಿದೆ ಈ ಕಟ್ಟಡದಲ್ಲಿ…?

ರಾಜ್ಯದಲ್ಲೇ ಮಾದರಿಯಂತಿರುವ ಹಾಗೂ ತೀರ್ಥಹಳ್ಳಿಯ ಹೆಗ್ಗುರುತು ಆಗಲಿರುವ ಈ ಗ್ರಾಮೀಣಾಭಿವೃದ್ಧಿ ಭವನದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ, ತಾಲೂಕು ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿ, ತಾಲೂಕು ಪಂಚಾಯತ್ ಕಚೇರಿ, ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆರೋಗ್ಯ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಅಕ್ಷರ ದಾಸೋಹ, ಹಿಂದುಳಿದ ವರ್ಗಗಳ ಇಲಾಖೆ, ಕಾರ್ಮಿಕ ಹಾಗೂ ಕೈಗಾರಿಕಾ ಇಲಾಖೆ ಒಂದೇ ಸೂರಿನಡಿ ಸೇವೆ ಸಲ್ಲಿಸಲಿವೆ.

Categories
ಚಿಕ್ಕಮಗಳೂರು ತೀರ್ಥಹಳ್ಳಿ ಶಿವಮೊಗ್ಗ

ಮಂಜುನಾಥ ಗೌಡ ಅಧಿಕಾರ ಸಡಗರ!

ಮಂಜುನಾಥ ಗೌಡ ಅಧಿಕಾರ ಸಡಗರ!
– ಸಾವಿರಾರು ಮಂದಿ ಆಗಮನ: ಜಿಲ್ಲೆಯಲ್ಲಿ ಸಂತಸ
– ರಾಜ್ಯದ ಸಚಿವರ ಉಪಸ್ಥಿತಿ: ಸರ್ವರಿಗೂ ಸ್ವಾಗತ

NAMMUR EXPRESS NEWS
ಶಿವಮೊಗ್ಗ: ಮಲೆನಾಡು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸಹಕಾರಿ ನಾಯಕ ಡಾ.ಆರ್. ಎಂ ಮಂಜುನಾಥ್ ಗೌಡ ಅಧಿಕಾರ ಸ್ವೀಕರಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ಈಗಾಗಲೇ ಭರದಲ್ಲಿ ಸಿದ್ಧತೆ ನಡೆಯುತ್ತಿದೆ. ಎಂ.ಎ.ಡಿ.ಬಿ ಅಧಿಕಾರಿಗಳು, ಡಿಸಿಸಿ ಬ್ಯಾಂಕ್ ನಿರ್ದೇಶಕರು, ಕಾಂಗ್ರೆಸ್ ಪಕ್ಷದ ಮುಖಂಡರು,ಆರ್ ಎಂ ಎಂ ಅಭಿಮಾನಿಗಳು, ಸಹಕಾರ ಕ್ಷೇತ್ರದ ಪ್ರಮುಖರು ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸುತ್ತಿದ್ದಾರೆ.

ರಾಜ್ಯದ ಗಣ್ಯರ ಆಗಮನ

ಮಂಜುನಾಥ ಗೌಡ ಅವರ ಅಧಿಕಾರ ಸ್ವೀಕಾರ ಸಮಾರಂಭ ಮಾರ್ಚ್ 4ರ ಸೋಮವಾರ ಬೆಳಗ್ಗೆ 11 :30ಕ್ಕೆ ಶಿವಮೊಗ್ಗದ ಮಲೆನಾಡು ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಸಚಿವರಾದ ಮಧು ಬಂಗಾರಪ್ಪ, ಕೆ ಜೆ ಜಾರ್ಜ್, ದಿನೇಶ್ ಗುಂಡೂರಾವ್, ಮಂಕಾಳ ವೈದ್ಯ, ಲಕ್ಷ್ಮಿ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ, ಸಂತೋಷ್ ಲಾಡ್, ವೆಂಕಟೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಸೇರಿದಂತೆ ಕಾಂಗ್ರೆಸ್ ನ ಎಲ್ಲಾ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ನಾಯಕರು, ತಾಲೂಕು ನಾಯಕರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವರನ್ನು ಡಾ.ಆರ್.ಎಂ ಮಂಜುನಾಥ ಗೌಡ ಅಭಿಮಾನಿಗಳು ಸ್ವಾಗತಿಸಿದ್ದಾರೆ.

ಸಹಕಾರ ಕ್ಷೇತ್ರ, ಅಭಿಮಾನಿಗಳಿಗೆ ಸಂತಸ

ಮಂಜುನಾಥ ಗೌಡ ಅವರ ಸಹಕಾರ ಕ್ಷೇತ್ರ, ಅಭಿಮಾನಿಗಳಿಗೆ ಸಂತಸ ಇದ್ದು, ಸಾವಿರಾರು ಮಂದಿ ತೀರ್ಥಹಳ್ಳಿ, ಶಿವಮೊಗ್ಗದಿಂದ ಸಾವಿರಾರು ಮಂದಿ ಆಗಮಿಸಿದ್ದಾರೆ.

Categories
ರಾಜ್ಯ ರಾಷ್ಟ್ರೀಯ ವಾರ್ತೆ

20 ದಿನದಲ್ಲಿ ಲೋಕಸಭಾ ಚುನಾವಣಾ ವೇಳಾ ಪಟ್ಟಿ ಪ್ರಕಟ?

20 ದಿನದಲ್ಲಿ ಲೋಕಸಭಾ ಚುನಾವಣಾ ವೇಳಾ ಪಟ್ಟಿ ಪ್ರಕಟ?
– 195 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
– ಅಭ್ಯರ್ಥಿಗಳ ಪಟ್ಟಿ ಪ್ರಕಟಕ್ಕೆ ಕಾಂಗ್ರೆಸ್‌ ತಯಾರಿ

NAMMUR EXPRESS NEWS
ನವದೆಹಲಿ: ಚುನಾವಣಾ ಆಯೋಗ ಮುಂದಿನ 15ರಿಂದ 20 ದಿನದಲ್ಲಿ ಲೋಕಸಭೆ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಪಾಂಡುರಂಗ ಕೊಂಡಬರಾವ್ ಪೋಳೆ ಹೇಳಿದ್ದಾರೆ. ಚುನಾವಣೆಯ ಸಿದ್ದತೆಗಳ ಪರಿಶೀಲನೆಗೆ ದಕ್ಷಿಣ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಪೋಳೆ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದು ಆಡಳಿತದ ಆದ್ಯತೆಯಾಗಿದೆ ಎಂದು ಹೇಳಿದರು. ಜನರು ಯಾವುದೇ ಭೀತಿ ಅಥವಾ ಕಷ್ಟವಿಲ್ಲದೆ ಮತದಾನ ಚಲಾಯಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು. ದಕ್ಷಿಣ ಕಾಶ್ಮೀರದ ಮೂರು ಜಿಲ್ಲೆಗಳ ಅಧಿಕಾರಿಗಳೊಂದಿಗೆ ಪೋಳೆ ಸಭೆ ನಡೆಸಿ ಸಮಾಲೋಚಿಸಿದರು. ಅನಂತನಾಗ್‌, ಶೋಪಿಯಾನ್, ಪುಲ್ವಾಮಾ ಜಿಲ್ಲಾಧಿಕಾರಿಗಳು, ಹಿರಿಯ ಪೊಲೀಸ್‌ ಆಯುಕ್ತರು (ಎಸ್‌ಎಸ್‌ಪಿ) ಸಭೆಯಲ್ಲಿ ಭಾಗವಹಿಸಿದ್ದರು.

ಅಭ್ಯರ್ಥಿಗಳ ಪಟ್ಟಿ ಪ್ರಕಟಕ್ಕೆ ಕಾಂಗ್ರೆಸ್‌ ತಯಾರಿ

ಬೆಂಗಳೂರು: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ದೇಶದ ಶೇ.50ರಷ್ಟಾದರೂ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿ ಜನರ ಮುಂದೆ ಆತ್ಮವಿಶ್ವಾಸ ಪ್ರದರ್ಶಿಸುವ ಬಿಜೆಪಿಯ ಲೆಕ್ಕಾಚಾರಕ್ಕೆ ಪೈಪೋಟಿ ನೀಡುವಂತೆ ಕಾಂಗ್ರೆಸ್ ಕೂಡ ಮೊದಲ ಪಟ್ಟಿ ಬಿಡುಗಡೆಗೆ ಬಿರುಸಿನ ತಯಾರಿ ನಡೆಸಿದೆ. ಪಕ್ಷದ ಮೂಲಗಳ ಪ್ರಕಾರ ಕರ್ನಾಟಕದ ವಿಚಾರಕ್ಕೆ ಬಂದರೆ ಮುಂದಿನ 5-6 ದಿನಗಳಲ್ಲೇ ಮೊದಲ ಪಟ್ಟಿ ಬಿಡುಗಡೆ ಮಾಡಬೇಕೆಂಬ ಬಯಕೆ ಹೊಂದಿದೆ. ಆ ಪ್ರಕಾರ ರಾಜ್ಯದಲ್ಲಿ 10ರಿಂದ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಚಿವರಿಗೆ ಕ್ಷೇತ್ರವಾರು ಜವಾಬ್ದಾರಿ ಹಂಚಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿಕೊಂಡಿದ್ದ ಕೆಪಿಸಿಸಿ ಆ ಹೆಸರುಗಳ ಪೈಕಿ ಪೈಪೋಟಿ ನೀಡುವವರು ಯಾರೆಂದು ಜನಾಭಿಪ್ರಾಯ ಸಂಗ್ರಹಿಸಲು ಸರ್ವೇ ನಡೆಸಿದೆ. ಈ ವರದಿ ಫೆ.27ರಂದು ನಾಯಕರ ಕೈ ಸೇರಬೇಕಿತ್ತಾದರೂ ಈವರೆಗೆ ತಲುಪಿಲ್ಲ ಎನ್ನಲಾಗಿದೆ. ಶೀಘ್ರವೇ ವರದಿ ಪಡೆದು ಅದರ ಆಧಾರದಲ್ಲಿ ಸ್ಟೀನಿಂಗ್ ಕಮಿಟಿ ಸಭೆ ನಡೆಸಿ ಅಂತಿಮ ಹೆಸರನ್ನು ಪಕ್ಷದ ಕೇಂದ್ರ ಚುನಾವಣೆ ಸಮಿತಿಗೆ ಶಿಫಾರಸು ಮಾಡಲಿದೆ. ಪ್ರಸ್ತುತ 12 ಕ್ಷೇತ್ರಗಳಿಗೆ ಒಂದು ಹೆಸರು ಮಾತ್ರ ಅಂತಿಮಗೊಂಡಿದೆ ಎಂದು ಹೇಳಲಾಗುತ್ತಿದೆ.

ಮೋದಿ ಸೇರಿ 195 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಪ್ರಧಾನಿ ಮೋದಿ ಸೇರಿ 16 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಒಟ್ಟು 195 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಬಿಡುಗಡೆ ಮಾಡಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕಾರಣದಿಂದಾಗಿ ಪಟ್ಟಿಯಲ್ಲಿ ಯಾರಿಗೂ ಟಿಕೆಟ್ ಘೋಷಿಸಿಲ್ಲ.

Categories
ಮಾಹಿತಿ ರಾಜ್ಯ

ಹಾವು ಕಡಿತಕ್ಕೊಳಗಾದವರಿಗೆ ಇನ್ಮುಂದೆ ಔಷಧ!

ಹಾವು ಕಡಿತಕ್ಕೊಳಗಾದವರಿಗೆ ಇನ್ಮುಂದೆ ಔಷಧ!
– ನಂಜು ಲಕ್ಷಣ ಕಂಡು ಬಂದರೆ ಒಪ್ಪಿಗೆ ಪತ್ರ ಕಡ್ಡಾಯ
– ಆರೋಗ್ಯ ಇಲಾಖೆಯಿಂದ ಮಹತ್ವದ ಆದೇಶ

NAMMUR EXPRESS NEWS
ಹಾವು ಕಡಿತಕ್ಕೆ ಒಳಗಾದ ಸಂದರ್ಭದಲ್ಲಿ ನಂಜಿನ ಲಕ್ಷಣಗಳು ಕಂಡು ಬಂದರೆ ಅಂತಹ ವ್ಯಕ್ತಿಗೆ ರೋಗಿಯ ಅಥವಾ ಸಂಬಂಧಿಕರ ಒಪ್ಪಿಗೆ ಪತ್ರ ಪಡೆದು ಕಡ್ಡಾಯವಾಗಿ ‘ಆಂಟಿ ಸ್ನೇಕ್ ವೆನಮ್’ ಅನ್ನು ಉಚಿತವಾಗಿ ಒದಗಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಲಾಗಿದೆ. ಅಲ್ಲದೆ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು, ಹಾಗೂ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳನ್ನಾಗಿ ಗುರುತಿಸಲಾಗಿದ್ದು, ಹಾವು ಕಡಿತವನ್ನು ಅಧಿಸೂಚಿತ ರೋಗವೆಂದು ಘೋಷಿಸಲಾಗಿದೆ.

ಹಾವು ಕಡಿತ ಪ್ರಕರಣಗಳು ಕಂಡು ಬಂದ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ತಕ್ಷಣವೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಸೂಚಿಸಲಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಯ ಅಗತ್ಯ ಕಂಡು ಬಂದಲ್ಲಿ ತಾಲೂಕು ಅಥವಾ ಜಿಲ್ಲಾಸ್ಪತ್ರೆಗೆ ಉಚಿತ ಆಂಬುಲೆನ್ಸ್ ವ್ಯವಸ್ಥೆ ಮಾಡಿ ಕಳುಹಿಸಿಕೊಡಬೇಕು ಎಂದು ತಿಳಿಸಲಾಗಿದೆ. ಅಲ್ಲದೆ ಹಾವು ಕಡಿತದ ಪ್ರಕರಣ ಹಾಗೂ ಮರಣವನ್ನು ಐಎಚ್‌ಐಪಿ ಪೋರ್ಟಲ್ ನಲ್ಲಿ ವರದಿ ಮಾಡಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌ ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

Categories
ಕರಾವಳಿ ಕಾರ್ಕಳ ಬೆಂಗಳೂರು ಮಂಗಳೂರು

ತುಳು ಗೌರವಕ್ಕಾಗಿ ಹೋರಾಟ!

ತುಳು ಗೌರವಕ್ಕಾಗಿ ಹೋರಾಟ!
– ತುಳು ಈಗ ರಾಜ್ಯದ ಅಧಿಕೃತ ಭಾಷೆ!
– ಅಧಿಕೃತ ಭಾಷಾ ಸ್ಥಾನಮಾನ ನೀಡುವ ಬಗ್ಗೆ ಪ್ರಸ್ತಾಪ
– ಡಾ. ಮೋಹನ್‌ ಆಳ್ವ ಅಧ್ಯಕ್ಷತೆಯಲ್ಲಿ ಸಮಿತಿ

NAMMUR EXPRESS NEWS
ಬೆಂಗಳೂರು: ಕರಾವಳಿ ಭಾಗದ ಜೀವ ಭಾಷೆ, ಅತ್ಯಧಿಕ ಸಂಖ್ಯೆಯ ಜನರ ವ್ಯವಹಾರಿಕ ಭಾಷೆಯಾಗಿರುವ ತುಳುಗೆ ಎರಡನೇ ಅಧಿಕೃತ ಭಾಷಾ ಸ್ಥಾನಮಾನ ನೀಡುವ ಬಗ್ಗೆ ನೆರೆಯ ರಾಜ್ಯಗಳಿಗೆ ಅಧಿಕಾರಿಗಳ ತಂಡವನ್ನು ಕಳುಹಿಸಿ ಅಧ್ಯಯನ ವರದಿ ಪಡೆದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ವಿಧಾನಪರಿಷತ್ ನಲ್ಲಿ ಸದಸ್ಯ ಬಿ.ಎಂ.ಫಾರೂಕ್ ಅವರ ಗಮನ ಸೆಳೆಯುವ ಪ್ರಶ್ನೆಗೆ ಉತ್ತರಿಸಿದ್ದಾರೆ. ತುಳುವನ್ನು ರಾಜ್ಯದಲ್ಲಿ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಸಂಬಂಧ ಅಧ್ಯಯನ ನಡೆಸಲು ಡಾ. ಮೋಹನ್‌ ಆಳ್ವ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಆನಂತರ ಕಾನೂನು ಇಲಾಖೆ ಅಭಿಪ್ರಾಯ ಕೋರಲಾಗಿತ್ತು, ಕಾನೂನು ಇಲಾಖೆ ಈ ಕುರಿತು ಅನ್ಯ ರಾಷ್ಟ್ರಗಳಲ್ಲಿ ಯಾವ ಕ್ರಮ ಅನುಸರಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದು ಸಲ್ಲಿಸುವಂತೆ ಸೂಚನೆ ನೀಡಿದೆ.

ಹಲವು ರಾಜ್ಯಗಳಲ್ಲಿ ಎರಡು ಅಧಿಕೃತ ಭಾಷೆ

ಆಂಧ್ರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳಕ್ಕೆ ತಮ್ಮ ರಾಜ್ಯಗಳಲ್ಲಿ2ನೇ ಅಧಿಕೃತ ಭಾಷೆಗಳನ್ನು ಮಾಡಿರುವ ಕ್ರಮದ ಬಗ್ಗೆ ಮಾಹಿತಿ ಕೋರಲಾಗಿದೆ. ಆದರೆ ಆ ರಾಜ್ಯಗಳಿಂದ ಯಾವುದೇ ಮಾಹಿತಿ ಬಂದಿಲ್ಲ. ಆದ್ದರಿಂದ ಕೂಡಲೇ ಅಧಿಕಾರಿಗಳ ತಂಡ ರಚಿಸಿ ಆ ರಾಜ್ಯಗಳಿಗೆ ಕಳುಹಿಸಿ ಮಾಹಿತಿ ಸಂಗ್ರಹಿಸಿ ನಂತರ ಕ್ರಮ ಕೈಗೊಳ್ಳಲು ಸಿದ್ಧತೆ ನಡೆದಿದೆ.

ಕರಾವಳಿ ಭಾಗದ ಜನರ ಬಹು ದಿನದ ಬೇಡಿಕೆ

ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆ ಇದಾಗಿದ್ದು, ಈ ಬಗ್ಗೆ ಸರಕಾರಕ್ಕೂ ಕಾಳಜಿ ಇದೆ. ಅಲ್ಲದೆ, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ 2005ರಲ್ಲಿಯೇ ರಾಜ್ಯ ಸರಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆನಂತರ 2013 ರಿಂದೀಚೆಗೆ ಮೂರು ಬಾರಿ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ. ಆದರೂ ಸಹ ಕೇಂದ್ರ ಸರಕಾರ ಅದನ್ನು ಪರಿಗಣಿಸಿಲ್ಲ. ಹಾಗಾಗಿ ಕೇಂದ್ರ ಸರಕಾರಕ್ಕೆ ಮತ್ತೆ ಮನವಿ ಸಲ್ಲಿಸಲಾಗುವುದು ಎಂದು ತಂಗಡಗಿ ಹೇಳಿದ್ದಾರೆ.ಇದಕ್ಕೂ ಮುನ್ನ ಫಾರೂಕ್ ಅವರು, ರಾಜ್ಯ ಸರಕಾರ ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಕೂಡಲೇ ಪ್ರಕಟಿಸಬೇಕು, ಇಲ್ಲವಾದರೆ ಭಾಷೆಯನ್ನು ಉಳಿಸುವುದು ಕಷ್ಟವಾಗಲಿದೆ. ಇದರಿಂದ ಸರಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ. ಜತೆಗೆ ಸಂವಿಧಾದನದ 8ನೇ ಪರಿಚ್ಚೇದದಲ್ಲಿ ತುಳು ಸೇರಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕೆಂದು ಸರಕಾರವನ್ನು ಒತ್ತಾಯಿಸಿದರು.

Categories
ಹಾಸನ

ನಿಜವಾಯ್ತು ಕೋಡಿಮಠದ ಶ್ರೀಗಳ ಭವಿಷ್ಯ!

ನಿಜವಾಯ್ತು ಕೋಡಿಮಠದ ಶ್ರೀಗಳ ಭವಿಷ್ಯ!
– ಮುಂದೆ ಕಾದಿದೆ ಮತ್ತೊಂದು ಗಂಡಾಂತರ!
– ಯುಗಾದಿ ಬಳಿಕ ರಾಜ್ಯದಲ್ಲಿ ಒಳ್ಳೆ ಮಳೆ ಬೆಳೆ

NAMMUR EXPRESS NEWS
ಕೋಲಾರ: ಮುಂದಿನ ಗಂಡಾಂತರಗಳು ಎದುರಾಗುವ ಬಗ್ಗೆ ಜಗತ್ತಿನ ಭವಿಷ್ಯ ಹೇಳುವುದರಲ್ಲಿ ಪ್ರಖ್ಯಾತಿ ಪಡೆದಿರುವ ಹಾಸನ ಜಿಲ್ಲೆಯ ಕೋಡಿಮಠದ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಕಳೆದ ಜನವರಿ ತಿಂಗಳಲ್ಲಿ ಹೇಳಿದ್ದ ಸ್ಫೋಟಕ ಭವಿಷ್ಯ ಇದೀಗ ನಿಜವಾಗಿದೆ. ಶ್ರೀಗಳು ಭವಿಷ್ಯ ನುಡಿದ ತಿಂಗಳೊಳಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿ ಹತ್ತಾರು ಮಂದಿ ಗಂಭೀರ ಗಾಯಗೊಂಡಿರುವುದು ಸ್ವಾಮೀಜಿಗಳ ಭವಿಷ್ಯ ನಿಜವಾಗಿದೆ. 2024ರ ವರ್ಷ ಒಳ್ಳೇದಲ್ಲಿ ಜಗತ್ತಿಗೆ ಹಲವು ಕಂಟಕಗಳು ಎದುರಾಗುತ್ತವೆ. ಜಾಗತಿಕ ಮಟ್ಟದಲ್ಲಿ ಮತಾಂಧತೆ ಹೆಚ್ಚಾಗಲಿದೆ. ಬಾಂಬ್ ಸ್ಫೋಟ, ಭೂಕಂಪ, ಧಾರ್ಮಿಕ ಮುಖಂಡರ ಸಾವುಗಳು ಸಹ ಆಗಲಿವೆ. ಅಷ್ಟೇ ಅಲ್ಲ, ಜಗತ್ತಿನಾದ್ಯಂತ ಒಂದೆರಡು ಪ್ರಧಾನಿಗಳ ಸಾವಾಗುವ ಲಕ್ಷಣವಿದೆ ಮತೀಯ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ.

ಹೊಸವರ್ಷ ಭಯಾನಕ ಅನುಭವ ನೀಡಲಿದೆ ಎಂದರು ಹೇಳಿದ್ದ ಕೋಡಿಮಠದ ಶ್ರೀಗಳು ಇನ್ನು ರಾಜ್ಯ ರಾಜಕೀಯದಲ್ಲಿ ಈ ವರ್ಷ ಏನು ನಡೆಯಲಿದೆ ಎಂಬ ಬಗ್ಗೆ ಈಗಲೇ ಸ್ಪಷ್ಟಪಡಿಸಿಲ್ಲ. ಆದರೆ ಯುಗಾದಿ ಕಳೆದ ನಂತರ ಹೇಳುವೆ ಎಂದಿರುವ ಸ್ವಾಮೀಜಿ. ಈ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ನಡೆಯುತ್ತಿದೆಯಾ ಎಂಬ ಪ್ರಶ್ನೆಗೆ ನನಗಿಂತ ನಿಮಗೆ ಚೆನ್ನಾಗಿ ಗೊತ್ತಿದೆ ಎಂದು ಪ್ರತಿಕ್ರಿಯಿಸಿರುವ ಸ್ವಾಮೀಜಿ. ಯುಗಾದಿ ಆದ ಮೇಲೆಯೇ ಮಳೆ, ಬೆಳೆ, ರಾಜಕೀಯ, ದುಡಿಮೆ ವ್ಯಾಪಾರದ ಭವಿಷ್ಯ ಗೊತ್ತಾಗಲಿದೆ ಜಾಗತಿಕ ಮಟ್ಟದಲ್ಲಂತೂ ಈ ವರ್ಷ ಭಾರೀ ತೊಂದರೆಯಾಗಲಿದೆ. ಬೆಂಕಿ, ಪ್ರವಾಹ, ಯುದ್ಧ ಸಾವು ನೋವುಗಳು ಹೆಚ್ಚಾಗುತ್ತವೆ. ಯುಗಾದಿ ಬಳಿಕ ರಾಜ್ಯದಲ್ಲಿ ಒಳ್ಳೆ ಮಳೆ ಬೆಳೆ ಲಕ್ಷಣಗಳಿವೆ ಎಂದು ಭವಿಷ್ಯ ನುಡಿದಿದ್ದಾರೆ.

Categories
ಕರಾವಳಿ ಮಂಗಳೂರು ರಾಜ್ಯ

ವರ್ಡ್ ಕ್ಯಾಂಪ್ ಏಷ್ಯಾ ಸಮ್ಮೇಳನಕ್ಕೆ ಕುಂದಾಪುರದ ಟೆಕ್ಕಿ!

ವರ್ಡ್ ಕ್ಯಾಂಪ್ ಏಷ್ಯಾ ಸಮ್ಮೇಳನಕ್ಕೆ ಕುಂದಾಪುರದ ಟೆಕ್ಕಿ!
– ಫೋರ್ಥ್ ಫೋಕಸ್ ಸಂಸ್ಥೆ ಸಂಸ್ಥಾಪಕ ಗೌತಮ್ ನಾವಡಾ ಭಾಗಿ
– ತೈವಾನಲ್ಲಿ ಮಾ.7 ರಿಂದ 9ರವರೆಗೆ ಸಮ್ಮೇಳನ

NAMMUR EXPRESS NEWS
ಮಂಗಳೂರು: ವರ್ಡ್ ಪ್ರೆಸ್ ಕಮ್ಯುನಿಟಿ ಆಯೋಜಿಸುತ್ತಿರುವ ವರ್ಡ್ ಕ್ಯಾಂಪ್ ಏಷ್ಯಾ 2024 ಸಮಾರಂಭವು ತೈವಾನ್ ನಲ್ಲಿ ಮಾರ್ಚ್ 7 ರಿಂದ 9ರ ವರೆಗೆ ನಡೆಯುತ್ತಿದ್ದು, ಕರಾವಳಿಯ ವಿ. ಗೌತಮ್ ನಾವಡಾ ಭಾಗವಹಿಸಲಿದ್ದಾರೆ. ಫೋರ್ಥ್ ಫೋಕಸ್ ಎಂಬ ಸಂಸ್ಥೆಯ ಸಂಸ್ಥಾಪಕರು, ಮತ್ತು ಸಿಇಒ ಆದ ಗೌತಮ್ ನಾವಡಾ ( V Gautham Navada ) ಈ ಸಂಸ್ಥೆಯನ್ನು 2012 ರಲ್ಲಿ ಫ್ರೀಲ್ಯಾನ್ಸ್ ಪ್ರಾಜೆಕ್ಟ್ ಆಗಿ ಆರಂಭಿಸಿ 2015 ರಿಂದ ಫುಲ್ ಟೈಮ್ ಸೇವೆಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಫೋರ್ಥ್ ಫೋಕಸ್ ಎಂಬ ಸಂಸ್ಥೆಯು ವೆಬ್ ಸಲ್ಯೂಷನ್ ಸಂಸ್ಥೆಯಾಗಿದ್ದು, ವೆಬ್ ಮತ್ತು ಡಿಜಿಟಲ್ ಸಲ್ಯೂಷನ್ ಸರ್ವೀಸ್ ಒದಗಿಸುತ್ತಾ ಬಂದಿದೆ. ನಾವೀನ್ಯತೆ, ಸೃಜನಶೀಲತೆ ಹಾಗು ಬದ್ಧತೆಯ ಜೊತೆಗೆ ಪರಿಣಿತ ತಜ್ಞರ ತಂಡವು, ವ್ಯಕ್ತಿಗಳ ಹಾಗು ವ್ಯವಹಾರದ ಅಗತ್ಯಗಳಿಗೆ ಅನುಗುಣವಾಗಿ ಅತ್ಯಾಧುನಿಕ ವೆಬ್ ಸಲ್ಯೂಷನ್ ನೀಡುವುದರಲ್ಲಿ ಯಶಸ್ವಿಯಾಗಿದೆ.

ವಿಶ್ವ ಮಟ್ಟದ ಸಮ್ಮೇಳನ

ವರ್ಡ್ ಕ್ಯಾಂಪ್ ಏಷ್ಯಾ 2024, ವಿಶ್ವದ 3 ಪ್ರಮುಖ ವರ್ಡ್‌ಕ್ಯಾಂಪ್‌ಗಳಲ್ಲಿ ಒಂದಾಗಿದ್ದು, ವರ್ಡ್‌ಪ್ರೆಸ್ ಕಮ್ಯುನಿಟಿ ಈ ಕಾರ್ಯಕ್ರಮದ ರೂವಾರಿಯಾಗಿದೆ. 2006 ರಿಂದ, ವರ್ಡ್ ಪ್ರೆಸ್ ಸಮುದಾಯದ ಸದಸ್ಯರು 382 ನಗರಗಳು, 65 ದೇಶಗಳು ಮತ್ತು 6 ಖಂಡಗಳಲ್ಲಿ ಒಟ್ಟು 1,145 ವರ್ಡ್‌ಕ್ಯಾಂಪ್‌ಗಳನ್ನು ಆಯೋಜಿಸಿದ್ದಾರೆ. ವರ್ಡ್ ಪ್ರೆಸ್ ಆಯೋಜನೆಯು ಇತ್ತೀಚಿನ ತಂತ್ರಜ್ಞಾನಗಳನ್ನು ಕಲಿಯಲು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಅವಕಾಶಗಳನ್ನು ಒದಗಿಸುವುದರ ಜೊತೆಗೆ, ಈ ಇವೆಂಟ್, ಭಾಗವಹಿಸುವವರಿಗೆ ದೀರ್ಘಕಾಲೀನ ನೆಟ್‌ವರ್ಕ್‌ಗಳನ್ನು ಸ್ಥಾಪಿಸಲು ಮತ್ತು ವ್ಯಾಪಾರದ ಅವಕಾಶಗಳನ್ನು ಹುಡುಕಿ, ವಿಸ್ತರಿಸಿಕೊಳ್ಳಲು ಅನುವು ಮಾಡಿಕೊಡುವ ಉತ್ತಮ ವೇದಿಕೆಯಾಗಿದೆ. ಕುಂದಾಪುರದ ಫೋರ್ಥ್ ಫೋಕಸ್ ಈ ಇವೆಂಟ್ ನಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

Website : forthfocus.com

V Gautham Navada from Kundapur for the WordCamp Asia 2024 conference

Categories
ತೀರ್ಥಹಳ್ಳಿ

ತೀರ್ಥಹಳ್ಳಿ ರೈತರ ಗಂಜಿ ಚಳುವಳಿ!

ತೀರ್ಥಹಳ್ಳಿ ರೈತರ ಗಂಜಿ ಚಳುವಳಿ!
– ಕೇಂದ್ರೀಕೃತ ಬಹುಗ್ರಾಮ ಕುಡಿಯುವ ನೀರು ಶುದ್ದೀಕರಣ ಘಟಕ ಸ್ಥಾಪನೆಗೆ ವಿರೋಧಿಸಿ ರೈತರ ಪ್ರತಿಭಟನೆ
-ಹೆಗ್ಗೋಡು ರಸ್ತೆಯಲ್ಲಿ ರೈತರಿಂದ ಗಂಜಿ ಚಳವಳಿ

NAMMUR EXPRESS NEWS
ತೀರ್ಥಹಳ್ಳಿ: ಕೇಂದ್ರೀಕೃತ ಬಹುಗ್ರಾಮ ಕುಡಿಯುವ ನೀರು ಶುದ್ದೀಕರಣ ಘಟಕ ಸ್ಥಾಪನೆಗೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಇದೀಗ ಮತ್ತೊಂದು ಹಂತ ತಲುಪಿದೆ ನ್ ಹೆಗ್ಗೋಡು ರಸ್ತೆಯಲ್ಲಿಯೇ ರೈತರು, ರೈತ ಮಹಿಳೆಯರು ಗಂಜಿ ಚಳವಳಿ ನಡೆಸಿದರು. ‘ಪ್ರತಿಭಟನಾ ನಿರತರ ಬೇಡಿಕೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತದ ಕಿವಿಗಳಿಗೆ ಕೇಳಿಸುತ್ತಿಲ್ಲ. ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನವನ್ನು ಆಡಳಿತವೇ ನಡೆಸುತ್ತಿದೆ. ಪೊಲೀಸ್ ಇಲಾಖೆಯನ್ನು ಮುಂದಿಟ್ಟುಕೊಂಡು ಕಾಮಗಾರಿ ಮುಗಿಸುವ ಸಂಚು ನಡೆಸುತ್ತಿದ್ದಾರೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

ತುಂಗಾ ಮತ್ತು ಮಾಲತಿ ಸಂಗಮ ಸ್ಥಳವಾದ ಕೇಂದ್ರೀಕೃತವಾಗಿ ಭೀಮನಕಟ್ಟೆಯಲ್ಲಿ ಯೋಜನೆ ರೂಪಿಸುವ ಹಠವನ್ನು ಜಿಲ್ಲಾಡಳಿತ ಮುಂದುವರಿಸಿದೆ. ತಾಲ್ಲೂಕಿನ 1.30 ಲಕ್ಷ ಜನರಿಗೆ ಒಂದೇ ಮೂಲದಿಂದ ನೀರು ಸರಬರಾಜು ಮಾಡುತ್ತೇವೆ ಎಂಬುದು ವಾಸ್ತವತೆಗೆ ದೂರವಾಗಿದೆ. ಪ್ರತಿ ವ್ಯಕ್ತಿಗೆ ಕನಿಷ್ಠ 55 ಲೀಟರ್ ಶುದ್ಧ ನೀರು ಕೊಡುತ್ತೇವೆ ಎಂಬುದು ಶುದ್ಧ ಸುಳ್ಳು. 18 ಗ್ರಾಮ ಪಂಚಾಯಿತಿಗಳು ತುಂಗಾ ನದಿ ದಡದಲ್ಲೇ ಇವೆ ಎಂಬುದನ್ನು ಆಡಳಿತ ಮರೆತಿದೆ’ ಎಂದು ರೈತರು ದೂರಿದರು. ಯೊಜನೆಯ ನ್ನು ವಿಕೇಂದ್ರೀಕರಿಸಬೇಕು ಎಂಬ ಬೇಡಿಕೆ ಈಡೇರುವವರೆಗೂ ಗಂಜಿ ಚಳವಳಿ ಮುಂದುವರಿಯುತ್ತದೆ. ಚಳವಳಿ ಹತ್ತಿಕ್ಕುವ ಪ್ರಯತ್ನ ನಡೆಸಿದರೆ ಪ್ರತಿಭಟನೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದು ತಿಳಿದಿದೆ. ಹೋರಾಟಗಾರರ ತಾಳ್ಮೆ ಕೆಣಕಬೇಡಿ’ ಎಂದು ಎಚ್ಚರಿಸಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಇಂದು ಗಿರಾಕಿಯೇ ಇಲ್ಲಾ ಮಾರಾಯ ನಾಟಕ

ತೀರ್ಥಹಳ್ಳಿಯಲ್ಲಿ ಇಂದು ಗಿರಾಕಿಯೇ ಇಲ್ಲಾ ಮಾರಾಯ ನಾಟಕ
– ತೀರ್ಥಹಳ್ಳಿಯಲ್ಲಿ ಬಾಂಧವ್ಯ ಟ್ರೋಫಿ!
ಅಂತರಾಷ್ಟ್ರೀಯ ಖ್ಯಾತಿಯ ಮೂರು ಮುತ್ತು ಕಲಾವಿದರಿಂದ ನಾಟಕ

NAMMUR EXPRESS NEWS
ಅಂತರಾಷ್ಟ್ರೀಯ ಖ್ಯಾತಿಯ ಮೂರು ಮುತ್ತು ಕಲಾವಿದರಿಂದ ಹಾಸ್ಯಮಯ ನಾಟಕ ಗಿರಾಕಿಯೇ ಇಲ್ಲ ಮಾರಾಯ ಮಾ.2ರ ಶನಿವಾರ ಸಂಜೆ 7:00ಕ್ಕೆ ಸಾರ್ವಜನಿಕ ಕ್ರೀಡಾಂಗಣ ತೀರ್ಥಹಳ್ಳಿ ನೆರವೇರಲಿದ್ದು. ಸರ್ವರನ್ನು ಆಯೋಜಕರು ಸ್ವಾಗತಿಸಿದ್ದಾರೆ. ಅಂತರಾಷ್ಟ್ರೀಯ ಖ್ಯಾತಿಯ ಮೂರು ಮುತ್ತು ಕಲಾವಿದರಿಂದ ಗಿರಾಕಿಯೇ ಇಲ್ಲಾಮಾರಾಯ ” ಎಂಬ ಹಾಸ್ಯಮಯ ನಾಟಕ ರೂಪಕಲಾ,(ಕುಳ್ಳಪ್ಪು) ಕುಂದಾಪುರ ಇವರ ಸಹಯೋಗದಲ್ಲಿ ನಡೆಯುತ್ತದೆ. ಕರಾವಳಿ ಮುತ್ತು ಕೆ.ಸತೀಶ್ ಪೈ ರಚನೆ ನಿರ್ದೇಶನ ಕಾರ್ಯವನ್ನ ಮಾಡಿದ್ದಾರೆ.

ಕ್ರೀಡೆ ಜತೆ ಸಾಂಸ್ಕೃತಿಕ, ಸಾಮಾಜಿಕ ಸೇವೆ

ಪೈವ್ ಒ ಕ್ಲಾಕ್ ಕ್ರಿಕೆಟರ್ಸ್ ತೀರ್ಥಹಳ್ಳಿ ಇವರ ವತಿಯಿಂದ ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ಮಾರ್ಚ್ 1ರಿಂದ 3ರವರೆಗೆ ಮಲೆನಾಡಿನ ಅಹ್ವಾನಿತ ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ. ಅಂತರಾಷ್ಟ್ರೀಯ ಖ್ಯಾತಿಯ ಮೂರು ಮುತ್ತು ತಂಡದಿಂದ ಗಿರಾಕಿಯೇ ಇಲ್ಲ ಮಾರಾಯ ಎಂಬ ಹಾಸ್ಯಮಯ ನಾಟಕ ಪ್ರದರ್ಶನವಾಗಲಿದೆ. ಮತ್ತು ರಾಜ್ಯ ಪ್ರಶಸ್ತಿ ವಿಜೇತೆ ಎದೆ ತುಂಬಿ ಹಾಡುವೆನು ಖ್ಯಾತಿಯ ಉಷಾ ಬಾಳೆಬೈಲು ಅವರಿಂದ ಸಂಗೀತ ಗಾಯನ. ಸೆಕ್ಷನ್ ಬಿ ಹರ್ಷಿತ ಸೆಕ್ಷನ್ 8 ಡ್ಯಾನ್ಸ್ ಶಾಲೆ ಇವರಿಂದ ನೃತ್ಯ ಹಾಗೂ ಭಾಂದವ್ಯ ತಂಡದಿಂದ ಸಾಮಾಜಿಕ ಕಾರ್ಯಕ್ರಮಗಳಾದ ಮಾಜಿ ಯೋಧರಿಗೆ ಗೌರವ ಸಮರ್ಪಣೆ, ಸರ್ಕಾರಿ ಪ್ರೌಢಶಾಲೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಸಾಮಾಜಿಕ ಸೇವೆಯಲ್ಲಿ ಕೊಡುಗೆ ನೀಡಿದವರಿಗೆ ಗೌರವ ಸಮರ್ಪಣೆ, ಕ್ರೀಡಾ ಸಾಧಕರಿಗೆ ಸನ್ಮಾನ, ಶೈಕ್ಷಣಿಕ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.